ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 95
ಸಾರ
ಯಜ್ಞಗಳಲ್ಲಿ ಪರಮನಿಶ್ಚಯವು ಹೇಗಾಗುತ್ತದೆ ಎಂದು ಜನಮೇಜಯನು ಕೇಳಲು ವೈಶಂಪಾಯನನು ಅಗಸ್ತ್ಯನ ಯಜ್ಞವನ್ನು ಉದಾಹರಣೆಯನ್ನಾಗಿ ವರ್ಣಿಸಿದುದು (1-36).
14095001 ಜನಮೇಜಯ ಉವಾಚ
14095001a ಧರ್ಮಾಗತೇನ ತ್ಯಾಗೇನ ಭಗವನ್ಸರ್ವಮಸ್ತಿ ಚೇತ್।
14095001c ಏತನ್ಮೇ ಸರ್ವಮಾಚಕ್ಷ್ವ ಕುಶಲೋ ಹ್ಯಸಿ ಭಾಷಿತುಮ್।।
ಜನಮೇಜಯನು ಹೇಳಿದನು: “ಭಗವನ್! ಧರ್ಮದಿಂದ ಗಳಿಸಿದುದನ್ನು ತ್ಯಾಗಮಾಡುವುದೇ ಸರ್ವವು ಎಂದಾದರೆ ಅದರ ಕುರಿತು ನನಗೆ ಎಲ್ಲವನ್ನೂ ಹೇಳು. ಹೇಳುವುದರಲ್ಲಿ ನೀನು ಕುಶಲನಾಗಿದ್ದೀಯೆ!
14095002a ತತೋಂಚವೃತ್ತೇರ್ಯದ್ವೃತ್ತಂ ಸಕ್ತುದಾನೇ ಫಲಂ ಮಹತ್।
14095002c ಕಥಿತಂ ಮೇ ಮಹದ್ಬ್ರಹ್ಮಂಸ್ತಥ್ಯಮೇತದಸಂಶಯಮ್।।
ಬ್ರಹ್ಮನ್! ಉಂಚವೃತ್ತಿಯ ಬ್ರಾಹ್ಮಣನು ಹಿಟ್ಟನ್ನು ದಾನಮಾಡಿ ಎಂಥಹ ಮಹಾಫಲವನ್ನು ಪಡೆದನು ಎಂಬ ವಿಷಯವನ್ನು ನನಗೆ ಹೇಳಿದೆ. ನೀನು ಹೇಳಿದುದರಲ್ಲಿ ಯಾವ ಸಂಶಯವೂ ಇಲ್ಲ.
14095003a ಕಥಂ ಹಿ ಸರ್ವಯಜ್ಞೇಷು ನಿಶ್ಚಯಃ ಪರಮೋ ಭವೇತ್।
14095003c ಏತದರ್ಹಸಿ ಮೇ ವಕ್ತುಂ ನಿಖಿಲೇನ ದ್ವಿಜರ್ಷಭ।।
ಆದರೆ ಸರ್ವಯಜ್ಞಗಳಲ್ಲಿಯೂ ಪರಮ ನಿಶ್ಚಯವು ಹೇಗಾಗುತ್ತದೆ? ದ್ವಿಜರ್ಷಭ! ಇದರ ಕುರಿತು ಸಂಪೂರ್ಣವಾಗಿ ನನಗೆ ಹೇಳಬೇಕು.”
14095004 ವೈಶಂಪಾಯನ ಉವಾಚ
14095004a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
14095004c ಅಗಸ್ತ್ಯಸ್ಯ ಮಹಾಯಜ್ಞೇ ಪುರಾವೃತ್ತಮರಿಂದಮ।।
ವೈಶಂಪಾಯನನು ಹೇಳಿದನು: “ಅರಿಂದಮ! ಇದರ ಕುರಿತಾಗಿ ಹಿಂದೆ ನಡೆದ ಅಗಸ್ತ್ಯನ ಮಹಾಯಜ್ಞದ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
14095005a ಪುರಾಗಸ್ತ್ಯೋ ಮಹಾತೇಜಾ ದೀಕ್ಷಾಂ ದ್ವಾದಶವಾರ್ಷಿಕೀಮ್।
14095005c ಪ್ರವಿವೇಶ ಮಹಾರಾಜ ಸರ್ವಭೂತಹಿತೇ ರತಃ।।
ಮಹಾರಾಜ! ಹಿಂದೆ ಸರ್ವಭೂತಹಿತದಲ್ಲಿ ನಿರತನಾಗಿದ್ದ ಮಹಾತೇಜಸ್ವೀ ಅಗಸ್ತ್ಯನು ಹನ್ನೆರಡು ವರ್ಷಗಳ ದೀಕ್ಷೆಯನ್ನು ಪ್ರವೇಶಿಸಿದನು.
14095006a ತತ್ರಾಗ್ನಿಕಲ್ಪಾ ಹೋತಾರ ಆಸನ್ಸತ್ರೇ ಮಹಾತ್ಮನಃ।
14095006c ಮೂಲಾಹಾರಾ ನಿರಾಹಾರಾಃ ಸಾಶ್ಮಕುಟ್ಟಾ ಮರೀಚಿಪಾಃ।।
ಆ ಮಹಾತ್ಮನ ಸತ್ರದಲ್ಲಿ ಗೆಡ್ದೆ-ಗೆಣಸುಗಳನ್ನೇ ತಿನ್ನುವ, ನಿರಾಹಾರಿಗಳಾದ, ಕಲ್ಲಿನಿಂದ ಕುಟ್ಟಿ ತಯಾರಿಸಿದ ಆಹಾರವನ್ನು ಸೇವಿಸುವ ಮತ್ತು ಸೂರ್ಯನ ಕಿರಣಗಳನ್ನೇ ಪಾನಮಾಡುವ ಅಗ್ನಿಕಲ್ಪ ಹೋತಾರರಿದ್ದರು.
14095007a ಪರಿಘೃಷ್ಟಿಕಾ ವೈಘಸಿಕಾಃ ಸಂಪ್ರಕ್ಷಾಲಾಸ್ತಥೈವ ಚ।
14095007c ಯತಯೋ ಭಿಕ್ಷವಶ್ಚಾತ್ರ ಬಭೂವುಃ ಪರ್ಯವಸ್ಥಿತಾಃ।।
ಅಲ್ಲಿ ಪರಿಘೃಷ್ಟಿಕರೂ1, ವೈಘಾಸಿಕರೂ2, ಸಂಪ್ರಕ್ಷಾಲಕರೂ, ಯತಿಗಳೂ, ಭಿಕ್ಷುಗಳೂ ಸೇರಿದ್ದರು.
14095008a ಸರ್ವೇ ಪ್ರತ್ಯಕ್ಷಧರ್ಮಾಣೋ ಜಿತಕ್ರೋಧಾ ಜಿತೇಂದ್ರಿಯಾಃ।
14095008c ದಮೇ ಸ್ಥಿತಾಶ್ಚ ತೇ ಸರ್ವೇ ದಂಭಮೋಹವಿವರ್ಜಿತಾಃ।।
ಎಲ್ಲರೂ ಪ್ರತ್ಯಕ್ಷಧರ್ಮವನ್ನು ಪಾಲಿಸುತ್ತ ಜಿತಕ್ರೋಧರೂ ಜಿತೇಂದ್ರಿಯರೂ ಆಗಿದ್ದರು. ಎಲ್ಲರೂ ದಂಭ-ಮೋಹಗಳನ್ನು ತೊರೆದು ದಮದಲ್ಲಿಯೇ ನಿರತರಾಗಿದ್ದರು.
14095009a ವೃತ್ತೇ ಶುದ್ಧೇ ಸ್ಥಿತಾ ನಿತ್ಯಮಿಂದ್ರಿಯೈಶ್ಚಾಪ್ಯವಾಹಿತಾಃ।
14095009c ಉಪಾಸತೇ ಸ್ಮ ತಂ ಯಜ್ಞಂ ಭುಂಜಾನಾಸ್ತೇ ಮಹರ್ಷಯಃ।।
ನಿತ್ಯವೂ ಇಂದ್ರಿಯಗಳಿಂದ ಬಾಧೆಗೊಳ್ಳದಿದ್ದ ಅವರು ಶುದ್ಧ ವರ್ತನೆಗಳಲ್ಲಿ ನಿರತರಾಗಿದ್ದರು. ಆ ಯಜ್ಞದಲ್ಲಿ ಉಪಾಸಿಸುತ್ತಿದ್ದ ಆ ಮಹರ್ಷಿಗಳು ಅಲ್ಲಿಯೇ ಭೋಜನಾದಿಗಳನ್ನು ಮಾಡುತ್ತಿದ್ದರು.
14095010a ಯಥಾಶಕ್ತ್ಯಾ ಭಗವತಾ ತದನ್ನಂ ಸಮುಪಾರ್ಜಿತಮ್।
14095010c ತಸ್ಮಿನ್ಸತ್ರೇ ತು ಯತ್ಕಿಂ ಚಿದಯೋಗ್ಯಂ ತತ್ರ ನಾಭವತ್।
14095010e ತಥಾ ಹ್ಯನೇಕೈರ್ಮುನಿಭಿರ್ಮಹಾಂತಃ ಕ್ರತವಃ ಕೃತಾಃ।।
ಭಗವಾನ್ ಅಗಸ್ತ್ಯನು ಆಹಾರವನ್ನು ಯಥಾಶಕ್ತಿಯಾಗಿ ಸಂಗ್ರಹಿಸಿದ್ದನು. ಆ ಸತ್ರದಲ್ಲಿ ಯಾವುದೇ ರೀತಿಯ ಅಯೋಗ್ಯ ವಸ್ತುವೆಂಬುದೇ ಇರಲಿಲ್ಲ. ಹಾಗೆ ಅಲ್ಲಿ ಸೇರಿದ್ದ ಅನೇಕ ಮುನಿಗಳು ಮಹಾ ಕ್ರತುಗಳನ್ನು ನಡೆಸಿದರು.
14095011a ಏವಂವಿಧೇಸ್ತ್ವಗಸ್ತ್ಯಸ್ಯ ವರ್ತಮಾನೇ ಮಹಾಧ್ವರೇ।
14095011c ನ ವವರ್ಷ ಸಹಸ್ರಾಕ್ಷಸ್ತದಾ ಭರತಸತ್ತಮ।।
ಭರತಸತ್ತಮ! ಈ ವಿಧದಲ್ಲಿ ಅಗಸ್ತ್ಯನ ಮಹಾಧ್ವರವು ನಡೆಯುತ್ತಿರಲು ಸಹಸ್ರಾಕ್ಷನು ಮಳೆಯನ್ನೇ ಸುರಿಸಲಿಲ್ಲ.
14095012a ತತಃ ಕರ್ಮಾಂತರೇ ರಾಜನ್ನಗಸ್ತ್ಯಸ್ಯ ಮಹಾತ್ಮನಃ।
14095012c ಕಥೇಯಮಭಿನಿರ್ವೃತ್ತಾ ಮುನೀನಾಂ ಭಾವಿತಾತ್ಮನಾಮ್।।
ರಾಜನ್! ಕರ್ಮಗಳ ಮಧ್ಯದಲ್ಲಿ ವಿಶ್ರಮಿಸುತಿದ್ದ ಆ ಭಾವಿತಾತ್ಮ ಮುನಿಗಳು ಮಹಾತ್ಮ ಅಗಸ್ತ್ಯನ ಕುರಿತು ಹೀಗೆ ಮಾತನಾಡಿಕೊಳ್ಳುತ್ತಿದ್ದರು:
14095013a ಅಗಸ್ತ್ಯೋ ಯಜಮಾನೋಽಸೌ ದದಾತ್ಯನ್ನಂ ವಿಮತ್ಸರಃ।
14095013c ನ ಚ ವರ್ಷತಿ ಪರ್ಜನ್ಯಃ ಕಥಮನ್ನಂ ಭವಿಷ್ಯತಿ।।
“ಯಜಮಾನನಾಗಿರುವ ಅಗಸ್ತ್ಯನು ಮಾತ್ಸರ್ಯವಿಲ್ಲದೇ ಅನ್ನವನ್ನು ನೀಡುತ್ತಿದ್ದಾನೆ. ಪರ್ಜನ್ಯನು ಮಳೆಗರೆಯದೇ ಇದ್ದರೆ ಆಹಾರವು ಹೇಗೆ ಬೆಳೆಯುತ್ತದೆ?
14095014a ಸತ್ರಂ ಚೇದಂ ಮಹದ್ವಿಪ್ರಾ ಮುನೇರ್ದ್ವಾದಶವಾರ್ಷಿಕಮ್।
14095014c ನ ವರ್ಷಿಷ್ಯತಿ ದೇವಶ್ಚ ವರ್ಷಾಣ್ಯೇತಾನಿ ದ್ವಾದಶ।।
ವಿಪ್ರರೇ! ಮುನಿಯ ಈ ಮಹಾ ಸತ್ರವು ಹನ್ನೆರಡು ವರ್ಷಗಳದ್ದು. ದೇವ ಇಂದ್ರನಾದರೂ ಈ ಹನ್ನೆರಡು ವರ್ಷಗಳೂ ಮಳೆಗರೆಯದೇ ಇರಬಹುದು.
14095015a ಏತದ್ಭವಂತಃ ಸಂಚಿಂತ್ಯ ಮಹರ್ಷೇರಸ್ಯ ಧೀಮತಃ।
14095015c ಅಗಸ್ತ್ಯಸ್ಯಾತಿತಪಸಃ ಕರ್ತುಮರ್ಹಂತ್ಯನುಗ್ರಹಮ್।।
ಈ ವಿಷಯದ ಕುರಿತು ಆಲೋಚಿಸಿ ಈ ಮಹರ್ಷಿ ಅತಿತಪಸ್ವಿ ಧೀಮತ ಅಗಸ್ತ್ಯನಿಗೆ ನೀವು ಅನುಗ್ರಹಿಸಬೇಕಾಗಿದೆ.”
14095016a ಇತ್ಯೇವಮುಕ್ತೇ ವಚನೇ ತತೋಽಗಸ್ತ್ಯಃ ಪ್ರತಾಪವಾನ್।
14095016c ಪ್ರೋವಾಚೇದಂ ವಚೋ ವಾಗ್ಮೀ ಪ್ರಸಾದ್ಯ ಶಿರಸಾ ಮುನೀನ್।।
ಹೀಗೆ ಅವರು ಹೇಳಲು ಪ್ರತಾಪವಾನ್ ವಾಗ್ಮೀ ಅಗಸ್ತ್ಯನು ಮುನಿಗಳನ್ನು ಶಿರಸಾ ವಂದಿಸಿ ಈ ಮಾತನ್ನಾಡಿದನು:
14095017a ಯದಿ ದ್ವಾದಶವರ್ಷಾಣಿ ನ ವರ್ಷಿಷ್ಯತಿ ವಾಸವಃ।
14095017c ಚಿಂತಾಯಜ್ಞಂ ಕರಿಷ್ಯಾಮಿ ವಿಧಿರೇಷ ಸನಾತನಃ।।
“ಒಂದುವೇಳೆ ಈ ಹನ್ನೆರಡು ವರ್ಷಗಳೂ ವಾಸವನು ಮಳೆಗರೆಯದೇ ಇದ್ದರೆ ಚಿಂತಾಯಜ್ಞವನ್ನು ಮಾಡುತ್ತೇನೆ. ಇದೇ ಸನಾತನ ವಿಧಿಯಾಗಿದೆ.
14095018a ಯದಿ ದ್ವಾದಶವರ್ಷಾಣಿ ನ ವರ್ಷಿಷ್ಯತಿ ವಾಸವಃ।
14095018c ವ್ಯಾಯಾಮೇನಾಹರಿಷ್ಯಾಮಿ ಯಜ್ಞಾನನ್ಯಾನತಿವ್ರತಾನ್।।
ಒಂದುವೇಳೆ ಈ ಹನ್ನೆರಡು ವರ್ಷಗಳು ವಾಸವನು ಮಳೆಗರೆಯದೇ ಇದ್ದರೆ ವಾಯುವನ್ನೇ ಆಹಾರವನ್ನಾಗಿತ್ತು ಯಜ್ಞವನ್ನು ಮುಂದುವರೆಸುತ್ತೇನೆ.
14095019a ಬೀಜಯಜ್ಞೋ ಮಯಾಯಂ ವೈ ಬಹುವರ್ಷಸಮಾಚಿತಃ।
14095019c ಬೀಜೈಃ ಕೃತೈಃ ಕರಿಷ್ಯೇ ಚ ನಾತ್ರ ವಿಘ್ನೋ ಭವಿಷ್ಯತಿ।।
ಅನೇಕ ವರ್ಷಗಳಿಂದ ಸಂಗ್ರಹಿಸಿಟ್ಟಿರುವ ಈ ಬೀಜಗಳಿಂದಲೇ ಯಜ್ಞವನ್ನು ಮಾಡುತ್ತೇನೆ. ಬೀಜಗಳಿಂದ ಮಾಡಿದ ಯಜ್ಞಕ್ಕೆ ಯಾವುದೇ ವಿಘ್ನವುಂಟಾಗುವುದಿಲ್ಲ.
14095020a ನೇದಂ ಶಕ್ಯಂ ವೃಥಾ ಕರ್ತುಂ ಮಮ ಸತ್ರಂ ಕಥಂ ಚನ।
14095020c ವರ್ಷಿಷ್ಯತೀಹ ವಾ ದೇವೋ ನ ವಾ ದೇವೋ ಭವಿಷ್ಯತಿ।।
ಆ ದೇವನು ಮಳೆಸುರಿಸಲಿ ಅಥವಾ ಸುರಿಸದೇ ಇರಲಿ, ನನ್ನ ಈ ಸತ್ರವನ್ನು ಮಾತ್ರ ವ್ಯರ್ಥವಾಗಿಸಲು ಸಾಧ್ಯವೇ ಇಲ್ಲ.
14095021a ಅಥ ವಾಭ್ಯರ್ಥನಾಮಿಂದ್ರಃ ಕುರ್ಯಾನ್ನ ತ್ವಿಹ ಕಾಮತಃ।
14095021c ಸ್ವಯಮಿಂದ್ರೋ ಭವಿಷ್ಯಾಮಿ ಜೀವಯಿಷ್ಯಾಮಿ ಚ ಪ್ರಜಾಃ।।
ಅಥವಾ ಇಂದ್ರನು ನನ್ನ ಈ ಬಯಕೆಯಂತೆ ಮಾಡದಿದ್ದರೆ ಸ್ವಯಂ ನಾನೇ ಇಂದ್ರನಾಗಿ ಪ್ರಜೆಗಳ ಜೀವವನ್ನು ರಕ್ಷಿಸುತ್ತೇನೆ!
14095022a ಯೋ ಯದಾಹಾರಜಾತಶ್ಚ ಸ ತಥೈವ ಭವಿಷ್ಯತಿ।
14095022c ವಿಶೇಷಂ ಚೈವ ಕರ್ತಾಸ್ಮಿ ಪುನಃ ಪುನರತೀವ ಹಿ।।
ಯಾರು ಯಾವ ಆಹಾರದಿಂದ ಹುಟ್ಟಿರುವರೋ ಅವರು ಅದೇ ಆಹಾರವನ್ನು ಅವಲಂಬಿಸಬೇಕಾಗುತ್ತದೆ. ಆದುದರಿಂದ ನಾನು ಪುನಃ ಪುನಃ ವಿಶೇಷ ಆಹಾರವನ್ನು ತಯಾರಿಸುತ್ತೇನೆ.
14095023a ಅದ್ಯೇಹ ಸ್ವರ್ಣಮಭ್ಯೇತು ಯಚ್ಚಾನ್ಯದ್ವಸು ದುರ್ಲಭಮ್।
14095023c ತ್ರಿಷು ಲೋಕೇಷು ಯಚ್ಚಾಸ್ತಿ ತದಿಹಾಗಚ್ಚತಾಂ ಸ್ವಯಮ್।।
ಮೂರು ಲೋಕಗಳಲ್ಲಿ ಏನೆಲ್ಲ ಸುವರ್ಣವಿದೆಯೋ ಮತ್ತು ಅನ್ಯ ದುರ್ಲಭ ವಸ್ತುಗಳಿವೆಯೋ ಅವೆಲ್ಲವೂ ಇಂದು ತಾವಾಗಿಯೇ ಇಲ್ಲಿಗೆ ಬರಲಿ!
14095024a ದಿವ್ಯಾಶ್ಚಾಪ್ಸರಸಾಂ ಸಂಘಾಃ ಸಗಂಧರ್ವಾಃ ಸಕಿನ್ನರಾಃ।
14095024c ವಿಶ್ವಾವಸುಶ್ಚ ಯೇ ಚಾನ್ಯೇ ತೇಽಪ್ಯುಪಾಸಂತು ವಃ ಸದಾ।।
ಗಂಧರ್ವ ಕಿನ್ನರರೊಡನೆ ದಿವ್ಯ ಅಪ್ಸರೆಯರ ಸಂಘಗಳೂ, ವಿಶ್ವಾವಸುವೂ ಮತ್ತು ಅನ್ಯರೂ ಸದಾ ನಮ್ಮನ್ನು ಉಪಾಸಿಸಲಿ.
14095025a ಉತ್ತರೇಭ್ಯಃ ಕುರುಭ್ಯಶ್ಚ ಯತ್ಕಿಂ ಚಿದ್ವಸು ವಿದ್ಯತೇ।
14095025c ಸರ್ವಂ ತದಿಹ ಯಜ್ಞೇ ಮೇ ಸ್ವಯಮೇವೋಪತಿಷ್ಠತು।
14095025e ಸ್ವರ್ಗಂ ಸ್ವರ್ಗಸದಶ್ಚೈವ ಧರ್ಮಶ್ಚ ಸ್ವಯಮೇವ ತು।।
ಉತ್ತರ ಕುರುಗಳಲ್ಲಿ ಯಾವ ಐಶ್ವರ್ಯವಿರುವುದೋ ಅವೆಲ್ಲವೂ ಸ್ವಯಂ ತಾವಾಗಿಯೇ ನನ್ನ ಈ ಯಜ್ಞಕ್ಕೆ ಬರಲಿ! ಸ್ವರ್ಗ, ಸ್ವರ್ಗದಲ್ಲಿರುವ ಸದಸ್ಯರು ಮತ್ತು ಧರ್ಮ ಇವರು ಸ್ವಯಂ ತಾವಾಗಿಯೇ ಇಲ್ಲಿಗೆ ಬರಲಿ!”
14095026a ಇತ್ಯುಕ್ತೇ ಸರ್ವಮೇವೈತದಭವತ್ತಸ್ಯ ಧೀಮತಃ।
14095026c ತತಸ್ತೇ ಮುನಯೋ ದೃಷ್ಟ್ವಾ ಮುನೇಸ್ತಸ್ಯ ತಪೋಬಲಮ್।
14095026e ವಿಸ್ಮಿತಾ ವಚನಂ ಪ್ರಾಹುರಿದಂ ಸರ್ವೇ ಮಹಾರ್ಥವತ್।।
ಆ ಧೀಮಂತನು ಹೀಗೆ ಹೇಳುತ್ತಲೇ ಸರ್ವವೂ ಹಾಗೆಯೇ ಆಯಿತು. ಮುನಿಯ ತಪೋಬಲವನ್ನು ನೋಡಿ ವಿಸ್ಮಿತರಾಗಿ ಆ ಎಲ್ಲ ಮುನಿಗಳೂ ಮಹಾ ಅರ್ಥವತ್ತಾದ ಈ ಮಾತನ್ನಾಡಿದರು:
14095027a ಪ್ರೀತಾಃ ಸ್ಮ ತವ ವಾಕ್ಯೇನ ನ ತ್ವಿಚ್ಚಾಮಸ್ತಪೋವ್ಯಯಮ್।
14095027c ಸ್ವೈರೇವ ಯಜ್ಞೈಸ್ತುಷ್ಟಾಃ ಸ್ಮೋ ನ್ಯಾಯೇನೇಚ್ಚಾಮಹೇ ವಯಮ್।।
“ನಿನ್ನ ಮಾತಿನಿಂದ ನಾವು ಸುಪ್ರೀತರಾಗಿದ್ದೇವೆ. ಆದರೆ ನಿನ್ನ ತಪಸ್ಸನ್ನು ವ್ಯರ್ಥಗೊಳಿಸಲು ಬಯಸುವುದಿಲ್ಲ. ನಿನ್ನ ಈ ಯಜ್ಞಗಳಿಂದಲೇ ನಾವು ಸಂತುಷ್ಟರಾಗಿದ್ದೇವೆ. ನ್ಯಾಯದಿಂದ ಸಂಪಾದಿಸಿದ ಅನ್ನವನ್ನೇ ಸೇವಿಸಲು ಬಯಸುತ್ತೇವೆ.
14095028a ಯಜ್ಞಾನ್ದೀಕ್ಷಾಸ್ತಥಾ ಹೋಮಾನ್ಯಚ್ಚಾನ್ಯಮೃಗಯಾಮಹೇ।
14095028c ತನ್ನೋಽಸ್ತು ಸ್ವಕೃತೈರ್ಯಜ್ಞೈರ್ನಾನ್ಯತೋ ಮೃಗಯಾಮಹೇ।।
ಯಜ್ಞ, ದೀಕ್ಷೆ, ಹೋಮ ಮತ್ತು ನಾವು ಅಪೇಕ್ಷಿಸಿದ ಎಲ್ಲವೂ ಇಲ್ಲಿ ದೊರಕುತ್ತಿದೆ. ಸ್ವಕೃತ ಯಜ್ಞದಿಂದಲ್ಲದೇ ಬೇರೆ ಯಾವುದನ್ನೂ ನಾವು ಬಯಸುವುದಿಲ್ಲ.
14095029a ನ್ಯಾಯೇನೋಪಾರ್ಜಿತಾಹಾರಾಃ ಸ್ವಕರ್ಮನಿರತಾ ವಯಮ್।
14095029c ವೇದಾಂಶ್ಚ ಬ್ರಹ್ಮಚರ್ಯೇಣ ನ್ಯಾಯತಃ ಪ್ರಾರ್ಥಯಾಮಹೇ।।
ನ್ಯಾಯದಿಂದ ಪಡೆದ ಆಹಾರವನ್ನೇ ಸೇವಿಸಿ ಸ್ವಕರ್ಮಗಳಲ್ಲಿ ನಾವು ನಿರತರಾಗಿರುತ್ತೇವೆ. ಬ್ರಹ್ಮಚರ್ಯವನ್ನಾಚರಿಸಿ ನ್ಯಾಯರೀತಿಯಲ್ಲಿ ನಾವು ವೇದಾಧ್ಯಯನ ಮಾಡಿದೆವು.
14095030a ನ್ಯಾಯೇನೋತ್ತರಕಾಲಂ ಚ ಗೃಹೇಭ್ಯೋ ನಿಃಸೃತಾ ವಯಮ್।
14095030c ಧರ್ಮದೃಷ್ಟೈರ್ವಿಧಿದ್ವಾರೈಸ್ತಪಸ್ತಪ್ಸ್ಯಾಮಹೇ ವಯಮ್।।
ನಂತರ ನ್ಯಾಯರೀತಿಯಲ್ಲಿ ನಾವು ಗೃಹಸ್ಥಾಶ್ರಮವನ್ನೂ ಪಾಲಿಸಿದೆವು. ಈಗ ಧರ್ಮದೃಷ್ಟವಾದ ವಿಧಿವತ್ತಾದ ತಪಸ್ಸನ್ನು ನಾವು ತಪಿಸುತ್ತಿದ್ದೇವೆ.
14095031a ಭವತಃ ಸಮ್ಯಗೇಷಾ ಹಿ ಬುದ್ಧಿರ್ಹಿಂಸಾವಿವರ್ಜಿತಾ।
14095031c ಏತಾಮಹಿಂಸಾಂ ಯಜ್ಞೇಷು ಬ್ರೂಯಾಸ್ತ್ವಂ ಸತತಂ ಪ್ರಭೋ।।
ಪ್ರಭೋ! ಹಿಂಸಾವರ್ಜಿತವಾದ ನಿನ್ನ ಈ ಬುದ್ಧಿಯು ನಮಗೆ ಬಹಳ ಪ್ರಿಯವಾಗಿದೆ. ಯಜ್ಞಗಳಲ್ಲಿ ಈ ಅಹಿಂಸೆಯನ್ನೇ ನೀನು ಸತತವಾಗಿ ಪ್ರತಿಪಾದಿಸುವೆ.
14095032a ಪ್ರೀತಾಸ್ತತೋ ಭವಿಷ್ಯಾಮೋ ವಯಂ ದ್ವಿಜವರೋತ್ತಮ।
14095032c ವಿಸರ್ಜಿತಾಃ ಸಮಾಪ್ತೌ ಚ ಸತ್ರಾದಸ್ಮಾದ್ವ್ರಜಾಮಹೇ।।
ದ್ವಿಜವರೋತ್ತಮ! ಇದರಿಂದ ನಮಗೆ ಹೆಚ್ಚಿನ ಸಂತೋಷವುಂಟಾಗುತ್ತದೆ. ಯಜ್ಞವು ಸಮಾಪ್ತವಾದ ನಂತರ ನಿನ್ನಿಂದ ಬೀಳ್ಕೊಂಡು ನಾವು ಹೊರಡುತ್ತೇವೆ.””
14095033 ವೈಶಂಪಾಯನ ಉವಾಚ 14095033a ತಥಾ ಕಥಯತಾಮೇವ ದೇವರಾಜಃ ಪುರಂದರಃ।
14095033c ವವರ್ಷ ಸುಮಹಾತೇಜಾ ದೃಷ್ಟ್ವಾ ತಸ್ಯ ತಪೋಬಲಮ್।।
ವೈಶಂಪಾಯನನು ಹೇಳಿದನು: “ಅವರು ಹಾಗೆ ಹೇಳುತ್ತಿರಲು ಮಹಾತೇಜಸ್ವೀ ಪುರಂದರ ದೇವರಾಜನು ಅಗಸ್ತ್ಯನ ತಪೋಬಲವನ್ನು ನೋಡಿ ಮಳೆಯನ್ನು ಸುರಿಸಿದನು.
14095034a ಅಸಮಾಪ್ತೌ ಚ ಯಜ್ಞಸ್ಯ ತಸ್ಯಾಮಿತಪರಾಕ್ರಮಃ।
14095034c ನಿಕಾಮವರ್ಷೀ ದೇವೇಂದ್ರೋ ಬಭೂವ ಜನಮೇಜಯ।।
ಜನಮೇಜಯ! ಅಮಿತಪರಾಕ್ರಮಿ ದೇವೇಂದ್ರನು ಆ ಯಜ್ಞವು ಸಮಾಪ್ತಿಯಾಗುವ ವರೆಗೂ ಕೇಳಿದಷ್ಟು ಮಳೆಯನ್ನು ಸುರಿಸುತ್ತಿದ್ದನು.
14095035a ಪ್ರಸಾದಯಾಮಾಸ ಚ ತಮಗಸ್ತ್ಯಂ ತ್ರಿದಶೇಶ್ವರಃ।
14095035c ಸ್ವಯಮಭ್ಯೇತ್ಯ ರಾಜರ್ಷೇ ಪುರಸ್ಕೃತ್ಯ ಬೃಹಸ್ಪತಿಮ್।।
ರಾಜರ್ಷೇ! ಸ್ವಯಂ ತ್ರಿದಶೇಶ್ವರನು ಬೃಹಸ್ಪತಿಯನ್ನು ಮುಂದೆಮಾಡಿಕೊಂಡು ಅಲ್ಲಿಗೆ ಆಗಮಿಸಿ ಅಗಸ್ತ್ಯನನ್ನು ಪ್ರಸನ್ನಗೊಳಿಸಿದನು.
14095036a ತತೋ ಯಜ್ಞಸಮಾಪ್ತೌ ತಾನ್ ವಿಸಸರ್ಜ ಮಹಾಮುನೀನ್।
14095036c ಅಗಸ್ತ್ಯಃ ಪರಮಪ್ರೀತಃ ಪೂಜಯಿತ್ವಾ ಯಥಾವಿಧಿ।।
ಆ ಯಜ್ಞವು ಸಮಾಪ್ತವಾಗಲು ಪರಮಪ್ರೀತನಾದ ಅಗಸ್ತ್ಯನು ಆ ಮಹಾಮುನಿಗಳನ್ನು ಯಥಾವಿಧಿಯಾಗಿ ಪೂಜಿಸಿ ಕಳುಹಿಸಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ನಕುಲೋಪಾಖ್ಯಾನೇ ಪಂಚನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ನಕುಲೋಪಾಖ್ಯಾನ ಎನ್ನುವ ತೊಂಭತ್ತೈದನೇ ಅಧ್ಯಾಯವು.