019: ವಿದುರವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 19

ಸಾರ

ವಿದುರನು ಯುಧಿಷ್ಠಿರನ ಸಂದೇಶವನ್ನು ಧೃತರಾಷ್ಟ್ರನಿಗೆ ತಿಳಿಸಿದುದು (1-15).

15019001 ವೈಶಂಪಾಯನ ಉವಾಚ।
15019001a ಏವಮುಕ್ತಸ್ತು ರಾಜ್ಞಾ ಸ ವಿದುರೋ ಬುದ್ಧಿಸತ್ತಮಃ।
15019001c ಧೃತರಾಷ್ಟ್ರಮುಪೇತ್ಯೇದಂ ವಾಕ್ಯಮಾಹ ಮಹಾರ್ಥವತ್।।

ವೈಶಂಪಾಯನನು ಹೇಳಿದನು: “ರಾಜನು ಹೀಗೆ ಹೇಳಲು ಬುದ್ಧಿಸತ್ತಮ ವಿದುರನು ಧೃತರಾಷ್ಟ್ರನ ಬಳಿಸಾರಿ ಮಹಾ ಅರ್ಥವತ್ತಾದ ಈ ಮಾತನ್ನಾಡಿದನು:

15019002a ಉಕ್ತೋ ಯುಧಿಷ್ಠಿರೋ ರಾಜಾ ಭವದ್ವಚನಮಾದಿತಃ।
15019002c ಸ ಚ ಸಂಶ್ರುತ್ಯ ವಾಕ್ಯಂ ತೇ ಪ್ರಶಶಂಸ ಮಹಾದ್ಯುತಿಃ।।

“ನಿನ್ನ ಮಾತನ್ನು ಸಂಪೂರ್ಣವಾಗಿ ರಾಜಾ ಯುಧಿಷ್ಠಿರನಿಗೆ ಹೇಳಿದೆನು. ನಿನ್ನ ಮಾತನ್ನು ಕೇಳಿದ ಆ ಮಹಾದ್ಯುತಿಯು ನಿನ್ನನ್ನು ಬಹಳವಾಗಿ ಪ್ರಶಂಸಿಸಿದನು.

15019003a ಬೀಭತ್ಸುಶ್ಚ ಮಹಾತೇಜಾ ನಿವೇದಯತಿ ತೇ ಗೃಹಾನ್।
15019003c ವಸು ತಸ್ಯ ಗೃಹೇ ಯಚ್ಚ ಪ್ರಾಣಾನಪಿ ಚ ಕೇವಲಾನ್।।

ಮಹಾತೇಜಸ್ವಿ ಬೀಭತ್ಸುವು ತನ್ನ ಅರಮನೆ ಮತ್ತು ಅರಮನೆಯಲ್ಲಿರುವ ಎಲ್ಲ ಸಂಪತ್ತನ್ನೂ, ತನ್ನ ಪ್ರಾಣವನ್ನು ಕೂಡ ನಿನ್ನ ಸೇವೆಗಾಗಿ ಸಮರ್ಪಿಸಿದ್ದಾನೆ.

15019004a ಧರ್ಮರಾಜಶ್ಚ ಪುತ್ರಸ್ತೇ ರಾಜ್ಯಂ ಪ್ರಾಣಾನ್ಧನಾನಿ ಚ।
15019004c ಅನುಜಾನಾತಿ ರಾಜರ್ಷೇ ಯಚ್ಚಾನ್ಯದಪಿ ಕಿಂ ಚನ।।

ರಾಜರ್ಷೇ! ನಿನ್ನ ಮಗ ಧರ್ಮರಾಜನೂ ಕೂಡ ರಾಜ್ಯ, ಪ್ರಾಣ, ಧನ ಮತ್ತು ಅವನಲ್ಲಿ ಏನೆಲ್ಲ ಇವೆಯೋ ಎಲ್ಲವನ್ನೂ ನಿನಗೆ ಒಪ್ಪಿಸಿದ್ದಾನೆ.

15019005a ಭೀಮಸ್ತು ಸರ್ವದುಃಖಾನಿ ಸಂಸ್ಮೃತ್ಯ ಬಹುಲಾನ್ಯುತ।
15019005c ಕೃಚ್ಛ್ರಾದಿವ ಮಹಾಬಾಹುರನುಮನ್ಯೇ ವಿನಿಃಶ್ವಸನ್।।

ಮಹಾಬಾಹು ಭೀಮನಾದರೋ ಅಗಣಿತವಾಗಿದ್ದ ಸರ್ವ ದುಃಖಗಳನ್ನೂ ಸ್ಮರಿಸಿಕೊಂಡು ನಿಟ್ಟುಸಿರು ಬಿಡುತ್ತಾ ಬಹಳ ಕಷ್ಟದಿಂದ ರಾಜನ ಈ ನಿರ್ಧಾರವನ್ನು ಅನುಮೋದಿಸಿದನು.

15019006a ಸ ರಾಜ್ಞಾ ಧರ್ಮಶೀಲೇನ ಭ್ರಾತ್ರಾ ಬೀಭತ್ಸುನಾ ತಥಾ।
15019006c ಅನುನೀತೋ ಮಹಾಬಾಹುಃ ಸೌಹೃದೇ ಸ್ಥಾಪಿತೋಽಪಿ ಚ।।

ಧರ್ಮಶೀಲ ರಾಜಾ ಯುಧಿಷ್ಠಿರನೂ ಮತ್ತು ಹಾಗೆಯೇ ತಮ್ಮ ಬೀಭತ್ಸುವೂ ಆ ಮಾಹಾಬಾಹುವನ್ನು ಸಮಾಧಾನಪಡಿಸಿ ಅವನಲ್ಲಿ ನಿನ್ನ ಕುರಿತು ಸೌಹಾರ್ದತೆಯನ್ನು ಸ್ಥಾಪಿಸಿದ್ದಾರೆ.

15019007a ನ ಚ ಮನ್ಯುಸ್ತ್ವಯಾ ಕಾರ್ಯ ಇತಿ ತ್ವಾಂ ಪ್ರಾಹ ಧರ್ಮರಾಟ್।
15019007c ಸಂಸ್ಮೃತ್ಯ ಭೀಮಸ್ತದ್ವೈರಂ ಯದನ್ಯಾಯವದಾಚರೇತ್।।

ಆ ವೈರವನ್ನು ಸ್ಮರಿಸಿಕೊಳ್ಳುತ್ತಿರುವ ಭೀಮನು ನಿನ್ನೊಡನೆ ಅನ್ಯಾಯವಾಗಿ ವರ್ತಿಸಿದುದಕ್ಕಾಗಿ ನೀನು ಅವನ ಮೇಲೆ ಸಿಟ್ಟಾಗಬಾರದು ಎಂದೂ ಧರ್ಮರಾಜನು ಹೇಳಿ ಕಳುಹಿಸಿದ್ದಾನೆ.

15019008a ಏವಂಪ್ರಾಯೋ ಹಿ ಧರ್ಮೋಽಯಂ ಕ್ಷತ್ರಿಯಾಣಾಂ ನರಾಧಿಪ।
15019008c ಯುದ್ಧೇ ಕ್ಷತ್ರಿಯಧರ್ಮೇ ಚ ನಿರತೋಽಯಂ ವೃಕೋದರಃ।।

“ನರಾಧಿಪ! ಪ್ರಾಯಶಃ ಕ್ಷತ್ರಿಯರ ಧರ್ಮವೇ ಹೀಗಿದ್ದಿರಬಹುದು. ವೃಕೋದರನು ಯುದ್ಧದಲ್ಲಿ ಸದಾ ಕ್ಷತ್ರಿಯ ಧರ್ಮವನ್ನೇ ಆಚರಿಸಿದವನು.

15019009a ವೃಕೋದರಕೃತೇ ಚಾಹಮರ್ಜುನಶ್ಚ ಪುನಃ ಪುನಃ।
15019009c ಪ್ರಸಾದಯಾವ ನೃಪತೇ ಭವಾನ್ಪ್ರಭುರಿಹಾಸ್ತಿ ಯತ್।।

ನೃಪತೇ! ನಾನು ಮತ್ತು ಅರ್ಜುನರು ಪುನಃ ಪುನಃ ಕೇಳಿಕೊಳ್ಳುತ್ತಿದ್ದೇವೆ. ವೃಕೋದರನು ಮಾಡಿದುದನ್ನು ಕ್ಷಮಿಸಿಬಿಡು. ನೀನೇ ನಮಗೆ ಪ್ರಭುವು.

15019010a ಪ್ರದದಾತು ಭವಾನ್ವಿತ್ತಂ ಯಾವದಿಚ್ಚಸಿ ಪಾರ್ಥಿವ।
15019010c ತ್ವಮೀಶ್ವರೋ ನೋ ರಾಜ್ಯಸ್ಯ ಪ್ರಾಣಾನಾಂ ಚೇತಿ ಭಾರತ।।

ಪಾರ್ಥಿವ! ಭಾರತ! ನಿನಗಿಷ್ಟವಿದ್ದಷ್ಟು ವಿತ್ತವನ್ನು ದಾನಮಾಡು. ನಮ್ಮ ಈ ರಾಜ್ಯ-ಪ್ರಾಣಗಳಿಗೆ ನೀನೇ ಈಶ್ವರನಾಗಿರುವೆ!

15019011a ಬ್ರಹ್ಮದೇಯಾಗ್ರಹಾರಾಂಶ್ಚ ಪುತ್ರಾಣಾಂ ಚೌರ್ಧ್ವದೇಹಿಕಮ್।
15019011c ಇತೋ ರತ್ನಾನಿ ಗಾಶ್ಚೈವ ದಾಸೀದಾಸಮಜಾವಿಕಮ್।।

ಮಕ್ಕಳ ಶ್ರಾದ್ಧದ ಸಲುವಾಗಿ ಬ್ರಾಹ್ಮಣರಿಗೆ ಅಗ್ರಹಾರಗಳನ್ನೂ, ರತ್ನಗಳನ್ನೂ, ಗೋವುಗಳನ್ನೂ, ದಾಸಿ-ದಾಸರನ್ನೂ, ಆಡು-ಕುರಿಗಳನ್ನೂ ದಾನಮಾಡು!

15019012a ಆನಯಿತ್ವಾ ಕುರುಶ್ರೇಷ್ಠೋ ಬ್ರಾಹ್ಮಣೇಭ್ಯಃ ಪ್ರಯಚ್ಚತು।
15019012c ದೀನಾಂಧಕೃಪಣೇಭ್ಯಶ್ಚ ತತ್ರ ತತ್ರ ನೃಪಾಜ್ಞಯಾ।।
15019013a ಬಹ್ವನ್ನರಸಪಾನಾಢ್ಯಾಃ ಸಭಾ ವಿದುರ ಕಾರಯ।
15019013c ಗವಾಂ ನಿಪಾನಾನ್ಯನ್ಯಚ್ಚ ವಿವಿಧಂ ಪುಣ್ಯಕರ್ಮ ಯತ್।।

ಕುರುಶ್ರೇಷ್ಠನು ಬ್ರಾಹ್ಮಣರನ್ನು ಕರೆ-ಕರೆದು ದಾನಮಾಡಲಿ. ವಿದುರ! ನೀನು ನೃಪನ ಆಜ್ಞೆಯಂತೆ ದೀನ-ಅಂಧ-ಕೃಪಣರಿಗೆ ಅಲ್ಲಲ್ಲಿ ಅನೇಕ ಅನ್ನ-ರಸ-ಪಾನೀಯಗಳ ಶಿಬಿರಗಳನ್ನು ನಿರ್ಮಿಸು. ಹಸುಗಳಿಗೆ ನೀರು ಕುಡಿಯಲು ನೀರಿನ ತೊಟ್ಟಿಗಳನ್ನು ನಿರ್ಮಿಸು ಮತ್ತು ವಿವಿಧ ಪುಣ್ಯಕರ್ಮಗಳನ್ನು ನಿಯೋಜಿಸು.”

15019014a ಇತಿ ಮಾಮಬ್ರವೀದ್ರಾಜಾ ಪಾರ್ಥಶ್ಚೈವ ಧನಂಜಯಃ।
15019014c ಯದತ್ರಾನಂತರಂ ಕಾರ್ಯಂ ತದ್ಭವಾನ್ವಕ್ತುಮರ್ಹತಿ।।

ಹೀಗೆ ನನಗೆ ರಾಜಾ ಮತ್ತು ಪಾರ್ಥ ಧನಂಜಯರು ಹೇಳಿದರು. ಇದರ ನಂತರದ ಕಾರ್ಯವನ್ನು ನೀನು ಹೇಳಬೇಕು!”

15019015a ಇತ್ಯುಕ್ತೋ ವಿದುರೇಣಾಥ ಧೃತರಾಷ್ಟ್ರೋಽಭಿನಂದ್ಯ ತತ್।
15019015c ಮನಶ್ಚಕ್ರೇ ಮಹಾದಾನೇ ಕಾರ್ತ್ತಿಕ್ಯಾಂ ಜನಮೇಜಯ।।

ಜನಮೇಜಯ! ವಿದುರನು ಹೀಗೆ ಹೇಳಲು ಧೃತರಾಷ್ಟ್ರನು ಪಾಂಡವರನ್ನು ಪ್ರಶಂಸಿಸಿದನು. ಕಾರ್ತೀಕ ಮಾಸದಲ್ಲಿ ಮಹಾದಾನವನ್ನು ಮಾಡಲು ನಿಶ್ಚಯಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ವಿದುರವಾಕ್ಯೇ ಏಕೋನವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ವಿದುರವಾಕ್ಯ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.