084: ಅಶ್ವಾನುಸರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 84

ಸಾರ

ಅರ್ಜುನನು ಶಿಶುಪಾಲನ ಮಗ ಶರಭನಿಂದ ಪೂಜಿಸಲ್ಪಟ್ಟು, ಮುಂದುವರೆದು ದಶಾರ್ಣದೇಶದ ಚಿತ್ರಾಂಗದನೊಡನೆ ಯುದ್ಧಮಾಡಿ, ನಿಷಾದರಾಜ್ಯಕ್ಕೆ ಬಂದು ಅಲ್ಲಿ ಏಕಲವ್ಯನ ಮಗನನ್ನು ಪರಾಜಯಗೊಳಿಸಿ, ದ್ವಾರಕೆಗೆ ಬಂದು ಅಲ್ಲಿ ವೃಷ್ಣಿಗಳಿಂದ ಗೌರವಿಸಲ್ಪಟ್ಟು, ಗಾಂಧಾರದೇಶಕ್ಕೆ ಬಂದುದು (1-19).

14084001 ವೈಶಂಪಾಯನ ಉವಾಚ
14084001a ಮಾಗಧೇನಾರ್ಚಿತೋ ರಾಜನ್ಪಾಂಡವಃ ಶ್ವೇತವಾಹನಃ।
14084001c ದಕ್ಷಿಣಾಂ ದಿಶಮಾಸ್ಥಾಯ ಚಾರಯಾಮಾಸ ತಂ ಹಯಮ್।।

ವೈಶಂಪಾಯನನು ಹೇಳಿದನು: “ರಾಜನ್! ಶ್ವೇತವಾಹನ ಪಾಂಡವನು ಮಾಗಧನಿಂದ ಪೂಜಿಸಲ್ಪಟ್ಟು ದಕ್ಷಿಣದಿಶೆಯನ್ನು ಹಿಡಿದು ಕುದುರೆಯನ್ನು ಹಿಂಬಾಲಿಸಿ ಹೋದನು.

14084002a ತತಃ ಸ ಪುನರಾವೃತ್ಯ ಹಯಃ ಕಾಮಚರೋ ಬಲೀ।
14084002c ಆಸಸಾದ ಪುರೀಂ ರಮ್ಯಾಂ ಚೇದೀನಾಂ ಶುಕ್ತಿಸಾಹ್ವಯಾಮ್।।

ಅನಂತರ ಆ ಬಲಶಾಲೀ ಕಾಮಚರ ಕುದುರೆಯು ಪುನಃ ಹಿಂದಿರುಗಿ ಚೇದಿಯರ ರಮ್ಯ ಪುರಿ ಶುಕ್ತಿಪುರವನ್ನು ತಲುಪಿತು.

14084003a ಶರಭೇಣಾರ್ಚಿತಸ್ತತ್ರ ಶಿಶುಪಾಲಾತ್ಮಜೇನ ಸಃ।
14084003c ಯುದ್ಧಪೂರ್ವೇಣ ಮಾನೇನ ಪೂಜಯಾ ಚ ಮಹಾಬಲಃ।।

ಅಲ್ಲಿ ಶಿಶುಪಾಲನ ಮಗ ಮಹಾಬಲ ಶರಭನು ಯುದ್ಧಮಾಡದೇ ಅವನನ್ನು ಗೌರವಿಸಿ ಪೂಜಿಸಿದನು.

14084004a ತತ್ರಾರ್ಚಿತೋ ಯಯೌ ರಾಜಂಸ್ತದಾ ಸ ತುರಗೋತ್ತಮಃ।
14084004c ಕಾಶೀನಂಧ್ರಾನ್ಕೋಸಲಾಂಶ್ಚ ಕಿರಾತಾನಥ ತಂಗಣಾನ್।।

ರಾಜನ್! ಅಲ್ಲಿ ಪೂಜಿಸಲ್ಪಟ್ಟು ಆ ಉತ್ತಮ ಕುದುರೆಯು ಕಾಶೀ, ಆಂಧ್ರ, ಕೋಸಲ, ಕಿರಾತ ಮತ್ತು ತಂಗಣ ರಾಷ್ಟ್ರಗಳಲ್ಲಿ ಸಂಚರಿಸಿತು.

14084005a ತತ್ರ ಪೂಜಾಂ ಯಥಾನ್ಯಾಯಂ ಪ್ರತಿಗೃಹ್ಯ ಸ ಪಾಂಡವಃ।
14084005c ಪುನರಾವೃತ್ಯ ಕೌಂತೇಯೋ ದಶಾರ್ಣಾನಗಮತ್ತದಾ।।

ಅಲ್ಲಿ ಯಥಾನ್ಯಾಯವಾಗಿ ಸತ್ಕಾರಗಳನ್ನು ಸ್ವೀಕರಿಸಿ ಪಾಂಡವ ಕೌಂತೇಯನು ಪುನಃ ಹಿಂದಿರುಗಿ ದಶಾರ್ಣದೇಶಕ್ಕೆ ಬಂದನು.

14084006a ತತ್ರ ಚಿತ್ರಾಂಗದೋ ನಾಮ ಬಲವಾನ್ವಸುಧಾಧಿಪಃ।
14084006c ತೇನ ಯುದ್ಧಮಭೂತ್ತಸ್ಯ ವಿಜಯಸ್ಯಾತಿಭೈರವಮ್।।

ಅಲ್ಲಿ ಚಿತ್ರಾಂಗದ ಎಂಬ ಹೆಸರಿನ ಬಲವಾನ್ ವಸುಧಾಧಿಪನೊಡನೆ ವಿಜಯ ಅರ್ಜುನನ ಅತಿಭೈರವ ಯುದ್ಧವು ನಡೆಯಿತು.

14084007a ತಂ ಚಾಪಿ ವಶಮಾನೀಯ ಕಿರೀಟೀ ಪುರುಷರ್ಷಭಃ।
14084007c ನಿಷಾದರಾಜ್ಞೋ ವಿಷಯಮೇಕಲವ್ಯಸ್ಯ ಜಗ್ಮಿವಾನ್।।

ಅವನನ್ನು ಕೂಡ ಪರಾಜಯಗೊಳಿಸಿ ಪುರುಷರ್ಷಭ ಕಿರೀಟಿಯು ನಿಷಾದರಾಜ ಏಕಲವ್ಯನ ರಾಜ್ಯಕ್ಕೆ ಬಂದನು.

14084008a ಏಕಲವ್ಯಸುತಶ್ಚೈನಂ ಯುದ್ಧೇನ ಜಗೃಹೇ ತದಾ।
14084008c ತತಶ್ಚಕ್ರೇ ನಿಷಾದೈಃ ಸ ಸಂಗ್ರಾಮಂ ರೋಮಹರ್ಷಣಮ್।।

ಏಕಲವ್ಯನ ಮಗನು ಅವನನ್ನು ಆಗ ಯುದ್ಧದ ಮೂಲಕವೇ ಸ್ವಾಗತಿಸಿದನು. ನಿಷಾದನೊಂದಿಗೆ ಅರ್ಜುನನು ರೋಮಾಂಚಕಾರೀ ಸಂಗ್ರಾಮವನ್ನು ನಡೆಸಿದನು.

14084009a ತತಸ್ತಮಪಿ ಕೌಂತೇಯಃ ಸಮರೇಷ್ವಪರಾಜಿತಃ।
14084009c ಜಿಗಾಯ ಸಮರೇ ವೀರೋ ಯಜ್ಞವಿಘ್ನಾರ್ಥಮುದ್ಯತಮ್।।

ಆಗ ಸಮರದಲ್ಲಿ ಸೋಲನ್ನೇ ಹೊಂದದಿದ್ದ ವೀರ ಕೌಂತೇಯನು ಯಜ್ಞಕ್ಕೆ ವಿಘ್ನವನ್ನುಂಟುಮಾಡಲು ತೊಡಗಿದ್ದ ಅವನನ್ನೂ ಕೂಡ ಸಮರದಲ್ಲಿ ಗೆದ್ದನು.

14084010a ಸ ತಂ ಜಿತ್ವಾ ಮಹಾರಾಜ ನೈಷಾದಿಂ ಪಾಕಶಾಸನಿಃ।
14084010c ಅರ್ಚಿತಃ ಪ್ರಯಯೌ ಭೂಯೋ ದಕ್ಷಿಣಂ ಸಲಿಲಾರ್ಣವಮ್।।

ಮಹಾರಾಜ! ನೈಷಾದಿಯನ್ನು ಗೆದ್ದು ಅವನಿಂದ ಪೂಜಿಸಲ್ಪಟ್ಟು ಪಾಕಶಾಸನಿಯು ಪುನಃ ದಕ್ಷಿಣಸಮುದ್ರದ ತೀರಪ್ರದೇಶಕ್ಕೆ ಹೋದನು.

14084011a ತತ್ರಾಪಿ ದ್ರವಿಡೈರಂಧ್ರೈ ರೌದ್ರೈರ್ಮಾಹಿಷಕೈರಪಿ।
14084011c ತಥಾ ಕೋಲ್ಲಗಿರೇಯೈಶ್ಚ ಯುದ್ಧಮಾಸೀತ್ಕಿರೀಟಿನಃ।।

ಅಲ್ಲಿಯೂ ಕೂಡ ದ್ರವಿಡ, ಅಂಧ್ರ, ರೌದ್ರ, ಮಾಹಿಷಕರು ಮತ್ತು ಕೋಲ್ಲಗಿರಿಯವರೊಂದಿಗೆ ಕಿರೀಟಿಯ ಯುದ್ಧವು ನಡೆಯಿತು.

14084012a ತುರಗಸ್ಯ ವಶೇನಾಥ ಸುರಾಷ್ಟ್ರಾನಭಿತೋ ಯಯೌ।
14084012c ಗೋಕರ್ಣಮಪಿ ಚಾಸಾದ್ಯ ಪ್ರಭಾಸಮಪಿ ಜಗ್ಮಿವಾನ್।।

ಕುದುರೆಯ ವಶದಲ್ಲಿಯೇ ಇದ್ದ ಅವನು ಸೌರಾಷ್ಟ್ರದೇಶಕ್ಕೆ ಹೋದನು. ಅಲ್ಲಿಂದ ಗೋಕರ್ಣ ಮತ್ತು ಪ್ರಭಾಸ ಕ್ಷೇತ್ರಗಳಿಗೂ ಹೋದನು.

14084013a ತತೋ ದ್ವಾರವತೀಂ ರಮ್ಯಾಂ ವೃಷ್ಣಿವೀರಾಭಿರಕ್ಷಿತಾಮ್।
14084013c ಆಸಸಾದ ಹಯಃ ಶ್ರೀಮಾನ್ಕುರುರಾಜಸ್ಯ ಯಜ್ಞಿಯಃ।।

ಅನಂತರ ಕುರುರಾಜನ ಯಜ್ಞದ ಆ ಶ್ರೀಮಂತ ಕುದುರೆಯು ವೃಷ್ಣಿವೀರರಿಂದ ರಕ್ಷಿತವಾದ ರಮ್ಯ ದ್ವಾರವತಿಯನ್ನು ತಲುಪಿತು.

14084014a ತಮುನ್ಮಥ್ಯ ಹಯಶ್ರೇಷ್ಠಂ ಯಾದವಾನಾಂ ಕುಮಾರಕಾಃ।
14084014c ಪ್ರಯಯುಸ್ತಾಂಸ್ತದಾ ರಾಜನ್ನುಗ್ರಸೇನೋ ನ್ಯವಾರಯತ್।।

ರಾಜನ್! ಯಾದವ ಕುಮಾರರು ಆ ಶ್ರೇಷ್ಠ ಕುದುರೆಯನ್ನು ಕಟ್ಟಿಹಾಕಲು ಮುಂದೆಬಂದಾಗ ಉಗ್ರಸೇನನು ಅವರನ್ನು ತಡೆದನು.

14084015a ತತಃ ಪುರ್ಯಾ ವಿನಿಷ್ಕ್ರಮ್ಯ ವೃಷ್ಣ್ಯಂಧಕಪತಿಸ್ತದಾ।
14084015c ಸಹಿತೋ ವಸುದೇವೇನ ಮಾತುಲೇನ ಕಿರೀಟಿನಃ।।

ಆಗ ವೃಷ್ಣಿ-ಅಂಧಕರ ರಾಜನು, ಕಿರೀಟಿಯ ಸೋದರ ಮಾವ ವಸುದೇವನೊಂದಿಗೆ ಪುರದಿಂದ ಹೊರಬಂದನು.

14084016a ತೌ ಸಮೇತ್ಯ ಕುರುಶ್ರೇಷ್ಠಂ ವಿಧಿವತ್ಪ್ರೀತಿಪೂರ್ವಕಮ್।
14084016c ಪರಯಾ ಭರತಶ್ರೇಷ್ಠಂ ಪೂಜಯಾ ಸಮವಸ್ಥಿತೌ।।
14084016E ತತಸ್ತಾಭ್ಯಾಮನುಜ್ಞಾತೋ ಯಯೌ ಯೇನ ಹಯೋ ಗತಃ।।

ಅವರಿಬ್ಬರೂ ಒಂದಾಗಿ ಕುರುಶ್ರೇಷ್ಠ ಭರತಶ್ರೇಷ್ಠನನ್ನು ವಿಧಿವತ್ತಾಗಿ ಪರಮ ಪ್ರೀತಿಪೂರ್ವಕವಾಗಿ ಸತ್ಕರಿಸಿದರು. ಅನಂತರ ಅವರಿಬ್ಬರಿಂದ ಅನುಮತಿಯನ್ನು ಪಡೆದು ಅರ್ಜುನನು ಕುದುರೆಯು ಎಲ್ಲಿಗೆ ಹೋಗುತ್ತಿತ್ತೋ ಅಲ್ಲಿಗೆ ಹೋದನು.

14084017a ತತಃ ಸ ಪಶ್ಚಿಮಂ ದೇಶಂ ಸಮುದ್ರಸ್ಯ ತದಾ ಹಯಃ।
14084017c ಕ್ರಮೇಣ ವ್ಯಚರತ್ ಸ್ಫೀತಂ ತತಃ ಪಂಚನದಂ ಯಯೌ।।

ಬಳಿಕ ಆ ಕುದುರೆಯು ಸಮುದ್ರದ ಪಶ್ಚಿಮ ತೀರದ ದೇಶದಲ್ಲಿ ಸಂಚರಿಸಿ, ಕ್ರಮೇಣವಾಗಿ ಪಂಚನದ ಪ್ರದೇಶಕ್ಕೆ ಬಂದಿತು.

14084018a ತಸ್ಮಾದಪಿ ಸ ಕೌರವ್ಯ ಗಾಂಧಾರವಿಷಯಂ ಹಯಃ।
14084018c ವಿಚಚಾರ ಯಥಾಕಾಮಂ ಕೌಂತೇಯಾನುಗತಸ್ತದಾ।।

ಕೌರವ್ಯ! ಗಾಂಧಾರದೇಶವನ್ನು ಪ್ರವೇಶಿಸಿ ಅಲ್ಲಿಯೂ ಕೂಡ ಕೌಂತೇಯನಿಂದ ಹಿಂಬಾಲಿಸಲ್ಪಟ್ಟ ಆ ಕುದುರೆಯು ಯಥೇಚ್ಛವಾಗಿ ಸಂಚರಿಸಿತು.

14084019a ತತ್ರ ಗಾಂಧಾರರಾಜೇನ ಯುದ್ಧಮಾಸೀನ್ಮಹಾತ್ಮನಃ।
14084019c ಘೋರಂ ಶಕುನಿಪುತ್ರೇಣ ಪೂರ್ವವೈರಾನುಸಾರಿಣಾ।।

ಅಲ್ಲಿ ಹಿಂದಿನ ವೈರವನ್ನೇ ಸಾಧಿಸುತ್ತಿದ್ದ ಶಕುನಿಯ ಮಗ ಗಾಂಧಾರರಾಜನೊಡನೆ ಮಹಾತ್ಮ ಅರ್ಜುನನ ಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಾನುಸರಣೇ ಚತುರಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣ ಎನ್ನುವ ಎಂಭತ್ನಾಲ್ಕನೇ ಅಧ್ಯಾಯವು.