ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 88
ಸಾರ
ಕೃಷ್ಣನು ಯುಧಿಷ್ಠಿರನಿಗೆ ಅರ್ಜುನನಿತ್ತ ಸಂದೇಶವನ್ನು ತಿಳಿಸಿದುದು (1-21).
14088001 ವೈಶಂಪಾಯನ ಉವಾಚ
14088001a ಸಮಾಗತಾನ್ವೇದವಿದೋ ರಾಜ್ಞಶ್ಚ ಪೃಥಿವೀಶ್ವರಾನ್।
14088001c ದೃಷ್ಟ್ವಾ ಯುಧಿಷ್ಠಿರೋ ರಾಜಾ ಭೀಮಸೇನಮಥಾಬ್ರವೀತ್।।
ವೈಶಂಪಾಯನನು ಹೇಳಿದನು: “ವೇದವಿದ ರಾಜರೂ ಪೃಥ್ವೀಶ್ವರರೂ ಆಗಮಿಸಿರುವುದನ್ನು ನೋಡಿ ರಾಜಾ ಯುಧಿಷ್ಠಿರನು ಭೀಮಸೇನನಿಗೆ ಹೇಳಿದನು:
14088002a ಉಪಯಾತಾ ನರವ್ಯಾಘ್ರಾ ಯ ಇಮೇ ಜಗದೀಶ್ವರಾಃ।
14088002c ಏತೇಷಾಂ ಕ್ರಿಯತಾಂ ಪೂಜಾ ಪೂಜಾರ್ಹಾ ಹಿ ನರೇಶ್ವರಾಃ।।
“ಇಲ್ಲಿಗೆ ಆಗಮಿಸಿರುವ ನರವ್ಯಾಘ್ರ ಜಗದೀಶ್ವರರೆಲ್ಲರೂ ಪೂಜಿಸಲ್ಪಡಲಿ! ಈ ನರೇಶ್ವರರು ಪೂಜಾರ್ಹರು.”
14088003a ಇತ್ಯುಕ್ತಃ ಸ ತಥಾ ಚಕ್ರೇ ನರೇಂದ್ರೇಣ ಯಶಸ್ವಿನಾ।
14088003c ಭೀಮಸೇನೋ ಮಹಾತೇಜಾ ಯಮಾಭ್ಯಾಂ ಸಹ ಭಾರತ।।
ಭಾರತ! ಮಹಾತೇಜಸ್ವಿ ಭೀಮಸೇನನು ನಕುಲ-ಸಹದೇವರೊಂದಿಗೆ ಯಶಸ್ವಿ ನರೇಂದ್ರನು ಹೇಳಿದಂತೆಯೇ ಮಾಡಿದನು.
14088004a ಅಥಾಭ್ಯಗಚ್ಚದ್ಗೋವಿಂದೋ ವೃಷ್ಣಿಭಿಃ ಸಹ ಧರ್ಮಜಮ್।
14088004c ಬಲದೇವಂ ಪುರಸ್ಕೃತ್ಯ ಸರ್ವಪ್ರಾಣಭೃತಾಂ ವರಃ।।
14088005a ಯುಯುಧಾನೇನ ಸಹಿತಃ ಪ್ರದ್ಯುಮ್ನೇನ ಗದೇನ ಚ।
14088005c ನಿಶಠೇನಾಥ ಸಾಂಬೇನ ತಥೈವ ಕೃತವರ್ಮಣಾ।।
ಆಗ ಸರ್ವಪ್ರಾಣಧಾರಿಗಳಲ್ಲಿ ಶ್ರೇಷ್ಠನಾದ ಗೋವಿಂದನು ಧರ್ಮಜ ಬಲದೇವನನ್ನು ಮುಂದೆಮಾಡಿಕೊಂಡು ಯುಯುಧಾನ ಸಾತ್ಯಕಿ, ಪ್ರದ್ಯುಮ್ನ, ಗದ, ನಿಶಠ, ಸಾಂಬ ಮತ್ತು ಕೃತವರ್ಮರೊಂದಿಗೆ ಅಲ್ಲಿಗೆ ಆಗಮಿಸಿದನು.
14088006a ತೇಷಾಮಪಿ ಪರಾಂ ಪೂಜಾಂ ಚಕ್ರೇ ಭೀಮೋ ಮಹಾಭುಜಃ।
14088006c ವಿವಿಶುಸ್ತೇ ಚ ವೇಶ್ಮಾನಿ ರತ್ನವಂತಿ ನರರ್ಷಭಾಃ।।
ಮಹಾಭುಜ ಭೀಮನು ಅವರಿಗೆ ಕೂಡ ಪರಮ ಪೂಜೆಯನ್ನು ಮಾಡಿದನು. ಆ ನರರ್ಷಭರು ರತ್ನಖಚಿತ ಅರಮನೆಗಳನ್ನು ಪ್ರವೇಶಿಸಿದರು.
14088007a ಯುಧಿಷ್ಠಿರಸಮೀಪೇ ತು ಕಥಾಂತೇ ಮಧುಸೂದನಃ।
14088007c ಅರ್ಜುನಂ ಕಥಯಾಮಾಸ ಬಹುಸಂಗ್ರಾಮಕರ್ಶಿತಮ್।।
ಯುಧಿಷ್ಠಿರನ ಸಮೀಪದಲ್ಲಿ ಮಾತನಾಡುತ್ತಿದ್ದ ಮಧುಸೂದನನು ಕೊನೆಯಲ್ಲಿ ಬಹುಸಂಗ್ರಾಮಗಳಿಂದ ಕೃಶನಾಗಿರುವ ಅರ್ಜುನನ ಕುರಿತು ಮಾತನಾಡಿದನು.
14088008a ಸ ತಂ ಪಪ್ರಚ್ಚ ಕೌಂತೇಯಃ ಪುನಃ ಪುನರರಿಂದಮಮ್।
14088008c ಧರ್ಮರಾಡ್ ಭ್ರಾತರಂ ಜಿಷ್ಣುಂ ಸಮಾಚಷ್ಟ ಜಗತ್ಪತಿಃ।।
ಆಗ ಧರ್ಮರಾಜ ಕೌಂತೇಯನು ಅರಿಂದಮ ಸಹೋದರ ಜಿಷ್ಣುವಿನ ಕುರಿತು ಪುನಃ ಪುನಃ ಕೇಳಲು ಜಗತ್ಪತಿ ಕೃಷ್ಣನು ಅವನಿಗೆ ಹೇಳಿದನು:
14088009a ಆಗಮದ್ದ್ವಾರಕಾವಾಸೀ ಮಮಾಪ್ತಃ ಪುರುಷೋ ನೃಪ।
14088009c ಯೋಽದ್ರಾಕ್ಷೀತ್ಪಾಂಡವಶ್ರೇಷ್ಠಂ ಬಹುಸಂಗ್ರಾಮಕರ್ಶಿತಮ್।।
“ನೃಪ! ನನಗೆ ಆಪ್ತನಾದ ಮತ್ತು ದ್ವಾರಕೆಯಲ್ಲಿಯೇ ವಾಸಿಸುತ್ತಿದ್ದ ಪುರುಷನೋರ್ವನು ನನಗೆ ಪಾಂಡವಶ್ರೇಷ್ಠ ಅರ್ಜುನನು ಅನೇಕ ಸಂಗ್ರಾಮಗಳಲ್ಲಿ ಹೋರಾಡಿ ಕೃಶನಾಗಿರುವನೆಂದು ನನಗೆ ಹೇಳಿದನು.
14088010a ಸಮೀಪೇ ಚ ಮಹಾಬಾಹುಮಾಚಷ್ಟ ಚ ಮಮ ಪ್ರಭೋ।
14088010c ಕುರು ಕಾರ್ಯಾಣಿ ಕೌಂತೇಯ ಹಯಮೇಧಾರ್ಥಸಿದ್ಧಯೇ।।
ಪ್ರಭೋ! ಕೌಂತೇಯ! ಆ ಮಹಾಬಾಹುವು ಸಮೀಪದಲ್ಲಿಯೇ ಇರುವನೆಂದೂ ಅವನು ನನಗೆ ಹೇಳಿದನು. ಅಶ್ವಮೇಧದ ಸಿದ್ಧಿಗಾಗಿ ಮಾಡಬೇಕಾದ ಕಾರ್ಯಗಳನ್ನು ಮಾಡು!”
14088011a ಇತ್ಯುಕ್ತಃ ಪ್ರತ್ಯುವಾಚೈನಂ ಧರ್ಮರಾಜೋ ಯುಧಿಷ್ಠಿರಃ।
14088011c ದಿಷ್ಟ್ಯಾ ಸ ಕುಶಲೀ ಜಿಷ್ಣುರುಪಯಾತಿ ಚ ಮಾಧವ।।
ಇದಕ್ಕೆ ಪ್ರತಿಯಾಗಿ ಧರ್ಮರಾಜ ಯುಧಿಷ್ಠಿರನು ಇಂತೆಂದನು: “ಮಾಧವ! ಸೌಭಾಗ್ಯವಶಾತ್ ಜಿಷ್ಣುವು ಕುಶಲನಾಗಿಯೇ ಹಿಂದಿರುಗುತ್ತಿದ್ದಾನೆ!
14088012a ತವ ಯತ್ಸಂದಿದೇಶಾಸೌ ಪಾಂಡವಾನಾಂ ಬಲಾಗ್ರಣೀಃ।
14088012c ತದಾಖ್ಯಾತುಮಿಹೇಚ್ಚಾಮಿ ಭವತಾ ಯದುನಂದನ।।
ಯದುನಂದನ! ಪಾಂಡವರ ಬಲಾಗ್ರಣಿಯು ಏನಾದರೂ ಸಂದೇಶವನ್ನು ಕಳುಹಿಸಿದ್ದರೆ ಅದನ್ನು ನಿನ್ನಿಂದ ಕೇಳ ಬಯಸುತ್ತೇನೆ!”
14088013a ಇತ್ಯುಕ್ತೇ ರಾಜಶಾರ್ದೂಲ ವೃಷ್ಣ್ಯಂಧಕಪತಿಸ್ತದಾ।
14088013c ಪ್ರೋವಾಚೇದಂ ವಚೋ ವಾಗ್ಮೀ ಧರ್ಮಾತ್ಮಾನಂ ಯುಧಿಷ್ಠಿರಮ್।।
ರಾಜಶಾರ್ದೂಲ! ಹೀಗೆ ಹೇಳಲು ವೃಷ್ಣಿ-ಅಂಧಕರ ಪತಿ ವಾಗ್ಮಿಯು ಧರ್ಮಾತ್ಮ ಯುಧಿಷ್ಠಿರನಿಗೆ ಉತ್ತರಿಸಿದನು:
14088014a ಇದಮಾಹ ಮಹಾರಾಜ ಪಾರ್ಥವಾಕ್ಯಂ ನರಃ ಸ ಮಾಮ್।
14088014c ವಾಚ್ಯೋ ಯುಧಿಷ್ಠಿರಃ ಕೃಷ್ಣ ಕಾಲೇ ವಾಕ್ಯಮಿದಂ ಮಮ।।
“ಮಹಾರಾಜ! ಆ ಪುರುಷನು ನನಗೆ “ಕೃಷ್ಣ! ಸಕಾಲದಲ್ಲಿ ಅರ್ಜುನನ ಈ ಮಾತನ್ನೂ ಯುಧಿಷ್ಠಿರನಿಗೆ ತಿಳಿಸಬೇಕು” ಎಂದು ಹೇಳಿದನು.
14088015a ಆಗಮಿಷ್ಯಂತಿ ರಾಜಾನಃ ಸರ್ವತಃ ಕೌರವಾನ್ಪ್ರತಿ।
14088015c ತೇಷಾಮೇಕೈಕಶಃ ಪೂಜಾ ಕಾರ್ಯೇತ್ಯೇತತ್ಕ್ಷಮಂ ಹಿ ನಃ।।
“ಎಲ್ಲ ಕಡೆಗಳಿಂದ ರಾಜರು ಕೌರವರ ಕಡೆ ಬರುತ್ತಿದ್ದಾರೆ. ಅವರಲ್ಲಿ ಒಬ್ಬೊಬ್ಬರನ್ನೂ ಯಥೋಚಿತಾವಾಗಿ ಸತ್ಕರಿಸುವುದು ನಮ್ಮ ಕರ್ತವ್ಯವಾಗಿದೆ!”
14088016a ಇತ್ಯೇತದ್ವಚನಾದ್ರಾಜಾ ವಿಜ್ಞಾಪ್ಯೋ ಮಮ ಮಾನದ।
14088016c ನ ತದಾತ್ಯಯಿಕಂ ಹಿ ಸ್ಯಾದ್ಯದರ್ಘ್ಯಾನಯನೇ ಭವೇತ್।।
ಮಾನದ! ಇದರ ನಂತರ “ರಾಜಸೂಯ ಯಾಗದ ಅರ್ಘ್ಯಪ್ರದಾನದ ಸಮಯದಲ್ಲಿ ನಡೆದ ದುರ್ಘಟನೆಯು ಪುನಃ ಉಂಟಾಗಬಾರದು” ಎಂಬ ವಿಜ್ಞಾಪನೆಯನ್ನೂ ಅವನು ನನ್ನಲ್ಲಿ ಮಾಡಿದ್ದಾನೆ.
14088017a ಕರ್ತುಮರ್ಹತಿ ತದ್ರಾಜಾ ಭವಾಂಶ್ಚಾಪ್ಯನುಮನ್ಯತಾಮ್।
14088017c ರಾಜದ್ವೇಷಾದ್ವಿನಶ್ಯೇಯುರ್ನೇಮಾ ರಾಜನ್ಪ್ರಜಾಃ ಪುನಃ।।
“ಆ ರಾಜನು ಇದನ್ನೇ ಮಾಡಬೇಕಾಗಿದೆ. ಅದಕ್ಕೆ ನಿನ್ನ ಬೆಂಬಲವೂ ಬೇಕು. ರಾಜರ ಪರಸ್ಪರ ದ್ವೇಷದಿಂದ ಪುನಃ ಪ್ರಜೆಗಳು ವಿನಾಶಹೊಂದಬಾರದು!”
14088018a ಇದಮನ್ಯಚ್ಚ ಕೌಂತೇಯ ವಚಃ ಸ ಪುರುಷೋಽಬ್ರವೀತ್।
14088018c ಧನಂಜಯಸ್ಯ ನೃಪತೇ ತನ್ಮೇ ನಿಗದತಃ ಶೃಣು।।
ನೃಪತೇ! ಕೌಂತೇಯ! ಇದಕ್ಕೂ ಹೊರತಾಗಿ ಆ ಪುರುಷನು ಧನಂಜಯನ ಅನ್ಯ ಸಂದೇಶವನ್ನೂ ಹೇಳಿದನು. ಅದನ್ನು ಹೇಳುತ್ತೇನೆ. ಕೇಳು.
14088019a ಉಪಯಾಸ್ಯತಿ ಯಜ್ಞಂ ನೋ ಮಣಿಪೂರಪತಿರ್ನೃಪಃ।
14088019c ಪುತ್ರೋ ಮಮ ಮಹಾತೇಜಾ ದಯಿತೋ ಬಭ್ರುವಾಹನಃ।।
“ನಮ್ಮ ಯಜ್ಞಕ್ಕೆ ಮಣಿಪೂರದ ನೃಪತಿ ನನ್ನ ಪ್ರೀತಿಯ ಮಗ ಮಹಾತೇಜಸ್ವಿ ಬಭ್ರುವಾಹನನು ಬರುತ್ತಾನೆ.
14088020a ತಂ ಭವಾನ್ಮದಪೇಕ್ಷಾರ್ಥಂ ವಿಧಿವತ್ಪ್ರತಿಪೂಜಯೇತ್।
14088020c ಸ ಹಿ ಭಕ್ತೋಽನುರಕ್ತಶ್ಚ ಮಮ ನಿತ್ಯಮಿತಿ ಪ್ರಭೋ।।
ಪ್ರಭೋ! ಅವನು ನನ್ನ ಭಕ್ತನೂ ನನ್ನಲ್ಲಿ ನಿತ್ಯವೂ ಅನುರಕ್ತನಾಗಿರುವುದರಿಂದ ನನಗೋಸ್ಕರವಾಗಿ ನೀನು ಅವನನ್ನು ವಿಧಿವತ್ತಾಗಿ ಗೌರವಿಸಬೇಕು!””
14088021a ಇತ್ಯೇತದ್ವಚನಂ ಶ್ರುತ್ವಾ ಧರ್ಮರಾಜೋ ಯುಧಿಷ್ಠಿರಃ।
14088021c ಅಭಿನಂದ್ಯಾಸ್ಯ ತದ್ವಾಕ್ಯಮಿದಂ ವಚನಮಬ್ರವೀತ್।।
ಈ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಆ ವಾಕ್ಯವನ್ನು ಅಭಿನಂದಿಸುತ್ತಾ ಹೀಗೆ ಹೇಳಿದನು.
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಮೇಧಾರಂಭೇ ಅಷ್ಟಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಮೇಧಾರಂಭ ಎನ್ನುವ ಎಂಭತ್ತೆಂಟನೇ ಅಧ್ಯಾಯವು.