ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 89
ಸಾರ
ಅರ್ಜುನನು ಸದಾ ಪ್ರಯಾಣಮಾಡುತ್ತಿರಬೇಕಾದುದರ ಕಾರಣವನ್ನು ಕೃಷ್ಣನು ಯುಧಿಷ್ಠಿರನಿಗೆ ತಿಳಿಸಿದುದು (1-11). ಅರ್ಜುನನು ಯಜ್ಞಶಾಲೆಗೆ ಆಗಮಿಸಿದುದು (12-24). ಬಭ್ರುವಾಹನನ ಆಗಮನ (25-26).
14089001 ಯುಧಿಷ್ಠಿರ ಉವಾಚ
14089001a ಶ್ರುತಂ ಪ್ರಿಯಮಿದಂ ಕೃಷ್ಣ ಯತ್ತ್ವಮರ್ಹಸಿ ಭಾಷಿತುಮ್।
14089001c ತನ್ಮೇಽಮೃತರಸಪ್ರಖ್ಯಂ ಮನೋ ಹ್ಲಾದಯತೇ ವಿಭೋ।।
ಯುಧಿಷ್ಠಿರನು ಹೇಳಿದನು: “ಕೃಷ್ಣ! ವಿಭೋ! ನೀನು ಹೇಳಿದ ಅಮೃತರಸದಂತಿರುವ ಅರ್ಜುನನ ಸಂದೇಶವನ್ನು ಕೇಳಿ ನನ್ನ ಮನಸ್ಸು ಆಹ್ಲಾದಗೊಂಡಿದೆ.
14089002a ಬಹೂನಿ ಕಿಲ ಯುದ್ಧಾನಿ ವಿಜಯಸ್ಯ ನರಾಧಿಪೈಃ।
14089002c ಪುನರಾಸನ್ ಹೃಷೀಕೇಶ ತತ್ರ ತತ್ರೇತಿ ಮೇ ಶ್ರುತಮ್।।
ಹೃಷೀಕೇಶ! ಅಲ್ಲಲ್ಲಿ ವಿಜಯ ಮತ್ತು ನರಾಧಿಪರೊಡನೆ ಅನೇಕ ಯುದ್ಧಗಳಾದವೆಂದು ಕೇಳಿದ್ದೇನೆ.
14089003a ಮನ್ನಿಮಿತ್ತಂ ಹಿ ಸ ಸದಾ ಪಾರ್ಥಃ ಸುಖವಿವರ್ಜಿತಃ।
14089003c ಅತೀವ ವಿಜಯೋ ಧೀಮಾನಿತಿ ಮೇ ದೂಯತೇ ಮನಃ।।
ನನ್ನ ಕಾರಣದಿಂದಾಗಿ ಆ ಧೀಮಾನ್ ವಿಜಯ ಪಾರ್ಥನು ಸದಾ ಸುಖದಿಂದ ವಂಚಿತನಾಗಿದ್ದಾನೆ ಎಂದು ನನ್ನ ಮನಸ್ಸು ಅತೀವವಾಗಿ ನೋಯುತ್ತಿದೆ.
14089004a ಸಂಚಿಂತಯಾಮಿ ವಾರ್ಷ್ಣೇಯ ಸದಾ ಕುಂತೀಸುತಂ ರಹಃ।
14089004c ಕಿಂ ನು ತಸ್ಯ ಶರೀರೇಽಸ್ತಿ ಸರ್ವಲಕ್ಷಣಪೂಜಿತೇ।
14089004e ಅನಿಷ್ಟಂ ಲಕ್ಷಣಂ ಕೃಷ್ಣ ಯೇನ ದುಃಖಾನ್ಯುಪಾಶ್ನುತೇ।।
ವಾರ್ಷ್ಣೇಯ! ಏಕಾಂತದಲ್ಲಿ ಸದಾ ನಾನು ಕುಂತೀಸುತ ಅರ್ಜುನನ ಕುರಿತೇ ಚಿಂತಿಸುತ್ತಿರುತ್ತೇನೆ. ಕೃಷ್ಣ! ಸರ್ವಲಕ್ಷಣ ಸಂಪನ್ನನಾಗಿರುವ ಅವನ ಶರೀರದಲ್ಲಿ ಯಾವ ಅನಿಷ್ಟ ಲಕ್ಷಣವಿದೆಯೆಂದು ಅವನು ಈ ರೀತಿಯ ದುಃಖವನ್ನು ಅನುಭವಿಸುತ್ತಿದ್ದಾನೆ?
14089005a ಅತೀವ ದುಃಖಭಾಗೀ ಸ ಸತತಂ ಕುಂತಿನಂದನಃ।
14089005c ನ ಚ ಪಶ್ಯಾಮಿ ಬೀಭತ್ಸೋರ್ನಿಂದ್ಯಂ ಗಾತ್ರೇಷು ಕಿಂ ಚನ।
14089005e ಶ್ರೋತವ್ಯಂ ಚೇನ್ಮಯೈತದ್ವೈ ತನ್ಮೇ ವ್ಯಾಖ್ಯಾತುಮರ್ಹಸಿ।।
ಆ ಕುಂತೀನಂದನನು ಸತತವೂ ದುಃಖಭಾಗಿಯಾಗಿದ್ದಾನೆ. ಅವನ ಶರೀರದಲ್ಲಿ ನಿಂದ್ಯಲಕ್ಷಣಗಳನ್ನೇನೂ ನಾನು ಕಂಡಿಲ್ಲ. ಇದರ ಕುರಿತು ನಾನು ಕೇಳಬಹುದಾಗಿದ್ದರೆ ಅದನ್ನು ನೀನು ಹೇಳಬೇಕು!”
14089006a ಇತ್ಯುಕ್ತಃ ಸ ಹೃಷೀಕೇಶೋ ಧ್ಯಾತ್ವಾ ಸುಮಹದಂತರಮ್।
14089006c ರಾಜಾನಂ ಭೋಜರಾಜನ್ಯವರ್ಧನೋ ವಿಷ್ಣುರಬ್ರವೀತ್।।
ಇದನ್ನು ಕೇಳಿ ಬಹಳ ಹೊತ್ತು ಧ್ಯಾನಮಗ್ನನಾಗಿ ಭೋಜರಾಜರ ವರ್ಧಕ ಹೃಷೀಕೇಶ ವಿಷ್ಣುವು ರಾಜನಿಗೆ ಇಂತೆಂದನು:
14089007a ನ ಹ್ಯಸ್ಯ ನೃಪತೇ ಕಿಂ ಚಿದನಿಷ್ಟಮುಪಲಕ್ಷಯೇ।
14089007c ಋತೇ ಪುರುಷಸಿಂಹಸ್ಯ ಪಿಂಡಿಕೇಽಸ್ಯಾತಿಕಾಯತಃ।।
“ನೃಪತೇ! ಆ ಪುರುಷಸಿಂಹನ ಮೊಳಕಾಲುಗಳ ಹಿಂಭಾಗಗಳು ಇರಬೇಕಾದುದಕ್ಕಿಂತಲೂ ಸ್ವಲ್ಪ ದಪ್ಪನಾಗಿರುವುದರ ಹೊರತು ಅವನಲ್ಲಿ ಬೇರೆ ಯಾವ ಅನಿಷ್ಟಗಳೂ ಕಾಣಿಸುವುದಿಲ್ಲ.
14089008a ತಾಭ್ಯಾಂ ಸ ಪುರುಷವ್ಯಾಘ್ರೋ ನಿತ್ಯಮಧ್ವಸು ಯುಜ್ಯತೇ।
14089008c ನ ಹ್ಯನ್ಯದನುಪಶ್ಯಾಮಿ ಯೇನಾಸೌ ದುಃಖಭಾಗ್ಜಯಃ।।
ಅದರಿಂದಾಗಿ ಆ ಪುರುಷವ್ಯಾಘ್ರನು ಸದಾ ಪ್ರಯಾಣಮಾಡುತ್ತಲೇ ಇರಬೇಕಾಗುತ್ತದೆ. ಜಯನ ದುಃಖಕ್ಕೆ ಬೇರೆ ಯಾವ ಕಾರಣವನ್ನೂ ನಾನು ಕಾಣುತ್ತಿಲ್ಲ.”
14089009a ಇತ್ಯುಕ್ತಃ ಸ ಕುರುಶ್ರೇಷ್ಠಸ್ತಥ್ಯಂ ಕೃಷ್ಣೇನ ಧೀಮತಾ।
14089009c ಪ್ರೋವಾಚ ವೃಷ್ಣಿಶಾರ್ದೂಲಮೇವಮೇತದಿತಿ ಪ್ರಭೋ।।
ಧೀಮತ ಕೃಷ್ಣನ ಈ ಸತ್ಯದ ಮಾತನ್ನು ಕೇಳಿ ಕುರುಶ್ರೇಷ್ಠ ಯುಧಿಷ್ಠಿರನು “ಪ್ರಭೋ! ನೀನು ಹೇಳಿದುದೇ ಸರಿ!” ಎಂದು ವೃಷ್ಣಿಶಾರ್ದೂಲನಿಗೆ ಹೇಳಿದನು.
14089010a ಕೃಷ್ಣಾ ತು ದ್ರೌಪದೀ ಕೃಷ್ಣಂ ತಿರ್ಯಕ್ಸಾಸೂಯಮೈಕ್ಷತ।
14089010c ಪ್ರತಿಜಗ್ರಾಹ ತಸ್ಯಾಸ್ತಂ ಪ್ರಣಯಂ ಚಾಪಿ ಕೇಶಿಹಾ।
14089010e ಸಖ್ಯುಃ ಸಖಾ ಹೃಷೀಕೇಶಃ ಸಾಕ್ಷಾದಿವ ಧನಂಜಯಃ।।
ಆಗ ದ್ರೌಪದೀ ಕೃಷ್ಣೆಯು ಅಸೂಯೆಯಿಂದ ಕೃಷ್ಣನನ್ನು ಕಡೆಗಣ್ಣುಗಳಿಂದ ನೋಡಿದಳು. ಕೇಶಿಹಂತಕ ಕೃಷ್ಣನು ಅವಳ ಆ ವರ್ತನೆಯನ್ನು ಪ್ರಣಯಪೂರ್ವಕವಾಗಿಯೇ ಸ್ವೀಕರಿಸಿದನು. ಸಖ ಹೃಷೀಕೇಶನು ಸಾಕ್ಷಾತ್ ತನ್ನ ಸಖ ಧನಂಜಯನಂತೆಯೇ ತೋರುತ್ತಿದ್ದನು.
14089011a ತತ್ರ ಭೀಮಾದಯಸ್ತೇ ತು ಕುರವೋ ಯಾದವಾಸ್ತಥಾ।
14089011c ರೇಮುಃ ಶ್ರುತ್ವಾ ವಿಚಿತ್ರಾರ್ಥಾ ಧನಂಜಯಕಥಾ ವಿಭೋ।।
ವಿಭೋ! ಅಲ್ಲಿದ್ದ ಭೀಮಾದಿ ಕುರುಗಳೂ ಮತ್ತು ಯಾದವರೂ ವಿಚಿತ್ರಾರ್ಥವುಳ್ಳ ಧನಂಜಯನ ಕುರಿತಾದ ಮಾತುಗಳನ್ನು ಕೇಳಿ ಆನಂದಿಸಿದರು.
14089012a ತಥಾ ಕಥಯತಾಮೇವ ತೇಷಾಮರ್ಜುನಸಂಕಥಾಃ।
14089012c ಉಪಾಯಾದ್ವಚನಾನ್ಮರ್ತ್ಯೋ ವಿಜಯಸ್ಯ ಮಹಾತ್ಮನಃ।।
ಅರ್ಜುನನ ಕುರಿತಾಗಿ ಅವರು ಹೀಗೆ ಮಾತನಾಡಿಕೊಳ್ಳುತ್ತಿರುವಾಗಲೇ ಮಹಾತ್ಮ ವಿಜಯನ ಸಂದೇಶವನ್ನು ತೆಗೆದುಕೊಂಡು ಪುರುಷನೋರ್ವನು ಅಲ್ಲಿಗೆ ಆಗಮಿಸಿದನು.
14089013a ಸೋಽಭಿಗಮ್ಯ ಕುರುಶ್ರೇಷ್ಠಂ ನಮಸ್ಕೃತ್ಯ ಚ ಬುದ್ಧಿಮಾನ್।
14089013c ಉಪಾಯಾತಂ ನರವ್ಯಾಘ್ರಮರ್ಜುನಂ ಪ್ರತ್ಯವೇದಯತ್।।
ಆ ಬುದ್ಧಿವಂತನು ಆಗಮಿಸಿ, ಕುರುಶ್ರೇಷ್ಠನನ್ನು ನಮಸ್ಕರಿಸಿ, ನರವ್ಯಾಘ್ರ ಅರ್ಜುನನು ಬರುತ್ತಿರುವುದನ್ನು ತಿಳಿಸಿದನು.
14089014a ತಚ್ಚ್ರುತ್ವಾ ನೃಪತಿಸ್ತಸ್ಯ ಹರ್ಷಬಾಷ್ಪಾಕುಲೇಕ್ಷಣಃ।
14089014c ಪ್ರಿಯಾಖ್ಯಾನನಿಮಿತ್ತಂ ವೈ ದದೌ ಬಹು ಧನಂ ತದಾ।।
ಅದನ್ನು ಕೇಳಿದ ನೃಪತಿಯು ಹರ್ಷದ ಕಣ್ಣೀರಿನಿಂದ ಕಣ್ಣುಗಳು ತುಂಬಿರಲು, ಪ್ರಿಯವಿಷಯವನ್ನು ತಂದಿರುವುದಕ್ಕಾಗಿ ಅವನಿಗೆ ಬಹಳ ಧನವನ್ನಿತ್ತನು.
14089015a ತತೋ ದ್ವಿತೀಯೇ ದಿವಸೇ ಮಹಾನ್ಶಬ್ದೋ ವ್ಯವರ್ಧತ।
14089015c ಆಯಾತಿ ಪುರುಷವ್ಯಾಘ್ರೇ ಪಾಂಡವಾನಾಂ ಧುರಂಧರೇ।।
ಅನಂತರ ಎರಡನೆಯ ದಿವಸ ಪಾಂಡವರ ಧುರಂಧರ ಪುರುಷವ್ಯಾಘ್ರ ಅರ್ಜುನನು ಬರುವ ಮಹಾ ಶಬ್ಧವುಂಟಾಯಿತು.
14089016a ತತೋ ರೇಣುಃ ಸಮುದ್ಭೂತೋ ವಿಬಭೌ ತಸ್ಯ ವಾಜಿನಃ।
14089016c ಅಭಿತೋ ವರ್ತಮಾನಸ್ಯ ಯಥೋಚ್ಚೈಃಶ್ರವಸಸ್ತಥಾ।।
ಉಚ್ಛೈಶ್ರವದಂತಿದ್ದ ಆ ಕುದುರೆಯು ಹತ್ತಿರಕ್ಕೆ ಬರುತ್ತಿರುವಾಗ ಮೇಲೆದ್ದ ಧೂಳು ಆಕಾಶದಲ್ಲಿ ಅದ್ಭುತವಾಗಿ ಕಾಣುತ್ತಿತ್ತು.
14089017a ತತ್ರ ಹರ್ಷಕಲಾ ವಾಚೋ ನರಾಣಾಂ ಶುಶ್ರುವೇಽರ್ಜುನಃ।
14089017c ದಿಷ್ಟ್ಯಾಸಿ ಪಾರ್ಥ ಕುಶಲೀ ಧನ್ಯೋ ರಾಜಾ ಯುಧಿಷ್ಠಿರಃ।।
ಅಲ್ಲಿ “ಅದೃಷ್ಟವಶಾತ್ ಅರ್ಜುನ ಪಾರ್ಥನು ಕುಶಲಿಯಾಗಿದ್ದಾನೆ! ರಾಜಾ ಯುಧಿಷ್ಠಿರನು ಧನ್ಯ!” ಎಂಬ ಜನರ ಹರ್ಷಯುಕ್ತ ಮಾತುಗಳು ಕೇಳಿಬರುತ್ತಿದ್ದವು.
14089018a ಕೋಽನ್ಯೋ ಹಿ ಪೃಥಿವೀಂ ಕೃತ್ಸ್ನಾಮವಜಿತ್ಯ ಸಪಾರ್ಥಿವಾಮ್।
14089018c ಚಾರಯಿತ್ವಾ ಹಯಶ್ರೇಷ್ಠಮುಪಾಯಾಯಾದೃತೇಽರ್ಜುನಮ್।।
“ಅರ್ಜುನನಲ್ಲದೇ ಬೇರೆ ಯಾರುತಾನೇ ಪಾರ್ಥಿವರನ್ನು ಸೋಲಿಸಿ ಈ ಶ್ರೇಷ್ಠ ಕುದುರೆಯನ್ನು ಇಡೀ ಭೂಮಿಯಲ್ಲಿ ಸುತ್ತಾಡಿಸಿಕೊಂಡು ಬರುತ್ತಾರೆ?
14089019a ಯೇ ವ್ಯತೀತಾ ಮಹಾತ್ಮಾನೋ ರಾಜಾನಃ ಸಗರಾದಯಃ।
14089019c ತೇಷಾಮಪೀದೃಶಂ ಕರ್ಮ ನ ಕಿಂ ಚಿದನುಶುಶ್ರುಮ।।
ಆಗಿ ಹೋಗಿದ್ದ ಸಗರಾದಿ ಮಹಾತ್ಮ ರಾಜರೂ ಇಂತಹ ಕರ್ಮಗಳನ್ನು ಮಾಡಿದ್ದರೆಂದು ನಾವು ಕೇಳಿರಲಿಲ್ಲ!
14089020a ನೈತದನ್ಯೇ ಕರಿಷ್ಯಂತಿ ಭವಿಷ್ಯಾಃ ಪೃಥಿವೀಕ್ಷಿತಃ।
14089020c ಯತ್ತ್ವಂ ಕುರುಕುಲಶ್ರೇಷ್ಠ ದುಷ್ಕರಂ ಕೃತವಾನಿಹ।।
ಈ ಕುರುಕುಲಶ್ರೇಷ್ಠನು ಮಾಡಿದ ದುಷ್ಕರ ಕರ್ಮಗಳನ್ನು ಭವಿಷ್ಯದಲ್ಲಿಯೂ ಬೇರೆ ಯಾವ ಪೃಥಿವೀಪತಿಯೂ ಮಾಡುವುದಿಲ್ಲ!”
14089021a ಇತ್ಯೇವಂ ವದತಾಂ ತೇಷಾಂ ನೄಣಾಂ ಶ್ರುತಿಸುಖಾ ಗಿರಃ।
14089021c ಶೃಣ್ವನ್ವಿವೇಶ ಧರ್ಮಾತ್ಮಾ ಫಲ್ಗುನೋ ಯಜ್ಞಸಂಸ್ತರಮ್।।
ಹೀಗೆ ಮಾತನಾಡಿಕೊಳ್ಳುತ್ತಿದ್ದ ಆ ಜನರ ಕೇಳಲು ಸುಖಕರವಾದ ಮಾತುಗಳನ್ನು ಕೇಳುತ್ತಾ ಧರ್ಮಾತ್ಮ ಫಲ್ಗುನನು ಯಜ್ಞವಾಟಿಕೆಯನ್ನು ಪ್ರವೇಶಿಸಿದನು.
14089022a ತತೋ ರಾಜಾ ಸಹಾಮಾತ್ಯಃ ಕೃಷ್ಣಶ್ಚ ಯದುನಂದನಃ।
14089022c ಧೃತರಾಷ್ಟ್ರಂ ಪುರಸ್ಕೃತ್ಯ ತೇ ತಂ ಪ್ರತ್ಯುದ್ಯಯುಸ್ತದಾ।।
ಆಗ ಅಮಾತ್ಯರು ಮತ್ತು ಯದುನಂದನ ಕೃಷ್ಣನೊಡನೆ ರಾಜಾ ಯುಧಿಷ್ಠಿರನು ಧೃತರಾಷ್ಟ್ರನನ್ನು ಮುಂದಿರಿಸಿಕೊಂಡು ಅರ್ಜುನನನ್ನು ಎದಿರುಗೊಂಡನು.
14089023a ಸೋಽಭಿವಾದ್ಯ ಪಿತುಃ ಪಾದೌ ಧರ್ಮರಾಜಸ್ಯ ಧೀಮತಃ।
14089023c ಭೀಮಾದೀಂಶ್ಚಾಪಿ ಸಂಪೂಜ್ಯ ಪರ್ಯಷ್ವಜತ ಕೇಶವಮ್।।
ಅರ್ಜುನನು ತಂದೆಯ ಮತ್ತು ಧೀಮತ ಧರ್ಮರಾಜನ ಪಾದಗಳಿಗೆರಗಿ, ಭೀಮಾದಿಗಳನ್ನು ಪೂಜಿಸಿ ಕೇಶವನನ್ನು ಬಿಗಿದಪ್ಪಿಕೊಂಡನು.
14089024a ತೈಃ ಸಮೇತ್ಯಾರ್ಚಿತಸ್ತಾನ್ಸ ಪ್ರತ್ಯರ್ಚ್ಯ ಚ ಯಥಾವಿಧಿ।
14089024c ವಿಶಶ್ರಾಮಾಥ ಧರ್ಮಾತ್ಮಾ ತೀರಂ ಲಬ್ಧ್ವೇವ ಪಾರಗಃ।।
ಅವರಿಂದ ಸತ್ಕರಿಸಲ್ಪಟ್ಟು ಮತ್ತು ಅವರನ್ನೂ ಯಥಾವಿಧಿಯಾಗಿ ಅರ್ಚಿಸಿ, ಧರ್ಮಾತ್ಮ ಅರ್ಜುನನು ತೀರವನ್ನು ತಲುಪಿದ ಈಸುಗಾರನಂತೆ ವಿಶ್ರಮಿಸಿದನು.
14089025a ಏತಸ್ಮಿನ್ನೇವ ಕಾಲೇ ತು ಸ ರಾಜಾ ಬಭ್ರುವಾಹನಃ।
14089025c ಮಾತೃಭ್ಯಾಂ ಸಹಿತೋ ಧೀಮಾನ್ಕುರೂನಭ್ಯಾಜಗಾಮ ಹ।।
ಇದೇ ಸಮಯದಲ್ಲಿ ಧೀಮಂತ ರಾಜಾ ಬಭ್ರುವಾಹನನು ಮಾತೆಯರಿಬ್ಬರೊಡನೆ ಕುರುಗಳಲ್ಲಿಗೆ ಆಗಮಿಸಿದನು.
14089026a ಸ ಸಮೇತ್ಯ ಕುರೂನ್ ಸರ್ವಾನ್ ಸರ್ವೈಸ್ತೈರಭಿನಂದಿತಃ।
14089026c ಪ್ರವಿವೇಶ ಪಿತಾಮಹ್ಯಾಃ ಕುಂತ್ಯಾ ಭವನಮುತ್ತಮಮ್।।
ಅವನು ಕುರುಗಳೆಲ್ಲರನ್ನೂ ಭೇಟಿಮಾಡಿ, ಸರ್ವರಿಂದ ಅಭಿನಂದಿಸಲ್ಪಟ್ಟು, ಅಜ್ಜಿ ಕುಂತಿಯ ಉತ್ತಮ ಭವನವನ್ನು ಪ್ರವೇಶಿಸಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅರ್ಜುನಪ್ರತ್ಯಾಗಮನೇ ಏಕೋನನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅರ್ಜುನಪ್ರತ್ಯಾಗಮನ ಎನ್ನುವ ಎಂಭತ್ತೊಂಭತ್ತನೇ ಅಧ್ಯಾಯವು.