005: ಧೃತರಾಷ್ಟ್ರನಿರ್ವೇದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 5

ಸಾರ

ಧೃತರಾಷ್ಟ್ರನು ತಾನು ಮಾಡಿದ ಅಪರಾಧಗಳಿಗೆ ಪರಿತಾಪಗೊಂಡು ಅಲ್ಪಾಹಾರ ಮತ್ತು ನೆಲದ ಮೇಲೆ ಮಲಗುವುದು ಮುಂತಾದ ನಿಯಮಗಳನ್ನು ಪಾಲಿಸಿಕೊಂಡು ಬಂದಿದ್ದುದನ್ನು ಯುಧಿಷ್ಠಿರಾದಿಗಳಿಗೆ ತಿಳಿಸಿದುದು (1-13). ವನವನ್ನು ಸೇರಲು ತನಗೆ ಮತ್ತು ಗಾಂಧಾರಿಗೆ ಅನುಮತಿಯನ್ನು ನೀಡಬೇಕೆಂದು ಧೃತರಾಷ್ಟ್ರನು ಯುಧಿಷ್ಠಿರನಲ್ಲಿ ಕೇಳಿಕೊಂಡಿದುದು (14-23).

15005001 ಧೃತರಾಷ್ಟ್ರ ಉವಾಚ।
15005001a ವಿದಿತಂ ಭವತಾಮೇತದ್ಯಥಾ ವೃತ್ತಃ ಕುರುಕ್ಷಯಃ।
15005001c ಮಮಾಪರಾಧಾತ್ತತ್ಸರ್ವಮಿತಿ ಜ್ಞೇಯಂ ತು ಕೌರವಾಃ।।

ಧೃತರಾಷ್ಟ್ರನು ಹೇಳಿದನು: “ಕುರುಗಳ ವಿನಾಶವು ಹೇಗಾಯಿತೆಂದು ನಿಮಗೆಲ್ಲ ತಿಳಿದೇ ಇದೆ. ನನ್ನ ಅಪರಾಧದಿಂದಲೇ ಎಲ್ಲವೂ ನಡೆಯಿತು ಎನ್ನುವುದನ್ನು ಕೌರವರೆಲ್ಲರೂ ಬಲ್ಲರು!

15005002a ಯೋಽಹಂ ದುಷ್ಟಮತಿಂ ಮೂಢಂ ಜ್ಞಾತೀನಾಂ ಭಯವರ್ಧನಮ್।
15005002c ದುರ್ಯೋಧನಂ ಕೌರವಾಣಾಮಾಧಿಪತ್ಯೇಽಭ್ಯಷೇಚಯಮ್।।

ನಾನೇ ದುಷ್ಟಮತಿಯಾದ ಮೂಢ ಬಾಂಧವರ ಭಯವನ್ನು ವರ್ಧಿಸುತ್ತಿದ್ದ ದುರ್ಯೋಧನನನ್ನು ಕೌರವರ ಅಧಿಪತಿಯನ್ನಾಗಿ ಅಭಿಷೇಕಿಸಿದೆನು!

15005003a ಯಚ್ಚಾಹಂ ವಾಸುದೇವಸ್ಯ ವಾಕ್ಯಂ ನಾಶ್ರೌಷಮರ್ಥವತ್।
15005003c ವಧ್ಯತಾಂ ಸಾಧ್ವಯಂ ಪಾಪಃ ಸಾಮಾತ್ಯ ಇತಿ ದುರ್ಮತಿಃ।।

“ಈ ಪಾಪಿ ದುರ್ಮತಿಯನ್ನು ಅಮಾತ್ಯರೊಡನೆ ವಧಿಸು!” ಎಂಬ ವಾಸುದೇವನ ಅರ್ಥವತ್ತಾದ ಮಾತನ್ನು ನಾನೇ ಕೇಳಲಿಲ್ಲ!

15005004a ಪುತ್ರಸ್ನೇಹಾಭಿಭೂತಶ್ಚ ಹಿತಮುಕ್ತೋ ಮನೀಷಿಭಿಃ।
15005004c ವಿದುರೇಣಾಥ ಭೀಷ್ಮೇಣ ದ್ರೋಣೇನ ಚ ಕೃಪೇಣ ಚ।।
15005005a ಪದೇ ಪದೇ ಭಗವತಾ ವ್ಯಾಸೇನ ಚ ಮಹಾತ್ಮನಾ।
15005005c ಸಂಜಯೇನಾಥ ಗಾಂಧಾರ್ಯಾ ತದಿದಂ ತಪ್ಯತೇಽದ್ಯ ಮಾಮ್।।

ಪುತ್ರಸ್ನೇಹದಿಂದಾಗಿ ನಾನು ಹಿತವನ್ನಾಡಿದ ಮನೀಷ ವಿದುರ, ಭೀಷ್ಮ, ದ್ರೋಣ, ಕೃಪ, ಮತ್ತು ಪದೇ ಪದೇ ಹೇಳುತ್ತಿದ್ದ ಮಹಾತ್ಮ ವ್ಯಾಸ, ಸಂಜಯ ಮತ್ತು ಗಾಂಧಾರಿಯರನ್ನು ಕೇಳಲಿಲ್ಲ. ಅದಕ್ಕಾಗಿ ಇಂದು ನಾನು ಪರಿತಪಿಸುತ್ತಿದ್ದೇನೆ!

15005006a ಯಚ್ಚಾಹಂ ಪಾಂಡುಪುತ್ರೇಣ ಗುಣವತ್ಸು ಮಹಾತ್ಮಸು।
15005006c ನ ದತ್ತವಾನ್ಶ್ರಿಯಂ ದೀಪ್ತಾಂ ಪಿತೃಪೈತಾಮಹೀಮಿಮಾಮ್।।

ಗುಣವಂತರೂ ಮಹಾತ್ಮರೂ ಆಗಿರುವ ಪಾಂಡುಪುತ್ರರಿಗೆ ನಾನು ಪಿತೃ-ಪಿತಾಮಹರಿಂದ ಉಜ್ವಲಿಸುತ್ತಿದ್ದ ಈ ಭೂಮಿ-ಸಂಪತ್ತನ್ನು ಕೊಡಲಿಲ್ಲ!

15005007a ವಿನಾಶಂ ಪಶ್ಯಮಾನೋ ಹಿ ಸರ್ವರಾಜ್ಞಾಂ ಗದಾಗ್ರಜಃ।
15005007c ಏತಚ್ಚ್ರೇಯಃ ಸ ಪರಮಮಮನ್ಯತ ಜನಾರ್ದನಃ।।

ಸರ್ವರಾಜರ ವಿನಾಶವನ್ನು ಕಂಡಿದ್ದ ಗದಾಗ್ರಜ ಜನಾರ್ದನನು ಇದೇ ಪರಮ ಶ್ರೇಯಸ್ಕರವೆಂದು ಭಾವಿಸಿದ್ದನು.

15005008a ಸೋಽಹಮೇತಾನ್ಯಲೀಕಾನಿ ನಿವೃತ್ತಾನ್ಯಾತ್ಮನಃ ಸದಾ।
15005008c ಹೃದಯೇ ಶಲ್ಯಭೂತಾನಿ ಧಾರಯಾಮಿ ಸಹಸ್ರಶಃ।।

ಹೀಗೆ ಆಗ ನಾನು ಮಾಡಿದ ಸಾವಿರಾರು ಅಪರಾಧಗಳು ಮುಳ್ಳುಗಳಂತೆ ಸದಾ ನನ್ನ ಹೃದಯವನ್ನು ಚುಚ್ಚುತ್ತಿವೆ.

15005009a ವಿಶೇಷತಸ್ತು ದಹ್ಯಾಮಿ ವರ್ಷಂ ಪಂಚದಶಂ ಹಿ ವೈ।
15005009c ಅಸ್ಯ ಪಾಪಸ್ಯ ಶುದ್ಧ್ಯರ್ಥಂ ನಿಯತೋಽಸ್ಮಿ ಸುದುರ್ಮತಿಃ।।

ವಿಶೇಷವಾಗಿ ನಾನು ಈ ಹದಿನೈದು ವರ್ಷಗಳು ಸುಡುತ್ತಿದ್ದೇನೆ. ದುರ್ಮತಿಯ ಈ ಪಾಪಗಳ ಶುದ್ಧಿಗಾಗಿ ಕೆಲವು ನಿಯಮಗಳನ್ನು ಪಾಲಿಸುತ್ತಿದ್ದೇನೆ.

15005010a ಚತುರ್ಥೇ ನಿಯತೇ ಕಾಲೇ ಕದಾ ಚಿದಪಿ ಚಾಷ್ಟಮೇ।
15005010c ತೃಷ್ಣಾವಿನಯನಂ ಭುಂಜೇ ಗಾಂಧಾರೀ ವೇದ ತನ್ಮಮ।।

ನಾಲ್ಕನೆಯ ಹೊತ್ತು (ಎರಡು ದಿವಸಗಳಿಗೊಮ್ಮೆ), ಒಮ್ಮೆಮ್ಮೆ ಎಂಟನೆಯ ಹೊತ್ತು (ನಾಲ್ಕು ದಿವಸಗಳಿಗೊಮ್ಮೆ) ಹಸಿವಿನ ಸಂಕಟದಿಂದ ತಪ್ಪಿಸಿಕೊಳ್ಳಲು ಅಲ್ಪಾಹಾರವನ್ನು ತೆಗೆದುಕೊಳ್ಳುತ್ತಿದ್ದೇನೆ. ಇದನ್ನು ಗಾಂಧರಿಯೋರ್ವಳೇ ಬಲ್ಲಳು.

15005011a ಕರೋತ್ಯಾಹಾರಮಿತಿ ಮಾಂ ಸರ್ವಃ ಪರಿಜನಃ ಸದಾ।
15005011c ಯುಧಿಷ್ಠಿರಭಯಾದ್ವೇತ್ತಿ ಭೃಶಂ ತಪ್ಯತಿ ಪಾಂಡವಃ।।

ನಾನು ಪ್ರತಿನಿತ್ಯವೂ ಆಹಾರವನ್ನು ತೆಗೆದುಕೊಳ್ಳುತ್ತಿರುವೆನೆಂದೇ ಎಲ್ಲ ಪರಿಜನರೂ ತಿಳಿದುಕೊಂಡಿದ್ದಾರೆ. ಪಾಂಡವನು ತುಂಬಾ ಪರಿತಪಿಸುತ್ತಾನೆಂದು ಯುಧಿಷ್ಠಿರನ ಭಯದಿಂದ ಯಾರಿಗೂ ಇದು ತಿಳಿಯದಂತೆ ಗೌಪ್ಯವಾಗಿ ಇರಿಸಿಕೊಂಡಿದ್ದೇನೆ.

15005012a ಭೂಮೌ ಶಯೇ ಜಪ್ಯಪರೋ ದರ್ಭೇಷ್ವಜಿನಸಂವೃತಃ।
15005012c ನಿಯಮವ್ಯಪದೇಶೇನ ಗಾಂಧಾರೀ ಚ ಯಶಸ್ವಿನೀ।।

ದರ್ಭೆ ಮತ್ತು ಮೃಗಚರ್ಮವನ್ನು ಹೊದೆದುಕೊಂಡು ನಾನು ಮತ್ತು ಯಶಸ್ವಿನೀ ಗಾಂಧಾರೀ ಜಪಮಾಡುತ್ತಿರುತ್ತೇವೆ. ನೆಲದ ಮೇಲೆಯೇ ಮಲಗುತ್ತೇವೆ.

15005013a ಹತಂ ಪುತ್ರಶತಂ ಶೂರಂ ಸಂಗ್ರಾಮೇಷ್ವಪಲಾಯಿನಮ್।
15005013c ನಾನುತಪ್ಯಾಮಿ ತಚ್ಚಾಹಂ ಕ್ಷತ್ರಧರ್ಮಂ ಹಿ ತಂ ವಿದುಃ।।
15005013e ಇತ್ಯುಕ್ತ್ವಾ ಧರ್ಮರಾಜಾನಮಭ್ಯಭಾಷತ ಕೌರವಃ।

ಸಂಗ್ರಾಮದಲ್ಲಿ ಹಿಮ್ಮೆಟ್ಟದ ನೂರು ಶೂರ ಮಕ್ಕಳೂ ಹತರಾದರು. ಅವರು ಕ್ಷತ್ರಧರ್ಮವನ್ನು ತಿಳಿದಿದ್ದರೆಂದು ನಾನು ಅದಕ್ಕಾಗಿ ಪರಿತಪಿಸುತ್ತಿಲ್ಲ.” ಹೀಗೆ ಹೇಳಿ ಕೌರವ ಧೃತರಾಷ್ಟ್ರನು ಧರ್ಮರಾಜನಿಗೆ ಹೇಳಿದನು:

15005014a ಭದ್ರಂ ತೇ ಯಾದವೀಮಾತರ್ವಾಕ್ಯಂ ಚೇದಂ ನಿಬೋಧ ಮೇ।।
15005014c ಸುಖಮಸ್ಮ್ಯುಷಿತಃ ಪುತ್ರ ತ್ವಯಾ ಸುಪರಿಪಾಲಿತಃ।

“ಪುತ್ರ! ಯಾದವೀ ಕುಂತಿಯ ಮಗನೇ! ನಿನಗೆ ಮಂಗಳವಾಗಲಿ! ನಾನೀಗ ಹೇಳುವ ಮಾತುಗಳನ್ನು ಕೇಳು! ನಿನ್ನಿಂದ ಪರಿಪಾಲಿತನಾಗಿರುವ ನಾನು ಅತ್ಯಂತ ಸುಖದಿಂದಲೇ ಇದ್ದೇನೆ.

15005015a ಮಹಾದಾನಾನಿ ದತ್ತಾನಿ ಶ್ರಾದ್ಧಾನಿ ಚ ಪುನಃ ಪುನಃ।।
15005015c ಪ್ರಕೃಷ್ಟಂ ಮೇ ವಯಃ ಪುತ್ರ ಪುಣ್ಯಂ ಚೀರ್ಣಂ ಯಥಾಬಲಮ್।
15005015e ಗಾಂಧಾರೀ ಹತಪುತ್ರೇಯಂ ಧೈರ್ಯೇಣೋದೀಕ್ಷತೇ ಚ ಮಾಮ್।।

ಪುತ್ರ! ಮಹಾದಾನಗಳನ್ನು ನೀಡಿದ್ದೇನೆ. ಪುನಃ ಪುನಃ ಶ್ರಾದ್ಧಗಳನ್ನು ಮಾಡಿದ್ದೇನೆ. ಬಲವಿದ್ದಷ್ಟು ಕಷ್ಟದ ಪುಣ್ಯ ಕರ್ಮಗಳನ್ನು ಮಾಡಿದ ಮತ್ತು ಪುತ್ರರನ್ನು ಕಳೆದುಕೊಂಡ ಈ ಗಾಂಧಾರಿಯು ಧೈರ್ಯದಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ!

15005016a ದ್ರೌಪದ್ಯಾ ಹ್ಯಪಕರ್ತಾರಸ್ತವ ಚೈಶ್ವರ್ಯಹಾರಿಣಃ।
15005016c ಸಮತೀತಾ ನೃಶಂಸಾಸ್ತೇ ಧರ್ಮೇಣ ನಿಹತಾ ಯುಧಿ।।

ದ್ರೌಪದಿಗೆ ಅಪಕಾರವನ್ನೆಸಗಿದ ಮತ್ತು ನಿನ್ನ ಐಶ್ವರ್ಯವನ್ನು ಅಪಹರಿಸಿದ ಕ್ರೂರಿಗಳು ಧರ್ಮದಿಂದ ಯುದ್ಧಮಾಡಿ ಹತರಾಗಿದ್ದಾರೆ.

15005017a ನ ತೇಷು ಪ್ರತಿಕರ್ತವ್ಯಂ ಪಶ್ಯಾಮಿ ಕುರುನಂದನ।
15005017c ಸರ್ವೇ ಶಸ್ತ್ರಜಿತಾಽಲ್ಲೋಕಾನ್ಗತಾಸ್ತೇಽಭಿಮುಖಂ ಹತಾಃ।।

ಕುರುನಂದನ! ಅವರ ಪಾಪಕ್ಕೆ ಮಾಡಬೇಕಾದ ಪರಿಹಾರಗಳನ್ನೇನೂ ನಾನು ಕಾಣುತ್ತಿಲ್ಲ. ಎಲ್ಲರೂ ಶಸ್ತ್ರಗಳನ್ನು ಹಿಡಿದೇ ನಿನ್ನನ್ನು ಎದುರಿಸಿ ಹತರಾಗಿ ಉತ್ತಮ ಲೋಕಗಳನ್ನು ಗಳಿಸಿಕೊಂಡಿದ್ದಾರೆ.

15005018a ಆತ್ಮನಸ್ತು ಹಿತಂ ಮುಖ್ಯಂ ಪ್ರತಿಕರ್ತವ್ಯಮದ್ಯ ಮೇ।
15005018c ಗಾಂಧಾರ್ಯಾಶ್ಚೈವ ರಾಜೇಂದ್ರ ತದನುಜ್ಞಾತುಮರ್ಹಸಿ।।

ರಾಜೇಂದ್ರ! ಈಗ ನನಗಾಗಿ ಮತ್ತು ಗಾಂಧಾರಿಗಾಗಿ ಹಿತವಾದ ಮುಖ್ಯ ಪರಿಹಾರಗಳನ್ನು ಮಾಡಿಕೊಳ್ಳಬೇಕಾಗಿದೆ. ಅದಕ್ಕೆ ನಿನ್ನ ಅನುಮತಿ ಬೇಕು!

15005019a ತ್ವಂ ಹಿ ಧರ್ಮಭೃತಾಂ ಶ್ರೇಷ್ಠಃ ಸತತಂ ಧರ್ಮವತ್ಸಲಃ।
15005019c ರಾಜಾ ಗುರುಃ ಪ್ರಾಣಭೃತಾಂ ತಸ್ಮಾದೇತದ್ಬ್ರವೀಮ್ಯಹಮ್।।

ನೀನು ಧರ್ಮಭೃತರಲ್ಲಿ ಶ್ರೇಷ್ಠ. ಸತತವೂ ಧರ್ಮವನ್ನು ಪಾಲಿಸಿಕೊಂಡಿರುವವನು. ಪ್ರಾಣವಿರುವವರಲ್ಲಿ ಹಿರಿಯವನು. ರಾಜಾ! ಆದುದರಿಂದ ನಿನ್ನಲ್ಲಿ ಹೇಳುತ್ತಿದ್ದೇನೆ.

15005020a ಅನುಜ್ಞಾತಸ್ತ್ವಯಾ ವೀರ ಸಂಶ್ರಯೇಯಂ ವನಾನ್ಯಹಮ್।
15005020c ಚೀರವಲ್ಕಲಭೃದ್ರಾಜನ್ಗಾಂಧಾರ್ಯಾ ಸಹಿತೋಽನಯಾ।।
15005020e ತವಾಶಿಷಃ ಪ್ರಯುಂಜಾನೋ ಭವಿಷ್ಯಾಮಿ ವನೇಚರಃ।।

ವೀರ! ರಾಜನ್! ನಿನ್ನ ಅನುಜ್ಞೆಯನ್ನು ಪಡೆದು ಗಾಂಧಾರಿಯ ಸಹಿತ ನಾನು ಚೀರ-ವಲ್ಕಲಗಳನ್ನು ಧರಿಸಿ ವನದಲ್ಲಿ ವಾಸಿಸುತ್ತೇನೆ. ವನದಲ್ಲಿ ಸಂಚರಿಸುತ್ತಾ ಸದಾ ನಿನಗೆ ಆಶೀರ್ವದಿಸುತ್ತಿರುತ್ತೇನೆ.

15005021a ಉಚಿತಂ ನಃ ಕುಲೇ ತಾತ ಸರ್ವೇಷಾಂ ಭರತರ್ಷಭ।
15005021c ಪುತ್ರೇಷ್ವೈಶ್ವರ್ಯಮಾಧಾಯ ವಯಸೋಽಂತೇ ವನಂ ನೃಪ।।

ಅಯ್ಯಾ ಭರತರ್ಷಭ! ನಮ್ಮ ಕುಲದಲ್ಲಿ ಎಲ್ಲರಿಗೂ ಐಶ್ವರ್ಯವನ್ನು ಪುತ್ರರಿಗೊಪ್ಪಿಸಿ ವನವಾಸಮಾಡುವುದು ಉಚಿತವೇ ಆಗಿದೆ.

15005022a ತತ್ರಾಹಂ ವಾಯುಭಕ್ಷೋ ವಾ ನಿರಾಹಾರೋಽಪಿ ವಾ ವಸನ್।
15005022c ಪತ್ನ್ಯಾ ಸಹಾನಯಾ ವೀರ ಚರಿಷ್ಯಾಮಿ ತಪಃ ಪರಮ್।।

ವೀರ! ಅಲ್ಲಿ ನಾನು ಪತ್ನಿಯೊಡನೆ ವಾಯುಭಕ್ಷನಾಗಿಯೋ ನಿರಾಹಾರಿಯಾಗಿಯೋ ಇದ್ದುಕೊಂಡು ಪರಮ ತಪಸ್ಸನ್ನು ನಡೆಸುತ್ತೇನೆ.

15005023a ತ್ವಂ ಚಾಪಿ ಫಲಭಾಕ್ತಾತ ತಪಸಃ ಪಾರ್ಥಿವೋ ಹ್ಯಸಿ।
15005023c ಫಲಭಾಜೋ ಹಿ ರಾಜಾನಃ ಕಲ್ಯಾಣಸ್ಯೇತರಸ್ಯ ವಾ।।

ಮಗೂ! ರಾಜನಾಗಿರುವುದರಿಂದ ನೀನೂ ಕೂಡ ಆ ತಪಸ್ಸಿನ ಫಲಭಾಗಿಯಾಗುವೆ. ಏಕೆಂದರೆ, ದೇಶದಲ್ಲಿ ಕಲ್ಯಾಣಕರವಾದ ಮತ್ತು ಕೆಟ್ಟದಾದ ಎಲ್ಲ ಕರ್ಮಗಳಿಗೆ ರಾಜನು ಫಲಭಾಗಿಯಾಗುತ್ತಾನೆ!”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರನಿರ್ವೇದೇ ಪಂಚಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರನಿರ್ವೇದ ಎನ್ನುವ ಐದನೇ ಅಧ್ಯಾಯವು.