ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 93
ಸಾರ
ಮುಂಗುಸಿಯು ಉಂಚವೃತ್ತಿ ಬ್ರಾಹ್ಮಣನು ನೀಡಿದ ದಾನದ ಶ್ರೇಷ್ಠತೆಯನ್ನು ತಿಳಿಸಿದುದು (1-93).
14093001 ನಕುಲ ಉವಾಚ
14093001a ಹಂತ ವೋ ವರ್ತಯಿಷ್ಯಾಮಿ ದಾನಸ್ಯ ಪರಮಂ ಫಲಮ್।
14093001c ನ್ಯಾಯಲಬ್ಧಸ್ಯ ಸೂಕ್ಷ್ಮಸ್ಯ ವಿಪ್ರದತ್ತಸ್ಯ ಯದ್ದ್ವಿಜಾಃ।।
ಮುಂಗುಸಿಯು ಹೇಳಿತು: “ದ್ವಿಜರೇ! ಅಲ್ಪವಾದರೂ ಬ್ರಾಹ್ಮಣನು ನ್ಯಾಯವಾಗಿ ಪಡೆದುದನ್ನು ದಾನಮಾಡಿದುದರ ಮಹಾ ಫಲವೇನೆನ್ನುವುದನ್ನು ಹೇಳುತ್ತೇನೆ. ಕೇಳಿ.
14093002a ಧರ್ಮಕ್ಷೇತ್ರೇ ಕುರುಕ್ಷೇತ್ರೇ ಧರ್ಮಜ್ಞೈರ್ಬಹುಭಿರ್ವೃತೇ।
14093002c ಉಂಚವೃತ್ತಿರ್ದ್ವಿಜಃ ಕಶ್ಚಿತ್ಕಾಪೋತಿರಭವತ್ಪುರಾ।।
ಹಿಂದೆ ಅನೇಕ ಧರ್ಮಜ್ಞರಿಂದ ತುಂಬಿದ್ದ ಧರ್ಮಕ್ಷೇತ್ರ ಕುರುಕ್ಷೇತ್ರದಲ್ಲಿ ಉಂಚವೃತ್ತಿ1ಯಿಂದ ಜೀವಿಸುತ್ತಿದ್ದ ಓರ್ವ ಕಾಪೋತಿ2 ದ್ವಿಜನಿದ್ದನು.
14093003a ಸಭಾರ್ಯಃ ಸಹ ಪುತ್ರೇಣ ಸಸ್ನುಷಸ್ತಪಸಿ ಸ್ಥಿತಃ।
14093003c ವಧೂಚತುರ್ಥೋ ವೃದ್ಧಃ ಸ ಧರ್ಮಾತ್ಮಾ ನಿಯತೇಂದ್ರಿಯಃ।।
ಭಾರ್ಯೆ, ಪುತ್ರ ಮತ್ತು ಸೊಸೆಯೊಂದಿಗೆ ವಾಸಿಸುತ್ತಿದ್ದ ಆ ಧರ್ಮಾತ್ಮ ವೃದ್ಧನು ನಿಯತೇಂದ್ರಿಯನಾಗಿ ತಪಸ್ಸಿನಲ್ಲಿ ನಿರತನಾಗಿದ್ದನು.
14093004a ಷಷ್ಠೇ ಕಾಲೇ ತದಾ ವಿಪ್ರೋ ಭುಂಕ್ತೇ ತೈಃ ಸಹ ಸುವ್ರತಃ।
14093004c ಷಷ್ಠೇ ಕಾಲೇ ಕದಾ ಚಿಚ್ಚ ತಸ್ಯಾಹಾರೋ ನ ವಿದ್ಯತೇ।
14093004e ಭುಂಕ್ತೇಽನ್ಯಸ್ಮಿನ್ಕದಾ ಚಿತ್ಸ ಷಷ್ಠೇ ಕಾಲೇ ದ್ವಿಜೋತ್ತಮಃ।।
ಆ ದ್ವಿಜಸತ್ತಮನು ಪ್ರತಿ ಆರನೆಯ ಕಾಲದಲ್ಲಿ (ಮೂರು ದಿನಗಳಿಗೊಮ್ಮೆ) ತನ್ನ ಕುಟುಂಬದವರೊಡನೆ ಊಟ ಮಾಡುತ್ತಿದ್ದನು. ಒಂದುವೇಳೆ ಮೂರು ದಿನಗಳಲ್ಲಿ ಆಹಾರವು ದೊರೆಯದೇ ಇದ್ದರೆ ಪುನಃ ಮುಂದಿನ ಮೂರು ದಿನಗಳು ಬರುವವರೆಗೆ ಕಾಯ್ದಿದ್ದು ಊಟ ಮಾಡುತ್ತಿದ್ದನು.
14093005a ಕಪೋತಧರ್ಮಿಣಸ್ತಸ್ಯ ದುರ್ಭಿಕ್ಷೇ ಸತಿ ದಾರುಣೇ।
14093005c ನಾವಿದ್ಯತ ತದಾ ವಿಪ್ರಾಃ ಸಂಚಯಸ್ತಾನ್ನಿಬೋಧತ।
14093005e ಕ್ಷೀಣೌಷಧಿಸಮಾವಾಯೋ ದ್ರವ್ಯಹೀನೋಽಭವತ್ ತದಾ।।
ಹೀಗೆ ಅವನು ಕಪೋತಧರ್ಮವನ್ನು ನಿರ್ವಹಿಸುತ್ತಿದ್ದಾಗ ಒಮ್ಮೆ ದಾರುಣ ದುರ್ಭಿಕ್ಷವುಂಟಾಯಿತು. ವಿಪ್ರರೇ! ಆಗ ಅವನಲ್ಲಿ ಧಾನ್ಯಗಳ ಸಂಗ್ರಹವಿರಲಿಲ್ಲ. ಗದ್ದೆಗಳು ಒಣಗಿ ಹೋಗಿದ್ದವು. ಆಗ ಅವನು ದ್ರವ್ಯಹೀನನಾದನು.
14093006a ಕಾಲೇ ಕಾಲೇಽಸ್ಯ ಸಂಪ್ರಾಪ್ತೇ ನೈವ ವಿದ್ಯೇತ ಭೋಜನಮ್।
14093006c ಕ್ಷುಧಾಪರಿಗತಾಃ ಸರ್ವೇ ಪ್ರಾತಿಷ್ಠಂತ ತದಾ ತು ತೇ।।
ಆರನೆಯ ಕಾಲವು ಒಂದಾದ ಮೇಲೆ ಒಂದರಂತೆ ಬರುತ್ತಿತ್ತೇ ಹೊರತು ಅವನಲ್ಲಿ ಊಟಕ್ಕೆ ಏನೂ ಇರಲಿಲ್ಲ. ಆಗ ಕುಟುಂಬದ ಎಲ್ಲರೂ ಹಸಿವೆಯಿಂದ ಪೀಡಿತರಾದರು.
14093007a ಉಂಚಂಸ್ತದಾ ಶುಕ್ಲಪಕ್ಷೇ ಮಧ್ಯಂ ತಪತಿ ಭಾಸ್ಕರೇ।
14093007c ಉಷ್ಣಾರ್ತಶ್ಚ ಕ್ಷುಧಾರ್ತಶ್ಚ ಸ ವಿಪ್ರಸ್ತಪಸಿ ಸ್ಥಿತಃ।
14093007e ಉಂಚಮಪ್ರಾಪ್ತವಾನೇವ ಸಾರ್ಧಂ ಪರಿಜನೇನ ಹ।।
ಜ್ಯೇಷ್ಠ ಶುಕ್ಲಪಕ್ಷದ ಒಂದು ದಿನ ಅವರು ಮಧ್ಯಾಹ್ನದ ವೇಳೆಯಲ್ಲಿ ಸೂರ್ಯನು ಅಧಿಕ ತಾಪವನ್ನುಂಟುಮಾಡುತ್ತಿದ್ದಾಗ ಕಾಳುಗಳನ್ನು ಆರಿಸಿಕೊಂಡು ಬರಲು ಒಟ್ಟಾಗಿ ಹೊರಟರು.
14093008a ಸ ತಥೈವ ಕ್ಷುಧಾವಿಷ್ಟಃ ಸ್ಪೃಷ್ಟ್ವಾ ತೋಯಂ ಯಥಾವಿಧಿ।
14093008c ಕ್ಷಪಯಾಮಾಸ ತಂ ಕಾಲಂ ಕೃಚ್ಚ್ರಪ್ರಾಣೋ ದ್ವಿಜೋತ್ತಮಃ।।
ಹಾಗೆ ಹಸಿವೆಯಿಂದ ಬಳಲಿದ್ದರೂ ಯಥಾವಿಧಿಯಾಗಿ ಆಚಮನ ಮಾಡಿ ಕಷ್ಟಪಟ್ಟು ಪ್ರಾಣಗಳನ್ನು ಹಿಡಿದಿಟ್ಟುಕೊಂಡಿದ್ದ ಆ ದ್ವಿಜೋತ್ತಮನು ಕಾಲವನ್ನು ಕಳೆದನು.
14093009a ಅಥ ಷಷ್ಠೇ ಗತೇ ಕಾಲೇ ಯವಪ್ರಸ್ಥಮುಪಾರ್ಜಯತ್।
14093009c ಯವಪ್ರಸ್ಥಂ ಚ ತೇ ಸಕ್ತೂನಕುರ್ವಂತ ತಪಸ್ವಿನಃ।।
ಮತ್ತೊಂದು ಮೂರನೆಯ ದಿನವು ಪ್ರಾಪ್ತವಾಗಲು ಆ ತಪಸ್ವಿಗಳು ಒಂದು ಸೇರಿನಷ್ಟು ಯವೆಯನ್ನು ಸಂಗ್ರಹಿಸಿದರು.
14093010a ಕೃತಜಪ್ಯಾಹ್ವಿಕಾಸ್ತೇ ತು ಹುತ್ವಾ ವಹ್ನಿಂ ಯಥಾವಿಧಿ।
14093010c ಕುಡವಂ ಕುಡವಂ ಸರ್ವೇ ವ್ಯಭಜಂತ ತಪಸ್ವಿನಃ।।
ಜಪ-ಆಹ್ನೀಕಗಳನ್ನು ಪೂರೈಸಿ ಯಥಾವಿಧಿಯಾಗಿ ಅಗ್ನಿಯಲ್ಲಿ ಹೋಮ ಮಾಡಿ ಆ ತಪಸ್ವಿಗಳೆಲ್ಲರೂ ಒಂದೊಂದು ಪಾವಿನಷ್ಟು ಹಿಟ್ಟನ್ನು ಹಂಚಿಕೊಂಡರು.
14093011a ಅಥಾಗಚ್ಚದ್ದ್ವಿಜಃ ಕಶ್ಚಿದತಿಥಿರ್ಭುಂಜತಾಂ ತದಾ।
14093011c ತೇ ತಂ ದೃಷ್ಟ್ವಾತಿಥಿಂ ತತ್ರ ಪ್ರಹೃಷ್ಟಮನಸೋಽಭವನ್।।
ಅವರು ಹಾಗೆ ತಿನ್ನಬೇಕೆಂದಿರುವಾಗ ಅಲ್ಲಿಗೆ ಓರ್ವ ದ್ವಿಜನು ಅತಿಥಿಯಾಗಿ ಆಗಮಿಸಿದನು. ಅಲ್ಲಿ ಅತಿಥಿಯನ್ನು ನೋಡಿ ಅವರು ಪ್ರಹೃಷ್ಟಮನಸ್ಕರಾದರು.
14093012a ತೇಽಭಿವಾದ್ಯ ಸುಖಪ್ರಶ್ನಂ ಪೃಷ್ಟ್ವಾ ತಮತಿಥಿಂ ತದಾ।
14093012c ವಿಶುದ್ಧಮನಸೋ ದಾಂತಾಃ ಶ್ರದ್ಧಾದಮಸಮನ್ವಿತಾಃ।।
14093013a ಅನಸೂಯವೋ ಗತಕ್ರೋಧಾಃ ಸಾಧವೋ ಗತಮತ್ಸರಾಃ।
14093013c ತ್ಯಕ್ತಮಾನಾ ಜಿತಕ್ರೋಧಾ ಧರ್ಮಜ್ಞಾ ದ್ವಿಜಸತ್ತಮಾಃ।।
14093014a ಸಬ್ರಹ್ಮಚರ್ಯಂ ಸ್ವಂ ಗೋತ್ರಂ ಸಮಾಖ್ಯಾಯ ಪರಸ್ಪರಮ್।
14093014c ಕುಟೀಂ ಪ್ರವೇಶಯಾಮಾಸುಃ ಕ್ಷುಧಾರ್ತಮತಿಥಿಂ ತದಾ।।
ಆಗ ಆ ಅತಿಥಿಯನ್ನು ಅಭಿವಂದಿಸಿ ಸುಖಪ್ರಶ್ನೆಗಳನ್ನು ಕೇಳಿ ವಿಶುದ್ಧಮನಸ್ಸಿನ, ಕ್ರೋಧ-ಮತ್ಸರಗಳನ್ನು ತೊರೆದಿದ್ದ, ಮಾನವನ್ನು ತ್ಯಜಿಸಿದ್ದ, ಕ್ರೋಧವನ್ನು ಗೆದ್ದಿದ್ದ ಬ್ರಹ್ಮಚರ್ಯದಲ್ಲಿದ್ದ ಆ ಸಾಧು ಧರ್ಮಜ್ಞ ದ್ವಿಜಸತ್ತಮರು ಪರಸ್ಪರರಲ್ಲಿ ತಮ್ಮ ಗೋತ್ರಗಳನ್ನು ಹೇಳಿಕೊಂಡು ಹಸಿವೆಯಿಂದ ಪೀಡಿತನಾಗಿದ್ದ ಅತಿಥಿಯೊಂದಿಗೆ ಕುಟೀರವನ್ನು ಪ್ರವೇಶಿಸಿದರು.
14093015a ಇದಮರ್ಘ್ಯಂ ಚ ಪಾದ್ಯಂ ಚ ಬೃಸೀ ಚೇಯಂ ತವಾನಘ।
14093015c ಶುಚಯಃ ಸಕ್ತವಶ್ಚೇಮೇ ನಿಯಮೋಪಾರ್ಜಿತಾಃ ಪ್ರಭೋ।
14093015e ಪ್ರತಿಗೃಹ್ಣೀಷ್ವ ಭದ್ರಂ ತೇ ಮಯಾ ದತ್ತಾ ದ್ವಿಜೋತ್ತಮ।।
“ಅನಘ! ಪ್ರಭೋ! ದ್ವಿಜೋತ್ತಮ! ನಿನಗೆ ಮಂಗಳವಾಗಲಿ! ಇದೋ ನಿನಗೆ ಅರ್ಘ್ಯ, ಪಾದ್ಯ ಮತ್ತು ದರ್ಭಾಸನ. ಇದೋ ನಿಯಮಪೂರ್ವಕವಾಗಿ ಸಂಗ್ರಹಿಸಿದ ಶುದ್ಧ ಹಿಟ್ಟಿನುಂಡೆಗಳು! ನಾವು ನೀಡುತ್ತಿರುವ ಇವುಗಳನ್ನು ಸ್ವೀಕರಿಸು!”
14093016a ಇತ್ಯುಕ್ತಃ ಪ್ರತಿಗೃಹ್ಯಾಥ ಸಕ್ತೂನಾಂ ಕುಡವಂ ದ್ವಿಜಃ।
14093016c ಭಕ್ಷಯಾಮಾಸ ರಾಜೇಂದ್ರ ನ ಚ ತುಷ್ಟಿಂ ಜಗಾಮ ಸಃ।।
ಹೀಗೆ ಹೇಳಲು ಆ ದ್ವಿಜನು ಹಿಟ್ಟಿನ ಉಂಡೆಗಳನ್ನು ಸ್ವೀಕರಿಸಿದನು. ರಾಜೇಂದ್ರ! ಅವುಗಳನ್ನು ತಿಂದರೂ ಅವನಿಗೆ ತೃಪ್ತಿಯೆನಿಸಲಿಲ್ಲ.
14093017a ಸ ಉಂಚವೃತ್ತಿಃ ತಂ ಪ್ರೇಕ್ಷ್ಯ ಕ್ಷುಧಾಪರಿಗತಂ ದ್ವಿಜಮ್।
14093017c ಆಹಾರಂ ಚಿಂತಯಾಮಾಸ ಕಥಂ ತುಷ್ಟೋ ಭವೇದಿತಿ।।
ದ್ವಿಜನು ಇನ್ನೂ ಹಸಿದಿದ್ದುದನ್ನು ನೋಡಿದ ಆ ಉಂಚವೃತ್ತಿಯವರು ಹೇಗೆ ಅವನನ್ನು ಆಹಾರದಿಂದ ಸಂತುಷ್ಟಿಗೊಳಿಸಬಹುದು ಎಂದು ಚಿಂತಿಸಿದರು.
14093018a ತಸ್ಯ ಭಾರ್ಯಾಬ್ರವೀದ್ರಾಜನ್ಮದ್ಭಾಗೋ ದೀಯತಾಮಿತಿ।
14093018c ಗಚ್ಚತ್ವೇಷ ಯಥಾಕಾಮಂ ಸಂತುಷ್ಟೋ ದ್ವಿಜಸತ್ತಮಃ।।
ರಾಜನ್! ಬ್ರಾಹ್ಮಣನ ಪತ್ನಿಯು “ನನ್ನ ಪಾಲನ್ನು ನೀಡು. ಅದನ್ನು ಭುಂಜಿಸಿ ದ್ವಿಜಸತ್ತಮನು ಸಂತುಷ್ಟನಾಗಿ ಬೇಕೆಂದಲ್ಲಿಗೆ ಹೋಗಲಿ” ಎಂದಳು.
14093019a ಇತಿ ಬ್ರುವಂತೀಂ ತಾಂ ಸಾಧ್ವೀಂ ಧರ್ಮಾತ್ಮಾ ಸ ದ್ವಿಜರ್ಷಭಃ।
14093019c ಕ್ಷುಧಾಪರಿಗತಾಂ ಜ್ಞಾತ್ವಾ ಸಕ್ತೂಂಸ್ತಾನ್ನಾಭ್ಯನಂದತ।।
ಹೀಗೆ ಹೇಳಿದ ಆ ಸಾಧ್ವಿಯು ಹಸಿವೆಯಿಂದ ಬಳಲುತ್ತಿರುವುದನ್ನು ತಿಳಿದ ಆ ಧರ್ಮಾತ್ಮ ದ್ವಿಜರ್ಷಭನು ಅವಳ ಪಾಲಿನ ಹಿಟ್ಟಿನುಂಡೆಯನ್ನು ತೆಗೆದುಕೊಳ್ಳಲು ಇಷ್ಟಪಡಲಿಲ್ಲ.
14093020a ಜಾನನ್ವೃದ್ಧಾಂ ಕ್ಷುಧಾರ್ತಾಂ ಚ ಶ್ರಾಂತಾಂ ಗ್ಲಾನಾಂ ತಪಸ್ವಿನೀಮ್।
14093020c ತ್ವಗಸ್ಥಿಭೂತಾಂ ವೇಪಂತೀಂ ತತೋ ಭಾರ್ಯಾಮುವಾಚ ತಾಮ್।।
ಹಸಿವೆಯಿಂದ ಪೀಡಿತಳಾಗಿ ಆಯಾಸಗೊಂಡಿರುವ, ಬಳಲಿದ್ದ, ಕೇವಲ ಚರ್ಮ-ಮೂಳೆಗಳನ್ನು ಹೊಂದಿದ್ದ, ನಡುಗುತ್ತಿದ್ದ ಆ ವೃದ್ಧ ತಪಸ್ವಿನಿ ಪತ್ನಿಗೆ ಅವನು ಇಂತೆಂದನು:
14093021a ಅಪಿ ಕೀಟಪತಂಗಾನಾಂ ಮೃಗಾಣಾಂ ಚೈವ ಶೋಭನೇ।
14093021c ಸ್ತ್ರಿಯೋ ರಕ್ಷ್ಯಾಶ್ಚ ಪೋಷ್ಯಾಶ್ಚ ನೈವಂ ತ್ವಂ ವಕ್ತುಮರ್ಹಸಿ।।
“ಶೋಭನೇ! ಕೀಟ-ಪತಂಗ-ಮೃಗಗಳಿಗೂ ಸ್ತ್ರೀಯನ್ನು ರಕ್ಷಿಸುವುದು ಮತ್ತು ಪೋಷಿಸುವುದು ಕರ್ತ್ಯವ್ಯವಾಗಿರುವಾಗ ನೀನು ಹೀಗೆ ಹೇಳುವುದು ಸರಿಯಲ್ಲ.
14093022a ಅನುಕಂಪಿತೋ ನರೋ ನಾರ್ಯಾ ಪುಷ್ಟೋ ರಕ್ಷಿತ ಏವ ಚ।
14093022c ಪ್ರಪತೇದ್ಯಶಸೋ ದೀಪ್ತಾನ್ನ ಚ ಲೋಕಾನವಾಪ್ನುಯಾತ್।। 3
ನಾರಿಯ ಅನುಕಂಪಕ್ಕೆ ಪಾತ್ರನಾಗಿ ಅವಳಿಂದ ಪೋಷಿಸಿ ರಕ್ಷಿಸಲ್ಪಡುವವನು ಉಜ್ವಲ ಕೀರ್ತಿಯಿಂದ ಭ್ರಷ್ಟನಾಗುತ್ತಾನೆ ಮತ್ತು ಉತ್ತಮ ಲೋಕಗಳೂ ಅವನಿಗೆ ದೊರೆಯುವುದಿಲ್ಲ.”
14093023a ಇತ್ಯುಕ್ತಾ ಸಾ ತತಃ ಪ್ರಾಹ ಧರ್ಮಾರ್ಥೌ ನೌ ಸಮೌ ದ್ವಿಜ।
14093023c ಸಕ್ತುಪ್ರಸ್ಥಚತುರ್ಭಾಗಂ ಗೃಹಾಣೇಮಂ ಪ್ರಸೀದ ಮೇ।।
ಅವನು ಹೀಗೆ ಹೇಳಲು ಅವಳು ಹೇಳಿದಳು: “ದ್ವಿಜ! ಪ್ರಸನ್ನನಾಗು! ಧರ್ಮಾರ್ಥಗಳು ನಮಗಿಬ್ಬರಿಗೂ ಸಮಾನವಲ್ಲವೇ? ಆದುದರಿಂದ ಹಿಟ್ಟಿನುಂಡೆಯ ಈ ನಾಲ್ಕನೆಯ ಒಂದು ಭಾಗವನ್ನು ಸ್ವೀಕರಿಸು.
14093024a ಸತ್ಯಂ ರತಿಶ್ಚ ಧರ್ಮಶ್ಚ ಸ್ವರ್ಗಶ್ಚ ಗುಣನಿರ್ಜಿತಃ।
14093024c ಸ್ತ್ರೀಣಾಂ ಪತಿಸಮಾಧೀನಂ ಕಾಂಕ್ಷಿತಂ ಚ ದ್ವಿಜೋತ್ತಮ।।
ದ್ವಿಜೋತ್ತಮ! ಸ್ತ್ರೀಯ ಸತ್ಯ, ರತಿ, ಧರ್ಮ ಗುಣಗಳಿಂದ ಗೆಲ್ಲಲ್ಪಟ್ಟ ಸ್ವರ್ಗವು ಪತಿಯ ಸಮಾಧೀನವಾಗುತ್ತದೆ.
14093025a ಋತುರ್ಮಾತುಃ ಪಿತುರ್ಬೀಜಂ ದೈವತಂ ಪರಮಂ ಪತಿಃ।
14093025c ಭರ್ತುಃ ಪ್ರಸಾದಾತ್ ಸ್ತ್ರೀಣಾಂ ವೈ ರತಿಃ ಪುತ್ರಫಲಂ ತಥಾ।।
ತಾಯಿಯ ಋತು ಮತ್ತು ತಂದೆಯ ಬೀಜಗಳಿಂದಲೇ ವಂಶದ ವೃದ್ಧಿಯಾಗುತ್ತದೆ. ಸ್ತ್ರೀಗೆ ಪತಿಯೇ ಪರವ ದೈವವು. ಪತಿಯ ಪ್ರಸಾದದಿಂದಲೇ ಸ್ತ್ರೀಗೆ ರತಿ ಮತ್ತು ಪುತ್ರಫಲಗಳು ಲಭ್ಯವಾಗುತ್ತವೆ.
14093026a ಪಾಲನಾದ್ಧಿ ಪತಿಸ್ತ್ವಂ ಮೇ ಭರ್ತಾಸಿ ಭರಣಾನ್ಮಮ।
14093026c ಪುತ್ರಪ್ರದಾನಾದ್ವರದಸ್ತಸ್ಮಾತ್ಸಕ್ತೂನ್ಗೃಹಾಣ ಮೇ।।
ಪಾಲನೆಮಾಡುತ್ತಿರುವ ನೀನು ನನ್ನ ಪತಿಯೆನಿಸಿಕೊಂಡಿರುವೆ. ನನ್ನನ್ನು ಭರಿಸುವುದರಿಂದ ನೀನು ನನ್ನ ಭರ್ತೃ ಎಂದೆನಿಸಿಕೊಂಡಿರುವೆ. ಪುತ್ರನನ್ನು ನೀಡಿರುವೆಯಾದುದರಿಂದ ನೀನು ವರದನೂ ಆಗಿರುವೆ. ನನ್ನ ಈ ಹಿಟ್ಟಿನುಂಡೆಯನ್ನು ಪ್ರತಿಗ್ರಹಿಸು.
14093027a ಜರಾಪರಿಗತೋ ವೃದ್ಧಃ ಕ್ಷುಧಾರ್ತೋ ದುರ್ಬಲೋ ಭೃಶಮ್।
14093027c ಉಪವಾಸಪರಿಶ್ರಾಂತೋ ಯದಾ ತ್ವಮಪಿ ಕರ್ಶಿತಃ।।
ನೀನು ಕೂಡ ಮುಪ್ಪಿನಿಂದ ಜೀರ್ಣನಾಗಿರುವೆ. ವೃದ್ಧನಾಗಿರುವೆ. ಹಸಿವೆಯಿಂದ ಬಳಲಿ ತುಂಬಾ ದುರ್ಬಲನಾಗಿರುವೆ. ಉಪವಾಸಗಳಿಂದ ಆಯಾಸಗೊಂಡು ನೀನೂ ಕೂಡ ಕ್ಷೀಣಕಾಯನಾಗಿರುವೆ.”
14093028a ಇತ್ಯುಕ್ತಃ ಸ ತಯಾ ಸಕ್ತೂನ್ಪ್ರಗೃಹ್ಯೇದಂ ವಚೋಽಬ್ರವೀತ್।
14093028c ದ್ವಿಜ ಸಕ್ತೂನಿಮಾನ್ಭೂಯಃ ಪ್ರತಿಗೃಹ್ಣೀಷ್ವ ಸತ್ತಮ।।
ಅವಳು ಹೀಗೆ ಹೇಳಲು ಬ್ರಾಹ್ಮಣನು ಅವಳಿಂದ ಹಿಟ್ಟಿನ ಉಂಡೆಯನ್ನು ಪಡೆದು ಅದನ್ನು ಅತಿಥಿಗೆ ನೀಡಿ “ದ್ವಿಜ! ಸತ್ತಮ! ಈ ಹಿಟ್ಟಿನ ಉಂಡೆಯನ್ನೂ ಸ್ವೀಕರಿಸು!” ಎಂದನು.
14093029a ಸ ತಾನ್ಪ್ರಗೃಹ್ಯ ಭುಕ್ತ್ವಾ ಚ ನ ತುಷ್ಟಿಮಗಮದ್ದ್ವಿಜಃ।
14093029c ತಮುಂಚವೃತ್ತಿರಾಲಕ್ಷ್ಯ ತತಶ್ಚಿಂತಾಪರೋಽಭವತ್।।
ಅದನ್ನೂ ಸ್ವೀಕರಿಸಿ ತಿಂದ ದ್ವಿಜನು ತುಷ್ಟನಾಗಲಿಲ್ಲ. ಅದನ್ನು ನೋಡಿದ ಉಂಚವೃತ್ತಿಯವರು ಇನ್ನೂ ಚಿಂತಾಪರರಾದರು.
14093030 ಪುತ್ರ ಉವಾಚ
14093030a ಸಕ್ತೂನಿಮಾನ್ಪ್ರಗೃಹ್ಯ ತ್ವಂ ದೇಹಿ ವಿಪ್ರಾಯ ಸತ್ತಮ।
14093030c ಇತ್ಯೇವಂ ಸುಕೃತಂ ಮನ್ಯೇ ತಸ್ಮಾದೇತತ್ಕರೋಮ್ಯಹಮ್।।
ಪುತ್ರನು ಹೇಳಿದನು: “ಈ ಹಿಟ್ಟಿನ ಉಂಡೆಗಳನ್ನು ಪಡೆದು ವಿಪ್ರನಿಗೆ ನೀಡು. ಇದೇ ಸುಕೃತವೆಂದು ನನಗನ್ನಿಸುತ್ತದೆ. ಆದುದರಿಂದ ಇದನ್ನು ನಾನು ಕೊಡುತ್ತೇನೆ.
14093031a ಭವಾನ್ ಹಿ ಪರಿಪಾಲ್ಯೋ ಮೇ ಸರ್ವಯತ್ನೈರ್ದ್ವಿಜೋತ್ತಮ।
14093031c ಸಾಧೂನಾಂ ಕಾಂಕ್ಷಿತಂ ಹ್ಯೇತತ್ಪಿತುರ್ವೃದ್ಧಸ್ಯ ಪೋಷಣಮ್।।
ದ್ವಿಜೋತ್ತಮ! ಸರ್ವ ಪ್ರಯತ್ನಗಳಿಂದಲೂ ನಿನ್ನನ್ನು ಪರಿಪಾಲಿಸುವುದು ನನ್ನ ಕರ್ತ್ಯವ್ಯ. ವೃದ್ಧ ತಂದೆಯ ಪೋಷಣೆಯನ್ನು ಸಾಧುಗಳು ಬಯಸುತ್ತಾರೆ.
14093032a ಪುತ್ರಾರ್ಥೋ ವಿಹಿತೋ ಹ್ಯೇಷ ಸ್ಥಾವಿರ್ಯೇ ಪರಿಪಾಲನಮ್।
14093032c ಶ್ರುತಿರೇಷಾ ಹಿ ವಿಪ್ರರ್ಷೇ ತ್ರಿಷು ಲೋಕೇಷು ವಿಶ್ರುತಾ।।
ವೃದ್ಧನನ್ನು ಪರಿಪಾಲಿಸುವುದು ಪುತ್ರನಿಗೆ ವಿಹಿಸಿದ ಧರ್ಮ. ವಿಪ್ರರ್ಷೇ! ಇದನ್ನೇ ಮೂರು ಲೋಕಗಳಲ್ಲಿಯೂ ಶ್ರುತಿಗಳು ಸಾರುತ್ತವೆ.
14093033a ಪ್ರಾಣಧಾರಣಮಾತ್ರೇಣ ಶಕ್ಯಂ ಕರ್ತುಂ ತಪಸ್ತ್ವಯಾ।
14093033c ಪ್ರಾಣೋ ಹಿ ಪರಮೋ ಧರ್ಮಃ ಸ್ಥಿತೋ ದೇಹೇಷು ದೇಹಿನಾಮ್।।
ಪ್ರಾಣಧಾರಣಮಾತ್ರದಿಂದಲೇ ನೀನು ತಪಸ್ಸನ್ನಾಚರಿಸಲು ಶಕ್ಯನಾಗುತ್ತೀಯೆ. ದೇಹಧಾರಿಗಳಿಗೆ ದೇಹದಲ್ಲಿರುವ ಪ್ರಾಣವೇ ಪರಮ ಧರ್ಮ.”
14093034 ಪಿತೋವಾಚ
14093034a ಅಪಿ ವರ್ಷಸಹಸ್ರೀ ತ್ವಂ ಬಾಲ ಏವ ಮತೋ ಮಮ।
14093034c ಉತ್ಪಾದ್ಯ ಪುತ್ರಂ ಹಿ ಪಿತಾ ಕೃತಕೃತ್ಯೋ ಭವತ್ಯುತ।।
ತಂದೆಯು ಹೇಳಿದನು: “ನಿನಗೆ ಸಹಸ್ರ ವರ್ಷಗಳಾದರೂ ನೀನು ನನಗೆ ಬಾಲಕನಂತೆಯೇ! ಪುತ್ರನನ್ನು ಪಡೆದಾಗಲೇ ತಂದೆಯು ಕೃತಕೃತ್ಯನಾಗುತ್ತಾನೆ ಎಂದು ಹೇಳುತ್ತಾರೆ.
14093035a ಬಾಲಾನಾಂ ಕ್ಷುದ್ಬಲವತೀ ಜಾನಾಮ್ಯೇತದಹಂ ವಿಭೋ।
14093035c ವೃದ್ಧೋಽಹಂ ಧಾರಯಿಷ್ಯಾಮಿ ತ್ವಂ ಬಲೀ ಭವ ಪುತ್ರಕ।।
ಪುತ್ರಕ! ಬಾಲಕರ ಹಸಿವೆಯು ಬಲವತ್ತರವಾದುದು ಎನ್ನುವುದನ್ನು ನಾನು ತಿಳಿದುಕೊಂಡಿದ್ದೇನೆ. ವೃದ್ಧನಾದ ನಾನು ಹಸಿವೆಯನ್ನು ತಡೆದುಕೊಳ್ಳುತ್ತಾನೆ. ಹಿಟ್ಟಿನುಂಡೆಯನ್ನು ತಿಂದು ನೀನು ಬಲಿಷ್ಟನಾಗು.
14093036a ಜೀರ್ಣೇನ ವಯಸಾ ಪುತ್ರ ನ ಮಾ ಕ್ಷುದ್ಬಾಧತೇಽಪಿ ಚ।
14093036c ದೀರ್ಘಕಾಲಂ ತಪಸ್ತಪ್ತಂ ನ ಮೇ ಮರಣತೋ ಭಯಮ್।।
ಪುತ್ರ! ವಯಸ್ಸಿನಲ್ಲಿ ಜೀರ್ಣನಾಗಿರುವ ನನ್ನನ್ನು ಹಸಿವೆಯು ಬಾಧಿಸುವುದಿಲ್ಲ. ದೀರ್ಘಕಾಲ ತಪಸ್ಸನ್ನು ತಪಿಸಿರುವ ನನಗೆ ಮರಣದ ಭಯವೂ ಇಲ್ಲ.”
14093037 ಪುತ್ರ ಉವಾಚ
14093037a ಅಪತ್ಯಮಸ್ಮಿ ತೇ ಪುತ್ರಸ್ತ್ರಾಣಾತ್ಪುತ್ರೋ ಹಿ ವಿಶ್ರುತಃ।
14093037c ಆತ್ಮಾ ಪುತ್ರಃ ಸ್ಮೃತಸ್ತಸ್ಮಾತ್ತ್ರಾಹ್ಯಾತ್ಮಾನಮಿಹಾತ್ಮನಾ।।
ಪುತ್ರನು ಹೇಳಿದನು: “ನಾನು ನಿನ್ನ ಪುತ್ರನಾಗಿದ್ದೇನೆ. ಪುರುಷನನು ರಕ್ಷಿಸುವುದರಿಂದಲೇ ಪುತ್ರನೆನಿಸಿಕೊಳ್ಳುತ್ತಾನೆ. ಪುತ್ರನನ್ನು ಆತ್ಮನೆಂದೇ ಹೇಳುತ್ತಾರೆ. ಆತ್ಮನಿಂದ ಅತ್ಮನನ್ನು ರಕ್ಷಣೆಮಾಡಿಕೋ!”
14093038 ಪಿತೋವಾಚ
14093038a ರೂಪೇಣ ಸದೃಶಸ್ತ್ವಂ ಮೇ ಶೀಲೇನ ಚ ದಮೇನ ಚ।
14093038c ಪರೀಕ್ಷಿತಶ್ಚ ಬಹುಧಾ ಸಕ್ತೂನಾದದ್ಮಿ ತೇ ತತಃ।।
ತಂದೆಯು ಹೇಳಿದನು: “ರೂಪ, ಶೀಲ ಮತ್ತು ಇಂದ್ರಿಯಸಂಯಮಗಳಲ್ಲಿ ನೀನು ನನ್ನ ಹಾಗೆಯೇ ಇದ್ದೀಯೆ. ನಿನ್ನನ್ನು ಅನೇಕ ಬಾರಿ ಪರೀಕ್ಷಿಸಿದ್ದೇನೆ ಕೂಡ. ಆದುದರಿಂದ ನಿನ್ನ ಈ ಹಿಟ್ಟಿನುಂಡೆಯನ್ನು ತೆಗೆದುಕೊಳ್ಳುತ್ತೇನೆ.”
14093039a ಇತ್ಯುಕ್ತ್ವಾದಾಯ ತಾನ್ಸಕ್ತೂನ್ಪ್ರೀತಾತ್ಮಾ ದ್ವಿಜಸತ್ತಮಃ।
14093039c ಪ್ರಹಸನ್ನಿವ ವಿಪ್ರಾಯ ಸ ತಸ್ಮೈ ಪ್ರದದೌ ತದಾ।।
ಹೀಗೆ ಹೇಳಿ ಪ್ರೀತಾತ್ಮನಾದ ಆ ದ್ವಿಜಸತ್ತಮನು ಮಗನ ಹಿಟ್ಟಿನುಂಡೆಯನ್ನು ತೆಗೆದುಕೊಂಡು ನಸುನಗುತ್ತಾ ಅತಿಥಿ ವಿಪ್ರನಿಗೆ ನೀಡಿದನು.
14093040a ಭುಕ್ತ್ವಾ ತಾನಪಿ ಸಕ್ತೂನ್ಸ ನೈವ ತುಷ್ಟೋ ಬಭೂವ ಹ।
14093040c ಉಂಚವೃತ್ತಿಸ್ತು ಸವ್ರೀಡೋ ಬಭೂವ ದ್ವಿಜಸತ್ತಮಃ।।
ಆ ಉಂಡೆಯನ್ನು ಉಂಡೂ ಅವನು ತುಷ್ಟನಾಗಲಿಲ್ಲ. ಆಗ ಉಂಚವೃತ್ತಿಯ ದ್ವಿಜಸತ್ತಮನು ಅತೀವವಾಗಿ ನಾಚಿಕೊಂಡನು.
14093041a ತಂ ವೈ ವಧೂಃ ಸ್ಥಿತಾ ಸಾಧ್ವೀ ಬ್ರಾಹ್ಮಣಪ್ರಿಯಕಾಮ್ಯಯಾ।
14093041c ಸಕ್ತೂನಾದಾಯ ಸಂಹೃಷ್ಟಾ ಗುರುಂ ತಂ ವಾಕ್ಯಮಬ್ರವೀತ್।।
ಆಗ ಅವನ ಸಾಧ್ವೀ ಸೊಸೆಯು ಬ್ರಾಹ್ಮಣನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ಸಂಹೃಷ್ಟಳಾಗಿ ತನ್ನ ಹಿಟ್ಟಿನುಂಡೆಯನ್ನು ತೆಗೆದು ಮಾವನಿಗೆ ಕೊಟ್ಟು ಹೇಳಿದಳು:
14093042a ಸಂತಾನಾತ್ತವ ಸಂತಾನಂ ಮಮ ವಿಪ್ರ ಭವಿಷ್ಯತಿ।
14093042c ಸಕ್ತೂನಿಮಾನತಿಥಯೇ ಗೃಹೀತ್ವಾ ತ್ವಂ ಪ್ರಯಚ್ಚ ಮೇ।।
“ವಿಪ್ರ! ನಿನ್ನ ಸಂತಾನದಿಂದ ನನಗೆ ಸಂತಾನವಾಗುತ್ತದೆ. ನನ್ನ ಈ ಹಿಟ್ಟಿನುಂಡೆಗಳನ್ನು ತೆಗೆದುಕೊಂಡು ಅತಿಥಿಗೆ ನೀಡು ಎಂದು ಕೇಳಿಕೊಳ್ಳುತ್ತಿದ್ದೇನೆ.
14093043a ತವ ಪ್ರಸವನಿರ್ವೃತ್ಯಾ ಮಮ ಲೋಕಾಃ ಕಿಲಾಕ್ಷಯಾಃ।
14093043c ಪೌತ್ರೇಣ ತಾನವಾಪ್ನೋತಿ ಯತ್ರ ಗತ್ವಾ ನ ಶೋಚತಿ।।
ನಿನ್ನ ಮಗನಿಂದಲೇ ನನಗೆ ಅಕ್ಷಯ ಲೋಕಗಳು ದೊರೆಯುತ್ತವೆ ತಾನೇ? ಯಾವ ಲೋಕಗಳಿಗೆ ಹೋದರೆ ಶೋಕವಿಲ್ಲವೋ ಆ ಲೋಕಗಳಿಗೆ ಪೌತ್ರರ ಮೂಲಕವೇ ಹೋಗುತ್ತಾರೆ.
14093044a ಧರ್ಮಾದ್ಯಾ ಹಿ ಯಥಾ ತ್ರೇತಾ ವಹ್ನಿತ್ರೇತಾ ತಥೈವ ಚ।
14093044c ತಥೈವ ಪುತ್ರಪೌತ್ರಾಣಾಂ ಸ್ವರ್ಗೇ ತ್ರೇತಾ ಕಿಲಾಕ್ಷಯಾ।।
ಧರ್ಮ-ಅರ್ಥ-ಕಾಮಗಳೆಂಬ ಮೂರು ಧರ್ಮಗಳು ಮತ್ತು ಆಹವನೀಯ-ಗಾರ್ಹ್ಯಪತ್ಯ-ದಕ್ಷಿಣಾಗ್ನಿಗಳೆಂಬ ಮೂರು ಅಗ್ನಿಗಳು ಹೇಗೋ ಹಾಗೆ ಪುತ್ರ-ಪೌತ್ರ-ಪ್ರಪೌತ್ರರೆಂಬ ಮೂರು ಬಗೆಯ ಸಂತಾನಗಳೂ ಅಕ್ಷಯ ಸ್ವರ್ಗಕ್ಕೆ ಕಾರಣವಾಗುತ್ತವೆಯಲ್ಲವೇ?
14093045a ಪಿತೄಂಸ್ತ್ರಾಣಾತ್ತಾರಯತಿ ಪುತ್ರ ಇತ್ಯನುಶುಶ್ರುಮ।
14093045c ಪುತ್ರಪೌತ್ರೈಶ್ಚ ನಿಯತಂ ಸಾಧುಲೋಕಾನುಪಾಶ್ನುತೇ।।
ಪಿತೃಗಳನ್ನು ಉದ್ಧರಿಸುವವನಾದುದರಿಂದ ಪುತ್ರನೆಂದು ಕರೆಯುತ್ತಾರೆ. ಪುತ್ರ-ಪೌತ್ರರು ನಿಶ್ಚಯವಾಗಿಯೂ ಸಾಧುಲೋಕಗಳಿಗೆ ಕೊಂಡೊಯ್ಯುತ್ತಾರೆ.”
14093046 ಶ್ವಶುರ ಉವಾಚ
14093046a ವಾತಾತಪವಿಶೀರ್ಣಾಂಗೀಂ ತ್ವಾಂ ವಿವರ್ಣಾಂ ನಿರೀಕ್ಷ್ಯ ವೈ।
14093046c ಕರ್ಶಿತಾಂ ಸುವ್ರತಾಚಾರೇ ಕ್ಷುಧಾವಿಹ್ವಲಚೇತಸಮ್।।
14093047a ಕಥಂ ಸಕ್ತೂನ್ಗ್ರಹೀಷ್ಯಾಮಿ ಭೂತ್ವಾ ಧರ್ಮೋಪಘಾತಕಃ।
14093047c ಕಲ್ಯಾಣವೃತ್ತೇ ಕಲ್ಯಾಣಿ ನೈವಂ ತ್ವಂ ವಕ್ತುಮರ್ಹಸಿ।।
ಮಾವನು ಹೇಳಿದನು: “ಉತ್ತಮ ವ್ರತ-ಆಚಾರಗಳುಳ್ಳವಳೇ! ಗಾಳಿಬಿಸಿಲುಗಳಿಗೆ ಸಿಲುಕಿ ಸುಕ್ಕಾಗಿರುವ, ವಿವರ್ಣಳಾಗಿರುವ, ಬಡಕಲಾಗಿರುವ ಮತ್ತು ಹಸಿವೆಯಿಂದ ವಿಹ್ವಲಳಾಗಿರುವ ನಿನ್ನನ್ನು ನೋಡಿ ನಾನು ನಿನ್ನ ಹಿಟ್ಟಿನುಂಡೆಗಳನ್ನು ಹೇಗೆ ತಾನೇ ತೆಗೆದುಕೊಳ್ಳಬಲ್ಲೆ? ಇದರಿಂದ ಧರ್ಮಘಾತಕನಾಗುವೆನಲ್ಲವೇ? ಕಲ್ಯಾಣನಡತೆಯುಳ್ಳವಳೇ! ಕಲ್ಯಾಣೀ! ನೀನು ಹೀಗೆ ಹೇಳುವುದು ಸರಿಯಲ್ಲ.
14093048a ಷಷ್ಠೇ ಕಾಲೇ ವ್ರತವತೀಂ ಶೀಲಶೌಚಸಮನ್ವಿತಾಮ್।
14093048c ಕೃಚ್ಚ್ರವೃತ್ತಿಂ ನಿರಾಹಾರಾಂ ದ್ರಕ್ಷ್ಯಾಮಿ ತ್ವಾಂ ಕಥಂ ನ್ವಹಮ್।।
ಷಷ್ಠಕಾಲದ ವ್ರತದಲ್ಲಿರುವ ಶೀಲ-ಶೌಚಸಮನ್ವಿತಳಾದ, ಕಷ್ಟದ ವೃತ್ತಿಯಲ್ಲಿದ್ದುಕೊಂಡು ನಿರಾಹಾರಳಾಗಿರುವ ನಿನ್ನನ್ನು ನಾನು ಹೇಗೆ ತಾನೇ ನೋಡಲಿ?
14093049a ಬಾಲಾ ಕ್ಷುಧಾರ್ತಾ ನಾರೀ ಚ ರಕ್ಷ್ಯಾ ತ್ವಂ ಸತತಂ ಮಯಾ।
14093049c ಉಪವಾಸಪರಿಶ್ರಾಂತಾ ತ್ವಂ ಹಿ ಬಾಂಧವನಂದಿನೀ।।
ಬಾಂಧವನಂದಿನೀ! ಬಾಲೆಯೂ, ಹಸಿವೆಯಿಂದ ಬಳಲಿದವಳೂ ಮತ್ತು ನಾರಿಯೂ ಆದ ನಿನ್ನನ್ನು ನಾನು ಸತತವೂ ರಕ್ಷಿಸಬೇಕು. ನೀನೂ ಕೂಡ ಉಪವಾಸದಿಂದ ಬಳಲಿದ್ದೀಯೆ.”
14093050 ಸ್ನುಷೋವಾಚ
14093050a ಗುರೋರ್ಮಮ ಗುರುಸ್ತ್ವಂ ವೈ ಯತೋ ದೈವತದೈವತಮ್।
14093050c ದೇವಾತಿದೇವಸ್ತಸ್ಮಾತ್ತ್ವಂ ಸಕ್ತೂನಾದತ್ಸ್ವ ಮೇ ವಿಭೋ।।
ಸೊಸೆಯು ಹೇಳಿದಳು: “ವಿಭೋ! ನನ್ನ ಗುರುವಿಗೂ ಗುರುವು ನೀನು. ನನ್ನ ದೈವತದ ದೈವತನು ನೀನು. ದೇವನಿಗೂ ದೇವನಾಗಿರುವ ನೀನು ಈ ಹಿಟ್ಟಿನುಂಡೆಗಳನ್ನು ತೆಗೆದುಕೋ!
14093051a ದೇಹಃ ಪ್ರಾಣಶ್ಚ ಧರ್ಮಶ್ಚ ಶುಶ್ರೂಷಾರ್ಥಮಿದಂ ಗುರೋಃ।
14093051c ತವ ವಿಪ್ರ ಪ್ರಸಾದೇನ ಲೋಕಾನ್ಪ್ರಾಪ್ಸ್ಯಾಮ್ಯಭೀಪ್ಸಿತಾನ್।।
ವಿಪ್ರ! ನನ್ನ ಈ ದೇಹ, ಪ್ರಾಣ ಮತ್ತು ಧರ್ಮಗಳು ಗುರುವಿನ ಶುಶ್ರೂಷೆಗೆಂದೇ ಇವೆ. ನಿನ್ನ ಪ್ರಸಾದದಿಂದ ನಾನು ಬಯಸಿದ ಲೋಕಗಳನ್ನು ಪಡೆಯಬಲ್ಲೆ.
14093052a ಅವೇಕ್ಷ್ಯಾ ಇತಿ ಕೃತ್ವಾ ತ್ವಂ ದೃಢಭಕ್ತ್ಯೇತಿ ವಾ ದ್ವಿಜ।
14093052c ಚಿಂತ್ಯಾ ಮಮೇಯಮಿತಿ ವಾ ಸಕ್ತೂನಾದಾತುಮರ್ಹಸಿ।।
ದ್ವಿಜ! ಇವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಾಗಲೀ, ಇವಳಲ್ಲಿ ದೃಢಭಕ್ತಿಯಿದೆ ಎಂದಾಗಲೀ, ಇವಳ ಕುರಿತು ನಾನು ಯೋಚಿಸಬೇಕಾಗಿದೆ ಎಂದಾಗಲೀ ನನ್ನ ಈ ಹಿಟ್ಟಿನುಂಡೆಗಳನ್ನು ಪಡೆದು ಅತಿಥಿಗೆ ಕೊಡಬೇಕು.”
14093053 ಶ್ವಶುರ ಉವಾಚ
14093053a ಅನೇನ ನಿತ್ಯಂ ಸಾಧ್ವೀ ತ್ವಂ ಶೀಲವೃತ್ತೇನ ಶೋಭಸೇ।
14093053c ಯಾ ತ್ವಂ ಧರ್ಮವ್ರತೋಪೇತಾ ಗುರುವೃತ್ತಿಮವೇಕ್ಷಸೇ।।
14093054a ತಸ್ಮಾತ್ಸಕ್ತೂನ್ಗ್ರಹೀಷ್ಯಾಮಿ ವಧೂರ್ನಾರ್ಹಸಿ ವಂಚನಾಮ್।
14093054c ಗಣಯಿತ್ವಾ ಮಹಾಭಾಗೇ ತ್ವಂ ಹಿ ಧರ್ಮಭೃತಾಂ ವರಾ।।
ಮಾವನು ಹೇಳಿದನು: “ಮಹಾಭಾಗೇ! ಧರ್ಮಭೃತರಲ್ಲಿ ಶ್ರೇಷ್ಠಳೇ! ನೀನು ನಿತ್ಯವೂ ಶೀಲನಡತೆಯಲ್ಲಿದ್ದುಕೊಂಡು ಸಾಧ್ವಿಯಾಗಿದ್ದೀಯೆ. ಶೋಭಿಸುತ್ತಿದ್ದೀಯೆ. ನೀನು ಧರ್ಮವ್ರತದಲ್ಲಿದ್ದುಕೊಂಡು ಗುರುಜನರ ಸೇವೆಯಲ್ಲಿ ನಿರತಳಾಗಿರುವೆ. ಆದುದರಿಂದ ಅತಿಥಿಸತ್ಕಾರದ ಪುಣ್ಯದಿಂದ ನೀನು ವಂಚಿತಳಾಗಬಾರದೆಂದು ಪರಿಗಣಿಸಿ ನಿನ್ನ ಹಿಟ್ಟಿನುಂಡೆಯನ್ನು ತೆಗೆದುಕೊಳ್ಳುತ್ತೇನೆ.”
14093055a ಇತ್ಯುಕ್ತ್ವಾ ತಾನುಪಾದಾಯ ಸಕ್ತೂನ್ಪ್ರಾದಾದ್ದ್ವಿಜಾತಯೇ।
14093055c ತತಸ್ತುಷ್ಟೋಽಭವದ್ವಿಪ್ರಸ್ತಸ್ಯ ಸಾಧೋರ್ಮಹಾತ್ಮನಃ।।
ಹೀಗೆ ಹೇಳಿ ಅವನು ಅವಳ ಆ ಹಿಟ್ಟಿನುಂಡೆಯನ್ನು ತೆಗೆದುಕೊಂಡು ದ್ವಿಜಾತೀಯ ಅತಿಥಿಗೆ ನೀಡಿದನು. ಅದರಿಂದ ಸಾಧು ಮಹಾತ್ಮ ವಿಪ್ರನು ಸಂತುಷ್ಟನಾದನು.
14093056a ಪ್ರೀತಾತ್ಮಾ ಸ ತು ತಂ ವಾಕ್ಯಮಿದಮಾಹ ದ್ವಿಜರ್ಷಭಮ್।
14093056c ವಾಗ್ಮೀ ತದಾ ದ್ವಿಜಶ್ರೇಷ್ಠೋ ಧರ್ಮಃ ಪುರುಷವಿಗ್ರಹಃ।।
ದ್ವಿಜಶ್ರೇಷ್ಠನ ವೇಶಧಾರಿಯಾಗಿದ್ದ ವಾಗ್ಮೀ ಧರ್ಮನು ಪ್ರಿತನಾಗಿ ದ್ವಿಜರ್ಷಭನಿಗೆ ಇಂತೆಂದನು:
14093057a ಶುದ್ಧೇನ ತವ ದಾನೇನ ನ್ಯಾಯೋಪಾತ್ತೇನ ಯತ್ನತಃ।
14093057c ಯಥಾಶಕ್ತಿ ವಿಮುಕ್ತೇನ ಪ್ರೀತೋಽಸ್ಮಿ ದ್ವಿಜಸತ್ತಮ।।
“ದ್ವಿಜಸತ್ತಮ! ನ್ಯಾಯವಾಗಿ ಪ್ರಯತ್ನಿಸಿ ಸಂಪಾದಿಸಿದುದನ್ನು ನಿನ್ನ ಶಕ್ತಿಗೂ ಮೀರಿ ನೀಡಿದ ಈ ಶುದ್ಧದಾನದಿಂದ ನಾನು ಪ್ರೀತನಾಗಿದ್ದೇನೆ.
14093058a ಅಹೋ ದಾನಂ ಘುಷ್ಯತೇ ತೇ ಸ್ವರ್ಗೇ ಸ್ವರ್ಗನಿವಾಸಿಭಿಃ।
14093058c ಗಗನಾತ್ಪುಷ್ಪವರ್ಷಂ ಚ ಪಶ್ಯಸ್ವ ಪತಿತಂ ಭುವಿ।।
ಇಗೋ! ಸ್ವರ್ಗವಾಸಿಗಳು ಸ್ವರ್ಗದಿಂದ ಘೋಷಿಸಿ ಈ ದಾನವನ್ನು ಪ್ರಶಂಸಿಸುತ್ತಿದ್ದಾರೆ. ಗಗನದಿಂದ ಭೂಮಿಯ ಮೇಲೆ ಬೀಳುತ್ತಿರುವ ಈ ಪುಷ್ಪವೃಷ್ಟಿಯನ್ನು ನೋಡು!
14093059a ಸುರರ್ಷಿದೇವಗಂಧರ್ವಾ ಯೇ ಚ ದೇವಪುರಃಸರಾಃ।
14093059c ಸ್ತುವಂತೋ ದೇವದೂತಾಶ್ಚ ಸ್ಥಿತಾ ದಾನೇನ ವಿಸ್ಮಿತಾಃ।।
ದೇವತೆಗಳನ್ನು ಮುಂದಿಟ್ಟುಕೊಂಡು ಸುರರ್ಷಿ-ದೇವ-ಗಂಧರ್ವರು ದೇವದೂತರೂ ನಿನ್ನ ದಾನದಿಂದ ವಿಸ್ಮಿತರಾಗಿ ನಿನ್ನನ್ನು ಸ್ತುತಿಸುತ್ತಿದ್ದಾರೆ!
14093060a ಬ್ರಹ್ಮರ್ಷಯೋ ವಿಮಾನಸ್ಥಾ ಬ್ರಹ್ಮಲೋಕಗತಾಶ್ಚ ಯೇ।
14093060c ಕಾಂಕ್ಷಂತೇ ದರ್ಶನಂ ತುಭ್ಯಂ ದಿವಂ ಗಚ್ಚ ದ್ವಿಜರ್ಷಭ।।
ದ್ವಿಜರ್ಷಭ! ವಿಮಾನಸ್ಥರಾಗಿ ಬ್ರಹ್ಮಲೋಕದಲ್ಲಿ ಸಂಚರಿಸುವ ಬ್ರಹ್ಮರ್ಷಿಗಳೂ ನಿನ್ನ ದರ್ಶನವನ್ನು ಅಪೇಕ್ಷಿಸುತ್ತಿದ್ದಾರೆ. ನೀನು ಸ್ವರ್ಗಕ್ಕೆ ಹೋಗು!
14093061a ಪಿತೃಲೋಕಗತಾಃ ಸರ್ವೇ ತಾರಿತಾಃ ಪಿತರಸ್ತ್ವಯಾ।
14093061c ಅನಾಗತಾಶ್ಚ ಬಹವಃ ಸುಬಹೂನಿ ಯುಗಾನಿ ಚ।।
ಪಿತೃಲೋಕಕ್ಕೆ ಹೋಗಿರುವ ನಿನ್ನ ಪಿತೃಗಳೆಲ್ಲರನ್ನೂ ಮತ್ತು ಮುಂದೆ ಅನೇಕ ಯುಗಗಳಲ್ಲಿ ಬರುವ ನಿನ್ನ ಕುಲದವರನ್ನೂ ನೀನು ಉದ್ಧರಿಸಿದ್ದೀಯೆ.
14093062a ಬ್ರಹ್ಮಚರ್ಯೇಣ ಯಜ್ಞೇನ ದಾನೇನ ತಪಸಾ ತಥಾ।
14093062c ಅಗಹ್ವರೇಣ ಧರ್ಮೇಣ ತಸ್ಮಾದ್ಗಚ್ಚ ದಿವಂ ದ್ವಿಜ।।
ದ್ವಿಜ! ಬ್ರಹ್ಮಚರ್ಯ, ಯಜ್ಞ, ದಾನ ಮತ್ತು ತಪಸ್ಸಿನಿಂದ ಸಂಕರವಿಲ್ಲದ ಧರ್ಮವನ್ನಾಚರಿಸಿದ್ದೀಯೆ. ಆದುದರಿಂದ ದಿವಕ್ಕೆ ಹೋಗು.
14093063a ಶ್ರದ್ಧಯಾ ಪರಯಾ ಯಸ್ತ್ವಂ ತಪಶ್ಚರಸಿ ಸುವ್ರತ।
14093063c ತಸ್ಮಾದ್ದೇವಾಸ್ತವಾನೇನ ಪ್ರೀತಾ ದ್ವಿಜವರೋತ್ತಮ।।
ಸುವ್ರತ! ದ್ವಿಜವರೋತ್ತಮ! ಪರಮ ಶ್ರದ್ಧೆಯಿಂದ ನೀನು ತಪಸ್ಸನ್ನು ತಪಿಸಿರುವೆ! ಆದುದರಿಂದ ದೇವತೆಗಳೂ ನಿನ್ನ ಮೇಲೆ ಪ್ರೀತರಾಗಿದ್ದಾರೆ.
14093064a ಸರ್ವಸ್ವಮೇತದ್ಯಸ್ಮಾತ್ತೇ ತ್ಯಕ್ತಂ ಶುದ್ಧೇನ ಚೇತಸಾ।
14093064c ಕೃಚ್ಚ್ರಕಾಲೇ ತತಃ ಸ್ವರ್ಗೋ ಜಿತೋಽಯಂ ತವ ಕರ್ಮಣಾ।।
ಕಷ್ಟಕಾಲದಲ್ಲಿಯೂ ನೀನು ನಿನ್ನದಾಗಿರುವ ಎಲ್ಲವನ್ನೂ ತ್ಯಜಿಸಿ ಶುದ್ಧ ಮನಸ್ಸಿನಿಂದ ದಾನಮಾಡಿರುವೆ. ನಿನ್ನ ಈ ಕರ್ಮದಿಂದ ನೀನು ಸ್ವರ್ಗವನ್ನು ಜಯಿಸಿದ್ದೀಯೆ.
14093065a ಕ್ಷುಧಾ ನಿರ್ಣುದತಿ ಪ್ರಜ್ಞಾಂ ಧರ್ಮ್ಯಾಂ ಬುದ್ಧಿಂ ವ್ಯಪೋಹತಿ।
14093065c ಕ್ಷುಧಾಪರಿಗತಜ್ಞಾನೋ ಧೃತಿಂ ತ್ಯಜತಿ ಚೈವ ಹ।।
ಹಸಿವು ಪ್ರಜ್ಞೆಯನ್ನು ನಾಶಪಡಿಸುತ್ತದೆ. ಧರ್ಮಬುದ್ಧಿಯನ್ನು ಕಳೆಯುತ್ತದೆ. ಹಸಿವೆಯಿಂದ ಜ್ಞಾನವನ್ನು ಕಳೆದುಕೊಂಡವನು ಧೈರ್ಯವನ್ನೂ ತ್ಯಜಿಸುತ್ತಾನೆ.
14093066a ಬುಭುಕ್ಷಾಂ ಜಯತೇ ಯಸ್ತು ಸ ಸ್ವರ್ಗಂ ಜಯತೇ ಧ್ರುವಮ್।
14093066c ಯದಾ ದಾನರುಚಿರ್ಭವತಿ ತದಾ ಧರ್ಮೋ ನ ಸೀದತಿ।।
ಹಸಿವೆಯನ್ನು ಜಯಿಸಿದವನು ನಿಶ್ಚಯವಾಗಿಯೂ ಸ್ವರ್ಗವನ್ನು ಜಯಿಸುತ್ತಾನೆ. ದಾನದಲ್ಲಿ ಅಭಿರುಚಿಯಿರುವವನಿಗೆ ಧರ್ಮವು ನಾಶವಾಗುವುದಿಲ್ಲ.
14093067a ಅನವೇಕ್ಷ್ಯ ಸುತಸ್ನೇಹಂ ಕಲತ್ರಸ್ನೇಹಮೇವ ಚ।
14093067c ಧರ್ಮಮೇವ ಗುರುಂ ಜ್ಞಾತ್ವಾ ತೃಷ್ಣಾ ನ ಗಣಿತಾ ತ್ವಯಾ।।
ಮಗನ ಮೇಲಿನ ಸ್ನೇಹವನ್ನೂ ಪತ್ನಿಯ ಮೇಲಿನ ಸ್ನೇಹವನ್ನೂ ಪರಿಗಣಿಸದೇ ನೀನು ಧರ್ಮವೇ ಗುರುವೆಂದು ತಿಳಿದು ಹಸಿವು-ಬಾಯಾರಿಕೆಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.
14093068a ದ್ರವ್ಯಾಗಮೋ ನೃಣಾಂ ಸೂಕ್ಷ್ಮಃ ಪಾತ್ರೇ ದಾನಂ ತತಃ ಪರಮ್।
14093068c ಕಾಲಃ ಪರತರೋ ದಾನಾಚ್ಚ್ರದ್ಧಾ ಚಾಪಿ ತತಃ ಪರಾ।।
ಮನುಷ್ಯನ ದ್ರವ್ಯಸಂಪಾದನೆಯು ಸೂಕ್ಷ್ಮವಾದುದು. ಅದರ ನಂತರ ಪಾತ್ರನಾದವನಿಗೆ ದಾನವನ್ನು ಮಾಡುವುದು ಅದಕ್ಕಿಂತಲೂ ಶ್ರೇಷ್ಠವಾದುದು. ಸರಿಯಾದ ಕಾಲದಲ್ಲಿ ದಾನಮಾಡುವುದು ಅದಕ್ಕಿಂತಲೂ ಶ್ರೇಷ್ಠ. ಶ್ರದ್ಧೆಯಿಂದ ದಾನಮಾಡುವುದು ಇನ್ನೂ ಹೆಚ್ಚಿನದು.
14093069a ಸ್ವರ್ಗದ್ವಾರಂ ಸುಸೂಕ್ಷ್ಮಂ ಹಿ ನರೈರ್ಮೋಹಾನ್ನ ದೃಶ್ಯತೇ।
14093069c ಸ್ವರ್ಗಾರ್ಗಲಂ ಲೋಭಬೀಜಂ ರಾಗಗುಪ್ತಂ ದುರಾಸದಮ್।।
ಸ್ವರ್ಗದ ದ್ವಾರವು ಅತಿ ಸೂಕ್ಷ್ಮವಾದುದು, ಮೋಹಿತ ನರರಿಗೆ ಅದು ಕಾಣುವುದಿಲ್ಲ. ಸ್ವರ್ಗದ ದ್ವಾರಕ್ಕೆ ಲೋಭದ ಬೀಜವು ಅಗಳಿ. ಅದು ರಾಗದಿಂದ ರಕ್ಷಿತವಾಗಿದೆ. ಪ್ರವೇಶಿಸಲು ಕಷ್ಟದ್ದಾಗಿದೆ.
14093070a ತತ್ತು ಪಶ್ಯಂತಿ ಪುರುಷಾ ಜಿತಕ್ರೋಧಾ ಜಿತೇಂದ್ರಿಯಾಃ।
14093070c ಬ್ರಾಹ್ಮಣಾಸ್ತಪಸಾ ಯುಕ್ತಾ ಯಥಾಶಕ್ತಿಪ್ರದಾಯಿನಃ।।
ಜಿತಕ್ರೋಧರಾದ, ಜಿತೇಂದ್ರಿಯರಾದ ಮತ್ತು ತಪೋಯುಕ್ತರಾದ ಬ್ರಾಹ್ಮಣರು ಯಥಾಶಕ್ತಿ ದಾನಮಾಡುವುದರ ಮೂಲಕ ಸ್ವರ್ಗವನ್ನು ಕಾಣುತ್ತಾರೆ.
14093071a ಸಹಸ್ರಶಕ್ತಿಶ್ಚ ಶತಂ ಶತಶಕ್ತಿರ್ದಶಾಪಿ ಚ।
14093071c ದದ್ಯಾದಪಶ್ಚ ಯಃ ಶಕ್ತ್ಯಾ ಸರ್ವೇ ತುಲ್ಯಫಲಾಃ ಸ್ಮೃತಾಃ।।
ಸಾವಿರ ಕೊಡುವುದಕ್ಕೆ ಶಕ್ತಿಯಿರುವವನು ನೂರನ್ನು ಕೊಟ್ಟರೂ, ನೂರನ್ನು ಕೊಡಲು ಶಕ್ತನಾಗಿರುವವನು ಹತ್ತನ್ನು ದಾನಮಾಡಿದರೂ, ಆಪತ್ತಿನಲ್ಲಿರುವವನಿಗೆ ಯಥಾಶಕ್ತಿ ಏನನ್ನು ದಾನಮಾಡಿದರೂ ಎಲ್ಲವೂ ಒಂದೇ ಸಮನಾದ ಫಲವನ್ನು ನೀಡುತ್ತದೆ ಎಂದು ಹೇಳಲಾಗಿದೆ.
14093072a ರಂತಿದೇವೋ ಹಿ ನೃಪತಿರಪಃ ಪ್ರಾದಾದಕಿಂಚನಃ।
14093072c ಶುದ್ಧೇನ ಮನಸಾ ವಿಪ್ರ ನಾಕಪೃಷ್ಠಂ ತತೋ ಗತಃ।।
ವಿಪ್ರ! ನೃಪತಿ ರಂತಿದೇವನು ಶುದ್ಧಮನಸ್ಸಿನಿಂದ ಒಂದು ಸ್ವಲ್ಪ ನೀರನ್ನೇ ದಾನಮಾಡಿ, ನಾಕಪೃಷ್ಠಕ್ಕೆ ಹೋದನು.
14093073a ನ ಧರ್ಮಃ ಪ್ರೀಯತೇ ತಾತ ದಾನೈರ್ದತ್ತೈರ್ಮಹಾಫಲೈಃ।
14093073c ನ್ಯಾಯಲಬ್ಧೈರ್ಯಥಾ ಸೂಕ್ಷ್ಮೈಃ ಶ್ರದ್ಧಾಪೂತೈಃ ಸ ತುಷ್ಯತಿ।।
ಅಯ್ಯಾ! ಮಹಾಫಲಗಳುಳ್ಳವುಗಳನ್ನು ದಾನಮಾಡುವುದರಿಂದ ಧರ್ಮನು ಪ್ರೀತನಾಗುವುದಿಲ್ಲ. ಆದರೆ ನ್ಯಾಯವಾಗಿ ಪಡೆದುದನ್ನು ಅಲ್ಪವಾದರೂ ಶ್ರದ್ಧೆಯಿಂದ ಪವಿತ್ರಗೊಳಿಸಿ ಕೊಡುವುದರಿಂದ ಅವನು ತುಷ್ಟನಾಗುತ್ತಾನೆ.
14093074a ಗೋಪ್ರದಾನಸಹಸ್ರಾಣಿ ದ್ವಿಜೇಭ್ಯೋಽದಾನ್ನೃಗೋ ನೃಪಃ।
14093074c ಏಕಾಂ ದತ್ತ್ವಾ ಸ ಪಾರಕ್ಯಾಂ ನರಕಂ ಸಮವಾಪ್ತವಾನ್।।
ನೃಪ ನೃಗನು ದ್ವಿಜರಿಗೆ ಸಾವಿರಾರು ಗೋವುಗಳನ್ನು ದಾನವನ್ನಾಗಿತ್ತನು. ಆದರೆ ಅವುಗಳಲ್ಲಿ ಒಂದು ಅವನ ಸ್ವತ್ತಾಗಿರದೇ ಇದ್ದುದರಿಂದ ಅವನಿಗೆ ನರಕಕ್ಕೆ ಹೋಗಬೇಕಾಯಿತು.
14093075a ಆತ್ಮಮಾಂಸಪ್ರದಾನೇನ ಶಿಬಿರೌಶೀನರೋ ನೃಪಃ।
14093075c ಪ್ರಾಪ್ಯ ಪುಣ್ಯಕೃತಾಽಲ್ಲೋಕಾನ್ಮೋದತೇ ದಿವಿ ಸುವ್ರತಃ।।
ಸುವ್ರತನಾದ ನೃಪ ಶಿಬಿ ಔಶೀನರನು ತನ್ನ ಮಾಂಸವನ್ನು ದಾನಮಾಡಿ ಪುಣ್ಯಕೃತರ ಲೋಕಗಳನ್ನು ಸೇರಿ ದಿವಿಯಲ್ಲಿ ಮೋದಿಸುತ್ತಿದ್ದಾನೆ.
14093076a ವಿಭವೇ ನ ನೃಣಾಂ ಪುಣ್ಯಂ ಸ್ವಶಕ್ತ್ಯಾ ಸ್ವರ್ಜಿತಂ ಸತಾಮ್।
14093076c ನ ಯಜ್ಞೈರ್ವಿವಿಧೈರ್ವಿಪ್ರ ಯಥಾನ್ಯಾಯೇನ ಸಂಚಿತೈಃ।।
ಮನುಷ್ಯನಿಗೆ ವೈಭವಯುಕ್ತವಾಗಿ ದಾನಮಾಡಿದರೆ ಪುಣ್ಯ ದೊರೆಯುವುದಿಲ್ಲ. ಆದರೆ ತಾನೇ ಸಂಪಾದಿಸಿದುದನ್ನು ತನ್ನ ಶಕ್ತಿಗನುಗುಣವಾಗಿ ದಾನಮಾಡುವುದು ಅವನಿಗೆ ಒಳ್ಳೆಯದಾಗುತ್ತದೆ. ವಿಪ್ರ! ವಿವಿಧ ಯಜ್ಞಗಳನ್ನು ಮಾಡುವುದಕ್ಕಿಂತ ಯಥಾನ್ಯಾಯವಾಗಿ ಸಂಪಾದಿಸಿದುದನ್ನು ದಾನಮಾಡುವುದು ಶ್ರೇಷ್ಠವು.
14093077a ಕ್ರೋಧೋ ದಾನಫಲಂ ಹಂತಿ ಲೋಭಾತ್ಸ್ವರ್ಗಂ ನ ಗಚ್ಚತಿ।
14093077c ನ್ಯಾಯವೃತ್ತಿರ್ಹಿ ತಪಸಾ ದಾನವಿತ್ಸ್ವರ್ಗಮಶ್ನುತೇ।।
ಕ್ರೋಧವು ದಾನಫಲವನ್ನು ಕೊಲ್ಲುತ್ತದೆ. ಲೋಭದಿಂದ ಸ್ವರ್ಗಕ್ಕೆ ಹೋಗುವುದಿಲ್ಲ. ನ್ಯಾಯವೃತ್ತಿ, ಮತ್ತು ತಪಸ್ಸಿನಿಂದ ದಾನವನ್ನು ತಿಳಿದಿರುವವನು ಸ್ವರ್ಗವನ್ನು ಹೊಂದುತ್ತಾನೆ.
14093078a ನ ರಾಜಸೂಯೈರ್ಬಹುಭಿರಿಷ್ಟ್ವಾ ವಿಪುಲದಕ್ಷಿಣೈಃ।
14093078c ನ ಚಾಶ್ವಮೇಧೈರ್ಬಹುಭಿಃ ಫಲಂ ಸಮಮಿದಂ ತವ।।
ನಿನ್ನ ಈ ಫಲವು ವಿಪುಲದಕ್ಷಿಣೆಗಳನ್ನಿತ್ತು ಮಾಡಿದ ಅನೇಕ ರಾಜಸೂಯ ಯಾಗಗಳ ಮತ್ತು ಅನೇಕ ಅಶ್ವಮೇಧಯಾಗಗಳ ಫಲಕ್ಕೆ ಸಮನಲ್ಲ.
14093079a ಸಕ್ತುಪ್ರಸ್ಥೇನ ಹಿ ಜಿತೋ ಬ್ರಹ್ಮಲೋಕಸ್ತ್ವಯಾನಘ।
14093079c ವಿರಜೋ ಬ್ರಹ್ಮಭವನಂ ಗಚ್ಚ ವಿಪ್ರ ಯಥೇಚ್ಚಕಮ್।।
ಅನಘ! ಹಿಟ್ಟಿನುಂಡೆಯನ್ನು ದಾನಮಾಡಿ ನೀನು ಬ್ರಹ್ಮಲೋಕವನ್ನೇ ಗೆದ್ದಿದ್ದೀಯೆ. ವಿಪ್ರ! ರಜೋಗುಣ ರಹಿತನಾಗಿ ನಿನಗಿಷ್ಟವಾದ ಬ್ರಹ್ಮಭವನಕ್ಕೆ ಹೋಗು.
14093080a ಸರ್ವೇಷಾಂ ವೋ ದ್ವಿಜಶ್ರೇಷ್ಠ ದಿವ್ಯಂ ಯಾನಮುಪಸ್ಥಿತಮ್।
14093080c ಆರೋಹತ ಯಥಾಕಾಮಂ ಧರ್ಮೋಽಸ್ಮಿ ದ್ವಿಜ ಪಶ್ಯ ಮಾಮ್।।
ದ್ವಿಜಶ್ರೇಷ್ಠ! ನಿಮಗೆಲ್ಲರಿಗೂ ದಿವ್ಯ ಯಾನವು ಸಿದ್ಧವಾಗಿದೆ. ನಿಮಗಿಷ್ಟವಾದಹಾಗೆ ಅದನ್ನು ಏರಿ. ದ್ವಿಜ! ನಾನು ಧರ್ಮ. ನನ್ನನ್ನು ನೋಡು.
14093081a ಪಾವಿತೋ ಹಿ ತ್ವಯಾ ದೇಹೋ ಲೋಕೇ ಕೀರ್ತಿಃ ಸ್ಥಿರಾ ಚ ತೇ।
14093081c ಸಭಾರ್ಯಃ ಸಹಪುತ್ರಶ್ಚ ಸಸ್ನುಷಶ್ಚ ದಿವಂ ವ್ರಜ।।
ನಿನ್ನ ದೇಹವನ್ನು ಪವಿತ್ರಗೊಳಿಸಿರುವೆ. ಲೋಕದಲ್ಲಿ ನಿನ್ನ ಕೀರ್ತಿಯನ್ನು ಸ್ಥಿರಗೊಳಿಸಿರುವೆ. ಪತ್ನಿ, ಪುತ್ರ ಮತ್ತು ಸೊಸೆಯರೊಂದಿಗೆ ದಿವಕ್ಕೆ ಹೊರಡು!”
14093082a ಇತ್ಯುಕ್ತವಾಕ್ಯೋ ಧರ್ಮೇಣ ಯಾನಮಾರುಹ್ಯ ಸ ದ್ವಿಜಃ।
14093082c ಸಭಾರ್ಯಃ ಸಸುತಶ್ಚಾಪಿ ಸಸ್ನುಷಶ್ಚ ದಿವಂ ಯಯೌ।।
ಧರ್ಮನು ಹೀಗೆ ಹೇಳಲು ಆ ದ್ವಿಜನು ಪತ್ನಿ, ಸುತ ಮತ್ತು ಸೊಸೆಯರೊಂದಿಗೆ ಯಾನವನ್ನೇರಿ ದಿವಕ್ಕೆ ಹೋದನು.
14093083a ತಸ್ಮಿನ್ವಿಪ್ರೇ ಗತೇ ಸ್ವರ್ಗಂ ಸಸುತೇ ಸಸ್ನುಷೇ ತದಾ।
14093083c ಭಾರ್ಯಾಚತುರ್ಥೇ ಧರ್ಮಜ್ಞೇ ತತೋಽಹಂ ನಿಃಸೃತೋ ಬಿಲಾತ್।।
ಆ ಧರ್ಮಜ್ಞ ವಿಪ್ರನು ಪತ್ನಿ, ಮಗ ಮತ್ತು ಸೊಸೆಯರೊಂದಿಗೆ ಸ್ವರ್ಗಕ್ಕೆ ಹೊರಟುಹೋಗಲು ನಾನು ಬಿಲದಿಂದ ಹೊರಬಂದೆನು.
14093084a ತತಸ್ತು ಸಕ್ತುಗಂಧೇನ ಕ್ಲೇದೇನ ಸಲಿಲಸ್ಯ ಚ।
14093084c ದಿವ್ಯಪುಷ್ಪಾವಮರ್ದಾಚ್ಚ ಸಾಧೋರ್ದಾನಲವೈಶ್ಚ ತೈಃ।
14093084e ವಿಪ್ರಸ್ಯ ತಪಸಾ ತಸ್ಯ ಶಿರೋ ಮೇ ಕಾಂಚನೀಕೃತಮ್।।
ಅಲ್ಲಿದ್ದ ಹಿಟ್ಟಿನ ವಾಸನೆಯಿಂದಲೂ, ಚೆಲ್ಲಿದ್ದ ನೀರಿನಲ್ಲಿ ನೆನೆದುದರಿಂದಲೂ, ದಿವ್ಯಪುಷ್ಪಗಳ ಮೇಲೆ ಓಡಾಡಿದುದರಿಂದಲೂ, ಆ ಸಾಧುವು ದಾನಮಾಡಿದ ಹಿಟ್ಟಿನ ಕಣಗಳ ಸಂಪರ್ಕದಿಂದಲೂ, ಮತ್ತು ಆ ವಿಪ್ರನ ತಪಸ್ಸಿನಿಂದಲೂ ನನ್ನ ತಲೆಯು ಕಾಂಚನದ್ದಾಯಿತು.
14093085a ತಸ್ಯ ಸತ್ಯಾಭಿಸಂಧಸ್ಯ ಸೂಕ್ಷ್ಮದಾನೇನ ಚೈವ ಹ।
14093085c ಶರೀರಾರ್ಧಂ ಚ ಮೇ ವಿಪ್ರಾಃ ಶಾತಕುಂಭಮಯಂ ಕೃತಮ್।
14093085e ಪಶ್ಯತೇದಂ ಸುವಿಪುಲಂ ತಪಸಾ ತಸ್ಯ ಧೀಮತಃ।।
ವಿಪ್ರರೇ! ಆ ಸತ್ಯಸಂಧನ ಸೂಕ್ಷ್ಮ ದಾನದಿಂದಲೇ ನನ್ನ ಶರೀರಾರ್ಧವು ಸುವರ್ಣಮಯವಾಯಿತು. ಆ ಧೀಮಂತನ ವಿಪುಲ ತಪಸ್ಸನ್ನು ನೋಡಿ!
14093086a ಕಥಮೇವಂವಿಧಂ ಮೇ ಸ್ಯಾದನ್ಯತ್ಪಾರ್ಶ್ವಮಿತಿ ದ್ವಿಜಾಃ।
14093086c ತಪೋವನಾನಿ ಯಜ್ಞಾಂಶ್ಚ ಹೃಷ್ಟೋಽಭ್ಯೇಮಿ ಪುನಃ ಪುನಃ।।
ದ್ವಿಜರೇ! ಇದೇರೀತಿ ನನ್ನ ಅನ್ಯ ಪಾರ್ಶ್ವವೂ ಕೂಡ ಹೇಗೆ ಆಗಬಹುದೆಂದು ಸಂತೋಷದಿಂದ ನಾನು ತಪೋವನಗಳು ಮತ್ತು ಯಜ್ಞಗಳಿಗೆ ಪುನಃ ಪುನಃ ಹೋಗುತ್ತಿದ್ದೇನೆ.
14093087a ಯಜ್ಞಂ ತ್ವಹಮಿಮಂ ಶ್ರುತ್ವಾ ಕುರುರಾಜಸ್ಯ ಧೀಮತಃ।
14093087c ಆಶಯಾ ಪರಯಾ ಪ್ರಾಪ್ತೋ ನ ಚಾಹಂ ಕಾಂಚನೀಕೃತಃ।।
ಧೀಮತ ಕುರುರಾಜನ ಈ ಯಜ್ಞದ ಕುರಿತು ಕೇಳಿ ಪರಮ ಆಸೆಯಿಂದ ಇಲ್ಲಿಗೆ ಬಂದರೂ ನನ್ನ ಶರೀರವು ಕಾಂಚನದ್ದಾಗಲಿಲ್ಲ.
14093088a ತತೋ ಮಯೋಕ್ತಂ ತದ್ವಾಕ್ಯಂ ಪ್ರಹಸ್ಯ ದ್ವಿಜಸತ್ತಮಾಃ।
14093088c ಸಕ್ತುಪ್ರಸ್ಥೇನ ಯಜ್ಞೋಽಯಂ ಸಂಮಿತೋ ನೇತಿ ಸರ್ವಥಾ।।
ದ್ವಿಜಸತ್ತಮರೇ! ಆದುದರಿಂದಲೇ ಹಿಟ್ಟಿನುಂಡೆಯ ಆ ದಾನಕ್ಕೆ ಈ ಯಜ್ಞವು ಸರ್ವಥಾ ಸಮನಲ್ಲ ಎನ್ನುವ ಆ ವಾಕ್ಯವನ್ನು ಗಟ್ಟಿಯಾಗಿ ನಗುತ್ತಾ ನಾನು ಹೇಳಿದೆ.
14093089a ಸಕ್ತುಪ್ರಸ್ಥಲವೈಸ್ತೈರ್ಹಿ ತದಾಹಂ ಕಾಂಚನೀಕೃತಃ।
14093089c ನ ಹಿ ಯಜ್ಞೋ ಮಹಾನೇಷ ಸದೃಶಸ್ತೈರ್ಮತೋ ಮಮ।।
ಹಿಟ್ಟಿನುಂಡೆಯ ಕಣಗಳಿಂದಲೇ ನನ್ನ ಶಿರವು ಕಾಂಚನದ್ದಾಯಿತು. ಈ ಮಹಾಯಜ್ಞವು ಅದಕ್ಕೆ ಸಮನಾದುದಲ್ಲ ಎನ್ನುವುದು ನನ್ನ ಮತ.””
14093090 ವೈಶಂಪಾಯನ ಉವಾಚ
14093090a ಇತ್ಯುಕ್ತ್ವಾ ನಕುಲಃ ಸರ್ವಾನ್ಯಜ್ಞೇ ದ್ವಿಜವರಾಂಸ್ತದಾ।
14093090c ಜಗಾಮಾದರ್ಶನಂ ರಾಜನ್ವಿಪ್ರಾಸ್ತೇ ಚ ಯಯುರ್ಗೃಹಾನ್।।
ವೈಶಂಪಾಯನನು ಹೇಳಿದನು: “ರಾಜನ್! ಯಜ್ಞದಲ್ಲಿದ್ದ ದ್ವಿಜಶ್ರೇಷ್ಠರಿಗೆ ಹೀಗೆ ಹೇಳಿ ಮುಂಗುಸಿಯು ಮಾಯವಾಯಿತು. ವಿಪ್ರರು ತಮ್ಮ ತಮ್ಮ ಮನೆಗಳಿಗೆ ತೆರಳಿದರು.
14093091a ಏತತ್ತೇ ಸರ್ವಮಾಖ್ಯಾತಂ ಮಯಾ ಪರಪುರಂಜಯ।
14093091c ಯದಾಶ್ಚರ್ಯಮಭೂತ್ತಸ್ಮಿನ್ವಾಜಿಮೇಧೇ ಮಹಾಕ್ರತೌ।।
ಪರಪುರಂಜಯ! ಹೀಗೆ ಆ ಮಹಾಕ್ರತು ಅಶ್ವಮೇಧದಲ್ಲಾದ ಆಶ್ಚರ್ಯದ ಕುರಿತು ಎಲ್ಲವನ್ನೂ ನಾನು ನಿನಗೆ ಹೇಳಿದ್ದೇನೆ.
14093092a ನ ವಿಸ್ಮಯಸ್ತೇ ನೃಪತೇ ಯಜ್ಞೇ ಕಾರ್ಯಃ ಕಥಂ ಚನ।
14093092c ಋಷಿಕೋಟಿಸಹಸ್ರಾಣಿ ತಪೋಭಿರ್ಯೇ ದಿವಂ ಗತಾಃ।।
ನೃಪತೇ! ಯಜ್ಞದ ವಿಷಯದಲ್ಲಿ ನಡೆದ ಇದರಿಂದ ನೀನು ವಿಸ್ಮಯನಾಗಬೇಕಾಗಿಲ್ಲ. ಏಕೆಂದರೆ ಸಹಸ್ರ ಕೋಟಿಗಟ್ಟಲೆ ಋಷಿಗಳು ತಪಸ್ಸಿನಿಂದಲೇ ದಿವಕ್ಕೆ ಹೋಗಿದ್ದಾರೆ.
14093093a ಅದ್ರೋಹಃ ಸರ್ವಭೂತೇಷು ಸಂತೋಷಃ ಶೀಲಮಾರ್ಜವಮ್।
14093093c ತಪೋ ದಮಶ್ಚ ಸತ್ಯಂ ಚ ದಾನಂ ಚೇತಿ ಸಮಂ ಮತಮ್।।
ಸರ್ವಭೂತಗಳಲ್ಲಿ ದ್ರೋಹವಿಲ್ಲದೇ ಇರುವುದು, ಸಂತೋಷದಿಂದಿರುವುದು, ಶೀಲ, ಸರಳತೆ, ತಪಸ್ಸು, ಇಂದ್ರಿಯ ನಿಗ್ರಹ, ಸತ್ಯ, ಮತ್ತು ದಾನ ಎವೆಲ್ಲವೂ ಸಮ ಎನ್ನುವ ಮತವಿದೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ನಕುಲಾಖ್ಯಾನೇ ತ್ರಿನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ನಕುಲಾಖ್ಯಾನ ಎನ್ನುವ ತೊಂಭತ್ಮೂರನೇ ಅಧ್ಯಾಯವು.
-
ಹೊಲವನ್ನು ಕೊಯ್ದಾಗ ಕೆಳಗೆ ಉದುರುವ ಕಾಳುಗಳನ್ನು ಆರಿಸಿಕೊಂಡು ಅದರಿಂದ ಜೀವನವನ್ನು ನಡೆಸುವನು. ↩︎
-
ಹೊಲಗಳಲ್ಲಿ ಬಿದ್ದಿರುವ ಕಾಳುಗಳನ್ನು ಹೆಕ್ಕಿ ತಿನ್ನುವುದು ಅಥವಾ ಕೂಡಿಸಿ ಇಟ್ಟುಕೊಳ್ಳುವ ಕಾಪೋತ ಪಕ್ಷಿಯಂತೆ ಜೀವನ ನಡೆಸುವವನು. ↩︎
-
ಭಾರತ ದರ್ಶನದಲ್ಲಿ ಇದರನಂತರ ಈ ಎರಡು ಶ್ಲೋಕಗಳಿವೆ: ಧರ್ಮಕಾಮಾರ್ಥಕಾರ್ಯಾಣಿ ಶುಶ್ರೂಷಾ ಕುಲಸಂತತಿಃ। ದಾರೇಷ್ವಧೀನೋ ಧರ್ಮಶ್ಚ ಪಿತೃಣಾಮಾತ್ಮನಸ್ತಥಾ।। ನ ವೇತ್ತಿ ಕರ್ಮತೋ ಭಾರ್ಯಾರಕ್ಷಣೇ ಯೋಽಕ್ಷಮಃ ಪುಮಾನ್। ಅಯಶೋ ಮಹದಾಪ್ನೋತಿ ನರಕಂ ಚೈವ ಗಚ್ಛತಿ।। ↩︎