018: ಯುಧಿಷ್ಠಿರಾನುಮೋದನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 18

ಸಾರ

ಧೃತರಾಷ್ಟ್ರನಿಗೆ ಧನವನ್ನು ತನ್ನ ಕೋಶದಿಂದ ಕೊಡುತ್ತೇನೆಂದು ಅರ್ಜುನನು ಹೇಳಿದುದು (1-5). ಯುಧಿಷ್ಠಿರನು ಭೀಮನ ಮೇಲೆ ಧೃತರಾಷ್ಟ್ರನು ಸಿಟ್ಟಾಗಬಾರದೆಂದೂ, ಅರ್ಜುನನ ಮತ್ತು ತನ್ನ ಕೋಶಗಳಿಂದ ಬೇಗಾದಷ್ಟು ಧನವನ್ನು ಅವನು ಪಡೆದುಕೊಳ್ಳಬಹುದೆಂದೂ ವಿದುರನಿಗೆ ಹೇಳಿ ಕಳುಹಿಸಿದುದು (6-12).

15018001 ಅರ್ಜುನ ಉವಾಚ।
15018001a ಭೀಮ ಜ್ಯೇಷ್ಠೋ ಗುರುರ್ಮೇ ತ್ವಂ ನಾತೋಽನ್ಯದ್ವಕ್ತುಮುತ್ಸಹೇ।
15018001c ಧೃತರಾಷ್ಟ್ರೋ ಹಿ ರಾಜರ್ಷಿಃ ಸರ್ವಥಾ ಮಾನಮರ್ಹತಿ।।

ಅರ್ಜುನನು ಹೇಳಿದನು: “ಭೀಮ! ನನಗಿಂತಲೂ ಹಿರಿಯವನಾಗಿರುವ ನೀನು ನನಗೆ ಗುರುವು. ನಿನ್ನ ಮುಂದೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ರಾಜರ್ಷಿ ಧೃತರಾಷ್ಟ್ರನು ಸರ್ವಥಾ ಗೌರವಕ್ಕೆ ಯೋಗ್ಯನಾಗಿದ್ದಾನೆ!

15018002a ನ ಸ್ಮರಂತ್ಯಪರಾದ್ಧಾನಿ ಸ್ಮರಂತಿ ಸುಕೃತಾನಿ ಚ।
15018002c ಅಸಂಭಿನ್ನಾರ್ಥಮರ್ಯಾದಾಃ ಸಾಧವಃ ಪುರುಷೋತ್ತಮಾಃ।।

ಆರ್ಯಮರ್ಯಾದೆಯನ್ನು ಮೀರದಿರುವ ಪುರುಷಶ್ರೇಷ್ಠ ಸತ್ಪುರುಷರು ಇತರರ ಅಪರಾಧಗಳನ್ನು ಎಂದೂ ಸ್ಮರಿಸುವುದಿಲ್ಲ. ಉತ್ತಮ ಕರ್ಮಗಳನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ.

15018003a ಇದಂ ಮದ್ವಚನಾತ್ಕ್ಷತ್ತಃ ಕೌರವಂ ಬ್ರೂಹಿ ಪಾರ್ಥಿವಮ್।
15018003c ಯಾವದಿಚ್ಚತಿ ಪುತ್ರಾಣಾಂ ದಾತುಂ ತಾವದ್ದದಾಮ್ಯಹಮ್।।

ಕ್ಷತ್ತ! ಕೌರವ ಪಾರ್ಥಿವನಲ್ಲಿ ನನ್ನ ಈ ಮಾತನ್ನು ಹೇಳು! ಅವನು ಪುತ್ರರ ಶ್ರಾದ್ಧಕ್ಕಾಗಿ ಎಷ್ಟು ಧನವನ್ನು ಅಪೇಕ್ಷಿಸುವನೋ ಅಷ್ಟನ್ನೂ ನಾನು ಕೊಡುತ್ತೇನೆ.

15018004a ಭೀಷ್ಮಾದೀನಾಂ ಚ ಸರ್ವೇಷಾಂ ಸುಹೃದಾಮುಪಕಾರಿಣಾಮ್।
15018004c ಮಮ ಕೋಶಾದಿತಿ ವಿಭೋ ಮಾ ಭೂದ್ಭೀಮಃ ಸುದುರ್ಮನಾಃ।।

ವಿಭೋ! ಭೀಷ್ಮಾದಿ ಸರ್ವ ಸುಹೃದಯರ ಮತ್ತು ಉಪಕಾರಿಗಳ ಶ್ರಾದ್ಧಕ್ಕಾಗಿ ನನ್ನ ಕೋಶದಿಂದ ಕೊಡುತ್ತೇನೆ. ಇದಕ್ಕಾಗಿ ಭೀಮನ ಮನಸ್ಸನ್ನು ಕೆಡಿಸುವುದು ಬೇಡ!””

15018005 ವೈಶಂಪಾಯನ ಉವಾಚ।
15018005a ಇತ್ಯುಕ್ತೇ ಧರ್ಮರಾಜಸ್ತಮರ್ಜುನಂ ಪ್ರತ್ಯಪೂಜಯತ್।
15018005c ಭೀಮಸೇನಃ ಕಟಾಕ್ಷೇಣ ವೀಕ್ಷಾಂ ಚಕ್ರೇ ಧನಂಜಯಮ್।।

ವೈಶಂಪಾಯನನು ಹೇಳಿದನು: “ ಹೀಗೆ ಹೇಳಲು ಧರ್ಮರಾಜನು ಅರ್ಜುನನನ್ನು ಪ್ರಶಂಸಿಸಿದನು. ಭೀಮಸೇನನು ಕಡೆಗಣ್ಣಿನಿಂದ ಧನಂಜಯನನ್ನು ನೋಡಿದನು.

15018006a ತತಃ ಸ ವಿದುರಂ ಧೀಮಾನ್ವಾಕ್ಯಮಾಹ ಯುಧಿಷ್ಠಿರಃ।
15018006c ನ ಭೀಮಸೇನೇ ಕೋಪಂ ಸ ನೃಪತಿಃ ಕರ್ತುಮರ್ಹತಿ।।

ಅನಂತರ ಧೀಮಾನ್ ಯುಧಿಷ್ಠಿರನು ವಿದುರನಿಗೆ ಇಂತೆಂದನು: “ಆ ನೃಪತಿಯು ಭೀಮಸೇನನ ಮೇಲೆ ಕೋಪಿಸಿಕೊಳ್ಳಬಾರದು.

15018007a ಪರಿಕ್ಲಿಷ್ಟೋ ಹಿ ಭೀಮೋಽಯಂ ಹಿಮವೃಷ್ಟ್ಯಾತಪಾದಿಭಿಃ।
15018007c ದುಃಖೈರ್ಬಹುವಿಧೈರ್ಧೀಮಾನರಣ್ಯೇ ವಿದಿತಂ ತವ।।

ಏಕೆಂದರೆ ಭೀಮಸೇನನು ಅರಣ್ಯದಲ್ಲಿ ಮಂಜು, ಮಳೆ, ಬಿಸಿಲು ಮೊದಲಾದವುಗಳಿಂದ ಬಹುವಿಧದ ಕಷ್ಟ-ದುಃಖಗಳನ್ನು ಅನುಭವಿಸಿದ್ದಾನೆ. ಧೀಮಂತನಾದ ನಿನಗೆ ಇದು ತಿಳಿದೇ ಇದೆ.

15018008a ಕಿಂ ತು ಮದ್ವಚನಾದ್ಬ್ರೂಹಿ ರಾಜಾನಂ ಭರತರ್ಷಭಮ್।
15018008c ಯದ್ಯದಿಚ್ಚಸಿ ಯಾವಚ್ಚ ಗೃಹ್ಯತಾಂ ಮದ್ಗೃಹಾದಿತಿ।।

ಆದರೆ ನೀನು ರಾಜ ಭರತರ್ಷಭನಿಗೆ ನನ್ನ ಈ ಮಾತನ್ನು ಹೇಳು. ಅವನಿಗೆ ಏನು ಬೇಕೋ ಅವೆಲ್ಲವನ್ನೂ ನನ್ನ ಅರಮನೆಯ ಬೊಕ್ಕಸದಿಂದ ತೆಗೆದುಕೊಳ್ಳಲಿ!

15018009a ಯನ್ಮಾತ್ಸರ್ಯಮಯಂ ಭೀಮಃ ಕರೋತಿ ಭೃಶದುಃಖಿತಃ।
15018009c ನ ತನ್ಮನಸಿ ಕರ್ತವ್ಯಮಿತಿ ವಾಚ್ಯಃ ಸ ಪಾರ್ಥಿವಃ।।

ತುಂಬಾ ದುಃಖಿತನಾಗಿ ಮಾತ್ಸರ್ಯಭಾವವನ್ನು ತೋರಿಸುತ್ತಿರುವ ಈ ಭೀಮನ ಮಾತುಗಳನ್ನು ಆ ರಾಜನು ಮನಸ್ಸಿಗೆ ತೆಗೆದುಕೊಳ್ಳಬಾರದು. ಇದನ್ನು ನೀನು ರಾಜನಿಗೆ ಹೇಳಬೇಕು.

15018010a ಯನ್ಮಮಾಸ್ತಿ ಧನಂ ಕಿಂ ಚಿದರ್ಜುನಸ್ಯ ಚ ವೇಶ್ಮನಿ।
15018010c ತಸ್ಯ ಸ್ವಾಮೀ ಮಹಾರಾಜ ಇತಿ ವಾಚ್ಯಃ ಸ ಪಾರ್ಥಿವಃ।।

ನನ್ನ ಮತ್ತು ಅರ್ಜುನನ ಅರಮನೆಗಳಲ್ಲಿರುವ ಧನವೆಲ್ಲವಕ್ಕೂ ಆ ಪಾರ್ಥಿವ ಮಹಾರಾಜನೇ ಸ್ವಾಮಿ ಎಂದು ಹೇಳಬೇಕು.

15018011a ದದಾತು ರಾಜಾ ವಿಪ್ರೇಭ್ಯೋ ಯಥೇಷ್ಟಂ ಕ್ರಿಯತಾಂ ವ್ಯಯಃ।
15018011c ಪುತ್ರಾಣಾಂ ಸುಹೃದಾಂ ಚೈವ ಗಚ್ಚತ್ವಾನೃಣ್ಯಮದ್ಯ ಸಃ।।

ರಾಜನು ವಿಪ್ರರಿಗಾಗಿ ಇಷ್ಟಬಂದಷ್ಟು ಖರ್ಚು ಮಾಡಲಿ. ದಾನನೀಡಲಿ. ಇಂದು ಅವನು ಮಕ್ಕಳ ಮತ್ತು ಸುಹೃದಯರ ಋಣದಿಂದ ಮುಕ್ತನಾಗಲಿ!

15018012a ಇದಂ ಚಾಪಿ ಶರೀರಂ ಮೇ ತವಾಯತ್ತಂ ಜನಾಧಿಪ।
15018012c ಧನಾನಿ ಚೇತಿ ವಿದ್ಧಿ ತ್ವಂ ಕ್ಷತ್ತರ್ನಾಸ್ತ್ಯತ್ರ ಸಂಶಯಃ।।

ಜನಾಧಿಪ! ನನ್ನ ಈ ಶರೀರ ಮತ್ತು ಧನವು ನಿನಗೋಸ್ಕರವಾಗಿವೆ ಎನ್ನುವುದರಲ್ಲಿ ಸಂಶಯವೇ ಬೇಡ! ಕ್ಷತ್ತ! ಇದನ್ನು ರಾಜನಿಗೆ ತಿಳಿಸು!””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಯುಧಿಷ್ಠಿರಾನುಮೋದನೇ ಅಷ್ಟಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಯುಧಿಷ್ಠಿರಾನುಮೋದನ ಎನ್ನುವ ಹದಿನೆಂಟನೇ ಅಧ್ಯಾಯವು.