082: ಅಶ್ವಾನುಸರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 82

ಸಾರ

ಉಲೂಪಿಯು ಬಭೃವಾಹನನಿಂದ ಅರ್ಜುನನು ಹತನಾದ ಕಾರಣವನ್ನು ತಿಳಿಸಿದುದು (1-21). ಅರ್ಜುನನು ಬಭ್ರುವಾಹನನನ್ನು ಅಶ್ವಮೇಧ ಯಾಗಕ್ಕೆ ಆಮಂತ್ರಿಸಿ ಕುದುರೆಯನ್ನನುಸರಿಸಿ ಮುಂದುವರೆದುದು (22-32).

14082001 ಅರ್ಜುನ ಉವಾಚ
14082001a ಕಿಮಾಗಮನಕೃತ್ಯಂ ತೇ ಕೌರವ್ಯಕುಲನಂದಿನಿ।
14082001c ಮಣಿಪೂರಪತೇರ್ಮಾತುಸ್ತಥೈವ ಚ ರಣಾಜಿರೇ।।

ಅರ್ಜುನನು ಹೇಳಿದನು: “ಕೌರವ್ಯಕುಲನಂದಿನಿ! ನೀನು ಮತ್ತು ಮಣಿಪೂರಪತಿಯ ತಾಯಿ ಚಿತ್ರಾಂಗದೆಯು ರಣಾಂಗಣಕ್ಕೆ ಏಕೆ ಬಂದಿರಿ?

14082002a ಕಚ್ಚಿತ್ಕುಶಲಕಾಮಾಸಿ ರಾಜ್ಞೋಽಸ್ಯ ಭುಜಗಾತ್ಮಜೇ।
14082002c ಮಮ ವಾ ಚಂಚಲಾಪಾಂಗೇ ಕಚ್ಚಿತ್ತ್ವಂ ಶುಭಮಿಚ್ಚಸಿ।।

ಭುಜಗಾತ್ಮಜೇ! ಈ ರಾಜಾ ಬಭ್ರುವಾಹನನಿಗೆ ಕುಶಲವನ್ನೇ ಬಯಸುತ್ತಿರುವೆಯಲ್ಲವೇ? ಚಂಚಲಕಟಾಕ್ಷವುಳ್ಳವಳೇ! ನನಗೂ ಕೂಡ ಶುಭವನ್ನೇ ಬಯಸುತ್ತೀಯಲ್ಲವೇ?

14082003a ಕಚ್ಚಿತ್ತೇ ಪೃಥುಲಶ್ರೋಣಿ ನಾಪ್ರಿಯಂ ಶುಭದರ್ಶನೇ।
14082003c ಅಕಾರ್ಷಮಹಮಜ್ಞಾನಾದಯಂ ವಾ ಬಭ್ರುವಾಹನಃ।।

ಪೃಥುಲಶ್ರೋಣೀ! ಶುಭದರ್ಶನೇ! ನಾನಾಗಲೀ ಬಭ್ರುವಾಹನನಾಗಲೀ ಅಜ್ಞಾನದಿಂದ ನಿನಗೆ ಅಪ್ರಿಯವಾದುದನ್ನು ಏನನ್ನೂ ಮಾಡಿಲ್ಲ ತಾನೇ?

14082004a ಕಚ್ಚಿಚ್ಚ ರಾಜಪುತ್ರೀ ತೇ ಸಪತ್ನೀ ಚೈತ್ರವಾಹಿನೀ।
14082004c ಚಿತ್ರಾಂಗದಾ ವರಾರೋಹಾ ನಾಪರಾಧ್ಯತಿ ಕಿಂ ಚನ।।

ನಿನ್ನ ಸವತಿ ಚಿತ್ರವಾಹನನ ಮಗಳು ರಾಜಪುತ್ರೀ ವರಾರೋಹೇ ಚಿತ್ರಾಂಗದೆಯು ನಿನ್ನ ಕುರಿತು ಯಾವುದೇ ರೀತಿಯ ಅಪರಾಧವನ್ನೂ ಎಸಗಿಲ್ಲ ತಾನೇ?”

14082005a ತಮುವಾಚೋರಗಪತೇರ್ದುಹಿತಾ ಪ್ರಹಸಂತ್ಯಥ।
14082005c ನ ಮೇ ತ್ವಮಪರಾದ್ಧೋಽಸಿ ನ ನೃಪೋ ಬಭ್ರುವಾಹನಃ।।
14082005E ನ ಜನಿತ್ರೀ ತಥಾಸ್ಯೇಯಂ ಮಮ ಯಾ ಪ್ರೇಷ್ಯವತ್ ಸ್ಥಿತಾ।।

ಉರಗಪತಿಯ ಮಗಳು ನಗುತ್ತಾ ಅವನಿಗೆ ಉತ್ತರಿಸಿದಳು: “ನೀನಾಗಲೀ, ನೃಪ ಬಭ್ರುವಾಹನನಾಗಲೀ ಮತ್ತು ನನ್ನ ಸೇವಕಿಯಂತೆ ನಿಂತಿರುವ ಅವನ ತಾಯಿ ಚಿತ್ರಾಂಗದೆಯಾಗಲೀ ನನ್ನ ಕುರಿತು ಅಪರಾಧವನ್ನೆಸಗಿಲ್ಲ!

14082006a ಶ್ರೂಯತಾಂ ಯದ್ಯಥಾ ಚೇದಂ ಮಯಾ ಸರ್ವಂ ವಿಚೇಷ್ಟಿತಮ್।
14082006c ನ ಮೇ ಕೋಪಸ್ತ್ವಯಾ ಕಾರ್ಯಃ ಶಿರಸಾ ತ್ವಾಂ ಪ್ರಸಾದಯೇ।।

ನಾನು ಇಲ್ಲಿಗೆ ಬಂದು ಮಾಡಿದುದೆಲ್ಲವನ್ನೂ ಕೇಳಬೇಕು. ಆದರೆ ನೀನು ಕೋಪಗೊಳ್ಳಬಾರದು. ಶಿರಸಾ ನಮಸ್ಕರಿಸಿ ಬೇಡಿಕೊಳ್ಳುತ್ತೇನೆ.

14082007a ತ್ವತ್ಪ್ರೀತ್ಯರ್ಥಂ ಹಿ ಕೌರವ್ಯ ಕೃತಮೇತನ್ ಮಯಾನಘ।
14082007c ಯತ್ತಚ್ಚೃಣು ಮಹಾಬಾಹೋ ನಿಖಿಲೇನ ಧನಂಜಯ।।

ಕೌರವ್ಯ! ಅನಘ! ಮಹಾಬಾಹೋ! ಧನಂಜಯ! ನಿನ್ನ ಪ್ರೀತಿಗೋಸ್ಕರವಾಗಿಯೇ ನಾನು ಇವೆಲ್ಲವನ್ನೂ ಮಾಡಿದೆನು. ಎಲ್ಲವನ್ನೂ ಕೇಳು!

14082008a ಮಹಾಭಾರತಯುದ್ಧೇ ಯತ್ತ್ವಯಾ ಶಾಂತನವೋ ನೃಪಃ।
14082008c ಅಧರ್ಮೇಣ ಹತಃ ಪಾರ್ಥ ತಸ್ಯೈಷಾ ನಿಷ್ಕೃತಿಃ ಕೃತಾ।।

ಪಾರ್ಥ! ಮಹಾಭಾರತ ಯುದ್ಧದಲ್ಲಿ ನೀನು ನೃಪ ಶಾಂತನವನನ್ನು ಅಧರ್ಮದಿಂದ ಸಂಹರಿಸಿದೆ. ಅದಕ್ಕೆ ಪ್ರಾಯಶ್ಚಿತ್ತವಾಗಿ ನಾನು ಇದನ್ನು ಮಾಡಬೇಕಾಯಿತು.

14082009a ನ ಹಿ ಭೀಷ್ಮಸ್ತ್ವಯಾ ವೀರ ಯುಧ್ಯಮಾನೋ ನಿಪಾತಿತಃ।
14082009c ಶಿಖಂಡಿನಾ ತು ಸಂಸಕ್ತಸ್ತಮಾಶ್ರಿತ್ಯ ಹತಸ್ತ್ವಯಾ।।

ವೀರ! ನಿನ್ನೊಡನೆ ನೇರವಾಗಿ ಯುದ್ಧಮಾಡುತ್ತಿರುವಾಗ ಭೀಷ್ಮನು ಕೆಳಗುರುಳಲಿಲ್ಲ. ಅವನೊಡನೆ ಯುದ್ಧಮಾಡುತ್ತಿದ್ದ ಶಿಖಂಡಿಯನ್ನು ಆಶ್ರಯಿಸಿ ನೀನು ಅವನನ್ನು ಕೆಳಗುರುಳಿಸಿದೆ!

14082010a ತಸ್ಯ ಶಾಂತಿಮಕೃತ್ವಾ ತು ತ್ಯಜೇಸ್ತ್ವಂ ಯದಿ ಜೀವಿತಮ್।
14082010c ಕರ್ಮಣಾ ತೇನ ಪಾಪೇನ ಪತೇಥಾ ನಿರಯೇ ಧ್ರುವಮ್।।

ಅದಕ್ಕೆ ಶಾಂತಿಯನ್ನು ಮಾಡಿಕೊಳ್ಳದೇ ನೀನು ಜೀವವನ್ನು ತ್ಯಜಿಸಿದ್ದೇ ಆದರೆ ನಿನ್ನ ಪಾಪಕರ್ಮದಿಂದ ನೀನು ನಿಶ್ಚಯವಾಗಿಯೂ ನರಕದಲ್ಲಿ ಬೀಳುತ್ತಿದ್ದೆ!

14082011a ಏಷಾ ತು ವಿಹಿತಾ ಶಾಂತಿಃ ಪುತ್ರಾದ್ಯಾಂ ಪ್ರಾಪ್ತವಾನಸಿ।
14082011c ವಸುಭಿರ್ವಸುಧಾಪಾಲ ಗಂಗಯಾ ಚ ಮಹಾಮತೇ।।

ಮಹಾಮತೇ! ವಸುಧಾಪಾಲ! ವಸುಗಳು ಮತ್ತು ಗಂಗೆಯೂ ಕೂಡ ಪುತ್ರನಿಂದ ಪರಾಜಯ ಹೊಂದುವ ಪ್ರಾಯಶ್ಚಿತ್ತವನ್ನೇ ನಿನಗೆ ವಿಧಿಸಿದ್ದರು.

14082012a ಪುರಾ ಹಿ ಶ್ರುತಮೇತದ್ವೈ ವಸುಭಿಃ ಕಥಿತಂ ಮಯಾ।
14082012c ಗಂಗಾಯಾಸ್ತೀರಮಾಗಮ್ಯ ಹತೇ ಶಾಂತನವೇ ನೃಪೇ।।

ಹಿಂದೆ ನೃಪ ಶಾಂತನವನು ಹತನಾದ ನಂತರ ಗಂಗಾತೀರಕ್ಕೆ ಬಂದಿದ್ದಾಗ ವಸುಗಳು ಹೇಳುತ್ತಿದ್ದ ಈ ಮಾತನ್ನು ನಾನು ಕೇಳಿಸಿಕೊಂಡಿದ್ದೆನು.

14082013a ಆಪ್ಲುತ್ಯ ದೇವಾ ವಸವಃ ಸಮೇತ್ಯ ಚ ಮಹಾನದೀಮ್।
14082013c ಇದಮೂಚುರ್ವಚೋ ಘೋರಂ ಭಾಗೀರಥ್ಯಾ ಮತೇ ತದಾ।।

ದೇವ ವಸುಗಳು ಮಹಾನದಿಯಲ್ಲಿ ಮಿಂದು ಭಾಗೀರಥಿಯ ಸಮ್ಮತಿಯಂತೆ ಈ ಘೋರ ಮಾತುಗಳನ್ನಾಡಿದ್ದರು:

14082014a ಏಷ ಶಾಂತನವೋ ಭೀಷ್ಮೋ ನಿಹತಃ ಸವ್ಯಸಾಚಿನಾ।
14082014c ಅಯುಧ್ಯಮಾನಃ ಸಂಗ್ರಾಮೇ ಸಂಸಕ್ತೋಽನ್ಯೇನ ಭಾಮಿನಿ।।

“ಭಾಮಿನಿ! ಸಂಗ್ರಾಮದಲ್ಲಿ ಶಾಂತನವ ಭೀಷ್ಮನು ಅನ್ಯನೊಡನೆ ಯುದ್ಧದಲ್ಲಿ ತೊಡಗಿದ್ದಾಗ ಸವ್ಯಸಾಚಿಯು ಅವನನ್ನು ಹೊಡೆದುರುಳಿಸಿದನು.

14082015a ತದನೇನಾಭಿಷಂಗೇಣ ವಯಮಪ್ಯರ್ಜುನಂ ಶುಭೇ।
14082015c ಶಾಪೇನ ಯೋಜಯಾಮೇತಿ ತಥಾಸ್ತ್ವಿತಿ ಚ ಸಾಬ್ರವೀತ್।।

ಶುಭೇ! ಅವನ ಈ ಅಪರಾಧಕ್ಕಾಗಿ ಇಂದು ನಾವು ಅರ್ಜುನನಿಗೆ ಶಾಪವನ್ನು ಕೊಡುತ್ತೇವೆ!” ಅದಕ್ಕೆ ಅವಳು “ಹಾಗೆಯೇ ಆಗಲಿ!” ಎಂದಳು.

14082016a ತದಹಂ ಪಿತುರಾವೇದ್ಯ ಭೃಶಂ ಪ್ರವ್ಯಥಿತೇಂದ್ರಿಯಾ।
14082016c ಅಭವಂ ಸ ಚ ತಚ್ಚ್ರುತ್ವಾ ವಿಷಾದಮಗಮತ್ಪರಮ್।।

ಅತ್ಯಂತ ದುಃಖಿತಳಾದ ನಾನು ನಡೆದುದನ್ನು ತಂದೆಗೆ ತಿಳಿಸಿದೆನು. ಅದನ್ನು ಕೇಳಿ ಅವನೂ ಕೂಡ ಅತ್ಯಂತ ದುಃಖಿತನಾದನು.

14082017a ಪಿತಾ ತು ಮೇ ವಸೂನ್ಗತ್ವಾ ತ್ವದರ್ಥಂ ಸಮಯಾಚತ।
14082017c ಪುನಃ ಪುನಃ ಪ್ರಸಾದ್ಯೈನಾಂಸ್ತ ಏನಮಿದಮಬ್ರುವನ್।।

ನನ್ನ ತಂದೆಯು ನಿನಗೋಸ್ಕರವಾಗಿ ವಸುಗಳಲ್ಲಿ ಹೋಗಿ ಬೇಡಿಕೊಂಡನು. ಪುನಃ ಪುನಃ ಬೇಡಿಕೊಂಡನಂತರ ಅವರು ಅವನಿಗೆ ಹೀಗೆ ಹೇಳಿದರು:

14082018a ಪುನಸ್ತಸ್ಯ1 ಮಹಾಭಾಗ ಮಣಿಪೂರೇಶ್ವರೋ ಯುವಾ।
14082018c ಸ ಏನಂ ರಣಮಧ್ಯಸ್ಥಂ ಶರೈಃ ಪಾತಯಿತಾ ಭುವಿ।।

“ಮಹಾಭಾಗ! ಇವನು ರಣಮಧ್ಯದಲ್ಲಿರುವಾಗ ಯುವಕ ಮಣಿಪೂರೇಶ್ವನು ಇವನನ್ನು ಪುನಃ ಶರಗಳಿಂದ ಹೊಡೆದು ಭೂಮಿಗುರುಳಿಸುತ್ತಾನೆ!

14082019a ಏವಂ ಕೃತೇ ಸ ನಾಗೇಂದ್ರ ಮುಕ್ತಶಾಪೋ ಭವಿಷ್ಯತಿ।
14082019c ಗಚ್ಚೇತಿ ವಸುಭಿಶ್ಚೋಕ್ತೋ ಮಮ ಚೇದಂ ಶಶಂಸ ಸಃ।।

ನಾಗೇಂದ್ರ! ಇದಾದನಂತರ ಅವನು ಶಾಪದಿಂದ ಮುಕ್ತನಾಗುತ್ತಾನೆ. ನೀನು ಈಗ ಹೋಗು!” ಎಂದು ವಸುಗಳು ಅವನಿಗೆ ಹೇಳಿದರು. ಅದನ್ನು ಅವನು ನನಗೆ ಹೇಳಿದನು.

14082020a ತಚ್ಚ್ರುತ್ವಾ ತ್ವಂ ಮಯಾ ತಸ್ಮಾಚ್ಚಾಪಾದಸಿ ವಿಮೋಕ್ಷಿತಃ।
14082020c ನ ಹಿ ತ್ವಾಂ ದೇವರಾಜೋಽಪಿ ಸಮರೇಷು ಪರಾಜಯೇತ್।।

ಅದನ್ನು ಕೇಳಿ ನಾನು ನಿನ್ನನ್ನು ಆ ಶಾಪದಿಂದ ವಿಮೋಚನಗೊಳಿಸಿದ್ದೇನೆ. ದೇವರಾಜನೂ ಕೂಡ ನಿನ್ನನ್ನು ಸಮರದಲ್ಲಿ ಪರಾಜಯಗೊಳಿಸಲಾರನು.

14082021a ಆತ್ಮಾ ಪುತ್ರಃ ಸ್ಮೃತಸ್ತಸ್ಮಾತ್ತೇನೇಹಾಸಿ ಪರಾಜಿತಃ।
14082021c ನಾತ್ರ ದೋಷೋ ಮಮ ಮತಃ ಕಥಂ ವಾ ಮನ್ಯಸೇ ವಿಭೋ।।

ವಿಭೋ! ಪುತ್ರನು ಆತ್ಮನಿಗೆ ಸಮಾನ ಎಂದು ಸ್ಮೃತಿಗಳು ಹೇಳುತ್ತವೆ. ಆದುದರಿಂದ ಬಭ್ರುವಾಹನನಿಂದ ನೀನು ಪರಾಜಿತನಾಗಿರುವುದರಲ್ಲಿ ನಿನ್ನ ದೋಷವು ಸ್ವಲ್ಪವೂ ಇಲ್ಲವೆಂದು ನನ್ನ ಅಭಿಪ್ರಾಯ. ನೀನು ಹೇಗೆ ಇದನ್ನು ತಿಳಿದುಕೊಳ್ಳುತ್ತೀಯೋ?”

14082022a ಇತ್ಯೇವಮುಕ್ತೋ ವಿಜಯಃ ಪ್ರಸನ್ನಾತ್ಮಾಬ್ರವೀದಿದಮ್।
14082022c ಸರ್ವಂ ಮೇ ಸುಪ್ರಿಯಂ ದೇವಿ ಯದೇತತ್ಕೃತವತ್ಯಸಿ।।

ಇದನ್ನು ಕೇಳಿ ಪ್ರಸನ್ನಾತ್ಮನಾದ ವಿಜಯ ಅರ್ಜುನನು ಹೀಗೆ ಹೇಳಿದನು: “ದೇವಿ! ನೀನು ನಡೆಸಿದುದೆಲ್ಲವೂ ನನಗೆ ಸುಪ್ರಿಯವಾಗಿಯೇ ಇವೆ!”

14082023a ಇತ್ಯುಕ್ತ್ವಾಥಾಬ್ರವೀತ್ಪುತ್ರಂ ಮಣಿಪೂರೇಶ್ವರಂ ಜಯಃ।
14082023c ಚಿತ್ರಾಂಗದಾಯಾಃ ಶೃಣ್ವಂತ್ಯಾಃ ಕೌರವ್ಯದುಹಿತುಸ್ತಥಾ।।

ಹೀಗೆ ಹೇಳಿ ಜಯ ಅರ್ಜುನನು ಕೌರವ್ಯಸೊಸೆ ಚಿತ್ರಾಂಗದೆಗೆ ಕೇಳಿಸುವಂತೆ ಮಗ ಮಣಿಪೂರೇಶ್ವರನಿಗೆ ಇಂತೆಂದನು:

14082024a ಯುಧಿಷ್ಠಿರಸ್ಯಾಶ್ವಮೇಧಃ ಪರಾಂ ಚೈತ್ರೀಂ ಭವಿಷ್ಯತಿ।
14082024c ತತ್ರಾಗಚ್ಚೇಃ ಸಹಾಮಾತ್ಯೋ ಮಾತೃಭ್ಯಾಂ ಸಹಿತೋ ನೃಪ।।

“ಬರುವ ಚೈತ್ರದಲ್ಲಿ ಯುಧಿಷ್ಠಿರನ ಅಶ್ವಮೇಧವು ನಡೆಯಲಿದೆ. ನೃಪ! ಅದಕ್ಕೆ ತಾಯಂದಿರಿಬ್ಬರು ಮತ್ತು ಅಮಾತ್ಯರೊಂದಿಗೆ ಬರಬೇಕು.”

14082025a ಇತ್ಯೇವಮುಕ್ತಃ ಪಾರ್ಥೇನ ಸ ರಾಜಾ ಬಭ್ರುವಾಹನಃ।
14082025c ಉವಾಚ ಪಿತರಂ ಧೀಮಾನಿದಮಸ್ರಾವಿಲೇಕ್ಷಣಃ।।

ಪಾರ್ಥನು ಹೀಗೆ ಹೇಳಲು ಧೀಮಾನ್ ರಾಜಾ ಬಭ್ರುವಾಹನನು ಕಂಬನಿದುಂಬಿದ ಕಣ್ಣುಗಳುಳ್ಳವನಾಗಿ ತಂದೆಗೆ ಹೇಳಿದನು:

14082026a ಉಪಯಾಸ್ಯಾಮಿ ಧರ್ಮಜ್ಞ ಭವತಃ ಶಾಸನಾದಹಮ್।
14082026c ಅಶ್ವಮೇಧೇ ಮಹಾಯಜ್ಞೇ ದ್ವಿಜಾತಿಪರಿವೇಷಕಃ।।

“ಧರ್ಮಜ್ಞ! ನಿನ್ನ ಶಾಸನದಂತೆ ನಾನು ಬರುತ್ತೇನೆ. ಅಶ್ವಮೇಧ ಮಹಾಯಜ್ಞದಲ್ಲಿ ನಾನು ದ್ವಿಜಾತಿಯವರಿಗೆ ಸೇವಕನಾಗಿರುತ್ತೇನೆ.

14082027a ಮಮ ತ್ವನುಗ್ರಹಾರ್ಥಾಯ ಪ್ರವಿಶಸ್ವ ಪುರಂ ಸ್ವಕಮ್।
14082027c ಭಾರ್ಯಾಭ್ಯಾಂ ಸಹ ಶತ್ರುಘ್ನ ಮಾ ಭೂತ್ತೇಽತ್ರ ವಿಚಾರಣಾ।।

ಶತ್ರುಘ್ನ! ನನ್ನ ಮೇಲೆ ಅನುಗ್ರಹ ತೋರಿಸುವ ಸಲುವಾಗಿ ಪತ್ನಿಯರಿಬ್ಬರೊಂದಿಗೆ ನಿನ್ನದೇ ಆದ ಈ ಪುರವನ್ನು ಪ್ರವೇಶಿಸು. ಅದರ ಕುರಿತು ವಿಚಾರಿಸಬೇಡ!

14082028a ಉಷಿತ್ವೇಹ ವಿಶಲ್ಯಸ್ತ್ವಂ ಸುಖಂ ಸ್ವೇ ವೇಶ್ಮನಿ ಪ್ರಭೋ।
14082028c ಪುನರಶ್ವಾನುಗಮನಂ ಕರ್ತಾಸಿ ಜಯತಾಂ ವರ।।

ಪ್ರಭೋ! ವಿಜಯಿಗಳಲ್ಲಿ ಶ್ರೇಷ್ಠನೇ! ನಿನ್ನದೇ ಮನೆಯಲ್ಲಿ ಒಂದು ರಾತ್ರಿಯನ್ನು ಸುಖವಾಗಿ ಕಳೆದು ನಾಳೆ ಪುನಃ ಅಶ್ವವನ್ನು ಹಿಂಬಾಲಿಸಿ ಹೋಗಬಹುದು.”

14082029a ಇತ್ಯುಕ್ತಃ ಸ ತು ಪುತ್ರೇಣ ತದಾ ವಾನರಕೇತನಃ।
14082029c ಸ್ಮಯನ್ಪ್ರೋವಾಚ ಕೌಂತೇಯಸ್ತದಾ ಚಿತ್ರಾಂಗದಾಸುತಮ್।।

ಪುತ್ರನು ಹೀಗೆ ಹೇಳಲು ವಾನರಕೇತನ ಕೌಂತೇಯನು ಮುಗುಳ್ನಗುತ್ತಾ ಚಿತ್ರಾಂಗದ ಸುತ ಮಗನಿಗೆ ಹೇಳಿದನು:

14082030a ವಿದಿತಂ ತೇ ಮಹಾಬಾಹೋ ಯಥಾ ದೀಕ್ಷಾಂ ಚರಾಮ್ಯಹಮ್।
14082030c ನ ಸ ತಾವತ್ಪ್ರವೇಕ್ಷ್ಯಾಮಿ ಪುರಂ ತೇ ಪೃಥುಲೋಚನ।।

“ಮಹಾಬಾಹೋ! ಪೃಥುಲೋಚನ! ದೀಕ್ಷಾಬದ್ಧನಾಗಿ ನಾನು ತಿರುಗಾಡುತ್ತಿರುವೆನೆನ್ನುವುದು ನಿನಗೆ ತಿಳಿದೇ ಇದೆ. ಆದು ಮುಗಿಯುವವರೆಗೆ ನಾನು ನಿನ್ನ ಪುರವನ್ನು ಪ್ರವೇಶಿಸಲಾರೆ.

14082031a ಯಥಾಕಾಮಂ ಪ್ರಯಾತ್ಯೇಷ ಯಜ್ಞಿಯಶ್ಚ ತುರಂಗಮಃ।
14082031c ಸ್ವಸ್ತಿ ತೇಽಸ್ತು ಗಮಿಷ್ಯಾಮಿ ನ ಸ್ಥಾನಂ ವಿದ್ಯತೇ ಮಮ।।

ಯಜ್ಞದ ಈ ಕುದುರೆಯು ಮನಬಂದಂತೆ ಹೋಗುತ್ತಿರುತ್ತಿದೆ. ಆದುದರಿಂದ ನನಗೆ ನಿರ್ದಿಷ್ಟ ಸ್ಥಾನವೆನ್ನುವುದೂ ಇಲ್ಲ. ಹೊರಡುತ್ತೇನೆ. ನಿನಗೆ ಮಂಗಳವಾಗಲಿ!”

14082032a ಸ ತತ್ರ ವಿಧಿವತ್ತೇನ ಪೂಜಿತಃ ಪಾಕಶಾಸನಿಃ।
14082032c ಭಾರ್ಯಾಭ್ಯಾಮಭ್ಯನುಜ್ಞಾತಃ ಪ್ರಾಯಾದ್ ಭರತಸತ್ತಮಃ।।

ಅಲ್ಲಿಯೇ ವಿಧಿವತ್ತಾಗಿ ಪೂಜಿತನಾದ ಪಾಕಶಾಸನಿ ಭರತಸತ್ತಮನು ಪತ್ನಿಯಿಬ್ಬರಿಂದಲೂ ಬೀಳ್ಕೊಂಡು ಹೊರಟನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಾನುಸರಣೇ ದ್ವಾಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣ ಎನ್ನುವ ಎಂಭತ್ತೆರಡನೇ ಅಧ್ಯಾಯವು.


  1. ಪುತ್ರಸ್ತಸ್ಯ ಎಂಬ ಪಾಠಾಂತರವಿದೆ. ↩︎