ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಆಶ್ರಮವಾಸ ಪರ್ವ
ಅಧ್ಯಾಯ 16
ಸಾರ
ಬ್ರಾಹ್ಮಣನು ಧೃತರಾಷ್ಟ್ರನಿಗೆ ತನ್ನ ಸಾಂತ್ವನ ಮಾತುಗಳನ್ನು ಮುಂದುವರೆಸಿದುದು (1-23). ಧೃತರಾಷ್ಟ್ರನು ಪೌರಜನರನ್ನು ಗೌರವಿಸಿ ಕಳುಹಿಸಿಕೊಟ್ಟಿದುದು (24-27).
15016001 ಬ್ರಾಹ್ಮಣ ಉವಾಚ।
15016001a ನ ತದ್ದುರ್ಯೋಧನಕೃತಂ ನ ಚ ತದ್ಭವತಾ ಕೃತಮ್।
15016001c ನ ಕರ್ಣಸೌಬಲಾಭ್ಯಾಂ ಚ ಕುರವೋ ಯತ್ಕ್ಷಯಂ ಗತಾಃ।।
ಬ್ರಾಹ್ಮಣನು ಹೇಳಿದನು: “ಕುರುಗಳ ಕ್ಷಯವು ದುರ್ಯೋಧನ ಕೃತ್ಯವಲ್ಲ. ನೀನೂ ಕೂಡ ಮಾಡಿದುದಲ್ಲ. ಕರ್ಣ-ಸೌಬಲರ್ಯಾರೂ ಮಾಡಿದುದಲ್ಲ.
15016002a ದೈವಂ ತತ್ತು ವಿಜಾನೀಮೋ ಯನ್ನ ಶಕ್ಯಂ ಪ್ರಬಾಧಿತುಮ್।
15016002c ದೈವಂ ಪುರುಷಕಾರೇಣ ನ ಶಕ್ಯಮತಿವರ್ತಿತುಮ್।।
ಅದು ದೈವಕೃತವಾಗಿತ್ತು. ಯಾರಿಂದಲೂ ತಡೆಯಲು ಸಾಧ್ಯವಾಗಿರಲಿಲ್ಲ. ದೈವವನ್ನು ಪುರುಷಪ್ರಯತ್ನದಿಂದ ತಡೆಯಲು ಶಕ್ಯವಿಲ್ಲ.
15016003a ಅಕ್ಷೌಹಿಣ್ಯೋ ಮಹಾರಾಜ ದಶಾಷ್ಟೌ ಚ ಸಮಾಗತಾಃ।
15016003c ಅಷ್ಟಾದಶಾಹೇನ ಹತಾ ದಶಭಿರ್ಯೋಧಪುಂಗವೈಃ।।
15016004a ಭೀಷ್ಮದ್ರೋಣಕೃಪಾದ್ಯೈಶ್ಚ ಕರ್ಣೇನ ಚ ಮಹಾತ್ಮನಾ।
15016004c ಯುಯುಧಾನೇನ ವೀರೇಣ ಧೃಷ್ಟದ್ಯುಮ್ನೇನ ಚೈವ ಹ।।
15016005a ಚತುರ್ಭಿಃ ಪಾಂಡುಪುತ್ರೈಶ್ಚ ಭೀಮಾರ್ಜುನಯಮೈರ್ನೃಪ।
15016005c ಜನಕ್ಷಯೋಽಯಂ ನೃಪತೇ ಕೃತೋ ದೈವಬಲಾತ್ಕೃತೈಃ।।
ಮಹಾರಾಜ! ಹದಿನೆಂಟು ಅಕ್ಷೋಹಿಣೀ ಸೇನೆಗಳು ಒಂದುಗೂಡಿದ್ದವು. ಹದಿನೆಂಟೇ ದಿನಗಳಲ್ಲಿ ಅವು ಹತ್ತು ಯೋಧಪುಂಗವರಿಂದ - ಭೀಷ್ಮ, ದ್ರೋಣ, ಕೃಪ, ಮಹಾತ್ಮ ಕರ್ಣ, ವೀರ ಯುಯುಧಾನ, ಧೃಷ್ಟದ್ಯುಮ್ನ ಮತ್ತು ನಾಲ್ವರು ಪಾಂಡುಪುತ್ರರು – ಭೀಮಾರ್ಜುನರು ಮತ್ತು ಯಮಳರೀರ್ವರು - ನಾಶಗೊಂಡವು. ನೃಪತೇ! ಈ ಜನಕ್ಷಯವು ದೈವಬಲದಿಂದಲೇ ನಡೆಯಿತು.
15016006a ಅವಶ್ಯಮೇವ ಸಂಗ್ರಾಮೇ ಕ್ಷತ್ರಿಯೇಣ ವಿಶೇಷತಃ।
15016006c ಕರ್ತವ್ಯಂ ನಿಧನಂ ಲೋಕೇ ಶಸ್ತ್ರೇಣ ಕ್ಷತ್ರಬಂಧುನಾ।।
ಲೋಕದಲ್ಲಿ ವಿಶೇಷವಾಗಿ ಕ್ಷತ್ರಿಯನು ಸಂಗ್ರಾಮದಲ್ಲಿ ಕ್ಷತ್ರಬಂಧುವಿನ ಶಸ್ತ್ರದಿಂದ ನಿಧನಹೊಂದುವುದು ಅವಶ್ಯ ಕರ್ತವ್ಯವೂ ಆಗಿದೆ.
15016007a ತೈರಿಯಂ ಪುರುಷವ್ಯಾಘ್ರೈರ್ವಿದ್ಯಾಬಾಹುಬಲಾನ್ವಿತೈಃ।
15016007c ಪೃಥಿವೀ ನಿಹತಾ ಸರ್ವಾ ಸಹಯಾ ಸರಥದ್ವಿಪಾ।।
ವಿದ್ಯೆ ಮತ್ತು ಬಾಹುಬಲಗಳಿಂದ ಕೂಡಿದ್ದ ಈ ಪುರುಷವ್ಯಾಘ್ರರು ಕುದುರೆ-ರಥ-ಆನೆಗಳ ಸಹಿತ ಭೂಮಿಯನ್ನೇ ನಾಶಪಡಿಸಿದರು.
15016008a ನ ಸ ರಾಜಾಪರಾಧ್ನೋತಿ ಪುತ್ರಸ್ತವ ಮಹಾಮನಾಃ।
15016008c ನ ಭವಾನ್ನ ಚ ತೇ ಭೃತ್ಯಾ ನ ಕರ್ಣೋ ನ ಚ ಸೌಬಲಃ।।
ಇದಕ್ಕೆ ನಿನ್ನ ಮಹಾಮನಸ್ವಿ ಮಗ ರಾಜನಾಗಲೀ, ನೀನಾಗಲೀ, ನಿನ್ನ ಅನುಯಾಯಿಗಳಾಗಲೀ, ಕರ್ಣ-ಸೌಬಲರಾಗಲೀ ಕಾರಣರಲ್ಲ.
15016009a ಯದ್ವಿನಷ್ಟಾಃ ಕುರುಶ್ರೇಷ್ಠಾ ರಾಜಾನಶ್ಚ ಸಹಸ್ರಶಃ।
15016009c ಸರ್ವಂ ದೈವಕೃತಂ ತದ್ವೈ ಕೋಽತ್ರ ಕಿಂ ವಕ್ತುಮರ್ಹತಿ।।
ಕುರುಶ್ರೇಷ್ಠ! ಸಹಸ್ರಾರು ರಾಜರ ಈ ನಾಶವೆಲ್ಲವೂ ದೈವಕೃತವಾದುದೇ. ಈ ವಿಷಯದಲ್ಲಿ ಯಾರಾದರೂ ಬೇರೆ ಏನನ್ನು ತಾನೇ ಹೇಳಬಹುದು?
15016010a ಗುರುರ್ಮತೋ ಭವಾನಸ್ಯ ಕೃತ್ಸ್ನಸ್ಯ ಜಗತಃ ಪ್ರಭುಃ।
15016010c ಧರ್ಮಾತ್ಮಾನಮತಸ್ತುಭ್ಯಮನುಜಾನೀಮಹೇ ಸುತಮ್।।
ನೀನು ನಮ್ಮ ಗುರುವಾಗಿರುವೆ. ಇಡೀ ಜಗತ್ತಿಗೆ ಪ್ರಭುವಾಗಿರುವೆ. ಧರ್ಮಾತ್ಮನಾದ ನಿನ್ನ ಮಗನ ಕುರಿತು ಈ ಮಾತುಗಳನ್ನು ಹೇಳುತ್ತೇವೆ:
15016011a ಲಭತಾಂ ವೀರಲೋಕಾನ್ಸ ಸಸಹಾಯೋ ನರಾಧಿಪಃ।
15016011c ದ್ವಿಜಾಗ್ರ್ಯೈಃ ಸಮನುಜ್ಞಾತಸ್ತ್ರಿದಿವೇ ಮೋದತಾಂ ಸುಖೀ।।
ದ್ವಿಜಾಗ್ರರ ಆಶೀರ್ವಾದ ಬಲದಿಂದ ನರಾಧಿಪ ದುರ್ಯೋಧನನು ತನ್ನ ಸಹಾಯಕರೊಂದಿಗೆ ವೀರಲೋಕಗಳನ್ನು ಪಡೆದು ತ್ರಿದಿವದಲ್ಲಿ ಸುಖಿಯಾಗಿ ಮೋದಿಸಲಿ!
15016012a ಪ್ರಾಪ್ಸ್ಯತೇ ಚ ಭವಾನ್ಪುಣ್ಯಂ ಧರ್ಮೇ ಚ ಪರಮಾಂ ಸ್ಥಿತಿಮ್।
15016012c ವೇದ ಪುಣ್ಯಂ ಚ ಕಾರ್ತ್ಸ್ನ್ಯೇನ ಸಮ್ಯಗ್ಭರತಸತ್ತಮ।।
ಭರತಸತ್ತಮ! ನೀನೂ ಕೂಡ ಪುಣ್ಯ ಮತ್ತು ಧರ್ಮದ ಪರಮ ಸ್ಥಿತಿಯನ್ನು ಪಡೆಯುತ್ತೀಯೆ. ವೇದಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಸಕಲ ಪುಣ್ಯಗಳನ್ನೂ ಪಡೆಯುವೆ.
15016013a ದೃಷ್ಟಾಪದಾನಾಶ್ಚಾಸ್ಮಾಭಿಃ ಪಾಂಡವಾಃ ಪುರುಷರ್ಷಭಾಃ।
15016013c ಸಮರ್ಥಾಸ್ತ್ರಿದಿವಸ್ಯಾಪಿ ಪಾಲನೇ ಕಿಂ ಪುನಃ ಕ್ಷಿತೇಃ।।
ಪುರುಷರ್ಷಭ ಪಾಂಡವರು ಸ್ವರ್ಗವನ್ನೇ ಆಳಲು ಸಮರ್ಥರಾಗಿರುವಾಗ ನಮ್ಮ ಪಾಲನೆಯ ವಿಷಯವಾಗಿ ಇವರಿಗೆ ಹೇಳುವುದೇನಿದೆ?
15016014a ಅನುವತ್ಸ್ಯಂತಿ ಚಾಪೀಮಾಃ ಸಮೇಷು ವಿಷಮೇಷು ಚ।
15016014c ಪ್ರಜಾಃ ಕುರುಕುಲಶ್ರೇಷ್ಠ ಪಾಂಡವಾನ್ಶೀಲಭೂಷಣಾನ್।।
ಕುರುಕುಲಶ್ರೇಷ್ಠ! ಶೀಲಭೂಷಣ ಪಾಂಡವರನ್ನು ಪ್ರಜೆಗಳು ಸುಖ-ಕಷ್ಟಗಳೆರಡರಲ್ಲೂ ಅನುಸರಿಸಿಕೊಂಡು ಹೋಗುತ್ತಾರೆ.
15016015a ಬ್ರಹ್ಮದೇಯಾಗ್ರಹಾರಾಂಶ್ಚ ಪರಿಹಾರಾಂಶ್ಚ ಪಾರ್ಥಿವ।
15016015c ಪೂರ್ವರಾಜಾತಿಸರ್ಗಾಂಶ್ಚ ಪಾಲಯತ್ಯೇವ ಪಾಂಡವಃ।।
ಪಾರ್ಥಿವ! ಪಾಂಡವನು ಹಿಂದಿನ ರಾಜರು ಬ್ರಾಹ್ಮಣರಿಗೆ ಕೊಟ್ಟಿರುವ ಅಗ್ರಹಾರಗಳನ್ನೂ, ಪರಿಹಾರಗಳನ್ನೂ ಪಾಲಿಸಿಕೊಂಡೇ ಬಂದಿದ್ದಾನೆ.
15016016a ದೀರ್ಘದರ್ಶೀ ಕೃತಪ್ರಜ್ಞಃ ಸದಾ ವೈಶ್ರವಣೋ ಯಥಾ।
15016016c ಅಕ್ಷುದ್ರಸಚಿವಶ್ಚಾಯಂ ಕುಂತೀಪುತ್ರೋ ಮಹಾಮನಾಃ।।
ಮಹಾಮನಸ್ವೀ ಕುಂತೀಪುತ್ರನು ವೈಶ್ರವಣನಂತೆ ಸದಾ ದೀರ್ಘದರ್ಶಿಯೂ ಕೃತಪ್ರಜ್ಞನೂ, ಮೃದುಸ್ವಭಾವದವನೂ ಆಗಿದ್ದಾನೆ. ಅವನ ಸಚಿವರೂ ಕೂಡ ಯೋಗ್ಯರಾಗಿದ್ದಾರೆ.
15016017a ಅಪ್ಯಮಿತ್ರೇ ದಯಾವಾಂಶ್ಚ ಶುಚಿಶ್ಚ ಭರತರ್ಷಭ।
15016017c ಋಜು ಪಶ್ಯತಿ ಮೇಧಾವೀ ಪುತ್ರವತ್ಪಾತಿ ನಃ ಸದಾ।।
ಭರತರ್ಷಭ! ಇವನು ಶತ್ರುಗಳ ಕುರಿತೂ ದಯಾವಂತನಾಗಿದ್ದಾನೆ. ಶುಚಿಯಾಗಿದ್ದಾನೆ. ಎಲ್ಲರನ್ನೂ ಸರಳತೆಯಿಂದ ಕಾಣುತ್ತಾನೆ. ಈ ಮೇಧಾವಿಯು ಸದಾ ನಮ್ಮನ್ನು ಮಕ್ಕಳಂತೆಯೇ ಪಾಲಿಸುತ್ತಾನೆ.
15016018a ವಿಪ್ರಿಯಂ ಚ ಜನಸ್ಯಾಸ್ಯ ಸಂಸರ್ಗಾದ್ಧರ್ಮಜಸ್ಯ ವೈ।
15016018c ನ ಕರಿಷ್ಯಂತಿ ರಾಜರ್ಷೇ ತಥಾ ಭೀಮಾರ್ಜುನಾದಯಃ।।
ರಾಜರ್ಷೇ! ಧರ್ಮಜನ ಸಂಸರ್ಗದಿಂದಾಗಿ ಭೀಮಾರ್ಜುನರೇ ಮೊದಲಾದ ಯಾರೂ ಜನರಿಗೆ ಅಪ್ರಿಯವಾದುದನ್ನು ಮಾಡುವುದಿಲ್ಲ.
15016019a ಮಂದಾ ಮೃದುಷು ಕೌರವ್ಯಾಸ್ತೀಕ್ಷ್ಣೇಷ್ವಾಶೀವಿಷೋಪಮಾಃ।
15016019c ವೀರ್ಯವಂತೋ ಮಹಾತ್ಮಾನಃ ಪೌರಾಣಾಂ ಚ ಹಿತೇ ರತಾಃ।।
ಈ ಐವರು ಕೌರವರೂ ಮೃದುಸ್ವಭಾವದವರೊಂದಿಗೆ ಮೃದುವಾಗಿಯೂ ದ್ವೇಷಿಗಳಿಗೆ ವಿಷಸರ್ಪಗಳಂತೆಯೂ ವ್ಯವಹರಿಸುತ್ತಾರೆ. ಈ ವೀರ್ಯವಂತ ಮಹಾತ್ಮರು ಪ್ರಜೆಗಳ ಹಿತದಲ್ಲಿಯೇ ನಿರತರಾಗಿದ್ದಾರೆ.
15016020a ನ ಕುಂತೀ ನ ಚ ಪಾಂಚಾಲೀ ನ ಚೋಲೂಪೀ ನ ಸಾತ್ವತೀ।
15016020c ಅಸ್ಮಿನ್ಜನೇ ಕರಿಷ್ಯಂತಿ ಪ್ರತಿಕೂಲಾನಿ ಕರ್ಹಿ ಚಿತ್।।
ಕುಂತಿಯಾಗಲೀ, ಪಾಂಚಾಲಿಯಾಗಲೀ, ಉಲೂಪಿಯಾಗಲೀ, ಸಾತ್ವತೀ ಸುಭದ್ರೆಯಾಗಲೀ ಈ ಜನರೊಂದಿಗೆ ಎಂದೂ ಪ್ರತಿಕೂಲವಾಗಿ ನಡೆದುಕೊಳ್ಳುವವರಲ್ಲ.
15016021a ಭವತ್ಕೃತಮಿಮಂ ಸ್ನೇಹಂ ಯುಧಿಷ್ಠಿರವಿವರ್ಧಿತಮ್।
15016021c ನ ಪೃಷ್ಠತಃ ಕರಿಷ್ಯಂತಿ ಪೌರಜಾನಪದಾ ಜನಾಃ।।
ನೀನು ಮಾಡಿಟ್ಟ ಈ ಸ್ನೇಹವನ್ನು ಯುಧಿಷ್ಠಿರನು ಬೆಳೆಸಿದ್ದಾನೆ. ನಗರ-ಗ್ರಾಮೀಣ ಪ್ರದೇಶದ ಜನರು ಇದನ್ನು ಎಂದೂ ಅಲ್ಲಗಳೆಯುವುದಿಲ್ಲ.
15016022a ಅಧರ್ಮಿಷ್ಠಾನಪಿ ಸತಃ ಕುಂತೀಪುತ್ರಾ ಮಹಾರಥಾಃ।
15016022c ಮಾನವಾನ್ಪಾಲಯಿಷ್ಯಂತಿ ಭೂತ್ವಾ ಧರ್ಮಪರಾಯಣಾಃ।।
ಮಹಾರಥ ಕುಂತೀಪುತ್ರರು ಧರ್ಮಪರಾಯಣರಾಗಿದ್ದುಕೊಂಡು ಅಧರ್ಮಿಷ್ಠ ಜನರನ್ನೂ ಕೂಡ ಚೆನ್ನಾಗಿ ಪಾಲಿಸುತ್ತಾರೆ.
15016023a ಸ ರಾಜನ್ಮಾನಸಂ ದುಃಖಮಪನೀಯ ಯುಧಿಷ್ಠಿರಾತ್।
15016023c ಕುರು ಕಾರ್ಯಾಣಿ ಧರ್ಮ್ಯಾಣಿ ನಮಸ್ತೇ ಭರತರ್ಷಭ।।
ರಾಜನ್! ಭರತರ್ಷಭ! ಯುಧಿಷ್ಠಿರನ ವಿಷಯದಲ್ಲಿ ನಿನ್ನ ಈ ಮಾನಸಿಕ ದುಃಖವನ್ನು ಕಳೆದುಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡು. ನಿನಗೆ ನಮಸ್ಕಾರವು!””
15016024 ವೈಶಂಪಾಯನ ಉವಾಚ।
15016024a ತಸ್ಯ ತದ್ವಚನಂ ಧರ್ಮ್ಯಮನುಬಂಧಗುಣೋತ್ತರಮ್।
15016024c ಸಾಧು ಸಾಧ್ವಿತಿ ಸರ್ವಃ ಸ ಜನಃ ಪ್ರತಿಗೃಹೀತವಾನ್।।
ವೈಶಂಪಾಯನನು ಹೇಳಿದನು: “ಅವನ ಆ ಧಾರ್ಮಿಕ ಗುಣಸಂಪನ್ನ ಮಾತನ್ನು ಕೇಳಿ ಎಲ್ಲ ಜನರೂ “ಸಾಧು! ಸಾಧು!” ಎಂದು ಹೇಳಿ ಅನುಮೋದಿಸಿದರು.
15016025a ಧೃತರಾಷ್ಟ್ರಶ್ಚ ತದ್ವಾಕ್ಯಮಭಿಪೂಜ್ಯ ಪುನಃ ಪುನಃ।
15016025c ವಿಸರ್ಜಯಾಮಾಸ ತದಾ ಸರ್ವಾಸ್ತು ಪ್ರಕೃತೀಃ ಶನೈಃ।।
ಧೃತರಾಷ್ಟ್ರನೂ ಕೂಡ ಆ ಮಾತನ್ನು ಪುನಃ ಪುನಃ ಗೌರವಿಸಿ, ಎಲ್ಲ ಪ್ರಜಾಜನರನ್ನೂ ಮೆಲ್ಲನೇ ಬೀಳ್ಕೊಟ್ಟನು.
15016026a ಸ ತೈಃ ಸಂಪೂಜಿತೋ ರಾಜಾ ಶಿವೇನಾವೇಕ್ಷಿತಸ್ತದಾ।
15016026c ಪ್ರಾಂಜಲಿಃ ಪೂಜಯಾಮಾಸ ತಂ ಜನಂ ಭರತರ್ಷಭ।।
ಆ ಸಮಯದಲ್ಲಿ ರಾಜನನ್ನು ಅವರು ಪೂಜಿಸಿದರು. ಮಂಗಳ ದೃಷ್ಟಿಯಿಂದ ನೋಡಿದರು. ಭರತರ್ಷಭ! ಅವನೂ ಕೂಡ ಕೈಮುಗಿದು ಆ ಜನರನ್ನು ಗೌರವಿಸಿದನು.
15016027a ತತೋ ವಿವೇಶ ಭುವನಂ ಗಾಂಧಾರ್ಯಾ ಸಹಿತೋ ನೃಪಃ।
15016027c ವ್ಯುಷ್ಟಾಯಾಂ ಚೈವ ಶರ್ವರ್ಯಾಂ ಯಚ್ಚಕಾರ ನಿಬೋಧ ತತ್।।
ಅನಂತರ ನೃಪನು ಗಾಂಧಾರಿಯ ಸಹಿತ ಭವನವನ್ನು ಪ್ರವೇಶಿಸಿದನು. ರಾತ್ರಿ ಕಳೆದೊಡನೆಯೇ ಅವನು ಏನು ಮಾಡಿದನೆಂದು ಹೇಳುತ್ತೇನೆ. ಕೇಳು!”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಪ್ರಕೃತಿಸಾಂತ್ವನೇ ಷೋಡಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಪ್ರಕೃತಿಸಾಂತ್ವನ ಎನ್ನುವ ಹದಿನಾರನೇ ಅಧ್ಯಾಯವು.