013: ಧೃತರಾಷ್ಟ್ರಕೃತವನಾಗಮನಪ್ರಾರ್ಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 13

ಸಾರ

ಧೃತರಾಷ್ಟ್ರನು ಯುಧಿಷ್ಠಿರನಿಗೆ ತನ್ನ ಉಪದೇಶವನ್ನು ಸಮಾಪ್ತಗೊಳಿಸಿ ಕಳುಹಿಸಿದುದು (1-5). ಧೃತರಾಷ್ಟ್ರನ ಇಚ್ಛೆಯಂತೆ ಯುಧಿಷ್ಠಿರನು ಪೌರಜನರನ್ನು ಕರೆಯಿಸಿದುದು (6-10). ಪೌರಜನರಲ್ಲಿ ಧೃತರಾಷ್ಟ್ರನ ನಿವೇದನೆ (11-22).

15013001 ಯುಧಿಷ್ಠಿರ ಉವಾಚ।
15013001a ಏವಮೇತತ್ಕರಿಷ್ಯಾಮಿ ಯಥಾತ್ಥ ಪೃಥಿವೀಪತೇ।
15013001c ಭೂಯಶ್ಚೈವಾನುಶಾಸ್ಯೋಽಹಂ ಭವತಾ ಪಾರ್ಥಿವರ್ಷಭ।।

ಯುಧಿಷ್ಠಿರನು ಹೇಳಿದನು: “ಪೃಥಿವೀಪತೇ! ನೀನು ಹೇಳಿದಂತೆಯೇ ಮಾಡುತ್ತೇನೆ. ಪಾರ್ಥಿವರ್ಷಭ! ನಿನ್ನಿಂದ ಇನ್ನೂ ಹೆಚ್ಚಿನ ಉಪದೇಶವನ್ನು ನಾನು ಬಯಸುತ್ತೇನೆ.

15013002a ಭೀಷ್ಮೇ ಸ್ವರ್ಗಮನುಪ್ರಾಪ್ತೇ ಗತೇ ಚ ಮಧುಸೂದನೇ।
15013002c ವಿದುರೇ ಸಂಜಯೇ ಚೈವ ಕೋಽನ್ಯೋ ಮಾಂ ವಕ್ತುಮರ್ಹತಿ।।

ಭೀಷ್ಮನು ಸ್ವರ್ಗಕ್ಕೆ ಮತ್ತು ಮಧುಸೂದನನು ದ್ವಾರಕೆಗೆ ತೆರಳಿದ ನಂತರ ಹಾಗೂ ವಿದುರ-ಸಂಜಯರು ನಿನ್ನ ಬಳಿಯಲ್ಲಿಯೇ ಇರುವಾಗ ನೀನಲ್ಲದೆ ಬೇರೆ ಯಾರು ನನಗೆ ಉಪದೇಶಗಳ ಮಾತನಾಡುವವರಿದ್ದಾರೆ?

15013003a ಯತ್ತು ಮಾಮನುಶಾಸ್ತೀಹ ಭವಾನದ್ಯ ಹಿತೇ ಸ್ಥಿತಃ।
15013003c ಕರ್ತಾಸ್ಮ್ಯೇತನ್ಮಹೀಪಾಲ ನಿರ್ವೃತೋ ಭವ ಭಾರತ।।

ಮಹೀಪಾಲ! ಭಾರತ! ನನಗೆ ಹಿತಕರನಾಗಿದ್ದುಕೊಂಡು ಇಂದು ನನಗೆ ನೀನು ಏನೆಲ್ಲ ಉಪದೇಶಿಸಿರುವೆಯೋ ಅವನ್ನು ನಾನು ಪರಿಪಾಲಿಸುತ್ತೇನೆ. ಸಮಾಧಾನಗೊಳ್ಳು!””

15013004 ವೈಶಂಪಾಯನ ಉವಾಚ।
15013004a ಏವಮುಕ್ತಃ ಸ ರಾಜರ್ಷಿರ್ಧರ್ಮರಾಜೇನ ಧೀಮತಾ।
15013004c ಕೌಂತೇಯಂ ಸಮನುಜ್ಞಾತುಮಿಯೇಷ ಭರತರ್ಷಭ।।

ವೈಶಂಪಾಯನನು ಹೇಳಿದನು: “ಭರತರ್ಷಭ! ಧೀಮಂತ ರಾಜನು ರಾಜರ್ಷಿಗೆ ಹೀಗೆ ಹೇಳಲು ಕೌಂತೇಯನಿಗೆ ಹೊರಡಲು ಸೂಚಿಸಿ ಧೃತರಾಷ್ಟ್ರನು ಹೀಗೆಂದನು:

15013005a ಪುತ್ರ ವಿಶ್ರಮ್ಯತಾಂ ತಾವನ್ಮಮಾಪಿ ಬಲವಾನ್ಶ್ರಮಃ।
15013005c ಇತ್ಯುಕ್ತ್ವಾ ಪ್ರಾವಿಶದ್ರಾಜಾ ಗಾಂಧಾರ್ಯಾ ಭವನಂ ತದಾ।।

“ಪುತ್ರ! ನೀನಿನ್ನು ಹೊರಡು! ನಾನೂ ಕೂಡ ಬಹಳ ಬಳಲಿದ್ದೇನೆ!” ಹೀಗೆ ಹೇಳಿ ರಾಜನು ಗಾಂಧಾರಿಯ ಭವನವನ್ನು ಪ್ರವೇಶಿಸಿದನು.

15013006a ತಮಾಸನಗತಂ ದೇವೀ ಗಾಂಧಾರೀ ಧರ್ಮಚಾರಿಣೀ।
15013006c ಉವಾಚ ಕಾಲೇ ಕಾಲಜ್ಞಾ ಪ್ರಜಾಪತಿಸಮಂ ಪತಿಮ್।।

ಅವನು ಆಸನದಲ್ಲಿ ಕುಳಿತುಕೊಂಡ ನಂತರ ದೇವೀ ಧರ್ಮಚಾರಿಣೀ ಕಾಲಜ್ಞೆ ಗಾಂಧಾರಿಯು ಪ್ರಜಾಪತಿಯ ಸಮನಾಗಿದ್ದ ತನ್ನ ಪತಿಗೆ ಹೇಳಿದಳು:

15013007a ಅನುಜ್ಞಾತಃ ಸ್ವಯಂ ತೇನ ವ್ಯಾಸೇನಾಪಿ ಮಹರ್ಷಿಣಾ।
15013007c ಯುಧಿಷ್ಠಿರಸ್ಯಾನುಮತೇ ಕದಾರಣ್ಯಂ ಗಮಿಷ್ಯಸಿ।।

“ಸ್ವಯಂ ಮಹರ್ಷಿ ವ್ಯಾಸನಿಂದಲೂ ನಿನಗೆ ಅನುಜ್ಞೆಯಾಗಿದೆ. ಯುಧಿಷ್ಠಿರನೂ ಅನುಮತಿಯನ್ನಿತ್ತಿದ್ದಾನೆ. ಯಾವಾಗ ಅರಣ್ಯಕ್ಕೆ ಹೊರಡುವೆ?”

15013008 ಧೃತರಾಷ್ಟ್ರ ಉವಾಚ।
15013008a ಗಾಂಧಾರ್ಯಹಮನುಜ್ಞಾತಃ ಸ್ವಯಂ ಪಿತ್ರಾ ಮಹಾತ್ಮನಾ।
15013008c ಯುಧಿಷ್ಠಿರಸ್ಯಾನುಮತೇ ಗಂತಾಸ್ಮಿ ನಚಿರಾದ್ವನಮ್।।

ಧೃತರಾಷ್ಟ್ರನು ಹೇಳಿದನು: “ಗಾಂಧಾರೀ! ಮಹಾತ್ಮ ಸ್ವಯಂ ಪಿತನಿಂದ ನಾನು ಅನುಜ್ಞಾತನಾಗಿದ್ದೇನೆ. ಯುಧಿಷ್ಠಿರನ ಅನುಮತಿಯೂ ದೊರಕಿದೆ. ಬೇಗನೇ ಅರಣಕ್ಕೆ ಹೊರಡುತ್ತೇನೆ.

15013009a ಅಹಂ ಹಿ ನಾಮ ಸರ್ವೇಷಾಂ ತೇಷಾಂ ದುರ್ದ್ಯೂತದೇವಿನಾಮ್।
15013009c ಪುತ್ರಾಣಾಂ ದಾತುಮಿಚ್ಚಾಮಿ ಪ್ರೇತ್ಯಭಾವಾನುಗಂ ವಸು।
15013009e ಸರ್ವಪ್ರಕೃತಿಸಾಂನಿಧ್ಯಂ ಕಾರಯಿತ್ವಾ ಸ್ವವೇಶ್ಮನಿ।।

ಎಲ್ಲ ಪ್ರಜೆಗಳನ್ನೂ ನನ್ನ ಹತ್ತಿರ ಮನೆಗೆ ಕರೆಯಿಸಿಕೊಂಡು ಜೂಜುಕೋರರಾಗಿದ್ದ ನನ್ನ ಮಕ್ಕಳೆಲ್ಲರ ಪರಲೋಕಪ್ರಾಪ್ತಿಗಾಗಿ ಧನವನ್ನು ದಾನಮಾಡಲು ಬಯಸುತ್ತೇನೆ.””

15013010 ವೈಶಂಪಾಯನ ಉವಾಚ।
15013010a ಇತ್ಯುಕ್ತ್ವಾ ಧರ್ಮರಾಜಾಯ ಪ್ರೇಷಯಾಮಾಸ ಪಾರ್ಥಿವಃ।
15013010c ಸ ಚ ತದ್ವಚನಾತ್ಸರ್ವಂ ಸಮಾನಿನ್ಯೇ ಮಹೀಪತಿಃ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಪಾರ್ಥಿವನು ಧರ್ಮರಾಜನಿಗೆ ಹೇಳಿ ಕಳುಹಿಸಿದನು. ಅವನ ವಚನದಂತೆ ಮಹೀಪತಿ ಯುಧಿಷ್ಠಿರನು ಎಲ್ಲರನ್ನೂ ಕರೆಯಿಸಿದನು.

15013011a ತತೋ ನಿಷ್ಕ್ರಮ್ಯ ನೃಪತಿಸ್ತಸ್ಮಾದಂತಃಪುರಾತ್ತದಾ।
15013011c ಸರ್ವಂ ಸುಹೃಜ್ಜನಂ ಚೈವ ಸರ್ವಾಶ್ಚ ಪ್ರಕೃತೀಸ್ತಥಾ।
15013011e ಸಮವೇತಾಂಶ್ಚ ತಾನ್ಸರ್ವಾನ್ಪೌರಜಾನಪದಾನಥ।।
15013012a ಬ್ರಾಹ್ಮಣಾಂಶ್ಚ ಮಹೀಪಾಲಾನ್ನಾನಾದೇಶಸಮಾಗತಾನ್।
15013012c ತತಃ ಪ್ರಾಹ ಮಹಾತೇಜಾ ಧೃತರಾಷ್ಟ್ರೋ ಮಹೀಪತಿಃ।।

ಅನಂತರ ಮಹಾತೇಜಸ್ವೀ ಮಹೀಪತಿ ನೃಪತಿ ಧೃತರಾಷ್ಟ್ರನು ಅಂತಃಪುರದಿಂದ ಹೊರಬಂದು ಅಲ್ಲಿ ಬಂದು ಸೇರಿದ್ದ ಎಲ್ಲ ಪೌರ-ಗ್ರಾಮೀಣ ಜನರನ್ನೂ, ಎಲ್ಲ ಸುಹೃಜ್ಜನರನ್ನೂ, ಎಲ್ಲ ಪ್ರಜೆಗಳನ್ನೂ, ನಾನಾ ದೇಶಗಳಿಂದ ಬಂದು ಸೇರಿದ್ದ ಬ್ರಾಹ್ಮಣ-ಮಹೀಪಾಲರನ್ನೂ ನೋಡಿ ಹೇಳಿದನು:

15013013a ಶೃಣ್ವಂತ್ಯೇಕಾಗ್ರಮನಸೋ ಬ್ರಾಹ್ಮಣಾಃ ಕುರುಜಾಂಗಲಾಃ।
15013013c ಕ್ಷತ್ರಿಯಾಶ್ಚೈವ ವೈಶ್ಯಾಶ್ಚ ಶೂದ್ರಾಶ್ಚೈವ ಸಮಾಗತಾಃ।।

“ಇಲ್ಲಿ ಬಂದು ಸೇರಿರುವ ಕುರುಜಾಂಗಲದ ಬ್ರಾಹ್ಮಣರೇ, ಕ್ಷತ್ರಿಯರೇ, ವೈಶ್ಯರೇ ಮತ್ತು ಶೂದ್ರರೇ! ಏಕಾಗ್ರಚಿತ್ತದಿಂದ ಕೇಳಿರಿ!

15013014a ಭವಂತಃ ಕುರವಶ್ಚೈವ ಬಹುಕಾಲಂ ಸಹೋಷಿತಾಃ।
15013014c ಪರಸ್ಪರಸ್ಯ ಸುಹೃದಃ ಪರಸ್ಪರಹಿತೇ ರತಾಃ।।

ನೀವು ಮತ್ತು ಕುರುಗಳು ಬಹುಕಾಲದಿಂದ ಜೊತೆಯಲ್ಲಿಯೇ ಇರುವಿರಿ. ಪರಸ್ಪರರ ಸುಹೃದಯರೂ ಪರಸ್ಪರರ ಹಿತಾಸಕ್ತಿಯುಳ್ಳವರೂ ಆಗಿರುವಿರಿ.

15013015a ಯದಿದಾನೀಮಹಂ ಬ್ರೂಯಾಮಸ್ಮಿನ್ಕಾಲ ಉಪಸ್ಥಿತೇ।
15013015c ತಥಾ ಭವದ್ಭಿಃ ಕರ್ತವ್ಯಮವಿಚಾರ್ಯ ವಚೋ ಮಮ।।

ಈ ಸಮಯದಲ್ಲಿ ನಾನು ನಿಮಗೆ ಏನನ್ನೋ ಹೇಳಬೇಕೆಂದು ಕರೆಯಿಸಿದ್ದೇನೆ. ಆದುದರಿಂದ ವಿಚಾರಮಾಡದೇ ನಾನು ಹೇಳುವಂತೆ ಮಾಡಬೇಕು!

15013016a ಅರಣ್ಯಗಮನೇ ಬುದ್ಧಿರ್ಗಾಂಧಾರೀಸಹಿತಸ್ಯ ಮೇ।
15013016c ವ್ಯಾಸಸ್ಯಾನುಮತೇ ರಾಜ್ಞಸ್ತಥಾ ಕುಂತೀಸುತಸ್ಯ ಚ।
15013016e ಭವಂತೋಽಪ್ಯನುಜಾನಂತು ಮಾ ವೋಽನ್ಯಾ ಭೂದ್ವಿಚಾರಣಾ।।

ಗಾಂಧಾರಿಯೊಡನೆ ಅರಣ್ಯಕ್ಕೆ ಹೋಗಬೇಕೆಂದು ನಾನು ನಿಶ್ಚಯಿಸಿದ್ದೇನೆ. ವ್ಯಾಸ ಮತ್ತು ರಾಜ ಕುಂತೀಸುತನ ಅನುಮತಿಯಾಗಿದೆ. ನೀವೂ ಕೂಡ ನನಗೆ ಅನುಮತಿಯನ್ನು ನೀಡಬೇಕು. ಈ ವಿಷಯದಲ್ಲಿ ನೀವು ಅನ್ಯಥಾ ವಿಚಾರಿಸಬಾರದು!

15013017a ಅಸ್ಮಾಕಂ ಭವತಾಂ ಚೈವ ಯೇಯಂ ಪ್ರೀತಿರ್ಹಿ ಶಾಶ್ವತೀ।
15013017c ನ ಚಾನ್ಯೇಷ್ವಸ್ತಿ ದೇಶೇಷು ರಾಜ್ಞಾಮಿತಿ ಮತಿರ್ಮಮ।।

ನಮ್ಮ ಮತ್ತು ನಿಮ್ಮ ನಡುವೆ ಶಾಶ್ವತ ಪ್ರೀತಿಯಿದೆ. ಅನ್ಯ ದೇಶಗಳ ಜನರಿಗೂ ಅವರ ರಾಜರಿಗೂ ಹೀಗಿಲ್ಲವೆಂದು ನನ್ನ ಅಭಿಪ್ರಾಯ.

15013018a ಶ್ರಾಂತೋಽಸ್ಮಿ ವಯಸಾನೇನ ತಥಾ ಪುತ್ರವಿನಾಕೃತಃ।
15013018c ಉಪವಾಸಕೃಶಶ್ಚಾಸ್ಮಿ ಗಾಂಧಾರೀಸಹಿತೋಽನಘಾಃ।।

ಪುತ್ರರಿಂದ ವಿಹೀನನಾಗಿ ಮಾಡಲ್ಪಟ್ಟ ನಾನು ವೃದ್ಧಾಪ್ಯದಿಂದ ಬಳಲಿದ್ದೇನೆ. ಅನಘರೇ! ಗಾಂಧಾರಿಯ ಸಹಿತ ಉಪವಾಸಗಳನ್ನು ಮಾಡಿ ಕೃಶನೂ ಆಗಿದ್ದೇನೆ.

15013019a ಯುಧಿಷ್ಠಿರಗತೇ ರಾಜ್ಯೇ ಪ್ರಾಪ್ತಶ್ಚಾಸ್ಮಿ ಸುಖಂ ಮಹತ್।
15013019c ಮನ್ಯೇ ದುರ್ಯೋಧನೈಶ್ವರ್ಯಾದ್ವಿಶಿಷ್ಟಮಿತಿ ಸತ್ತಮಾಃ।।

ರಾಜ್ಯವು ಯುಧಿಷ್ಠಿರನಿಗೆ ಸೇರಿದಾಗಲೂ ನಾನು ಮಹಾ ಸುಖವನ್ನು ಅನುಭವಿಸಿದ್ದೇನೆ. ಸತ್ತಮರೇ! ದುರ್ಯೋಧನನು ಐಶ್ವರ್ಯಸಂಪನ್ನನಾಗಿದ್ದಾಗ ನಾನು ಸುಖವಾಗಿದ್ದುದಕ್ಕಿಂತಲೂ ಈಗ ಹೆಚ್ಚು ಸುಖಿಯಾಗಿದ್ದೇನೆಂದು ನನಗನ್ನಿಸುತ್ತದೆ.

15013020a ಮಮ ತ್ವಂಧಸ್ಯ ವೃದ್ಧಸ್ಯ ಹತಪುತ್ರಸ್ಯ ಕಾ ಗತಿಃ।
15013020c ಋತೇ ವನಂ ಮಹಾಭಾಗಾಸ್ತನ್ಮಾನುಜ್ಞಾತುಮರ್ಹಥ।।

ಅಂಧನೂ, ವೃದ್ಧನೂ, ಪುತ್ರರನ್ನು ಕಳೆದುಕೊಂಡವನೂ ಆದ ನನ್ನಂಥವನಿಗೆ ವನದ ಹೊರತಾಗಿ ಬೇರೆ ಏನು ಗತಿ? ಮಹಾಭಾಗರೇ! ನನಗೆ ಅನುಮತಿಯನ್ನು ನೀಡಬೇಕು!”

15013021a ತಸ್ಯ ತದ್ವಚನಂ ಶ್ರುತ್ವಾ ಸರ್ವೇ ತೇ ಕುರುಜಾಂಗಲಾಃ।
15013021c ಬಾಷ್ಪಸಂದಿಗ್ಧಯಾ ವಾಚಾ ರುರುದುರ್ಭರತರ್ಷಭ।।

ಭರತರ್ಷಭ! ಅವನ ಆ ಮಾತನ್ನು ಕೇಳಿ ಕುರುಜಾಂಗಲದ ಅವರೆಲ್ಲರೂ ಕಣ್ಣೀರುಸುರಿಸುತ್ತಾ ಗಳಗಳನೆ ಅಳತೊಡಗಿದರು.

15013022a ತಾನವಿಬ್ರುವತಃ ಕಿಂ ಚಿದ್ದುಃಖಶೋಕಪರಾಯಣಾನ್।
15013022c ಪುನರೇವ ಮಹಾತೇಜಾ ಧೃತರಾಷ್ಟ್ರೋಽಬ್ರವೀದಿದಮ್।।

ಏನೊಂದನ್ನೂ ಹೇಳದೇ ಶೋಕಪರಾಯಣರಾಗಿ ದುಃಖಿಸುತ್ತಿದ್ದ ಅವರಿಗೆ ಮಹಾತೇಜಸ್ವಿ ಧೃತರಾಷ್ಟ್ರನು ಪುನಃ ಇಂತೆಂದನು.

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರಕೃತವನಾಗಮನಪ್ರಾರ್ಥನೇ ತ್ರಯೋದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರಕೃತವನಾಗಮನಪ್ರಾರ್ಥನ ಎನ್ನುವ ಹದಿಮೂರನೇ ಅಧ್ಯಾಯವು.