ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 79
ಸಾರ
ಉಲೂಪಿಯನ್ನು ನಿಂದಿಸಿ ಚಿತ್ರಾಂಗದೆಯು ಪ್ರಾಯೋಪವೇಶ ಮಾಡಿದುದು (1-18).
14079001 ವೈಶಂಪಾಯನ ಉವಾಚ
14079001a ತತೋ ಬಹುವಿಧಂ ಭೀರುರ್ವಿಲಪ್ಯ ಕಮಲೇಕ್ಷಣಾ।
14079001c ಮುಮೋಹ ದುಃಖಾದ್ದುರ್ಧರ್ಷಾ ನಿಪಪಾತ ಚ ಭೂತಲೇ।।
ವೈಶಂಪಾಯನನು ಹೇಳಿದನು: “ಆಗ ಬಹುವಿಧವಾಗಿ ವಿಲಪಿಸಿ ಆ ಕಮಲೇಕ್ಷಣೆ ಭೀರು ಸಹಿಸಲಸಾಧ್ಯ ದುಃಖದಿಂದ ಮೂರ್ಛಿತಳಾಗಿ ನೆಲದ ಮೇಲೆ ಬಿದ್ದಳು.
14079002a ಪ್ರತಿಲಭ್ಯ ಚ ಸಾ ಸಂಜ್ಞಾಂ ದೇವೀ ದಿವ್ಯವಪುರ್ಧರಾ।
14079002c ಉಲೂಪೀಂ ಪನ್ನಗಸುತಾಂ ದೃಷ್ಟ್ವೇದಂ ವಾಕ್ಯಮಬ್ರವೀತ್।।
ಸುಂದರ ರೂಪಿಣೀ ಆ ದೇವಿಯು ಸಂಜ್ಞೆಗಳನ್ನು ಪಡೆದು ಪನ್ನಗಸುತೆ ಉಲೂಪಿಯನ್ನು ನೋಡಿ ಈ ಮಾತುಗಳನ್ನಾಡಿದಳು:
14079003a ಉಲೂಪಿ ಪಶ್ಯ ಭರ್ತಾರಂ ಶಯಾನಂ ನಿಹತಂ ರಣೇ।
14079003c ತ್ವತ್ಕೃತೇ ಮಮ ಪುತ್ರೇಣ ಬಾಲೇನ ಸಮಿತಿಂಜಯಮ್।।
“ಉಲೂಪಿ! ನೀನೇ ನಡೆಸಿದಂತೆ ನನ್ನ ಬಾಲಕ ಮಗನಿಂದ ರಣದಲ್ಲಿ ಹತನಾಗಿ ಮಲಗಿರುವ ಸಮಿತಿಂಜಯ ಪತಿಯನ್ನು ನೋಡು!
14079004a ನನು ತ್ವಮಾರ್ಯೇ ಧರ್ಮಜ್ಞಾ ನನು ಚಾಸಿ ಪತಿವ್ರತಾ।
14079004c ಯತ್ತ್ವತ್ಕೃತೇಽಯಂ ಪತಿತಃ ಪತಿಸ್ತೇ ನಿಹತೋ ರಣೇ।।
ಆರ್ಯೇ! ನೀನು ಧರ್ಮಜ್ಞಳೂ ಪತಿವ್ರತೆಯೂ ಅಲ್ಲವೇ? ಆದರೂ ನಿನ್ನ ಪತಿಯು ರಣದಲ್ಲಿ ಹತನಾಗಿ ಬೀಳುವಹಾಗೆ ಏಕೆ ಮಾಡಿದೆ?
14079005a ಕಿಂ ತು ಸರ್ವಾಪರಾಧೋಽಯಂ ಯದಿ ತೇಽದ್ಯ ಧನಂಜಯಃ।
14079005c ಕ್ಷಮಸ್ವ ಯಾಚ್ಯಮಾನಾ ಮೇ ಸಂಜೀವಯ ಧನಂಜಯಮ್।।
ಒಂದು ವೇಳೆ ಧನಂಜಯನದ್ದೇ ಸರ್ವ ಅಪರಾಧಗಳೇ ಆಗಿದ್ದರೂ ಇಂದು ಅವನನ್ನು ಕ್ಷಮಿಸಿಬಿಡು. ಧನಂಜಯನನ್ನು ಬದುಕಿಸು. ಬೇಡುತ್ತಿದ್ದೇನೆ.
14079006a ನನು ತ್ವಮಾರ್ಯೇ ಧರ್ಮಜ್ಞಾ ತ್ರೈಲೋಕ್ಯವಿದಿತಾ ಶುಭೇ।
14079006c ಯದ್ಘಾತಯಿತ್ವಾ ಭರ್ತಾರಂ ಪುತ್ರೇಣೇಹ ನ ಶೋಚಸಿ।।
ಆರ್ಯೇ! ಶುಭೇ! ನೀನು ಧರ್ಮಜ್ಞೆಯೆಂದು ಮೂರುಲೋಕಗಳಲ್ಲಿಯೂ ಖ್ಯಾತಳಾಗಿಲ್ಲವೇ? ಆದರೂ ಮಗನಿಂದ ಪತಿಯನ್ನು ಕೊಲ್ಲಿಸಿಯೂ ಶೋಕಿಸುತ್ತಿಲ್ಲವಲ್ಲ!
14079007a ನಾಹಂ ಶೋಚಾಮಿ ತನಯಂ ನಿಹತಂ ಪನ್ನಗಾತ್ಮಜೇ।
14079007c ಪತಿಮೇವ ತು ಶೋಚಾಮಿ ಯಸ್ಯಾತಿಥ್ಯಮಿದಂ ಕೃತಮ್।।
ಪನ್ನಗಾತ್ಮಜೇ! ಹತನಾಗಿರುವ ಮಗನಿಗಾಗಿ ನಾನು ಶೋಕಿಸುತ್ತಿಲ್ಲ. ಪತಿಗೆ ಇಂತಹ ಆತಿಥ್ಯವನ್ನು ನೀಡಿದೆನಲ್ಲಾ ಎಂದು ಶೋಕಿಸುತ್ತಿದ್ದೇನೆ!”
14079008a ಇತ್ಯುಕ್ತ್ವಾ ಸಾ ತದಾ ದೇವೀಮುಲೂಪೀಂ ಪನ್ನಗಾತ್ಮಜಾಮ್।
14079008c ಭರ್ತಾರಮಭಿಗಮ್ಯೇದಮಿತ್ಯುವಾಚ ಯಶಸ್ವಿನೀ।।
ಪನ್ನಗಾತ್ಮಜೆ ದೇವೀ ಉಲೂಪಿಗೆ ಹೀಗೆ ಹೇಳಿ ಆ ಯಶಸ್ವಿನೀ ಚಿತ್ರಾಂಗದೆಯು ಪತಿಯ ಬಳಿಸಾರಿ ಈ ಮಾತುಗಳನ್ನಾಡಿದಳು:
14079009a ಉತ್ತಿಷ್ಠ ಕುರುಮುಖ್ಯಸ್ಯ ಪ್ರಿಯಕಾಮ ಮಮ ಪ್ರಿಯ।
14079009c ಅಯಮಶ್ವೋ ಮಹಾಬಾಹೋ ಮಯಾ ತೇ ಪರಿಮೋಕ್ಷಿತಃ।।
“ಕುರುಮುಖ್ಯನಿಗೆ ಪ್ರಿಯವಾದುದನ್ನು ಮಾಡುವವನೇ! ನನ್ನ ಪ್ರಿಯನೇ! ಎದ್ದೇಳು! ಮಹಾಬಾಹೋ! ಈ ಕುದುರೆಯನ್ನು ನಾನೇ ನಿನಗೆ ಬಿಟ್ಟುಕೊಟ್ಟಿದ್ದೇನೆ!
14079010a ನನು ನಾಮ ತ್ವಯಾ ವೀರ ಧರ್ಮರಾಜಸ್ಯ ಯಜ್ಞಿಯಃ।
14079010c ಅಯಮಶ್ವೋಽನುಸರ್ತವ್ಯಃ ಸ ಶೇಷೇ ಕಿಂ ಮಹೀತಲೇ।।
ವೀರ! ಧರ್ಮರಾಜನ ಈ ಯಜ್ಞಕುದುರೆಯನ್ನು ನೀನು ಹಿಂಬಾಲಿಸಿ ಹೋಗಬೇಕಲ್ಲವೇ? ಆದರೂ ನೀನು ಮಹೀತಲದಲ್ಲಿ ಏಕೆ ಮಲಗಿರುವೆ?
14079011a ತ್ವಯಿ ಪ್ರಾಣಾಃ ಸಮಾಯತ್ತಾಃ ಕುರೂಣಾಂ ಕುರುನಂದನ।
14079011c ಸ ಕಸ್ಮಾತ್ಪ್ರಾಣದೋಽನ್ಯೇಷಾಂ ಪ್ರಾಣಾನ್ ಸಂತ್ಯಕ್ತವಾನಸಿ।।
ಕುರುನಂದನ! ಕುರುಗಳ ಪ್ರಾಣಗಳು ನಿನ್ನನ್ನೇ ಅವಲಂಬಿಸಿವೆ! ಅನ್ಯರಿಗೆ ಪ್ರಾಣದಾನವನ್ನು ನೀಡುವ ನೀನೇ ಏಕೆ ಹೀಗೆ ಪ್ರಾಣಗಳನ್ನು ತ್ಯಜಿಸಿರುವೆ?
14079012a ಉಲೂಪಿ ಸಾಧು ಸಂಪಶ್ಯ ಭರ್ತಾರಂ ನಿಹತಂ ರಣೇ।
14079012c ಪುತ್ರಂ ಚೈನಂ ಸಮುತ್ಸಾಹ್ಯ ಘಾತಯಿತ್ವಾ ನ ಶೋಚಸಿ।।
ಉಲೂಪಿ! ರಣದಲ್ಲಿ ಹತನಾಗಿರುವ ಪತಿಯನ್ನು ಚೆನ್ನಾಗಿ ನೋಡು! ಮಗನನ್ನು ಪ್ರೋತ್ಸಾಹಿಸಿ ಇವನನ್ನು ಕೊಲ್ಲಿಸಿದ ನೀನು ಶೋಕಿಸುತ್ತಿಲ್ಲವಲ್ಲ!
14079013a ಕಾಮಂ ಸ್ವಪಿತು ಬಾಲೋಽಯಂ ಭೂಮೌ ಪ್ರೇತಗತಿಂ ಗತಃ।
14079013c ಲೋಹಿತಾಕ್ಷೋ ಗುಡಾಕೇಶೋ ವಿಜಯಃ ಸಾಧು ಜೀವತು।।
ಪ್ರೇತಗತಿಯನ್ನು ಸೇರಿದ ನನ್ನ ಈ ಬಾಲಕನು ಬೇಕಾದರೆ ಭೂಮಿಯ ಮೇಲೆಯೇ ಮಲಗಿರಲಿ! ಆದರೆ ನಿದ್ರೆಯನ್ನು ಜಯಿಸಿದ ಲೋಹಿತಾಕ್ಷ ವಿಜಯನು ಮಾತ್ರ ಜೀವಿಸಿದರೆ ಚೆನ್ನಾಗಿರುತ್ತಿತ್ತು!
14079014a ನಾಪರಾಧೋಽಸ್ತಿ ಸುಭಗೇ ನರಾಣಾಂ ಬಹುಭಾರ್ಯತಾ।
14079014c ನಾರೀಣಾಂ ತು ಭವತ್ಯೇತನ್ಮಾ ತೇ ಭೂದ್ಬುದ್ಧಿರೀದೃಶೀ।।
ಸುಭಗೇ! ಪುರುಷರಿಗೆ ಅನೇಕ ಭಾರ್ಯೆಯರಿದ್ದರೆ ಅಪರಾಧವೇನೂ ಅಲ್ಲ. ಆದರೆ ನಾರಿಯರಿಗೆ ಇದು ತರವಲ್ಲ. ನಿನಗೆ ಈ ರೀತಿಯ ಬುದ್ಧಿಯುಂಟಾಗಬಾರದಾಗಿತ್ತು!
14079015a ಸಖ್ಯಂ ಹ್ಯೇತತ್ಕೃತಂ ಧಾತ್ರಾ ಶಾಶ್ವತಂ ಚಾವ್ಯಯಂ ಚ ಹ।
14079015c ಸಖ್ಯಂ ಸಮಭಿಜಾನೀಹಿ ಸತ್ಯಂ ಸಂಗತಮಸ್ತು ತೇ।।
ಪತಿ-ಪತ್ನಿಯರ ನಡುವಿನ ಈ ಶಾಶ್ವತವೂ ಅವ್ಯಯವೂ ಆದ ಸಖ್ಯವನ್ನು ಧಾತನೇ ಮಾಡಿರುವನು. ನಿನಗೂ ಅರ್ಜುನನೊಡನೆ ಇದೇ ರೀತಿಯ ಸಂಬಂಧವಿದೆ ಎನ್ನುವ ಸತ್ಯವು ನಿನಗೆ ಅರಿವಾಗಲಿ!
14079016a ಪುತ್ರೇಣ ಘಾತಯಿತ್ವೇಮಂ ಪತಿಂ ಯದಿ ನ ಮೇಽದ್ಯ ವೈ।
14079016c ಜೀವಂತಂ ದರ್ಶಯಸ್ಯದ್ಯ ಪರಿತ್ಯಕ್ಷ್ಯಾಮಿ ಜೀವಿತಮ್।।
ಪುತ್ರನಿಂದ ಕೊಲ್ಲಿಸಿದ ನನ್ನ ಈ ಪತಿಯನ್ನು ಇಂದು ಜೀವಂತವಾಗಿ ತೋರಿಸದೇ ಇದ್ದರೆ ಇಂದೇ ನಾನು ನನ್ನ ಜೀವವನ್ನು ತ್ಯಜಿಸುತ್ತೇನೆ!
14079017a ಸಾಹಂ ದುಃಖಾನ್ವಿತಾ ಭೀರು ಪತಿಪುತ್ರವಿನಾಕೃತಾ।
14079017c ಇಹೈವ ಪ್ರಾಯಮಾಶಿಷ್ಯೇ ಪ್ರೇಕ್ಷಂತ್ಯಾಸ್ತೇ ನ ಸಂಶಯಃ।।
ಭೀರು! ಪತಿ-ಪುತ್ರರಿಂದ ವಿಹೀನಳಾಗಿ ದುಃಖಾನ್ವಿತಳಾದ ನಾನು ಇಲ್ಲಿಯೇ ಪ್ರಾಯೋಪವೇಶ ಮಾಡುವುದನ್ನು ನಿಸ್ಸಂಶಯವಾಗಿ ನೀನು ಕಾಣುವೆ!”
14079018a ಇತ್ಯುಕ್ತ್ವಾ ಪನ್ನಗಸುತಾಂ ಸಪತ್ನೀಂ ಚೈತ್ರವಾಹಿನೀ।
14079018c ತತಃ ಪ್ರಾಯಮುಪಾಸೀನಾ ತೂಷ್ಣೀಮಾಸೀಜ್ಜನಾಧಿಪ।।
ಜನಾಧಿಪ! ಹೀಗೆ ಸವತಿಯಾದ ಪನ್ನಗಸುತೆಗೆ ಹೇಳಿ ಚಿತ್ರವಾಹನನ ಮಗಳು ಚಿತ್ರಾಂಗದೆಯು ಪ್ರಾಯೋಪವೇಶಮಾಡಿ ಸುಮ್ಮನೇ ಕುಳಿತುಕೊಂಡಳು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅರ್ಜುನಪ್ರತ್ಯುಜ್ಜೀವನೇ ಎಕೋನಾಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅರ್ಜುನಪ್ರತ್ಯುಜ್ಜೀವನ ಎನ್ನುವ ಎಪ್ಪತ್ತೊಂಭತ್ತನೇ ಅಧ್ಯಾಯವು.