011: ಧೃತರಾಷ್ಟ್ರೋಪದೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 11

ಸಾರ

ಯುಧಿಷ್ಠಿರನಿಗೆ ಧೃತರಾಷ್ಟ್ರನ ಉಪದೇಶ (1-19).

15011001 ಧೃತರಾಷ್ಟ್ರ ಉವಾಚ।
15011001a ಮಂಡಲಾನಿ ಚ ಬುಧ್ಯೇಥಾಃ ಪರೇಷಾಮಾತ್ಮನಸ್ತಥಾ।
15011001c ಉದಾಸೀನಗುಣಾನಾಂ ಚ ಮಧ್ಯಮಾನಾಂ ತಥೈವ ಚ।।

ಧೃತರಾಷ್ಟ್ರನು ಹೇಳಿದನು: “ನಿನ್ನ ವಿಷಯದಲ್ಲಿ ಮತ್ತು ನಿನ್ನ ಶತ್ರುಗಳ ವಿಷಯದಲ್ಲಿ ಉದಾಸೀನಗುಣವುಳ್ಳ ಮತ್ತು ಮಧ್ಯಸ್ಥರಾಗಿರುವ ರಾಜಮಂಡಲಗಳನ್ನು ಗುರುತಿಸಿಕೊಂಡಿರಬೇಕು.

15011002a ಚತುರ್ಣಾಂ ಶತ್ರುಜಾತಾನಾಂ ಸರ್ವೇಷಾಮಾತತಾಯಿನಾಮ್।
15011002c ಮಿತ್ರಂ ಚಾಮಿತ್ರಮಿತ್ರಂ ಚ ಬೋದ್ಧವ್ಯಂ ತೇಽರಿಕರ್ಶನ।।

ಅರಿಕರ್ಶನ! ಶತ್ರುಗಳಿಂದ ಉಂಟಾಗುವ ನಾಲ್ಕು ಮತ್ತು ಆತತಾಯಿಗಳಿಂದ ಉಂಟಾಗುವ ಸರ್ವ ಅಪಾಯಗಳನ್ನೂ ತಿಳಿದುಕೊಂಡಿರಬೇಕು. ನಿನ್ನ ಮಿತ್ರನು ಯಾರು ಮತ್ತು ಶತ್ರುವಿನ ಮಿತ್ರರ್ಯಾರು ಎಂದು ತಿಳಿದುಕೊಂಡಿರಬೇಕು.

15011003a ತಥಾಮಾತ್ಯಾ ಜನಪದಾ ದುರ್ಗಾಣಿ ವಿಷಮಾಣಿ ಚ।
15011003c ಬಲಾನಿ ಚ ಕುರುಶ್ರೇಷ್ಠ ಭವಂತ್ಯೇಷಾಂ ಯಥೇಚ್ಚಕಮ್।।

ಕುರುಶ್ರೇಷ್ಠ! ಅಮಾತ್ಯರು, ಜನಪದಗಳು, ದುರ್ಗ-ಕಣಿವೆಗಳು ಮತ್ತು ಸೇನೆಗಳ ಮೇಲೆ ಶತ್ರುಗಳ ದೃಷ್ಟಿಯು ಯಥೇಚ್ಛವಾಗಿರುತ್ತದೆ.

15011004a ತೇ ಚ ದ್ವಾದಶ ಕೌಂತೇಯ ರಾಜ್ಞಾಂ ವೈ ವಿವಿಧಾತ್ಮಕಾಃ।
15011004c ಮಂತ್ರಿಪ್ರಧಾನಾಶ್ಚ ಗುಣಾಃ ಷಷ್ಟಿರ್ದ್ವಾದಶ ಚ ಪ್ರಭೋ।।

ಕೌಂತೇಯ! ಪ್ರಭೋ! ಈ ಹನ್ನೆರಡು ಮತ್ತು ಮಂತ್ರಿಪ್ರಧಾನರಾದ ಅರವತ್ತು ಗುಣಗಳು ಸೇರಿ ರಾಜನ ವಿವಿಧ ಆತ್ಮಕಗಳು.

15011005a ಏತನ್ಮಂಡಲಮಿತ್ಯಾಹುರಾಚಾರ್ಯಾ ನೀತಿಕೋವಿದಾಃ।
15011005c ಅತ್ರ ಷಾಡ್ಗುಣ್ಯಮಾಯತ್ತಂ ಯುಧಿಷ್ಠಿರ ನಿಬೋಧ ತತ್।।

ಇವುಗಳನ್ನೇ ನೀತಿಕೋವಿದ ಆಚಾರ್ಯರು ಮಂಡಲವೆಂದು ಕರೆಯುತ್ತಾರೆ. ಯುಧಿಷ್ಠಿರ! ಅದಕ್ಕೆ ಸಂಬಂಧಿಸಿದ ಆರು ಗುಣಗಳ ಕುರಿತು ಕೇಳು.

15011006a ವೃದ್ಧಿಕ್ಷಯೌ ಚ ವಿಜ್ಞೇಯೌ ಸ್ಥಾನಂ ಚ ಕುರುನಂದನ।
15011006c ದ್ವಿಸಪ್ತತ್ಯಾ ಮಹಾಬಾಹೋ ತತಃ ಷಾಡ್ಗುಣ್ಯಚಾರಿಣಃ।।

ಕುರುನಂದನ! ಮಹಾಬಾಹೋ! ತನ್ನ ಮತ್ತು ತನ್ನ ಶತ್ರು ಈ ಇಬ್ಬರ ವೃದ್ಧಿ-ಕ್ಷಯಗಳನ್ನೂ ಸ್ಥಾನವನ್ನೂ ಅರಿತುಕೊಂಡಿರಬೇಕು. ಅದು ಷಾಡ್ಗುಣ್ಯಚಾರಣೆ.

15011007a ಯದಾ ಸ್ವಪಕ್ಷೋ ಬಲವಾನ್ಪರಪಕ್ಷಸ್ತಥಾಬಲಃ।
15011007c ವಿಗೃಹ್ಯ ಶತ್ರೂನ್ಕೌಂತೇಯ ಯಾಯಾತ್ಕ್ಷಿತಿಪತಿಸ್ತದಾ।
15011007e ಯದಾ ಸ್ವಪಕ್ಷೋಽಬಲವಾಂಸ್ತದಾ ಸಂಧಿಂ ಸಮಾಶ್ರಯೇತ್।।

ಕೌಂತೇಯ! ಯಾವಾಗ ಸ್ವಪಕ್ಷವು ಬಲವಾಗಿಯೂ ಶತ್ರುಪಕ್ಷವು ದುರ್ಬಲವಾಗಿಯೂ ಇವುದೋ ಆಗ ಶತ್ರುವಿನೊಡನೆ ಯುದ್ಧಮಾಡಿ ಕ್ಷಿತಿಪತಿಯೆನಿಸಿಕೊಳ್ಳಬೇಕು. ಸ್ವಪಕ್ಷವು ಅಬಲವಾಗಿರುವಾಗ ಸಂಧಿಯನ್ನು ಆಶ್ರಯಿಸಬೇಕು.

15011008a ದ್ರವ್ಯಾಣಾಂ ಸಂಚಯಶ್ಚೈವ ಕರ್ತವ್ಯಃ ಸ್ಯಾನ್ಮಹಾಂಸ್ತಥಾ।
15011008c ಯದಾ ಸಮರ್ಥೋ ಯಾನಾಯ ನಚಿರೇಣೈವ ಭಾರತ।।

ಭಾರತ! ದ್ರವ್ಯಗಳನ್ನು ಕೂಡಿಸಿಕೊಳ್ಳುವುದು ಒಂದು ಮಹಾ ಕರ್ತವ್ಯ! ಯಾವಾಗ ಸಮರ್ಥನೋ ಆಗಲೇ ಸಮಯವ್ಯರ್ಥಮಾಡದೇ ಆಕ್ರಮಣ ಮಾಡಬೇಕು.

15011009a ತದಾ ಸರ್ವಂ ವಿಧೇಯಂ ಸ್ಯಾತ್ ಸ್ಥಾನಂ ಚ ನ ವಿಭಾಜಯೇತ್।
15011009c ಭೂಮಿರಲ್ಪಫಲಾ ದೇಯಾ ವಿಪರೀತಸ್ಯ ಭಾರತ।।
15011010a ಹಿರಣ್ಯಂ ಕುಪ್ಯಭೂಯಿಷ್ಠಂ ಮಿತ್ರಂ ಕ್ಷೀಣಮಕೋಶವತ್।
15011010c ವಿಪರೀತಾನ್ನ ಗೃಹ್ಣೀಯಾತ್ಸ್ವಯಂ ಸಂಧಿವಿಶಾರದಃ।।

ಆಗ ಎಲ್ಲರೂ ವಿಧೇಯರಾಗಿರುವಂತೆ ನೋಡಿಕೊಳ್ಳಬೇಕು. ಸೇನಾನಾಯಕರ ಸ್ಥಾನಗಳನ್ನು ವಿಭಾಗಿಸಬಾರದು. ಭಾರತ! ಒಂದುವೇಳೆ ಸೋತುಬಿಟ್ಟರೆ ಅಲ್ಪಫಲಗಳನ್ನು ಕೊಡುವ ಭೂಮಿಯನ್ನೂ, ಬೆರಕೆಯ ಚಿನ್ನವನ್ನೂ, ಮತ್ತು ಬಡವ ಮಿತ್ರನನ್ನೂ ಕೊಟ್ಟು ಸಂಧಿಮಾಡಿಕೊಳ್ಳಬೇಕು. ಸೋಲದೇ ತಾನಾಗಿಯೇ ಸಂಧಿಯನ್ನು ಮಾಡಿಕೊಳ್ಳಬಾರದು.

15011011a ಸಂಧ್ಯರ್ಥಂ ರಾಜಪುತ್ರಂ ಚ ಲಿಪ್ಸೇಥಾ ಭರತರ್ಷಭ।
15011011c ವಿಪರೀತಸ್ತು ತೇಽದೇಯಃ ಪುತ್ರ ಕಸ್ಯಾಂ ಚಿದಾಪದಿ।
15011011e ತಸ್ಯ ಪ್ರಮೋಕ್ಷೇ ಯತ್ನಂ ಚ ಕುರ್ಯಾಃ ಸೋಪಾಯಮಂತ್ರವಿತ್।।

ಭರತರ್ಷಭ! ಒಂದುವೇಳೆ ಶತ್ರುವಿಗೇ ವಿಪರೀತವಾಗಿ ಸಂಧಿಯನ್ನು ಬಯಸಿದರೆ ರಾಜಪುತ್ರನನ್ನೇ ಒತ್ತೆಇಡುವಂತೆ ಕೇಳಬೇಕು. ಒಂದುವೇಳೆ ಒಪ್ಪಿಕೊಳ್ಳದೇ ಇದ್ದರೆ ಉಪಾಯಮಂತ್ರಗಳನ್ನು ತಿಳಿದವನು ಅವನನ್ನು ಸೆರೆಹಿಡಿಯಲು ಪ್ರಯತ್ನಿಸಬೇಕು.

15011012a ಪ್ರಕೃತೀನಾಂ ಚ ಕೌಂತೇಯ ರಾಜಾ ದೀನಾಂ ವಿಭಾವಯೇತ್।
15011012c ಕ್ರಮೇಣ ಯುಗಪದ್ದ್ವಂದ್ವಂ ವ್ಯಸನಾನಾಂ ಬಲಾಬಲಮ್।।

ಕೌಂತೇಯ! ಆ ರಾಜನ ಪ್ರಕೃತಿ1ಗಳು ದುರ್ಬಲವಾಗಿವೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಅನಂತರ ಕ್ರಮೇಣವಾಗಿ ಅಥವಾ ಒಂದೇಸಮನೆ ಎಲ್ಲ ಕಾರ್ಯಗಳನ್ನೂ ಪ್ರಾರಂಭಿಸಬೇಕು.

15011013a ಪೀಡನಂ ಸ್ತಂಭನಂ ಚೈವ ಕೋಶಭಂಗಸ್ತಥೈವ ಚ।
15011013c ಕಾರ್ಯಂ ಯತ್ನೇನ ಶತ್ರೂಣಾಂ ಸ್ವರಾಷ್ಟ್ರಂ ರಕ್ಷತಾ ಸ್ವಯಮ್।।

ಪೀಡನ, ಸ್ತಂಭನ, ಕೋಶಭಂಗ ಮೊದಲಾದ ಪ್ರಯತ್ನಗಳನ್ನು ಮಾಡಿ ಶತ್ರುಗಳ ನಾಶವನ್ನೂ ತನ್ನ ರಾಷ್ಟ್ರದ ರಕ್ಷಣೆಯನ್ನೂ ಸ್ವಯಂ ಮಾಡಿಕೊಳ್ಳಬೇಕು.

15011014a ನ ಚ ಹಿಂಸ್ಯೋಽಭ್ಯುಪಗತಃ ಸಾಮಂತೋ ವೃದ್ಧಿಮಿಚ್ಚತಾ।
15011014c ಕೌಂತೇಯ ತಂ ನ ಹಿಂಸೇತ ಯೋ ಮಹೀಂ ವಿಜಿಗೀಷತೇ।।

ಕೌಂತೇಯ! ಆದರೆ ತನ್ನ ವೃದ್ಧಿಯನ್ನು ಬಯಸುವ ರಾಜನು ಶರಣಾಗತನಾಗಿ ಬಂದ ಸಾಮಂತರಾಜನನ್ನು ಯಾವುದೇ ಕಾರಣದಿಂದಲೂ ಹಿಂಸಿಸಬಾರದು. ವಿಶ್ವವನ್ನು ಜಯಿಸಲು ಬಯಸಿದ ರಾಜನು ಹಿಂಸಿಸಬಾರದು.

15011015a ಗಣಾನಾಂ ಭೇದನೇ ಯೋಗಂ ಗಚ್ಚೇಥಾಃ ಸಹ ಮಂತ್ರಿಭಿಃ।
15011015c ಸಾಧುಸಂಗ್ರಹಣಾಚ್ಚೈವ ಪಾಪನಿಗ್ರಹಣಾತ್ತಥಾ।।

ಮಂತ್ರಿಗಳೊಡನೆ ಸಮಾಲೋಚಿಸಿ ಶತ್ರುಗಣಗಳಲ್ಲಿ ಒಡಕನ್ನು ಉಂಟುಮಾಡಲು ಉಪಾಯಮಾಡಬೇಕು. ಸತ್ಪುರುಷರನ್ನು ಸಂಗ್ರಹಿಸಿಕೊಳ್ಳುತ್ತಲೇ ಇರಬೇಕು. ಪಾಪಿಷ್ಟರನ್ನು ನಿಗ್ರಹಿಸುತ್ತಲೇ ಇರಬೇಕು.

15011016a ದುರ್ಬಲಾಶ್ಚಾಪಿ ಸತತಂ ನಾವಷ್ಟಭ್ಯಾ ಬಲೀಯಸಾ।
15011016c ತಿಷ್ಠೇಥಾ ರಾಜಶಾರ್ದೂಲ ವೈತಸೀಂ ವೃತ್ತಿಮಾಸ್ಥಿತಃ।।
15011017a ಯದ್ಯೇವಮಭಿಯಾಯಾಚ್ಚ ದುರ್ಬಲಂ ಬಲವಾನ್ನೃಪಃ।
15011017c ಸಾಮಾದಿಭಿರುಪಾಯೈಸ್ತಂ ಕ್ರಮೇಣ ವಿನಿವರ್ತಯೇತ್।।

ರಾಜಶಾರ್ದೂಲ! ಬಲಿಷ್ಟರಾಜನು ದುರ್ಬಲರನ್ನು ಎಂದೂ ಬೆನ್ನಟ್ಟಿ ಹೋಗಬಾರದು. ಬಲಿಷ್ಟರಾಜನು ದುರ್ಬಲನನ್ನು ಆಕ್ರಮಿಸಿದರೆ ದುರ್ಬಲನು ವಿನಮ್ರಭಾವವನ್ನು ತೋರಿಸಬೇಕು. ಸಾಮ-ದಾನ ಮೊದಲಾದ ಉಪಾಯಗಳಿಂದ ಅವನನ್ನು ಕ್ರಮೇಣವಾಗಿ ಹಿಂದಿರುವಂತೆ ಮಾಡಬೇಕು.

15011018a ಅಶಕ್ನುವಂಸ್ತು ಯುದ್ಧಾಯ ನಿಷ್ಪತೇತ್ಸಹ ಮಂತ್ರಿಭಿಃ।
15011018c ಕೋಶೇನ ಪೌರೈರ್ದಂಡೇನ ಯೇ ಚಾನ್ಯೇ ಪ್ರಿಯಕಾರಿಣಃ।।

ಸಾಧ್ಯವಾಗದಿದ್ದರೆ ಮಂತ್ರಿಗಳು, ಕೋಶ, ಪೌರರು, ದಂಡ ಮತ್ತು ಅನ್ಯ ಪ್ರಿಯಕಾರಿಣಿಗಳು ಇವರೊಡನೆ ಸೇರಿಕೊಂಡು ಶತ್ರುವಿನೊಡನೆ ಯುದ್ಧಮಾಡಬೇಕು.

15011019a ಅಸಂಭವೇ ತು ಸರ್ವಸ್ಯ ಯಥಾಮುಖ್ಯೇನ ನಿಷ್ಪತೇತ್।
15011019c ಕ್ರಮೇಣಾನೇನ ಮೋಕ್ಷಃ ಸ್ಯಾಚ್ಚರೀರಮಪಿ ಕೇವಲಮ್।।

ಬಲಿಷ್ಟನಾದವನೊಡನೆ ಯುದ್ಧಮಾಡುವಾಗ ಪರಾಜಯವು ಸಂಭವಿಸಿದರೆ ಯುದ್ಧಮಾಡುತ್ತಾ ಶರೀರತ್ಯಾಗಮಾಡುವುದರಿಂದ ಮುಕ್ತಿಯಾದರೂ ಲಭಿಸುತ್ತದೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರೋಪದೇಶೇ ಏಕಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರೋಪದೇಶ ಎನ್ನುವ ಹನ್ನೊಂದನೇ ಅಧ್ಯಾಯವು.


  1. ಸ್ವಾಮಿ, ಅಮಾತ್ಯ, ಸುಹೃತ್, ಕೋಶ, ರಾಷ್ಟ್ರ, ದುರ್ಗ, ಸೈನ್ಯ ಮತ್ತು ಪೌರರು ರಾಜನ ಪ್ರಕೃತಿಗಳು. ↩︎