006: ಧೃತರಾಷ್ಟ್ರನಿರ್ವೇದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 6

ಸಾರ

ದುಃಖಿತನಾದ ಯುಧಿಷ್ಠಿರನು ಧೃತರಾಷ್ಟ್ರನಿಗೆ ಸರ್ವವನ್ನೂ ಸಮರ್ಪಿಸಿ ತಾನೇ ವನಕ್ಕೆ ಹೋಗುವನೆಂದು ಹೇಳಿದುದು (1-15). ಮೂರ್ಛಿತನಾದ ಧೃತರಾಷ್ಟ್ರನನ್ನು ಯುಧಿಷ್ಠಿರನು ಮೈಸವರಿ ಎಚ್ಚರಿಸಿದುದು (16-28).

15006001 ಯುಧಿಷ್ಠಿರ ಉವಾಚ।
15006001a ನ ಮಾಂ ಪ್ರೀಣಯತೇ ರಾಜ್ಯಂ ತ್ವಯ್ಯೇವಂ ದುಃಖಿತೇ ನೃಪ।
15006001c ಧಿಗ್ಮಾಮಸ್ತು ಸುದುರ್ಬುದ್ಧಿಂ ರಾಜ್ಯಸಕ್ತಂ ಪ್ರಮಾದಿನಮ್।।

ಯುಧಿಷ್ಠಿರನು ಹೇಳಿದನು: “ನೃಪ! ನೀನು ಹೀಗೆ ದುಃಖದಿಂದಿರುವಾಗ ನನಗೆ ಈ ರಾಜ್ಯದಲ್ಲಿ ಯಾವ ಸಂತೋಷವೂ ಇಲ್ಲ. ಅತ್ಯಂತ ದುರ್ಬುದ್ಧಿಯಾದ, ರಾಜ್ಯಾಸಕ್ತಿಯಿಂದ ಪ್ರಮತ್ತನಾಗಿರುವ ನನಗೆ ಧಿಕ್ಕಾರ!

15006002a ಯೋಽಹಂ ಭವಂತಂ ದುಃಖಾರ್ತಮುಪವಾಸಕೃಶಂ ನೃಪ।
15006002c ಯತಾಹಾರಂ ಕ್ಷಿತಿಶಯಂ ನಾವಿಂದಂ ಭ್ರಾತೃಭಿಃ ಸಹ।।

ನೃಪ! ನೀನು ದುಃಖಾರ್ತನಾಗಿರುವುದಾಗಲೀ, ಉಪವಾಸದಿಂದ ಕೃಶನಾಗಿರುವುದಾಗಲೀ, ಅಲ್ಪಾಹಾರವನ್ನು ಸೇವಿಸಿ ನೆಲದ ಮೇಲೆ ಮಲಗಿಕೊಳ್ಳುತ್ತಿರುವುದಾಗಲೀ ಸಹೋದರರೊಂದಿಗೆ ನನಗೆ ತಿಳಿದೇ ಇರಲಿಲ್ಲ!

15006003a ಅಹೋಽಸ್ಮಿ ವಂಚಿತೋ ಮೂಢೋ ಭವತಾ ಗೂಢಬುದ್ಧಿನಾ।
15006003c ವಿಶ್ವಾಸಯಿತ್ವಾ ಪೂರ್ವಂ ಮಾಂ ಯದಿದಂ ದುಃಖಮಶ್ನುಥಾಃ।।

ಗೂಢಬುದ್ಧಿಯ ನಿನ್ನಿಂದ ಮೂಢನಾದ ನಾನು ವಂಚಿತನಾಗಿದ್ದೇನೆ. ಮೊದಲು ನನ್ನಲ್ಲಿ ವಿಶ್ವಾಸವನ್ನು ಹುಟ್ಟಿಸಿ ಇಂದು ನನಗೆ ಈ ದುಃಖವನ್ನು ನೀಡಿದ್ದೀಯೆ!

15006004a ಕಿಂ ಮೇ ರಾಜ್ಯೇನ ಭೋಗೈರ್ವಾ ಕಿಂ ಯಜ್ಞೈಃ ಕಿಂ ಸುಖೇನ ವಾ।
15006004c ಯಸ್ಯ ಮೇ ತ್ವಂ ಮಹೀಪಾಲ ದುಃಖಾನ್ಯೇತಾನ್ಯವಾಪ್ತವಾನ್।।

ಮಹೀಪಾಲ! ನೀನೇ ಈ ರೀತಿಯ ದುಃಖವನ್ನು ಅನುಭವಿಸುತ್ತಿರುವಾಗ ನನಗೆ ಈ ರಾಜ್ಯಭೋಗದಿಂದ ಅಥವಾ ಯಜ್ಞಗಳಿಂದ ಯಾವ ಸುಖವಿದೆ?

15006005a ಪೀಡಿತಂ ಚಾಪಿ ಜಾನಾಮಿ ರಾಜ್ಯಮಾತ್ಮಾನಮೇವ ಚ।
15006005c ಅನೇನ ವಚಸಾ ತುಭ್ಯಂ ದುಃಖಿತಸ್ಯ ಜನೇಶ್ವರ।।

ಜನೇಶ್ವರ! ದುಃಖಿತನಾಗಿರುವ ನಿನ್ನ ಈ ಮಾತಿನಿಂದ ನನ್ನ ರಾಜ್ಯವೇ ಪೀಡಿತವಾಗಿದೆಯೆಂದು ಭಾವಿಸುತ್ತೇನೆ.

15006006a ಭವಾನ್ಪಿತಾ ಭವಾನ್ಮಾತಾ ಭವಾನ್ನಃ ಪರಮೋ ಗುರುಃ।
15006006c ಭವತಾ ವಿಪ್ರಹೀಣಾ ಹಿ ಕ್ವ ನು ತಿಷ್ಠಾಮಹೇ ವಯಮ್।।

ನೀನೇ ನನ್ನ ಪಿತ. ನೀನೇ ನಮ್ಮ ಮಾತೆ ಮತ್ತು ಪರಮ ಗುರು. ನಿನ್ನನ್ನು ಅಗಲಿದ ನಾವು ಎಲ್ಲಿ ತಾನೇ ನಿಲ್ಲೋಣ?

15006007a ಔರಸೋ ಭವತಃ ಪುತ್ರೋ ಯುಯುತ್ಸುರ್ನೃಪಸತ್ತಮ।
15006007c ಅಸ್ತು ರಾಜಾ ಮಹಾರಾಜ ಯಂ ಚಾನ್ಯಂ ಮನ್ಯತೇ ಭವಾನ್।।

ನೃಪಸತ್ತಮ! ಮಹಾರಾಜ! ನಿನ್ನ ಔರಸ ಪುತ್ರ ಯುಯುತ್ಸುವಾಗಲೀ ಅಥವಾ ನೀನು ಅಭಿಪ್ರಾಯಪಟ್ಟ ಬೇರೆ ಯಾರಾದರೂ ರಾಜನಾಗಲಿ!

15006008a ಅಹಂ ವನಂ ಗಮಿಷ್ಯಾಮಿ ಭವಾನ್ರಾಜ್ಯಂ ಪ್ರಶಾಸ್ತ್ವಿದಮ್।
15006008c ನ ಮಾಮಯಶಸಾ ದಗ್ಧಂ ಭೂಯಸ್ತ್ವಂ ದಗ್ಧುಮರ್ಹಸಿ।।

ನಾನು ವನಕ್ಕೆ ಹೋಗುತ್ತೇನೆ. ಈ ರಾಜ್ಯವನ್ನು ನೀನೇ ಆಳು. ಅಯಶಸ್ಸಿನಿಂದ ಸುಟ್ಟುಹೋಗಿರುವ ನನ್ನನ್ನು ಇನ್ನೂ ಸುಡುವುದು ಸರಿಯಲ್ಲ!

15006009a ನಾಹಂ ರಾಜಾ ಭವಾನ್ರಾಜಾ ಭವತಾ ಪರವಾನಹಮ್।
15006009c ಕಥಂ ಗುರುಂ ತ್ವಾಂ ಧರ್ಮಜ್ಞಮನುಜ್ಞಾತುಮಿಹೋತ್ಸಹೇ।।

ನಾನು ರಾಜನಲ್ಲ! ನೀನೇ ರಾಜ! ನಾನು ನಿನ್ನ ಆಜ್ಞಾಧಾರಕನಾಗಿದ್ದೇನೆ. ಧರ್ಮಜ್ಞನೂ ಗುರುವೂ ಆದ ನಿನಗೆ ಕಾಡಿಗೆ ಹೋಗಲು ನಾನು ಹೇಗೆ ತಾನೇ ಅನುಮತಿನೀಡಲಿ?

15006010a ನ ಮನ್ಯುರ್ಹೃದಿ ನಃ ಕಶ್ಚಿದ್ದುರ್ಯೋಧನಕೃತೇಽನಘ।
15006010c ಭವಿತವ್ಯಂ ತಥಾ ತದ್ಧಿ ವಯಂ ತೇ ಚೈವ ಮೋಹಿತಾಃ।।

ಅನಘ! ದುರ್ಯೋಧನನ ಕೃತ್ಯಗಳಿಂದಾಗಿ ನಮ್ಮ ಹೃದಯದಲ್ಲಿ ಸ್ವಲ್ಪವೂ ಕೋಪವಿಲ್ಲ. ಅದು ಆಗಾಬೇಕಾದ್ದಿತು ಎಂದು ತಿಳಿದುಕೊಂಡಿದ್ದೇವೆ. ಆಗ ನಾವೂ ಕೂಡ ಮೋಹಿತರಾಗಿದ್ದೆವು.

15006011a ವಯಂ ಹಿ ಪುತ್ರಾ ಭವತೋ ಯಥಾ ದುರ್ಯೋಧನಾದಯಃ।
15006011c ಗಾಂಧಾರೀ ಚೈವ ಕುಂತೀ ಚ ನಿರ್ವಿಶೇಷೇ ಮತೇ ಮಮ।।

ದುರ್ಯೋಧನಾದಿಗಳು ಹೇಗೋ ಹಾಗೆ ನಾವೂ ಕೂಡ ನಿನ್ನ ಪುತ್ರರೇ ಆಗಿದ್ದೇವೆ. ಗಾಂಧಾರೀ ಮತ್ತು ಕುಂತಿಯರಲ್ಲಿ ಯಾವ ವ್ಯತ್ಯಾಸವೂ ಇಲ್ಲವೆಂದು ನನಗನ್ನಿಸುತ್ತಿದೆ.

15006012a ಸ ಮಾಂ ತ್ವಂ ಯದಿ ರಾಜೇಂದ್ರ ಪರಿತ್ಯಜ್ಯ ಗಮಿಷ್ಯಸಿ।
15006012c ಪೃಷ್ಠತಸ್ತ್ವಾನುಯಾಸ್ಯಾಮಿ ಸತ್ಯೇನಾತ್ಮಾನಮಾಲಭೇ।।

ರಾಜೇಂದ್ರ! ಒಂದು ವೇಳೆ ನೀನು ನನ್ನನ್ನು ಪರಿತ್ಯಜಿಸಿ ಹೋದರೆ ನಾನೂ ಕೂಡ ನಿನ್ನ ಹಿಂದೆಯೇ ಬರುವೆನು. ನನ್ನನ್ನು ಮುಟ್ಟಿಕೊಂಡು ಈ ಸತ್ಯವನ್ನಾಡುತ್ತಿದ್ದೇನೆ!

15006013a ಇಯಂ ಹಿ ವಸುಸಂಪೂರ್ಣಾ ಮಹೀ ಸಾಗರಮೇಖಲಾ।
15006013c ಭವತಾ ವಿಪ್ರಹೀಣಸ್ಯ ನ ಮೇ ಪ್ರೀತಿಕರೀ ಭವೇತ್।।

ನಿನ್ನನ್ನು ಅಗಲಿದ ನನಗೆ ಸಾಗರವನ್ನೇ ಮೇಖಲೆಯನ್ನಾಗಿ ಹೊಂದಿರುವ ಈ ಸಂಪದ್ಭರಿತ ಭೂಮಿಯೂ ನನಗೆ ಪ್ರೀತಿಯನ್ನುಂಟುಮಾಡಲಾರದು!

15006014a ಭವದೀಯಮಿದಂ ಸರ್ವಂ ಶಿರಸಾ ತ್ವಾಂ ಪ್ರಸಾದಯೇ।
15006014c ತ್ವದಧೀನಾಃ ಸ್ಮ ರಾಜೇಂದ್ರ ವ್ಯೇತು ತೇ ಮಾನಸೋ ಜ್ವರಃ।।

ರಾಜೇಂದ್ರ! ಶಿರಸಾ ನಿನಗೆ ವಂದಿಸಿ ಹೇಳುತ್ತಿದ್ದೇನೆ. ಈ ಎಲ್ಲವೂ ನಿನ್ನದೇ. ನಾವೆಲ್ಲರೂ ನಿನ್ನ ಅಧೀನರಾಗಿದ್ದೇವೆ. ನಿನ್ನ ಮಾನಸಿಕ ಜ್ವರವು ದೂರವಾಗಲಿ!

15006015a ಭವಿತವ್ಯಮನುಪ್ರಾಪ್ತಂ ಮನ್ಯೇ ತ್ವಾಂ ತಜ್ಜನಾಧಿಪ।
15006015c ದಿಷ್ಟ್ಯಾ ಶುಶ್ರೂಷಮಾಣಸ್ತ್ವಾಂ ಮೋಕ್ಷ್ಯಾಮಿ ಮನಸೋ ಜ್ವರಮ್।।

ಜನಾಧಿಪ! ನೀನು ಪಡೆಯಬೇಕಾಗಿರುವುದನ್ನು ಪಡೆದಿರುವೆಯೆಂದು ನಾನು ಭಾವಿಸುತ್ತೇನೆ. ಅದೃಷ್ಟದಿಂದ ಪುನಃ ನಿನ್ನ ಶುಶ್ರೂಷೆಯನ್ನು ಮಾಡುವ ಅವಕಾಶವು ಸಿಕ್ಕಿದರೆ ನಿನ್ನ ಈ ಮಾನಸಿಕ ಜ್ವರವನ್ನು ಹೋಗಲಾಡಿಸುತ್ತೇನೆ!”

15006016 ಧೃತರಾಷ್ಟ್ರ ಉವಾಚ।
15006016a ತಾಪಸ್ಯೇ ಮೇ ಮನಸ್ತಾತ ವರ್ತತೇ ಕುರುನಂದನ।
15006016c ಉಚಿತಂ ಹಿ ಕುಲೇಽಸ್ಮಾಕಮರಣ್ಯಗಮನಂ ಪ್ರಭೋ।।

ಧೃತರಾಷ್ಟ್ರನು ಹೇಳಿದನು: “ಕುರುನಂದನ! ಪ್ರಭೋ! ಮಗೂ! ನನ್ನ ಮನಸ್ಸು ತಪಸ್ಸಿನಲ್ಲಿಯೇ ಮಗ್ನವಾಗಿದೆ. ನಾವು ಅರಣ್ಯಕ್ಕೆ ಹೋಗುವುದು ಈ ಕುಲದ ಸಂಪ್ರದಾಯವೂ ಮತ್ತು ಉಚಿತವೂ ಆಗಿದೆ.

15006017a ಚಿರಮಸ್ಮ್ಯುಷಿತಃ ಪುತ್ರ ಚಿರಂ ಶುಶ್ರೂಷಿತಸ್ತ್ವಯಾ।
15006017c ವೃದ್ಧಂ ಮಾಮಭ್ಯನುಜ್ಞಾತುಂ ತ್ವಮರ್ಹಸಿ ಜನಾಧಿಪ।।

ಪುತ್ರ! ಜನಾಧಿಪ! ಬಹಳ ಕಾಲದಿಂದ ಇಲ್ಲಿಯೇ ವಾಸವಾಗಿದ್ದೇವೆ. ಬಹಳ ಕಾಲದಿಂದ ನೀನು ನಮ್ಮ ಶುಶ್ರೂಷೆಯನ್ನೂ ಮಾಡಿದ್ದೀಯೆ. ವೃದ್ಧನಾದ ನನಗೆ ನೀನು ಅಪ್ಪಣೆಯನ್ನು ನೀಡಬೇಕು!””

15006018 ವೈಶಂಪಾಯನ ಉವಾಚ।
15006018a ಇತ್ಯುಕ್ತ್ವಾ ಧರ್ಮರಾಜಾನಂ ವೇಪಮಾನಃ ಕೃತಾಂಜಲಿಮ್।
15006018c ಉವಾಚ ವಚನಂ ರಾಜಾ ಧೃತರಾಷ್ಟ್ರೋಽಂಬಿಕಾಸುತಃ।।
15006019a ಸಂಜಯಂ ಚ ಮಹಾಮಾತ್ರಂ ಕೃಪಂ ಚಾಪಿ ಮಹಾರಥಮ್।
15006019c ಅನುನೇತುಮಿಹೇಚ್ಚಾಮಿ ಭವದ್ಭಿಃ ಪೃಥಿವೀಪತಿಮ್।।

ವೈಶಂಪಾಯನನು ಹೇಳಿದನು: “ಕೈಮುಗಿದು ನಡುಗುತ್ತಿದ್ದ ಧರ್ಮರಾಜನಿಗೆ ಹೀಗೆ ಹೇಳಿ ಅಂಬಿಕಾಸುತ ರಾಜನು ಮಹಾಮಾತ್ರ ಸಂಜಯ ಮತ್ತು ಮಹಾರಥ ಕೃಪನಿಗೆ ಈ ಮಾತನ್ನಾಡಿದನು: “ನೀವಾದರೂ ಈ ಪೃಥಿವೀಪತಿಯನ್ನು ಸಮಾಧಾನಗೊಳಿಸಿರೆಂದು ಇಚ್ಛಿಸುತ್ತೇನೆ.

15006020a ಗ್ಲಾಯತೇ ಮೇ ಮನೋ ಹೀದಂ ಮುಖಂ ಚ ಪರಿಶುಷ್ಯತಿ।
15006020c ವಯಸಾ ಚ ಪ್ರಕೃಷ್ಟೇನ ವಾಗ್ವ್ಯಾಯಾಮೇನ ಚೈವ ಹಿ।।

ನನ್ನ ವೃದ್ಧಾಪ್ಯದ ಕಾರಣದಿಂದಲೂ ಮಾತನಾಡಿದ ಆಯಾಸದಿಂದಲೂ ನನ್ನ ಮನಸ್ಸು ದುರ್ಬಲವಾಗುತ್ತಿದೆ. ಬಾಯಿಯು ಒಣಗಿಹೋಗುತ್ತಿದೆ.”

15006021a ಇತ್ಯುಕ್ತ್ವಾ ಸ ತು ಧರ್ಮಾತ್ಮಾ ವೃದ್ಧೋ ರಾಜಾ ಕುರೂದ್ವಹಃ।
15006021c ಗಾಂಧಾರೀಂ ಶಿಶ್ರಿಯೇ ಧೀಮಾನ್ಸಹಸೈವ ಗತಾಸುವತ್।।

ಹೀಗೆ ಹೇಳಿ ಧರ್ಮಾತ್ಮ ವೃದ್ಧ ರಾಜಾ ಧೀಮಾನ್ ಕುರೂದ್ವಹನು ಒಮ್ಮೆಲೇ ಪ್ರಾಣಬಿಟ್ಟವನಂತೆ ಗಾಂಧಾರಿಯನ್ನೊರಗಿ ಕುಳಿತುಕೊಂಡನು.

15006022a ತಂ ತು ದೃಷ್ಟ್ವಾ ತಥಾಸೀನಂ ನಿಶ್ಚೇಷ್ಟಂ ಕುರುಪಾರ್ಥಿವಮ್।
15006022c ಆರ್ತಿಂ ರಾಜಾ ಯಯೌ ತೂರ್ಣಂ ಕೌಂತೇಯಃ ಪರವೀರಹಾ।।

ಹಾಗೆ ನಿಶ್ಚೇಷ್ಟನಾಗಿ ಕುಳಿತುಕೊಂಡ ಕುರುಪಾರ್ಥಿವನನ್ನು ನೋಡಿ ಪರವೀರಹ ಕೌಂತೇಯನಿಗೆ ಅತೀವ ಸಂಕಟವುಂಟಾಯಿತು.

15006023 ಯುಧಿಷ್ಠಿರ ಉವಾಚ।
15006023a ಯಸ್ಯ ನಾಗಸಹಸ್ರೇಣ ದಶಸಂಖ್ಯೇನ ವೈ ಬಲಮ್।
15006023c ಸೋಽಯಂ ನಾರೀಮುಪಾಶ್ರಿತ್ಯ ಶೇತೇ ರಾಜಾ ಗತಾಸುವತ್।।

ಯುಧಿಷ್ಠಿರನು ಹೇಳಿದನು: “ಒಂದು ಲಕ್ಷ ಆನೆಗಳ ಬಲವಿರುವ ಈ ರಾಜನು ನಾರಿಯೋರ್ವಳನ್ನು ಆಶ್ರಯಿಸಿ ಮರಣಹೊಂದಿದವನಂತೆ ಕುಳಿತುಕೊಂಡಿದ್ದಾನಲ್ಲ!

15006024a ಆಯಸೀ ಪ್ರತಿಮಾ ಯೇನ ಭೀಮಸೇನಸ್ಯ ವೈ ಪುರಾ।
15006024c ಚೂರ್ಣೀಕೃತಾ ಬಲವತಾ ಸ ಬಲಾರ್ಥೀ ಶ್ರಿತಃ ಸ್ತ್ರಿಯಮ್।।

ಹಿಂದೆ ಭೀಮಸೇನನ ಉಕ್ಕಿನ ಪ್ರತಿಮೆಯನ್ನು ತನ್ನ ಬಲದಿಂದ ಚೂರು ಚೂರುಮಾಡಿದ್ದ ಇವನೇ ಇಂದು ಬಲಾರ್ಥಿಯಾಗಿ ಸ್ತ್ರೀಯನ್ನು ಆಶ್ರಯಿಸಿದ್ದಾನಲ್ಲಾ!

15006025a ಧಿಗಸ್ತು ಮಾಮಧರ್ಮಜ್ಞಂ ಧಿಗ್ಬುದ್ಧಿಂ ಧಿಕ್ಚ ಮೇ ಶ್ರುತಮ್।
15006025c ಯತ್ಕೃತೇ ಪೃಥಿವೀಪಾಲಃ ಶೇತೇಽಯಮತಥೋಚಿತಃ।।

ಇಂತಹ ಅವಸ್ಥೆಗೆ ಯೋಗ್ಯನಲ್ಲದ ಪೃಥಿವೀಪಾಲನು ಈ ರೀತಿ ಮಲಗಿರುವಂತೆ ಮಾಡಿರುವ ಅಧರ್ಮಜ್ಞನಾದ ನನಗೆ ಧಿಕ್ಕಾರ! ನನ್ನ ಬುದ್ಧಿಗೆ ಧಿಕ್ಕಾರ! ನನ್ನ ಶಾಸ್ತ್ರಜ್ಞಾನಕ್ಕೆ ಧಿಕ್ಕಾರ!

15006026a ಅಹಮಪ್ಯುಪವತ್ಸ್ಯಾಮಿ ಯಥೈವಾಯಂ ಗುರುರ್ಮಮ।
15006026c ಯದಿ ರಾಜಾ ನ ಭುಂಕ್ತೇಽಯಂ ಗಾಂಧಾರೀ ಚ ಯಶಸ್ವಿನೀ।।

ಗುರುವಾದ ಈ ರಾಜನೂ ಮತ್ತು ಯಶಸ್ವಿನೀ ಗಾಂಧಾರಿಯೂ ಆಹಾರವನ್ನು ಸೇವಿಸದೇ ಇದ್ದರೆ ನಾನೂ ಕೂಡ ಅವರಂತೆಯೇ ಉಪವಾಸದಿಂದಿರುತ್ತೇನೆ!””

15006027 ವೈಶಂಪಾಯನ ಉವಾಚ।
15006027a ತತೋಽಸ್ಯ ಪಾಣಿನಾ ರಾಜಾ ಜಲಶೀತೇನ ಪಾಂಡವಃ।
15006027c ಉರೋ ಮುಖಂ ಚ ಶನಕೈಃ ಪರ್ಯಮಾರ್ಜತ ಧರ್ಮವಿತ್।।

ವೈಶಂಪಾಯನನು ಹೇಳಿದನು: “ಆಗ ಧರ್ಮವಿದು ಪಾಂಡವ ರಾಜನು ತಣ್ಣೀರಿನಿಂದ ತನ್ನ ಕೈಯನ್ನು ಒದ್ದೆಮಾಡಿಕೊಂಡು ಮೆಲ್ಲನೇ ಧೃತರಾಷ್ಟ್ರನ ಎದೆಯನ್ನೂ ಮುಖವನ್ನೂ ಸವರಿದನು.

15006028a ತೇನ ರತ್ನೌಷಧಿಮತಾ ಪುಣ್ಯೇನ ಚ ಸುಗಂಧಿನಾ।
15006028c ಪಾಣಿಸ್ಪರ್ಶೇನ ರಾಜ್ಞಸ್ತು ರಾಜಾ ಸಂಜ್ಞಾಮವಾಪ ಹ।।

ರತ್ನೌಷಧಿಗಳಿಂದ ಸಂಪನ್ನನ್ನಾಗಿದ್ದ ರಾಜಾ ಯುಧಿಷ್ಠಿರನು ಪವಿತ್ರ ಸುಗಂಧಯುಕ್ತ ಕೈಯಿಂದ ಮುಟ್ಟಿದೊಡನೆಯೇ ರಾಜ ಧೃತರಾಷ್ಟ್ರನು ಎಚ್ಚರಗೊಂಡನು.

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರನಿರ್ವೇದೇ ಷಷ್ಟೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರನಿರ್ವೇದ ಎನ್ನುವ ಆರನೇ ಅಧ್ಯಾಯವು.