012: ಧೃತರಾಷ್ಟ್ರೋಪದೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 12

ಸಾರ

ಯುಧಿಷ್ಠಿರನಿಗೆ ಧೃತರಾಷ್ಟ್ರನ ಉಪದೇಶ (1-23).

15012001 ಧೃತರಾಷ್ಟ್ರ ಉವಾಚ।
15012001a ಸಂಧಿವಿಗ್ರಹಮಪ್ಯತ್ರ ಪಶ್ಯೇಥಾ ರಾಜಸತ್ತಮ।
15012001c ದ್ವಿಯೋನಿಂ ತ್ರಿವಿಧೋಪಾಯಂ ಬಹುಕಲ್ಪಂ ಯುಧಿಷ್ಠಿರ।।

ಧೃತರಾಷ್ಟ್ರನು ಹೇಳಿದನು: “ರಾಜಸತ್ತಮ! ಯುಧಿಷ್ಠಿರ! ಸಂಧಿ ಮತ್ತು ಯುದ್ಧಗಳ ವಿಷಯಗಳಲ್ಲಿ ಎರಡು ಕಾರಣಗಳನ್ನೂ, ಮೂರು ವಿಧದ ಉಪಾಯಗಳನ್ನೂ, ಅನೇಕ ಪ್ರಕಾರಗಳನ್ನೂ ತಿಳಿದುಕೊಂಡಿರಬೇಕು.

15012002a ರಾಜೇಂದ್ರ ಪರ್ಯುಪಾಸೀಥಾಶ್ಚಿತ್ತ್ವಾ ದ್ವೈವಿಧ್ಯಮಾತ್ಮನಃ।
15012002c ತುಷ್ಟಪುಷ್ಟಬಲಃ ಶತ್ರುರಾತ್ಮವಾನಿತಿ ಚ ಸ್ಮರೇತ್।।

ರಾಜೇಂದ್ರ! ನಿನ್ನದೇ ಬಲಾಬಲಗಳನ್ನು ತಿಳಿದುಕೊಂಡು ಶತ್ರುವು ನಿನಗಿಂತಲೂ ಬಲಿಷ್ಟನಾಗಿದ್ದರೆ ಗೌರವಿಸಬೇಕು. ತುಷ್ಟಪುಷ್ಟ ಸೇನೆಯುಳ್ಳವನು ಬಲಶಾಲಿ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.

15012003a ಪರ್ಯುಪಾಸನಕಾಲೇ ತು ವಿಪರೀತಂ ವಿಧೀಯತೇ।
15012003c ಆಮರ್ದಕಾಲೇ ರಾಜೇಂದ್ರ ವ್ಯಪಸರ್ಪಸ್ತತೋ ವರಃ।।

ರಾಜೇಂದ್ರ! ಸಂಧಿಯ ಕಾಲದಲ್ಲಿ ವಿಪರೀತ ನಿಯಮಗಳನ್ನು ವಿಧಿಸುತ್ತಾರೆ. ಅನಿವಾರ್ಯವಾಗಿ ಬಲಿಷ್ಟನೊಡನೆ ಯುದ್ಧಮಾಡಬೇಕಾಗಿ ಬಂದಾಗ ಪಲಾಯನಮಾಡುವುದೇ ಸೂಕ್ತವಾಗುತ್ತದೆ.

15012004a ವ್ಯಸನಂ ಭೇದನಂ ಚೈವ ಶತ್ರೂಣಾಂ ಕಾರಯೇತ್ತತಃ।
15012004c ಕರ್ಶನಂ ಭೀಷಣಂ ಚೈವ ಯುದ್ಧೇ ಚಾಪಿ ಬಹುಕ್ಷಯಮ್।।

ಆಗ ಶತ್ರುಗಳಿಗೆ ವ್ಯಸನಗಳನ್ನುಂಟುಮಾಡಬೇಕು ಮತ್ತು ಅವರಲ್ಲಿ ಬಿರುಕನ್ನುಂಟುಮಾಡಬೇಕು. ಕರ್ಶನ, ಭೀಷಣ ಮತ್ತು ಬಹುವಿನಾಶೀ ಯುದ್ಧ – ಇವುಗಳನ್ನೂ ಬಳಸಬೇಕು.

15012005a ಪ್ರಯಾಸ್ಯಮಾನೋ ನೃಪತಿಸ್ತ್ರಿವಿಧಂ ಪರಿಚಿಂತಯೇತ್।
15012005c ಆತ್ಮನಶ್ಚೈವ ಶತ್ರೋಶ್ಚ ಶಕ್ತಿಂ ಶಾಸ್ತ್ರವಿಶಾರದಃ।।

ಶಾಸ್ತ್ರವಿಶಾರದ ನೃಪತಿಯು ಯುದ್ಧಕ್ಕೆ ಹೊರಡುವ ಮೊದಲು ತನ್ನ ಮತ್ತು ಶತ್ರುವಿನ ಮೂರು ಶಕ್ತಿಗಳ ಕುರಿತು ಯೋಚಿಸಬೇಕು.

15012006a ಉತ್ಸಾಹಪ್ರಭುಶಕ್ತಿಭ್ಯಾಂ ಮಂತ್ರಶಕ್ತ್ಯಾ ಚ ಭಾರತ।
15012006c ಉಪಪನ್ನೋ ನರೋ ಯಾಯಾದ್ವಿಪರೀತಮತೋಽನ್ಯಥಾ।।

ಭಾರತ! ಉತ್ಸಾಹಶಕ್ತಿ, ಪ್ರಭುಶಕ್ತಿ ಮತ್ತು ಮಂತ್ರಶಕ್ತಿ ಇವುಗಳಿಂದ ಸಂಪನ್ನನಾದ ರಾಜನು ಶತ್ರುವಿನ ಮೇಲೆ ಆಕ್ರಮಣಿಸಬಹುದು. ಈ ಮೂರೂ ಶಕ್ತಿಗಳು ಇಲ್ಲದಿದ್ದರೆ ಆಕ್ರಮಿಸಲು ಹೋಗಬಾರದು.

15012007a ಆದದೀತ ಬಲಂ ರಾಜಾ ಮೌಲಂ ಮಿತ್ರಬಲಂ ತಥಾ।
15012007c ಅಟವೀಬಲಂ ಭೃತಂ ಚೈವ ತಥಾ ಶ್ರೇಣೀಬಲಂ ಚ ಯತ್।।

ವಿಜಯವನ್ನು ಅಪೇಕ್ಷಿಸುವ ರಾಜನು ಸೈನ್ಯಬಲ, ಧನಬಲ, ಮಿತ್ರಬಲ, ಅರಣ್ಯದ ಬಲ, ಸೇವಕರ ಬಲ ಮತ್ತು ಶಿಲ್ಪಿಗಳ ಬಲ ಇವುಗಳನ್ನು ಸಂಗ್ರಹಿಸಬೇಕು.

15012008a ತತ್ರ ಮಿತ್ರಬಲಂ ರಾಜನ್ಮೌಲೇನ ನ ವಿಶಿಷ್ಯತೇ।
15012008c ಶ್ರೇಣೀಬಲಂ ಭೃತಂ ಚೈವ ತುಲ್ಯ ಏವೇತಿ ಮೇ ಮತಿಃ।।

ರಾಜನ್! ಇವುಗಳಲ್ಲಿ ಮಿತ್ರಬಲ ಮತ್ತು ಧನಬಲಗಳು ವಿಶಿಷ್ಟವಾದವುಗಳು. ಶಿಲ್ಪಿಬಲ ಮತ್ತು ವೇತನವನ್ನು ಕೊಟ್ಟು ಇಟ್ಟುಕೊಂಡಿರುವ ಸೇನೆಗಳು ಸಮಾನ ಎಂದು ನನ್ನ ಅಭಿಪ್ರಾಯ.

15012009a ತಥಾ ಚಾರಬಲಂ ಚೈವ ಪರಸ್ಪರಸಮಂ ನೃಪ।
15012009c ವಿಜ್ಞೇಯಂ ಬಲಕಾಲೇಷು ರಾಜ್ಞಾ ಕಾಲ ಉಪಸ್ಥಿತೇ।।

ನೃಪ! ಚಾರಬಲ ಮತ್ತು ಭೃತ್ಯಬಲಗಳು ಪರಸ್ಪರ ಸಮನಾಗಿಯೇ ಇರುತ್ತವೆ. ಅನೇಕ ವರ್ಷಗಳಿಗೊಮ್ಮೆ ಯುದ್ಧಕಾಲವು ಸನ್ನಿಹಿತವಾಗುವುದರಿಂದ ರಾಜನು ಈ ಎಲ್ಲ ವಿಷಯಗಳನ್ನೂ ತಿಳಿದುಕೊಂಡಿರಬೇಕು.

15012010a ಆಪದಶ್ಚಾಪಿ ಬೋದ್ಧವ್ಯಾ ಬಹುರೂಪಾ ನರಾಧಿಪ।
15012010c ಭವಂತಿ ರಾಜ್ಞಾಂ ಕೌರವ್ಯ ಯಾಸ್ತಾಃ ಪೃಥಗತಃ ಶೃಣು।।

ನರಾಧಿಪ! ಕೌರವ್ಯ! ಬಹುರೂಪೀ ಆಪತ್ತುಗಳನ್ನು ತಿಳಿದುಕೊಂಡಿರಬೇಕು. ಅವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹೇಳುವೆನು ಕೇಳು.

15012011a ವಿಕಲ್ಪಾ ಬಹವೋ ರಾಜನ್ನಾಪದಾಂ ಪಾಂಡುನಂದನ।
15012011c ಸಾಮಾದಿಭಿರುಪನ್ಯಸ್ಯ ಶಮಯೇತ್ತಾನ್ನೃಪಃ ಸದಾ।।

ರಾಜನ್! ಪಾಂಡುನಂದನ! ಆಪತ್ತಿನ ವಿಕಲ್ಪಗಳು ಬಹಳ. ನೃಪನು ಸಾಮ-ದಾನಾದಿ ಉಪಾಯಗಳಿಂದ ಅವುಗಳನ್ನು ಸದಾ ಉಪಶಮನಗೊಳಿಸುತ್ತಿರಬೇಕು.

15012012a ಯಾತ್ರಾಂ ಯಾಯಾದ್ಬಲೈರ್ಯುಕ್ತೋ ರಾಜಾ ಷಡ್ಭಿಃ ಪರಂತಪ।
15012012c ಸಂಯುಕ್ತೋ ದೇಶಕಾಲಾಭ್ಯಾಂ ಬಲೈರಾತ್ಮಗುಣೈಸ್ತಥಾ।।

ಪರಂತಪ! ದೇಶ-ಕಾಲಗಳ ಅನುಕೂಲತೆಗಳನ್ನು ವಿವೇಚಿಸಿ ಆರು ರಾಜಬಲಗಳಿಂದ ಕೂಡಿರುವ, ಆತ್ಮಗುಣಗಳ ಬಲದಿಂದಲೂ ಇರುವ ರಾಜನು ವಿಜಯಯಾತ್ರೆಯನ್ನು ಕೈಗೊಳ್ಳಬಹುದು.

15012013a ತುಷ್ಟಪುಷ್ಟಬಲೋ ಯಾಯಾದ್ರಾಜಾ ವೃದ್ಧ್ಯುದಯೇ ರತಃ।
15012013c ಆಹೂತಶ್ಚಾಪ್ಯಥೋ ಯಾಯಾದನೃತಾವಪಿ ಪಾರ್ಥಿವಃ।।

ಹೃಷ್ಟ-ಪುಷ್ಟ ಸೇನೆಯನ್ನು ಪಡೆದಿರುವ ರಾಜನು ದುರ್ಬಲನಾಗಿರದಿದ್ದರೆ ಯುದ್ಧಕ್ಕೆ ಯೋಗ್ಯವಲ್ಲದ ಋತುವಿನಲ್ಲಿಯೂ ಶತ್ರುವಿನೊಡನೆ ಯುದ್ಧಮಾಡಬಲ್ಲನು.

15012014a ಸ್ಥೂಣಾಶ್ಮಾನಂ ವಾಜಿರಥಪ್ರಧಾನಾಂ ಧ್ವಜದ್ರುಮೈಃ ಸಂವೃತಕೂಲರೋಧಸಮ್।
15012014c ಪದಾತಿನಾಗೈರ್ಬಹುಕರ್ದಮಾಂ ನದೀಂ ಸಪತ್ನನಾಶೇ ನೃಪತಿಃ ಪ್ರಯಾಯಾತ್।।

ರಾಜನಾದವನು ಶತ್ರುವಿನ ವಿನಾಶಕ್ಕಾಗಿ ಬತ್ತಳಿಕೆಗಳೇ ಬಂಡೆಗಳಂತಿರುವ, ಕುದುರೆ-ರಥಗಳೇ ಪ್ರವಾಹರೂಪದಲ್ಲಿರುವ, ಧ್ವಜಗಳೆಂಬ ವೃಕ್ಷಗಳಿಂದ ಕೂಡಿದ ತೀರಪ್ರದೇಶವಾದ, ಪದಾತಿ-ಗಜಸೇನೆಗಳೇ ಕೆಸರಿನ ರೂಪದಲ್ಲಿರುವ ನದಿಯನ್ನು ಹರಿಯ ಬಿಡಬೇಕು.

15012015a ಅಥೋಪಪತ್ತ್ಯಾ ಶಕಟಂ ಪದ್ಮಂ ವಜ್ರಂ ಚ ಭಾರತ।
15012015c ಉಶನಾ ವೇದ ಯಚ್ಚಾಸ್ತ್ರಂ ತತ್ರೈತದ್ವಿಹಿತಂ ವಿಭೋ।।

ಭಾರತ! ವಿಭೋ! ಆಗ ಯುಕ್ತಿಯನ್ನುಪಯೋಗಿಸಿ ಸೇನೆಯನ್ನು ಶಕಟ, ಪದ್ಮ ಅಥವಾ ವಜ್ರ ವ್ಯೂಹಗಳಲ್ಲಿ ರಚಿಸಬೇಕು. ಶುಕ್ರನ ವೇದ ಶಾಸ್ತ್ರದಲ್ಲಿ ಇದರ ಕುರಿತು ಹೇಳಲ್ಪಟ್ಟಿದೆ.

15012016a ಸಾದಯಿತ್ವಾ ಪರಬಲಂ ಕೃತ್ವಾ ಚ ಬಲಹರ್ಷಣಮ್।
15012016c ಸ್ವಭೂಮೌ ಯೋಜಯೇದ್ಯುದ್ಧಂ ಪರಭೂಮೌ ತಥೈವ ಚ।।

ಗುಪ್ತಚಾರರ ಮೂಲಕ ಶತ್ರುಸೈನ್ಯದ ಬಲಾಬಲಗಳನ್ನು ತಿಳಿದುಕೊಂಡು, ತನ್ನ ಸೈನ್ಯದ ಬಲವನ್ನೂ ಪರೀಕ್ಷಿಸಿಕೊಂಡು, ತನ್ನ ಭೂಮಿಯಲ್ಲಾಗಲೀ ಶತ್ರುವಿನ ಭೂಮಿಯಲ್ಲಾಗಲೀ ಯುದ್ಧವನ್ನು ಆರಂಭಿಸಬೇಕು. ರಾಜನು ಪಾರಿತೋಷಕಗಳ ಮೂಲಕ ಸೈನಿಕರನ್ನು ಸಂತುಷ್ಟಿಗೊಳಿಸಬೇಕು. ಸೈನ್ಯಕ್ಕೆ ಬಲಿಷ್ಠರಾದವರನ್ನು ಸೇರಿಸಿಕೊಳ್ಳಬೇಕು.

15012017a ಲಬ್ಧಂ ಪ್ರಶಮಯೇದ್ರಾಜಾ ನಿಕ್ಷಿಪೇದ್ಧನಿನೋ ನರಾನ್।
15012017c ಜ್ಞಾತ್ವಾ ಸ್ವವಿಷಯಂ ತಂ ಚ ಸಾಮಾದಿಭಿರುಪಕ್ರಮೇತ್।।

ತನ್ನ ಬಲಾಬಲಗಳನ್ನು ಚೆನ್ನಾಗಿ ತಿಳಿದುಕೊಂಡ ನಂತರ ಶತ್ರುವಿನೊಡನೆ ಸಾಮ-ದಾನಾದಿ ಉಪಾಯಗಳಿಂದ ಸಂಧಿಯನ್ನಾದರೂ ಮಾಡಿಕೊಳ್ಳಬಹುದು ಅಥವಾ ಯುದ್ಧವನ್ನಾದರೂ ಮಾಡಬಹುದು.

15012018a ಸರ್ವಥೈವ ಮಹಾರಾಜ ಶರೀರಂ ಧಾರಯೇದಿಹ।
15012018c ಪ್ರೇತ್ಯೇಹ ಚೈವ ಕರ್ತವ್ಯಮಾತ್ಮನಿಃಶ್ರೇಯಸಂ ಪರಮ್।।

ಮಹಾರಾಜ! ಸರ್ವಥಾ ಈ ಶರೀರವನ್ನು ರಕ್ಷಿಸಿಕೊಳ್ಳಬೇಕು. ಈ ಶರೀರದ ಮೂಲಕವೇ ಇಹಲೋಕ ಪರಲೋಕಗಳೆರಡರಲ್ಲಿಯೂ ತನಗೆ ಶ್ರೇಯಸ್ಸನ್ನು ಸಾಧಿಸಿಕೊಳ್ಳುವುದು ರಾಜನ ಕರ್ತವ್ಯವಾಗಿರುತ್ತದೆ.

15012019a ಏವಂ ಕುರ್ವನ್ಶುಭಾ ವಾಚೋ ಲೋಕೇಽಸ್ಮಿನ್ಶೃಣುತೇ ನೃಪಃ।
15012019c ಪ್ರೇತ್ಯ ಸ್ವರ್ಗಂ ತಥಾಪ್ನೋತಿ ಪ್ರಜಾ ಧರ್ಮೇಣ ಪಾಲಯನ್।।

ನೃಪ! ಈ ಶುಭ ಮಾತುಗಳಂತೆ ಈ ಲೋಕದಲ್ಲಿ ಯಾರು ಪ್ರಜೆಗಳನ್ನು ಧರ್ಮದಿಂದ ಪಾಲಿಸುತ್ತಾರೋ ಅವರು ಮರಣಾನಂತರ ಸ್ವರ್ಗವನ್ನು ಪಡೆಯುತ್ತಾರೆ.

15012020a ಏವಂ ತ್ವಯಾ ಕುರುಶ್ರೇಷ್ಠ ವರ್ತಿತವ್ಯಂ ಪ್ರಜಾಹಿತಮ್।
15012020c ಉಭಯೋರ್ಲೋಕಯೋಸ್ತಾತ ಪ್ರಾಪ್ತಯೇ ನಿತ್ಯಮೇವ ಚ।।

ಕುರುಶ್ರೇಷ್ಠ! ಮಗೂ! ಇಹ-ಪರಗಳಲ್ಲಿಯೂ ಸುಖವನ್ನು ಹೊಂದಲು ನೀನು ಹೀಗೆ ನಿತ್ಯವೂ ಪ್ರಜಾಹಿತದಲ್ಲಿಯೇ ವರ್ತಿಸಬೇಕು.

15012021a ಭೀಷ್ಮೇಣ ಪೂರ್ವಮುಕ್ತೋಽಸಿ ಕೃಷ್ಣೇನ ವಿದುರೇಣ ಚ।
15012021c ಮಯಾಪ್ಯವಶ್ಯಂ ವಕ್ತವ್ಯಂ ಪ್ರೀತ್ಯಾ ತೇ ನೃಪಸತ್ತಮ।।

ನೃಪಸತ್ತಮ! ಭೀಷ್ಮ, ಕೃಷ್ಣ ಮತ್ತು ವಿದುರರು ನಿನಗೆ ಈ ಮೊದಲೇ ಹೇಳಿದ್ದಾರೆ. ನಿನ್ನ ಮೇಲಿನ ಪ್ರೀತಿಯಿಂದ ನಾನೂ ಕೆಲವು ವಿಷಯಗಳನ್ನು ಹೇಳುವುದು ಅವಶ್ಯವೆಂದು ಭಾವಿಸಿ ಹೇಳಿದ್ದೇನೆ.

15012022a ಏತತ್ಸರ್ವಂ ಯಥಾನ್ಯಾಯಂ ಕುರ್ವೀಥಾ ಭೂರಿದಕ್ಷಿಣ।
15012022c ಪ್ರಿಯಸ್ತಥಾ ಪ್ರಜಾನಾಂ ತ್ವಂ ಸ್ವರ್ಗೇ ಸುಖಮವಾಪ್ಸ್ಯಸಿ।।

ಭೂರಿದಕ್ಷಿಣ! ಇವೆಲ್ಲವನ್ನೂ ಯಥಾನ್ಯಾಯವಾಗಿ ಮಾಡು. ಇದರಿಂದ ನೀನು ಪ್ರಜೆಗಳಿಗೂ ಪ್ರಿಯನಾಗುವೆ ಮತ್ತು ಸ್ವರ್ಗದ ಸುಖವನ್ನೂ ಪಡೆಯುವೆ.

15012023a ಅಶ್ವಮೇಧಸಹಸ್ರೇಣ ಯೋ ಯಜೇತ್ಪೃಥಿವೀಪತಿಃ।
15012023c ಪಾಲಯೇದ್ವಾಪಿ ಧರ್ಮೇಣ ಪ್ರಜಾಸ್ತುಲ್ಯಂ ಫಲಂ ಲಭೇತ್।।

ಸಾವಿರ ಅಶ್ವಮೇಧವನ್ನು ಮಾಡುವ ರಾಜನಿಗೆ ಲಭಿಸುವ ಫಲವೂ ಧರ್ಮದಿಂದ ಪ್ರಜೆಗಳನ್ನು ರಕ್ಷಿಸುವವನಿಗೆ ಲಭಿಸುವ ಫಲವೂ ಒಂದೇ ಆಗಿರುತ್ತದೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರೋಪದೇಶೇ ದ್ವಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರೋಪದೇಶ ಎನ್ನುವ ಹನ್ನೆರಡನೇ ಅಧ್ಯಾಯವು.