001: ಧೃತರಾಷ್ಟ್ರಶುಶ್ರೂಷಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 1

ಸಾರ

ಪುತ್ರವಿಹೀನ ಧೃತರಾಷ್ಟ್ರನನ್ನು ನೋಯಿಸಬಾರದೆಂಬ ಯುಧಿಷ್ಠಿರನ ಶಾಸನದಂತೆ ಭೀಮಸೇನನನ್ನು ಬಿಟ್ಟು ಬೇರೆ ಎಲ್ಲ ಪಾಂಡವರೂ, ಕುಂತಿ ಮತ್ತು ಇತರ ಕುರು ಸ್ತ್ರೀಯರೂ ಧೃತರಾಷ್ಟ್ರ-ಗಾಂಧಾರಿಯರ ಸೇವೆಗೈದುದು; ಯುದ್ಧ ಮುಗಿದು 15 ವರ್ಷಗಳು ಕಳೆದುದು (1-25).

15001001 ಜನಮೇಜಯ ಉವಾಚ।
15001001a ಪ್ರಾಪ್ಯ ರಾಜ್ಯಂ ಮಹಾಭಾಗಾಃ ಪಾಂಡವಾ ಮೇ ಪಿತಾಮಹಾಃ।
15001001c ಕಥಮಾಸನ್ಮಹಾರಾಜೇ ಧೃತರಾಷ್ಟ್ರೇ ಮಹಾತ್ಮನಿ।।

ಜನಮೇಜಯನು ಹೇಳಿದನು: “ನನ್ನ ಪಿತಾಮಹ ಮಹಾಭಾಗ್ಯಶಾಲೀ ಪಾಂಡವರು ರಾಜ್ಯವನ್ನು ಪಡೆದುಕೊಂಡ ನಂತರ ಮಹಾತ್ಮ ಮಹಾರಾಜ ಧೃತರಾಷ್ಟ್ರನೊಡನೆ ಹೇಗಿದ್ದರು?

15001002a ಸ ಹಿ ರಾಜಾ ಹತಾಮಾತ್ಯೋ ಹತಪುತ್ರೋ ನಿರಾಶ್ರಯಃ।
15001002c ಕಥಮಾಸೀದ್ಧತೈಶ್ವರ್ಯೋ ಗಾಂಧಾರೀ ಚ ಯಶಸ್ವಿನೀ।।

ಆ ರಾಜನಾದರೋ ಅಮಾತ್ಯರನ್ನು ಮತ್ತು ಪುತ್ರರನ್ನು ಕಳೆದುಕೊಂಡು ನಿರಾಶ್ರಯನಾಗಿದ್ದನು. ಯಶಸ್ವಿನೀ ಗಾಂಧಾರಿಯು ಐಶ್ವರ್ಯವನ್ನು ಕಳೆದುಕೊಂಡು ಹೇಗಿದ್ದಳು?

15001003a ಕಿಯಂತಂ ಚೈವ ಕಾಲಂ ತೇ ಪಿತರೋ ಮಮ ಪೂರ್ವಕಾಃ।
15001003c ಸ್ಥಿತಾ ರಾಜ್ಯೇ ಮಹಾತ್ಮಾನಸ್ತನ್ಮೇ ವ್ಯಾಖ್ಯಾತುಮರ್ಹಸಿ।।

ನನ್ನ ಪೂರ್ವಪಿತಾಮಹರು ಎಷ್ಟುಕಾಲ ರಾಜ್ಯವನ್ನಾಳಿದರು? ಮಹಾತ್ಮನ್! ಇದನ್ನು ನನಗೆ ಹೇಳಬೇಕು!”

15001004 ವೈಶಂಪಾಯನ ಉವಾಚ।
15001004a ಪ್ರಾಪ್ಯ ರಾಜ್ಯಂ ಮಹಾತ್ಮಾನಃ ಪಾಂಡವಾ ಹತಶತ್ರವಃ।
15001004c ಧೃತರಾಷ್ಟ್ರಂ ಪುರಸ್ಕೃತ್ಯ ಪೃಥಿವೀಂ ಪರ್ಯಪಾಲಯನ್।।

ವೈಶಂಪಾಯನನು ಹೇಳಿದನು: “ಶತ್ರುಗಳನ್ನು ಸಂಹರಿಸಿ ರಾಜ್ಯವನ್ನು ಪಡೆದುಕೊಂಡ ಮಹಾತ್ಮ ಪಾಂಡವರು ಧೃತರಾಷ್ಟ್ರನನ್ನೇ ಮುಂದೆಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದರು.

15001005a ಧೃತರಾಷ್ಟ್ರಮುಪಾತಿಷ್ಠದ್ವಿದುರಃ ಸಂಜಯಸ್ತಥಾ।
15001005c ಯುಯುತ್ಸುಶ್ಚಾಪಿ ಮೇಧಾವೀ ವೈಶ್ಯಾಪುತ್ರಃ ಸ ಕೌರವಃ।।

ವಿದುರ, ಸಂಜಯ ಮತ್ತು ಆ ವೈಶ್ಯಾಪುತ್ರ ಕೌರವ ಮೇಧಾವೀ ಯುಯುತ್ಸುವೂ ಕೂಡ ಧೃತರಾಷ್ಟ್ರನ ಸೇವೆಗೈಯುತ್ತಿದ್ದರು.

15001006a ಪಾಂಡವಾಃ ಸರ್ವಕಾರ್ಯಾಣಿ ಸಂಪೃಚ್ಚಂತಿ ಸ್ಮ ತಂ ನೃಪಮ್।
15001006c ಚಕ್ರುಸ್ತೇನಾಭ್ಯನುಜ್ಞಾತಾ ವರ್ಷಾಣಿ ದಶ ಪಂಚ ಚ।।

ಪಾಂಡವರು ಸರ್ವಕಾರ್ಯಗಳಲ್ಲಿಯೂ ಆ ನೃಪನ ಸಲಹೆಯನ್ನು ಕೇಳುತ್ತಿದ್ದರು ಮತ್ತು ಅವನ ಅನುಜ್ಞೆಯಂತೆಯೇ ಎಲ್ಲವನ್ನೂ ಮಾಡುತ್ತಿದ್ದರು. ಹೀಗೆ ಅವರು ಹದಿನೈದು ವರ್ಷಗಳನ್ನು ಕಳೆದರು.

15001007a ಸದಾ ಹಿ ಗತ್ವಾ ತೇ ವೀರಾಃ ಪರ್ಯುಪಾಸಂತ ತಂ ನೃಪಮ್।
15001007c ಪಾದಾಭಿವಂದನಂ ಕೃತ್ವಾ ಧರ್ಮರಾಜಮತೇ ಸ್ಥಿತಾಃ।
15001007e ತೇ ಮೂರ್ಧ್ನಿ ಸಮುಪಾಘ್ರಾತಾಃ ಸರ್ವಕಾರ್ಯಾಣಿ ಚಕ್ರಿರೇ।।

ಧರ್ಮರಾಜನ ಅಭಿಪ್ರಾಯದಂತೆ ನಿತ್ಯವೂ ಆ ವೀರರು ಹೋಗಿ ನೃಪನಿಗೆ ಪಾದಾಭಿವಂದನೆಯನ್ನು ಮಾಡಿ ಅವನ ಸೇವೆಗೈಯುತ್ತಿದ್ದರು. ಧೃತರಾಷ್ಟ್ರನೂ ಕೂಡ ಅವರನ್ನು ಹಿಡಿದೆತ್ತಿ ನೆತ್ತಿಯನ್ನು ಆಘ್ರಾಣಿಸುತ್ತಿದ್ದನು. ಹೀಗೆ ಅವರು ಅವನ ಎಲ್ಲ ಕಾರ್ಯಗಳನ್ನೂ ಮಾಡುತ್ತಿದ್ದರು.

15001008a ಕುಂತಿಭೋಜಸುತಾ ಚೈವ ಗಾಂಧಾರೀಮನ್ವವರ್ತತ।
15001008c ದ್ರೌಪದೀ ಚ ಸುಭದ್ರಾ ಚ ಯಾಶ್ಚಾನ್ಯಾಃ ಪಾಂಡವಸ್ತ್ರಿಯಃ।
15001008e ಸಮಾಂ ವೃತ್ತಿಮವರ್ತಂತ ತಯೋಃ ಶ್ವಶ್ರ್ವೋರ್ಯಥಾವಿಧಿ।।

ಕುಂತಿಭೋಜನ ಮಗಳೂ ಕೂಡ ಗಾಂಧಾರಿಯ ಸೇವೆಯಲ್ಲಿ ನಿರತಳಾಗಿದ್ದಳು. ದ್ರೌಪದೀ, ಸುಭದ್ರಾ ಮತ್ತು ಅನ್ಯ ಪಾಂಡವಸ್ತ್ರೀಯರೂ ಕೂಡ ತಮ್ಮ ಇಬ್ಬರೂ ಅತ್ತೆಯಂದಿರನ್ನೂ ಸಮಾನ ಭಾವದಿಂದ ಕಾಣುತ್ತಾ ಯಥಾವಿಧಿಯಾಗಿ ಅವರ ಸೇವೆ ಗೈಯುತ್ತಿದ್ದರು.

15001009a ಶಯನಾನಿ ಮಹಾರ್ಹಾಣಿ ವಾಸಾಂಸ್ಯಾಭರಣಾನಿ ಚ।
15001009c ರಾಜಾರ್ಹಾಣಿ ಚ ಸರ್ವಾಣಿ ಭಕ್ಷ್ಯಭೋಜ್ಯಾನ್ಯನೇಕಶಃ।
15001009e ಯುಧಿಷ್ಠಿರೋ ಮಹಾರಾಜ ಧೃತರಾಷ್ಟ್ರೇಽಭ್ಯುಪಾಹರತ್।।

ಮಹಾರಾಜ ಯುಧಿಷ್ಠಿರನು ಧೃತರಾಷ್ಟ್ರನಿಗೆ ರಾಜಾರ್ಹವಾದ ಮಹಾಬೆಲೆಬಾಳುವ ಶಯನಗಳನ್ನೂ, ಸರ್ವ ವಸ್ತ್ರಾಭರಣಗಳನ್ನೂ, ಅನೇಕ ಭಕ್ಷ್ಯ-ಭೋಜ್ಯಗಳನ್ನೂ ನೀಡುತ್ತಿದ್ದನು.

15001010a ತಥೈವ ಕುಂತೀ ಗಾಂಧಾರ್ಯಾಂ ಗುರುವೃತ್ತಿಮವರ್ತತ।
15001010c ವಿದುರಃ ಸಂಜಯಶ್ಚೈವ ಯುಯುತ್ಸುಶ್ಚೈವ ಕೌರವಃ।
15001010e ಉಪಾಸತೇ ಸ್ಮ ತಂ ವೃದ್ಧಂ ಹತಪುತ್ರಂ ಜನಾಧಿಪಮ್।।

ಹಾಗೆಯೇ ಕುಂತಿಯೂ ಗುರುಭಾವದಿಂದ ಗಾಂಧಾರಿಯ ಸೇವೆಗೈಯುತ್ತಿದ್ದಳು. ಪುತ್ರರನ್ನು ಕಳೆದುಕೊಂಡ ವೃದ್ಧ ಜನಾಧಿಪನನ್ನು ವಿದುರ, ಸಂಜಯ ಮತ್ತು ಕೌರವ ಯುಯುತ್ಸು ಸೇವೆಗೈಯುತ್ತಿದ್ದರು.

15001011a ಸ್ಯಾಲೋ ದ್ರೋಣಸ್ಯ ಯಶ್ಚೈಕೋ ದಯಿತೋ ಬ್ರಾಹ್ಮಣೋ ಮಹಾನ್।
15001011c ಸ ಚ ತಸ್ಮಿನ್ಮಹೇಷ್ವಾಸಃ ಕೃಪಃ ಸಮಭವತ್ತದಾ।।

ದ್ರೋಣನ ಓರ್ವನೇ ಬಾವನಾದ, ಮಹಾನ್ ಬ್ರಾಹ್ಮಣನ ಪುತ್ರ ಮಹೇಷ್ವಾಸ ಕೃಪನೂ ಕೂಡ ಅವನೊಡನೆ ಸಮಭಾವದಿಂದಿರುತ್ತಿದ್ದನು.

15001012a ವ್ಯಾಸಶ್ಚ ಭಗವಾನ್ನಿತ್ಯಂ ವಾಸಂ ಚಕ್ರೇ ನೃಪೇಣ ಹ।
15001012c ಕಥಾಃ ಕುರ್ವನ್ಪುರಾಣರ್ಷಿರ್ದೇವರ್ಷಿನೃಪರಕ್ಷಸಾಮ್।।

ಭಾಗವಾನ್ ವ್ಯಾಸನೂ ಕೂಡ ನಿತ್ಯವೂ ನೃಪನ ಬಳಿಯೇ ವಾಸವಾಗಿದ್ದುಕೊಂಡು ದೇವರ್ಷಿ-ನೃಪ-ರಾಕ್ಷಸರ ಪುರಾಣ ಕಥೆಗಳನ್ನು ಹೇಳುತ್ತಿದ್ದನು.

15001013a ಧರ್ಮಯುಕ್ತಾನಿ ಕಾರ್ಯಾಣಿ ವ್ಯವಹಾರಾನ್ವಿತಾನಿ ಚ।
15001013c ಧೃತರಾಷ್ಟ್ರಾಭ್ಯನುಜ್ಞಾತೋ ವಿದುರಸ್ತಾನ್ಯಕಾರಯತ್।।

ವಿದುರನು ಧೃತರಾಷ್ಟ್ರನ ಆಜ್ಞೆಯನ್ನನುಸರಿಸಿ ಧರ್ಮಯುಕ್ತವಾದ ವ್ಯಾವಹಾರಿಕ ಕಾರ್ಯಗಳನ್ನು ಮಾಡಿಸುತ್ತಿದ್ದನು.

15001014a ಸಾಮಂತೇಭ್ಯಃ ಪ್ರಿಯಾಣ್ಯಸ್ಯ ಕಾರ್ಯಾಣಿ ಸುಗುರೂಣ್ಯಪಿ।
15001014c ಪ್ರಾಪ್ಯಂತೇಽರ್ಥೈಃ ಸುಲಘುಭಿಃ ಪ್ರಭಾವಾದ್ವಿದುರಸ್ಯ ವೈ।।

ವಿದುರನ ಉತ್ತಮ ಗುಣ-ನೀತಿಗಳಿಂದಾಗಿ ಸಾಮಂತರೂ ಕೂಡ ಧೃತರಾಷ್ಟ್ರನಿಗೆ ಪ್ರಿಯವಾದ ಕಾರ್ಯಗಳನ್ನು ಸ್ವಲ್ಪವೇ ವೆಚ್ಚದಲ್ಲಿ ಮಾಡಿಮುಗಿಸುತ್ತಿದ್ದರು.

15001015a ಅಕರೋದ್ಬಂಧಮೋಕ್ಷಾಂಶ್ಚ ವಧ್ಯಾನಾಂ ಮೋಕ್ಷಣಂ ತಥಾ।
15001015c ನ ಚ ಧರ್ಮಾತ್ಮಜೋ ರಾಜಾ ಕದಾ ಚಿತ್ಕಿಂ ಚಿದಬ್ರವೀತ್।।

ಧೃತರಾಷ್ಟ್ರನು ಬಂಧನದಲ್ಲಿದ್ದವರನ್ನು ಬಿಡುಗಡೆ ಮಾಡಿಸುತ್ತಿದ್ದನು ಮತ್ತು ಮರಣದಂಡನೆಗೆ ಗುರಿಯಾದವರಿಗೆ ಪ್ರಾಣದಾನಮಾಡುತ್ತಿದ್ದನು. ಆದರೂ ರಾಜಾ ಧರ್ಮಸುತನು ಯಾವಾಗಲೂ ಏನನ್ನೂ ಹೇಳುತ್ತಿರಲಿಲ್ಲ.

15001016a ವಿಹಾರಯಾತ್ರಾಸು ಪುನಃ ಕುರುರಾಜೋ ಯುಧಿಷ್ಠಿರಃ।
15001016c ಸರ್ವಾನ್ಕಾಮಾನ್ಮಹಾತೇಜಾಃ ಪ್ರದದಾವಂಬಿಕಾಸುತೇ।।

ಮಹಾತೇಜಸ್ವೀ ಕುರುರಾಜ ಯುಧಿಷ್ಠಿರನು ಧೃತರಾಷ್ಟ್ರನ ವಿಹಾರಕ್ಕಾಗಿ ಅವನು ಅಪೇಕ್ಷಿಸಿದ ಸರ್ವ ಕಾಮನಾವಸ್ತುಗಳನ್ನೂ ಒದಗಿಸಿಕೊಡುತ್ತಿದ್ದನು.

15001017a ಆರಾಲಿಕಾಃ ಸೂಪಕಾರಾ ರಾಗಖಾಂಡವಿಕಾಸ್ತಥಾ।
15001017c ಉಪಾತಿಷ್ಠಂತ ರಾಜಾನಂ ಧೃತರಾಷ್ಟ್ರಂ ಯಥಾ ಪುರಾ।।

ಹಿಂದಿನಂತೆ ಆರಾಲಿಕರು1, ಸೂಪಕಾರರು2 ಮತ್ತು ರಾಗಖಾಂಡವಿಕರು3 ರಾಜ ಧೃತರಾಷ್ಟ್ರನ ಜೊತೆಯಲ್ಲಿಯೇ ಇರುತ್ತಿದ್ದರು.

15001018a ವಾಸಾಂಸಿ ಚ ಮಹಾರ್ಹಾಣಿ ಮಾಲ್ಯಾನಿ ವಿವಿಧಾನಿ ಚ।
15001018c ಉಪಾಜಹ್ರುರ್ಯಥಾನ್ಯಾಯಂ ಧೃತರಾಷ್ಟ್ರಸ್ಯ ಪಾಂಡವಾಃ।।

ಪಾಂಡವರು ಯಥಾನ್ಯಾಯವಾಗಿ ಧೃತರಾಷ್ಟ್ರನಿಗೆ ಬಹುಮೂಲ್ಯವಾದ ವಸ್ತ್ರಗಳನ್ನೂ, ವಿವಿಧ ಮಾಲೆಗಳನ್ನೂ ತಂದುಕೊಡುತ್ತಿದ್ದರು.

15001019a ಮೈರೇಯಂ ಮಧು ಮಾಂಸಾನಿ ಪಾನಕಾನಿ ಲಘೂನಿ ಚ।
15001019c ಚಿತ್ರಾನ್ಭಕ್ಷ್ಯವಿಕಾರಾಂಶ್ಚ ಚಕ್ರುರಸ್ಯ ಯಥಾ ಪುರಾ।।

ಹಿಂದಿನಂತೆಯೇ ಪಾಂಡವರು ಧೃತರಾಷ್ಟ್ರನಿಗೆ ಮೈರೇಯ4ಗಳನ್ನೂ, ಮಧು-ಮಾಂಸಗಳನ್ನೂ, ಲಘು ಪಾನಕಗಳನ್ನೂ, ವಿಚಿತ್ರ ಭಕ್ಷ್ಯಗಳನ್ನೂ ಒದಗಿಸುತ್ತಿದ್ದರು.

15001020a ಯೇ ಚಾಪಿ ಪೃಥಿವೀಪಾಲಾಃ ಸಮಾಜಗ್ಮುಃ ಸಮಂತತಃ।
15001020c ಉಪಾತಿಷ್ಠಂತ ತೇ ಸರ್ವೇ ಕೌರವೇಂದ್ರಂ ಯಥಾ ಪುರಾ।।

ಹಿಂದಿನಂತೆಯೇ ಸುತ್ತಲಿನ ಪೃಥಿವೀಪಾಲರು ಎಲ್ಲರೂ ಬಂದು ಕೌರವೇಂದ್ರ ಧೃತರಾಷ್ಟ್ರನಿಗೆ ಗೌರವವನ್ನು ಸಲ್ಲಿಸುತ್ತಿದ್ದರು.

15001021a ಕುಂತೀ ಚ ದ್ರೌಪದೀ ಚೈವ ಸಾತ್ವತೀ ಚೈವ ಭಾಮಿನೀ।
15001021c ಉಲೂಪೀ ನಾಗಕನ್ಯಾ ಚ ದೇವೀ ಚಿತ್ರಾಂಗದಾ ತಥಾ।।
15001022a ಧೃಷ್ಟಕೇತೋಶ್ಚ ಭಗಿನೀ ಜರಾಸಂಧಸ್ಯ ಚಾತ್ಮಜಾ।
15001022c ಕಿಂಕರಾಃ ಸ್ಮೋಪತಿಷ್ಠಂತಿ ಸರ್ವಾಃ ಸುಬಲಜಾಂ ತಥಾ।।

ಕುಂತೀ, ದ್ರೌಪದೀ, ಭಾಮಿನೀ ಸಾತ್ವತೀ (ಸುಭದ್ರಾ), ನಾಗಕನ್ಯೆ ಉಲೂಪಿ, ದೇವೀ ಚಿತ್ರಾಂಗದಾ, ಧೃಷ್ಟಕೇತುವಿನ ತಂಗಿ5, ಜರಾಸಂಧ ಪುತ್ರಿ6 ಇವರು ಎಲ್ಲರೂ ಸುಬಲನ ಪುತ್ರಿ ಗಾಂಧಾರಿಗೆ ಸೇವಕಿಯರಂತೆಯೇ ಸೇವೆಸಲ್ಲಿಸುತ್ತಿದ್ದರು.

15001023a ಯಥಾ ಪುತ್ರವಿಯುಕ್ತೋಽಯಂ ನ ಕಿಂ ಚಿದ್ದುಃಖಮಾಪ್ನುಯಾತ್।
15001023c ಇತಿ ರಾಜಾನ್ವಶಾದ್ಭ್ರಾತೄನ್ನಿತ್ಯಮೇವ ಯುಧಿಷ್ಠಿರಃ।।

“ಪುತ್ರರಿಂದ ವಿಹೀನನಾಗಿರುವ ಇವನಿಗೆ ಸ್ವಲ್ಪವೂ ದುಃಖವನ್ನು ತರಬಾರದು!” ಎಂದು ರಾಜಾ ಯುಧಿಷ್ಠಿರನು ನಿತ್ಯವೂ ತನ್ನ ಸಹೋದರರಿಗೆ ಆಜ್ಞೆಮಾಡುತ್ತಿದ್ದನು.

15001024a ಏವಂ ತೇ ಧರ್ಮರಾಜಸ್ಯ ಶ್ರುತ್ವಾ ವಚನಮರ್ಥವತ್।
15001024c ಸವಿಶೇಷಮವರ್ತಂತ ಭೀಮಮೇಕಂ ವಿನಾ ತದಾ।।

ಅರ್ಥವತ್ತಾದ ಧರ್ಮರಾಜನ ಈ ಮಾತನ್ನು, ಭೀಮನೊಬ್ಬನನ್ನು ಬಿಟ್ಟು, ಎಲ್ಲರೂ ಪಾಲಿಸುತ್ತಿದ್ದರು.

15001025a ನ ಹಿ ತತ್ತಸ್ಯ ವೀರಸ್ಯ ಹೃದಯಾದಪಸರ್ಪತಿ।
15001025c ಧೃತರಾಷ್ಟ್ರಸ್ಯ ದುರ್ಬುದ್ಧೇರ್ಯದ್ವೃತ್ತಂ ದ್ಯೂತಕಾರಿತಮ್।।

ಧೃತರಾಷ್ಟ್ರನ ದುರ್ಬುದ್ಧಿಯಿಂದ ನಡೆದ ದ್ಯೂತವು ಆ ವೀರ ಭೀಮಸೇನನ ಹೃದಯದಿಂದ ಅಳಿದುಹೋಗಿರಲೇ ಇಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರಶುಶ್ರೂಷೇ ಪ್ರಥಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರಶುಶ್ರೂಷ ಎನ್ನುವ ಮೊದಲನೇ ಅಧ್ಯಾಯವು.


  1. ಆರಾಲಿಕಾಃ – ಅಡಿಗೆಯವರು; ಆರಾ ಎಂಬ ಶಬ್ಧದಿಂದ ಕಾಯಿ-ಪಲ್ಯೆಗಳನ್ನು ಕತ್ತರಿಸುವವರು, ತರಕಾರಿಗಳನ್ನು ಹೆಚ್ಚುವವರು ಎಂದರ್ಥ ↩︎

  2. ಸೂಪಕಾರರು ಎಂದರೆ ಸಾರು-ತೊವ್ವೆ ಮುಂತಾದುವನ್ನು ಮಾಡುವವರು ↩︎

  3. ರಾಗಖಂಡವಿಕಾಃ – ರಾಗಖಂಡವೆಂಬ ಭಕ್ಷ್ಯ ಅಥವಾ ಭಕ್ಷ್ಯಗಳನ್ನು ತಯಾರಿಸುವವರು ↩︎

  4. ಕಬ್ಬಿನರಸ, ಪುಷ್ಪರಸ ಇತ್ಯಾದಿಗಳಿಂದ ತಯಾರಿಸಿದ ಮದ್ಯ ↩︎

  5. ಯುಧಿಷ್ಠಿರನ ಪತ್ನಿ ↩︎

  6. ಸಹದೇವನ ಪತ್ನಿ ↩︎