094: ಹಿಂಸಾಮಿಶ್ರಧರ್ಮನಿಂದಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 94

ಸಾರ

ಯುಧಿಷ್ಠಿರನ ಅಶ್ವಮೇಧವನ್ನು ಮುಂಗುಸಿಯು ಏಕೆ ನಿಂದಿಸಿತು ಎಂದು ಜನಮೇಜಯನು ಕೇಳಲು ವೈಶಂಪಾಯನನು ಅವನಿಗೆ ಶಕ್ರನ ಯಜ್ಞದಲ್ಲಿ ವಿಪ್ರರು ಅಹಿಂಸಾವಿಧಿಯ ಕುರಿತು ಹೇಳಿದುದರ ಉದಾಹರಣೆಯನ್ನಿತ್ತು ಯಜ್ಞವಿಧಿ-ಫಲಗಳ ಕುರಿತು ಹೇಳಿದುದು (1-34).

14094001 ಜನಮೇಜಯ ಉವಾಚ
14094001a ಯಜ್ಞೇ ಸಕ್ತಾ ನೃಪತಯಸ್ತಪಃಸಕ್ತಾ ಮಹರ್ಷಯಃ।
14094001c ಶಾಂತಿವ್ಯವಸಿತಾ ವಿಪ್ರಾಃ ಶಮೋ ದಮ ಇತಿ ಪ್ರಭೋ।।

ಜನಮೇಜಯನು ಹೇಳಿದನು: “ಪ್ರಭೋ! ನೃಪತಿಗಳು ಯಜ್ಞದಲ್ಲಿ ಆಸಕ್ತರಾಗಿರುತ್ತಾರೆ. ಮಹರ್ಷಿಗಳು ತಪಸ್ಸಿನಲ್ಲಿ ಆಸಕ್ತರಾಗಿರುತ್ತಾರೆ. ವಿಪ್ರರು ಶಮ-ದಮಗಳೆಂದು ಶಾಂತಿಯಲ್ಲಿರಲು ಆಸಕ್ತರಾಗಿರುತ್ತಾರೆ.

14094002a ತಸ್ಮಾದ್ಯಜ್ಞಫಲೈಸ್ತುಲ್ಯಂ ನ ಕಿಂ ಚಿದಿಹ ವಿದ್ಯತೇ।
14094002c ಇತಿ ಮೇ ವರ್ತತೇ ಬುದ್ಧಿಸ್ತಥಾ ಚೈತದಸಂಶಯಮ್।।

ಆದುದರಿಂದ ಯಜ್ಞ ಫಲಕ್ಕೆ ಸಮನಾದುದು ಯಾವುದೂ ಇಲ್ಲವೆಂದು ತಿಳಿಯುತ್ತದೆ. ಇದೇ ನನ್ನ ಅಭಿಪ್ರಾಯವೂ ಆಗಿದೆ. ಅದರಲ್ಲಿ ನನಗೆ ಸಂದೇಹವೇನೂ ಕಾಣುತ್ತಿಲ್ಲ.

14094003a ಯಜ್ಞೈರಿಷ್ಟ್ವಾ ಹಿ ಬಹವೋ ರಾಜಾನೋ ದ್ವಿಜಸತ್ತಮ।
14094003c ಇಹ ಕೀರ್ತಿಂ ಪರಾಂ ಪ್ರಾಪ್ಯ ಪ್ರೇತ್ಯ ಸ್ವರ್ಗಮಿತೋ ಗತಾಃ।।

ದ್ವಿಜಸತ್ತಮ! ಯಜ್ಞ-ಇಷ್ಟಿಗಳಿಂದಲೇ ಅನೇಕ ರಾಜರು ಇಲ್ಲಿ ಕೀರ್ತಿಯನ್ನೂ ಮರಣಾನಂತರ ಪರಮ ಸ್ವರ್ಗವನ್ನೂ ಪಡೆದಿರುತ್ತಾರೆ.

14094004a ದೇವರಾಜಃ ಸಹಸ್ರಾಕ್ಷಃ ಕ್ರತುಭಿರ್ಭೂರಿದಕ್ಷಿಣೈಃ।
14094004c ದೇವರಾಜ್ಯಂ ಮಹಾತೇಜಾಃ ಪ್ರಾಪ್ತವಾನಖಿಲಂ ವಿಭುಃ।।

ಭೂರಿದಕ್ಷಿಣಗಳಿಂದ ಯುಕ್ತವಾದ ಕ್ರತುಗಳ ಮೂಲಕವೇ ವಿಭು ಸಹಸ್ರಾಕ್ಷ ಮಹಾತೇಜಸ್ವಿ ದೇವರಾಜನು ಅಖಿಲ ದೇವರಾಜ್ಯವನ್ನು ಪಡೆದುಕೊಂಡಿದ್ದಾನೆ.

14094005a ಯಥಾ ಯುಧಿಷ್ಠಿರೋ ರಾಜಾ ಭೀಮಾರ್ಜುನಪುರಃಸರಃ।
14094005c ಸದೃಶೋ ದೇವರಾಜೇನ ಸಮೃದ್ಧ್ಯಾ ವಿಕ್ರಮೇಣ ಚ।।

ದೇವರಾಜನ ಸದೃಶನಾದ ರಾಜಾ ಯುಧಿಷ್ಠಿರನೂ ಕೂಡ ಭೀಮಾರ್ಜುನರನ್ನು ಮುಂದೆಮಾಡಿಕೊಂಡು ವಿಕ್ರಮದಿಂದ ಸಮೃದ್ಧವಾದ ಅಶ್ವಮೇಧ ಯಾಗವನ್ನು ಪೂರೈಸಿದನು.

14094006a ಅಥ ಕಸ್ಮಾತ್ಸ ನಕುಲೋ ಗರ್ಹಯಾಮಾಸ ತಂ ಕ್ರತುಮ್।
14094006c ಅಶ್ವಮೇಧಂ ಮಹಾಯಜ್ಞಂ ರಾಜ್ಞಸ್ತಸ್ಯ ಮಹಾತ್ಮನಃ।।

ಆದರೂ ಮಹಾತ್ಮ ರಾಜನ ಆ ಕ್ರತು ಅಶ್ವಮೇಧ ಮಹಾಯಜ್ಞವನ್ನು ಮುಂಗುಸಿಯು ಏಕೆ ನಿಂದಿಸಿತು?”

14094007 ವೈಶಂಪಾಯನ ಉವಾಚ
14094007a ಯಜ್ಞಸ್ಯ ವಿಧಿಮಗ್ರ್ಯಂ ವೈ ಫಲಂ ಚೈವ ನರರ್ಷಭ।
14094007c ಗದತಃ ಶೃಣು ಮೇ ರಾಜನ್ಯಥಾವದಿಹ ಭಾರತ।।

ವೈಶಂಪಾಯನನು ಹೇಳಿದನು: “ನರರ್ಷಭ! ಭಾರತ! ರಾಜನ್! ಈಗ ನಾನು ಯಜ್ಞದ ಶ್ರೇಷ್ಠ ವಿಧಿಗಳನ್ನೂ ಫಲಗಳನ್ನೂ ಹೇಳುತ್ತೇನೆ. ಕೇಳು!

14094008a ಪುರಾ ಶಕ್ರಸ್ಯ ಯಜತಃ ಸರ್ವ ಊಚುರ್ಮಹರ್ಷಯಃ।
14094008c ಋತ್ವಿಕ್ಷು ಕರ್ಮವ್ಯಗ್ರೇಷು ವಿತತೇ ಯಜ್ಞಕರ್ಮಣಿ।।

ಹಿಂದೆ ಶಕ್ರನು ಯಜಿಸುತ್ತಿರುವಾಗ ಸರ್ವ ಮಹರ್ಷಿಗಳೂ ಮಂತ್ರಗಳನ್ನು ಉಚ್ಚರಿಸುತ್ತಿದ್ದರು. ಋತ್ವಿಕರು ತಮ್ಮ ತಮ್ಮ ಕರ್ಮಗಳಲ್ಲಿ ಏಕಾಗ್ರರಾಗಿದ್ದರು ಮತ್ತು ಯಜ್ಞಕರ್ಮಗಳು ವಿದ್ಯುಕ್ತವಾಗಿ ನಡೆಯುತ್ತಿದ್ದವು.

14094009a ಹೂಯಮಾನೇ ತಥಾ ವಹ್ನೌ ಹೋತ್ರೇ ಬಹುಗುಣಾನ್ವಿತೇ।
14094009c ದೇವೇಷ್ವಾಹೂಯಮಾನೇಷು ಸ್ಥಿತೇಷು ಪರಮರ್ಷಿಷು।।

ಪರಮಋಷಿಗಳು ಅಲ್ಲಿ ಕುಳಿತಿರುವಾಗ ಉತ್ತಮ ಗುಣಯುಕ್ತ ಆಹುತಿಗಳನ್ನು ಅಗ್ನಿಯಲ್ಲಿ ಹೋಮಮಾಡುತ್ತಿದ್ದರು ಮತ್ತು ದೇವತೆಗಳನ್ನು ಮಂತ್ರಪೂರ್ವಕವಾಗಿ ಆಹ್ವಾನಿಸುತ್ತಿದ್ದರು.

14094010a ಸುಪ್ರತೀತೈಸ್ತದಾ ವಿಪ್ರೈಃ ಸ್ವಾಗಮೈಃ ಸುಸ್ವನೈರ್ನೃಪ।
14094010c ಅಶ್ರಾಂತೈಶ್ಚಾಪಿ ಲಘುಭಿರಧ್ವರ್ಯುವೃಷಭೈಸ್ತಥಾ।।

ನೃಪ! ಸುಪ್ರತೀತ ವಿಪ್ರರು ಸುಸ್ವರವಾಗಿ ಆಗಮ ಮಂತ್ರಗಳನ್ನು ಹೇಳುತ್ತಿದ್ದರು. ವೃಷಭರಂತಿದ್ದ ಅಧ್ವರ್ಯುಗಳು ಸ್ವಲ್ಪವೂ ಆಯಾಸಗೊಳ್ಳುತ್ತಿರಲಿಲ್ಲ.

14094011a ಆಲಂಭಸಮಯೇ ತಸ್ಮಿನ್ಗೃಹೀತೇಷು ಪಶುಷ್ವಥ।
14094011c ಮಹರ್ಷಯೋ ಮಹಾರಾಜ ಸಂಬಭೂವುಃ ಕೃಪಾನ್ವಿತಾಃ।।

ಮಹಾರಾಜ! ಆಲಂಬಸಮಯದಲ್ಲಿ ಪಶುಗಳನ್ನು ಹಿಡಿದುಕೊಂಡು ಬರುವಾಗ ಮಹರ್ಷಿಗಳು ಕೃಪಾನ್ವಿತರಾದರು.

14094012a ತತೋ ದೀನಾನ್ಪಶೂನ್ದೃಷ್ಟ್ವಾ ಋಷಯಸ್ತೇ ತಪೋಧನಾಃ।
14094012c ಊಚುಃ ಶಕ್ರಂ ಸಮಾಗಮ್ಯ ನಾಯಂ ಯಜ್ಞವಿಧಿಃ ಶುಭಃ।।

ಆಗ ದೀನ ಪಶುಗಳನ್ನು ನೋಡಿ ತಪೋಧನ ಋಷಿಗಳು ಒಂದಾಗಿ ಶಕ್ರನಿಗೆ ಈ ಯಜ್ಞವಿಧಿಯು ಶುಭವಲ್ಲ ಎಂದು ಹೇಳಿದರು.

14094013a ಅಪವಿಜ್ಞಾನಮೇತತ್ತೇ ಮಹಾಂತಂ ಧರ್ಮಮಿಚ್ಚತಃ।
14094013c ನ ಹಿ ಯಜ್ಞೇ ಪಶುಗಣಾ ವಿಧಿದೃಷ್ಟಾಃ ಪುರಂದರ।।

“ಪುರಂದರ! ಈ ಯಜ್ಞದ ಮೂಲಕ ಮಹಾಧರ್ಮವನ್ನು ಇಚ್ಛಿಸಿರುವೆ. ಆದರೆ ಯಜ್ಞದಲ್ಲಿ ಪಶುಬಲಿಯನ್ನು ವೇದಗಳಲ್ಲಿ ನಾವು ಕಂಡಿಲ್ಲ.

14094014a ಧರ್ಮೋಪಘಾತಕಸ್ತ್ವೇಷ ಸಮಾರಂಭಸ್ತವ ಪ್ರಭೋ।
14094014c ನಾಯಂ ಧರ್ಮಕೃತೋ ಧರ್ಮೋ ನ ಹಿಂಸಾ ಧರ್ಮ ಉಚ್ಯತೇ।।

ಪ್ರಭೋ! ನಿನ್ನ ಈ ಸಮಾರಂಭವು ಧರ್ಮಘಾತುಕವಾದುದು. ಇದು ಧರ್ಮಕಾರ್ಯವಲ್ಲ. ಹಿಂಸೆಯು ಎಂದೂ ಧರ್ಮ ಎನಿಸಿಕೊಳ್ಳುವುದಿಲ್ಲ.

14094015a ಆಗಮೇನೈವ ತೇ ಯಜ್ಞಂ ಕುರ್ವಂತು ಯದಿ ಹೇಚ್ಚಸಿ।
14094015c ವಿಧಿದೃಷ್ಟೇನ ಯಜ್ಞೇನ ಧರ್ಮಸ್ತೇ ಸುಮಹಾನ್ಭವೇತ್।।

ನೀನು ಇಚ್ಛಿಸುವೆಯಾದರೆ ಈ ಯಜ್ಞವನ್ನು ಆಗಮಗಳ ಅನುಸಾರವಾಗಿಯೇ ಮಾಡಲಿ. ವೇದಗಳಲ್ಲಿ ಹೇಳಿರುವ ವಿಧಿಯಂತೆ ಯಜ್ಞವನ್ನು ಮಾಡಿದರೆ ನಿನಗೆ ಮಹಾಧರ್ಮವುಂಟಾಗುತ್ತದೆ.

14094016a ಯಜ ಬೀಜೈಃ ಸಹಸ್ರಾಕ್ಷ ತ್ರಿವರ್ಷಪರಮೋಷಿತೈಃ।
14094016c ಏಷ ಧರ್ಮೋ ಮಹಾನ್ಶಕ್ರ ಚಿಂತ್ಯಮಾನೋಽಧಿಗಮ್ಯತೇ।।

ಸಹಸ್ರಾಕ್ಷ! ಮೂರುವರ್ಷಗಳು ಹಳೆಯದಾಗಿರುವ ಬೀಜಗಳಿಂದ ಯಜ್ಞಮಾಡು. ಶಕ್ರ! ಇದರಿಂದ ನಿನಗೆ ಮಹಾ ಧರ್ಮವು ದೊರೆಯುತ್ತದೆ.”

14094017a ಶತಕ್ರತುಸ್ತು ತದ್ವಾಕ್ಯಮೃಷಿಭಿಸ್ತತ್ತ್ವದರ್ಶಿಭಿಃ।
14094017c ಉಕ್ತಂ ನ ಪ್ರತಿಜಗ್ರಾಹ ಮಾನಮೋಹವಶಾನುಗಃ।।

ಆದರೆ ಮಾನಮೋಹವಶಾನುಗನಾದ ಶತಕ್ರತುವಾದರೋ ತತ್ತ್ವದರ್ಶೀ ಋಷಿಗಳ ಆ ಮಾತನ್ನು ಸ್ವೀಕರಿಸಲಿಲ್ಲ.

14094018a ತೇಷಾಂ ವಿವಾದಃ ಸುಮಹಾನ್ಜಜ್ಞೇ ಶಕ್ರಮಹರ್ಷಿಣಾಮ್।
14094018c ಜಂಗಮೈಃ ಸ್ಥಾವರೈರ್ವಾಪಿ ಯಷ್ಟವ್ಯಮಿತಿ ಭಾರತ।।

ಭಾರತ! ಜಂಗಮ ಪ್ರಾಣಿಗಳಿಂದ ಅಥವಾ ಸ್ಥಾವರ ಬೀಜಗಳಿಂದ ಯಜ್ಞಮಾಡಬೇಕೆಂದು ಶಕ್ರ ಮತ್ತು ಮಹರ್ಷಿಗಳ ಅತಿದೊಡ್ಡ ವಿವಾದವೇ ನಡೆಯಿತು.

14094019a ತೇ ತು ಖಿನ್ನಾ ವಿವಾದೇನ ಋಷಯಸ್ತತ್ತ್ವದರ್ಶಿನಃ।
14094019c ತತಃ ಸಂಧಾಯ ಶಕ್ರೇಣ ಪಪ್ರಚ್ಚುರ್ನೃಪತಿಂ ವಸುಮ್।।

ಆ ವಿವಾದದಿಂದ ಖಿನ್ನರಾದ ತತ್ತ್ವದರ್ಶಿ ಋಷಿಗಳು ಶಕ್ರನೊಡಗೂಡಿ ನೃಪತಿ ವಸು1ವನ್ನು ಕೇಳಿದರು:

14094020a ಮಹಾಭಾಗ ಕಥಂ ಯಜ್ಞೇಷ್ವಾಗಮೋ ನೃಪತೇ ಸ್ಮೃತಃ।
14094020c ಯಷ್ಟವ್ಯಂ ಪಶುಭಿರ್ಮೇಧ್ಯೈರಥೋ ಬೀಜೈರಜೈರಪಿ।।

“ಮಹಾಭಾಗ! ನೃಪತೇ! ಆಗಮಗಳ ಪ್ರಕಾರ ಯಜ್ಞವನ್ನು ಹೇಗೆ ಮಾಡಬೇಕು? ಪಶುಗಳ ಮೇಧದಿಂದಲೋ ಅಥವಾ ಬೀಜರಸಗಳಿಂದಲೋ?”

14094021a ತಚ್ಚ್ರುತ್ವಾ ತು ವಚಸ್ತೇಷಾಮವಿಚಾರ್ಯ ಬಲಾಬಲಮ್।
14094021c ಯಥೋಪನೀತೈರ್ಯಷ್ಟವ್ಯಮಿತಿ ಪ್ರೋವಾಚ ಪಾರ್ಥಿವಃ।।

ಆ ಮಾತನ್ನು ಕೇಳಿ ಮಾತಿನ ಬಲಾಬಲಗಳನ್ನು ವಿಚಾರಿಸದೆಯೇ ಪಾರ್ಥಿವ ವಸುವು “ಯಾವಾಗ ಏನು ದೊರಕುತ್ತದೆಯೋ ಅದರಿಂದ ಯಜ್ಞಮಾಡಬೇಕು!” ಎಂದುಬಿಟ್ಟನು.

14094022a ಏವಮುಕ್ತ್ವಾ ಸ ನೃಪತಿಃ ಪ್ರವಿವೇಶ ರಸಾತಲಮ್।
14094022c ಉಕ್ತ್ವೇಹ ವಿತಥಂ ರಾಜಂಶ್ಚೇದೀನಾಮೀಶ್ವರಃ ಪ್ರಭುಃ।।

ರಾಜನ್! ಈ ಸುಳ್ಳನ್ನು ಹೇಳಿದುದಕ್ಕಾಗಿ ಹಾಗೆ ಹೇಳಿದ ನೃಪತಿ ಚೇದಿಗಳ ರಾಜ ಪ್ರಭುವು ರಸಾತಲವನ್ನು ಪ್ರವೇಶಿಸಿದನು2.

14094023a ಅನ್ಯಾಯೋಪಗತಂ ದ್ರವ್ಯಮತೀತಂ ಯೋ ಹ್ಯಪಂಡಿತಃ।
14094023c ಧರ್ಮಾಭಿಕಾಂಕ್ಷೀ ಯಜತೇ ನ ಧರ್ಮಫಲಮಶ್ನುತೇ।।

ಅನ್ಯಾಯದಿಂದ ಪಡೆದ ಧನವನ್ನು ಧರ್ಮಾಕಾಂಕ್ಷಿಯಾದ ಯಾವ ಅಪಂಡಿತನು ಯಜ್ಞಮಾಡುತ್ತಾನೋ ಅವನಿಗೆ ಫಲವು ಲಭಿಸುವುದಿಲ್ಲ.

14094024a ಧರ್ಮವೈತಂಸಿಕೋ ಯಸ್ತು ಪಾಪಾತ್ಮಾ ಪುರುಷಸ್ತಥಾ।
14094024c ದದಾತಿ ದಾನಂ ವಿಪ್ರೇಭ್ಯೋ ಲೋಕವಿಶ್ವಾಸಕಾರಕಮ್।।

ಜನರಿಂದ ಹೊಗಳಿಸಿಕೊಳ್ಳಲು ತೋರಿಕೆಯ ಧರ್ಮಕಾರ್ಯಗಳನ್ನು ಮಾಡುವ ಪಾಪಾತ್ಮ ಪುರುಷನು ಲೋಕದ ಜನರಿಂದ ವಿಶ್ವಾಸವನ್ನು ಗಳಿಸಿಕೊಳ್ಳಲು ಬ್ರಾಹ್ಮಣರಿಗೆ ದಾನಮಾಡುತ್ತಾನೆ.

14094025a ಪಾಪೇನ ಕರ್ಮಣಾ ವಿಪ್ರೋ ಧನಂ ಲಬ್ಧ್ವಾ ನಿರಂಕುಶಃ।
14094025c ರಾಗಮೋಹಾನ್ವಿತಃ ಸೋಽಂತೇ ಕಲುಷಾಂ ಗತಿಮಾಪ್ನುತೇ।।

ಪಾಪಕರ್ಮಗಳಿಂದ ಧನವನ್ನು ಸಂಪಾದಿಸಿ ಸ್ವೇಚ್ಛಾಪ್ರವೃತ್ತನಾಗಿ ರಾಗಮೋಹಿತನಾಗಿ ಜೀವಿಸುವ ವಿಪ್ರನು ಅಂತ್ಯದಲ್ಲಿ ಕಲುಷಗತಿಯನ್ನೇ ಪಡೆಯುತ್ತಾನೆ.

14094026a ತೇನ ದತ್ತಾನಿ ದಾನಾನಿ ಪಾಪೇನ ಹತಬುದ್ಧಿನಾ।
14094026c ತಾನಿ ಸತ್ತ್ವಮನಾಸಾದ್ಯ ನಶ್ಯಂತಿ ವಿಪುಲಾನ್ಯಪಿ।।

ಬುದ್ಧಿಯನ್ನು ಕಳೆದುಕೊಂಡ ಪಾಪಿಯು ಕೊಟ್ಟ ದಾನಗಳು ಸತ್ತ್ವಗಳನ್ನು ಪಡೆಯದೇ ವಿಪುಲವಾಗಿದ್ದರೂ ನಾಶವಾಗುತ್ತವೆ.

14094027a ತಸ್ಯಾಧರ್ಮಪ್ರವೃತ್ತಸ್ಯ ಹಿಂಸಕಸ್ಯ ದುರಾತ್ಮನಃ।
14094027c ದಾನೇ ನ ಕೀರ್ತಿರ್ಭವತಿ ಪ್ರೇತ್ಯ ಚೇಹ ಚ ದುರ್ಮತೇಃ।।

ಆ ಅಧರ್ಮಪ್ರವೃತ್ತಿಯ ದುರಾತ್ಮ ಹಿಂಸಕನ ದಾನದಿಂದ ಆ ದುರ್ಮತಿಗೆ ಇಲ್ಲಿ ಅಥವಾ ಮರಣದ ನಂತರ ಕೀರ್ತಿಯು ದೊರಕುವುದಿಲ್ಲ.

14094028a ಅಪಿ ಸಂಚಯಬುದ್ಧಿರ್ಹಿ ಲೋಭಮೋಹವಶಂಗತಃ।
14094028c ಉದ್ವೇಜಯತಿ ಭೂತಾನಿ ಹಿಂಸಯಾ ಪಾಪಚೇತನಃ।।

ಧನವನ್ನು ಸಂಗ್ರಹಿಸುವ ಬುದ್ಧಿಯುಳ್ಳ ಪಾಪಚೇತನನು ಲೋಭಮೋಹವಶಕ್ಕೆ ಬಂದು ಪ್ರಾಣಿಗಳನ್ನು ಹಿಂಸೆಯಿಂದ ಉದ್ವೇಗಗೊಳಿಸುತ್ತಾನೆ.

14094029a ಏವಂ ಲಬ್ಧ್ವಾ ಧನಂ ಲೋಭಾದ್ಯಜತೇ ಯೋ ದದಾತಿ ಚ।
14094029c ಸ ಕೃತ್ವಾ ಕರ್ಮಣಾ ತೇನ ನ ಸಿಧ್ಯತಿ ದುರಾಗಮಾತ್।।

ಲೋಭದಿಂದ ಹೀಗೆ ಸಂಪಾದಿಸಿದ ಧನದಿಂದ ಯಾರು ಯಜ್ಞಗಳನ್ನು ಮಾಡುತ್ತಾನೋ ಅಥವಾ ದಾನನೀಡುತ್ತಾನೋ ಅವನಿಗೆ ಕೆಟ್ಟದಾರಿಯಿಂದ ಆ ಧನವು ಬಂದಿರುವುದರಿಂದ, ಆ ಯಜ್ಞ-ದಾನಗಳ ಸಿದ್ಧಿಯಾಗುವುದಿಲ್ಲ.

14094030a ಉಂಚಂ ಮೂಲಂ ಫಲಂ ಶಾಕಮುದಪಾತ್ರಂ ತಪೋಧನಾಃ।
14094030c ದಾನಂ ವಿಭವತೋ ದತ್ತ್ವಾ ನರಾಃ ಸ್ವರ್ಯಾಂತಿ ಧರ್ಮಿಣಃ।।

ಧಾನ್ಯ, ಗೆಡ್ಡೆ-ಗೆಣಸುಗಳು, ಫಲ, ಜಲಪಾತ್ರೆ ಇವುಗಳನ್ನೂ ತಮ್ಮ ಶಕ್ತಿಗೆ ಅನುಗುಣವಾಗಿ ದಾನಮಾಡಿ ತಪೋಧನರು ಸ್ವರ್ಗಕ್ಕೆ ಹೋಗುತ್ತಾರೆ.

14094031a ಏಷ ಧರ್ಮೋ ಮಹಾಂಸ್ತ್ಯಾಗೋ ದಾನಂ ಭೂತದಯಾ ತಥಾ।
14094031c ಬ್ರಹ್ಮಚರ್ಯಂ ತಥಾ ಸತ್ಯಮನುಕ್ರೋಶೋ ಧೃತಿಃ ಕ್ಷಮಾ।
14094031e ಸನಾತನಸ್ಯ ಧರ್ಮಸ್ಯ ಮೂಲಮೇತತ್ ಸನಾತನಮ್।।

ಇದೇ ಧರ್ಮ. ಮಹಾತ್ಯಾಗ. ದಾನ ಮತ್ತು ಭೂತದಯೆ. ಇದೇ ಬ್ರಹ್ಮಚರ್ಯ, ಸತ್ಯ, ಅನುಕ್ರೋಶ, ಧೃತಿ ಮತ್ತು ಕ್ಷಮ. ಸನಾತನ ಧರ್ಮದ ಸನಾತನ ಮೂಲವೇ ಇದು.

14094032a ಶ್ರೂಯಂತೇ ಹಿ ಪುರಾ ವಿಪ್ರಾ ವಿಶ್ವಾಮಿತ್ರಾದಯೋ ನೃಪಾಃ।
14094032c ವಿಶ್ವಾಮಿತ್ರೋಽಸಿತಶ್ಚೈವ ಜನಕಶ್ಚ ಮಹೀಪತಿಃ।
14094032e ಕಕ್ಷಸೇನಾರ್ಷ್ಟಿಷೇಣೌ ಚ ಸಿಂಧುದ್ವೀಪಶ್ಚ ಪಾರ್ಥಿವಃ।।

ವಿಪ್ರರೇ! ಹಿಂದೆ ವಿಶ್ವಾಮಿತ್ರಾದಿ ನೃಪರು ಹೀಗೆಯೇ ಸಿದ್ಧಿಪಡೆದರೆಂದು ಕೇಳಿದ್ದೇವೆ. ವಿಶ್ವಾಮಿತ್ರ, ಅಸಿತ, ಮಹೀಪತಿ ಜನಕ, ಕಕ್ಷಸೇನ ಆರ್ಷ್ಟಿಷೇಣ, ಮತ್ತು ಪಾರ್ಥಿವ ಸಿಂಧುದ್ವೀಪ.

14094033a ಏತೇ ಚಾನ್ಯೇ ಚ ಬಹವಃ ಸಿದ್ಧಿಂ ಪರಮಿಕಾಂ ಗತಾಃ।
14094033c ನೃಪಾಃ ಸತ್ಯೈಶ್ಚ ದಾನೈಶ್ಚ ನ್ಯಾಯಲಬ್ಧೈಸ್ತಪೋಧನಾಃ।।

ಇವರು ಮತ್ತು ಇನ್ನೂ ಅನೇಕ ಇತರ ನೃಪ ತಪೋಧನರು ಸತ್ಯನಿಷ್ಟರಾಗಿ ನ್ಯಾಯವಾಗಿ ಪಡೆದುದನ್ನು ದಾನವನ್ನಿತ್ತು ಪರಮ ಸಿದ್ಧಿಯನ್ನು ಪಡೆದರು.

14094034a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾ ಯೇ ಚಾಶ್ರಿತಾಸ್ತಪಃ।
14094034c ದಾನಧರ್ಮಾಗ್ನಿನಾ ಶುದ್ಧಾಸ್ತೇ ಸ್ವರ್ಗಂ ಯಾಂತಿ ಭಾರತ।।

ಭಾರತ! ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರು ಯಾರೇ ತಪಸ್ಸನ್ನಾಚರಿಸಿ ಧಾನಧರ್ಮವೆಂಬ ಅಗ್ನಿಯಿಂದ ಶುದ್ಧರಾಗಿ ಸ್ವರ್ಗಕ್ಕೆ ಹೋಗುತ್ತಾರೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಹಿಂಸಾಮಿಶ್ರಧರ್ಮನಿಂದಾಯಾಂ ಚತುರ್ನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಹಿಂಸಾಮಿಶ್ರಧರ್ಮನಿಂದಾ ಎನ್ನುವ ತೊಂಭತ್ನಾಲ್ಕನೇ ಅಧ್ಯಾಯವು.


  1. ವಸು ಉಪರಿಚರ. ↩︎

  2. ಇದರ ನಂತರ ಭಾರತದರ್ಶನದಲ್ಲಿ ಈ ಶ್ಲೋಕವಿದೆ: ತಸ್ಮಾನ್ನ ವಾಚ್ಯಂ ಹ್ಯೇಕೇನ ಬಹುಜ್ಞೇನಾಪಿ ಸಂಶಯೇ। ಪ್ರಜಾಪತಿಮಪಾಹಾಯ ಸ್ವಯಂಭುವಮೃತೇ ಪ್ರಭುಮ್।। ಅರ್ಥಾತ್ ಆದುದರಿಂದ ಶಾಸ್ತ್ರ ವಿಷಯದಲ್ಲಿ ಯಾವುದಾದರೂ ಸಂದೇಹವುಂಟಾದರೆ ಅನೇಕ ಶಾಸ್ತ್ರಗಳನ್ನು ತಿಳಿದವನಾಗಿದ್ದರೂ ಪ್ರಭುವಾದ ಸ್ವಯಂಭು ಪ್ರಜಾಪತಿಯನ್ನು ಬಿಟ್ಟು ಬೇರೆ ಯಾರೂ ವಿವೇಚಿಸದೇ ನಿರ್ಣಯವನ್ನು ಹೇಳಿಬಿಡಬಾರದು. ↩︎