010: ಧೃತರಾಷ್ಟ್ರೋಪದೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 10

ಸಾರ

ಯುಧಿಷ್ಠಿರನಿಗೆ ಧೃತರಾಷ್ಟ್ರನ ಉಪದೇಶ (1-16).

15010001 ಧೃತರಾಷ್ಟ್ರ ಉವಾಚ।
15010001a ವ್ಯವಹಾರಾಶ್ಚ ತೇ ತಾತ ನಿತ್ಯಮಾಪ್ತೈರಧಿಷ್ಠಿತಾಃ।
15010001c ಯೋಜ್ಯಾಸ್ತುಷ್ಟೈರ್ಹಿತೈ ರಾಜನ್ನಿತ್ಯಂ ಚಾರೈರನುಷ್ಠಿತಾಃ।।

ಧೃತರಾಷ್ಟ್ರನು ಹೇಳಿದನು: “ವ್ಯವಹಾರಗಳನ್ನು ಯಾವಾಗಲೂ ಆಪ್ತರೂ, ಸಂತುಷ್ಟರೂ ಆದ ಹಿತೈಷಿಗಳಿಗೆ ವಹಿಸಿಕೊಡಬೇಕು ಮತ್ತು ಚಾರರ ಮೂಲಕ ಅವರ ವ್ಯವಹಾರಗಳನ್ನು ಪರಿಶೀಲಿಸುತ್ತಿರಬೇಕು.

15010002a ಪರಿಮಾಣಂ ವಿದಿತ್ವಾ ಚ ದಂಡಂ ದಂಡೇಷು ಭಾರತ।
15010002c ಪ್ರಣಯೇಯುರ್ಯಥಾನ್ಯಾಯಂ ಪುರುಷಾಸ್ತೇ ಯುಧಿಷ್ಠಿರ।।

ಭಾರತ! ಯುಧಿಷ್ಠಿರ! ನೀನು ನಿಯೋಜಿಸಿದ ಪುರುಷರು ಯಥಾನ್ಯಾಯವಾಗಿ ಅಪರಾಧದ ಪರಿಣಾಮವನ್ನು ಚೆನ್ನಾಗಿ ಪರಿಶೀಲಿಸಿ ದಂಡಾರ್ಹರಿಗೆ ಶಿಕ್ಷೆಯನ್ನು ವಿಧಿಸುವವರಾಗಿರಬೇಕು.

15010003a ಆದಾನರುಚಯಶ್ಚೈವ ಪರದಾರಾಭಿಮರ್ಶಕಾಃ।
15010003c ಉಗ್ರದಂಡಪ್ರಧಾನಾಶ್ಚ ಮಿಥ್ಯಾ ವ್ಯಾಹಾರಿಣಸ್ತಥಾ।।
15010004a ಆಕ್ರೋಷ್ಟಾರಶ್ಚ ಲುಬ್ಧಾಶ್ಚ ಹಂತಾರಃ ಸಾಹಸಪ್ರಿಯಾಃ।
15010004c ಸಭಾವಿಹಾರಭೇತ್ತಾರೋ ವರ್ಣಾನಾಂ ಚ ಪ್ರದೂಷಕಾಃ।
15010004e ಹಿರಣ್ಯದಂಡಾ ವಧ್ಯಾಶ್ಚ ಕರ್ತವ್ಯಾ ದೇಶಕಾಲತಃ।।

ಯಾವ ಅಧಿಕಾರಿಗಳು ಲಂಚವನ್ನು ತೆಗೆದುಕೊಳ್ಳುವುದರಲ್ಲಿ ಅಭಿರುಚಿಯುಳ್ಳವರೋ, ಪರಸ್ತ್ರೀಯರೊಡನೆ ಸಂಪರ್ಕವನ್ನಿಟ್ಟುಕೊಂಡಿರುವರೋ, ಉಗ್ರಶಿಕ್ಷೆಯನ್ನು ಕೊಡುವ ಸ್ವಭಾವವುಳ್ಳವರೋ, ಸುಳ್ಳುತೀರ್ಪನ್ನು ಕೊಡುವರೋ, ಸಾಹಸಕಾರ್ಯಗಳಲ್ಲಿ ಅಭಿರುಚಿಯುಳ್ಳವರೋ, ಸಭಾಮಂದಿರಗಳನ್ನೂ ವಿಹಾರಸ್ಥಾನಗಳನ್ನೂ ನಾಶಗೊಳಿಸುವರೋ, ವರ್ಣಾಶ್ರಮ ಧರ್ಮಗಳನ್ನು ದೂಷಿಸುವರೋ ಅಂಥವರನ್ನು ದೇಶ-ಕಾಲಗಳನ್ನನುಸರಿಸಿ ಸುವರ್ಣದಂಡದ ಅಥವಾ ಪ್ರಾಣದಂಡದ ಮೂಲಕ ಶಿಕ್ಷಿಸಬೇಕು.

15010005a ಪ್ರಾತರೇವ ಹಿ ಪಶ್ಯೇಥಾ ಯೇ ಕುರ್ಯುರ್ವ್ಯಯಕರ್ಮ ತೇ।
15010005c ಅಲಂಕಾರಮಥೋ ಭೋಜ್ಯಮತ ಊರ್ಧ್ವಂ ಸಮಾಚರೇಃ।।

ಬೆಳಿಗ್ಗೆಯೇ ಮೊದಲು ಆದಾಯ-ವೆಚ್ಚಗಳ ಅಧಿಕಾರಿಗಳನ್ನು ನೋಡಬೇಕು. ಅದರ ನಂತರವೇ ಅಲಂಕಾರ ಮತ್ತು ಭೋಜನಗಳ ಕುರಿತು ಗಮನಕೊಡಬೇಕು.

15010006a ಪಶ್ಯೇಥಾಶ್ಚ ತತೋ ಯೋಧಾನ್ಸದಾ ತ್ವಂ ಪರಿಹರ್ಷಯನ್।
15010006c ದೂತಾನಾಂ ಚ ಚರಾಣಾಂ ಚ ಪ್ರದೋಷಸ್ತೇ ಸದಾ ಭವೇತ್।।

ಅನಂತರ ಯೋಧರನ್ನು ಕಾಣಬೇಕು. ಅವರನ್ನು ನೀನು ಸದಾ ಹರ್ಷಗೊಳಿಸುತ್ತಲೇ ಇರಬೇಕು. ದೂತರನ್ನು ಮತ್ತು ಚಾರರನ್ನು ಸದಾ ಸಾಯಂಕಾಲದ ಸಮಯದಲ್ಲಿ ಕಾಣಬೇಕು.

15010007a ಸದಾ ಚಾಪರರಾತ್ರಂ ತೇ ಭವೇತ್ಕಾರ್ಯಾರ್ಥನಿರ್ಣಯೇ।
15010007c ಮಧ್ಯರಾತ್ರೇ ವಿಹಾರಸ್ತೇ ಮಧ್ಯಾಹ್ನೇ ಚ ಸದಾ ಭವೇತ್।।

ರಾತ್ರಿಯ ಕಡೆಯ ಭಾಗದಲ್ಲಿ ಅಥವಾ ಬೆಳಗಿನ ಜಾವದಲ್ಲಿ ಮರುದಿನದ ಕಾರ್ಯಕ್ರಮಗಳನ್ನು ನಿಶ್ಚಯಿಸಬೇಕು. ಮಧ್ಯರಾತ್ರಿಯಲ್ಲಿ ಅಥವಾ ಮಧ್ಯಾಹ್ನದಲ್ಲಿ ವಿಹರಿಸಬೇಕು.

15010008a ಸರ್ವೇ ತ್ವಾತ್ಯಯಿಕಾಃ ಕಾಲಾಃ ಕಾರ್ಯಾಣಾಂ ಭರತರ್ಷಭ।
15010008c ತಥೈವಾಲಂಕೃತಃ ಕಾಲೇ ತಿಷ್ಠೇಥಾ ಭೂರಿದಕ್ಷಿಣಃ।
15010008e ಚಕ್ರವತ್ಕರ್ಮಣಾಂ ತಾತ ಪರ್ಯಾಯೋ ಹ್ಯೇಷ ನಿತ್ಯಶಃ।।

ಭರತರ್ಷಭ! ಕಾರ್ಯಮಾಡಲು ಎಲ್ಲ ಸಮಯಗಳೂ ಉಪಯುಕ್ತವಾಗಿಯೇ ಇರುತ್ತವೆ. ಆದುದರಿಂದ ಆಯಾಯಾ ಕಾಲಗಳಲ್ಲಿ ಅಲಂಕೃತನಾಗಿ ಕಾರ್ಯಗೈಯಲು ಸಿದ್ಧನಾಗಿರಬೇಕು. ಚಕ್ರದೋಪಾದಿಯಲ್ಲಿ ಕಾರ್ಯಗಳು ಒಂದಾದ ಮೇಲೆ ಒಂದರಂತೆ ನಿರಂತರವಾಗಿ ನಡೆಯುತ್ತಲೇ ಇರಬೇಕು.

15010009a ಕೋಶಸ್ಯ ಸಂಚಯೇ ಯತ್ನಂ ಕುರ್ವೀಥಾ ನ್ಯಾಯತಃ ಸದಾ।
15010009c ದ್ವಿವಿಧಸ್ಯ ಮಹಾರಾಜ ವಿಪರೀತಂ ವಿವರ್ಜಯೇಃ।।

ಮಹಾರಾಜ! ಸದಾ ನ್ಯಾಯಸಮ್ಮತವಾಗಿ ಕೋಶವನ್ನು ತುಂಬಿಸುವ ಪ್ರಯತ್ನಮಾಡುತ್ತಿರಬೇಕು. ಆದರೆ ದ್ವಿವಿಧಾ ಭಾವವನ್ನೂ ವಿಪರೀತ ಭಾವವನ್ನೂ ಪರಿತ್ಯಜಿಸಬೇಕು.

15010010a ಚಾರೈರ್ವಿದಿತ್ವಾ ಶತ್ರೂಂಶ್ಚ ಯೇ ತೇ ರಾಜ್ಯಾಂತರಾಯಿಣಃ।
15010010c ತಾನಾಪ್ತೈಃ ಪುರುಷೈರ್ದೂರಾದ್ಘಾತಯೇಥಾಃ ಪರಸ್ಪರಮ್।।

ರಾಜರ ನಡುವೆ ಪರಸ್ಪರ ಭೇದವನ್ನುಂಟುಮಾಡುವವರು ಯಾರೆನ್ನುವುದನ್ನು ಗೂಢಚಾರರಿಂದ ತಿಳಿದು ಅಂಥವರನ್ನು ಆಪ್ತಪುರುಷರ ಮೂಲಕ ದೂರದಿಂದಲೇ ನಿಗ್ರಹಿಸಬೇಕು.

15010011a ಕರ್ಮದೃಷ್ಟ್ಯಾಥ ಭೃತ್ಯಾಂಸ್ತ್ವಂ ವರಯೇಥಾಃ ಕುರೂದ್ವಹ।
15010011c ಕಾರಯೇಥಾಶ್ಚ ಕರ್ಮಾಣಿ ಯುಕ್ತಾಯುಕ್ತೈರಧಿಷ್ಠಿತೈಃ।।

ಕುರೂದ್ವಹ! ಸೇವಕರ ಕೆಲಸಗಳನ್ನು ಮೊದಲು ನೋಡಿ ನಂತರ ಅವರನ್ನು ನೀನು ಆರಿಸಿಕೊಳ್ಳಬೇಕು. ಒಮ್ಮೆ ಅವರನ್ನು ಸೇವಕರನ್ನಾಗಿ ನಿಯಮಿಸಿಕೊಂಡ ನಂತರ ಅವರು ಯೋಗ್ಯರಾಗಿರಲಿ ಅಯೋಗ್ಯರಾಗಿರಲಿ ಅವರಿಂದ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು.

15010012a ಸೇನಾಪ್ರಣೇತಾ ಚ ಭವೇತ್ತವ ತಾತ ದೃಢವ್ರತಃ।
15010012c ಶೂರಃ ಕ್ಲೇಶಸಹಶ್ಚೈವ ಪ್ರಿಯಶ್ಚ ತವ ಮಾನವಃ।।

ಮಗೂ! ನಿನ್ನ ಸೇನಾಪತಿಯು ದೃಢವ್ರತನಾಗಿರಬೇಕು, ಶೂರನಾಗಿರಬೇಕು, ಕ್ಲೇಶಗಳನ್ನು ಸಹಿಸಿಕೊಳ್ಳುವವನಾಗಿರಬೇಕು ಮತ್ತು ನಿನಗೆ ಪ್ರಿಯನಾದವನೂ ಆಗಿರಬೇಕು.

15010013a ಸರ್ವೇ ಜಾನಪದಾಶ್ಚೈವ ತವ ಕರ್ಮಾಣಿ ಪಾಂಡವ।
15010013c ಪೌರೋಗವಾಶ್ಚ ಸಭ್ಯಾಶ್ಚ ಕುರ್ಯುರ್ಯೇ ವ್ಯವಹಾರಿಣಃ।।

ಪಾಂಡವ! ಗ್ರಾಮೀಣ, ನಗರದ ಮತ್ತು ಸಭೆಗಳಿಗೆ ಸಂಬಂಧಿಸಿದ ನಿನ್ನ ಕರ್ಮಗಳೆಲ್ಲವನ್ನೂ ವ್ಯವಹಾರಿಗಳಿಂದ ಮಾಡಿಸಬೇಕು.

15010014a ಸ್ವರಂಧ್ರಂ ಪರರಂಧ್ರಂ ಚ ಸ್ವೇಷು ಚೈವ ಪರೇಷು ಚ।
15010014c ಉಪಲಕ್ಷಯಿತವ್ಯಂ ತೇ ನಿತ್ಯಮೇವ ಯುಧಿಷ್ಠಿರ।।

ಯುಧಿಷ್ಠಿರ! ನಿತ್ಯವೂ ನೀನು ನಿನ್ನಲ್ಲಿರುವ ದೋಷಗಳನ್ನು ಮತ್ತು ಶತ್ರುಗಳಲ್ಲಿರುವ ದೋಷಗಳನ್ನು ನಿನ್ನವರಿಂದ ಮತ್ತು ಶತ್ರುಗಳಿಂದ ತಿಳಿದುಕೊಳ್ಳುತ್ತಾ ಇರಬೇಕು.

15010015a ದೇಶಾಂತರಸ್ಥಾಶ್ಚ ನರಾ ವಿಕ್ರಾಂತಾಃ ಸರ್ವಕರ್ಮಸು।
15010015c ಮಾತ್ರಾಭಿರನುರೂಪಾಭಿರನುಗ್ರಾಹ್ಯಾ ಹಿತಾಸ್ತ್ವಯಾ।।

ನಿನ್ನ ದೇಶದ ತಮ್ಮ ತಮ್ಮ ಕರ್ಮಗಳಲ್ಲಿ ಕುಶಲರಾಗಿರುವ, ನಿನಗೆ ಹಿತರಾಗಿರುವ ಪುರುಷರನ್ನು ಅವರಿಗೆ ಅನುರೂಪ ಜೀವಿಕೆಗಳನ್ನು ಕಲ್ಪಿಸಿಕೊಟ್ಟು ಅನುಗ್ರಹಿಸಬೇಕು.

15010016a ಗುಣಾರ್ಥಿನಾಂ ಗುಣಃ ಕಾರ್ಯೋ ವಿದುಷಾಂ ತೇ ಜನಾಧಿಪ।
15010016c ಅವಿಚಾಲ್ಯಾಶ್ಚ ತೇ ತೇ ಸ್ಯುರ್ಯಥಾ ಮೇರುರ್ಮಹಾಗಿರಿಃ।।

ಜನಾಧಿಪ! ಗುಣಾರ್ಥಿ ವಿದುಷರಿಗೆ ಗುಣಯುಕ್ತ ಕಾರ್ಯಗಳನ್ನು ವಹಿಸಿಕೊಡಬೇಕು. ಅವರು ಯಾವಾಗಲೂ ಮೇರು ಮಹಾಗಿರಿಯಂತೆ ನಿಶ್ಚಲರಾಗಿರುತ್ತಾರೆ.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರೋಪದೇಶೇ ದಶಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರೋಪದೇಶ ಎನ್ನುವ ಹತ್ತನೇ ಅಧ್ಯಾಯವು.