014: ಧೃತರಾಷ್ಟ್ರಪ್ರಾರ್ಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 14

ಸಾರ

ಪೌರಜನರಲ್ಲಿ ಧೃತರಾಷ್ಟ್ರನ ನಿವೇದನೆ (1-17).

15014001 ಧೃತರಾಷ್ಟ್ರ ಉವಾಚ।
15014001a ಶಂತನುಃ ಪಾಲಯಾಮಾಸ ಯಥಾವತ್ಪೃಥಿವೀಮಿಮಾಮ್।
15014001c ತಥಾ ವಿಚಿತ್ರವೀರ್ಯಶ್ಚ ಭೀಷ್ಮೇಣ ಪರಿಪಾಲಿತಃ।
15014001e ಪಾಲಯಾಮಾಸ ವಸ್ತಾತೋ ವಿದಿತಂ ವೋ ನಸಂಶಯಃ।।

ಧೃತರಾಷ್ಟ್ರನು ಹೇಳಿದನು: “ಶಂತನುವು ಈ ಭೂಮಿಯನ್ನು ಯಥಾವತ್ತಾಗಿ ಆಳಿಕೊಂಡಿದ್ದನು. ಹಾಗೆಯೇ ವಿಚಿತ್ರವೀರ್ಯ ಮತ್ತು ಭೀಷ್ಮರು ಪರಿಪಾಲಿಸಿದರು. ನನ್ನ ತಂದೆಯು ತತ್ತ್ವಜ್ಞನಾಗಿಯೇ ರಾಜ್ಯವಾಳಿದನೆನ್ನುವುದರಲ್ಲಿ ಸಂಶಯವಿಲ್ಲ.

15014002a ಯಥಾ ಚ ಪಾಂಡುಭ್ರಾತಾ ಮೇ ದಯಿತೋ ಭವತಾಮಭೂತ್।
15014002c ಸ ಚಾಪಿ ಪಾಲಯಾಮಾಸ ಯಥಾವತ್ತಚ್ಚ ವೇತ್ಥ ಹ।।

ಅನಂತರ ನನಗೆ ಅತ್ಯಂತ ಪ್ರಿಯನಾಗಿದ್ದ ಸಹೋದರ ಪಾಂಡುವು ಕೂಡ ಯಥಾವತ್ತಾಗಿ ರಾಜ್ಯವನ್ನು ಪಾಲಿಸಿದನು. ಇದು ನಿಮಗೆ ತಿಳಿದೇ ಇದೆ.

15014003a ಮಯಾ ಚ ಭವತಾಂ ಸಮ್ಯಕ್ಶುಶ್ರೂಷಾ ಯಾ ಕೃತಾನಘಾಃ।
15014003c ಅಸಮ್ಯಗ್ವಾ ಮಹಾಭಾಗಾಸ್ತತ್ಕ್ಷಂತವ್ಯಮತಂದ್ರಿತೈಃ।।

ಅನಘರೇ! ಅನಂತರ ನಾನೂ ಕೂಡ ನಿಮ್ಮ ಸೇವೆಯನ್ನು ಚೆನ್ನಾಗಿಯೇ ಮಾಡಿದ್ದೇನೆ. ಮಹಾಭಾಗರೇ! ನಾನೇನಾದರೂ ಸರಿಯಾಗಿ ನಡೆದುಕೊಳ್ಳದೇ ಇದ್ದಿದ್ದರೆ ಆಲಸ್ಯರಹಿತರಾದ ನೀವು ನನ್ನನ್ನು ಕ್ಷಮಿಸಬೇಕು.

15014004a ಯಚ್ಚ ದುರ್ಯೋಧನೇನೇದಂ ರಾಜ್ಯಂ ಭುಕ್ತಮಕಂಟಕಮ್।
15014004c ಅಪಿ ತತ್ರ ನ ವೋ ಮಂದೋ ದುರ್ಬುದ್ಧಿರಪರಾದ್ಧವಾನ್।।

ಕಂಟಕರಹಿತವಾದ ಈ ರಾಜ್ಯವನ್ನು ದುರ್ಯೋಧನನು ಆಳುತ್ತಿದ್ದಾಗಲೂ, ಅವನು ಮಂದನೂ ದುರ್ಬುದ್ಧಿಯೂ ಆಗಿದ್ದರೂ ನಿಮ್ಮ ಕುರಿತು ಯಾವ ಅಪರಾಧವನ್ನೂ ಎಸಗಿರಲಿಲ್ಲ.

15014005a ತಸ್ಯಾಪರಾಧಾದ್ದುರ್ಬುದ್ಧೇರಭಿಮಾನಾನ್ಮಹೀಕ್ಷಿತಾಮ್।
15014005c ವಿಮರ್ದಃ ಸುಮಹಾನಾಸೀದನಯಾನ್ಮತ್ಕೃತಾದಥ।।

ಅವನ ಅಪರಾಧದಿಂದ, ದುರ್ಬುದ್ಧಿ-ಅಭಿಮಾನಗಳಿಂದ ಮತ್ತು ನನ್ನದೇ ಕೃತ್ಯದಿಂದ ಅಸಂಖ್ಯಾತ ರಾಜರ ಸಂಹಾರವಾಯಿತು!

15014006a ತನ್ಮಯಾ ಸಾಧು ವಾಪೀದಂ ಯದಿ ವಾಸಾಧು ವೈ ಕೃತಮ್।
15014006c ತದ್ವೋ ಹೃದಿ ನ ಕರ್ತವ್ಯಂ ಮಾಮನುಜ್ಞಾತುಮರ್ಹಥ।।

ಆಗ ನಾನು ಒಳ್ಳೆಯದನ್ನೇ ಮಾಡಿರಬಹುದು ಅಥವಾ ಕೆಟ್ಟದ್ದನ್ನೇ ಮಾಡಿರಬಹುದು. ಅವುಗಳನ್ನು ಹೃದಯಕ್ಕೆ ತೆಗೆದುಕೊಳ್ಳದೇ ನನಗೆ ಅನುಜ್ಞೆಯನ್ನು ನೀಡಬೇಕು.

15014007a ವೃದ್ಧೋಽಯಂ ಹತಪುತ್ರೋಽಯಂ ದುಃಖಿತೋಽಯಂ ಜನಾಧಿಪಃ।
15014007c ಪೂರ್ವರಾಜ್ಞಾಂ ಚ ಪುತ್ರೋಽಯಮಿತಿ ಕೃತ್ವಾನುಜಾನತ।।

ಇವನು ವೃದ್ಧನಾಗಿದ್ದಾನೆ. ಇವನು ಪುತ್ರರನ್ನು ಕಳೆದುಕೊಂಡವನಾಗಿದ್ದಾನೆ. ಇವನು ದುಃಖಿತನಾಗಿದ್ದಾನೆ. ಹಿಂದಿನ ರಾಜರ ಮಗನಾಗಿ ಜನಾಧಿಪನಾಗಿದ್ದಾನೆ ಎಂದು ತಿಳಿದುಕೊಂಡು ನನಗೆ ಅನುಮತಿಯನ್ನು ನೀಡಿ!

15014008a ಇಯಂ ಚ ಕೃಪಣಾ ವೃದ್ಧಾ ಹತಪುತ್ರಾ ತಪಸ್ವಿನೀ।
15014008c ಗಾಂಧಾರೀ ಪುತ್ರಶೋಕಾರ್ತಾ ತುಲ್ಯಂ ಯಾಚತಿ ವೋ ಮಯಾ।।

ಕೃಪಣೆಯೂ, ವೃದ್ಧೆಯೂ ಆಗಿರುವ, ನನ್ನಂತೆಯೇ ಪುತ್ರರನ್ನು ಕಳೆದುಕೊಂಡು ಪುತ್ರಶೋಕಾರ್ತಳಾಗಿರುವ ಈ ತಪಸ್ವಿನೀ ಗಾಂಧಾರಿಯೂ ಕೂಡ ಬೇಡಿಕೊಳ್ಳುತ್ತಿದ್ದಾಳೆ.

15014009a ಹತಪುತ್ರಾವಿಮೌ ವೃದ್ಧೌ ವಿದಿತ್ವಾ ದುಃಖಿತೌ ತಥಾ।
15014009c ಅನುಜಾನೀತ ಭದ್ರಂ ವೋ ವ್ರಜಾವಃ ಶರಣಂ ಚ ವಃ।।

ಈ ವೃದ್ಧರೀರ್ವರೂ ಪುತ್ರರನ್ನು ಕಳೆದುಕೊಂಡು ದುಃಖಿತರಾಗಿರುವರೆಂದು ತಿಳಿದು ನಮಗೆ ಅನುಮತಿಯನ್ನು ನೀಡಿ. ನಿಮಗೆ ಮಂಗಳವಾಗಲಿ. ನಾವು ನಿಮಗೆ ಶರಣಾಗತರಾಗಿದ್ದೇವೆ.

15014010a ಅಯಂ ಚ ಕೌರವೋ ರಾಜಾ ಕುಂತೀಪುತ್ರೋ ಯುಧಿಷ್ಠಿರಃ।
15014010c ಸರ್ವೈರ್ಭವದ್ಭಿರ್ದ್ರಷ್ಟವ್ಯಃ ಸಮೇಷು ವಿಷಮೇಷು ಚ।

ಈಗ ಈ ಕೌರವ ಕುಂತೀಪುತ್ರ ಯುಧಿಷ್ಠಿರನು ನಿಮಗೆಲ್ಲರಿಗೆ ರಾಜನಾಗಿದ್ದಾನೆ. ಒಳ್ಳೆಯ ಸಮಯದಲ್ಲಿಯಾಗಲೀ ಕಷ್ಟದ ಸಮಯದಲ್ಲಾಗಲೀ ನೀವು ಅವನ ಕುರಿತು ಕೃಪೆಯಿಂದಿರಬೇಕು.

15014010e ನ ಜಾತು ವಿಷಮಂ ಚೈವ ಗಮಿಷ್ಯತಿ ಕದಾ ಚನ।।
15014011a ಚತ್ವಾರಃ ಸಚಿವಾ ಯಸ್ಯ ಭ್ರಾತರೋ ವಿಪುಲೌಜಸಃ।
15014011c ಲೋಕಪಾಲೋಪಮಾ ಹ್ಯೇತೇ ಸರ್ವೇ ಧರ್ಮಾರ್ಥದರ್ಶಿನಃ।।

ವಿಪುಲ ತೇಜಸ್ಸಿನ ಲೋಕಪಾಲರಂತಿರುವ ಧರ್ಮಾರ್ಥದರ್ಶಿಗಳಾದ ಅವನ ನಾಲ್ವರು ಸಹೋದರರೂ ಮಂತ್ರಿಗಳಾಗಿರುವ ಇವನು ಎಂದೂ ವಿಷಮ ಸ್ಥಿತಿಯನ್ನು ಹೊಂದುವುದಿಲ್ಲ.

15014012a ಬ್ರಹ್ಮೇವ ಭಗವಾನೇಷ ಸರ್ವಭೂತಜಗತ್ಪತಿಃ।
15014012c ಯುಧಿಷ್ಠಿರೋ ಮಹಾತೇಜಾ ಭವತಃ ಪಾಲಯಿಷ್ಯತಿ।।

ಸರ್ವಪ್ರಾಣಿಗಳಿಗೂ ಜಗತ್ಪತಿಯಾಗಿರುವ ಪೂಜ್ಯ ಬ್ರಹ್ಮನಂತೆ ಮಹಾತೇಜಸ್ವಿಯಾಗಿರುವ ಯುಧಿಷ್ಠಿರನು ನಿಮ್ಮೆಲ್ಲರನ್ನೂ ಪಾಲಿಸುತ್ತಾನೆ.

15014013a ಅವಶ್ಯಮೇವ ವಕ್ತವ್ಯಮಿತಿ ಕೃತ್ವಾ ಬ್ರವೀಮಿ ವಃ।
15014013c ಏಷ ನ್ಯಾಸೋ ಮಯಾ ದತ್ತಃ ಸರ್ವೇಷಾಂ ವೋ ಯುಧಿಷ್ಠಿರಃ।
15014013e ಭವಂತೋಽಸ್ಯ ಚ ವೀರಸ್ಯ ನ್ಯಾಸಭೂತಾ ಮಯಾ ಕೃತಾಃ।।

ನಾನು ಇದನ್ನು ಅವಶ್ಯವಾಗಿ ಹೇಳಬೇಕೆಂದು ಹೇಳುತ್ತಿದ್ದೇನೆ. ನಾನು ಯುಧಿಷ್ಠಿರನನ್ನು ನ್ಯಾಸರೂಪದಲ್ಲಿ ನಿಮ್ಮೊಡನೆ ವಹಿಸಿಕೊಡುತ್ತಿದ್ದೇನೆ. ಹಾಗೆಯೇ ನಿಮ್ಮೆಲ್ಲರನ್ನೂ ನ್ಯಾಸರೂಪದಲ್ಲಿ ಆ ವೀರನ ಬಳಿ ಇಡುತ್ತಿದ್ದೇನೆ.

15014014a ಯದ್ಯೇವ ತೈಃ ಕೃತಂ ಕಿಂ ಚಿದ್ವ್ಯಲೀಕಂ ವಾ ಸುತೈರ್ಮಮ।
15014014c ಯದ್ಯನ್ಯೇನ ಮದೀಯೇನ ತದನುಜ್ಞಾತುಮರ್ಹಥ।।

ನಿಮಗೆ ನನ್ನ ಮಕ್ಕಳಿಂದಾಗಲೀ ಅಥವಾ ನನ್ನಿಂದಾಗಲೀ ಯಾವುದೇ ಅಪರಾಧವು ನಡೆದಿದ್ದರೂ ಅದನ್ನು ಕ್ಷಮಿಸಿ ಅನುಮತಿಯನ್ನು ನೀಡಬೇಕು.

15014015a ಭವದ್ಭಿರ್ಹಿ ನ ಮೇ ಮನ್ಯುಃ ಕೃತಪೂರ್ವಃ ಕಥಂ ಚನ।
15014015c ಅತ್ಯಂತಗುರುಭಕ್ತಾನಾಮೇಷೋಽಂಜಲಿರಿದಂ ನಮಃ।।

ಹಿಂದೆ ಎಂದೂ ನೀವು ನನ್ನ ಮೇಲೆ ಕೋಪಗೊಂಡಿರಲಿಲ್ಲ. ನೀವೆಲ್ಲರೂ ಅತ್ಯಂತಗುರುಭಕ್ತಿಯುಳ್ಳವರಾಗಿರುವಿರಿ. ನಿಮಗೆ ಕೈಜೋಡಿಸಿ ನಮಸ್ಕರಿಸುತ್ತಿದ್ದೇನೆ.

15014016a ತೇಷಾಮಸ್ಥಿರಬುದ್ಧೀನಾಂ ಲುಬ್ಧಾನಾಂ ಕಾಮಚಾರಿಣಾಮ್।
15014016c ಕೃತೇ ಯಾಚಾಮಿ ವಃ ಸರ್ವಾನ್ಗಾಂಧಾರೀಸಹಿತೋಽನಘಾಃ।।

ಅನಘರೇ! ಅಸ್ಥಿರಬುದ್ಧಿಯ ಲುಬ್ಧರೂ ಕಾಮಚಾರಿಗಳೂ ಆಗಿದ್ದ ನನ್ನ ಮಕ್ಕಳ ಕುರಿತಾಗಿ ಗಾಂಧಾರಿಯ ಸಹಿತ ನಾನು ನಿಮ್ಮೆಲ್ಲರ ಕ್ಷಮೆಯನ್ನು ಯಾಚಿಸುತ್ತಿದ್ದೇನೆ.”

15014017a ಇತ್ಯುಕ್ತಾಸ್ತೇನ ತೇ ರಾಜ್ಞಾ ಪೌರಜಾನಪದಾ ಜನಾಃ।
15014017c ನೋಚುರ್ಬಾಷ್ಪಕಲಾಃ ಕಿಂ ಚಿದ್ವೀಕ್ಷಾಂ ಚಕ್ರುಃ ಪರಸ್ಪರಮ್।।

ರಾಜನು ಹೀಗೆ ಹೇಳುತ್ತಿರಲು ಪೌರ-ಗ್ರಾಮೀಣಜನರು ಕಂಬನಿದುಂಬಿದ ಕಣ್ಣುಗಳುಳ್ಳವರಾಗಿ ಏನನ್ನೂ ಹೇಳಲಾರದೇ ಒಬ್ಬರನ್ನೊಬ್ಬರು ನೋಡುತ್ತಿದ್ದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರಪ್ರಾರ್ಥನೇ ಚತುರ್ದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರಪ್ರಾರ್ಥನ ಎನ್ನುವ ಹದಿನಾಲ್ಕನೇ ಅಧ್ಯಾಯವು.