087: ಅಶ್ವಮೇಧಾರಂಭಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 87

ಸಾರ

ಯಜ್ಞಶಾಲೆಯ ವರ್ಣನೆ (1-16).

14087001 ವೈಶಂಪಾಯನ ಉವಾಚ
14087001a ತಸ್ಮಿನ್ಯಜ್ಞೇ ಪ್ರವೃತ್ತೇ ತು ವಾಗ್ಮಿನೋ ಹೇತುವಾದಿನಃ।
14087001c ಹೇತುವಾದಾನ್ಬಹೂನ್ಪ್ರಾಹುಃ ಪರಸ್ಪರಜಿಗೀಷವಃ।।

ವೈಶಂಪಾಯನನು ಹೇಳಿದನು: “ಆ ಯಜ್ಞವು ನಡೆಯುತ್ತಿರಲಾಗಿ ವಾಗ್ಮಿ ತಾರ್ಕಿಕರು ಪರಸ್ಪರರನ್ನು ಗೆಲ್ಲಲೋಸಗ ಅನೇಕ ತರ್ಕಯುಕ್ತ ವಾದಗಳನ್ನು ಮಂಡಿಸುತ್ತಿದ್ದರು.

14087002a ದದೃಶುಸ್ತಂ ನೃಪತಯೋ ಯಜ್ಞಸ್ಯ ವಿಧಿಮುತ್ತಮಮ್।
14087002c ದೇವೇಂದ್ರಸ್ಯೇವ ವಿಹಿತಂ ಭೀಮೇನ ಕುರುನಂದನ।।

ಕುರುನಂದನ! ದೇವೇಂದ್ರನ ಯಜ್ಞಶಾಲೆಯಂತೆಯೇ ಭೀಮನು ವಿಧಿವತ್ತಾಗಿ ನಿರ್ಮಿಸಿದ್ದ ಆ ಯಜ್ಞಶಾಲೆಯನ್ನು ನೃಪತಿಯರು ನೋಡಿದರು.

14087003a ದದೃಶುಸ್ತೋರಣಾನ್ಯತ್ರ ಶಾತಕುಂಭಮಯಾನಿ ತೇ।
14087003c ಶಯ್ಯಾಸನವಿಹಾರಾಂಶ್ಚ ಸುಬಹೂನ್ರತ್ನಭೂಷಿತಾನ್।।

ಅಲ್ಲಿ ಸುವರ್ಣಖಚಿತ ತೋರಣಗಳನ್ನೂ, ಅನೇಕ ರತ್ನವಿಭೂಷಿತ ಶಯ್ಯಾಸನ ವಿಹಾರಗಳನ್ನೂ ಅವರು ನೋಡಿದರು.

14087004a ಘಟಾನ್ಪಾತ್ರೀಃ ಕಟಾಹಾನಿ ಕಲಶಾನ್ವರ್ಧಮಾನಕಾನ್।
14087004c ನ ಹಿ ಕಿಂ ಚಿದಸೌವರ್ಣಮಪಶ್ಯಂಸ್ತತ್ರ ಪಾರ್ಥಿವಾಃ।।

ಅಲ್ಲಿ ಚಿನ್ನವಲ್ಲದ ಯಾವ ಘಟಗಳೂ, ಪಾತ್ರೆಗಳೂ, ಕಡಾಯಿಗಳೂ, ಕಲಶಗಳೂ ಮತ್ತು ಶರಾವೆಗಳೂ ಇಲ್ಲದಿದ್ದುದನ್ನು ಪಾರ್ಥಿವರು ನೋಡಿದರು.

14087005a ಯೂಪಾಂಶ್ಚ ಶಾಸ್ತ್ರಪಠಿತಾನ್ದಾರವಾನ್ ಹೇಮಭೂಷಿತಾನ್।
14087005c ಉಪಕ್ಳ್ಪ್ತಾನ್ಯಥಾಕಾಲಂ ವಿಧಿವದ್ಭೂರಿವರ್ಚಸಃ।।

ಶಾಸ್ತ್ರವಿಧಿಯನ್ನನುಸರಿಸಿ ದಾರುವೃಕ್ಷಗಳಿಂದ ನಿರ್ಮಿಸಿದ್ದ ಯೂಪಗಳೂ ಹೇಮಭೂಷಿತವಾಗಿದ್ದವು. ಅತ್ಯಂತ ವರ್ಚಸ್ಸಿನಿಂದ ಬೆಳಗುತ್ತಿದ್ದ ಅವುಗಳನ್ನು ಯಥಾಕಾಲದಲ್ಲಿ ವಿಧಿವತ್ತಾಗಿ ನಿರ್ಮಿಸಲಾಗಿತ್ತು.

14087006a ಸ್ಥಲಜಾ ಜಲಜಾ ಯೇ ಚ ಪಶವಃ ಕೇ ಚನ ಪ್ರಭೋ।
14087006c ಸರ್ವಾನೇವ ಸಮಾನೀತಾಂಸ್ತಾನಪಶ್ಯಂತ ತೇ ನೃಪಾಃ।।

ಪ್ರಭೋ! ಭೂಮಿಯ ಮೇಲೆ ಮತ್ತು ಜಲದಲ್ಲಿ ವಾಸಿಸುವ ಏನೆಲ್ಲ ಪಶುಗಳಿವೆಯೋ ಅವೆಲ್ಲವನ್ನೂ ಅಲ್ಲಿಗೆ ತಂದಿರುವುದನ್ನು ನೃಪರು ವೀಕ್ಷಿಸಿದರು.

14087007a ಗಾಶ್ಚೈವ ಮಹಿಷೀಶ್ಚೈವ ತಥಾ ವೃದ್ಧಾಃ ಸ್ತ್ರಿಯೋಽಪಿ ಚ।
14087007c ಔದಕಾನಿ ಚ ಸತ್ತ್ವಾನಿ ಶ್ವಾಪದಾನಿ ವಯಾಂಸಿ ಚ।।
14087008a ಜರಾಯುಜಾನ್ಯಂಡಜಾನಿ ಸ್ವೇದಜಾನ್ಯುದ್ಭಿದಾನಿ ಚ।
14087008c ಪರ್ವತಾನೂಪವನ್ಯಾನಿ ಭೂತಾನಿ ದದೃಶುಶ್ಚ ತೇ।।

ಹಸುಗಳು, ಎಮ್ಮೆಗಳು, ವೃದ್ಧಸ್ತ್ರೀಯರು, ಜಲಚರಪ್ರಾಣಿಗಳು, ಮಾಂಸಾಹಾರಿ ಮೃಗಗಳು, ಪಕ್ಷಿಗಳು, ಜರಾಯುಜ-ಅಂಡಜ-ಸ್ವೇದಜ-ಉದ್ಭಿಜಗಳೆಂಬ ನಾಲ್ಕೂ ಪ್ರಕಾರದ ಪ್ರಾಣಿಗಳು, ಪರ್ವತಪ್ರದೇಶಗಳಲ್ಲಿ ಮತ್ತು ಉಪವನಗಳಲ್ಲಿ ವಾಸಿಸುವ ಪ್ರಾಣಿಗಳನ್ನೂ ಅವರು ನೋಡಿದರು.

14087009a ಏವಂ ಪ್ರಮುದಿತಂ ಸರ್ವಂ ಪಶುಗೋಧನಧಾನ್ಯತಃ।
14087009c ಯಜ್ಞವಾಟಂ ನೃಪಾ ದೃಷ್ಟ್ವಾ ಪರಂ ವಿಸ್ಮಯಮಾಗಮನ್।

ಹೀಗೆ ಸರ್ವ ಪಶು-ಗೋ-ಧನ-ಧಾನ್ಯಗಳಿಂದ ಸಮೃದ್ಧವಾಗಿದ್ದ ಆ ಯಜ್ಞವಾಟಿಕೆಯನ್ನು ನೋಡಿ ನೃಪರು ಪರಮ ವಿಸ್ಮಿತರಾದರು.

14087009e ಬ್ರಾಹ್ಮಣಾನಾಂ ವಿಶಾಂ ಚೈವ ಬಹುಮೃಷ್ಟಾನ್ನಮೃದ್ಧಿಮತ್।।
14087010a ಪೂರ್ಣೇ ಶತಸಹಸ್ರೇ ತು ವಿಪ್ರಾಣಾಂ ತತ್ರ ಭುಂಜತಾಮ್।
14087010c ದುಂದುಭಿರ್ಮೇಘನಿರ್ಘೋಷೋ ಮುಹುರ್ಮುಹುರತಾಡ್ಯತ।।
14087011a ವಿನನಾದಾಸಕೃತ್ಸೋಽಥ ದಿವಸೇ ದಿವಸೇ ತದಾ।
14087011c ಏವಂ ಸ ವವೃತೇ ಯಜ್ಞೋ ಧರ್ಮರಾಜಸ್ಯ ಧೀಮತಃ।।

ಬ್ರಾಹ್ಮಣರಿಗೆ ಮತ್ತು ವೈಶ್ಯರಿಗೆ ಅಲ್ಲಿ ಬಹುಮೃಷ್ಟಾನ್ನ ಭೋಜನದ ವ್ಯವಸ್ಥೆಯಿತ್ತು. ಒಂದು ಲಕ್ಷ ವಿಪ್ರರ ಭೋಜನವು ಪೂರ್ಣಗೊಳ್ಳಲು ಮೇಘನಿರ್ಘೋಷದಂತೆ ದುಂದುಭಿಯು ಮೊಳಗುತ್ತಿತ್ತು. ದಿವಸ ದಿವಸದಲ್ಲಿಯೂ ಆ ದುಂದುಭಿಯ ಶಬ್ಧವು ಮತ್ತೆ ಮತ್ತೆ ಕೇಳಿಬರುತ್ತಿತ್ತು. ಹೀಗೆ ಧೀಮತ ಧರ್ಮರಾಜನ ಯಜ್ಞವು ಮುಂದುವರೆಯಿತು.

14087012a ಅನ್ನಸ್ಯ ಬಹವೋ ರಾಜನ್ನುತ್ಸರ್ಗಾಃ ಪರ್ವತೋಪಮಾಃ।
14087012c ದಧಿಕುಲ್ಯಾಶ್ಚ ದದೃಶುಃ ಸರ್ಪಿಷಶ್ಚ ಹ್ರದಾಂಜನಾಃ।।

ಪರ್ವತೋಪಮವಾದ ಅನ್ನದ ಅನೇಕ ರಾಶಿಗಳನ್ನೂ, ಮೊಸರಿನ ಕಾಲುವೆಗಳನ್ನೂ, ತುಪ್ಪದ ಕೊಳಗಳನ್ನೂ ರಾಜರು ನೋಡಿದರು.

14087013a ಜಂಬೂದ್ವೀಪೋ ಹಿ ಸಕಲೋ ನಾನಾಜನಪದಾಯುತಃ।
14087013c ರಾಜನ್ನದೃಶ್ಯತೈಕಸ್ಥೋ ರಾಜ್ಞಸ್ತಸ್ಮಿನ್ಮಹಾಕ್ರತೌ।।

ರಾಜನ್! ರಾಜನ ಆ ಮಹಾಕ್ರತುವಿನಲ್ಲಿ ನಾನಾ ದೇಶಗಳಿಂದ ರಾಜರು ಬಂದಿದ್ದರಿಂದ ಜಂಬೂದ್ವೀಪವೆಲ್ಲವೂ ಒಂದೇ ಕಡೆ ಬಂದು ಸೇರಿದೆಯೋ ಎನ್ನುವಂತೆ ತೋರುತ್ತಿತ್ತು.

14087014a ತತ್ರ ಜಾತಿಸಹಸ್ರಾಣಿ ಪುರುಷಾಣಾಂ ತತಸ್ತತಃ।
14087014c ಗೃಹೀತ್ವಾ ಧನಮಾಜಗ್ಮುರ್ಬಹೂನಿ ಭರತರ್ಷಭ।।

ಭರತರ್ಷಭ! ಅಲ್ಲಿ ಸಹಸ್ರಾರು ಜಾತಿಗಳ ಪುರುಷರು ಅನೇಕ ಧನಗಳನ್ನು ತೆಗೆದುಕೊಂಡು ಎಲ್ಲೆಲ್ಲಿಂದಲೋ ಬಂದಿದ್ದರು.

14087015a ರಾಜಾನಃ ಸ್ರಗ್ವಿಣಶ್ಚಾಪಿ ಸುಮೃಷ್ಟಮಣಿಕುಂಡಲಾಃ।
14087015c ಪರ್ಯವೇಷನ್ ದ್ವಿಜಾಗ್ರ್ಯಾಂಸ್ತಾನ್ಶತಶೋಽಥ ಸಹಸ್ರಶಃ।।

ಸುವರ್ಣದ ಹಾರಗಳನ್ನೂ ಮಣಿಕುಂಡಲಗಳನ್ನೂ ಧರಿಸಿದ್ದ ರಾಜರು ನೂರಾರು ಸಹಸ್ರಾರು ದ್ವಿಜಾಗ್ರರಿಗೆ ಬಡಿಸುತ್ತಿದ್ದರು.

14087016a ವಿವಿಧಾನ್ಯನ್ನಪಾನಾನಿ ಪುರುಷಾ ಯೇಽನುಯಾಯಿನಃ।
14087016c ತೇಷಾಂ ನೃಪೋಪಭೋಜ್ಯಾನಿ ಬ್ರಾಹ್ಮಣೇಭ್ಯೋ ದದುಃ ಸ್ಮ ತೇ।।

ಅವರ ಅನುಯಾಯಿಗಳು ಕೂಡ ಬ್ರಾಹ್ಮಣರಿಗೆ ರಾಜಭೋಗ್ಯವಾದ ವಿಧವಿಧದ ಅನ್ನ-ಪಾನಗಳನ್ನು ಬಡಿಸುತ್ತಿದ್ದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಮೇಧಾರಂಭೇ ಸಪ್ತಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಮೇಧಾರಂಭ ಎನ್ನುವ ಎಂಭತ್ತೇಳನೇ ಅಧ್ಯಾಯವು.