ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 96
ಸಾರ
ಮುಂಗುಸಿಯ ರೂಪದಲ್ಲಿದ್ದವನು ಯಾರೆಂದು ಜನಮೇಜಯನು ಕೇಳಲು ವೈಶಂಪಾಯನನು ಕ್ರೋಧನಿಗೆ ಮುಂಗುಸಿಯಾಗೆಂಬ ಶಾಪವು ದೊರಕಿದ ಮತ್ತು ಧರ್ಮನನ್ನು ನಿಂದಿಸಿದಾಗ ಸ್ವರೂಪವನ್ನು ಪಡೆದುಕೊಳ್ಳುವನೆಂಬ ಆಶೀರ್ವಾದಗಳ ಕಥೆಯನ್ನು ಹೇಳಿದುದು (1-15).
14096001 ಜನಮೇಜಯ ಉವಾಚ
14096001a ಕೋಽಸೌ ನಕುಲರೂಪೇಣ ಶಿರಸಾ ಕಾಂಚನೇನ ವೈ।
14096001c ಪ್ರಾಹ ಮಾನುಷವದ್ವಾಚಮೇತತ್ಪೃಷ್ಟೋ ವದಸ್ವ ಮೇ।।
ಜನಮೇಜಯನು ಹೇಳಿದನು: “ಮನುಷ್ಯನಂತೆ ಮಾತನಾಡಿದ ಕಾಂಚನ ಶಿರವುಳ್ಳ ಮುಂಗುಸಿಯ ರೂಪದಲ್ಲಿದ್ದ ಅವನು ಯಾರು? ಕೇಳುವ ನನಗೆ ಹೇಳು!”
14096002 ವೈಶಂಪಾಯನ ಉವಾಚ
14096002a ಏತತ್ಪೂರ್ವಂ ನ ಪೃಷ್ಟೋಽಹಂ ನ ಚಾಸ್ಮಾಭಿಃ ಪ್ರಭಾಷಿತಮ್।
14096002c ಶ್ರೂಯತಾಂ ನಕುಲೋ ಯೋಽಸೌ ಯಥಾ ವಾಗಸ್ಯ ಮಾನುಷೀ।।
ವೈಶಂಪಾಯನನು ಹೇಳಿದನು: “ಮೊದಲು ನೀನು ನನಗೆ ಇದರ ಕುರಿತು ಕೇಳಲಿಲ್ಲ. ನಾನೂ ಕೂಡ ಅದರ ಕುರಿತು ಹೇಳಲಿಲ್ಲ. ಮನುಷ್ಯನಂತೆ ಮಾತನಾಡಿದ ಆ ಮುಂಗುಸಿಯು ಯಾರೆಂದು ಕೇಳು.
14096003a ಶ್ರಾದ್ಧಂ ಸಂಕಲ್ಪಯಾಮಾಸ ಜಮದಗ್ನಿಃ ಪುರಾ ಕಿಲ।
14096003c ಹೋಮಧೇನುಸ್ತಮಾಗಾಚ್ಚ ಸ್ವಯಂ ಚಾಪಿ ದುದೋಹ ತಾಮ್।।
ಹಿಂದೊಮ್ಮೆ ಜಮದಗ್ನಿಯು ಶ್ರಾದ್ಧದ ಸಂಕಲ್ಪವನ್ನು ಮಾಡಿದನು. ಆಗ ಹೋಮಧೇನುವು ಅವನ ಬಳಿಬರಲು, ಸ್ವಯಂ ಅವನೇ ಅದರ ಹಾಲನ್ನು ಕರೆದನು.
14096004a ತತ್ಕ್ಷೀರಂ ಸ್ಥಾಪಯಾಮಾಸ ನವೇ ಭಾಂಡೇ ದೃಢೇ ಶುಚೌ।
14096004c ತಚ್ಚ ಕ್ರೋಧಃ ಸ್ವರೂಪೇಣ ಪಿಠರಂ ಪರ್ಯವರ್ತಯತ್।।
ಆ ಹಾಲನ್ನು ದೃಢವಾದ ಶುಚಿಯಾದ ಹೊಸ ಪಾತ್ರೆಯಲ್ಲಿ ಇರಿಸಿದನು. ಆ ಪಾತ್ರೆಯಲ್ಲಿ ಕ್ರೋಧನು ಸ್ವರೂಪದಲ್ಲಿ ಪ್ರವೇಶಿಸಿದನು1.
14096005a ಜಿಜ್ಞಾಸುಸ್ತಮೃಷಿಶ್ರೇಷ್ಠಂ ಕಿಂ ಕುರ್ಯಾದ್ವಿಪ್ರಿಯೇ ಕೃತೇ।
14096005c ಇತಿ ಸಂಚಿಂತ್ಯ ದುರ್ಮೇಧಾ ಧರ್ಷಯಾಮಾಸ ತತ್ಪಯಃ।।
ಅಪ್ರಿಯ ಕಾರ್ಯವನ್ನು ಮಾಡಿದರೆ ಆ ಋಷಿಶ್ರೇಷ್ಠನು ಏನು ಮಾಡುತ್ತಾನೆಂದು ತಿಳಿಯಬೇಕು ಎಂದು ಆಲೋಚಿಸಿ ಕ್ರೋಧನು ಆ ಹಾಲನ್ನು ಕೆಡಿಸಿದನು.
14096006a ತಮಾಜ್ಞಾಯ ಮುನಿಃ ಕ್ರೋಧಂ ನೈವಾಸ್ಯ ಚುಕುಪೇ ತತಃ।
14096006c ಸ ತು ಕ್ರೋಧಸ್ತಮಾಹೇದಂ ಪ್ರಾಂಜಲಿರ್ಮೂರ್ತಿಮಾನ್ ಸ್ಥಿತಃ।।
ಕ್ರೋಧನು ಹಾಲನ್ನು ಕೆಡಿಸಿದುದನ್ನು ತಿಳಿದ ಮುನಿಯು ಕ್ರೋಧವಶನಾಗಲು ಕ್ರೋಧನು ಮೂರ್ತಿಮತ್ತನಾಗಿ ಕೈಮುಗಿದು ನಿಂತು ಅವನಿಗೆ ಇದನ್ನು ಹೇಳಿದನು:
14096007a ಜಿತೋಽಸ್ಮೀತಿ ಭೃಗುಶ್ರೇಷ್ಠ ಭೃಗವೋ ಹ್ಯತಿರೋಷಣಾಃ।
14096007c ಲೋಕೇ ಮಿಥ್ಯಾಪ್ರವಾದೋಽಯಂ ಯತ್ತ್ವಯಾಸ್ಮಿ ಪರಾಜಿತಃ।।
“ಭೃಗುಶ್ರೇಷ್ಠ! ನಾನು ನಿನಗೆ ಸೋತಿದ್ದೇನೆ! ಭೃಗುವಂಶದವರು ಅತಿ ಕುಪಿತರು ಎಂಬ ಮಿಥ್ಯ ಅಪರಾಧವು ಲೋಕದಲ್ಲಿತ್ತು. ಆದರೆ ನಾನು ನಿನ್ನಿಂದ ಪರಾಜಿತನಾಗಿದ್ದೇನೆ.
14096008a ಸೋಽಹಂ ತ್ವಯಿ ಸ್ಥಿತೋ ಹ್ಯದ್ಯ ಕ್ಷಮಾವತಿ ಮಹಾತ್ಮನಿ।
14096008c ಬಿಭೇಮಿ ತಪಸಃ ಸಾಧೋ ಪ್ರಸಾದಂ ಕುರು ಮೇ ವಿಭೋ।।
ಮಹಾತ್ಮ! ನಿನ್ನ ಮುಂದೆ ನಿಂತಿರುವ ನನ್ನನ್ನು ಇಂದು ಕ್ಷಮಿಸಬೇಕು. ವಿಭೋ! ಸಾಧೋ! ನಿನ್ನ ಪತಸ್ಸಿಗೆ ನಾನು ಹೆದರಿದ್ದೇನೆ. ನನ್ನ ಮೇಲೆ ಕೃಪೆ ತೋರು!”
14096009 ಜಮದಗ್ನಿರುವಾಚ
14096009a ಸಾಕ್ಷಾದ್ದೃಷ್ಟೋಽಸಿ ಮೇ ಕ್ರೋಧ ಗಚ್ಚ ತ್ವಂ ವಿಗತಜ್ವರಃ।
14096009c ನ ಮಮಾಪಕೃತಂ ತೇಽದ್ಯ ನ ಮನ್ಯುರ್ವಿದ್ಯತೇ ಮಮ।।
ಜಮದಗ್ನಿಯು ಹೇಳಿದನು: “ಕ್ರೋಧ! ನಿನ್ನನ್ನು ಸಾಕ್ಷಾತ್ ನೋಡಿದಂತಾಯಿತು. ನಿಶ್ಚಿಂತನಾಗಿ ನೀನು ಹೋಗು. ಇಂದು ನೀನು ನನಗೇನೂ ಅಪರಾಧವನ್ನೆಸಗಿಲ್ಲ. ನಿನ್ನ ಮೇಲೆ ನನ್ನ ಕೋಪವೂ ಇಲ್ಲ.
14096010a ಯಾನುದ್ದಿಶ್ಯ ತು ಸಂಕಲ್ಪಃ ಪಯಸೋಽಸ್ಯ ಕೃತೋ ಮಯಾ।
14096010c ಪಿತರಸ್ತೇ ಮಹಾಭಾಗಾಸ್ತೇಭ್ಯೋ ಬುಧ್ಯಸ್ವ ಗಮ್ಯತಾಮ್।।
ಯಾರನ್ನು ಉದ್ದೇಶಿಸಿ ಸಂಕಲ್ಪಮಾಡಿ ಈ ಹಾಲನ್ನು ಇರಿಸಿದ್ದೆನೋ ಆ ಮಹಾಭಾಗ ಪಿತೃಗಳ ಬಳಿ ಹೋಗಿ ಅವರಿಗೆ ಇದನ್ನು ತಿಳಿಸು!”
14096011a ಇತ್ಯುಕ್ತೋ ಜಾತಸಂತ್ರಾಸಃ ಸ ತತ್ರಾಂತರಧೀಯತ।
14096011c ಪಿತೄಣಾಮಭಿಷಂಗಾತ್ತು ನಕುಲತ್ವಮುಪಾಗತಃ।।
ಹೀಗೆ ಕೇಳಿದ ಭಯಪೀಡಿತ ಕ್ರೋಧನು ಅಲ್ಲಿಯೇ ಅಂತರ್ಧಾನನಾದನು. ಪಿತೃಗಳ ಶಾಪದಿಂದ ಅವನು ಮುಂಗುಸಿಯಾದನು.
14096012a ಸ ತಾನ್ಪ್ರಸಾದಯಾಮಾಸ ಶಾಪಸ್ಯಾಂತೋ ಭವೇದಿತಿ।
14096012c ತೈಶ್ಚಾಪ್ಯುಕ್ತೋ ಯದಾ ಧರ್ಮಂ ಕ್ಷೇಪ್ಸ್ಯಸೇ ಮೋಕ್ಷ್ಯಸೇ ತದಾ।।
ಶಾಪದ ಅಂತ್ಯವಾಗಲೆಂದು ಅವನು ಅವರ ಕೃಪೆಯನ್ನು ಕೇಳಿದನು. “ಧರ್ಮನನ್ನು ನೀನು ನಿಂದಿಸಿದಾಗ ನಿನಗೆ ಶಾಪದ ವಿಮೋಚನೆಯಾಗುತ್ತದೆ” ಎಂದು ಅವರು ಅವನಿಗೆ ಹೇಳಿದರು.
14096013a ತೈಶ್ಚೋಕ್ತೋ ಯಜ್ಞಿಯಾನ್ದೇಶಾನ್ಧರ್ಮಾರಣ್ಯಾನಿ ಚೈವ ಹ।
14096013c ಜುಗುಪ್ಸನ್ಪರಿಧಾವನ್ಸ ಯಜ್ಞಂ ತಂ ಸಮುಪಾಸದತ್।।
ಅವರು ಹೀಗೆ ಹೇಳಲು ಕ್ರೋಧನು ಜುಗುಪ್ಸೆತಾಳಿ ಯಜ್ಞಪ್ರದೇಶಗಳನ್ನೂ ಧರ್ಮಾರಣ್ಯಗಳನ್ನೂ ಸುತ್ತಾಡಿಕೊಂಡು ಯುಧಿಷ್ಠಿರನ ಯಜ್ಞಕ್ಕೆ ಬಂದು ತಲುಪಿದನು.
14096014a ಧರ್ಮಪುತ್ರಮಥಾಕ್ಷಿಪ್ಯ ಸಕ್ತುಪ್ರಸ್ಥೇನ ತೇನ ಸಃ।
14096014c ಮುಕ್ತಃ ಶಾಪಾತ್ತತಃ ಕ್ರೋಧೋ ಧರ್ಮೋ ಹ್ಯಾಸೀದ್ಯುಧಿಷ್ಠಿರಃ।।
ಸೇರು ಹಿಟ್ಟಿನ ದಾನದ ಮಹಿಮೆಯನ್ನು ಹೇಳಿ ಧರ್ಮಪುತ್ರನ ಯಜ್ಞವನ್ನು ನಿಂದಿಸಿ, ಶಾಪದಿಂದ ಬಿಡುಗಡೆ ಹೊಂದಿ ಕ್ರೋಧ ಧರ್ಮನು ಯುಧಿಷ್ಠಿರನಲ್ಲಿಯೇ ಸೇರಿಹೋದನು.
14096015a ಏವಮೇತತ್ತದಾ ವೃತ್ತಂ ತಸ್ಯ ಯಜ್ಞೇ ಮಹಾತ್ಮನಃ।
14096015c ಪಶ್ಯತಾಂ ಚಾಪಿ ನಸ್ತತ್ರ ನಕುಲೋಽಂತರ್ಹಿತಸ್ತದಾ।।
ಆ ಮಹಾತ್ಮನ ಯಜ್ಞದಲ್ಲಿ ಈ ವೃತ್ತಾಂತವು ನಡೆಯಿತು. ಎಲ್ಲರೂ ನೋಡುತ್ತಿದ್ದಂತೆಯೇ ಅಲ್ಲಿಯೇ ಆ ಮುಂಗುಸಿಯು ಅಂತರ್ಧಾನವಾಯಿತು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ನಕುಲೋಪಾಖ್ಯಾನೇ ಷಟ್ನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ನಕುಲೋಪಾಖ್ಯಾನ ಎನ್ನುವ ತೊಂಭತ್ತಾರನೇ ಅಧ್ಯಾಯವು.
ಇದು ಶ್ರೀ ಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಮೇಧಪರ್ವವು।
ಇತಿ ಶ್ರೀ ಮಹಾಭಾರತೇ ಅಶ್ವಮೇಧಿಕಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಅಶ್ವಮೇಧಿಕಪರ್ವವು।।
ಇದೂವರೆಗಿನ ಒಟ್ಟು ಮಹಾಪರ್ವಗಳು – 14/18, ಉಪಪರ್ವಗಳು-89/100, ಅಧ್ಯಾಯಗಳು-1931/1995, ಶ್ಲೋಕಗಳು-72149/73784
-
ಭಾರತದರ್ಶನದಲ್ಲಿ “ಆ ಪಾತ್ರೆಯಲ್ಲಿ ಧರ್ಮನು ಕ್ರೋಧದ ರೂಪದಿಂದ ಪ್ರವೇಶಿಸಿದನು” ಎಂದಿದೆ. ↩︎