ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 90
ಸಾರ
ಬಭ್ರುವಾಹನನು ಕುಂತಿ, ದ್ರೌಪದಿ, ಸುಭದ್ರೆ ಮತ್ತು ಇತರ ಕುರುಸ್ತ್ರೀಯರನ್ನೂ, ಧೃತರಾಷ್ಟ್ರನನ್ನೂ, ಪಾಂಡವರನ್ನೂ, ಮತ್ತು ಕೃಷ್ಣನನ್ನೂ ಸಂಧಿಸಿದುದು (1-10). ವ್ಯಾಸನ ಆದೇಶದಂತೆ ಮೂರು ಅಶ್ವಮೇಧಗಳಿಗೆ ಸಮನಾಗುವಂತೆ ಮೂರುಪಟ್ಟು ದಕ್ಷಿಣೆಗಳನ್ನಿತ್ತು ಯುಧಿಷ್ಠಿರನು ಯಜ್ಞವನ್ನು ನಡೆಸಿದುದು (11-21). ಯೂಪೋಚ್ಛ್ರಯದ ವರ್ಣನೆ (22-39).
14090001 ವೈಶಂಪಾಯನ ಉವಾಚ
14090001a ಸ ಪ್ರವಿಶ್ಯ ಯಥಾನ್ಯಾಯಂ ಪಾಂಡವಾನಾಂ ನಿವೇಶನಮ್।
14090001c ಪಿತಾಮಹೀಮಭ್ಯವದತ್ಸಾಮ್ನಾ ಪರಮವಲ್ಗುನಾ।।
ವೈಶಂಪಾಯನನು ಹೇಳಿದನು: “ಅವನು ಪಾಂಡವನ ಅರಮನೆಯನ್ನು ಪ್ರವೇಶಿಸಿ ಯಥಾನ್ಯಾಯವಾಗಿ ವಿನೀತನಾಗಿ ಮಧುರಮಾತುಗಳಿಂದ ಪಿತಾಮಹಿಯನ್ನು ನಮಸ್ಕರಿಸಿದನು.
14090002a ತಥಾ ಚಿತ್ರಾಂಗದಾ ದೇವೀ ಕೌರವ್ಯಸ್ಯಾತ್ಮಜಾಪಿ ಚ।
14090002c ಪೃಥಾಂ ಕೃಷ್ಣಾಂ ಚ ಸಹಿತೇ ವಿನಯೇನಾಭಿಜಗ್ಮತುಃ।
14090002E ಸುಭದ್ರಾಂ ಚ ಯಥಾನ್ಯಾಯಂ ಯಾಶ್ಚಾನ್ಯಾಃ ಕುರುಯೋಷಿತಃ।।
ಹಾಗೆಯೇ ದೇವೀ ಚಿತ್ರಾಂಗದೆ ಮತ್ತು ಕೌರವ್ಯಸುತೆ ಉಲೂಪಿಯರು ಒಟ್ಟಾಗಿ ಕುಂತಿ, ಕೃಷ್ಣೆ, ಸುಭದ್ರೆ ಮತ್ತು ಅನ್ಯ ಕುರುಸ್ತ್ರೀಯರನ್ನು ಯಥಾನ್ಯಾಯವಾಗಿ ವಿನಯದಿಂದ ನಮಸ್ಕರಿಸಿದರು.
14090003a ದದೌ ಕುಂತೀ ತತಸ್ತಾಭ್ಯಾಂ ರತ್ನಾನಿ ವಿವಿಧಾನಿ ಚ।
14090003c ದ್ರೌಪದೀ ಚ ಸುಭದ್ರಾ ಚ ಯಾಶ್ಚಾಪ್ಯನ್ಯಾ ದದುಃ ಸ್ತ್ರಿಯಃ।।
ಕುಂತಿಯು ಅವರಿಬ್ಬರಿಗೆ ವಿವಿಧರತ್ನಗಳನ್ನಿತ್ತಳು. ದ್ರೌಪದೀ ಮತ್ತು ಸುಭದ್ರೆಯರೂ ಉಡುಗೊರೆಗಳನ್ನಿತ್ತರು.
14090004a ಊಷತುಸ್ತತ್ರ ತೇ ದೇವ್ಯೌ ಮಹಾರ್ಹಶಯನಾಸನೇ।
14090004c ಸುಪೂಜಿತೇ ಸ್ವಯಂ ಕುಂತ್ಯಾ ಪಾರ್ಥಸ್ಯ ಪ್ರಿಯಕಾಮ್ಯಯಾ।।
ಆ ಇಬ್ಬರು ದೇವಿಯರೂ ಅಮೂಲ್ಯ ಶಯನಾಸನಯುಕ್ತ ಭವನಗಳಲ್ಲಿ ಪಾರ್ಥನಿಗೆ ಪ್ರಿಯವನ್ನುಂಟುಮಾಡುವ ಸ್ವಯಂ ಕುಂತಿಯಿಂದ ಸತ್ಕರಿಸಲ್ಪಟ್ಟು ಉಳಿದುಕೊಂಡರು.
14090005a ಸ ಚ ರಾಜಾ ಮಹಾವೀರ್ಯಃ ಪೂಜಿತೋ ಬಭ್ರುವಾಹನಃ।
14090005c ಧೃತರಾಷ್ಟ್ರಂ ಮಹೀಪಾಲಮುಪತಸ್ಥೇ ಯಥಾವಿಧಿ।।
ಸತ್ಕರಿಸಲ್ಪಟ್ಟ ಮಹಾವೀರ್ಯ ರಾಜಾ ಬಭ್ರುವಾಹನನು ಯಥಾವಿಧಿಯಾಗಿ ಮಹೀಪಾಲ ಧೃತರಾಷ್ಟ್ರನ ಸೇವೆಗೈದನು.
14090006a ಯುಧಿಷ್ಠಿರಂ ಚ ರಾಜಾನಂ ಭೀಮಾದೀಂಶ್ಚಾಪಿ ಪಾಂಡವಾನ್।
14090006c ಉಪಗಮ್ಯ ಮಹಾತೇಜಾ ವಿನಯೇನಾಭ್ಯವಾದಯತ್।।
ಮಹಾತೇಜಸ್ವಿ ಬಭ್ರುವಾಹನನು ರಾಜ ಯುಧಿಷ್ಠಿರನನ್ನೂ ಭೀಮಾದಿ ಪಾಂಡವರನ್ನೂ ಸಂಧಿಸಿ ವಿನಯದಿಂದ ಅಭಿವಂದಿಸಿದನು.
14090007a ಸ ತೈಃ ಪ್ರೇಮ್ಣಾ ಪರಿಷ್ವಕ್ತಃ ಪೂಜಿತಶ್ಚ ಯಥಾವಿಧಿ।
14090007c ಧನಂ ಚಾಸ್ಮೈ ದದುರ್ಭೂರಿ ಪ್ರೀಯಮಾಣಾ ಮಹಾರಥಾಃ।।
ಆ ಮಹಾರಥರು ಪ್ರೇಮದಿಂದ ಅವನನ್ನು ಆಲಂಗಿಸಿ ಯಥಾವಿಧಿಯಾಗಿ ಗೌರವಿಸಿ, ಪ್ರೀತಿಯಿಂದ ಅವನಿಗೆ ಬಹು ಧನವನ್ನು ನೀಡಿದರು.
14090008a ತಥೈವ ಸ ಮಹೀಪಾಲಃ ಕೃಷ್ಣಂ ಚಕ್ರಗದಾಧರಮ್।
14090008c ಪ್ರದ್ಯುಮ್ನ ಇವ ಗೋವಿಂದಂ ವಿನಯೇನೋಪತಸ್ಥಿವಾನ್।।
ಹಾಗೆಯೇ ಆ ಮಹೀಪಾಲನು ಚಕ್ರಗದಾಧಾರಿ ಕೃಷ್ಣ ಗೋವಿಂದನನ್ನು ಪ್ರದ್ಯುಮ್ನನಂತೆಯೇ ವಿನಯದಿಂದ ಸೇವೆಗೈದನು.
14090009a ತಸ್ಮೈ ಕೃಷ್ಣೋ ದದೌ ರಾಜ್ಞೇ ಮಹಾರ್ಹಮಭಿಪೂಜಿತಮ್।
14090009c ರಥಂ ಹೇಮಪರಿಷ್ಕಾರಂ ದಿವ್ಯಾಶ್ವಯುಜಮುತ್ತಮಮ್।।
ಆ ರಾಜನಿಗೆ ಕೃಷ್ಣನು ಬೆಲೆಬಾಳುವ ಚಿನ್ನದಿಂದ ಅಲಂಕೃತ ರಥವನ್ನೂ ಉತ್ತಮ ದಿವ್ಯಾಶ್ವಗಳನ್ನೂ ಕೊಟ್ಟು ಸತ್ಕರಿಸಿದನು.
14090010a ಧರ್ಮರಾಜಶ್ಚ ಭೀಮಶ್ಚ ಯಮಜೌ ಫಲ್ಗುನಸ್ತಥಾ।
14090010c ಪೃಥಕ್ ಪೃಥಗತೀವೈನಂ ಮಾನಾರ್ಹಂ ಸಮಪೂಜಯನ್।।
ಧರ್ಮರಾಜ, ಭೀಮ, ಯಮಳರು ಮತ್ತು ಫಲ್ಗುನರು ಅವನಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಉಡುಗೊರೆಗಳನ್ನಿತ್ತು ಸತ್ಕರಿಸಿದರು.
14090011a ತತಸ್ತೃತೀಯೇ ದಿವಸೇ ಸತ್ಯವತ್ಯಾಃ ಸುತೋ ಮುನಿಃ।
14090011c ಯುಧಿಷ್ಠಿರಂ ಸಮಭ್ಯೇತ್ಯ ವಾಗ್ಮೀ ವಚನಮಬ್ರವೀತ್।।
ಅನಂತರ ಮೂರನೆಯ ದಿವಸ ಸತ್ಯವತೀ ಸುತ ವಾಗ್ಮೀ ಮುನಿ ವ್ಯಾಸನು ಯುಧಿಷ್ಠಿರನನ್ನು ಸಂಧಿಸಿ ಈ ಮಾತುಗಳನ್ನಾಡಿದನು:
14090012a ಅದ್ಯ ಪ್ರಭೃತಿ ಕೌಂತೇಯ ಯಜಸ್ವ ಸಮಯೋ ಹಿ ತೇ।
14090012c ಮುಹೂರ್ತೋ ಯಜ್ಞಿಯಃ ಪ್ರಾಪ್ತಶ್ಚೋದಯಂತಿ ಚ ಯಾಜಕಾಃ।।
“ಕೌಂತೇಯ! ಇಂದಿನಿಂದ ನೀನು ದೀಕ್ಷಾಬದ್ಧನಾಗಿ ಯಜ್ಞವನ್ನು ಆರಂಭಿಸು. ಯಜ್ಞದ ಮುಹೂರ್ತವು ಸನ್ನಿಹಿತವಾಗಿದೆಯೆಂದು ಯಾಜಕರು ಪ್ರೇರೇಪಿಸುತ್ತಿದ್ದಾರೆ.
14090013a ಅಹೀನೋ ನಾಮ ರಾಜೇಂದ್ರ ಕ್ರತುಸ್ತೇಽಯಂ ವಿಕಲ್ಪವಾನ್।
14090013c ಬಹುತ್ವಾತ್ಕಾಂಚನಸ್ಯಾಸ್ಯ ಖ್ಯಾತೋ ಬಹುಸುವರ್ಣಕಃ।।
ರಾಜೇಂದ್ರ! ಈ ಕ್ರತುವಿನ ಹೆಸರೇ “ಅಹೀನ” ಅಂದರೆ ಲೋಪವಿಲ್ಲದ್ದು ಎಂದಿದೆ. ಇದರಲ್ಲಿ ಚಿನ್ನವನ್ನು ಬಹುವಾಗಿ ಬಳಸುವುದರಿಂದ ಇದು ಬಹುಸುವರ್ಣಕ ಎಂದೂ ಖ್ಯಾತಿಯಾಗಿದೆ.
14090014a ಏವಮೇವ ಮಹಾರಾಜ ದಕ್ಷಿಣಾಂ ತ್ರಿಗುಣಾಂ ಕುರು।
14090014c ತ್ರಿತ್ವಂ ವ್ರಜತು ತೇ ರಾಜನ್ಬ್ರಾಹ್ಮಣಾ ಹ್ಯತ್ರ ಕಾರಣಮ್।।
ಮಹಾರಾಜ! ರಾಜನ್! ಇದಕ್ಕೆ ಪ್ರಧಾನ ಕಾರಣರಾಗಿರುವ ಬ್ರಾಹ್ಮಣರಿಗೆ ಮೂರು ಪಟ್ಟು ಅಧಿಕವಾದ ದಕ್ಷಿಣೆಯನ್ನು ಕೊಟ್ಟು ಮೂರು ಯಜ್ಞಗಳನ್ನು ಮಾಡಿದಂಥವನಾಗು!
14090015a ತ್ರೀನಶ್ವಮೇಧಾನತ್ರ ತ್ವಂ ಸಂಪ್ರಾಪ್ಯ ಬಹುದಕ್ಷಿಣಾನ್।
14090015c ಜ್ಞಾತಿವಧ್ಯಾಕೃತಂ ಪಾಪಂ ಪ್ರಹಾಸ್ಯಸಿ ನರಾಧಿಪ।।
ನರಾಧಿಪ! ಬಹುದಕ್ಷಿಣಾಯುಕ್ತವಾದ ಮೂರು ಅಶ್ವಮೇಧಗಳನ್ನು ಮಾಡಿದವನಾಗಿ ನೀನು ಜ್ಞಾತಿವಧೆಯ ಪಾಪವನ್ನು ಕಳೆದುಕೊಳ್ಳುತ್ತೀಯೆ!
14090016a ಪವಿತ್ರಂ ಪರಮಂ ಹ್ಯೇತತ್ಪಾವನಾನಾಂ ಚ ಪಾವನಮ್।
14090016c ಯದಶ್ವಮೇಧಾವಭೃಥಂ ಪ್ರಾಪ್ಸ್ಯಸೇ ಕುರುನಂದನ।।
ಕುರುನಂದನ! ಪರಮ ಪವಿತ್ರವೂ ಪಾವನಗಳಲ್ಲಿ ಪಾವನವೂ ಆಗಿರುವ ಈ ಅಶ್ವಮೇಧದ ಅವಭೃತವನ್ನು ನೀನು ಪಡೆಯುವವನಾಗು!”
14090017a ಇತ್ಯುಕ್ತಃ ಸ ತು ತೇಜಸ್ವೀ ವ್ಯಾಸೇನಾಮಿತತೇಜಸಾ।
14090017c ದೀಕ್ಷಾಂ ವಿವೇಶ ಧರ್ಮಾತ್ಮಾ ವಾಜಿಮೇಧಾಪ್ತಯೇ ತದಾ।
14090017e ನರಾಧಿಪಃ ಪ್ರಾಯಜತ ವಾಜಿಮೇಧಂ ಮಹಾಕ್ರತುಮ್।।
ತೇಜಸ್ವೀ ಅಮಿತತೇಜಸ್ವೀ ವ್ಯಾಸನು ಹೀಗೆ ಹೇಳಲು ಆ ಧರ್ಮಾತ್ಮಾ ನರಾಧಿಪ ಯುಧಿಷ್ಠಿರನು ಅಶ್ವಮೇಧದ ದೀಕ್ಷೆಯನ್ನು ಗ್ರಹಣಮಾಡಿ, ಮಹಾಕ್ರತು ಅಶ್ವಮೇಧ ಯಾಗವನ್ನು ನಡೆಸಿದನು.
14090018a ತತ್ರ ವೇದವಿದೋ ರಾಜಂಶ್ಚಕ್ರುಃ ಕರ್ಮಾಣಿ ಯಾಜಕಾಃ।
14090018c ಪರಿಕ್ರಮಂತಃ ಶಾಸ್ತ್ರಜ್ಞಾ ವಿಧಿವತ್ಸಾಧುಶಿಕ್ಷಿತಾಃ।।
ರಾಜನ್! ಅಲ್ಲಿ ಚೆನ್ನಾಗಿ ಪಳಗಿದ್ದ ವೇದವಿದ ಶಾಸ್ತ್ರಜ್ಞ ಯಾಜಕರು ವಿಧಿವತ್ತಾಗಿ ಕರ್ಮಗಳನ್ನು ಕ್ರಮವಾಗಿ ನಡೆಸಿದರು.
14090019a ನ ತೇಷಾಂ ಸ್ಖಲಿತಂ ತತ್ರ ನಾಸೀದಪಹುತಂ ತಥಾ।
14090019c ಕ್ರಮಯುಕ್ತಂ ಚ ಯುಕ್ತಂ ಚ ಚಕ್ರುಸ್ತತ್ರ ದ್ವಿಜರ್ಷಭಾಃ।।
ಆ ದ್ವಿಜರ್ಷಭರು ಕ್ರಮಯುಕ್ತವಾಗಿ ಎಲ್ಲ ಕರ್ಮಗಳನ್ನೂ ನಡೆಸಿದರು. ಅಲ್ಲಿ ಯಾವುದನ್ನೂ ಬಿಡದೇ ಯಾವುದರಲ್ಲಿಯೂ ತಪ್ಪದೇ ಮಾಡಿಸಿದರು.
14090020a ಕೃತ್ವಾ ಪ್ರವರ್ಗ್ಯಂ ಧರ್ಮಜ್ಞಾ ಯಥಾವದ್ದ್ವಿಜಸತ್ತಮಾಃ।
14090020c ಚಕ್ರುಸ್ತೇ ವಿಧಿವದ್ರಾಜಂಸ್ತಥೈವಾಭಿಷವಂ ದ್ವಿಜಾಃ।।
ರಾಜನ್! ಧರ್ಮಜ್ಞ ದ್ವಿಜ ದ್ವಿಜಸತ್ತಮರು ಯಥಾವಿಧಿಯಾಗಿ ಪ್ರವರ್ಗ್ಯವನ್ನು ಮಾಡಿ ವಿಧಿವತ್ತಾಗಿ ಅಭಿಷವ1ವನ್ನೂ ನಡೆಸಿದರು.
14090021a ಅಭಿಷೂಯ ತತೋ ರಾಜನ್ಸೋಮಂ ಸೋಮಪಸತ್ತಮಾಃ।
14090021c ಸವನಾನ್ಯಾನುಪೂರ್ವ್ಯೇಣ ಚಕ್ರುಃ ಶಾಸ್ತ್ರಾನುಸಾರಿಣಃ।।
ರಾಜನ್! ಅನಂತರ ಸೋಮಪಾನಮಾಡುವುದರಲ್ಲಿ ಶ್ರೇಷ್ಠರಾದ ಅವರು ಸೋಮವನ್ನು ತಯಾರಿಸಿ ಅದರ ಮೂಲಕ ಶಾಸ್ತ್ರಗಳನ್ನನುಸರಿಸಿ ಓಂದಾದರೊಂದಂತೆ ಸವನಗಳನ್ನು ಮಾಡಿದರು.
14090022a ನ ತತ್ರ ಕೃಪಣಃ ಕಶ್ಚಿನ್ನ ದರಿದ್ರೋ ಬಭೂವ ಹ।
14090022c ಕ್ಷುಧಿತೋ ದುಃಖಿತೋ ವಾಪಿ ಪ್ರಾಕೃತೋ ವಾಪಿ ಮಾನವಃ।।
ಅಲ್ಲಿ ಯಾವ ಮಾನವನೂ ಕೃಪಣನಾಗಲೀ, ದರಿದ್ರನಾಗಲೀ, ಹಸಿದವನಾಗಲೀ, ದುಃಖಿತನಾಗಲೀ, ಅಸಂಸ್ಕೃತನಾಗಲೀ ಇರಲಿಲ್ಲ.
14090023a ಭೋಜನಂ ಭೋಜನಾರ್ಥಿಭ್ಯೋ ದಾಪಯಾಮಾಸ ನಿತ್ಯದಾ।
14090023c ಭೀಮಸೇನೋ ಮಹಾತೇಜಾಃ ಸತತಂ ರಾಜಶಾಸನಾತ್।।
ರಾಜಶಾಸನದಂತೆ ಮಹಾತೇಜಸ್ವೀ ಭೀಮಸೇನನು ನಿತ್ಯವೂ ಸತತವಾಗಿ ಭೋಜನಾರ್ಥಿಗಳಿಗೆ ಭೋಜನದ ವ್ಯವಸ್ಥೆಯನ್ನು ಮಾಡುತ್ತಿದ್ದನು.
14090024a ಸಂಸ್ತರೇ ಕುಶಲಾಶ್ಚಾಪಿ ಸರ್ವಕರ್ಮಾಣಿ ಯಾಜಕಾಃ।
14090024c ದಿವಸೇ ದಿವಸೇ ಚಕ್ರುರ್ಯಥಾಶಾಸ್ತ್ರಾರ್ಥಚಕ್ಷುಷಃ।।
ಸರ್ವಕರ್ಮಗಳಲ್ಲಿ ಕುಶಲರಾದ ಮತ್ತು ಶಾಸ್ತ್ರಾರ್ಥಗಳನ್ನು ಕಂಡುಕೊಂಡಿದ್ದ ಯಾಜಕರು ಅನುದಿನವೂ ಎಲ್ಲಕರ್ಮಗಳನ್ನೂ ಸರಿಯಾಗಿಯೇ ಮಾಡಿಸುತ್ತಿದ್ದರು.
14090025a ನಾಷಡಂಗವಿದತ್ರಾಸೀತ್ಸದಸ್ಯಸ್ತಸ್ಯ ಧೀಮತಃ।
14090025c ನಾವ್ರತೋ ನಾನುಪಾಧ್ಯಾಯೋ ನ ಚ ವಾದಾಕ್ಷಮೋ ದ್ವಿಜಃ।।
ಧೀಮತ ಯುಧಿಷ್ಠಿರನ ಸದಸ್ಯರಲ್ಲಿ ಷಡಂಗಸಹಿತ ವೇದವನ್ನು ತಿಳಿಯದ, ವ್ರತಾನುಷ್ಠಾನಗಳನ್ನು ಮಾಡಿರದ, ಉಪಾಧ್ಯಾಯನಲ್ಲದ ಮತ್ತು ವಾದಗಳಿಗೆ ಸಕ್ಷಮನಲ್ಲದ ದ್ವಿಜರು ಯಾರೂ ಇರಲಿಲ್ಲ.
14090026a ತತೋ ಯೂಪೋಚ್ಚ್ರಯೇ ಪ್ರಾಪ್ತೇ ಷಡ್ ಬೈಲ್ವಾನ್ಭರತರ್ಷಭ।
14090026c ಖಾದಿರಾನ್ಬಿಲ್ವಸಮಿತಾಂಸ್ತಾವತಃ ಸರ್ವವರ್ಣಿನಃ।।
14090027a ದೇವದಾರುಮಯೌ ದ್ವೌ ತು ಯೂಪೌ ಕುರುಪತೇಃ ಕ್ರತೌ।
14090027c ಶ್ಲೇಷ್ಮಾತಕಮಯಂ ಚೈಕಂ ಯಾಜಕಾಃ ಸಮಕಾರಯನ್।।
ಭರತರ್ಷಭ! ಕುರುಪತಿಯ ಕ್ರತುವಿನಲ್ಲಿ ಯೂಪೋಚ್ಛ್ರಯವು ಸನ್ನಿಹಿತವಾದಾಗ ಯಾಜಕರು ಆರು ಬಿಲ್ವ, ಆರು ಖಾದಿರ (ಕಗ್ಗಲಿ), ಆರು ಬಿಲ್ವಸಮಿತ (ಪಲಾಶ), ಎರಡು ದೇವದಾರು, ಮತ್ತು ಒಂದು ಶ್ಲೇಷ್ಮಾತಕ ವೃಕ್ಷಗಳ (ಇಪ್ಪತ್ತೊಂದು) ಯೂಪಗಳನ್ನು ಸ್ಥಾಪಿಸಿದರು.
14090028a ಶೋಭಾರ್ಥಂ ಚಾಪರಾನ್ಯೂಪಾನ್ಕಾಂಚನಾನ್ಪುರುಷರ್ಷಭ।
14090028c ಸ ಭೀಮಃ ಕಾರಯಾಮಾಸ ಧರ್ಮರಾಜಸ್ಯ ಶಾಸನಾತ್।।
ಪುರುಷರ್ಷಭ! ಧರ್ಮರಾಜನ ಶಾಸನದಂತೆ ಆ ಯೂಪಗಳ ಶೋಭೆಗಾಗಿ ಭೀಮನು ಅವುಗಳನ್ನು ಕಾಂಚನದಿಂದಲೇ ಮಾಡಿಸಿದ್ದನು.
14090029a ತೇ ವ್ಯರಾಜಂತ ರಾಜರ್ಷೇ ವಾಸೋಭಿರುಪಶೋಭಿತಾಃ।
14090029c ನರೇಂದ್ರಾಭಿಗತಾ ದೇವಾನ್ಯಥಾ ಸಪ್ತರ್ಷಯೋ ದಿವಿ।।
ರಾಜರ್ಷೇ! ನರೇಂದ್ರ! ಬಣ್ಣದ ವಸ್ತ್ರಗಳಿಂದ ಶೋಭಿತವಾಗಿದ್ದ ಆ ಯೂಪಸ್ಥಂಭಗಳು ನಭದಲ್ಲಿ ಸಪ್ತರ್ಷಿ ಸಹಿತರಾದ ದೇವತೆಗಳಂತೆಯೇ ವಿರಾಜಿಸುತ್ತಿದ್ದವು.
14090030a ಇಷ್ಟಕಾಃ ಕಾಂಚನೀಶ್ಚಾತ್ರ ಚಯನಾರ್ಥಂ ಕೃತಾಭವನ್।
14090030c ಶುಶುಭೇ ಚಯನಂ ತತ್ರ ದಕ್ಷಸ್ಯೇವ ಪ್ರಜಾಪತೇಃ।।
ಚಯನಕ್ಕೆ ಚಿನ್ನದ ಇಟ್ಟಿಗೆಗಳನ್ನೇ ಮಾಡಿಸಲಾಗಿತ್ತು. ಅಲ್ಲಿಯ ಚಯನವು ಪ್ರಜಾಪತಿ ದಕ್ಷನ ಚಯನದಂತೆಯೇ ಶೋಭಿಸಿತು.
14090031a ಚತುಶ್ಚಿತ್ಯಃ ಸ ತಸ್ಯಾಸೀದಷ್ಟಾದಶಕರಾತ್ಮಕಃ।
14090031c ಸ ರುಕ್ಮಪಕ್ಷೋ ನಿಚಿತಸ್ತ್ರಿಗುಣೋ ಗರುಡಾಕೃತಿಃ।।
ಅಲ್ಲಿದ್ದ ನಾಲ್ಕು ಚಿತಿಗಳಲ್ಲಿ ಪ್ರತಿಯೊಂದರ ಉದ್ದಗಲಗಳು ಹದಿನೆಂಟು ಗೇಣುಗಳಾಗಿದ್ದು, ಸುವರ್ಣಮಯ ರೆಕ್ಕೆಗಳುಳ್ಳ ಗರುಡನ ಆಕಾರದಲ್ಲಿ ತ್ರಿಕೋಣಗಳಾಗಿದ್ದವು.
14090032a ತತೋ ನಿಯುಕ್ತಾಃ ಪಶವೋ ಯಥಾಶಾಸ್ತ್ರಂ ಮನೀಷಿಭಿಃ।
14090032c ತಂ ತಂ ದೇವಂ ಸಮುದ್ದಿಶ್ಯ ಪಕ್ಷಿಣಃ ಪಶವಶ್ಚ ಯೇ।।
ಮನೀಷಿಗಳು ಶಾಸ್ತ್ರಪ್ರಕಾರವಾಗಿ ಆಯಾ ದೇವತೆಗಳನ್ನು ಉದ್ದೇಶಿಸಿ ಪಕ್ಷಿ-ಪಶುಗಳನ್ನು ನಿಯೋಜಿಸಿದ್ದರು.
14090033a ಋಷಭಾಃ ಶಾಸ್ತ್ರಪಠಿತಾಸ್ತಥಾ ಜಲಚರಾಶ್ಚ ಯೇ।
14090033c ಸರ್ವಾಂಸ್ತಾನಭ್ಯಯುಂಜಂಸ್ತೇ ತತ್ರಾಗ್ನಿಚಯಕರ್ಮಣಿ।।
ಆ ಅಗ್ನಿಚಯ ಕರ್ಮದಲ್ಲಿ ಶಾಸ್ತ್ರದಲ್ಲಿ ಹೇಳಿರುವಂತೆ ಋಷಭಗಳನ್ನೂ, ಜಲಚರ ಪ್ರಾಣಿಗಳನ್ನು ಎಲ್ಲವನ್ನೂ ಒಟ್ಟಾಗಿ ಸೇರಿಸಿದ್ದರು.
14090034a ಯೂಪೇಷು ನಿಯತಂ ಚಾಸೀತ್ಪಶೂನಾಂ ತ್ರಿಶತಂ ತಥಾ।
14090034c ಅಶ್ವರತ್ನೋತ್ತರಂ ರಾಜ್ಞಃ ಕೌಂತೇಯಸ್ಯ ಮಹಾತ್ಮನಃ।।
ರಾಜ ಮಾಹಾತ್ಮ ಕೌಂತೇಯನ ಯೂಪಗಳಲ್ಲಿ ಮೂರುನೂರು ಪಶುಗಳನ್ನು ಬಂಧಿಸಿದ್ದರು. ಅವುಗಳಲ್ಲಿ ಕುದುರೆಯು ಪ್ರಧಾನವಾಗಿದ್ದಿತು.
14090035a ಸ ಯಜ್ಞಃ ಶುಶುಭೇ ತಸ್ಯ ಸಾಕ್ಷಾದ್ದೇವರ್ಷಿಸಂಕುಲಃ।
14090035c ಗಂಧರ್ವಗಣಸಂಕೀರ್ಣಃ ಶೋಭಿತೋಽಪ್ಸರಸಾಂ ಗಣೈಃ।।
ಸಾಕ್ಷಾತ್ ದೇವರ್ಷಿಗಳಿಂದ ಕೂಡಿದ್ದ ಆ ಯಜ್ಞವು ಶೋಭಿಸುತ್ತಿತ್ತು. ಗಂಧರ್ವಗಣಸಂಕೀರ್ಣಗಳಿಂದ ಮತ್ತು ಅಪ್ಸರೆಯರ ಗಣಗಳಿಂದ ಕೂಡಿ ಶೋಭಿಸುತ್ತಿತ್ತು.
14090036a ಸ ಕಿಂಪುರುಷಗೀತೈಶ್ಚ ಕಿಂನರೈರುಪಶೋಭಿತಃ।
14090036c ಸಿದ್ಧವಿಪ್ರನಿವಾಸೈಶ್ಚ ಸಮಂತಾದಭಿಸಂವೃತಃ।।
ಕಿಂಪುರುಷರ ಗೀತೆಗಳಿಂದಲೂ ಕಿನ್ನರರಿಂದಲೂ ಶೋಭಿತವಾಗಿತ್ತು. ಸಿದ್ಧರ ಮತ್ತು ವಿಪ್ರರ ನಿವಾಸಗಳು ಎಲ್ಲೆಡೆಯಲ್ಲಿಯೂ ಸಮಾವೃತವಾಗಿದ್ದವು.
14090037a ತಸ್ಮಿನ್ಸದಸಿ ನಿತ್ಯಾಸ್ತು ವ್ಯಾಸಶಿಷ್ಯಾ ದ್ವಿಜೋತ್ತಮಾಃ।
14090037c ಸರ್ವಶಾಸ್ತ್ರಪ್ರಣೇತಾರಃ ಕುಶಲಾ ಯಜ್ಞಕರ್ಮಸು।।
ಆ ಯಾಗಸಭೆಯಲ್ಲಿ ಸರ್ವಶಾಸ್ತ್ರಪ್ರಣೇತಾರರಾದ ಯಜ್ಞಕರ್ಮಗಳಲ್ಲಿ ಕುಶಲರಾದ ವ್ಯಾಸಶಿಷ್ಯ ದ್ವಿಜೋತ್ತಮರು ನಿತ್ಯವೂ ಸದಸ್ಯರಾಗಿದ್ದರು.
14090038a ನಾರದಶ್ಚ ಬಭೂವಾತ್ರ ತುಂಬುರುಶ್ಚ ಮಹಾದ್ಯುತಿಃ।
14090038c ವಿಶ್ವಾವಸುಶ್ಚಿತ್ರಸೇನಸ್ತಥಾನ್ಯೇ ಗೀತಕೋವಿದಾಃ।।
ಅಲ್ಲಿ ನಾರದ, ಮಹಾದ್ಯುತಿ ತುಂಬುರು, ವಿಶ್ವಾವಸು ಮತ್ತು ಚಿತ್ರಸೇನರು ಹಾಗೂ ಅನ್ಯ ಗೀತಕೋವಿದರು ಇದ್ದರು.
14090039a ಗಂಧರ್ವಾ ಗೀತಕುಶಲಾ ನೃತ್ತೇಷು ಚ ವಿಶಾರದಾಃ।
14090039c ರಮಯಂತಿ ಸ್ಮ ತಾನ್ವಿಪ್ರಾನ್ಯಜ್ಞಕರ್ಮಾಂತರೇಷ್ವಥ।।
ಯಜ್ಞಕರ್ಮಗಳ ಮಧ್ಯೆ ಬಿಡುವಿನಲ್ಲಿ ಗೀತಕುಶಲರಾದ ಮತ್ತು ನೃತ್ಯವಿಶಾರದರಾದ ಗಂಧರ್ವರು ಆ ವಿಪ್ರರನ್ನು ರಮಿಸುತ್ತಿದ್ದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಮೇಧಾರಂಭೇ ನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಮೇಧಾರಂಭ ಎನ್ನುವ ತೊಂಭತ್ತನೇ ಅಧ್ಯಾಯವು.
-
ಸೋಮಲತೆಯನ್ನು ಕುಟ್ಟಿ ಸೋಮರಸವನ್ನು ಹಿಂಡುವ ಕಾರ್ಯ. ↩︎