007: ಧೃತರಾಷ್ಟ್ರನಿರ್ವೇದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 7

ಸಾರ

ಧೃತರಾಷ್ಟ್ರ-ಗಾಂಧಾರಿಯರನ್ನು ನೋಡಿದವರಲ್ಲಿ ಶೋಕ (1-10). ನಾಲ್ಕು ದಿನಗಳಿಂದ ಆಹಾರಸೇವಿಸದೇ ಇದ್ದ ಧೃತರಾಷ್ಟ್ರನಿಗೆ ಯುಧಿಷ್ಠಿರನು ಆಹಾರ ಸೇವಿಸುವಂತೆ ಹೇಳಿದುದು; ಅಲ್ಲಿಗೆ ವ್ಯಾಸನ ಆಗಮನ (11-19).

15007001 ಧೃತರಾಷ್ಟ್ರ ಉವಾಚ।
15007001a ಸ್ಪೃಶ ಮಾಂ ಪಾಣಿನಾ ಭೂಯಃ ಪರಿಷ್ವಜ ಚ ಪಾಂಡವ।
15007001c ಜೀವಾಮೀವ ಹಿ ಸಂಸ್ಪರ್ಶಾತ್ತವ ರಾಜೀವಲೋಚನ।।

ಧೃತರಾಷ್ಟ್ರನು ಹೇಳಿದನು: “ಪಾಂಡವ! ನಿನ್ನ ಕೈಗಳಿಂದ ಪುನಃ ನನ್ನನ್ನು ಮುಟ್ಟಿ ಸವರು! ಆಲಂಗಿಸು! ರಾಜೀವಲೋಚನ! ನಿನ್ನ ಸಂಸ್ಪರ್ಶದಿಂದ ನಾನು ಪುನಃ ಜೀವಂತನಾಗಿದ್ದೇನೆ!

15007002a ಮೂರ್ಧಾನಂ ಚ ತವಾಘ್ರಾತುಮಿಚ್ಚಾಮಿ ಮನುಜಾಧಿಪ।
15007002c ಪಾಣಿಭ್ಯಾಂ ಚ ಪರಿಸ್ಪ್ರಷ್ಟುಂ ಪ್ರಾಣಾ ಹಿ ನ ಜಹುರ್ಮಮ।।

ಮನುಜಾಧಿಪ! ನಿನ್ನ ನೆತ್ತಿಯನ್ನು ಆಘ್ರಾಣಿಸಲು ಬಯಸುತ್ತೇನೆ. ಕೈಗಳಿಂದ ನಿನ್ನನ್ನು ಮುಟ್ಟಲು ಬಯಸುತ್ತೇನೆ. ಅದರಿಂದ ನನ್ನ ಪ್ರಾಣವನ್ನೇ ಉಳಿಸಿಕೊಳ್ಳುತ್ತೇನೆ!

15007003a ಅಷ್ಟಮೋ ಹ್ಯದ್ಯ ಕಾಲೋಽಯಮಾಹಾರಸ್ಯ ಕೃತಸ್ಯ ಮೇ।
15007003c ಯೇನಾಹಂ ಕುರುಶಾರ್ದೂಲ ನ ಶಕ್ನೋಮಿ ವಿಚೇಷ್ಟಿತುಮ್।।

ಕುರುಶಾರ್ದೂಲ! ನಾನು ಆಹಾರವನ್ನು ಸೇವಿಸಿ ಇಂದಿಗೆ ನಾಲ್ಕು ದಿನಗಳಾದವು. ಇದರಿಂದಾಗಿ ಅಲುಗಾಡಲೂ ನನಗೆ ಸಾಧ್ಯವಾಗುತ್ತಿಲ್ಲ!

15007004a ವ್ಯಾಯಾಮಶ್ಚಾಯಮತ್ಯರ್ಥಂ ಕೃತಸ್ತ್ವಾಮಭಿಯಾಚತಾ।
15007004c ತತೋ ಗ್ಲಾನಮನಾಸ್ತಾತ ನಷ್ಟಸಂಜ್ಞ ಇವಾಭವಮ್।।

ನಿನ್ನ ಅಪ್ಪಣೆಯನ್ನು ಕೇಳಲೋಸುಗ ಇಷ್ಟೆಲ್ಲ ಮಾತನಾಡಿ ಆಯಾಸಗೊಂಡಿದ್ದೇನೆ. ಮಗೂ! ಮನಸ್ಸಿನ ದುಃಖದಿಂದ ಎಚ್ಚರತಪ್ಪಿದವನಂತಾದೆನು!

15007005a ತವಾಮೃತಸಮಸ್ಪರ್ಶಂ ಹಸ್ತಸ್ಪರ್ಶಮಿಮಂ ವಿಭೋ।
15007005c ಲಬ್ಧ್ವಾ ಸಂಜೀವಿತೋಽಸ್ಮೀತಿ ಮನ್ಯೇ ಕುರುಕುಲೋದ್ವಹ।।

ವಿಭೋ! ಕುರುಕುಲೋದ್ವಹ! ಅಮೃತಸ್ಪರ್ಶದಂತಿರುವ ನಿನ್ನ ಈ ಸ್ಪರ್ಶದಿಂದ ನಾನು ನೂತನ ಚೇತನವನ್ನು ಪಡೆದುಕೊಂಡೆನೆಂದು ಭಾವಿಸುತ್ತೇನೆ!””

15007006 ವೈಶಂಪಾಯನ ಉವಾಚ।
15007006a ಏವಮುಕ್ತಸ್ತು ಕೌಂತೇಯಃ ಪಿತ್ರಾ ಜ್ಯೇಷ್ಠೇನ ಭಾರತ।
15007006c ಪಸ್ಪರ್ಶ ಸರ್ವಗಾತ್ರೇಷು ಸೌಹಾರ್ದಾತ್ತಂ ಶನೈಸ್ತದಾ।।

ವೈಶಂಪಾಯನನು ಹೇಳಿದನು: “ಭಾರತ! ತನ್ನ ದೊಡ್ಡಪ್ಪನು ಹೀಗೆ ಹೇಳಲು ಕೌಂತೇಯನು ಸೌಹಾರ್ದತೆಯಿಂದ ಮೆಲ್ಲನೇ ಅವನ ಸರ್ವಾಂಗಗಳನ್ನೂ ಮುಟ್ಟಿ ಸವರಿದನು.

15007007a ಉಪಲಭ್ಯ ತತಃ ಪ್ರಾಣಾನ್ಧೃತರಾಷ್ಟ್ರೋ ಮಹೀಪತಿಃ।
15007007c ಬಾಹುಭ್ಯಾಂ ಸಂಪರಿಷ್ವಜ್ಯ ಮೂರ್ಧ್ನ್ಯಾಜಿಘ್ರತ ಪಾಂಡವಮ್।।

ಆಗ ಮಹೀಪತಿ ಧೃತರಾಷ್ಟ್ರನು ಪುನಃ ಪ್ರಾಣಗಳನ್ನೇ ಪಡೆದುಕೊಂಡು, ತನ್ನ ಬಾಹುಗಳೆರಡರಿಂದ ಪಾಂಡವನನ್ನು ಬಿಗಿದಪ್ಪಿ ನೆತ್ತಿಯನ್ನು ಆಘ್ರಾಣಿಸಿದನು.

15007008a ವಿದುರಾದಯಶ್ಚ ತೇ ಸರ್ವೇ ರುರುದುರ್ದುಃಖಿತಾ ಭೃಶಮ್।
15007008c ಅತಿದುಃಖಾಚ್ಚ ರಾಜಾನಂ ನೋಚುಃ ಕಿಂ ಚನ ಪಾಂಡವಾಃ।।

ವಿದುರಾದಿಗಳೆಲ್ಲರೂ ಅತ್ಯಂತ ದುಃಖಿತರಾಗಿ ರೋದಿಸಿದರು. ಅತಿದುಃಖದಿಂದ ಪಾಂಡವರೂ ಕೂಡ ರಾಜನಿಗೆ ಏನನ್ನೂ ಹೇಳಲಿಲ್ಲ.

15007009a ಗಾಂಧಾರೀ ತ್ವೇವ ಧರ್ಮಜ್ಞಾ ಮನಸೋದ್ವಹತೀ ಭೃಶಮ್।
15007009c ದುಃಖಾನ್ಯವಾರಯದ್ರಾಜನ್ಮೈವಮಿತ್ಯೇವ ಚಾಬ್ರವೀತ್।।

ರಾಜನ್! ಧರ್ಮಜ್ಞೆ ಗಾಂಧಾರಿಯು ಮನಸ್ಸಿನಲ್ಲಿ ಮಹಾ ದುಃಖವನ್ನೇ ಅನುಭವಿಸುತ್ತಿದ್ದರೂ ದುಃಖಿತರಾತ ಅನ್ಯರಿಗೆ “ಹೀಗೆ ಅಳಬೇಡಿರಿ!” ಎಂದಳು.

15007010a ಇತರಾಸ್ತು ಸ್ತ್ರಿಯಃ ಸರ್ವಾಃ ಕುಂತ್ಯಾ ಸಹ ಸುದುಃಖಿತಾಃ।
15007010c ನೇತ್ರೈರಾಗತವಿಕ್ಲೇದೈಃ ಪರಿವಾರ್ಯ ಸ್ಥಿತಾಭವನ್।।

ಅಂತಃಪುರದ ಇತರ ಸ್ತ್ರೀಯರೆಲ್ಲರೂ ಅತ್ಯಂತ ದುಃಖಿತರಾಗಿ ಕುಂತಿಯೊಡನೆ ಕಣ್ಣೀರಿಡುತ್ತಾ ಗಾಂಧಾರೀ-ಧೃತರಾಷ್ಟ್ರರನ್ನು ಸುತ್ತುವರೆದು ನಿಂತಿದ್ದರು.

15007011a ಅಥಾಬ್ರವೀತ್ಪುನರ್ವಾಕ್ಯಂ ಧೃತರಾಷ್ಟ್ರೋ ಯುಧಿಷ್ಠಿರಮ್।
15007011c ಅನುಜಾನೀಹಿ ಮಾಂ ರಾಜಂಸ್ತಾಪಸ್ಯೇ ಭರತರ್ಷಭ।।

ಆಗ ಪುನಃ ಧೃತರಾಷ್ಟ್ರನು ಯುಧಿಷ್ಠಿರನಿಗೆ ಹೇಳಿದನು: “ಭರತರ್ಷಭ! ರಾಜನ್! ನನಗೆ ತಪಸ್ಸನ್ನು ಮಾಡಲು ಅನುಮತಿಯನ್ನು ಕೊಡು!

15007012a ಗ್ಲಾಯತೇ ಮೇ ಮನಸ್ತಾತ ಭೂಯೋ ಭೂಯಃ ಪ್ರಜಲ್ಪತಃ।
15007012c ನ ಮಾಮತಃ ಪರಂ ಪುತ್ರ ಪರಿಕ್ಲೇಷ್ಟುಮಿಹಾರ್ಹಸಿ।।

ಮಗೂ! ಪುನಃ ಪುನಃ ಹೇಳಿದುದನ್ನೇ ಹೇಳಿ ನನ್ನ ಮನಸ್ಸು ದುರ್ಬಲವಾಗುತ್ತಿದೆ. ಪುತ್ರ! ಆದುದರಿಂದ ನನ್ನನ್ನು ಇನ್ನೂ ಹೆಚ್ಚು ದುಃಖಕ್ಕೀಡುಮಾಡುವುದು ಸರಿಯಲ್ಲ!”

15007013a ತಸ್ಮಿಂಸ್ತು ಕೌರವೇಂದ್ರೇ ತಂ ತಥಾ ಬ್ರುವತಿ ಪಾಂಡವಮ್।
15007013c ಸರ್ವೇಷಾಮವರೋಧಾನಾಮಾರ್ತನಾದೋ ಮಹಾನಭೂತ್।।

ಕೌರವೇಂದ್ರನು ಪಾಂಡವನಿಗೆ ಹಾಗೆ ಹೇಳುತ್ತಿರುವಾಗ ಅಲ್ಲಿದ್ದ ಯೋಧರಲ್ಲೆಲ್ಲಾ ಮಹಾ ಆರ್ತನಾದವುಂಟಾಯಿತು.

15007014a ದೃಷ್ಟ್ವಾ ಕೃಶಂ ವಿವರ್ಣಂ ಚ ರಾಜಾನಮತಥೋಚಿತಮ್।
15007014c ಉಪವಾಸಪರಿಶ್ರಾಂತಂ ತ್ವಗಸ್ಥಿಪರಿವಾರಿತಮ್।।
15007015a ಧರ್ಮಪುತ್ರಃ ಸ ಪಿತರಂ ಪರಿಷ್ವಜ್ಯ ಮಹಾಭುಜಃ।
15007015c ಶೋಕಜಂ ಬಾಷ್ಪಮುತ್ಸೃಜ್ಯ ಪುನರ್ವಚನಮಬ್ರವೀತ್।।

ಯಥೋಚಿತವಲ್ಲದೇ ಉಪವಾಸದಿಂದ ಬಳಲಿ ಚರ್ಮ-ಅಸ್ಥಿಮಾತ್ರ ಉಳಿದುಕೊಂಡು ಕೃಶನೂ ವಿವರ್ಣನೂ ಆಗಿರುವ ರಾಜ ಧೃತರಾಷ್ಟ್ರನನ್ನು ನೋಡಿ ಮಹಾಭುಜ ಧರ್ಮಪುತ್ರನು ತಂದೆಯನ್ನು ಆಲಂಗಿಸಿ, ಶೋಕದಿಂದ ಕಣ್ಣೀರನ್ನು ಸುರಿಸುತ್ತಾ ಪುನಃ ಈ ಮಾತನ್ನಾಡಿದನು:

15007016a ನ ಕಾಮಯೇ ನರಶ್ರೇಷ್ಠ ಜೀವಿತಂ ಪೃಥಿವೀಂ ತಥಾ।
15007016c ಯಥಾ ತವ ಪ್ರಿಯಂ ರಾಜಂಶ್ಚಿಕೀರ್ಷಾಮಿ ಪರಂತಪ।।

“ನರಶ್ರೇಷ್ಠ! ಪರಂತಪ! ರಾಜನ್! ನಿನಗೆ ಪ್ರಿಯವನ್ನುಂಟುಮಾಡಲು ಎಷ್ಟು ಬಯಸುತ್ತೇನೆಯೋ ಅಷ್ಟು ಈ ಜೀವಿತವನ್ನಾಗಲೀ ಪೃಥ್ವಿಯನ್ನಾಗಲೀ ಬಯಸುವುದಿಲ್ಲ!

15007017a ಯದಿ ತ್ವಹಮನುಗ್ರಾಹ್ಯೋ ಭವತೋ ದಯಿತೋಽಪಿ ವಾ।
15007017c ಕ್ರಿಯತಾಂ ತಾವದಾಹಾರಸ್ತತೋ ವೇತ್ಸ್ಯಾಮಹೇ ವಯಮ್।।

ನಾನು ನಿನ್ನ ಅನುಗ್ರಹಕ್ಕೆ ಯೋಗ್ಯನಾಗಿದ್ದರೆ ಮತ್ತು ನಿನ್ನ ಪ್ರೀತಿಗೆ ಪಾತ್ರನಾಗಿದ್ದರೆ ನೀನು ಅಹಾರಸೇವನೆಯನ್ನು ಮಾಡಬೇಕೆಂದು ನಾನು ನಿನಗೆ ಒತ್ತಾಯಿಸುತ್ತೇನೆ.”

15007018a ತತೋಽಬ್ರವೀನ್ಮಹಾತೇಜಾ ಧರ್ಮಪುತ್ರಂ ಸ ಪಾರ್ಥಿವಃ।
15007018c ಅನುಜ್ಞಾತಸ್ತ್ವಯಾ ಪುತ್ರ ಭುಂಜೀಯಾಮಿತಿ ಕಾಮಯೇ।।

ಹೀಗೆ ಹೇಳಲು ಪಾರ್ಥಿವನು ಮಹಾತೇಜಸ್ವಿ ಧರ್ಮಪುತ್ರನಿಗೆ “ಪುತ್ರ! ನೀನು ಬಯಸಿದರೆ ನಿನ್ನ ಅನುಜ್ಞೆಯಂತೆ ಊಟಮಾಡುತ್ತೇನೆ!” ಎಂದು ಹೇಳಿದನು.

15007019a ಇತಿ ಬ್ರುವತಿ ರಾಜೇಂದ್ರೇ ಧೃತರಾಷ್ಟ್ರೇ ಯುಧಿಷ್ಠಿರಮ್।
15007019c ಋಷಿಃ ಸತ್ಯವತೀಪುತ್ರೋ ವ್ಯಾಸೋಽಭ್ಯೇತ್ಯ ವಚೋಽಬ್ರವೀತ್।।

ರಾಜೇಂದ್ರ ಧೃತರಾಷ್ಟ್ರನು ಯುಧಿಷ್ಠಿರನಿಗೆ ಹೀಗೆ ಹೇಳುತ್ತಿರಲು ಸತ್ಯವತೀ ಪುತ್ರ ಋಷಿ ವ್ಯಾಸನು ಅಲ್ಲಿಗೆ ಆಗಮಿಸಿ ಈ ಮಾತನ್ನಾಡಿದನು.

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರನಿರ್ವೇದೇ ಸಪ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರನಿರ್ವೇದ ಎನ್ನುವ ಏಳನೇ ಅಧ್ಯಾಯವು.