083: ಅಶ್ವಾನುಸರಣೇ ಮಾಗಧಪರಾಜಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 83

ಸಾರ

ಜರಾಸಂಧನ ಮಗ ಮೇಘಸಂಧಿಯು ಕುದುರೆಯನ್ನು ಕಟ್ಟಿ ಅರ್ಜುನನೊಂದಿಗೆ ಯುದ್ಧಮಾಡಿದುದು (1-22). ಪರಾಜಿತನಾದ ಮಾಗಧನನ್ನು ಅರ್ಜುನನು ಯಜ್ಞಕ್ಕೆ ಆಹ್ವಾನಿಸಿ, ಕುದುರೆಯನ್ನನ್ನುಸರಿಸಿ ಮುಂದುವರೆದುದು (23-30).

14083001 ವೈಶಂಪಾಯನ ಉವಾಚ
14083001a ಸ ತು ವಾಜೀ ಸಮುದ್ರಾಂತಾಂ ಪರ್ಯೇತ್ಯ ಪೃಥಿವೀಮಿಮಾಮ್।
14083001c ನಿವೃತ್ತೋಽಭಿಮುಖೋ ರಾಜನ್ಯೇನ ನಾಗಾಹ್ವಯಂ ಪುರಮ್।।

ವೈಶಂಪಾಯನನು ಹೇಳಿದನು: “ರಾಜನ್! ಆ ಕುದುರೆಯಾದರೋ ಸಮುದ್ರಪರ್ಯಂತವಾಗಿ ಇಡೀ ಭೂಮಿಯನ್ನು ಸಂಚರಿಸಿ, ಹಿಂದಿರುಗಿ ಹಸ್ತಿನಾಪುರಕ್ಕೆ ಅಭಿಮುಖವಾಗಿ ಹೊರಟಿತು.

14083002a ಅನುಗಚ್ಚಂಶ್ಚ ತೇಜಸ್ವೀ ನಿವೃತ್ತೋಽಥ ಕಿರೀಟಭೃತ್।
14083002c ಯದೃಚ್ಚಯಾ ಸಮಾಪೇದೇ ಪುರಂ ರಾಜಗೃಹಂ ತದಾ।।

ಕಿರೀಟ ಧಾರೀ ತೇಜಸ್ವೀ ಅರ್ಜುನನೂ ಕೂಡ ಅದನ್ನು ಹಿಂಬಾಲಿಸಿಯೇ ಹೋಗುತ್ತಿದ್ದನು. ಆಗ ಅದು ದೈವೇಚ್ಛೆಯಂತೆ ರಾಜಗೃಹ ಪುರವನ್ನು ತಲುಪಿತು.

14083003a ತಮಭ್ಯಾಶಗತಂ ರಾಜಾ ಜರಾಸಂಧಾತ್ಮಜಾತ್ಮಜಃ।
14083003c ಕ್ಷತ್ರಧರ್ಮೇ ಸ್ಥಿತೋ ವೀರಃ ಸಮರಾಯಾಜುಹಾವ ಹ।।

ಕ್ಷತ್ರಧರ್ಮನಿರತನಾಗಿದ್ದ ವೀರ ಜರಾಸಂಧನ ಮೊಮ್ಮಗನು1 ಅದನ್ನು ಕಟ್ಟಿ ಯುದ್ಧಕ್ಕೆ ಆಹ್ವಾನಿಸಿದನು.

14083004a ತತಃ ಪುರಾತ್ಸ ನಿಷ್ಕ್ರಮ್ಯ ರಥೀ ಧನ್ವೀ ಶರೀ ತಲೀ।
14083004c ಮೇಘಸಂಧಿಃ ಪದಾತಿಂ ತಂ ಧನಂಜಯಮುಪಾದ್ರವತ್।।

ಅನಂತರ ರಥವನ್ನೇರಿ, ಧನುಸ್ಸು-ಶರಗಳನ್ನೂ ಭತ್ತಳಿಕೆಯನ್ನೂ ಹಿಡಿದು ಮೇಘಸಂಧಿಯು ಪುರದಿಂದ ಹೊರಟು ಪದಾತಿಯಾಗಿದ್ದ ಧನಂಜಯನನ್ನು ಆಕ್ರಮಣಿಸಿದನು.

14083005a ಆಸಾದ್ಯ ಚ ಮಹಾತೇಜಾ ಮೇಘಸಂಧಿರ್ಧನಂಜಯಮ್।
14083005c ಬಾಲಭಾವಾನ್ಮಹಾರಾಜ ಪ್ರೋವಾಚೇದಂ ನ ಕೌಶಲಾತ್।।

ಮಹಾರಾಜ! ಮಹಾತೇಜಸ್ವೀ ಮೇಘಸಂಧಿಯು ಧನಂಜಯನ ಬಳಿಸಾರಿ ಕೌಶಲವಿಲ್ಲದ ಬಾಲಭಾವದ ಈ ಮಾತನ್ನಾಡಿದನು:

14083006a ಕಿಮಯಂ ಚಾರ್ಯತೇ ವಾಜೀ ಸ್ತ್ರೀಮಧ್ಯ ಇವ ಭಾರತ।
14083006c ಹಯಮೇನಂ ಹರಿಷ್ಯಾಮಿ ಪ್ರಯತಸ್ವ ವಿಮೋಕ್ಷಣೇ।।

“ಭಾರತ! ಇಲ್ಲಿಯ ವರೆಗೆ ಈ ಕುದುರೆಯನ್ನು ಸ್ತ್ರೀಯರ ಮಧ್ಯದಲ್ಲಿ ನಡೆಸಿಕೊಂಡು ಬಂದಿರುವಂತಿದೆ! ಈ ಕುದುರೆಯನ್ನು ನಾನು ಅಪಹರಿಸುತ್ತೇನೆ. ಪ್ರಯತ್ನಪಟ್ಟು ಅದನ್ನು ಬಿಡಿಸಿಕೋ!

14083007a ಅದತ್ತಾನುನಯೋ ಯುದ್ಧೇ ಯದಿ ತ್ವಂ ಪಿತೃಭಿರ್ಮಮ।
14083007c ಕರಿಷ್ಯಾಮಿ ತವಾತಿಥ್ಯಂ ಪ್ರಹರ ಪ್ರಹರಾಮಿ ವಾ।।

ನನ್ನ ಪಿತೃಗಳು ಯುದ್ಧದಲ್ಲಿ ನಿನಗೆ ಅನುನಯವಾಗಿ ನಡೆದುಕೊಂಡಿದ್ದಿರಬಹುದು. ನಿನ್ನ ಆತಿಥ್ಯವನ್ನು ನಾನು ಸರಿಯಾಗಿ ಮಾಡುತ್ತೇನೆ. ನನ್ನ ಮೇಲೆ ಪ್ರಹರಿಸು ಅಥವಾ ನಾನು ನಿನ್ನ ಮೇಲೆ ಪ್ರಹರಿಸುತ್ತೇನೆ.”

14083008a ಇತ್ಯುಕ್ತಃ ಪ್ರತ್ಯುವಾಚೈನಂ ಪಾಂಡವಃ ಪ್ರಹಸನ್ನಿವ।
14083008c ವಿಘ್ನಕರ್ತಾ ಮಯಾ ವಾರ್ಯ ಇತಿ ಮೇ ವ್ರತಮಾಹಿತಮ್।।
14083009a ಭ್ರಾತ್ರಾ ಜ್ಯೇಷ್ಠೇನ ನೃಪತೇ ತವಾಪಿ ವಿದಿತಂ ಧ್ರುವಮ್।
14083009c ಪ್ರಹರಸ್ವ ಯಥಾಶಕ್ತಿ ನ ಮನ್ಯುರ್ವಿದ್ಯತೇ ಮಮ।।

ಇದಕ್ಕೆ ಪ್ರತಿಯಾಗಿ ಪಾಂಡವ ಅರ್ಜುನನು ನಗುತ್ತಿರುವನೋ ಎನ್ನುವಂತೆ ಇಂತೆಂದನು: “ನನ್ನ ಹಿರಿಯಣ್ಣ ನೃಪತಿಯು ಈ ಕುದುರೆಯ ಸಂಚಾರಕ್ಕೆ ವಿಘ್ನವನ್ನುಂಟುಮಾಡುವವರನ್ನು ತಡೆ ಎಂಬ ವ್ರತವನ್ನು ವಹಿಸಿರುವನು. ಇದು ನಿನಗೆ ನಿಶ್ಚಯವಾಗಿಯೂ ತಿಳಿದೇ ಇದೆ. ಯಥಾಶಕ್ತಿಯಾಗಿ ನೀನು ನನ್ನನ್ನು ಪ್ರಹರಿಸು. ನನಗೆ ಕೋಪವಾಗುವುದಿಲ್ಲ!”

14083010a ಇತ್ಯುಕ್ತಃ ಪ್ರಾಹರತ್ಪೂರ್ವಂ ಪಾಂಡವಂ ಮಗಧೇಶ್ವರಃ।
14083010c ಕಿರನ್ಶರಸಹಸ್ರಾಣಿ ವರ್ಷಾಣೀವ ಸಹಸ್ರದೃಕ್।।

ಹೀಗೆ ಹೇಳಲು ಮಗಧೇಶ್ವರನು ಮೊದಲು ಪಾಂಡವನ ಮೇಲೆ ಸಹಸ್ರಾಕ್ಷನು ಮಳೆಗರೆಯುವಂತೆ ಸಹಸ್ರ ಶರಗಳ ಮಳೆಯನ್ನು ಸುರಿಸಿದನು.

14083011a ತತೋ ಗಾಂಡೀವಭೃಚ್ಚೂರೋ ಗಾಂಡೀವಪ್ರೇಷಿತೈಃ ಶರೈಃ।
14083011c ಚಕಾರ ಮೋಘಾಂಸ್ತಾನ್ಬಾಣಾನಯತ್ನಾದ್ಭರತರ್ಷಭ।।

ಭರತರ್ಷಭ! ಆಗ ಗಾಂಡೀವಧಾರೀ ಶೂರ ಅರ್ಜುನನು ಗಾಂಡೀವದಿಂದ ಬಿಟ್ಟ ಶರಗಳಿಂದ ಸುಲಭವಾಗಿ ಆ ಶರಗಳನ್ನು ನಿರಸನಗೊಳಿಸಿದನು.

14083012a ಸ ಮೋಘಂ ತಸ್ಯ ಬಾಣೌಘಂ ಕೃತ್ವಾ ವಾನರಕೇತನಃ।
14083012c ಶರಾನ್ಮುಮೋಚ ಜ್ವಲಿತಾನ್ದೀಪ್ತಾಸ್ಯಾನಿವ ಪನ್ನಗಾನ್।।
14083013a ಧ್ವಜೇ ಪತಾಕಾದಂಡೇಷು ರಥಯಂತ್ರೇ ಹಯೇಷು ಚ।
14083013c ಅನ್ಯೇಷು ಚ ರಥಾಂಗೇಷು ನ ಶರೀರೇ ನ ಸಾರಥೌ।।

ಅವನ ಬಾಣಸಂಕೀರ್ಣಗಳನ್ನು ನಿರಸನಗೊಳಿಸಿ ವಾನರಕೇತನನು ಪನ್ನಗಗಳಂತೆ ಪ್ರಜ್ವಲಿಸುವ ಮುಖಗಳುಳ್ಳ ಶರಗಳನ್ನು ಅವನ ಶರೀರ ಮತ್ತು ಸಾರಥಿಗಳನ್ನು ಬಿಟ್ಟು - ಧ್ವಜ, ಪತಾಕದಂಡ, ರಥಯಂತ್ರ, ಅನ್ಯ ರಥಾಂಗಗಳು ಮತ್ತು ಕುದುರೆಗಳ ಮೇಲೆ ಪ್ರಯೋಗಿಸಿದನು.

14083014a ಸಂರಕ್ಷ್ಯಮಾಣಃ ಪಾರ್ಥೇನ ಶರೀರೇ ಫಲ್ಗುನಸ್ಯ ಹ।
14083014c ಮನ್ಯಮಾನಃ ಸ್ವವೀರ್ಯಂ ತನ್ಮಾಗಧಃ ಪ್ರಾಹಿಣೋಚ್ಚರಾನ್।।

ಪಾರ್ಥ ಫಲ್ಗುನನು ಅವನ ಶರೀರವನ್ನು ಹಾಗೆ ರಕ್ಷಿಸಲು, ತನ್ನ ವೀರ್ಯವೇ ಇದಕ್ಕೆ ಕಾರಣವೆಂದು ತಿಳಿದ ಮಾಗಧನು ಅವನನ್ನು ಶರಗಳಿಂದ ಪ್ರಹರಿಸಿದನು.

14083015a ತತೋ ಗಾಂಡೀವಭೃಚ್ಚೂರೋ ಮಾಗಧೇನ ಸಮಾಹತಃ।
14083015c ಬಭೌ ವಾಸಂತಿಕ ಇವ ಪಲಾಶಃ ಪುಷ್ಪಿತೋ ಮಹಾನ್।।

ಮಾಗಧನಿಂದ ಪ್ರಹರಿಸಲ್ಪಟ್ಟ ಗಾಂಡೀವಧಾರಿ ಶೂರ ಅರ್ಜುನನು ಆಗ ವಸಂತದಲ್ಲಿ ಹೂಬಿಟ್ಟ ದೊಡ್ಡ ಪಲಾಶವೃಕ್ಷದಂತೆ ಶೋಭಿಸಿದನು.

14083016a ಅವಧ್ಯಮಾನಃ ಸೋಽಭ್ಯಘ್ನನ್ಮಾಗಧಃ ಪಾಂಡವರ್ಷಭಮ್।
14083016c ತೇನ ತಸ್ಥೌ ಸ ಕೌರವ್ಯ ಲೋಕವೀರಸ್ಯ ದರ್ಶನೇ।।

ವಧಿಸದೇ ಇದ್ದ ಪಾಂಡವರ್ಷಭನನ್ನು ಮಾಗಧನು ಪ್ರಹರಿಸುತ್ತಿದ್ದುದರಿಂದಲೇ ಅವನು ಲೋಕವೀರ ಕೌರವ್ಯನ ಎದಿರು ಅಷ್ಟು ಹೊತ್ತು ಯುದ್ಧಮಾಡಲು ಸಾಧ್ಯವಾಯಿತು.

14083017a ಸವ್ಯಸಾಚೀ ತು ಸಂಕ್ರುದ್ಧೋ ವಿಕೃಷ್ಯ ಬಲವದ್ಧನುಃ।
14083017c ಹಯಾಂಶ್ಚಕಾರ ನಿರ್ದೇಹಾನ್ಸಾರಥೇಶ್ಚ ಶಿರೋಽಹರತ್।।

ಸಂಕ್ರುದ್ಧನಾದ ಸವ್ಯಸಾಚಿಯಾದರೋ ಧನುಸ್ಸನ್ನು ಬಲವಾಗಿ ಸೆಳೆದು ಕುದುರೆಗಳನ್ನು ಸಂಹರಿಸಿದನು ಮತ್ತು ಸಾರಥಿಯ ಶಿರವನ್ನು ಅಪಹರಿಸಿದನು.

14083018a ಧನುಶ್ಚಾಸ್ಯ ಮಹಚ್ಚಿತ್ರಂ ಕ್ಷುರೇಣ ಪ್ರಚಕರ್ತ ಹ।
14083018c ಹಸ್ತಾವಾಪಂ ಪತಾಕಾಂ ಚ ಧ್ವಜಂ ಚಾಸ್ಯ ನ್ಯಪಾತಯತ್।।

ಕ್ಷುರದಿಂದ ಅವನ ಚಿತ್ರಿತವಾಗಿದ್ದ ಮಹಾ ಧನುಸ್ಸನ್ನೂ ತುಂಡರಿಸಿದನು. ಅವನ ಹಸ್ತಾವಾಪವನ್ನೂ, ಪತಾಕೆ-ಧ್ವಜಗಳನ್ನೂ ಕೆಳಗುರುಳಿಸಿದನು.

14083019a ಸ ರಾಜಾ ವ್ಯಥಿತೋ ವ್ಯಶ್ವೋ ವಿಧನುರ್ಹತಸಾರಥಿಃ।
14083019c ಗದಾಮಾದಾಯ ಕೌಂತೇಯಮಭಿದುದ್ರಾವ ವೇಗವಾನ್।।

ಕುದುರೆಗಳನ್ನು, ಧನುಸ್ಸನ್ನೂ ಮತ್ತು ಸಾರಥಿಯನ್ನೂ ಕಳೆದುಕೊಂಡು ವ್ಯಥಿತನಾದ ರಾಜಾ ಮೇಘಸಂಧಿಯು ಗದೆಯನ್ನು ತೆಗೆದುಕೊಂಡು ಅದನ್ನು ವೇಗವಾಗಿ ಕೌಂತೇಯನ ಮೇಲೆ ಪ್ರಹರಿಸಿದನು.

14083020a ತಸ್ಯಾಪತತ ಏವಾಶು ಗದಾಂ ಹೇಮಪರಿಷ್ಕೃತಾಮ್।
14083020c ಶರೈಶ್ಚಕರ್ತ ಬಹುಧಾ ಬಹುಭಿರ್ಗೃಧ್ರವಾಜಿತೈಃ।।

ಬೀಳುವುದರೊಳಗೇ ಆ ಹೇಮಪರಿಷ್ಕೃತ ಗದೆಯನ್ನು ಅರ್ಜುನನು ಗೃಧ್ರರೆಕ್ಕೆಗಳುಳ್ಳ ಅನೇಕ ಶರಗಳಿಂದ ಅನೇಕ ಚೂರುಗಳನ್ನಾಗಿ ತುಂಡರಿಸಿದನು.

14083021a ಸಾ ಗದಾ ಶಕಲೀಭೂತಾ ವಿಶೀರ್ಣಮಣಿಬಂಧನಾ।
14083021c ವ್ಯಾಲೀ ನಿರ್ಮುಚ್ಯಮಾನೇವ ಪಪಾತಾಸ್ಯ ಸಹಸ್ರಧಾ।।

ಮಣಿಬಂಧನವು ಒಡೆದು ಆ ಗದೆಯು ಸಹಸ್ರ ಚುರುಗಳಾಗಿ ಮುಷ್ಟಿಯಿಂದ ಹೆಣ್ಣುಸರ್ಪವು ನುಸುಳುವಂತೆ ನುಸುಳಿ ಕೆಳಗೆ ಬಿದ್ದಿತು.

14083022a ವಿರಥಂ ತಂ ವಿಧನ್ವಾನಂ ಗದಯಾ ಪರಿವರ್ಜಿತಮ್।
14083022c ನೈಚ್ಚತ್ತಾಡಯಿತುಂ ಧೀಮಾನರ್ಜುನಃ ಸಮರಾಗ್ರಣೀಃ।।

ವಿರಥನೂ, ಧನುಸ್ಸು-ಗದೆಗಳಿಂದ ವರ್ಜಿತನೂ ಆಗಿದ್ದ ಅವನನ್ನು ಸಮರಾಗ್ರಣಿ ಧೀಮಾನ್ ಅರ್ಜುನನು ಇನ್ನೂ ಪ್ರಹರಿಸಲು ಇಚ್ಛಿಸಲಿಲ್ಲ.

14083023a ತತ ಏನಂ ವಿಮನಸಂ ಕ್ಷತ್ರಧರ್ಮೇ ಸಮಾಸ್ಥಿತಮ್।
14083023c ಸಾಂತ್ವಪೂರ್ವಮಿದಂ ವಾಕ್ಯಮಬ್ರವೀತ್ಕಪಿಕೇತನಃ।।

ಹೀಗೆ ಕ್ಷತ್ರಧರ್ಮದಲ್ಲಿ ನಿರತನಾಗಿದ್ದ ಮತ್ತು ವಿಮನಸ್ಕನಾಗಿದ್ದ ಅವನಿಗೆ ಕಪಿಕೇತನ ಅರ್ಜುನನು ಸಾಂತ್ವಪೂರ್ವಕ ಈ ಮಾತುಗಳನ್ನಾಡಿದನು:

14083024a ಪರ್ಯಾಪ್ತಃ ಕ್ಷತ್ರಧರ್ಮೋಽಯಂ ದರ್ಶಿತಃ ಪುತ್ರ ಗಮ್ಯತಾಮ್।
14083024c ಬಹ್ವೇತತ್ಸಮರೇ ಕರ್ಮ ತವ ಬಾಲಸ್ಯ ಪಾರ್ಥಿವ।।

“ಮಗೂ ಪಾರ್ಥಿವ! ನೀನು ಕ್ಷತ್ರಧರ್ಮವನ್ನು ಸಾಕಷ್ಟು ಪ್ರದರ್ಶಿಸಿರುವೆ! ಬಾಲಕನಾದ ನೀನು ಸಮರದಲ್ಲಿ ಅನೇಕ ಕರ್ಮಗಳನ್ನೆಸಗಿರುವೆ! ಹಿಂದಿರುಗು!

14083025a ಯುಧಿಷ್ಠಿರಸ್ಯ ಸಂದೇಶೋ ನ ಹಂತವ್ಯಾ ನೃಪಾ ಇತಿ।
14083025c ತೇನ ಜೀವಸಿ ರಾಜಂಸ್ತ್ವಮಪರಾದ್ಧೋಽಪಿ ಮೇ ರಣೇ।।

ರಾಜನ್! ನೃಪರನ್ನು ಸಂಹರಿಸಬಾರದೆಂದು ಯುಧಿಷ್ಠಿರನ ಸಂದೇಶವಾಗಿದೆ. ಆದುದರಿಂದ ರಣದಲ್ಲಿ ನೀನು ಅಪರಾಧವನ್ನೆಸಗಿದ್ದರೂ ಜೀವದಿಂದ ಉಳಿದುಕೊಂಡಿರುವೆ!”

14083026a ಇತಿ ಮತ್ವಾ ಸ ಚಾತ್ಮಾನಂ ಪ್ರತ್ಯಾದಿಷ್ಟಂ ಸ್ಮ ಮಾಗಧಃ।
14083026c ತಥ್ಯಮಿತ್ಯವಗಮ್ಯೈನಂ ಪ್ರಾಂಜಲಿಃ ಪ್ರತ್ಯಪೂಜಯತ್।।

ಆಗ ಮಾಗಧನು ತಾನು ಅರ್ಜುನನಿಂದ ನಿರಾಕೃತನಾದನೆಂದು ತಿಳಿದು ಅವನ ಮಾತನ್ನು ಸತ್ಯವೆಂದು ಸ್ವೀಕರಿಸಿ, ಅವನನ್ನು ಅಂಜಲೀಬದ್ಧನಾಗಿ ಪೂಜಿಸಿದನು.

14083027a ತಮರ್ಜುನಃ ಸಮಾಶ್ವಾಸ್ಯ ಪುನರೇವೇದಮಬ್ರವೀತ್।
14083027c ಆಗಂತವ್ಯಂ ಪರಾಂ ಚೈತ್ರೀಮಶ್ವಮೇಧೇ ನೃಪಸ್ಯ ನಃ।।

ಅರ್ಜುನನು ಅವನನ್ನು ಸಮಾಧಾನಗೊಳಿಸಿ ಪುನಃ ಇದನ್ನು ಹೇಳಿದನು: “ಬರುವ ಚೈತ್ರದಲ್ಲಿ ನೃಪನ ಅಶ್ವಮೇಧಕ್ಕೆ ನೀನು ಬರಬೇಕು!”

14083028a ಇತ್ಯುಕ್ತಃ ಸ ತಥೇತ್ಯುಕ್ತ್ವಾ ಪೂಜಯಾಮಾಸ ತಂ ಹಯಮ್।
14083028c ಫಲ್ಗುನಂ ಚ ಯುಧಾಂ ಶ್ರೇಷ್ಠಂ ವಿಧಿವತ್ಸಹದೇವಜಃ।।

ಇದಕ್ಕೆ ಹಾಗೆಯೇ ಆಗಲಿ ಎಂದು ಹೇಳಿ ಸಹದೇವನ ಮಗ ಮೇಘಸಂಧಿಯು ಆ ಕುದುರೆಯನ್ನು ಮತ್ತು ಯೋಧಶ್ರೇಷ್ಠ ಫಲ್ಗುನನನ್ನು ವಿಧಿವತ್ತಾಗಿ ಪೂಜಿಸಿದನು.

14083029a ತತೋ ಯಥೇಷ್ಟಮಗಮತ್ಪುನರೇವ ಸ ಕೇಸರೀ।
14083029c ತತಃ ಸಮುದ್ರತೀರೇಣ ವಂಗಾನ್ಪುಂಡ್ರಾನ್ಸಕೇರಲಾನ್।।
14083030a ತತ್ರ ತತ್ರ ಚ ಭೂರೀಣಿ ಮ್ಲೇಚ್ಚಸೈನ್ಯಾನ್ಯನೇಕಶಃ।
14083030c ವಿಜಿಗ್ಯೇ ಧನುಷಾ ರಾಜನ್ಗಾಂಡೀವೇನ ಧನಂಜಯಃ।।

ಅನಂತರ ಆ ಕುದುರೆಯು ಯಥೇಚ್ಛವಾಗಿ ಪುನಃ ಸಂಚರಿಸತೊಡಗಿತು. ಸಮುದ್ರತೀರದಲ್ಲಿಯೇ ಮುಂದೆ ಹೋಗಿ ವಂಗ-ಪುಂಡ್ರ-ಕೇರಳಗಳಿಗೆ ಸಂಚರಿಸಿತು. ರಾಜನ್! ಅಲ್ಲಲ್ಲಿ ಅನೇಕ ಮ್ಲೇಚ್ಛ ಸೇನೆಗಳನ್ನು ಧನಂಜಯನು ತನ್ನ ಗಾಂಡೀವ ಧನುಸ್ಸಿನಿಂದ ಗೆದ್ದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಾನುಸರಣೇ ಮಾಗಧಪರಾಜಯೇ ತ್ರ್ಯಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣೇ ಮಾಗಧಪರಾಜಯ ಎನ್ನುವ ಎಂಭತ್ಮೂರನೇ ಅಧ್ಯಾಯವು.


  1. ಜರಾಸಂಧನ ಮಗ ಸಹದೇವನ ಮಗ ಮೇಘಸಂಧಿ. ↩︎