009: ಧೃತರಾಷ್ಟ್ರೋಪದೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 9

ಸಾರ

ಧೃತರಾಷ್ಟ್ರ-ಗಾಂಧಾರಿಯರು ಊಟ ಮಾಡಿದುದು (1-6). ಧೃತರಾಷ್ಟ್ರನು ಯುಧಿಷ್ಠಿರನಿಗೆ ರಾಜ್ಯ ಸುರಕ್ಷಣೆಯ ಕುರಿತು ಉಪದೇಶಿಸಿದುದು (7-26).

15009001 ವೈಶಂಪಾಯನ ಉವಾಚ।
15009001a ತತೋ ರಾಜ್ಞಾಭ್ಯನುಜ್ಞಾತೋ ಧೃತರಾಷ್ಟ್ರಃ ಪ್ರತಾಪವಾನ್।
15009001c ಯಯೌ ಸ್ವಭವನಂ ರಾಜಾ ಗಾಂಧಾರ್ಯಾನುಗತಸ್ತದಾ।।

ವೈಶಂಪಾಯನನು ಹೇಳಿದನು: “ಅನಂತರ ರಾಜ ಯುಧಿಷ್ಠಿರನಿಂದ ಅನುಜ್ಞೆ ಪಡೆದ ಪ್ರತಾಪವಾನ್ ರಾಜಾ ಧೃತರಾಷ್ಟ್ರನು ಸ್ವಭವನಕ್ಕೆ ತೆರಳಿದನು. ಗಾಂಧಾರಿಯೂ ಅವನನ್ನು ಹಿಂಬಾಲಿಸಿದಳು.

15009002a ಮಂದಪ್ರಾಣಗತಿರ್ಧೀಮಾನ್ ಕೃಚ್ಚ್ರಾದಿವ ಸಮುದ್ಧರನ್।
15009002c ಪದಾತಿಃ ಸ ಮಹೀಪಾಲೋ ಜೀರ್ಣೋ ಗಜಪತಿರ್ಯಥಾ।।

ಬಹಳವಾಗಿ ಶಕ್ತಿಗುಂದಿದ್ದ ಧೀಮಾನ್ ಮಹೀಪಾಲನು ಮುದಿ ಸಲಗದಂತೆ ಕಷ್ಟಪಟ್ಟು ಹೆಜ್ಜೆಯಿಡುತ್ತಿದ್ದನು.

15009003a ತಮನ್ವಗಚ್ಚದ್ವಿದುರೋ ವಿದ್ವಾನ್ಸೂತಶ್ಚ ಸಂಜಯಃ।
15009003c ಸ ಚಾಪಿ ಪರಮೇಷ್ವಾಸಃ ಕೃಪಃ ಶಾರದ್ವತಸ್ತಥಾ।।

ವಿದ್ವಾನ್ ವಿದುರ, ಸೂತ ಸಂಜಯ, ಮತ್ತು ಹಾಗೆಯೇ ಪರಮೇಷ್ವಾಸ ಕೃಪ ಶಾರದ್ವತರು ಅವನನ್ನು ಹಿಂಬಾಲಿಸಿ ಹೋದರು.

15009004a ಸ ಪ್ರವಿಶ್ಯ ಗೃಹಂ ರಾಜಾ ಕೃತಪೂರ್ವಾಹ್ಣಿಕಕ್ರಿಯಃ।
15009004c ತರ್ಪಯಿತ್ವಾ ದ್ವಿಜಶ್ರೇಷ್ಠಾನಾಹಾರಮಕರೋತ್ತದಾ।।

ಮನೆಯನ್ನು ಸೇರಿ ರಾಜನು ಪೂರ್ವಾಹ್ಣಿಕ ಕ್ರಿಯೆಗಳನ್ನು ಪೂರೈಸಿ ದ್ವಿಜಶ್ರೇಷ್ಠರನ್ನು ತೃಪ್ತಿಗೊಳಿಸಿ, ಭೋಜನ ಮಾಡಿದನು.

15009005a ಗಾಂಧಾರೀ ಚೈವ ಧರ್ಮಜ್ಞಾ ಕುಂತ್ಯಾ ಸಹ ಮನಸ್ವಿನೀ।
15009005c ವಧೂಭಿರುಪಚಾರೇಣ ಪೂಜಿತಾಭುಂಕ್ತ ಭಾರತ।।

ಭಾರತ! ಮನಸ್ವಿನೀ ಧರ್ಮಜ್ಞೆ ಗಾಂಧಾರಿಯೂ ಕೂಡ ಕುಂತಿಯೊಡನೆ ಸೊಸೆಯಂದಿರಿಂದ ಉಪಚರಿಸಿ ಪೂಜಿಸಲ್ಪಟ್ಟು ಭೋಜನ ಮಾಡಿದಳು.

15009006a ಕೃತಾಹಾರಂ ಕೃತಾಹಾರಾಃ ಸರ್ವೇ ತೇ ವಿದುರಾದಯಃ।
15009006c ಪಾಂಡವಾಶ್ಚ ಕುರುಶ್ರೇಷ್ಠಮುಪಾತಿಷ್ಠಂತ ತಂ ನೃಪಮ್।।

ಧೃತರಾಷ್ಟ್ರನು ಊಟಮಾಡಿದ ನಂತರ ವಿದುರಾದಿಗಳು ಮತ್ತು ಪಾಂಡವರೂ ಕೂಡ ಊಟಮಾಡಿ ಕುರುಶ್ರೇಷ್ಠ ನೃಪನ ಬಳಿಯಲ್ಲಿ ಕುಳಿತುಕೊಂಡರು.

15009007a ತತೋಽಬ್ರವೀನ್ಮಹಾರಾಜ ಕುಂತೀಪುತ್ರಮುಪಹ್ವರೇ।
15009007c ನಿಷಣ್ಣಂ ಪಾಣಿನಾ ಪೃಷ್ಠೇ ಸಂಸ್ಪೃಶನ್ನಂಬಿಕಾಸುತಃ।।

ಆಗ ಮಹಾರಾಜ ಅಂಬಿಕಾಸುತನು ಸಮೀಪದಲ್ಲಿಯೇ ಕುಳಿತಿದ್ದ ಕುಂತೀಪುತ್ರ ಯುಧಿಷ್ಠಿರನ ಬೆನ್ನನ್ನು ಕೈಯಿಂದ ಸವರುತ್ತಾ ಹೇಳಿದನು:

15009008a ಅಪ್ರಮಾದಸ್ತ್ವಯಾ ಕಾರ್ಯಃ ಸರ್ವಥಾ ಕುರುನಂದನ।
15009008c ಅಷ್ಟಾಂಗೇ ರಾಜಶಾರ್ದೂಲ ರಾಜ್ಯೇ ಧರ್ಮಪುರಸ್ಕೃತೇ।।

“ಕುರುನಂದನ! ರಾಜಶಾರ್ದೂಲ! ಅಷ್ಟಾಂಗಯುಕ್ತವಾದ1 ಮತ್ತು ಧರ್ಮಪುರಸ್ಕೃತವಾದ ರಾಜ್ಯದಲ್ಲಿ ನೀನೂ ಯಾವಾಗಲೂ ಜಾಗರೂಕನಾಗಿರಬೇಕು.

15009009a ತತ್ತು ಶಕ್ಯಂ ಯಥಾ ತಾತ ರಕ್ಷಿತುಂ ಪಾಂಡುನಂದನ।
15009009c ರಾಜ್ಯಂ ಧರ್ಮಂ ಚ ಕೌಂತೇಯ ವಿದ್ವಾನಸಿ ನಿಬೋಧ ತತ್।।

ಮಗೂ ಪಾಂಡುನಂದನ! ಕೌಂತೇಯ! ನೀನು ರಾಜ್ಯಧರ್ಮವನ್ನು ತಿಳಿದಿರುವೆ. ಆದರೂ ರಾಜ್ಯವನ್ನು ಹೇಗೆ ರಕ್ಷಿಸಲು ಶಕ್ಯ ಎನ್ನುವುದನ್ನು ಕೇಳು.

15009010a ವಿದ್ಯಾವೃದ್ಧಾನ್ಸದೈವ ತ್ವಮುಪಾಸೀಥಾ ಯುಧಿಷ್ಠಿರ।
15009010c ಶೃಣುಯಾಸ್ತೇ ಚ ಯದ್ಬ್ರೂಯುಃ ಕುರ್ಯಾಶ್ಚೈವಾವಿಚಾರಯನ್।।

ವಿದ್ಯೆಯಿಂದ ವೃದ್ಧರಾದವರನ್ನು ನೀನು ಸದಾ ಉಪಾಸಿಸುತ್ತಿರಬೇಕು. ಅವರು ಹೇಳುವುದನ್ನು ಕೇಳಬೇಕು ಮತ್ತು ವಿಚಾರಮಾಡದೇ ಅವರು ಹೇಳಿದಂತೆ ಮಾಡಬೇಕು.

15009011a ಪ್ರಾತರುತ್ಥಾಯ ತಾನ್ರಾಜನ್ಪೂಜಯಿತ್ವಾ ಯಥಾವಿಧಿ।
15009011c ಕೃತ್ಯಕಾಲೇ ಸಮುತ್ಪನ್ನೇ ಪೃಚ್ಚೇಥಾಃ ಕಾರ್ಯಮಾತ್ಮನಃ।।

ರಾಜನ್! ಪ್ರಾತಃಕಾಲದಲ್ಲಿ ಎದ್ದು, ಯಥಾವಿಧಿಯಾಗಿ ಅವರನ್ನು ಪೂಜಿಸಿ, ರಾಜಕಾರ್ಯದ ಸಮಯದಲ್ಲಿ ನಿನ್ನ ಕಾರ್ಯಗಳ ಕುರಿತು ಅವರನ್ನು ಪ್ರಶ್ನಿಸಬೇಕು.

15009012a ತೇ ತು ಸಂಮಾನಿತಾ ರಾಜಂಸ್ತ್ವಯಾ ರಾಜ್ಯಹಿತಾರ್ಥಿನಾ।
15009012c ಪ್ರವಕ್ಷ್ಯಂತಿ ಹಿತಂ ತಾತ ಸರ್ವಂ ಕೌರವನಂದನ।।

ರಾಜನ್! ಮಗೂ! ಕೌರವನಂದನ! ನಿನ್ನಿಂದ ಸಮ್ಮಾನಿತರಾದ ಆ ರಾಜ್ಯಹಿತಾರ್ಥಿಗಳು ನಿನಗೆ ಹಿತವಾದವುಗಳನ್ನೇ ಹೇಳುತ್ತಾರೆ.

15009013a ಇಂದ್ರಿಯಾಣಿ ಚ ಸರ್ವಾಣಿ ವಾಜಿವತ್ಪರಿಪಾಲಯ।
15009013c ಹಿತಾಯ ವೈ ಭವಿಷ್ಯಂತಿ ರಕ್ಷಿತಂ ದ್ರವಿಣಂ ಯಥಾ।।

ಸಾರಥಿಯು ಕುದುರೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಇಂದ್ರಿಯಗಳೆಲ್ಲವನ್ನೂ ಹತೋಟಿಯಲ್ಲಿಕೊಂಡು ರಕ್ಷಿಸು. ರಕ್ಷಿಸಲ್ಪಟ್ಟ ಸಂಪತ್ತಿನಂತೆ ಭವಿಷ್ಯದಲ್ಲಿ ಇಂದ್ರಿಯಗಳೂ ನಿನ್ನ ಹಿತಕ್ಕಾಗಿಯೇ ಬರುತ್ತವೆ.

15009014a ಅಮಾತ್ಯಾನುಪಧಾತೀತಾನ್ಪಿತೃಪೈತಾಮಹಾನ್ಶುಚೀನ್।
15009014c ದಾಂತಾನ್ಕರ್ಮಸು ಸರ್ವೇಷು ಮುಖ್ಯಾನ್ಮುಖ್ಯೇಷು ಯೋಜಯೇಃ।।

ಎಲ್ಲ ಮುಖ್ಯ ಕರ್ಮಗಳಲ್ಲಿ ವಂಚನೆಯಿಲ್ಲದೇ ಕೆಲಸಮಾಡುವ, ಪಿತೃ-ಪಿತಾಮಹರ ಕಾಲದಿಂದ ವಂಶಪಾರಂಪರ್ಯವಾಗಿ ಕೆಲಸಮಾಡಿಕೊಂಡು ಬಂದಿರುವ, ಶುದ್ಧಾಂತಃಕರಣರಾದ, ಜಿತೇಂದ್ರಿಯರಾದ ಮುಖ್ಯರನ್ನು ತೊಡಗಿಸಿಕೋ!

15009015a ಚಾರಯೇಥಾಶ್ಚ ಸತತಂ ಚಾರೈರವಿದಿತೈಃ ಪರಾನ್।
15009015c ಪರೀಕ್ಷಿತೈರ್ಬಹುವಿಧಂ ಸ್ವರಾಷ್ಟ್ರೇಷು ಪರೇಷು ಚ।।

ಬಹುವಿಧವಾಗಿ ಪರೀಕ್ಷಿಸಲ್ಪಟ್ಟ ಚಾರರಿಂದ ಸತತವೂ ನಿನ್ನ ಮತ್ತು ಪರರ ರಾಷ್ಟ್ರಗಳಲ್ಲಿ ನಡೆಯುವ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಾ ಇರು. ಆದರೆ ನಿನ್ನ ವಿಷಯಗಳು ಮಾತ್ರ ಶತ್ರುಗಳಿಗೆ ತಿಳಿಯಬಾರದು.

15009016a ಪುರಂ ಚ ತೇ ಸುಗುಪ್ತಂ ಸ್ಯಾದ್ದೃಢಪ್ರಾಕಾರತೋರಣಮ್।
15009016c ಅಟ್ಟಾಟ್ಟಾಲಕಸಂಬಾಧಂ ಷಟ್ಪಥಂ ಸರ್ವತೋದಿಶಮ್।।

ನಿನ್ನ ನಗರವು ಸುರಕ್ಷಿತವಾಗಿರಬೇಕು. ಪ್ರಾಕಾರಗಳೂ ಮುಖ್ಯದ್ವಾರಗಳೂ ಸುದೃಢವಾಗಿರಬೇಕು. ಆರು ವಿಧದ ದುರ್ಗಗಳು ಎಲ್ಲ ದಿಕ್ಕುಗಳಲ್ಲಿಯೂ ಇರಬೇಕು.

15009017a ತಸ್ಯ ದ್ವಾರಾಣಿ ಕಾರ್ಯಾಣಿ ಪರ್ಯಾಪ್ತಾನಿ ಬೃಹಂತಿ ಚ।
15009017c ಸರ್ವತಃ ಸುವಿಭಕ್ತಾನಿ ಯಂತ್ರೈರಾರಕ್ಷಿತಾನಿ ಚ।।

ನಗರದ ದ್ವಾರಗಳು ಸಾಕಷ್ಟು ವಿಶಾಲವಾಗಿಯೂ ದೊಡ್ಡದಾಗಿಯೂ ಇರಬೇಕು. ಅವುಗಳನ್ನು ಎಲ್ಲಕಡೆಗಳಲ್ಲಿ ಸರಿಯಾಗಿ ಅಳೆದು ಕಟ್ಟಿರಬೇಕು ಮತ್ತು ಅವುಗಳ ರಕ್ಷಣೆಗಳಿಗೆ ಯಂತ್ರಗಳನ್ನಿರಿಸಿರಬೇಕು.

15009018a ಪುರುಷೈರಲಮರ್ಥಜ್ಞೈರ್ವಿದಿತೈಃ ಕುಲಶೀಲತಃ।
15009018c ಆತ್ಮಾ ಚ ರಕ್ಷ್ಯಃ ಸತತಂ ಭೋಜನಾದಿಷು ಭಾರತ।।
15009019a ವಿಹಾರಾಹಾರಕಾಲೇಷು ಮಾಲ್ಯಶಯ್ಯಾಸನೇಷು ಚ।

ಭಾರತ! ಭೋಜನಾದಿಗಳ, ವಿಹಾರ-ಆಹಾರಗಳ, ಮಾಲೆಗಳನ್ನು ಧರಿಸುವ ಮತ್ತು ಮಲಗುವ ಸಮಯಗಳಲ್ಲಿ ಸತತವೂ ಕುಲಶೀಲಗಳುಳ್ಳ, ಅರ್ಥಜ್ಞರಾದ, ತಿಳಿದುಕೊಂಡಿರುವ ಪುರುಷರನ್ನು ನಿನ್ನ ರಕ್ಷಣೆಗೆ ಇರಿಸಿಕೊಂಡಿರಬೇಕು.

15009019c ಸ್ತ್ರಿಯಶ್ಚ ತೇ ಸುಗುಪ್ತಾಃ ಸ್ಯುರ್ವೃದ್ಧೈರಾಪ್ತೈರಧಿಷ್ಠಿತಾಃ।
15009019e ಶೀಲವದ್ಭಿಃ ಕುಲೀನೈಶ್ಚ ವಿದ್ವದ್ಭಿಶ್ಚ ಯುಧಿಷ್ಠಿರ।।

ಯುಧಿಷ್ಠಿರ! ಕುಲೀನರ, ಶೀಲವಂತರ, ವಿದ್ವಾಂಸರ, ವಿಶ್ವಾಸಪಾತ್ರರ ಮತ್ತು ವೃದ್ಧರ ಮೇಲ್ವಿಚಾರಣೆಯಲ್ಲಿ ಅಂತಃಪುರದ ಸ್ತ್ರೀಯರನ್ನು ಎಚ್ಚರದಿಂದ ರಕ್ಷಿಸಬೇಕು.

15009020a ಮಂತ್ರಿಣಶ್ಚೈವ ಕುರ್ವೀಥಾ ದ್ವಿಜಾನ್ವಿದ್ಯಾವಿಶಾರದಾನ್।
15009020c ವಿನೀತಾಂಶ್ಚ ಕುಲೀನಾಂಶ್ಚ ಧರ್ಮಾರ್ಥಕುಶಲಾನೃಜೂನ್।।

ವಿದ್ಯಾವಿಶಾರದರೂ, ವಿನೀತರೂ, ಕುಲೀನರೂ, ಧರ್ಮಾರ್ಥಕುಶಲರೂ, ಸತ್ಯವಂತರೂ ಆದ ದ್ವಿಜರನ್ನು ಮಂತ್ರಿಗಳನ್ನಾಗಿ ಮಾಡಿಕೊಳ್ಳಬೇಕು.

15009021a ತೈಃ ಸಾರ್ಧಂ ಮಂತ್ರಯೇಥಾಸ್ತ್ವಂ ನಾತ್ಯರ್ಥಂ ಬಹುಭಿಃ ಸಹ।
15009021c ಸಮಸ್ತೈರಪಿ ಚ ವ್ಯಸ್ತೈರ್ವ್ಯಪದೇಶೇನ ಕೇನ ಚಿತ್।।
15009022a ಸುಸಂವೃತಂ ಮಂತ್ರಗೃಹಂ ಸ್ಥಲಂ ಚಾರುಹ್ಯ ಮಂತ್ರಯೇಃ।
15009022c ಅರಣ್ಯೇ ನಿಃಶಲಾಕೇ ವಾ ನ ಚ ರಾತ್ರೌ ಕಥಂ ಚನ।।

ಅವರೊಂದಿಗೆ ಮಂತ್ರಾಲೋಚನೆಯನ್ನು ಮಾಡಬೇಕು. ಆದರೆ ಅನೇಕರೊಂದಿಗೆ ಮತ್ತು ಬಹಳ ಹೊತ್ತಿನವರೆಗೆ ಮಂತ್ರಾಲೋಚನೆ ಮಾಡಕೂಡದು. ಎಲ್ಲ ಕಡೆ ಆವರಣವಿರುವ ಮಂತ್ರಗೃಹದಲ್ಲಿಯಾಗಲೀ ಅಥವಾ ಬಯಲಿನಲ್ಲಿಯಾಗಲೀ ಮಂತ್ರಾಲೋಚನೆಮಾಡಬೇಕು. ಹುಲ್ಲು-ಮುಳ್ಳುಗಳಿಲ್ಲದ ಅರಣ್ಯದಲ್ಲಿ ಕೂಡ ಮಂತ್ರಾಲೋಚನೆ ಮಾಡಬಹುದು. ಆದರ ಅಲ್ಲಿ ರಾತ್ರಿ ವೇಳೆ ಮಂತ್ರಾಲೋಚನೆಮಾಡಬಾರದು.

15009023a ವಾನರಾಃ ಪಕ್ಷಿಣಶ್ಚೈವ ಯೇ ಮನುಷ್ಯಾನುಕಾರಿಣಃ।
15009023c ಸರ್ವೇ ಮಂತ್ರಗೃಹೇ ವರ್ಜ್ಯಾ ಯೇ ಚಾಪಿ ಜಡಪಂಗುಕಾಃ।।

ಮನುಷ್ಯರೊಂದಿಗೆ ಕಪಿಗಳನ್ನಾಗಲೀ, ಪಕ್ಷಿಗಳನ್ನಾಗಲೀ, ಮೂರ್ಖರನ್ನಾಗಲೀ, ಮತ್ತು ಹೆಳವರನ್ನಾಗಲೀ ಮಂತ್ರಾಲೋಚನಾ ಸ್ಥಳಕ್ಕೆ ಕರೆತರಬಾರದು.

15009024a ಮಂತ್ರಭೇದೇ ಹಿ ಯೇ ದೋಷಾ ಭವಂತಿ ಪೃಥಿವೀಕ್ಷಿತಾಮ್।
15009024c ನ ತೇ ಶಕ್ಯಾಃ ಸಮಾಧಾತುಂ ಕಥಂ ಚಿದಿತಿ ಮೇ ಮತಿಃ।।

ಒಂದುವೇಳೆ ರಾಜನ ಗುಪ್ತವಿಷಯಗಳು ಇತರರಿಗೆ ತಿಳಿಯಿತೆಂದಾದರೆ ಉಂಟಾಗುವ ದೋಷಗಳನ್ನು ಸರಿಪಡಿಸಲು ಸಾಧ್ಯವೇ ಇಲ್ಲವೆಂದು ನನಗನ್ನಿಸುತ್ತದೆ.

15009025a ದೋಷಾಂಶ್ಚ ಮಂತ್ರಭೇದೇಷು ಬ್ರೂಯಾಸ್ತ್ವಂ ಮಂತ್ರಿಮಂಡಲೇ।
15009025c ಅಭೇದೇ ಚ ಗುಣಾನ್ರಾಜನ್ಪುನಃ ಪುನರರಿಂದಮ।।

ರಾಜನ್! ಅರಿಂದಮ! ಆದುದರಿಂದ ಮಂತ್ರಭೇದದಿಂದ ಆಗುವ ಅನರ್ಥಗಳನ್ನೂ ಮಂತ್ರಗೋಪನದಿಂದ ಆಗುವ ಲಾಭಗಳನ್ನೂ ಪುನಃ ಪುನಃ ವಿಚಾರಿಸುತ್ತಿರಬೇಕು.

15009026a ಪೌರಜಾನಪದಾನಾಂ ಚ ಶೌಚಾಶೌಚಂ ಯುಧಿಷ್ಠಿರ।
15009026c ಯಥಾ ಸ್ಯಾದ್ವಿದಿತಂ ರಾಜಂಸ್ತಥಾ ಕಾರ್ಯಮರಿಂದಮ।।

ಯುಧಿಷ್ಠಿರ! ಅರಿಂದಮ! ರಾಜನ್! ಪೌರ ಮತ್ತು ಗ್ರಾಮೀಣ ಜನರ ಒಳ್ಳೆಯ ಮತ್ತು ಕೆಟ್ಟ ಭಾವನೆಗಳ್ಯಾವುವು ಎಂದು ತಿಳಿದು ಕಾರ್ಯಗಳನ್ನು ಕೈಗೊಳ್ಳಬೇಕು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರೋಪದೇಶೇ ನವಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರೋಪದೇಶ ಎನ್ನುವ ಒಂಭತ್ತನೇ ಅಧ್ಯಾಯವು.


  1. ಅರಸು, ಮಂತ್ರಿ, ಸ್ನೇಹಿತ, ಬೊಕ್ಕಸ, ನಾಡು, ದುರ್ಗ, ಸೇನೆ ಮತ್ತು ಪ್ರಜೆಗಳು ರಾಜ್ಯದ ಅಷ್ಟಾಂಗಗಳು. ↩︎