085: ಅಶ್ವಾನುಸರಣೇ ಶಕುನಿಪುತ್ರಪರಾಜಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 85

ಸಾರ

ಶಕುನಿಯ ಮಗನು ಅರ್ಜುನನೊಂದಿಗೆ ಯುದ್ಧಮಾಡಿದುದು (1-18). ಸೇನೆಯು ಪರಾಜಯಗೊಳ್ಳಲು ಶಕುನಿಯ ಪತ್ನಿಯು ಶರಣಾಗತಳಾಗಿ ಬಂದುದು (19-23).

14085001 ವೈಶಂಪಾಯನ ಉವಾಚ
14085001a ಶಕುನೇಸ್ತು ಸುತೋ ವೀರೋ ಗಾಂಧಾರಾಣಾಂ ಮಹಾರಥಃ।
14085001c ಪ್ರತ್ಯುದ್ಯಯೌ ಗುಡಾಕೇಶಂ ಸೈನ್ಯೇನ ಮಹತಾ ವೃತಃ।
14085001e ಹಸ್ತ್ಯಶ್ವರಥಪೂರ್ಣೇನ ಪತಾಕಾಧ್ವಜಮಾಲಿನಾ।।

ವೈಶಂಪಾಯನನು ಹೇಳಿದನು: “ಶಕುನಿಯ ಮಗ, ಗಾಂಧಾರರ ವೀರ ಮಹಾರಥನು ಪತಾಕ-ಧ್ವಜ-ಮಾಲೆಗಳಿಂದ ಅಲಂಕೃತಗೊಂಡ ಆನೆ-ಕುದುರೆ-ರಥಗಳಿಂದ ಪರಿಪೂರ್ಣವಾದ ಮಹಾ ಸೇನೆಯೊಂದಿಗೆ ಗುಡಾಕೇಶ ಅರ್ಜುನನೊಡನೆ ಯುದ್ಧಕ್ಕೆ ಹೊರಟನು.

14085002a ಅಮೃಷ್ಯಮಾಣಾಸ್ತೇ ಯೋಧಾ ನೃಪತೇಃ ಶಕುನೇರ್ವಧಮ್।
14085002c ಅಭ್ಯಯುಃ ಸಹಿತಾಃ ಪಾರ್ಥಂ ಪ್ರಗೃಹೀತಶರಾಸನಾಃ।।

ನೃಪತಿ ಶಕುನಿಯ ವಧೆಯನ್ನು ಸಹಿಸಿಕೊಳ್ಳಲಾರದೇ ಆ ಯೋಧರು ಧನುಸ್ಸುಗಳನ್ನು ಹಿಡಿದುಕೊಂಡು ಒಂದಾಗಿ ಪಾರ್ಥನನ್ನು ಆಕ್ರಮಣಿಸಿದರು.

14085003a ತಾನುವಾಚ ಸ ಧರ್ಮಾತ್ಮಾ ಬೀಭತ್ಸುರಪರಾಜಿತಃ।
14085003c ಯುಧಿಷ್ಠಿರಸ್ಯ ವಚನಂ ನ ಚ ತೇ ಜಗೃಹುರ್ಹಿತಮ್।।

ಧರ್ಮಾತ್ಮ ಅಪರಾಜಿತ ಬೀಭತ್ಸುವು ಅವರಿಗೆ ಯುಧಿಷ್ಠಿರನ ಸಂದೇಶವನ್ನು ತಿಳಿಸಿದನು. ಆದರೆ ಅದನ್ನು ಅವರು ಸ್ವೀಕರಿಸಲಿಲ್ಲ.

14085004a ವಾರ್ಯಮಾಣಾಸ್ತು ಪಾರ್ಥೇನ ಸಾಂತ್ವಪೂರ್ವಮಮರ್ಷಿತಾಃ।
14085004c ಪರಿವಾರ್ಯ ಹಯಂ ಜಗ್ಮುಸ್ತತಶ್ಚುಕ್ರೋಧ ಪಾಂಡವಃ।।

ಪಾರ್ಥನು ಸಾಂತ್ವಪೂರ್ವಕವಾಗಿ ಅವರನ್ನು ತಡೆದರೂ ಕುಪಿತರಾದ ಅವರು ಕುದುರೆಯನ್ನು ಸುತ್ತುವರೆದರು. ಆಗ ಪಾಂಡವನು ಅತ್ಯಂತ ಕ್ರೋಧಿತನಾದನು.

14085005a ತತಃ ಶಿರಾಂಸಿ ದೀಪ್ತಾಗ್ರೈಸ್ತೇಷಾಂ ಚಿಚ್ಚೇದ ಪಾಂಡವಃ।
14085005c ಕ್ಷುರೈರ್ಗಾಂಡೀವನಿರ್ಮುಕ್ತೈರ್ನಾತಿಯತ್ನಾದಿವಾರ್ಜುನಃ।।

ಪಾಂಡವ ಅರ್ಜುನನು ಹೆಚ್ಚಿನ ಪ್ರಯತ್ನಪಡದೇ ಗಾಂಡೀವದಿಂದ ಪ್ರಯೋಗಿಸಲ್ಪಟ್ಟ ಉರಿಯುತ್ತಿರುವ ಕ್ಷುರಗಳಿಂದ ಅವರ ಶಿರಗಳನ್ನು ಕತ್ತರಿಸಿದನು.

14085006a ತೇ ವಧ್ಯಮಾನಾಃ ಪಾರ್ಥೇನ ಹಯಮುತ್ಸೃಜ್ಯ ಸಂಭ್ರಮಾತ್।
14085006c ನ್ಯವರ್ತಂತ ಮಹಾರಾಜ ಶರವರ್ಷಾರ್ದಿತಾ ಭೃಶಮ್।।

ಪಾರ್ಥನಿಂದ ವಧಿಸಲ್ಪಡುತ್ತಿದ್ದ ಅವರು ಶರಗಳಿಂದ ಅತ್ಯಂತ ಗಾಯಗೊಂಡು ಗಾಬರಿಯಿಂದ ಕುದುರೆಯನ್ನು ಅಲ್ಲಿಯೇ ಬಿಟ್ಟು ಪಲಾಯನಗೈದರು.

14085007a ವಿತುದ್ಯಮಾನಸ್ತೈಶ್ಚಾಪಿ ಗಾಂಧಾರೈಃ ಪಾಂಡವರ್ಷಭಃ।
14085007c ಆದಿಶ್ಯಾದಿಶ್ಯ ತೇಜಸ್ವೀ ಶಿರಾಂಸ್ಯೇಷಾಂ ನ್ಯಪಾತಯತ್।।

ಗಾಂಧಾರರು ಪ್ರಹರಿಸುತ್ತಿದ್ದರೂ ಪಾಂಡವರ್ಷಭ ತೇಜಸ್ವೀ ಅರ್ಜುನನು ಅವರನ್ನು ಕರೆ ಕರೆದು ಶಿರಗಳನ್ನು ಕೆರಗುರುಳಿಸಿದನು.

14085008a ವಧ್ಯಮಾನೇಷು ತೇಷ್ವಾಜೌ ಗಾಂಧಾರೇಷು ಸಮಂತತಃ।
14085008c ಸ ರಾಜಾ ಶಕುನೇಃ ಪುತ್ರಃ ಪಾಂಡವಂ ಪ್ರತ್ಯವಾರಯತ್।।

ಹೀಗೆ ಎಲ್ಲ ಕಡೆಗಳಲ್ಲಿ ಗಾಂಧಾರರು ವಧಿಸಲ್ಪಡುತ್ತಿರಲು ಶುಕುನಿಯ ಮಗ ರಾಜನು ಪಾಂಡವನನ್ನು ಆಕ್ರಮಣಿಸಿದನು.

14085009a ತಂ ಯುಧ್ಯಮಾನಂ ರಾಜಾನಂ ಕ್ಷತ್ರಧರ್ಮೇ ವ್ಯವಸ್ಥಿತಮ್।
14085009c ಪಾರ್ಥೋಽಬ್ರವೀನ್ನ ಮೇ ವಧ್ಯಾ ರಾಜಾನೋ ರಾಜಶಾಸನಾತ್।
14085009e ಅಲಂ ಯುದ್ಧೇನ ತೇ ವೀರ ನ ತೇಽಸ್ತ್ಯದ್ಯ ಪರಾಜಯಃ।।

ಕ್ಷತ್ರಧರ್ಮದಲ್ಲಿ ನಿರತನಾಗಿದ್ದು ಯುದ್ಧಮಾಡುತ್ತಿದ್ದ ರಾಜನಿಗೆ ಪಾರ್ಥನು ಹೇಳಿದನು: “ರಾಜಶಾಸನದಂತೆ ನಾನು ರಾಜರನ್ನು ವಧಿಸುವುದಿಲ್ಲ! ವೀರ! ನಿನ್ನ ಯುದ್ಧವನ್ನು ನಿಲ್ಲಿಸು! ಇಂದು ನೀನು ಪರಾಜಯಗೊಳ್ಳುವೆ!”

14085010a ಇತ್ಯುಕ್ತಸ್ತದನಾದೃತ್ಯ ವಾಕ್ಯಮಜ್ಞಾನಮೋಹಿತಃ।
14085010c ಸ ಶಕ್ರಸಮಕರ್ಮಾಣಮವಾಕಿರತ ಸಾಯಕೈಃ।।

ಅಜ್ಞಾನದಿಂದ ಮೋಹಿತನಾಗಿದ್ದ ಶಕುನಿಯ ಮಗನು ಈ ಮಾತನ್ನು ಅನಾದರಿಸಿ, ಕರ್ಮಗಳಲ್ಲಿ ಶಕ್ರನ ಸಮನಾದ ಅರ್ಜುನನನ್ನು ಸಾಯಕಗಳಿಂದ ಮುಸುಕಿದನು.

14085011a ತಸ್ಯ ಪಾರ್ಥಃ ಶಿರಸ್ತ್ರಾಣಮರ್ಧಚಂದ್ರೇಣ ಪತ್ರಿಣಾ।
14085011c ಅಪಾಹರದಸಂಭ್ರಾಂತೋ ಜಯದ್ರಥಶಿರೋ ಯಥಾ।।

ಗಾಭರಿಗೊಳ್ಳದೇ ಪಾರ್ಥನು ಅರ್ಧಚಂದ್ರದ ಪತ್ರಿಯಿಂದ ಜಯದ್ರಥನ ಶಿರವನ್ನು ಹೇಗೋ ಹಾಗೆ ಅವನ ಶಿರಸ್ತ್ರಾಣವನ್ನು ಅಪಹರಿಸಿದನು.

14085012a ತದ್ದೃಷ್ಟ್ವಾ ವಿಸ್ಮಯಂ ಜಗ್ಮುರ್ಗಾಂಧಾರಾಃ ಸರ್ವ ಏವ ತೇ।
14085012c ಇಚ್ಚತಾ ತೇನ ನ ಹತೋ ರಾಜೇತ್ಯಪಿ ಚ ತೇ ವಿದುಃ।।

ಅದನ್ನು ನೋಡಿ ಗಾಂಧಾರರು ಎಲ್ಲರೂ ವಿಸ್ಮಯಗೊಂಡರು. ಉದ್ದೇಶಪೂರ್ವಕವಾಗಿಯೇ ಅವನು ರಾಜನನ್ನು ಕೊಲ್ಲಲಿಲ್ಲವೆಂದು ಅರ್ಥಮಾಡಿಕೊಂಡರು.

14085013a ಗಾಂಧಾರರಾಜಪುತ್ರಸ್ತು ಪಲಾಯನಕೃತಕ್ಷಣಃ।
14085013c ಬಭೌ ತೈರೇವ ಸಹಿತಸ್ತ್ರಸ್ತೈಃ ಕ್ಷುದ್ರಮೃಗೈರಿವ।।

ಗಾಂಧಾರರಾಜನ ಪುತ್ರನಾದರೋ ಅವಕಾಶವನ್ನು ಹುಡುಕುತ್ತಿದ್ದನು. ಸಿಂಹವನ್ನು ಕಂಡು ಬೆದರಿದ ಕ್ಷುದ್ರ ಮೃಗಗಳಂತೆ ಅನೇಕರು ಪಲಾಯನಗೈಯುತ್ತಿದ್ದರು.

14085014a ತೇಷಾಂ ತು ತರಸಾ ಪಾರ್ಥಸ್ತತ್ರೈವ ಪರಿಧಾವತಾಮ್।
14085014c ವಿಜಹಾರೋತ್ತಮಾಂಗಾನಿ ಭಲ್ಲೈಃ ಸಂನತಪರ್ವಭಿಃ।।

ಕೂಡಲೇ ಪಾರ್ಥನು ಸನ್ನತಪರ್ವ ಭಲ್ಲಗಳಿಂದ ಓಡಿಹೋಗುತ್ತಿದ್ದವರ ಶಿರಸ್ಸುಗಳನ್ನು ಕತ್ತರಿಸತೊಡಗಿದನು.

14085015a ಉಚ್ಚ್ರಿತಾಂಸ್ತು ಭುಜಾನ್ಕೇ ಚಿನ್ನಾಬುಧ್ಯಂತ ಶರೈರ್ಹೃತಾನ್।
14085015c ಶರೈರ್ಗಾಂಡೀವನಿರ್ಮುಕ್ತೈಃ ಪೃಥುಭಿಃ ಪಾರ್ಥಚೋದಿತೈಃ।।

ಪಾರ್ಥನು ಗಾಂಡೀವದಿಂದ ಪ್ರಯೋಗಿಸಿದ ಶರಗಳಿಂದ ಭುಜಗಳು ತುಂಡಾಗಿದ್ದುದೂ ಅವರಿಗೆ ಸ್ವಲ್ಪ ಸಮಯ ತಿಳಿಯುತ್ತಲೇ ಇರಲಿಲ್ಲ.

14085016a ಸಂಭ್ರಾಂತನರನಾಗಾಶ್ವಮಥ ತದ್ವಿದ್ರುತಂ ಬಲಮ್।
14085016c ಹತವಿಧ್ವಸ್ತಭೂಯಿಷ್ಠಮಾವರ್ತತ ಮುಹುರ್ಮುಹುಃ।।

ಭ್ರಾಂತಿಗೊಂಡ ಪದಾತಿಗಳು, ಆನೆಗಳು ಮತ್ತು ಕುದುರೆಗಳ ಆ ಬಲವು ಪಲಾಯನಮಾಡುತ್ತಿತ್ತು ಮತ್ತು ಹತವಾಗದೇ ಉಳಿದವರು ಪುನಃ ಪುನಃ ಸಂಘಟಿತರಾಗಿ ಹಿಂದಿರುಗಿ ಆಕ್ರಮಣಿಸುತ್ತಿದ್ದರು.

14085017a ನ ಹ್ಯದೃಶ್ಯಂತ ವೀರಸ್ಯ ಕೇ ಚಿದಗ್ರೇಽಗ್ರ್ಯಕರ್ಮಣಃ।
14085017c ರಿಪವಃ ಪಾತ್ಯಮಾನಾ ವೈ ಯೇ ಸಹೇಯುರ್ಮಹಾಶರಾನ್।।

ಆದರೆ ಮಹಾಶರಗಳಿಂದ ಶತ್ರುಗಳು ಕೆಳಗುರುಳುತ್ತಿದ್ದುದರಿಂದ ಆ ಅಗ್ರ್ಯಕರ್ಮಿ ವೀರ ಅರ್ಜುನನ ಮುಂದೆ ಅವರ್ಯಾರೂ ಹೆಚ್ಚುಹೊತ್ತು ಕಾಣಿಸಿಕೊಳ್ಳಲಿಲ್ಲ.

14085018a ತತೋ ಗಾಂಧಾರರಾಜಸ್ಯ ಮಂತ್ರಿವೃದ್ಧಪುರಃಸರಾ।
14085018c ಜನನೀ ನಿರ್ಯಯೌ ಭೀತಾ ಪುರಸ್ಕೃತ್ಯಾರ್ಘ್ಯಮುತ್ತಮಮ್।।

ಆಗ ಗಾಂಧಾರರಾಜನ ಜನನಿಯು ಭೀತಳಾಗಿ ಮಂತ್ರಿಗಳನ್ನೂ ವೃದ್ಧರನ್ನೂ ಮುಂದಿಟ್ಟುಕೊಂಡು, ಉತ್ತಮ ಅರ್ಘ್ಯವನ್ನು ತೆಗೆದುಕೊಂಡು ನಗರಿಂದ ಹೊರಬಂದಳು.

14085019a ಸಾ ನ್ಯವಾರಯದವ್ಯಗ್ರಾ ತಂ ಪುತ್ರಂ ಯುದ್ಧದುರ್ಮದಮ್।
14085019c ಪ್ರಸಾದಯಾಮಾಸ ಚ ತಂ ಜಿಷ್ಣುಮಕ್ಲಿಷ್ಟಕಾರಿಣಮ್।।

ಅವ್ಯಗ್ರಳಾಗಿದ್ದ ಅವಳು ಯುದ್ಧದುರ್ಮದ ಮಗನನ್ನು ತಡೆದಳು ಮತ್ತು ಅಕ್ಲಿಷ್ಟಕಾರಿ ಜಿಷ್ಣುವನ್ನು ಪ್ರಸನ್ನಗೊಳಿಸಿದಳು.

14085020a ತಾಂ ಪೂಜಯಿತ್ವಾ ಕೌಂತೇಯಃ ಪ್ರಸಾದಮಕರೋತ್ತದಾ।
14085020c ಶಕುನೇಶ್ಚಾಪಿ ತನಯಂ ಸಾಂತ್ವಯನ್ನಿದಮಬ್ರವೀತ್।।

ಅವಳನ್ನು ಗೌರವಿಸಿ ಕೌಂತೇಯನು ಪ್ರಸನ್ನನಾದನು ಮತ್ತು ಶಕುನಿಯ ಮಗನನ್ನು ಸಂತೈಸುತ್ತಾ ಈ ಮಾತನ್ನಾಡಿದನು:

14085021a ನ ಮೇ ಪ್ರಿಯಂ ಮಹಾಬಾಹೋ ಯತ್ತೇ ಬುದ್ಧಿರಿಯಂ ಕೃತಾ।
14085021c ಪ್ರತಿಯೋದ್ಧುಮಮಿತ್ರಘ್ನ ಭ್ರಾತೈವ ತ್ವಂ ಮಮಾನಘ।।

“ಮಹಾಬಾಹೋ! ಅಮಿತ್ರಘ್ನ! ಅನಘ! ನನ್ನೊಡನೆ ಯುದ್ಧಮಾಡಬೇಕೆಂಬ ನಿನ್ನ ಈ ಬುದ್ಧಿಯು ನನಗೆ ಹಿಡಿಸಲಿಲ್ಲ. ಏಕೆಂದರೆ ನೀನು ನನ್ನ ಸೋದರನೇ ಆಗಿರುವೆ!

14085022a ಗಾಂಧಾರೀಂ ಮಾತರಂ ಸ್ಮೃತ್ವಾ ಧೃತರಾಷ್ಟ್ರಕೃತೇನ ಚ।
14085022c ತೇನ ಜೀವಸಿ ರಾಜಂಸ್ತ್ವಂ ನಿಹತಾಸ್ತ್ವನುಗಾಸ್ತವ।।

ರಾಜನ್! ಮಾತೆ ಗಾಂಧಾರಿಯನ್ನು ಸ್ಮರಿಸಿಕೊಂಡು ಮತ್ತು ಧೃತರಾಷ್ಟ್ರನ ಸಲುವಾಗಿ ನಿನ್ನ ಅನುಯಾಯಿಗಳನ್ನು ಸಂಹರಿಸಿದರೂ ನಿನ್ನನ್ನು ಜೀವದಿಂದ ಉಳಿಸಿದ್ದೇನೆ.

14085023a ಮೈವಂ ಭೂಃ ಶಾಮ್ಯತಾಂ ವೈರಂ ಮಾ ತೇ ಭೂದ್ಬುದ್ಧಿರೀದೃಶೀ।
14085023c ಆಗಂತವ್ಯಂ ಪರಾಂ ಚೈತ್ರೀಮಶ್ವಮೇಧೇ ನೃಪಸ್ಯ ನಃ।।

ಇನ್ನು ಮುಂದೆ ಹೀಗೆ ನಡೆದುಕೊಳ್ಳಬೇಡ! ವೈರವು ಇಲ್ಲಿಗೇ ಉಪಶಮನಗೊಳ್ಳಲಿ! ಬರುವ ಚೈತ್ರದಲ್ಲಾಗುವ ನೃಪನ ಅಶ್ವಮೇಧಕ್ಕೆ ಬರಬೇಕು.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಾನುಸರಣೇ ಶಕುನಿಪುತ್ರಪರಾಜಯೇ ಪಂಚಾಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣೇ ಶಕುನಿಪುತ್ರಪರಾಜಯ ಎನ್ನುವ ಎಂಭತ್ತೈದನೇ ಅಧ್ಯಾಯವು.