092: ನಕುಲಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 92

ಸಾರ

ಅಶ್ವಮೇಧವು ಮುಗಿಯುತ್ತಿರಲು ಒಂದು ಪಾರ್ಶ್ವವು ಚಿನ್ನವಾಗಿದ್ದ ಮುಂಗುಸಿಯೊಂದು ಬಿಲದಿಂದ ಹೊರಬಂದು “ಈ ಯಜ್ಞವು ಕುರುಕ್ಷೇತ್ರದಲ್ಲಿ ವಾಸಿಸಿದ್ದ ಉಂಚವೃತ್ತಿಯವನು ನೀಡಿದ ಒಂದು ಸೇರು ಹಿಟ್ಟಿನ ದಾನಕ್ಕೂ ಸಮನಲ್ಲ!” ಎಂದು ಕೂಗಿ ಹೇಳಿದುದು (1-5). ವಿಪ್ರರು ಅದಕ್ಕೆ ಕಾರಣವನ್ನು ಪ್ರಶ್ನಿಸಿದುದು (6-17). ಮುಂಗುಸಿಯು ಉಂಚವೃತ್ತಿಯ ಬ್ರಾಹ್ಮಣನ ಕುರಿತು ಹೇಳಲು ಪ್ರಾರಂಭಿಸಿದುದು (18-22).

14092001 ಜನಮೇಜಯ ಉವಾಚ
14092001a ಪಿತಾಮಹಸ್ಯ ಮೇ ಯಜ್ಞೇ ಧರ್ಮಪುತ್ರಸ್ಯ ಧೀಮತಃ।
14092001c ಯದಾಶ್ಚರ್ಯಮಭೂತ್ಕಿಂ ಚಿತ್ತದ್ಭವಾನ್ವಕ್ತುಮರ್ಹತಿ।।

ಜನಮೇಜಯನು ಹೇಳಿದನು: “ನನ್ನ ಪಿತಾಮಹ ಧೀಮಂತ ಧರ್ಮಪುತ್ರನ ಯಜ್ಞದಲ್ಲಿ ಏನಾದರೂ ಆಶ್ಚರ್ಯವು ನಡೆಯಿತೇ? ಅದನ್ನು ನೀವು ಹೇಳಬೇಕು!”

14092002 ವೈಶಂಪಾಯನ ಉವಾಚ
14092002a ಶ್ರೂಯತಾಂ ರಾಜಶಾರ್ದೂಲ ಮಹದಾಶ್ಚರ್ಯಮುತ್ತಮಮ್।
14092002c ಅಶ್ವಮೇಧೇ ಮಹಾಯಜ್ಞೇ ನಿವೃತ್ತೇ ಯದಭೂದ್ವಿಭೋ।।

ವೈಶಂಪಾಯನನು ಹೇಳಿದನು: “ವಿಭೋ! ರಾಜಶಾರ್ದೂಲ! ಆ ಮಹಾಯಜ್ಞ ಅಶ್ವಮೇಧವು ಮುಗಿಯಲು ಒಂದು ಉತ್ತಮ ಮಹದಾಶ್ಚರ್ಯವು ನಡೆಯಿತು. ಅದನ್ನು ಕೇಳಬೇಕು.

14092003a ತರ್ಪಿತೇಷು ದ್ವಿಜಾಗ್ರ್ಯೇಷು ಜ್ಞಾತಿಸಂಬಂಧಿಬಂಧುಷು।
14092003c ದೀನಾಂಧಕೃಪಣೇ ಚಾಪಿ ತದಾ ಭರತಸತ್ತಮ।।
14092004a ಘುಷ್ಯಮಾಣೇ ಮಹಾದಾನೇ ದಿಕ್ಷು ಸರ್ವಾಸು ಭಾರತ।
14092004c ಪತತ್ಸು ಪುಷ್ಪವರ್ಷೇಷು ಧರ್ಮರಾಜಸ್ಯ ಮೂರ್ಧನಿ।।

ಭರತಸತ್ತಮ! ಭಾರತ! ದ್ವಿಜಾಗ್ರರು, ಜ್ಞಾತಿ-ಸಂಬಂಧಿ-ಬಂಧುಗಳು ಮತ್ತು ಧೀನ-ಅಂಧ-ಕೃಪಣರು ತೃಪ್ತಿಗೊಳ್ಳಲು, ಮಹಾದಾನಗಳನ್ನು ಸರ್ವದಿಕ್ಕುಗಳಲ್ಲಿಯೂ ಘೋಷಿಸಲು, ಧರ್ಮರಾಜನ ನೆತ್ತಿಯ ಮೇಲೆ ಪುಷ್ಪವೃಷ್ಟಿಯು ಬಿದ್ದಿತು.

14092005a ಬಿಲಾನ್ನಿಷ್ಕ್ರಮ್ಯ ನಕುಲೋ ರುಕ್ಮಪಾರ್ಶ್ವಸ್ತದಾನಘ।
14092005c ವಜ್ರಾಶನಿಸಮಂ ನಾದಮಮುಂಚತ ವಿಶಾಂ ಪತೇ।।

ವಿಶಾಂಪತೇ! ಅನಘ! ಆಗ ಒಂದು ಪಾರ್ಶ್ವವು ಸುವರ್ಣಾಮಯವಾಗಿದ್ದ ಮುಂಗಸಿಯೊಂದು ಬಿಲದಿಂದ ಹೊರಬಂದು ಸಿಡಿಲಿನಂತೆ ಗರ್ಜಿಸಿತು.

14092006a ಸಕೃದುತ್ಸೃಜ್ಯ ತಂ ನಾದಂ ತ್ರಾಸಯಾನೋ ಮೃಗದ್ವಿಜಾನ್।
14092006c ಮಾನುಷಂ ವಚನಂ ಪ್ರಾಹ ಧೃಷ್ಟೋ ಬಿಲಶಯೋ ಮಹಾನ್।।

ಹಾಗೆ ಜೋರಾಗಿ ಕೂಗಿ ಮೃಗ-ಪಕ್ಷಿಗಳನ್ನು ಭಯಪಡಿಸಿದ ಆ ಮಹಾ ಬಿಲಶಾಯಿಯು ಮಾನವ ಧ್ವನಿಯಲ್ಲಿ ಹೀಗೆ ಹೇಳಿತು:

14092007a ಸಕ್ತುಪ್ರಸ್ಥೇನ ವೋ ನಾಯಂ ಯಜ್ಞಸ್ತುಲ್ಯೋ ನರಾಧಿಪಾಃ।
14092007c ಉಂಚವೃತ್ತೇರ್ವದಾನ್ಯಸ್ಯ ಕುರುಕ್ಷೇತ್ರನಿವಾಸಿನಃ।।

“ನರಾಧಿಪರೇ! ಈ ಯಜ್ಞದಲ್ಲಿ ಮಾಡಿದ ದಾನವು ಕುರುಕ್ಷೇತ್ರದಲ್ಲಿ ವಾಸಿಸುವ ಉಂಚವೃತ್ತಿಯವನು ಮಾಡಿದ ಒಂದು ಸೇರು ಹಿಟ್ಟಿನ ದಾನಕ್ಕೂ ಸಮಾನವಲ್ಲ!”

14092008a ತಸ್ಯ ತದ್ವಚನಂ ಶ್ರುತ್ವಾ ನಕುಲಸ್ಯ ವಿಶಾಂ ಪತೇ।
14092008c ವಿಸ್ಮಯಂ ಪರಮಂ ಜಗ್ಮುಃ ಸರ್ವೇ ತೇ ಬ್ರಾಹ್ಮಣರ್ಷಭಾಃ।।

ವಿಶಾಂಪತೇ! ಮುಂಗುಸಿಯ ಆ ಮಾತನ್ನು ಕೇಳಿ ಬ್ರಾಹ್ಮಣರ್ಷಭರೆಲ್ಲರೂ ಪರಮ ವಿಸ್ಮಿತರಾದರು.

14092009a ತತಃ ಸಮೇತ್ಯ ನಕುಲಂ ಪರ್ಯಪೃಚ್ಚಂತ ತೇ ದ್ವಿಜಾಃ।
14092009c ಕುತಸ್ತ್ವಂ ಸಮನುಪ್ರಾಪ್ತೋ ಯಜ್ಞಂ ಸಾಧುಸಮಾಗಮಮ್।।

ಆಗ ಆ ದ್ವಿಜರೆಲ್ಲರೂ ಒಂದಾಗಿ ಮುಂಗುಸಿಯನ್ನು ಕೇಳಿದರು: “ಸಾಧುಗಳು ಬಂದು ಸೇರಿರುವ ಈ ಯಜ್ಞಕ್ಕೆ ನೀನು ಎಲ್ಲಿಂದ ಆಗಮಿಸಿರುವೆ?

14092010a ಕಿಂ ಬಲಂ ಪರಮಂ ತುಭ್ಯಂ ಕಿಂ ಶ್ರುತಂ ಕಿಂ ಪರಾಯಣಮ್।
14092010c ಕಥಂ ಭವಂತಂ ವಿದ್ಯಾಮ ಯೋ ನೋ ಯಜ್ಞಂ ವಿಗರ್ಹಸೇ।।

ನಿನ್ನ ಪರಮ ಬಲವು ಯಾವುದು? ನಿನ್ನ ಪರಿಜ್ಞಾನವು ಏನು? ಯಾರನ್ನಾಶ್ರಯಿಸಿ ಜೀವಿಸುತ್ತಿರುವೆ? ಈ ಯಜ್ಞವನ್ನು ಹೀಗೆ ನಿಂದಿಸುತ್ತಿರುವ ನಿನ್ನನ್ನು ನಾವು ಯಾರೆಂದು ತಿಳಿದುಕೊಳ್ಳಬೇಕು?

14092011a ಅವಿಲುಪ್ಯಾಗಮಂ ಕೃತ್ಸ್ನಂ ವಿಧಿಜ್ಞೈರ್ಯಾಜಕೈಃ ಕೃತಮ್।
14092011c ಯಥಾಗಮಂ ಯಥಾನ್ಯಾಯಂ ಕರ್ತವ್ಯಂ ಚ ಯಥಾಕೃತಮ್।।

ನಾನಾವಿಧದ ಯಜ್ಞಸಾಮಾಗ್ರಿಗಳನ್ನು ಸಂಗ್ರಹಿಸಿ ಶಾಸ್ತ್ರವಿಧಿಗೆ ಯಾವ ಲೋಪವೂ ಬರದಂತೆ ಆಗಮಗಳಲ್ಲಿ ಹೇಳಿರುವಂತೆ ಯಥಾನ್ಯಾಯವಾಗಿ ಹೇಗೆ ಮಾಡಬೇಕೋ ಹಾಗೆ ಯಾಜಕರು ಇಲ್ಲಿ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ.

14092012a ಪೂಜಾರ್ಹಾಃ ಪೂಜಿತಾಶ್ಚಾತ್ರ ವಿಧಿವಚ್ಚಾಸ್ತ್ರಚಕ್ಷುಷಾ।
14092012c ಮಂತ್ರಪೂತಂ ಹುತಶ್ಚಾಗ್ನಿರ್ದತ್ತಂ ದೇಯಮಮತ್ಸರಮ್।।

ಶಾಸ್ತ್ರಗಳಲ್ಲಿ ತೋರಿಸಿಕೊಟ್ಟಿರುವಂತೆ ಪೂಜಾರ್ಹರನ್ನು ಇಲ್ಲಿ ವಿಧಿವತ್ತಾಗಿ ಪೂಜಿಸಲಾಗಿದೆ. ಮಂತ್ರಪೂತ ಆಹುತಿಗಳಿಂದ ಅಗ್ನಿಯು ತೃಪ್ತನಾಗಿದ್ದಾನೆ. ಮಾತ್ಸರ್ಯವೇನೂ ಇಲ್ಲದೇ ದಾನಗಳನ್ನು ನೀಡಲಾಗಿದೆ.

14092013a ತುಷ್ಟಾ ದ್ವಿಜರ್ಷಭಾಶ್ಚಾತ್ರ ದಾನೈರ್ಬಹುವಿಧೈರಪಿ।
14092013c ಕ್ಷತ್ರಿಯಾಶ್ಚ ಸುಯುದ್ಧೇನ ಶ್ರಾದ್ಧೈರಪಿ ಪಿತಾಮಹಾಃ।।

ಇಲ್ಲ ಬಹುವಿಧದ ದಾನಗಳಿಂದ ದ್ವಿಜರ್ಷಭರು ತುಷ್ಟರಾಗಿದ್ದಾರೆ. ಧರ್ಮಯುದ್ಧದಿಂದ ಕ್ಷತ್ರಿಯರೂ, ಶ್ರಾದ್ಧಗಳಿಂದ ಪಿತಾಮಹರೂ ತೃಪ್ತರಾಗಿದ್ದಾರೆ.

14092014a ಪಾಲನೇನ ವಿಶಸ್ತುಷ್ಟಾಃ ಕಾಮೈಸ್ತುಷ್ಟಾ ವರಸ್ತ್ರಿಯಃ।
14092014c ಅನುಕ್ರೋಶೈಸ್ತಥಾ ಶೂದ್ರಾ ದಾನಶೇಷೈಃ ಪೃಥಗ್ಜನಾಃ।।

ಪಾಲನೆಯಿಂದ ವೈಶ್ಯರು ತುಷ್ಟರಾಗಿದ್ದಾರೆ. ಶ್ರೇಷ್ಠ ಸ್ತ್ರೀಯರು ಕಾಮಗಳಿಂದ ತೃಪ್ತರಾಗಿದ್ದಾರೆ. ದಯೆಯಿಂದ ಶೂದ್ರರೂ, ದಾನಕೊಟ್ಟು ಉಳಿದುದರಿಂದ ಇತರ ಜನರೂ ತೃಪ್ತರಾಗಿದ್ದಾರೆ.

14092015a ಜ್ಞಾತಿಸಂಬಂಧಿನಸ್ತುಷ್ಟಾಃ ಶೌಚೇನ ಚ ನೃಪಸ್ಯ ನಃ।
14092015c ದೇವಾ ಹವಿರ್ಭಿಃ ಪುಣ್ಯೈಶ್ಚ ರಕ್ಷಣೈಃ ಶರಣಾಗತಾಃ।।

ನಮ್ಮ ನೃಪನ ಶೌಚದಿಂದಾಗಿ ಜ್ಞಾತಿ-ಸಂಬಂಧಿಗಳು ತೃಪ್ತರಾಗಿದ್ದಾರೆ. ದೇವತೆಗಳು ಪುಣ್ಯ ಹವಿಸ್ಸುಗಳಿಂದಲೂ ಶರಣಾಗತರು ರಕ್ಷಣೆಯಿಂದಲೂ ತುಷ್ಟರಾಗಿದ್ದಾರೆ.

14092016a ಯದತ್ರ ತಥ್ಯಂ ತದ್ಬ್ರೂಹಿ ಸತ್ಯಸಂಧ ದ್ವಿಜಾತಿಷು।
14092016c ಯಥಾಶ್ರುತಂ ಯಥಾದೃಷ್ಟಂ ಪೃಷ್ಟೋ ಬ್ರಾಹ್ಮಣಕಾಮ್ಯಯಾ।।

ಸತ್ಯಸಂಧ! ಇಲ್ಲಿ ಹೀಗಿರುವಾಗ ನೀನು ಏನನ್ನು ಕೇಳಿ ಅಥವಾ ಏನನ್ನು ನೋಡಿ ಹೀಗೆ ಹೇಳುತ್ತಿರುವೆ? ಬ್ರಾಹ್ಮಣರ ಅಪೇಕ್ಷೆಯಂತೆ ದ್ವಿಜಾತಿಯವರು ಕೇಳುವ ಈ ಪ್ರಶ್ನೆಗೆ ಉತ್ತರಿಸು.

14092017a ಶ್ರದ್ಧೇಯವಾಕ್ಯಃ ಪ್ರಾಜ್ಞಸ್ತ್ವಂ ದಿವ್ಯಂ ರೂಪಂ ಬಿಭರ್ಷಿ ಚ।
14092017c ಸಮಾಗತಶ್ಚ ವಿಪ್ರೈಸ್ತ್ವಂ ತತ್ತ್ವತೋ ವಕ್ತುಮರ್ಹಸಿ।।

ನೀನು ಪ್ರಾಜ್ಞನಾಗಿರುವೆ. ದಿವ್ಯರೂಪವನ್ನು ಹೊಂದಿರುವೆ. ಬ್ರಾಹ್ಮಣರೊಂದಿಗೆ ಸೇರಿರುವೆ. ನಿನ್ನ ವಾಕ್ಯದಲ್ಲಿ ಶ್ರದ್ಧೆಯಿದೆ. ತತ್ತ್ವವೇನೆಂದು ನೀನು ಹೇಳಬೇಕು.”

14092018a ಇತಿ ಪೃಷ್ಟೋ ದ್ವಿಜೈಸ್ತೈಃ ಸ ಪ್ರಹಸ್ಯ ನಕುಲೋಽಬ್ರವೀತ್।
14092018c ನೈಷಾನೃತಾ ಮಯಾ ವಾಣೀ ಪ್ರೋಕ್ತಾ ದರ್ಪೇಣ ವಾ ದ್ವಿಜಾಃ।।

ದ್ವಿಜರು ಹೀಗೆ ಕೇಳಲು ಆ ಮುಂಗಸಿಯು ನಕ್ಕು ಹೇಳಿತು: “ದ್ವಿಜರೇ! ನನ್ನ ಮಾತು ಸುಳ್ಳಲ್ಲ ಅಥವಾ ನಾನು ಇದನ್ನು ದರ್ಪದಿಂದಲೂ ಹೇಳಿಲ್ಲ!

14092019a ಯನ್ಮಯೋಕ್ತಮಿದಂ ಕಿಂ ಚಿದ್ಯುಷ್ಮಾಭಿಶ್ಚಾಪ್ಯುಪಶ್ರುತಮ್।
14092019c ಸಕ್ತುಪ್ರಸ್ಥೇನ ವೋ ನಾಯಂ ಯಜ್ಞಸ್ತುಲ್ಯೋ ನರಾಧಿಪಾಃ।
14092019e ಉಂಚವೃತ್ತೇರ್ವದಾನ್ಯಸ್ಯ ಕುರುಕ್ಷೇತ್ರನಿವಾಸಿನಃ।।

“ನರಾಧಿಪರೇ! ಈ ಯಜ್ಞವು ಕುರುಕ್ಷೇತ್ರದಲ್ಲಿ ವಾಸಿಸಿದ್ದ ಉಂಚವೃತ್ತಿಯವನು ನೀಡಿದ ಒಂದು ಸೇರು ಹಿಟ್ಟಿನ ದಾನಕ್ಕೂ ಸಮನಲ್ಲ!” ಎಂಬ ನನ್ನ ಮಾತನ್ನು ನೀವುಗಳು ಕೂಡ ಕೇಳಿಕೊಂಡಿದ್ದೀರಿ.

14092020a ಇತ್ಯವಶ್ಯಂ ಮಯೈತದ್ವೋ ವಕ್ತವ್ಯಂ ದ್ವಿಜಪುಂಗವಾಃ।
14092020c ಶೃಣುತಾವ್ಯಗ್ರಮನಸಃ ಶಂಸತೋ ಮೇ ದ್ವಿಜರ್ಷಭಾಃ।।

ದ್ವಿಜಪುಂಗವರೇ! ದ್ವಿಜರ್ಷಭರೇ! ಆದರೂ ನಿಮಗೆ ನಾನು ಈ ಮಾತುಗಳನ್ನು ಹೇಳುವುದು ಅವಶ್ಯಕವಾಗಿದೆ. ಅವ್ಯಗ್ರಮನಸ್ಕರಾಗಿ ನಾನು ಹೇಳುವುದನ್ನು ಕೇಳುವಂಥವರಾಗಿರಿ!

14092021a ಅನುಭೂತಂ ಚ ದೃಷ್ಟಂ ಚ ಯನ್ಮಯಾದ್ಭುತಮುತ್ತಮಮ್।
14092021c ಉಂಚವೃತ್ತೇರ್ಯಥಾವೃತ್ತಂ ಕುರುಕ್ಷೇತ್ರನಿವಾಸಿನಃ।।

ಕುರುಕ್ಷೇತ್ರದಲ್ಲಿ ವಾಸಿಸುತ್ತಿದ್ದ ಉಂಚವೃತ್ತಿಯನ್ನನುಸರಿಸುತ್ತಿರುವನ ಉತ್ತಮವೂ ಅದ್ಭುತವೂ ಆದ ಆ ನಡತೆಯನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ.

14092022a ಸ್ವರ್ಗಂ ಯೇನ ದ್ವಿಜಃ ಪ್ರಾಪ್ತಃ ಸಭಾರ್ಯಃ ಸಸುತಸ್ನುಷಃ।
14092022c ಯಥಾ ಚಾರ್ಧಂ ಶರೀರಸ್ಯ ಮಮೇದಂ ಕಾಂಚನೀಕೃತಮ್।।

ನನ್ನ ಈ ಅರ್ಧಶರೀರವನ್ನು ಸುವರ್ಣಮಯವನ್ನಾಗಿ ಮಾಡಿಸಿ ಆ ದ್ವಿಜನು ತನ್ನ ಪತ್ನಿ, ಮಗ ಮತ್ತು ಸೊಸೆಯರೊಂದಿಗೆ ಸ್ವರ್ಗವನ್ನು ಪಡೆದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ನಕುಲಾಖ್ಯಾನೇ ದ್ವಿನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ನಕುಲಾಖ್ಯಾನ ಎನ್ನುವ ತೊಂಭತ್ತೆರಡನೇ ಅಧ್ಯಾಯವು.