ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 81
ಸಾರ
ಉಲೂಪಿಯು ನಾಗಲೋಕದಿಂದ ಸಂಜೀವಿನೀ ಮಣಿಯನ್ನು ತರಿಸಿ, ಅದರಿಂದ ಅರ್ಜುನನನ್ನು ಪುನರ್ಜೀವಗೊಳಿಸಿದುದು (1-12). ಎಚ್ಚೆತ್ತ ಅರ್ಜುನನು ರಣಭೂಮಿಯಲ್ಲಿ ಉಲೂಪಿ-ಚಿತ್ರಾಂಗದೆಯರನ್ನು ನೋಡಿ ವಿಸ್ಮಿತನಾಗಿ ಬಭ್ರುವಾಹನನನ್ನು ಪ್ರಶ್ನಿಸಿದುದು (13-21).
14081001 ವೈಶಂಪಾಯನ ಉವಾಚ
14081001a ಪ್ರಾಯೋಪವಿಷ್ಟೇ ನೃಪತೌ ಮಣಿಪೂರೇಶ್ವರೇ ತದಾ।
14081001c ಪಿತೃಶೋಕಸಮಾವಿಷ್ಟೇ ಸಹ ಮಾತ್ರಾ ಪರಂತಪ।।
ವೈಶಂಪಾಯನನು ಹೇಳಿದನು: “ಪರಂತಪ! ಪಿತೃಶೋಕದಿಂದ ಮುಳುಗಿಹೋಗಿದ್ದ ಮಣಿಪೂರೇಶ್ವರ ನೃಪತಿಯು ಆಗ ತಾಯಿಯೊಡನೆ ಪ್ರಾಯೋಪವೇಶ ಮಾಡಿದನು.
14081002a ಉಲೂಪೀ ಚಿಂತಯಾಮಾಸ ತದಾ ಸಂಜೀವನಂ ಮಣಿಮ್।
14081002c ಸ ಚೋಪಾತಿಷ್ಠತ ತದಾ ಪನ್ನಗಾನಾಂ ಪರಾಯಣಮ್।।
ಆಗ ಉಲೂಪಿಯು ಸಂಜೀವನ ಮಣಿಯನ್ನು ಸ್ಮರಿಸಿಕೊಂಡಳು. ಪನ್ನಗಗಳ ಪರಾಯಣವಾದ ಆ ಮಣಿಯು ಕೂಡಲೇ ಅಲ್ಲಿಗೆ ಬಂದಿತು.
14081003a ತಂ ಗೃಹೀತ್ವಾ ತು ಕೌರವ್ಯ ನಾಗರಾಜಪತೇಃ ಸುತಾ।
14081003c ಮನಃಪ್ರಹ್ಲಾದನೀಂ ವಾಚಂ ಸೈನಿಕಾನಾಮಥಾಬ್ರವೀತ್।।
ಕೌರವ್ಯ! ಆ ಮಣಿಯನ್ನು ಹಿಡಿದುಕೊಂಡು ನಾಗರಾಜಪತಿಯ ಆ ಮಗಳು ಸೈನಿಕರ ಮನಸ್ಸಿಗೆ ಆಹ್ಲಾದಕರವಾದ ಈ ಮಾತನ್ನಾಡಿದಳು:
14081004a ಉತ್ತಿಷ್ಠ ಮಾ ಶುಚಃ ಪುತ್ರ ನೈಷ ಜಿಷ್ಣುಸ್ತ್ವಯಾ ಹತಃ।
14081004c ಅಜೇಯಃ ಪುರುಷೈರೇಷ ದೇವೈರ್ವಾಪಿ ಸವಾಸವೈಃ।।
“ಮಗೂ! ಎದ್ದೇಳು! ಶೋಕಿಸಬೇಡ! ಜಿಷ್ಣುವು ನಿನ್ನಿಂದ ಹತನಾಗಲಿಲ್ಲ. ಇವನು ಇಂದ್ರಸಹಿತನಾದ ದೇವತೆಗಳಿಗೂ ಮನುಷ್ಯರಿಗೂ ಅಜೇಯನು.
14081005a ಮಯಾ ತು ಮೋಹಿನೀ ನಾಮ ಮಾಯೈಷಾ ಸಂಪ್ರಯೋಜಿತಾ।
14081005c ಪ್ರಿಯಾರ್ಥಂ ಪುರುಷೇಂದ್ರಸ್ಯ ಪಿತುಸ್ತೇಽದ್ಯ ಯಶಸ್ವಿನಃ।।
ಯಶಸ್ವಿನೀ ನಿನ್ನ ಈ ತಂದೆ ಪುರುಷೇಂದ್ರನಿಗೆ ಪ್ರಿಯವಾದುದನ್ನು ಮಾಡಲೋಸುಗ ನಾನೇ ಈ ಮೋಹಿನೀ ಎಂಬ ಹೆಸರಿನ ಮಾಯೆಯನ್ನು ಪ್ರದರ್ಶಿಸಿದೆನು.
14081006a ಜಿಜ್ಞಾಸುರ್ಹ್ಯೇಷ ವೈ ಪುತ್ರ ಬಲಸ್ಯ ತವ ಕೌರವಃ।
14081006c ಸಂಗ್ರಾಮೇ ಯುಧ್ಯತೋ ರಾಜನ್ನಾಗತಃ ಪರವೀರಹಾ।।
ರಾಜನ್! ಈ ಪರವೀರಹ ಕೌರವನು ತನ್ನ ಮಗನ ಬಲವೆಷ್ಟಿರಬಹುದೆಂಬ ಜಿಜ್ಞಾಸೆಯಿಂದಲೇ ನಿನ್ನೊಡನೆ ಸಂಗ್ರಾಮದಲ್ಲಿ ಯುದ್ಧಮಾಡಲು ಬಯಸಿದ್ದನು.
14081007a ತಸ್ಮಾದಸಿ ಮಯಾ ಪುತ್ರ ಯುದ್ಧಾರ್ಥಂ ಪರಿಚೋದಿತಃ।
14081007c ಮಾ ಪಾಪಮಾತ್ಮನಃ ಪುತ್ರ ಶಂಕೇಥಾಸ್ತ್ವಣ್ವಪಿ ಪ್ರಭೋ।।
ಪ್ರಭೋ! ಪುತ್ರ! ಆದುದರಿಂದಲೇ ನಾನು ನಿನ್ನನ್ನು ಯುದ್ಧಕ್ಕಾಗಿ ಪ್ರಚೋದಿಸಿದೆ! ನೀನು ನಿನ್ನನ್ನು ಪಾಪಿಯೆಂದು ಸ್ವಲ್ಪವೂ ಶಂಕಿಸಬೇಕಾಗಿಲ್ಲ!
14081008a ಋಷಿರೇಷ ಮಹಾತೇಜಾಃ ಪುರುಷಃ ಶಾಶ್ವತೋಽವ್ಯಯಃ।
14081008c ನೈನಂ ಶಕ್ತೋ ಹಿ ಸಂಗ್ರಾಮೇ ಜೇತುಂ ಶಕ್ರೋಽಪಿ ಪುತ್ರಕ।।
ಪುತ್ರಕ! ಈ ಪುರುಷನು ಮಹಾತೇಜಸ್ವೀ ಋಷಿಯು. ಶಾಶ್ವತನು ಮತ್ತು ಅವ್ಯಯನು. ಸಂಗ್ರಾಮದಲ್ಲಿ ಇವನನ್ನು ಶಕ್ರನಿಗೂ ಜಯಿಸಲು ಸಾಧ್ಯವಿಲ್ಲ!
14081009a ಅಯಂ ತು ಮೇ ಮಣಿರ್ದಿವ್ಯಃ ಸಮಾನೀತೋ ವಿಶಾಂ ಪತೇ।
14081009c ಮೃತಾನ್ಮೃತಾನ್ಪನ್ನಗೇಂದ್ರಾನ್ಯೋ ಜೀವಯತಿ ನಿತ್ಯದಾ।।
ವಿಶಾಂಪತೇ! ಮೃತಗೊಂಡ ಪನ್ನಗೇಂದ್ರರನ್ನು ನಿತ್ಯವೂ ಬದುಕಿಸುವ ಈ ದಿವ್ಯ ಮಣಿಯನ್ನು ಇಗೋ ತರಿಸಿದ್ದೇನೆ.
14081010a ಏತಮಸ್ಯೋರಸಿ ತ್ವಂ ತು ಸ್ಥಾಪಯಸ್ವ ಪಿತುಃ ಪ್ರಭೋ।
14081010c ಸಂಜೀವಿತಂ ಪುನಃ ಪುತ್ರ ತತೋ ದ್ರಷ್ಟಾಸಿ ಪಾಂಡವಮ್।।
ಪ್ರಭೋ! ಪುತ್ರ! ಇದನ್ನು ನೀನು ನಿನ್ನ ತಂದೆಯ ಎದೆಯ ಮೇಲೆ ಇಡು. ಆಗ ನೀನು ಪುನಃ ಪಾಂಡವ ಅರ್ಜುನನನ್ನು ಜೀವಂತನಾಗಿ ಕಾಣುವೆ!”
14081011a ಇತ್ಯುಕ್ತಃ ಸ್ಥಾಪಯಾಮಾಸ ತಸ್ಯೋರಸಿ ಮಣಿಂ ತದಾ।
14081011c ಪಾರ್ಥಸ್ಯಾಮಿತತೇಜಾಃ ಸ ಪಿತುಃ ಸ್ನೇಹಾದಪಾಪಕೃತ್।।
ಹೀಗೆ ಹೇಳಲು ಪಾಪವನ್ನೆಸಗಿದ್ದ ಅಮಿತತೇಜಸ್ವೀ ಬಭ್ರುವಾಹನನು ಸ್ನೇಹಪೂರ್ವಕವಾಗಿ ಆ ಮಣಿಯನ್ನು ತಂದೆ ಪಾರ್ಥನ ಎದೆಯಮೇಲೆ ಇಟ್ಟನು.
14081012a ತಸ್ಮಿನ್ನ್ಯಸ್ತೇ ಮಣೌ ವೀರ ಜಿಷ್ಣುರುಜ್ಜೀವಿತಃ ಪ್ರಭುಃ।
14081012c ಸುಪ್ತೋತ್ಥಿತ ಇವೋತ್ತಸ್ಥೌ ಮೃಷ್ಟಲೋಹಿತಲೋಚನಃ।।
ವೀರ! ಆ ಮಣಿಯನ್ನು ಇಟ್ಟೊಡನೆಯೇ ಪ್ರಭು ಜಿಷ್ಣುವು ಪುನಃ ಜೀವಿತನಾದನು. ಮಲಗಿದ್ದವನು ಎದ್ದೇಳುವಂತೆ ತನ್ನ ಕೆಂಪು ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಅವನು ಎದ್ದು ಕುಳಿತನು.
14081013a ತಮುತ್ಥಿತಂ ಮಹಾತ್ಮಾನಂ ಲಬ್ಧಸಂಜ್ಞಂ ಮನಸ್ವಿನಮ್।
14081013c ಸಮೀಕ್ಷ್ಯ ಪಿತರಂ ಸ್ವಸ್ಥಂ ವವಂದೇ ಬಭ್ರುವಾಹನಃ।।
ಸಂಜ್ಞೆಗಳನ್ನು ಪಡೆದು ಸ್ವಸ್ಥನಾಗಿ ಮೇಲೆದ್ದ ಆ ಮಹಾತ್ಮ ಮನಸ್ವೀ ತಂದೆಯನ್ನು ನೋಡಿ ಬಭ್ರುವಾಹನನು ವಂದಿಸಿದನು.
14081014a ಉತ್ಥಿತೇ ಪುರುಷವ್ಯಾಘ್ರೇ ಪುನರ್ಲಕ್ಷ್ಮೀವತಿ ಪ್ರಭೋ।
14081014c ದಿವ್ಯಾಃ ಸುಮನಸಃ ಪುಣ್ಯಾ ವವೃಷೇ ಪಾಕಶಾಸನಃ।।
ಪ್ರಭೋ! ಆ ಪುರುಷವ್ಯಾಘ್ರ ಶ್ರೀಮಂತನು ಪುನಃ ಮೇಲೇಳಲು ಸಂತೋಷಗೊಂಡ ಪಾಕಶಾಸನ ಇಂದ್ರನು ಅವನ ಮೇಲೆ ಪುಣ್ಯ ದಿವ್ಯವೃಷ್ಟಿಯನ್ನು ಸುರಿಸಿದನು.
14081015a ಅನಾಹತಾ ದುಂದುಭಯಃ ಪ್ರಣೇದುರ್ಮೇಘನಿಸ್ವನಾಃ।
14081015c ಸಾಧು ಸಾಧ್ವಿತಿ ಚಾಕಾಶೇ ಬಭೂವ ಸುಮಹಾನ್ಸ್ವನಃ।।
ಯಾರೂ ಬಾರಿಸದೇ ಇದ್ದರೂ ಮೇಘದ ಧ್ವನಿಯಲ್ಲಿ ದುಂದುಭಿಗಳು ಮೊಳಗಿದವು. ಆಕಾಶದಲ್ಲಿ “ಸಾಧು! ಸಾಧು!” ಎಂಬ ಮಹಾ ಧ್ವನಿಯು ಕೇಳಿಬಂದಿತು.
14081016a ಉತ್ಥಾಯ ತು ಮಹಾಬಾಹುಃ ಪರ್ಯಾಶ್ವಸ್ತೋ ಧನಂಜಯಃ।
14081016c ಬಭ್ರುವಾಹನಮಾಲಿಂಗ್ಯ ಸಮಾಜಿಘ್ರತ ಮೂರ್ಧನಿ।।
ಮಹಾಬಾಹು ಧನಂಜಯನು ಸಮಾಧಾನಹೊಂದಿ ಮೇಲೆದ್ದು ಬಭ್ರುವಾಹನನನ್ನು ಆಲಂಗಿಸಿ ನೆತ್ತಿಯನ್ನು ಆಘ್ರಾಣಿಸಿದನು.
14081017a ದದರ್ಶ ಚಾವಿದೂರೇಽಸ್ಯ ಮಾತರಂ ಶೋಕಕರ್ಶಿತಾಮ್।
14081017c ಉಲೂಪ್ಯಾ ಸಹ ತಿಷ್ಠಂತೀಂ ತತೋಽಪೃಚ್ಚದ್ಧನಂಜಯಃ।।
ಅನತಿ ದೂರದಲ್ಲಿಯೇ ಉಲೂಪಿಯೊಡನೆ ಶೋಕಕರ್ಶಿತಳಾಗಿ ನಿಂತಿದ್ದ ಅವನ ತಾಯಿ ಚಿತ್ರಾಂಗದೆಯನ್ನೂ ನೋಡಿ, ಧನಂಜಯನು ಬಭ್ರುವಾಹನನಿಗೆ ಕೇಳಿದನು:
14081018a ಕಿಮಿದಂ ಲಕ್ಷ್ಯತೇ ಸರ್ವಂ ಶೋಕವಿಸ್ಮಯಹರ್ಷವತ್।
14081018c ರಣಾಜಿರಮಮಿತ್ರಘ್ನ ಯದಿ ಜಾನಾಸಿ ಶಂಸ ಮೇ।।
“ಅಮಿತ್ರಘ್ನ! ಈ ರಣಾಂಗಣವು ಶೋಕ-ವಿಸ್ಮಯ-ಹರ್ಷಗಳಿಂದ ಕೂಡಿದಂತೆ ಕಾಣುತ್ತಿದೆ. ಇದಕ್ಕೆ ಕಾರಣವೇನಾದರೂ ನಿನಗೆ ತಿಳಿದಿದ್ದರೆ ಹೇಳು!
14081019a ಜನನೀ ಚ ಕಿಮರ್ಥಂ ತೇ ರಣಭೂಮಿಮುಪಾಗತಾ।
14081019c ನಾಗೇಂದ್ರದುಹಿತಾ ಚೇಯಮುಲೂಪೀ ಕಿಮಿಹಾಗತಾ।।
ನಿನ್ನ ಜನನಿಯು ಏಕೆ ಈ ರಣಭೂಮಿಗೆ ಬಂದಿದ್ದಾಳೆ? ನಾಗೇಂದ್ರನ ಮಗಳು ಉಲೂಪಿಯೂ ಕೂಡ ಇಲ್ಲಿಗೆ ಏಕೆ ಬಂದಿದ್ದಾಳೆ?
14081020a ಜಾನಾಮ್ಯಹಮಿದಂ ಯುದ್ಧಂ ತ್ವಯಾ ಮದ್ವಚನಾತ್ಕೃತಮ್।
14081020c ಸ್ತ್ರೀಣಾಮಾಗಮನೇ ಹೇತುಮಹಮಿಚ್ಚಾಮಿ ವೇದಿತುಮ್।।
ನನ್ನ ಹೇಳಿಕೆಯಂತೆಯೇ ನಮ್ಮಿಬ್ಬರೊಡನೆ ಯುದ್ಧವು ನಡೆಯಿತು ಎನ್ನುವುದು ನನಗೆ ತಿಳಿದಿದೆ. ಆದರೆ ಈ ಸ್ತ್ರೀಯರು ಇಲ್ಲಿಗೆ ಬರಲು ಕಾರಣವೇನೆಂದು ತಿಳಿಯಲು ಬಯಸುತ್ತೇನೆ.”
14081021a ತಮುವಾಚ ತತಃ ಪೃಷ್ಟೋ ಮಣಿಪೂರಪತಿಸ್ತದಾ।
14081021c ಪ್ರಸಾದ್ಯ ಶಿರಸಾ ವಿದ್ವಾನುಲೂಪೀ ಪೃಚ್ಚ್ಯತಾಮಿತಿ।।
ಹೀಗೆ ಕೇಳಲು ಮಣಿಪೂರಪತಿಯು ಅರ್ಜುನನಿಗೆ ಶಿರಸಾ ನಮಸ್ಕರಿಸಿ ಪ್ರಸನ್ನಗೊಳಿಸಿ ಇದನ್ನು ಉಲೂಪಿಯಲ್ಲಿ ಕೇಳಿ ತಿಳಿದುಕೊಳ್ಳಬೇಕೆಂದು ಪ್ರಾರ್ಥಿಸಿಕೊಂಡನು.
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅರ್ಜುನಪ್ರತ್ಯುಜ್ಜೀವನೇ ಏಕಾಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅರ್ಜುನಪ್ರತ್ಯುಜ್ಜೀವನ ಎನ್ನುವ ಎಂಭತ್ತೊಂದನೇ ಅಧ್ಯಾಯವು.