020: ದಾನಯಜ್ಞಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 20

ಸಾರ

ಧೃತರಾಷ್ಟ್ರನ ಶ್ರಾದ್ಧಯಜ್ಞ (1-17).

15020001 ವೈಶಂಪಾಯನ ಉವಾಚ।
15020001a ವಿದುರೇಣೈವಮುಕ್ತಸ್ತು ಧೃತರಾಷ್ಟ್ರೋ ಜನಾಧಿಪಃ।
15020001c ಪ್ರೀತಿಮಾನಭವದ್ರಾಜಾ ರಾಜ್ಞೋ ಜಿಷ್ಣೋಶ್ಚ ಕರ್ಮಣಾ।।

ವೈಶಂಪಾಯನನು ಹೇಳಿದನು: “ವಿದುರನು ಹೀಗೆ ಹೇಳಲು ಜನಾಧಿಪ ಧೃತರಾಷ್ಟ್ರನು ರಾಜ ಮತ್ತು ಜಿಷ್ಣುವಿನ ಕೃತ್ಯಗಳಿಂದ ಅತ್ಯಂತ ಪ್ರಸನ್ನನಾದನು.

15020002a ತತೋಽಭಿರೂಪಾನ್ಭೀಷ್ಮಾಯ ಬ್ರಾಹ್ಮಣಾನೃಷಿಸತ್ತಮಾನ್।
15020002c ಪುತ್ರಾರ್ಥೇ ಸುಹೃದಾಂ ಚೈವ ಸ ಸಮೀಕ್ಷ್ಯ ಸಹಸ್ರಶಃ।।

ಅನಂತರ ಅವನು ಭೀಷ್ಮನ ಮತ್ತು ತನ್ನ ಮಕ್ಕಳು, ಸುಹೃದಯರ ಶ್ರಾದ್ಧದ ಸಲುವಾಗಿ ಸಹಸ್ರಾರು ಯೋಗ್ಯ ಬ್ರಾಹ್ಮಣರನ್ನೂ ಋಷಿಸತ್ತಮರನ್ನೂ ಆಮಂತ್ರಿಸಿದನು.

15020003a ಕಾರಯಿತ್ವಾನ್ನಪಾನಾನಿ ಯಾನಾನ್ಯಾಚ್ಚಾದನಾನಿ ಚ।
15020003c ಸುವರ್ಣಮಣಿರತ್ನಾನಿ ದಾಸೀದಾಸಪರಿಚ್ಚದಾನ್।।
15020004a ಕಂಬಲಾಜಿನರತ್ನಾನಿ ಗ್ರಾಮಾನ್ ಕ್ಷೇತ್ರಾನಜಾವಿಕಮ್।
15020004c ಅಲಂಕಾರಾನ್ಗಜಾನಶ್ವಾನ್ಕನ್ಯಾಶ್ಚೈವ ವರಸ್ತ್ರಿಯಃ।
15020004e ಆದಿಶ್ಯಾದಿಶ್ಯ ವಿಪ್ರೇಭ್ಯೋ ದದೌ ಸ ನೃಪಸತ್ತಮಃ।।
15020005a ದ್ರೋಣಂ ಸಂಕೀರ್ತ್ಯ ಭೀಷ್ಮಂ ಚ ಸೋಮದತ್ತಂ ಚ ಬಾಹ್ಲಿಕಮ್।
15020005c ದುರ್ಯೋಧನಂ ಚ ರಾಜಾನಂ ಪುತ್ರಾಂಶ್ಚೈವ ಪೃಥಕ್ ಪೃಥಕ್।
15020005e ಜಯದ್ರಥಪುರೋಗಾಂಶ್ಚ ಸುಹೃದಶ್ಚೈವ ಸರ್ವಶಃ।।

ಅನ್ನ-ಪಾನಾದಿಗಳು, ಯಾನಗಳು, ಹೊದಿಕೆಗಳು, ಸುವರ್ಣ-ಮಣಿ-ರತ್ನಗಳು, ದಾಸ-ದಾಸಿಯರು, ಕಂಬಳಿ-ಜಿನಗಳ ಹೊದಿಕೆಗಳು, ರತ್ನಗಳು, ಗ್ರಾಮಗಳು, ಕ್ಷೇತ್ರಗಳು, ಆಡು-ಕುರಿಗಳು, ಅಲಂಕರಿಸಲ್ಪಟ್ಟ ಆನೆ-ಕುದುರೆಗಳು, ಸುಂದರ ರಾಜಕನ್ಯೆಯರು ಇವುಗಳೆಲ್ಲವನ್ನೂ ನೃಪಸತ್ತಮನು ದ್ರೋಣ, ಭೀಷ್ಮ, ಸೋಮದತ್ತ, ಬಾಹ್ಲೀಕ, ದುರ್ಯೋಧನ ಮತ್ತು ಅವನ ಅನುಜರು, ಜಯದ್ರಥನೇ ಮೊದಲಾದ ಸುಹೃದಯರು ಇವರನ್ನು ಉದ್ದೇಶಿಸಿ ಪ್ರತ್ಯೇಕ ಪ್ರತ್ಯೇಕವಾಗಿ ಬ್ರಾಹ್ಮಣರಿಗೆ ದಾನಮಾಡಿದನು.

15020006a ಸ ಶ್ರಾದ್ಧಯಜ್ಞೋ ವವೃಧೇ ಬಹುಗೋಧನದಕ್ಷಿಣಃ।
15020006c ಅನೇಕಧನರತ್ನೌಘೋ ಯುಧಿಷ್ಠಿರಮತೇ ತದಾ।।

ಯುಧಿಷ್ಠಿರನ ಅಭಿಪ್ರಾಯದಂತೆ ಆ ಶ್ರಾದ್ಧಯಜ್ಞವು ಅನೇಕ ಗೋಧನ ದಕ್ಷಿಣೆಗಳಿಂದ ಅನೇಕ ಧನರತ್ನಗಳಿಂದ ಸುಶೋಭಿಸುತ್ತಿತ್ತು.

15020007a ಅನಿಶಂ ಯತ್ರ ಪುರುಷಾ ಗಣಕಾ ಲೇಖಕಾಸ್ತಥಾ।
15020007c ಯುಧಿಷ್ಠಿರಸ್ಯ ವಚನಾತ್ತದಾಪೃಚ್ಚಂತಿ ತಂ ನೃಪಮ್।।

ಯುಧಿಷ್ಠಿರನ ಶಾಸನದಂತೆ ಅನೇಕ ಗಣಕ-ಲೇಖಕ ಪುರುಷರು ನಿರಂತರವಾಗಿ ನೃಪನನ್ನು ಈ ರೀತಿ ಕೇಳುತ್ತಿದ್ದರು:

15020008a ಆಜ್ಞಾಪಯ ಕಿಮೇತೇಭ್ಯಃ ಪ್ರದೇಯಂ ದೀಯತಾಮಿತಿ।
15020008c ತದುಪಸ್ಥಿತಮೇವಾತ್ರ ವಚನಾಂತೇ ಪ್ರದೃಶ್ಯತೇ।।

“ಇವರಿಗೆ ಏನನ್ನು ದಾನಮಾಡಬೇಕು ಎಂದು ಆಜ್ಞಾಪಿಸು! ಎಲ್ಲ ವಸ್ತುಗಳೂ ಇಲ್ಲಿ ಸಿದ್ಧವಾಗಿವೆ. ಯಾವುದನ್ನು ಬೇಕಾದರೂ ಕೊಡಬಹುದು!”

15020009a ಶತೇ ದೇಯೇ ದಶಶತಂ ಸಹಸ್ರೇ ಚಾಯುತಂ ತಥಾ।
15020009c ದೀಯತೇ ವಚನಾದ್ರಾಜ್ಞಃ ಕುಂತೀಪುತ್ರಸ್ಯ ಧೀಮತಃ।।

ಧೀಮಂತ ಕುಂತೀಪುತ್ರನ ವಚನದಂತೆ ರಾಜನು ಆಗ ನೂರು ನಾಣ್ಯಗಳನ್ನು ಕೊಡಲು ಹೇಳಿದರೆ ಗಣಕರು ಸಾವಿರ ನಾಣ್ಯಗಳನ್ನು ಕೊಡುತ್ತಿದ್ದರು.

15020010a ಏವಂ ಸ ವಸುಧಾರಾಭಿರ್ವರ್ಷಮಾಣೋ ನೃಪಾಂಬುದಃ।
15020010c ತರ್ಪಯಾಮಾಸ ವಿಪ್ರಾಂಸ್ತಾನ್ವರ್ಷನ್ಭೂಮಿಮಿವಾಂಬುದಃ।।

ಮೋಡವು ಮಳೆಸುರಿಸಿ ಭೂಮಿಯನ್ನು ತೃಪ್ತಿಗೊಳಿಸುವಂತೆ ಮೋಡದ ರೂಪದಲ್ಲಿದ್ದ ಧೃತರಾಷ್ಟ್ರನು ಭೂಮಿಯ ಮೇಲೆ ಧನದ ಮಳೆಯನ್ನೇ ಸುರಿಸಿ ವಿಪ್ರರನ್ನು ತೃಪ್ತಿಗೊಳಿಸಿದನು.

15020011a ತತೋಽನಂತರಮೇವಾತ್ರ ಸರ್ವವರ್ಣಾನ್ಮಹೀಪತಿಃ।
15020011c ಅನ್ನಪಾನರಸೌಘೇನ ಪ್ಲಾವಯಾಮಾಸ ಪಾರ್ಥಿವಃ।।

ಅನಂತರ ಪಾರ್ಥಿವ ಮಹೀಪತಿಯು ಸರ್ವ ವರ್ಣದವರನ್ನೂ ಅನ್ನ-ಪಾನ-ರಸಗಳ ಪ್ರವಾಹದಲ್ಲಿ ತೇಲಿಸಿಬಿಟ್ಟನು.

15020012a ಸವಸ್ತ್ರಫೇನರತ್ನೌಘೋ ಮೃದಂಗನಿನದಸ್ವನಃ।
15020012c ಗವಾಶ್ವಮಕರಾವರ್ತೋ ನಾರೀರತ್ನಮಹಾಕರಃ।।
15020013a ಗ್ರಾಮಾಗ್ರಹಾರಕುಲ್ಯಾಢ್ಯೋ ಮಣಿಹೇಮಜಲಾರ್ಣವಃ।
15020013c ಜಗತ್ಸಂಪ್ಲಾವಯಾಮಾಸ ಧೃತರಾಷ್ಟ್ರದಯಾಂಬುಧಿಃ।।

ವಸ್ತ್ರ-ರತ್ನಗಳ ರಾಶಿಗಳು ಅಲೆಗಳಂತೆಯೂ, ಮೃದಂಗದ ಸ್ವರಗಳು ಭೋರ್ಗರೆಯಂತೆಯೂ, ಗೋವು-ಅಶ್ವಗಳು ಮೊಸಳೆಗಳಂತೆಯೂ, ನಾರಿಯರು ರತ್ನಗಳಂತೆಯೂ, ಗ್ರಾಮ-ಅಗ್ರಹಾರಗಳು ದ್ವೀಪಗಳಂತೆಯೂ, ಮಣಿ-ಚಿನ್ನಗಳು ನೀರಿನಂತೆಯೂ ತುಂಬಿದ್ದ ಆ ಧೃತರಾಷ್ಟ್ರನ ದಯಾಸಾಗರದಲ್ಲಿ ಜಗತ್ತೇ ತೇಲುತ್ತಿತ್ತು.

15020014a ಏವಂ ಸ ಪುತ್ರಪೌತ್ರಾಣಾಂ ಪಿತೄಣಾಮಾತ್ಮನಸ್ತಥಾ।
15020014c ಗಾಂಧಾರ್ಯಾಶ್ಚ ಮಹಾರಾಜ ಪ್ರದದಾವೌರ್ಧ್ವದೇಹಿಕಮ್।।

ಹೀಗೆ ಮಹಾರಾಜನು ತನ್ನ ಪುತ್ರ-ಪೌತ್ರರಿಗೂ, ಪಿತೃಗಳಿಗೂ ಹಾಗೆಯೇ ತನಗೂ ಮತ್ತು ಗಾಂಧಾರಿಗೂ ಔರ್ಧ್ವದೇಹಿಕ ಕರ್ಮಗಳನ್ನು ನೆರವೇರಿಸಿದನು.

15020015a ಪರಿಶ್ರಾಂತೋ ಯದಾಸೀತ್ಸ ದದದ್ದಾನಾನ್ಯನೇಕಶಃ।
15020015c ತತೋ ನಿರ್ವರ್ತಯಾಮಾಸ ದಾನಯಜ್ಞಂ ಕುರೂದ್ವಹಃ।।

ಅನೇಕ ದಾನಗಳನ್ನು ಕೊಟ್ಟು ಆಯಾಸಗೊಂಡ ಆ ಕುರೂದ್ವಹನು ದಾನಯಜ್ಞವನ್ನು ಮುಗಿಸಿದನು.

15020016a ಏವಂ ಸ ರಾಜಾ ಕೌರವ್ಯಶ್ಚಕ್ರೇ ದಾನಮಹೋತ್ಸವಮ್।
15020016c ನಟನರ್ತಕಲಾಸ್ಯಾಢ್ಯಂ ಬಹ್ವನ್ನರಸದಕ್ಷಿಣಮ್।।

ಹೀಗೆ ಆ ರಾಜಾ ಕೌರವ್ಯನು ಬಹಳ ಅನ್ನ-ರಸ-ದಕ್ಷಿಣೆಗಳಿಂದ ಕೂಡಿದ್ದ, ನಟ-ನರ್ತಕರ ಕಲೆಗಳಿಂದ ಕೂಡಿದ್ದ ಆ ದಾನಮಹೋತ್ಸವವನ್ನು ನಡೆಸಿದನು.

15020017a ದಶಾಹಮೇವಂ ದಾನಾನಿ ದತ್ತ್ವಾ ರಾಜಾಂಬಿಕಾಸುತಃ।
15020017c ಬಭೂವ ಪುತ್ರಪೌತ್ರಾಣಾಮನೃಣೋ ಭರತರ್ಷಭ।।

ಭರತರ್ಷಭ! ರಾಜಾ ಅಂಬಿಕಾಸುತನು ಈ ರೀತಿ ಹತ್ತುದಿನಗಳು ದಾನಗಳನ್ನಿತ್ತು ಪುತ್ರ-ಪೌತ್ರರ ಋಣಗಳಿಂದ ಮುಕ್ತನಾದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ದಾನಯಜ್ಞೇ ವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ದಾನಯಜ್ಞ ಎನ್ನುವ ಇಪ್ಪತ್ತನೇ ಅಧ್ಯಾಯವು.