ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಆಶ್ರಮವಾಸ ಪರ್ವ
ಅಧ್ಯಾಯ 8
ಸಾರ
ವನಕ್ಕೆ ಹೋಗಲು ಧೃತರಾಷ್ಟ್ರನಿಗೆ ಅನುಮತಿಯನ್ನು ನೀಡು ಎಂದು ವ್ಯಾಸನು ಯುಧಿಷ್ಠಿರನಿಗೆ ಹೇಳಿದುದು (1-18). ಯುಧಿಷ್ಠಿರನು ಧೃತರಾಷ್ಟ್ರನಿಗೆ ವನಕ್ಕೆ ಹೋಗಲು ಅನುಮತಿಯನ್ನಿತ್ತಿದುದು (19-22).
15008001 ವ್ಯಾಸ ಉವಾಚ।
15008001a ಯುಧಿಷ್ಠಿರ ಮಹಾಬಾಹೋ ಯದಾಹ ಕುರುನಂದನಃ।
15008001c ಧೃತರಾಷ್ಟ್ರೋ ಮಹಾತ್ಮಾ ತ್ವಾಂ ತತ್ಕುರುಷ್ವಾವಿಚಾರಯನ್।।
ವ್ಯಾಸನು ಹೇಳಿದನು: “ಮಹಾಬಾಹೋ ಯುಧಿಷ್ಠಿರ! ಕುರುನಂದನ ಮಹಾತ್ಮ ಧೃತರಾಷ್ಟ್ರನು ನಿನಗೆ ಏನು ಹೇಳಿದನೋ ಅದನ್ನು ವಿಚಾರಿಸದೇ ಮಾಡು!
15008002a ಅಯಂ ಹಿ ವೃದ್ಧೋ ನೃಪತಿರ್ಹತಪುತ್ರೋ ವಿಶೇಷತಃ।
15008002c ನೇದಂ ಕೃಚ್ಚ್ರಂ ಚಿರತರಂ ಸಹೇದಿತಿ ಮತಿರ್ಮಮ।।
ಪುತ್ರರನ್ನು ಕಳೆದುಕೊಂಡ ಮತ್ತು ವಿಶೇಷವಾಗಿ ವೃದ್ಧನಾಗಿರುವ ಈ ನೃಪತಿಯು ಇನ್ನೂ ಬಹಳ ಕಾಲ ಈ ಕಷ್ಟವನ್ನು ಸಹಿಸಿಕೊಳ್ಳಲಾರ ಎಂದು ನನಗನ್ನಿಸುತ್ತದೆ.
15008003a ಗಾಂಧಾರೀ ಚ ಮಹಾಭಾಗಾ ಪ್ರಾಜ್ಞಾ ಕರುಣವೇದಿನೀ।
15008003c ಪುತ್ರಶೋಕಂ ಮಹಾರಾಜ ಧೈರ್ಯೇಣೋದ್ವಹತೇ ಭೃಶಮ್।।
ಮಹಾರಾಜ! ಕಾರುಣ್ಯವನ್ನು ತಿಳಿದಿರುವ ಮಹಾಭಾಗೆ ಪ್ರಾಜ್ಞೆ ಗಾಂಧಾರಿಯೂ ಕೂಡ ಪುತ್ರಶೋಕವನ್ನು ಅತ್ಯಂತ ಧೈರ್ಯದಿಂದ ಸಹಿಸಿಕೊಂಡಿದ್ದಾಳೆ.
15008004a ಅಹಮಪ್ಯೇತದೇವ ತ್ವಾಂ ಬ್ರವೀಮಿ ಕುರು ಮೇ ವಚಃ।
15008004c ಅನುಜ್ಞಾಂ ಲಭತಾಂ ರಾಜಾ ಮಾ ವೃಥೇಹ ಮರಿಷ್ಯತಿ।।
ನಾನೂ ಕೂಡ ನಿನಗೆ ಇದನ್ನೇ ಹೇಳುತ್ತಿದ್ದೇನೆ. ನನ್ನ ಮಾತಿನಂತೆ ಮಾಡು. ರಾಜನು ವೃಥಾ ಇಲ್ಲಿ ಸಾಯದಂತೆ ಅವನಿಗೆ ಅನುಜ್ಞೆಯನ್ನು ನೀಡು!
15008005a ರಾಜರ್ಷೀಣಾಂ ಪುರಾಣಾನಾಮನುಯಾತು ಗತಿಂ ನೃಪಃ।
15008005c ರಾಜರ್ಷೀಣಾಂ ಹಿ ಸರ್ವೇಷಾಮಂತೇ ವನಮುಪಾಶ್ರಯಃ।।
ಹಿಂದಿನ ರಾಜರ್ಷಿಗಳ ಗತಿಯಂತೆ ಈ ನೃಪನೂ ಕೂಡ ಹೋಗಲಿ! ಎಲ್ಲ ರಾಜರ್ಷಿಗಳಿಗೂ ಅಂತ್ಯದಲ್ಲಿ ವನವೇ ಆಶ್ರಯವು!””
15008006 ವೈಶಂಪಾಯನ ಉವಾಚ।
15008006a ಇತ್ಯುಕ್ತಃ ಸ ತದಾ ರಾಜಾ ವ್ಯಾಸೇನಾದ್ಭುತಕರ್ಮಣಾ।
15008006c ಪ್ರತ್ಯುವಾಚ ಮಹಾತೇಜಾ ಧರ್ಮರಾಜೋ ಯುಧಿಷ್ಠಿರಃ।।
ವೈಶಂಪಾಯನನು ಹೇಳಿದನು: “ಅದ್ಭುತಕರ್ಮಿ ವ್ಯಾಸನು ಹೀಗೆ ಹೇಳಲು ರಾಜಾ ಮಹಾತೇಜಸ್ವಿ ಧರ್ಮರಾಜ ಯುಧಿಷ್ಠಿರನು ಅದಕ್ಕೆ ಪ್ರತಿಯಾಗಿ ಇಂತೆಂದನು:
15008007a ಭಗವಾನೇವ ನೋ ಮಾನ್ಯೋ ಭಗವಾನೇವ ನೋ ಗುರುಃ।
15008007c ಭಗವಾನಸ್ಯ ರಾಜ್ಯಸ್ಯ ಕುಲಸ್ಯ ಚ ಪರಾಯಣಮ್।।
“ನೀನೇ ನಮಗೆ ಮಾನ್ಯನು. ನೀನೇ ನಮ್ಮ ಗುರು. ನೀನೇ ಈ ರಾಜ್ಯದ ಮತ್ತು ಕುಲದ ಪರಾಯಣನು.
15008008a ಅಹಂ ತು ಪುತ್ರೋ ಭಗವಾನ್ಪಿತಾ ರಾಜಾ ಗುರುಶ್ಚ ಮೇ।
15008008c ನಿದೇಶವರ್ತೀ ಚ ಪಿತುಃ ಪುತ್ರೋ ಭವತಿ ಧರ್ಮತಃ।।
ಭಗವಾನ್! ನಾನಾದರೋ ರಾಜನ ಮಗ. ಅವನು ನನ್ನ ಗುರು. ಧರ್ಮದ ಪ್ರಕಾರ ಪುತ್ರನು ತಂದೆಯ ನಿರ್ದೇಶನದಂತೆ ನಡೆಯಬೇಕಾಗುತ್ತದೆ.”
15008009a ಇತ್ಯುಕ್ತಃ ಸ ತು ತಂ ಪ್ರಾಹ ವ್ಯಾಸೋ ಧರ್ಮಭೃತಾಂ ವರಃ।
15008009c ಯುಧಿಷ್ಠಿರಂ ಮಹಾತೇಜಾಃ ಪುನರೇವ ವಿಶಾಂ ಪತೇ।।
ವಿಶಾಂಪತೇ! ಹೀಗೆ ಹೇಳಿದ ಯುಧಿಷ್ಠಿರನಿಗೆ ಧರ್ಮಭೃತರಲ್ಲಿ ಶ್ರೇಷ್ಠ ಮಹಾತೇಜಸ್ವೀ ವ್ಯಾಸನು ಪುನಃ ಹೇಳಿದನು:
15008010a ಏವಮೇತನ್ಮಹಾಬಾಹೋ ಯಥಾ ವದಸಿ ಭಾರತ।
15008010c ರಾಜಾಯಂ ವೃದ್ಧತಾಂ ಪ್ರಾಪ್ತಃ ಪ್ರಮಾಣೇ ಪರಮೇ ಸ್ಥಿತಃ।।
“ಮಹಾಬಾಹೋ! ಭಾರತ! ನೀನು ಹೇಳಿದುದು ಸರಿಯಾದುದೇ. ಆದರೆ ಈ ರಾಜನು ವೃದ್ಧಾಪ್ಯವನ್ನು ಹೊಂದಿದ್ದಾನೆ. ಅಂತಿಮಾವಸ್ಥೆಯಲ್ಲಿದ್ದಾನೆ.
15008011a ಸೋಽಯಂ ಮಯಾಭ್ಯನುಜ್ಞಾತಸ್ತ್ವಯಾ ಚ ಪೃಥಿವೀಪತೇ।
15008011c ಕರೋತು ಸ್ವಮಭಿಪ್ರಾಯಂ ಮಾಸ್ಯ ವಿಘ್ನಕರೋ ಭವ।।
ಪೃಥಿವೀಪತೇ! ಇವನು ನನ್ನಿಂದ ಮತ್ತು ನಿನ್ನಿಂದ ಅನುಮತಿಯನ್ನು ಪಡೆದು ಅವನ ಇಷ್ಟದಂತೆಯೇ ಮಾಡಲಿ. ಅವನಿಗೆ ವಿಘ್ನವನ್ನುಂಟುಮಾಡಬೇಡ!
15008012a ಏಷ ಏವ ಪರೋ ಧರ್ಮೋ ರಾಜರ್ಷೀಣಾಂ ಯುಧಿಷ್ಠಿರ।
15008012c ಸಮರೇ ವಾ ಭವೇನ್ಮೃತ್ಯುರ್ವನೇ ವಾ ವಿಧಿಪೂರ್ವಕಮ್।।
ಯುಧಿಷ್ಠಿರ! ಸಮರದಲ್ಲಿ ಅಥವಾ ವಿಧಿಪೂರ್ವಕವಾಗಿ ವನದಲ್ಲಿ ಮೃತ್ಯುವನ್ನು ಹೊಂದುವುದೇ ರಾಜರ್ಷಿಗಳ ಪರಮ ಧರ್ಮ.
15008013a ಪಿತ್ರಾ ತು ತವ ರಾಜೇಂದ್ರ ಪಾಂಡುನಾ ಪೃಥಿವೀಕ್ಷಿತಾ।
15008013c ಶಿಷ್ಯಭೂತೇನ ರಾಜಾಯಂ ಗುರುವತ್ಪರ್ಯುಪಾಸಿತಃ।।
ರಾಜೇಂದ್ರ! ನಿನ್ನ ತಂದೆ ಪಾಂಡುವೂ ಕೂಡ ಈ ರಾಜನನ್ನು ಗುರುವಂತೆ ಶಿಷ್ಯಭಾವದಿಂದ ಸೇವೆಗೈಯುತ್ತಿದ್ದನು.
15008014a ಕ್ರತುಭಿರ್ದಕ್ಷಿಣಾವದ್ಭಿರನ್ನಪರ್ವತಶೋಭಿತೈಃ।
15008014c ಮಹದ್ಭಿರಿಷ್ಟಂ ಭೋಗಾಶ್ಚ ಭುಕ್ತಾಃ ಪುತ್ರಾಶ್ಚ ಪಾಲಿತಾಃ।।
ಅನ್ನದ ರಾಶಿಗಳಿಂದ ಶೋಭಿತವಾದ ದಕ್ಷಿಣಾಯುಕ್ತ ಕ್ರತುಗಳನ್ನು ಮಾಡಿ, ಇಷ್ಟವಾದ ಮಹಾಭೋಗಗಳನ್ನು ಭೋಗಿಸಿ ಪುತ್ರರನ್ನು ಪಾಲಿಸಿದನು.
15008015a ಪುತ್ರಸಂಸ್ಥಂ ಚ ವಿಪುಲಂ ರಾಜ್ಯಂ ವಿಪ್ರೋಷಿತೇ ತ್ವಯಿ।
15008015c ತ್ರಯೋದಶಸಮಾ ಭುಕ್ತಂ ದತ್ತಂ ಚ ವಿವಿಧಂ ವಸು।।
ನೀನು ವನವಾಸಕ್ಕೆ ತೆರಳಿದ್ದಾಗ ಹದಿಮೂರು ವರ್ಷಗಳು ಇವನು ತನ್ನ ಮಗನಲ್ಲಿದ್ದ ವಿಪುಲ ರಾಜ್ಯವನ್ನು ಭೋಗಿಸಿದನು ಮತ್ತು ವಿವಿಧ ಸಂಪತ್ತುಗಳನ್ನು ದಾನವನ್ನಾಗಿತ್ತನು.
15008016a ತ್ವಯಾ ಚಾಯಂ ನರವ್ಯಾಘ್ರ ಗುರುಶುಶ್ರೂಷಯಾ ನೃಪಃ।
15008016c ಆರಾಧಿತಃ ಸಭೃತ್ಯೇನ ಗಾಂಧಾರೀ ಚ ಯಶಸ್ವಿನೀ।।
ನೃಪ! ನರವ್ಯಾಘ್ರ! ನಿನ್ನ ಗುರುಶುಶ್ರೂಷೆಯಿಂದ ಮತ್ತು ತನ್ನ ಸೇವಕರಿಂದ ಇವನು ಮತ್ತು ಯಶಸ್ವಿನೀ ಗಾಂಧಾರಿಯರು ಅರಾಧಿತರಾಗಿದ್ದಾರೆ.
15008017a ಅನುಜಾನೀಹಿ ಪಿತರಂ ಸಮಯೋಽಸ್ಯ ತಪೋವಿಧೌ।
15008017c ನ ಮನ್ಯುರ್ವಿದ್ಯತೇ ಚಾಸ್ಯ ಸುಸೂಕ್ಷ್ಮೋಽಪಿ ಯುಧಿಷ್ಠಿರ।।
ಯುಧಿಷ್ಠಿರ! ಇದು ಇವನ ತಪಸ್ಸಿಗೆ ಸರಿಯಾದ ಕಾಲವಾಗಿದೆ. ನಿನ್ನ ತಂದೆಗೆ ಅನುಮತಿಯನ್ನು ನೀಡು. ಇವನಿಗೆ ನಿನ್ನಮೇಲೆ ಸ್ವಲ್ಪವೂ ಕೋಪವಿಲ್ಲ.”
15008018a ಏತಾವದುಕ್ತ್ವಾ ವಚನಮನುಜ್ಞಾಪ್ಯ ಚ ಪಾರ್ಥಿವಮ್।
15008018c ತಥಾಸ್ತ್ವಿತಿ ಚ ತೇನೋಕ್ತಃ ಕೌಂತೇಯೇನ ಯಯೌ ವನಮ್।।
ಹೀಗೆ ಹೇಳಿ ಪಾರ್ಥಿವ ಯುಧಿಷ್ಠಿರನನ್ನು ಒಪ್ಪಿಸಿದನು. ಕೌಂತೇಯನು ಹಾಗೆಯೇ ಆಗಲೆಂದು ಹೇಳಲು ವ್ಯಾಸನು ವನಕ್ಕೆ ಹೊರಟುಹೋದನು.
15008019a ಗತೇ ಭಗವತಿ ವ್ಯಾಸೇ ರಾಜಾ ಪಾಂಡುಸುತಸ್ತತಃ।
15008019c ಪ್ರೋವಾಚ ಪಿತರಂ ವೃದ್ಧಂ ಮಂದಂ ಮಂದಮಿವಾನತಃ।।
ಭಗವಾನ್ ವ್ಯಾಸನು ಹೊರಟುಹೋದ ನಂತರ ರಾಜ ಪಾಂಡುಸುತನು ವೃದ್ಧನಾದ ತನ್ನ ತಂದೆಗೆ ತಲೆಬಾಗಿಸಿ ಮೆಲ್ಲ ಮೆಲ್ಲನೆ ಇಂತೆಂದನು:
15008020a ಯದಾಹ ಭಗವಾನ್ವ್ಯಾಸೋ ಯಚ್ಚಾಪಿ ಭವತೋ ಮತಮ್।
15008020c ಯದಾಹ ಚ ಮಹೇಷ್ವಾಸಃ ಕೃಪೋ ವಿದುರ ಏವ ಚ।।
15008021a ಯುಯುತ್ಸುಃ ಸಂಜಯಶ್ಚೈವ ತತ್ಕರ್ತಾಸ್ಮ್ಯಹಮಂಜಸಾ।
15008021c ಸರ್ವೇ ಹ್ಯೇತೇಽನುಮಾನ್ಯಾ ಮೇ ಕುಲಸ್ಯಾಸ್ಯ ಹಿತೈಷಿಣಃ।।
“ಭಗವಾನ್ ವ್ಯಾಸನು ಏನು ಹೇಳಿದನೋ, ನಿನ್ನ ಅಭಿಪ್ರಾಯವೂ ಏನಿದೆಯೋ, ಮಹೇಷ್ವಾಸ ಕೃಪ ಮತ್ತು ವಿದುರರು, ಯುಯುತ್ಸು-ಸಂಜಯರು ಏನು ಹೇಳುತ್ತಾರೋ ಅದರಂತೆಯೇ ನಾನು ನಡೆದುಕೊಳ್ಳುತ್ತೇನೆ. ಏಕೆಂದರೆ ಇವರೆಲ್ಲರೂ ನನಗೆ ಮಾನ್ಯರು ಮತ್ತು ಈ ಕುಲದ ಹಿತೈಷಿಗಳೂ ಆಗಿದ್ದಾರೆ.
15008022a ಇದಂ ತು ಯಾಚೇ ನೃಪತೇ ತ್ವಾಮಹಂ ಶಿರಸಾ ನತಃ।
15008022c ಕ್ರಿಯತಾಂ ತಾವದಾಹಾರಸ್ತತೋ ಗಚ್ಚಾಶ್ರಮಂ ಪ್ರತಿ।।
ನೃಪತೇ! ಶಿರಸಾ ನಮಸ್ಕರಿಸಿ ನಿನ್ನಲ್ಲಿ ಇದೊಂದನ್ನು ಬೇಡಿಕೊಳ್ಳುತ್ತಿದ್ದೇನೆ. ನೀನು ಮೊದಲು ಊಟಮಾಡು. ಅನಂತರ ಆಶ್ರಮದ ಕಡೆ ಹೋಗುವಿಯಂತೆ!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ವ್ಯಾಸಾನುಜ್ಞಾಯಾಂ ಅಷ್ಟಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ವ್ಯಾಸಾನುಜ್ಞಾ ಎನ್ನುವ ಎಂಟನೇ ಅಧ್ಯಾಯವು.