002: ಧೃತರಾಷ್ಟ್ರಶುಶ್ರೂಷಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 2

ಸಾರ

ಯುಧಿಷ್ಠಿರನು ತಮ್ಮಂದಿರೊಡನೆ ಧೃತರಾಷ್ಟ್ರ-ಗಾಂಧಾರಿಯರಿಗೆ ಪುತ್ರಶ್ರಾದ್ಧಗಳಿಗೆ ಬೇಕಾದಷ್ಟು ಧನವನ್ನಿತ್ತು ಸೇವೆಗೈದುದು (1-13).

15002001 ವೈಶಂಪಾಯನ ಉವಾಚ।
15002001a ಏವಂ ಸಂಪೂಜಿತೋ ರಾಜಾ ಪಾಂಡವೈರಂಬಿಕಾಸುತಃ।
15002001c ವಿಜಹಾರ ಯಥಾಪೂರ್ವಮೃಷಿಭಿಃ ಪರ್ಯುಪಾಸಿತಃ।।

ವೈಶಂಪಾಯನನು ಹೇಳಿದನು: “ಹೀಗೆ ಪಾಂಡವರಿಂದ ಸಂಪೂಜಿತನಾದ ರಾಜಾ ಅಂಬಿಕಾಸುತನು ಮೊದಲಿನಂತೆಯೇ ಋಷಿಗಳ ಮಧ್ಯದಲ್ಲಿ ಕಾಲಕಳೆಯುತ್ತಿದ್ದನು.

15002002a ಬ್ರಹ್ಮದೇಯಾಗ್ರಹಾರಾಂಶ್ಚ ಪ್ರದದೌ ಸ ಕುರೂದ್ವಹಃ।
15002002c ತಚ್ಚ ಕುಂತೀಸುತೋ ರಾಜಾ ಸರ್ವಮೇವಾನ್ವಮೋದತ।।

ಆ ಕುರೂದ್ವಹನು ಬ್ರಾಹ್ಮಣರಿಗೆ ಅಗ್ರಹಾರಗಳನ್ನು ದಾನವನ್ನಾಗಿತ್ತನು. ಅದರಲ್ಲಿಯೂ ಕುಂತೀಸುತ ರಾಜನು ಎಲ್ಲವನ್ನೂ ಅನುಮೋದಿಸುತ್ತಿದ್ದನು.

15002003a ಆನೃಶಂಸ್ಯಪರೋ ರಾಜಾ ಪ್ರೀಯಮಾಣೋ ಯುಧಿಷ್ಠಿರಃ।
15002003c ಉವಾಚ ಸ ತದಾ ಭ್ರಾತೄನಮಾತ್ಯಾಂಶ್ಚ ಮಹೀಪತಿಃ।।

ಅಹಿಂಸಾಪರನಾದ ಮಹೀಪತಿ ರಾಜಾ ಯುಧಿಷ್ಠಿರನು ಪ್ರೀತಿಯಿಂದ ಸದಾ ತನ್ನ ಸಹೋದರರು ಮತ್ತು ಅಮಾತ್ಯರಿಗೆ ಹೀಗೆ ಹೇಳುತ್ತಿದ್ದನು:

15002004a ಮಯಾ ಚೈವ ಭವದ್ಭಿಶ್ಚ ಮಾನ್ಯ ಏಷ ನರಾಧಿಪಃ।
15002004c ನಿದೇಶೇ ಧೃತರಾಷ್ಟ್ರಸ್ಯ ಯಃ ಸ್ಥಾಸ್ಯತಿ ಸ ಮೇ ಸುಹೃತ್।
15002004e ವಿಪರೀತಶ್ಚ ಮೇ ಶತ್ರುರ್ನಿರಸ್ಯಶ್ಚ ಭವೇನ್ನರಃ।।

“ಈ ನರಾಧಿಪನು ನನಗೆ ಮತ್ತು ನಿಮಗೆ ಮಾನನೀಯನಾಗಿದ್ದಾನೆ. ಧೃತರಾಷ್ಟ್ರನ ನಿರ್ದೇಶನದಂತೆ ಯಾರಿರುತ್ತಾರೋ ಅವರೇ ನನಗೆ ಮಿತ್ರರು. ಅವನಿಗೆ ವಿಪರೀತನಾಗಿರುವವನು ನನಗೆ ಶತ್ರುವೂ ಹೌದು ಮತ್ತು ಅಂಥಹವನು ಶಿಕ್ಷಾರ್ಹನೂ ಆಗುವನು.

15002005a ಪರಿದೃಷ್ಟೇಷು ಚಾಹಃಸು ಪುತ್ರಾಣಾಂ ಶ್ರಾದ್ಧಕರ್ಮಣಿ।
15002005c ದದಾತು ರಾಜಾ ಸರ್ವೇಷಾಂ ಯಾವದಸ್ಯ ಚಿಕೀರ್ಷಿತಮ್।।

ಮಕ್ಕಳ ಶ್ರಾದ್ಧಕರ್ಮಗಳನ್ನು ಮಾಡಲು ಅವನು ಬಯಸಿದಾಗಲೆಲ್ಲಾ ರಾಜನು ಏನನ್ನು ಇಚ್ಛಿಸುವನೋ ಅವೆಲ್ಲವನ್ನೂ ಒದಗಿಸಿಕೊಡಬೇಕು!”

15002006a ತತಃ ಸ ರಾಜಾ ಕೌರವ್ಯೋ ಧೃತರಾಷ್ಟ್ರೋ ಮಹಾಮನಾಃ।
15002006c ಬ್ರಾಹ್ಮಣೇಭ್ಯೋ ಮಹಾರ್ಹೇಭ್ಯೋ ದದೌ ವಿತ್ತಾನ್ಯನೇಕಶಃ।।

ಆಗ ರಾಜಾ ಕೌರವ್ಯ ಮಹಾಮನಸ್ವಿ ಧೃತರಾಷ್ಟ್ರನು ಬ್ರಾಹ್ಮಣರಿಗೆ ಮಹಾರ್ಹವಾದ ಬಹಳಷ್ಟು ವಿತ್ತವನ್ನು ದಾನವನ್ನಾಗಿತ್ತನು.

15002007a ಧರ್ಮರಾಜಶ್ಚ ಭೀಮಶ್ಚ ಸವ್ಯಸಾಚೀ ಯಮಾವಪಿ।
15002007c ತತ್ಸರ್ವಮನ್ವವರ್ತಂತ ಧೃತರಾಷ್ಟ್ರವ್ಯಪೇಕ್ಷಯಾ।।

ಧರ್ಮರಾಜ, ಭೀಮ, ಸವ್ಯಸಾಚೀ ಮತ್ತು ಯಮಳರು ಅವೆಲ್ಲ ಸಮಯಗಳಲ್ಲಿ ಧೃತರಾಷ್ಟ್ರನಿಗೆ ಸಂತೋಷವನ್ನುಂಟುಮಾಡಲು ಅವನನ್ನು ಅನುಸರಿಸುತ್ತಿದ್ದರು.

15002008a ಕಥಂ ನು ರಾಜಾ ವೃದ್ಧಃ ಸನ್ಪುತ್ರಶೋಕಸಮಾಹತಃ।
15002008c ಶೋಕಮಸ್ಮತ್ಕೃತಂ ಪ್ರಾಪ್ಯ ನ ಮ್ರಿಯೇತೇತಿ ಚಿಂತ್ಯತೇ।।
15002009a ಯಾವದ್ಧಿ ಕುರುಮುಖ್ಯಸ್ಯ ಜೀವತ್ಪುತ್ರಸ್ಯ ವೈ ಸುಖಮ್।
15002009c ಬಭೂವ ತದವಾಪ್ನೋತು ಭೋಗಾಂಶ್ಚೇತಿ ವ್ಯವಸ್ಥಿತಾಃ।।

“ನಾವೇ ತಂದುಕೊಟ್ಟ ಪುತ್ರಶೋಕದಿಂದ ಪೀಡಿತನಾದ ಈ ವೃದ್ಧ ರಾಜನು ಇನ್ನೂ ನಾಶವಾಗದೇ ಹೇಗಿದ್ದಾನೆ? ಅವನ ಪುತ್ರರು ಜೀವಿಸಿರುವಾಗ ಈ ಕುರುಮುಖ್ಯನು ಯಾವ ಸುಖವನ್ನು ಅನುಭವಿಸುತ್ತಿದ್ದನೋ ಅದೇ ಸುಖೋಪಭೊಗಗಳನ್ನು ಈಗಲೂ ಪಡೆದುಕೊಂಡಿರಲಿ!” ಎಂದು ಅವರು ಯೋಚಿಸುತ್ತಿದ್ದರು.

15002010a ತತಸ್ತೇ ಸಹಿತಾಃ ಸರ್ವೇ ಭ್ರಾತರಃ ಪಂಚ ಪಾಂಡವಾಃ।
15002010c ತಥಾಶೀಲಾಃ ಸಮಾತಸ್ಥುರ್ಧೃತರಾಷ್ಟ್ರಸ್ಯ ಶಾಸನೇ।।

ಹಾಗೆ ಶೀಲವಂತರಾದ ಪಂಚ ಪಾಂಡವ ಸಹೋದರರೆಲ್ಲರೂ ಧೃತರಾಷ್ಟ್ರನ ಶಾಸನದಲ್ಲಿಯೇ ನಡೆದುಕೊಂಡಿದ್ದರು.

15002011a ಧೃತರಾಷ್ಟ್ರಶ್ಚ ತಾನ್ವೀರಾನ್ವಿನೀತಾನ್ವಿನಯೇ ಸ್ಥಿತಾನ್।
15002011c ಶಿಷ್ಯವೃತ್ತೌ ಸ್ಥಿತಾನ್ನಿತ್ಯಂ ಗುರುವತ್ಪರ್ಯಪಶ್ಯತ।।

ಧೃತರಾಷ್ಟ್ರನೂ ಕೂಡ ವಿನೀತರಾಗಿ ವಿನಯದಿಂದಿರುತ್ತಿದ್ದ ಅವರನ್ನು, ನಿತ್ಯವೂ ಶಿಷ್ಯರಂತೆ ನಡೆದುಕೊಳ್ಳುತ್ತಿರುವವರನ್ನು ಗುರುವು ಹೇಗೋ ಹಾಗೆ ಕಾಣುತ್ತಿದ್ದನು.

15002012a ಗಾಂಧಾರೀ ಚೈವ ಪುತ್ರಾಣಾಂ ವಿವಿಧೈಃ ಶ್ರಾದ್ಧಕರ್ಮಭಿಃ।
15002012c ಆನೃಣ್ಯಮಗಮತ್ಕಾಮಾನ್ವಿಪ್ರೇಭ್ಯಃ ಪ್ರತಿಪಾದ್ಯ ವೈ।।

ಗಾಂಧಾರಿಯೂ ಕೂಡ ಪುತ್ರರ ವಿವಿಧ ಶ್ರಾದ್ಧ ಕರ್ಮಗಳಲ್ಲಿ ವಿಪ್ರರು ಬಯಸಿದ ದಾನಗಳನ್ನಿತ್ತು ಪುತ್ರಋಣದಿಂದ ಮುಕ್ತಳಾದಳು.

15002013a ಏವಂ ಧರ್ಮಭೃತಾಂ ಶ್ರೇಷ್ಠೋ ಧರ್ಮರಾಜೋ ಯುಧಿಷ್ಠಿರಃ।
15002013c ಭ್ರಾತೃಭಿಃ ಸಹಿತೋ ಧೀಮಾನ್ಪೂಜಯಾಮಾಸ ತಂ ನೃಪಮ್।।

ಈ ರೀತಿ ಧರ್ಮಭೃತರಲ್ಲಿ ಶ್ರೇಷ್ಠ ಧರ್ಮರಾಜ ಧೀಮಂತ ಯುಧಿಷ್ಠಿರನು ಸಹೋದರರೊಂದಿಗೆ ಆ ನೃಪನನ್ನು ಪೂಜಿಸಿಕೊಂಡಿದ್ದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರಶುಶ್ರೂಷೇ ದ್ವಿತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರಶುಶ್ರೂಷ ಎನ್ನುವ ಎರಡನೇ ಅಧ್ಯಾಯವು.