015: ಪ್ರಕೃತಿಸಾಂತ್ವನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 15

ಸಾರ

ಪೌರಜನರಲ್ಲಿ ಧೃತರಾಷ್ಟ್ರನ ನಿವೇದನೆ (1-5). ಪೌರಜನರ ಪರವಾಗಿ ಸಾಂಬನೆಂಬ ಬ್ರಾಹ್ಮಣನು ಧೃತರಾಷ್ಟ್ರನನ್ನು ಸಂತವಿಸಿ ಮಾತನಾಡಿದುದು (6-26).

15015001 ವೈಶಂಪಾಯನ ಉವಾಚ।
15015001a ಏವಮುಕ್ತಾಸ್ತು ತೇ ತೇನ ಪೌರಜಾನಪದಾ ಜನಾಃ।
15015001c ವೃದ್ಧೇನ ರಾಜ್ಞಾ ಕೌರವ್ಯ ನಷ್ಟಸಂಜ್ಞಾ ಇವಾಭವನ್।।

ವೈಶಂಪಾಯನನು ಹೇಳಿದನು: “ವೃದ್ಧ ರಾಜನು ಹೀಗೆ ಹೇಳಲು ಪೌರ-ಗ್ರಾಮೀಣ ಜನರು ಮೂರ್ಛೆಗೊಂಡವರಂತೆ ಸ್ತಬ್ಧರಾದರು.

15015002a ತೂಷ್ಣೀಂಭೂತಾಂಸ್ತತಸ್ತಾಂಸ್ತು ಬಾಷ್ಪಕಂಠಾನ್ಮಹೀಪತಿಃ।
15015002c ಧೃತರಾಷ್ಟ್ರೋ ಮಹೀಪಾಲಃ ಪುನರೇವಾಭ್ಯಭಾಷತ।।

ಕಣ್ಣೀರಿನಿಂದ ಗಂಟಲು ತುಂಬಿ ಸ್ತಬ್ಧರಾಗಿದ್ದ ಅವರನ್ನು ಕುರಿತು ಮಹೀಪಾಲ ಮಹೀಪತಿ ಧೃತರಾಷ್ಟ್ರನೇ ಪುನಃ ಹೇಳಿದನು:

15015003a ವೃದ್ಧಂ ಮಾಂ ಹತಪುತ್ರಂ ಚ ಧರ್ಮಪತ್ನ್ಯಾ ಸಹಾನಯಾ।
15015003c ವಿಲಪಂತಂ ಬಹುವಿಧಂ ಕೃಪಣಂ ಚೈವ ಸತ್ತಮಾಃ।।
15015004a ಪಿತ್ರಾ ಸ್ವಯಮನುಜ್ಞಾತಂ ಕೃಷ್ಣದ್ವೈಪಾಯನೇನ ವೈ।
15015004c ವನವಾಸಾಯ ಧರ್ಮಜ್ಞಾ ಧರ್ಮಜ್ಞೇನ ನೃಪೇಣ ಚ।।

“ಸಜ್ಜನರೇ! ಧರ್ಮಜ್ಞರೇ! ವೃದ್ಧನೂ, ಪುತ್ರರನ್ನು ಕಳೆದುಕೊಂಡಿರುವವನೂ, ಧರ್ಮಪತ್ನಿಯೊಡನೆ ಬಹುವಿಧವಾಗಿ ರೋದಿಸುತ್ತಿರುವವನೂ, ಕೃಪಣನೂ ಆದ ನಾನು ವನವಾಸಕ್ಕೆ ನನ್ನ ತಂದೆ ಸ್ವಯಂ ಕೃಷ್ಣದ್ವೈಪಾಯನನಿಂದ ಮತ್ತು ಧರ್ಮಜ್ಞ ನೃಪನಿಂದ ಅನುಮತಿಯನ್ನು ಪಡೆದಿದ್ದೇನೆ.

15015005a ಸೋಽಹಂ ಪುನಃ ಪುನರ್ಯಾಚೇ ಶಿರಸಾವನತೋಽನಘಾಃ।
15015005c ಗಾಂಧಾರ್ಯಾ ಸಹಿತಂ ತನ್ಮಾಂ ಸಮನುಜ್ಞಾತುಮರ್ಹಥ।।

ಅನಘರೇ! ಪುನಃ ಪುನಃ ನಿಮ್ಮೆದಿರು ಶಿರಸಾ ಬಾಗುತ್ತಿದ್ದೇನೆ. ಗಾಂಧಾರಿಯ ಸಹಿತ ನನಗೆ ಅನುಮತಿಯನ್ನು ನೀಡಬೇಕು!”

15015006a ಶ್ರುತ್ವಾ ತು ಕುರುರಾಜಸ್ಯ ವಾಕ್ಯಾನಿ ಕರುಣಾನಿ ತೇ।
15015006c ರುರುದುಃ ಸರ್ವತೋ ರಾಜನ್ಸಮೇತಾಃ ಕುರುಜಾಂಗಲಾಃ।।

ರಾಜನ್! ಕುರುರಾಜನ ಈ ಕರುಣಾಜನಕ ಮಾತುಗಳನ್ನು ಕೇಳಿ ಕುರುಜಾಂಗಲದ ಸರ್ವರೂ ಒಟ್ಟಿಗೇ ರೋದಿಸಿದರು.

15015007a ಉತ್ತರೀಯೈಃ ಕರೈಶ್ಚಾಪಿ ಸಂಚಾದ್ಯ ವದನಾನಿ ತೇ।
15015007c ರುರುದುಃ ಶೋಕಸಂತಪ್ತಾ ಮುಹೂರ್ತಂ ಪಿತೃಮಾತೃವತ್।।

ಉತ್ತರೀಯಗಳಿಂದ ಮತ್ತು ಕೈಗಳಿಂದ ಮುಖಗಳನ್ನು ಮುಚ್ಚಿಕೊಳ್ಳುತ್ತಾ ಶೋಕಸಂತಪ್ತರಾದ ಅವರು ತಾಯಿ-ತಂದೆಯರಂತೆ ಒಂದು ಕ್ಷಣ ರೋದಿಸಿದರು.

15015008a ಹೃದಯೈಃ ಶೂನ್ಯಭೂತೈಸ್ತೇ ಧೃತರಾಷ್ಟ್ರಪ್ರವಾಸಜಮ್।
15015008c ದುಃಖಂ ಸಂಧಾರಯಂತಃ ಸ್ಮ ನಷ್ಟಸಂಜ್ಞಾ ಇವಾಭವನ್।।

ಧೃತರಾಷ್ಟ್ರನ ವನಪ್ರವಾಸದ ದುಃಖವನ್ನು ತುಂಬಿಕೊಂಡಿದ್ದ ಅವರು ಹೃದಯಶೂನ್ಯರಾಗಿ ಮೂರ್ಛಿತರಾಗಿರುವರೋ ಎಂಬಂತೆ ಕಾಣುತ್ತಿದ್ದರು.

15015009a ತೇ ವಿನೀಯ ತಮಾಯಾಸಂ ಕುರುರಾಜವಿಯೋಗಜಮ್।
15015009c ಶನೈಃ ಶನೈಸ್ತದಾನ್ಯೋನ್ಯಮಬ್ರುವನ್ಸ್ವಮತಾನ್ಯುತ।।

ಅನಂತರ ಕುರುರಾಜನ ವಿಯೋಗದಿಂದುಂಟಾಗುವ ದುಃಖವನ್ನು ದೂರಮಾಡಿಕೊಂಡು ಮೆಲ್ಲನೇ ಅನ್ಯೋನ್ಯರಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳತೊಡಗಿದರು.

15015010a ತತಃ ಸಂಧಾಯ ತೇ ಸರ್ವೇ ವಾಕ್ಯಾನ್ಯಥ ಸಮಾಸತಃ।
15015010c ಏಕಸ್ಮಿನ್ಬ್ರಾಹ್ಮಣೇ ರಾಜನ್ನಾವೇಶ್ಯೋಚುರ್ನರಾಧಿಪಮ್।।

ರಾಜನ್! ಆಗ ಅವರೆಲ್ಲರೂ ಒಂದು ನಿರ್ಧಾರಕ್ಕೆ ಬಂದು ಅದನ್ನು ಓರ್ವ ಬ್ರಾಹ್ಮಣನ ಮೂಲಕ ನರಾಧಿಪನಿಗೆ ತಿಳಿಸಿದರು.

15015011a ತತಃ ಸ್ವಚರಣೇ ವೃದ್ಧಃ ಸಂಮತೋಽರ್ಥವಿಶಾರದಃ।
15015011c ಸಾಂಬಾಖ್ಯೋ ಬಹ್ವೃಚೋ ರಾಜನ್ವಕ್ತುಂ ಸಮುಪಚಕ್ರಮೇ।।

ರಾಜನ್! ಆಗ ಸದಾಚಾರನೂ, ಅರ್ಥವಿಶಾರದನೂ, ಋಗ್ವೇದಪಾರಂಗತನೂ, ಮಾನನೀಯನೂ ಆದ ಸಾಂಬ ಎಂಬ ಹೆಸರಿನ ವೃದ್ಧನು ಹೇಳಲು ಉಪಕ್ರಮಿಸಿದನು.

15015012a ಅನುಮಾನ್ಯ ಮಹಾರಾಜಂ ತತ್ಸದಃ ಸಂಪ್ರಭಾಷ್ಯ ಚ।
15015012c ವಿಪ್ರಃ ಪ್ರಗಲ್ಭೋ ಮೇಧಾವೀ ಸ ರಾಜಾನಮುವಾಚ ಹ।।

ಮಹಾರಾಜನನ್ನು ವಿನಯದಿಂದ ಗೌರವಿಸುತ್ತಾ ಸದಸ್ಯರನ್ನು ಸಂತೋಷಗೊಳಿಸುತ್ತಾ ಆ ಮೇಧಾವೀ ವಾಗ್ಮಿ ವಿಪ್ರನು ರಾಜನಿಗೆ ಹೇಳಿದನು:

15015013a ರಾಜನ್ವಾಕ್ಯಂ ಜನಸ್ಯಾಸ್ಯ ಮಯಿ ಸರ್ವಂ ಸಮರ್ಪಿತಮ್।
15015013c ವಕ್ಷ್ಯಾಮಿ ತದಹಂ ವೀರ ತಜ್ಜುಷಸ್ವ ನರಾಧಿಪ।।

“ರಾಜನ್! ವೀರ! ನರಾಧಿಪ! ಈ ಜನರೆಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ನನಗೆ ತಿಳಿಸಿರುವರು. ಅದನ್ನು ನಾನು ನಿನಗೆ ಹೇಳುತ್ತಿದ್ದೇನೆ. ಕೇಳು!

15015014a ಯಥಾ ವದಸಿ ರಾಜೇಂದ್ರ ಸರ್ವಮೇತತ್ತಥಾ ವಿಭೋ।
15015014c ನಾತ್ರ ಮಿಥ್ಯಾ ವಚಃ ಕಿಂ ಚಿತ್ಸುಹೃತ್ತ್ವಂ ನಃ ಪರಸ್ಪರಮ್।।

ರಾಜೇಂದ್ರ! ವಿಭೋ! ನೀನು ಹೇಳಿದುದೆಲ್ಲವೂ ಸರಿಯಾಗಿಯೇ ಇದೆ. ಪರಸ್ಪರರಲ್ಲಿ ಸೌಹಾರ್ದತೆಯಿದೆ ಎನ್ನುವುದರಲ್ಲಿ ಸ್ವಲ್ಪವೂ ಸುಳ್ಳಿಲ್ಲ!

15015015a ನ ಜಾತ್ವಸ್ಯ ತು ವಂಶಸ್ಯ ರಾಜ್ಞಾಂ ಕಶ್ಚಿತ್ಕದಾ ಚನ।
15015015c ರಾಜಾಸೀದ್ಯಃ ಪ್ರಜಾಪಾಲಃ ಪ್ರಜಾನಾಮಪ್ರಿಯೋ ಭವೇತ್।।

ಈ ರಾಜರ ವಂಶದಲ್ಲಿ ಎಂದೂ ಪ್ರಜೆಗಳಿಗೆ ಅಪ್ರಿಯನಾದ ಪ್ರಜಾಪಾಲಕ ರಾಜನು ಇರಲಿಲ್ಲ!

15015016a ಪಿತೃವದ್ಭ್ರಾತೃವಚ್ಚೈವ ಭವಂತಃ ಪಾಲಯಂತಿ ನಃ।
15015016c ನ ಚ ದುರ್ಯೋಧನಃ ಕಿಂ ಚಿದಯುಕ್ತಂ ಕೃತವಾನ್ನೃಪ।।

ನೀವುಗಳು ನಮ್ಮನ್ನು ತಂದೆಯಂತೆ ಮತ್ತು ಸಹೋದರರಂತೆ ಪಾಲಿಸುತ್ತಿದ್ದೀರಿ. ನೃಪ! ದುರ್ಯೋಧನನು ಕೂಡ ಏನೊಂದೂ ಅಯುಕ್ತ ಕಾರ್ಯವನ್ನು ಮಾಡಿಲ್ಲ.

15015017a ಯಥಾ ಬ್ರವೀತಿ ಧರ್ಮಜ್ಞೋ ಮುನಿಃ ಸತ್ಯವತೀಸುತಃ।
15015017c ತಥಾ ಕುರು ಮಹಾರಾಜ ಸ ಹಿ ನಃ ಪರಮೋ ಗುರುಃ।।

ಮಹಾರಾಜ! ಧರ್ಮಜ್ಞ ಮುನಿ ಸತ್ಯವತೀಸುತನು ಹೇಗೆ ಹೇಳುತ್ತಾನೋ ಹಾಗೆಯೇ ಮಾಡು! ಅವನೇ ನಮಗೆ ಪರಮ ಗುರುವು!

15015018a ತ್ಯಕ್ತಾ ವಯಂ ತು ಭವತಾ ದುಃಖಶೋಕಪರಾಯಣಾಃ।
15015018c ಭವಿಷ್ಯಾಮಶ್ಚಿರಂ ರಾಜನ್ಭವದ್ಗುಣಶತೈರ್ಹೃತಾಃ।।

ರಾಜನ್! ನಿನ್ನಿಂದ ತ್ಯಕ್ತರಾದ ನಾವು ಬಹುಕಾಲದವರೆಗೆ ದುಃಖಶೋಕಪರಾಯಣರಾಗಿ ನಿನ್ನ ನೂರಾರು ಗುಣಗಳನ್ನು ಸ್ಮರಿಸಿಕೊಳ್ಳುತ್ತಿರುತ್ತೇವೆ.

15015019a ಯಥಾ ಶಂತನುನಾ ಗುಪ್ತಾ ರಾಜ್ಞಾ ಚಿತ್ರಾಂಗದೇನ ಚ।
15015019c ಭೀಷ್ಮವೀರ್ಯೋಪಗೂಢೇನ ಪಿತ್ರಾ ಚ ತವ ಪಾರ್ಥಿವ।।
15015020a ಭವದ್ಬುದ್ಧಿಯುಜಾ ಚೈವ ಪಾಂಡುನಾ ಪೃಥಿವೀಕ್ಷಿತಾ।
15015020c ತಥಾ ದುರ್ಯೋಧನೇನಾಪಿ ರಾಜ್ಞಾ ಸುಪರಿಪಾಲಿತಾಃ।।

ಪಾರ್ಥಿವ! ರಾಜಾ ಶಂತನುವು ಹೇಗೆ ನಮ್ಮನ್ನು ರಕ್ಷಿಸಿದನೋ, ಭೀಷ್ಮನ ವೀರ್ಯದಿಂದ ರಕ್ಷಿತನಾದ ಚಿತ್ರಾಂಗದನು ನಮ್ಮನ್ನು ಹೇಗೆ ರಕ್ಷಿಸಿದನೋ ಮತ್ತು ನಿನ್ನ ಮೇಲ್ವಿಚಾರಣೆಯಲ್ಲಿ ಪಾಂಡುವು ನಮ್ಮನ್ನು ಹೇಗೆ ಸಂರಕ್ಷಿಸಿದನೋ ಹಾಗೆ ರಾಜಾ ದುರ್ಯೋಧನನೂ ಕೂಡ ನಮ್ಮನ್ನು ಚೆನ್ನಾಗಿ ಪರಿಪಾಲಿಸುತ್ತಿದ್ದನು.

15015021a ನ ಸ್ವಲ್ಪಮಪಿ ಪುತ್ರಸ್ತೇ ವ್ಯಲೀಕಂ ಕೃತವಾನ್ನೃಪ।
15015021c ಪಿತರೀವ ಸುವಿಶ್ವಸ್ತಾಸ್ತಸ್ಮಿನ್ನಪಿ ನರಾಧಿಪೇ।
15015021e ವಯಮಾಸ್ಮ ಯಥಾ ಸಮ್ಯಗ್ಭವತೋ ವಿದಿತಂ ತಥಾ।।

ನೃಪ! ನಿನ್ನ ಮಗನು ನಮ್ಮ ವಿಷಯದಲ್ಲಿ ಸ್ವಲ್ಪವೂ ಅನ್ಯಾಯವನ್ನು ಮಾಡಲಿಲ್ಲ. ನಾವೂ ಕೂಡ ತಂದೆಯಂತೆ ಆ ನರಾಧಿಪನಲ್ಲಿ ವಿಶ್ವಾಸವನ್ನಿಟ್ಟಿದ್ದೆವು. ಅವನ ರಾಜ್ಯಭಾರದಲ್ಲಿ ನಾವೆಲ್ಲರೂ ಸುಖವಾಗಿಯೇ ಇದ್ದೆವು. ಇವೆಲ್ಲವೂ ನಿನಗೆ ತಿಳಿದೇ ಇದೆ.

15015022a ತಥಾ ವರ್ಷಸಹಸ್ರಾಯ ಕುಂತೀಪುತ್ರೇಣ ಧೀಮತಾ।
15015022c ಪಾಲ್ಯಮಾನಾ ಧೃತಿಮತಾ ಸುಖಂ ವಿಂದಾಮಹೇ ನೃಪ।।

ನೃಪ! ಹಾಗೆಯೇ ಧೀಮಂತ ಧೃತಿಮತ ಕುಂತೀಪುತ್ರನ ಆಳ್ವಿಕೆಯಲ್ಲಿ ಸಾವಿರ ವರ್ಷಗಳ ಕಾಲ ಸುಖವಾಗಿರಬೇಕೆಂದು ಬಯಸಿದ್ದೇವೆ.

15015023a ರಾಜರ್ಷೀಣಾಂ ಪುರಾಣಾನಾಂ ಭವತಾಂ ವಂಶಧಾರಿಣಾಮ್।
15015023c ಕುರುಸಂವರಣಾದೀನಾಂ ಭರತಸ್ಯ ಚ ಧೀಮತಃ।।
15015024a ವೃತ್ತಂ ಸಮನುಯಾತ್ಯೇಷ ಧರ್ಮಾತ್ಮಾ ಭೂರಿದಕ್ಷಿಣಃ।
15015024c ನಾತ್ರ ವಾಚ್ಯಂ ಮಹಾರಾಜ ಸುಸೂಕ್ಷ್ಮಮಪಿ ವಿದ್ಯತೇ।।

ಮಹಾರಾಜ! ಈ ಧರ್ಮಾತ್ಮಾ ಭೂರಿದಕ್ಷಿಣ ಯುಧಿಷ್ಠಿರನು ನಿನ್ನ ಪುರಾಣ ವಂಶಧಾರಿಗಳಾದ ರಾಜರ್ಷಿ ಕುರು, ಸಂವರಣ ಮತ್ತು ಧೀಮಂತ ಭರತ ಮೊದಲಾದವರ ಆಚಾರಗಳನ್ನು ಅನುಸರಿಸುತ್ತಿದ್ದಾನೆ. ಅವನಲ್ಲಿ ನಾವು ಹೇಳಬಹುದಾದ ಸೂಕ್ಷ್ಮ ದೋಷವೂ ಇಲ್ಲ.

15015025a ಉಷಿತಾಃ ಸ್ಮ ಸುಖಂ ನಿತ್ಯಂ ಭವತಾ ಪರಿಪಾಲಿತಾಃ।
15015025c ಸುಸೂಕ್ಷ್ಮಂ ಚ ವ್ಯಲೀಕಂ ತೇ ಸಪುತ್ರಸ್ಯ ನ ವಿದ್ಯತೇ।।

ನೀನು ಆಳುತ್ತಿರುವಾಗ ಕೂಡ ನಾವು ನಿತ್ಯವೂ ಸುಖವಾಗಿಯೇ ಇದ್ದೆವು. ನಿನ್ನ ಪುತ್ರನಲ್ಲಿ ಕೂಡ ಸೂಕ್ಷ್ಮವಾದ ಅನ್ಯಾಯವೇನನ್ನೂ ನಾವು ತಿಳಿದಿಲ್ಲ.

15015026a ಯತ್ತು ಜ್ಞಾತಿವಿಮರ್ದೇಽಸ್ಮಿನ್ನಾತ್ಥ ದುರ್ಯೋಧನಂ ಪ್ರತಿ।
15015026c ಭವಂತಮನುನೇಷ್ಯಾಮಿ ತತ್ರಾಪಿ ಕುರುನಂದನ।।

ಕುರುನಂದನ! ಜ್ಞಾತಿವಧೆಯ ವಿಷಯದಲ್ಲಿ ದುರ್ಯೋಧನನ ಕುರಿತು ನೀನು ಏನು ಹೇಳಿದೆಯೋ ಅದಕ್ಕೂ ಸಮಾಧಾನಕರವಾದ ಕೆಲವು ಮಾತುಗಳನ್ನು ಹೇಳುತ್ತೇನೆ.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಪ್ರಕೃತಿಸಾಂತ್ವನೇ ಪಂಚದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಪ್ರಕೃತಿಸಾಂತ್ವನ ಎನ್ನುವ ಹದಿನೈದನೇ ಅಧ್ಯಾಯವು.