004: ಭೀಮಾಪನಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 4

ಸಾರ

ಭೀಮಸೇನನು ಧೃತರಾಷ್ಟ್ರ-ಗಾಂಧಾರಿಯರಿಗೆ ಕೇಳಿಸುವಂತೆ ಕಠೋರಮಾತುಗಳನ್ನಾಡಿದುದು (1-9). ಹದಿನೈದು ವರ್ಷಗಳು ಭೀಮಸೇನನ ಅಪಮಾನಕಾರಕ ಮಾತುಗಳನ್ನು ಕೇಳುತ್ತಿದ್ದ ಧೃತರಾಷ್ಟ್ರನು ದುಃಖಿತನಾದುದು (10-15).

15004001 ವೈಶಂಪಾಯನ ಉವಾಚ।
15004001a ಯುಧಿಷ್ಠಿರಸ್ಯ ನೃಪತೇರ್ದುರ್ಯೋಧನಪಿತುಸ್ತಥಾ।
15004001c ನಾಂತರಂ ದದೃಶೂ ರಾಜನ್ಪುರುಷಾಃ ಪ್ರಣಯಂ ಪ್ರತಿ।।

ವೈಶಂಪಾಯನನು ಹೇಳಿದನು: “ರಾಜನ್! ದುರ್ಯೋಧನನ ತಂದೆ ನೃಪತಿಯ ಮೇಲೆ ಇದ್ದ ಯುಧಿಷ್ಠಿರನ ಪ್ರೀತಿಯಲ್ಲಿ ಪುರುಷರು ಯಾವ ಒಡಕನ್ನೂ ಕಾಣಲಿಲ್ಲ.

15004002a ಯದಾ ತು ಕೌರವೋ ರಾಜಾ ಪುತ್ರಂ ಸಸ್ಮಾರ ಬಾಲಿಶಮ್।
15004002c ತದಾ ಭೀಮಂ ಹೃದಾ ರಾಜನ್ನಪಧ್ಯಾತಿ ಸ ಪಾರ್ಥಿವಃ।।

ರಾಜನ್! ಯಾವಾಗಲೆಲ್ಲ ರಾಜಾ ಕೌರವನು ತನ್ನ ಪುತ್ರನ ಬಾಲಿಶಬುದ್ಧಿಯನ್ನು ಸ್ಮರಿಸಿಕೊಳ್ಳುತ್ತಿದ್ದನೋ ಆವಾಗಲೆಲ್ಲ ತನ್ನ ಹೃದಯದಲ್ಲಿ ಭೀಮನ ಕುರಿತು ಅನಿಷ್ಟವನ್ನೇ ಚಿಂತಿಸುತ್ತಿದ್ದನು.

15004003a ತಥೈವ ಭೀಮಸೇನೋಽಪಿ ಧೃತರಾಷ್ಟ್ರಂ ಜನಾಧಿಪಮ್।
15004003c ನಾಮರ್ಷಯತ ರಾಜೇಂದ್ರ ಸದೈವಾತುಷ್ಟವದ್ಧೃದಾ।।

ರಾಜೇಂದ್ರ! ಹಾಗೆಯೇ ಭೀಮಸೇನನಿಗೂ ಕೂಡ ಜನಾಧಿಪ ಧೃತರಾಷ್ಟ್ರನ ಕುರಿತು ಸಹನೆಯಿರಲಿಲ್ಲ. ಸದಾ ಅವನಿಗೆ ಅಪ್ರಿಯವಾದುದನ್ನೇ ಮಾಡುತ್ತಿದ್ದನು.

15004004a ಅಪ್ರಕಾಶಾನ್ಯಪ್ರಿಯಾಣಿ ಚಕಾರಾಸ್ಯ ವೃಕೋದರಃ।
15004004c ಆಜ್ಞಾಂ ಪ್ರತ್ಯಹರಚ್ಚಾಪಿ ಕೃತಕೈಃ ಪುರುಷೈಃ ಸದಾ।।

ವೃಕೋದರನು ಯಾರಿಗೂ ಕಾಣದಂತೆ ಧೃತರಾಷ್ಟ್ರನಿಗೆ ಅಪ್ರಿಯವಾದುದನ್ನೇ ಮಾಡುತ್ತಿದ್ದನು. ಸದಾ ಕೃತಕ ಪುರುಷರಿಂದ ಧೃತರಾಷ್ಟ್ರನ ಆಜ್ಞೆಗಳನ್ನು ಭಗ್ನಗೊಳಿಸುತ್ತಿದ್ದನು.

15004005a ಅಥ ಭೀಮಃ ಸುಹೃನ್ಮಧ್ಯೇ ಬಾಹುಶಬ್ಧಂ ತಥಾಕರೋತ್।
15004005c ಸಂಶ್ರವೇ ಧೃತರಾಷ್ಟ್ರಸ್ಯ ಗಾಂಧಾರ್ಯಾಶ್ಚಾಪ್ಯಮರ್ಷಣಃ।।

ಒಮ್ಮೆ ಕಠೋರ ಭೀಮನು ತನ್ನ ಸಹೃದಯರ ಮಧ್ಯದಲ್ಲಿ ಧೃತರಾಷ್ಟ್ರ-ಗಾಂಧಾರಿಯರಿಗೆ ಕೇಳುವಂತೆ ತನ್ನ ಭುಜಗಳನ್ನು ತಟ್ಟಿಕೊಂಡನು.

15004006a ಸ್ಮೃತ್ವಾ ದುರ್ಯೋಧನಂ ಶತ್ರುಂ ಕರ್ಣದುಃಶಾಸನಾವಪಿ।
15004006c ಪ್ರೋವಾಚಾಥ ಸುಸಂರಬ್ಧೋ ಭೀಮಃ ಸ ಪರುಷಂ ವಚಃ।।

ಶತ್ರು ದುರ್ಯೋಧನ, ಕರ್ಣ ಮತ್ತು ದುಃಶಾಸನರನ್ನು ಸ್ಮರಿಸಿಕೊಂಡು ಕೋಪಿಷ್ಟನಾದ ಭೀಮನು ಈ ಕಠೋರ ಮಾತುಗಳನ್ನಾಡಿದನು:

15004007a ಅಂಧಸ್ಯ ನೃಪತೇಃ ಪುತ್ರಾ ಮಯಾ ಪರಿಘಬಾಹುನಾ।
15004007c ನೀತಾ ಲೋಕಮಮುಂ ಸರ್ವೇ ನಾನಾಶಸ್ತ್ರಾತ್ತಜೀವಿತಾಃ।।

“ಪರಿಘದಂತಿರುವ ನನ್ನ ಈ ಬಾಹುಗಳಿಂದ ನಾನಾ ಶಸ್ತ್ರಗಳೊಡನೆ ಹೋರಾಡುತ್ತಿದ್ದ ಈ ಅಂಧ ನೃಪತಿಯ ಮಕ್ಕಳೆಲ್ಲರನ್ನೂ ಯಮನ ಲೋಕಕ್ಕೆ ಕಳುಹಿಸಿಬಿಟ್ಟೆನು!

15004008a ಇಮೌ ತೌ ಪರಿಘಪ್ರಖ್ಯೌ ಭುಜೌ ಮಮ ದುರಾಸದೌ।
15004008c ಯಯೋರಂತರಮಾಸಾದ್ಯ ಧಾರ್ತರಾಷ್ಟ್ರಾಃ ಕ್ಷಯಂ ಗತಾಃ।।

ಪರಿಘದಂತೆ ದುರಾಸದವಾಗಿರುವ ಈ ನನ್ನ ಎರಡು ಭುಜಗಳ ಮಧ್ಯೆ ಯಾರೆಲ್ಲ ಸಿಲುಕಿದರೋ ಆ ಎಲ್ಲ ಧಾರ್ತರಾಷ್ಟ್ರರೂ ನಾಶಹೊಂದಿದರು!

15004009a ತಾವಿಮೌ ಚಂದನೇನಾಕ್ತೌ ವಂದನೀಯೌ ಚ ಮೇ ಭುಜೌ।
15004009c ಯಾಭ್ಯಾಂ ದುರ್ಯೋಧನೋ ನೀತಃ ಕ್ಷಯಂ ಸಸುತಬಾಂಧವಃ।।

ಸುತ-ಬಾಂಧವರೊಂದಿಗೆ ದುರ್ಯೋಧನನನ್ನು ನಾಶಗೊಳಿಸಿದ ಈ ನನ್ನ ಎರಡು ಭುಜಗಳು ಚಂದನಲೇಪನದ ಗೌರವಕ್ಕೆ ಅರ್ಹವಾಗಿವೆ!”

15004010a ಏತಾಶ್ಚಾನ್ಯಾಶ್ಚ ವಿವಿಧಾಃ ಶಲ್ಯಭೂತಾ ಜನಾಧಿಪಃ।
15004010c ವೃಕೋದರಸ್ಯ ತಾ ವಾಚಃ ಶ್ರುತ್ವಾ ನಿರ್ವೇದಮಾಗಮತ್।।

ವೃಕೋದರನ ಈ ಮತ್ತು ಅನ್ಯ ಮುಳ್ಳಿನಂತಹ ವಿವಿಧ ಮಾತುಗಳನ್ನು ಕೇಳಿ ಜನಾಧಿಪನಿಗೆ ಅತ್ಯಂತ ಖೇದವುಂಟಾಯಿತು.

15004011a ಸಾ ಚ ಬುದ್ಧಿಮತೀ ದೇವೀ ಕಾಲಪರ್ಯಾಯವೇದಿನೀ।
15004011c ಗಾಂಧಾರೀ ಸರ್ವಧರ್ಮಜ್ಞಾ ತಾನ್ಯಲೀಕಾನಿ ಶುಶ್ರುವೇ।।

ಕಾಲದ ವೈವರೀತ್ಯಗಳನ್ನು ತಿಳಿದಿದ್ದ ಸರ್ವಧರ್ಮಜ್ಞೆ ಬುದ್ಧಿಮತೀ ದೇವೀ ಗಾಂಧಾರಿಯೂ ಕೂಡ ಮನಸ್ಸಿಗೆ ಯಾತನೆಯನ್ನುಂಟುಮಾಡುವ ಆ ಮಾತುಗಳನ್ನು ಕೇಳಿದಳು.

15004012a ತತಃ ಪಂಚದಶೇ ವರ್ಷೇ ಸಮತೀತೇ ನರಾಧಿಪಃ।
15004012c ರಾಜಾ ನಿರ್ವೇದಮಾಪೇದೇ ಭೀಮವಾಗ್ಬಾಣಪೀಡಿತಃ।।

ಹಾಗೆ ಹದಿನೈದು ವರ್ಷಗಳು ಕಳೆದುಹೋದವು. ರಾಜಾ ನರಾಧಿಪ ಧೃತರಾಷ್ಟ್ರನು ಭೀಮನ ವಾಗ್ಬಾಣಗಳಿಂದ ಅತ್ಯಂತ ಪೀಡಿತನಾಗಿದ್ದನು.

15004013a ನಾನ್ವಬುಧ್ಯತ ತದ್ರಾಜಾ ಕುಂತೀಪುತ್ರೋ ಯುಧಿಷ್ಠಿರಃ।
15004013c ಶ್ವೇತಾಶ್ವೋ ವಾಥ ಕುಂತೀ ವಾ ದ್ರೌಪದೀ ವಾ ಯಶಸ್ವಿನೀ।।

ರಾಜಾ ಕುಂತೀಪುತ್ರ ಯುಧಿಷ್ಠಿರನಿಗಾಗಲೀ, ಶ್ವೇತಾಶ್ವ ಅರ್ಜುನನಿಗಾಗಲೀ, ಕುಂತಿಗಾಗಲೀ, ಅಥವಾ ಯಶಸ್ವಿನೀ ದ್ರೌಪದಿಗಾಗಲೀ ಈ ವಿಷಯದ ಅರಿವೇ ಇರಲಿಲ್ಲ.

15004014a ಮಾದ್ರೀಪುತ್ರೌ ಚ ಭೀಮಸ್ಯ ಚಿತ್ತಜ್ಞಾವನ್ವಮೋದತಾಮ್।
15004014c ರಾಜ್ಞಸ್ತು ಚಿತ್ತಂ ರಕ್ಷಂತೌ ನೋಚತುಃ ಕಿಂ ಚಿದಪ್ರಿಯಮ್।।

ಮಾದ್ರೀಪುತ್ರರಿಬ್ಬರೂ ಕೂಡ ಭೀಮನ ಮನಸ್ಸನ್ನು ತಿಳಿಯದೇ ರಾಜ ಧೃತರಾಷ್ಟ್ರನ ಮನಸ್ಸಿಗೆ ಅನುಕೂಲರಾಗಿಯೇ ಇದ್ದರು. ಅವನ ಮನಸ್ಸು ಖೇದಗೊಳ್ಳದಂತೆ ರಕ್ಷಿಸುತ್ತಾ ಅವನಿಗೆ ಅಪ್ರಿಯವಾದ ಏನನ್ನೂ ಮಾಡುತ್ತಿರಲಿಲ್ಲ.

15004015a ತತಃ ಸಮಾನಯಾಮಾಸ ಧೃತರಾಷ್ಟ್ರಃ ಸುಹೃಜ್ಜನಮ್।
15004015c ಬಾಷ್ಪಸಂದಿಗ್ಧಮತ್ಯರ್ಥಮಿದಮಾಹ ವಚೋ ಭೃಶಮ್।।

ಆಗ ಧೃತರಾಷ್ಟ್ರನು ತನ್ನ ಮಿತ್ರರನ್ನು ಕರೆಯಿಸಿ ಕಂಬನಿದುಂಬಿದ ಕಣ್ಣುಗಳಿಂದ ಕೂಡಿ ಗದ್ಗದ ಧ್ವನಿಯಲ್ಲಿ ಅವರೊಡನೆ ಹೀಗೆ ಹೇಳಿದನು.

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಭೀಮಾಪನಯೇ ಚತುರ್ಥೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಭೀಮಾಪನಯ ಎನ್ನುವ ನಾಲ್ಕನೇ ಅಧ್ಯಾಯವು.