078: ಅರ್ಜುನಬಭ್ರುವಾಹನಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 78

ಸಾರ

ಬಭೃವಾಹನನು ವಿನಯದಿಂದ ಅರ್ಜುನನನ್ನು ಪೂಜಿಸಲು ಅರ್ಜುನನು ಅವನನ್ನು ಧಿಕ್ಕರಿಸಿದುದು (1-7). ಉಲೂಪಿಯ ಸೂಚನೆಯಂತೆ ಬಭ್ರುವಾಹನನು ಯಜ್ಞಕುದುರೆಯನ್ನು ಕಟ್ಟಿಹಾಕಿ ಅರ್ಜುನನೊಡನೆ ಯುದ್ಧಕ್ಕೆ ಹೊರಟಿದುದು (8-17). ಬಭ್ರುವಾಹನ-ಅರ್ಜುನರ ಯುದ್ಧ; ಅರ್ಜುನನು ಮೂರ್ಛೆಹೋದುದು (18-35). ತಂದೆಯು ಮೂರ್ಛಿತನಾದುದನ್ನು ನೋಡಿ ಬಭ್ರುವಾಹನನೂ ಮೂರ್ಛಿತನಾದುದು; ಚಿತ್ರಾಂಗದೆಯು ರಣಭೂಮಿಯನ್ನು ಪ್ರವೇಶಿಸಿದುದು (36-39).

14078001 ವೈಶಂಪಾಯನ ಉವಾಚ
14078001a ಶ್ರುತ್ವಾ ತು ನೃಪತಿರ್ವೀರಂ ಪಿತರಂ ಬಭ್ರುವಾಹನಃ।
14078001c ನಿರ್ಯಯೌ ವಿನಯೇನಾರ್ಯೋ ಬ್ರಾಹ್ಮಣಾರ್ಘ್ಯಪುರಃಸರಃ।।

ವೈಶಂಪಾಯನನು ಹೇಳಿದನು: “ವೀರ ತಂದೆಯು ಬಂದಿದ್ದಾನೆಂದು ಕೇಳಿ ನೃಪತಿ ಬಭ್ರುವಾಹನನು ವಿನಯದಿಂದ ಆರ್ಯಬ್ರಾಹ್ಮಣರನ್ನು ಮುಂದಿಟ್ಟುಕೊಂಡು ಅರ್ಘ್ಯಗಳೊಂದಿಗೆ ಪಟ್ಟಣದಿಂದ ಹೊರಟನು.

14078002a ಮಣಿಪೂರೇಶ್ವರಂ ತ್ವೇವಮುಪಯಾತಂ ಧನಂಜಯಃ।
14078002c ನಾಭ್ಯನಂದತ ಮೇಧಾವೀ ಕ್ಷತ್ರಧರ್ಮಮನುಸ್ಮರನ್।।

ಕ್ಷತ್ರಧರ್ಮವನ್ನು ಸ್ಮರಿಸಿಕೊಂಡ ಮೇಧಾವೀ ಧನಂಜಯನು ಹೀಗೆ ಬಂದಿರುವ ಮಣಿಪೂರೇಶ್ವರನನ್ನು ಅಭಿನಂದಿಸಲಿಲ್ಲ.

14078003a ಉವಾಚ ಚೈನಂ ಧರ್ಮಾತ್ಮಾ ಸಮನ್ಯುಃ ಫಲ್ಗುನಸ್ತದಾ।
14078003c ಪ್ರಕ್ರಿಯೇಯಂ ನ ತೇ ಯುಕ್ತಾ ಬಹಿಸ್ತ್ವಂ ಕ್ಷತ್ರಧರ್ಮತಃ।।

ಆಗ ಧರ್ಮಾತ್ಮಾ ಫಲ್ಗುನನು ಕೋಪದಿಂದಲೇ ಅವನಿಗೆ ಹೇಳಿದನು: “ಕ್ಷತ್ರಧರ್ಮದ ಹೊರಕ್ಕಿರುವ ಈ ಪ್ರಕ್ರಿಯೆಯು ನಿನಗೆ ಯುಕ್ತವಾದುದಲ್ಲ!

14078004a ಸಂರಕ್ಷ್ಯಮಾಣಂ ತುರಗಂ ಯೌಧಿಷ್ಠಿರಮುಪಾಗತಮ್।
14078004c ಯಜ್ಞಿಯಂ ವಿಷಯಾಂತೇ ಮಾಂ ನಾಯೋತ್ಸೀಃ ಕಿಂ ನು ಪುತ್ರಕ।।

ಪುತ್ರಕ! ಯುಧಿಷ್ಠಿರನ ಯಜ್ಞ ಕುದುರೆಯನ್ನು ಸಂರಕ್ಷಿಸುತ್ತಾ ನಿನ್ನ ರಾಜ್ಯಕ್ಕೆ ನಾನು ಬಂದಿರುವಾಗ ನನ್ನೊಡನೆ ನೀನು ಏಕೆ ಯುದ್ಧಮಾಡುತ್ತಿಲ್ಲ?

14078005a ಧಿಕ್ತ್ವಾಮಸ್ತು ಸುದುರ್ಬುದ್ಧಿಂ ಕ್ಷತ್ರಧರ್ಮಾವಿಶಾರದಮ್।
14078005c ಯೋ ಮಾಂ ಯುದ್ಧಾಯ ಸಂಪ್ರಾಪ್ತಂ ಸಾಮ್ನೈವಾಥೋ ತ್ವಮಗ್ರಹೀಃ।।

ಯುದ್ಧಕ್ಕಾಗಿ ಬಂದಿರುವ ನನ್ನನ್ನು ಸಾಮ್ಯದಿಂದ ಸ್ವಾಗತಿಸುತ್ತಿರುವ, ಕ್ಷತ್ರಧರ್ಮವನ್ನು ತಿಳಿಯದಿರುವ ಅತ್ಯಂತ ದುರ್ಬುದ್ಧಿಯಾದ ನಿನಗೆ ಧಿಕ್ಕಾರವು!

14078006a ನ ತ್ವಯಾ ಪುರುಷಾರ್ಥಶ್ಚ ಕಶ್ಚಿದಸ್ತೀಹ ಜೀವತಾ।
14078006c ಯಸ್ತ್ವಂ ಸ್ತ್ರೀವದ್ಯುಧಾ ಪ್ರಾಪ್ತಂ ಸಾಮ್ನಾ ಮಾಂ ಪ್ರತ್ಯಗೃಹ್ಣಥಾಃ।।

ಬದುಕಿರುವಾಗ ನೀನು ಯಾವ ಪುರುಷಾರ್ಥವನ್ನೂ ಸಾಧಿಸಿಲ್ಲ. ಈಗ ಯುದ್ಧಮಾಡಲು ಆಗಮಿಸಿರುವ ನನ್ನನ್ನು ಸ್ತ್ರೀಯಂತೆ ಸಾಮ್ಯದಿಂದ ಸ್ವಾಗತಿಸುತ್ತಿರುವೆ!

14078007a ಯದ್ಯಹಂ ನ್ಯಸ್ತಶಸ್ತ್ರಸ್ತ್ವಾಮಾಗಚ್ಚೇಯಂ ಸುದುರ್ಮತೇ।
14078007c ಪ್ರಕ್ರಿಯೇಯಂ ತತೋ ಯುಕ್ತಾ ಭವೇತ್ತವ ನರಾಧಮ।।

ದುರ್ಮತೇ! ನರಾಧಮ! ಒಂದುವೇಳೆ ನಾನು ಶಸ್ತ್ರಗಳನ್ನು ಬದಿಗಿಟ್ಟು ಇಲ್ಲಿಗೆ ಬಂದಿದ್ದೆನಾದರೆ ನಿನ್ನ ಈ ಪ್ರಕ್ರಿಯೆಯು ಯುಕ್ತವಾಗುತ್ತಿತ್ತೋ ಏನೋ!”

14078008a ತಮೇವಮುಕ್ತಂ ಭರ್ತ್ರಾ ತು ವಿದಿತ್ವಾ ಪನ್ನಗಾತ್ಮಜಾ।
14078008c ಅಮೃಷ್ಯಮಾಣಾ ಭಿತ್ತ್ವೋರ್ವೀಮುಲೂಪೀ ತಮುಪಾಗಮತ್।।

ತನ್ನ ಪತಿಯು ಹೀಗೆ ಹೇಳುತ್ತಿರುವುದನ್ನು ತಿಳಿದ ಪನ್ನಗಾತ್ಮಜೆ ಉಲೂಪಿಯು ಕೋಪವನ್ನು ಸಹಿಸಿಕೊಳ್ಳಲಾರದೇ ಭೂಮಿಯನ್ನೇ ಭೇದಿಸಿಕೊಂಡು ಪಾತಾಳದಿಂದ ಮೇಲೆ ಬಂದಳು.

14078009a ಸಾ ದದರ್ಶ ತತಃ ಪುತ್ರಂ ವಿಮೃಶಂತಮಧೋಮುಖಮ್।
14078009c ಸಂತರ್ಜ್ಯಮಾನಮಸಕೃದ್ಭರ್ತ್ರಾ ಯುದ್ಧಾರ್ಥಿನಾ ವಿಭೋ।।

ವಿಭೋ! ಅಲ್ಲಿ ಅವಳು ಮುಖಕೆಳಗೆ ಮಾಡಿಕೊಂಡು ಏನುಮಾಡಬೇಕೆಂದು ವಿಮರ್ಶಿಸುತ್ತಿರುವ ಮಗನನ್ನೂ ಮತ್ತು ಯುದ್ಧಾರ್ಥಿಯಾದ ಪತಿಯು ಅವನನ್ನು ಕಠೋರಮಾತುಗಳಿಂದ ನಿಂದಿಸುತ್ತಿರುವುದನ್ನೂ ನೋಡಿದಳು.

14078010a ತತಃ ಸಾ ಚಾರುಸರ್ವಾಂಗೀ ತಮುಪೇತ್ಯೋರಗಾತ್ಮಜಾ।
14078010c ಉಲೂಪೀ ಪ್ರಾಹ ವಚನಂ ಕ್ಷತ್ರಧರ್ಮವಿಶಾರದಾ।।

ಆಗ ಆ ಕ್ಷತ್ರಧರ್ಮವನ್ನು ತಿಳಿದಿದ್ದ ಸುಂದರಸರ್ವಾಂಗೀ ಉರಗಾತ್ಮಜೆ ಉಲೂಪಿಯು ಬಭ್ರುವಾಹನನಿಗೆ ಇಂತೆಂದಳು:

14078011a ಉಲೂಪೀಂ ಮಾಂ ನಿಬೋಧ ತ್ವಂ ಮಾತರಂ ಪನ್ನಗಾತ್ಮಜಾಮ್।
14078011c ಕುರುಷ್ವ ವಚನಂ ಪುತ್ರ ಧರ್ಮಸ್ತೇ ಭವಿತಾ ಪರಃ।।

“ನೀನು ನನ್ನನ್ನು ನಿನ್ನ ತಾಯಿ ಪನ್ನಗಾತ್ಮಜೆ ಉಲೂಪಿಯೆಂದು ತಿಳಿ! ಮಗೂ! ನನ್ನ ಈ ಮಾತನ್ನು ಕೇಳು. ಇದರಿಂದ ನೀನು ಮಹಾಧರ್ಮವನ್ನೆಸಗಿದಂತಾಗುತ್ತದೆ!

14078012a ಯುಧ್ಯಸ್ವೈನಂ ಕುರುಶ್ರೇಷ್ಠಂ ಧನಂಜಯಮರಿಂದಮ।
14078012c ಏವಮೇಷ ಹಿ ತೇ ಪ್ರೀತೋ ಭವಿಷ್ಯತಿ ನ ಸಂಶಯಃ।।

ಅರಿಂದಮ! ನೀನು ಈ ಕುರುಶ್ರೇಷ್ಠ ಧನಂಜಯನೊಡನೆ ಯುದ್ಧಮಾಡು! ಇದರಿಂದಲೇ ನಿನಗೆ ಸಂತೋಷವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”

14078013a ಏವಮುದ್ಧರ್ಷಿತೋ ಮಾತ್ರಾ ಸ ರಾಜಾ ಬಭ್ರುವಾಹನಃ।
14078013c ಮನಶ್ಚಕ್ರೇ ಮಹಾತೇಜಾ ಯುದ್ಧಾಯ ಭರತರ್ಷಭ।।

ಭರತರ್ಷಭ! ಹೀಗೆ ತಾಯಿಯಿಂದ ಉತ್ಸಾಹಗೊಳಿಸಲ್ಪಟ್ಟ ಮಹಾತೇಜಸ್ವೀ ರಾಜಾ ಬಭ್ರುವಾಹನನು ಯುದ್ಧಕ್ಕೆ ಮನಸ್ಸು ಮಾಡಿದನು.

14078014a ಸಂನಹ್ಯ ಕಾಂಚನಂ ವರ್ಮ ಶಿರಸ್ತ್ರಾಣಂ ಚ ಭಾನುಮತ್।
14078014c ತೂಣೀರಶತಸಂಬಾಧಮಾರುರೋಹ ಮಹಾರಥಮ್।।

ಅವನು ಕಾಂಚನ ಕವಚವನ್ನು ಮತ್ತು ಹೊಳೆಯುತ್ತಿರುವ ಶಿರಸ್ತ್ರಾಣವನ್ನೂ ತೊಟ್ಟು, ನೂರಾರು ಭತ್ತಳಿಕೆಗಳನ್ನು ತುಂಬಿಸಿದ್ದ ಮಹಾರಥವನ್ನೇರಿದನು.

14078015a ಸರ್ವೋಪಕರಣೈರ್ಯುಕ್ತಂ ಯುಕ್ತಮಶ್ವೈರ್ಮನೋಜವೈಃ।
14078015c ಸುಚಕ್ರೋಪಸ್ಕರಂ ಧೀಮಾನ್ ಹೇಮಭಾಂಡಪರಿಷ್ಕೃತಮ್।।
14078016a ಪರಮಾರ್ಚಿತಮುಚ್ಚ್ರಿತ್ಯ ಧ್ವಜಂ ಸಿಂಹಂ ಹಿರಣ್ಮಯಮ್।
14078016c ಪ್ರಯಯೌ ಪಾರ್ಥಮುದ್ದಿಶ್ಯ ಸ ರಾಜಾ ಬಭ್ರುವಾಹನಃ।।

ಸರ್ವೋಪಕರಣಗಳಿಂದ ಕೂಡಿದ್ದ, ಮನೋವೇಗದಲ್ಲಿ ಹೋಗಬಲ್ಲ ಕುದುರೆಗಳನ್ನು ಕಟ್ಟಿದ್ದ, ಚಕ್ರವೇ ಮೊದಲಾದ ಇತರ ಸಾಮಾಗ್ರಿಗಳಿಂದ ಕೂಡಿದ್ದ, ಹೊಳೆಯುವ ಸುವರ್ಣಮಯ ಆಭರಣಗಳಿಂದ ಅಲಂಕೃತಗೊಂಡಿದ್ದ, ಪರಮಾರ್ಚಿತವಾದ ಹಿರಣ್ಮಯ ಸಿಂಹಧ್ವಜವನ್ನು ಮೇಲೇರಿಸಿಕೊಂಡು ರಾಜಾ ಬಭ್ರುವಾಹನನು ಪಾರ್ಥನನ್ನು ಎದುರಿಸಿ ಹೊರಟನು.

14078017a ತತೋಽಭ್ಯೇತ್ಯ ಹಯಂ ವೀರೋ ಯಜ್ಞಿಯಂ ಪಾರ್ಥರಕ್ಷಿತಮ್।
14078017c ಗ್ರಾಹಯಾಮಾಸ ಪುರುಷೈರ್ಹಯಶಿಕ್ಷಾವಿಶಾರದೈಃ।।

ಆಗ ವೀರ ಬಭ್ರುವಾಹನನು ಪಾರ್ಥನ ರಕ್ಷೆಯಲ್ಲಿದ್ದ ಆ ಯಜ್ಞದ ಕುದುರೆಯನ್ನು ಹಯಶಿಕ್ಷಾವಿಶಾರದ ಪುರುಷರಿಂದ ಕಟ್ಟಿಹಾಕಿಸಿದನು.

14078018a ಗೃಹೀತಂ ವಾಜಿನಂ ದೃಷ್ಟ್ವಾ ಪ್ರೀತಾತ್ಮಾ ಸ ಧನಂಜಯಃ।
14078018c ಪುತ್ರಂ ರಥಸ್ಥಂ ಭೂಮಿಷ್ಠಃ ಸಂನ್ಯವಾರಯದಾಹವೇ।।

ಅವನು ಕುದುರೆಯನ್ನು ಕಟ್ಟಿಹಾಕಿದುದನ್ನು ನೋಡಿ ಸಂತೋಷಗೊಂಡ ಧನಂಜಯನು ಭೂಮಿಯಮೇಲೆ ನಿಂತುಕೊಂಡೇ ರಥಸ್ಥನಾಗಿರುವ ಮಗನನ್ನು ರಣದಲ್ಲಿ ತಡೆದನು.

14078019a ತತಃ ಸ ರಾಜಾ ತಂ ವೀರಂ ಶರವ್ರಾತೈಃ ಸಹಸ್ರಶಃ।
14078019c ಅರ್ದಯಾಮಾಸ ನಿಶಿತೈರಾಶೀವಿಷವಿಷೋಪಮೈಃ।।

ಆಗ ರಾಜಾ ಬಭ್ರುವಾಹನನು ವೀರ ಅರ್ಜುನನನ್ನು ಸರ್ಪವಿಷಗಳಿಗೆ ಸಮಾನವಾದ ಸಹಸ್ರಾರು ನಿಶಿತ ಬಾಣಗಳಿಂದ ಪೀಡಿಸಿದನು.

14078020a ತಯೋಃ ಸಮಭವದ್ಯುದ್ಧಂ ಪಿತುಃ ಪುತ್ರಸ್ಯ ಚಾತುಲಮ್।
14078020c ದೇವಾಸುರರಣಪ್ರಖ್ಯಮುಭಯೋಃ ಪ್ರೀಯಮಾಣಯೋಃ।।

ಪರಸ್ಪರರಿಗೆ ಸಂತೋಷವನ್ನು ಕೊಡುತ್ತಿದ್ದ ಆ ತಂದೆ-ಮಗನ ನಡುವೆ ದೇವಾಸುರರ ನಡುವೆ ನಡೆದಂಥಹ ಸರಿಸಾಟಿಯಿಲ್ಲದ ಮಹಾಯುದ್ಧವೇ ನಡೆಯಿತು.

14078021a ಕಿರೀಟಿನಂ ತು ವಿವ್ಯಾಧ ಶರೇಣ ನತಪರ್ವಣಾ।
14078021c ಜತ್ರುದೇಶೇ ನರವ್ಯಾಘ್ರಃ ಪ್ರಹಸನ್ಬಭ್ರುವಾಹನಃ।।

ನರವ್ಯಾಘ್ರ ಬಭ್ರುವಾಹನನು ನತಪರ್ವ ಶರದಿಂದ ಕಿರೀಟಿಯ ಜತ್ರುದೇಶಕ್ಕೆ ಹೊಡೆದು ಜೋರಾಗಿ ನಕ್ಕನು.

14078022a ಸೋಽಭ್ಯಗಾತ್ಸಹ ಪುಂಖೇನ ವಲ್ಮೀಕಮಿವ ಪನ್ನಗಃ।
14078022c ವಿನಿರ್ಭಿದ್ಯ ಚ ಕೌಂತೇಯಂ ಮಹೀತಲಮಥಾವಿಶತ್।।

ಸರ್ಪವು ಹುತ್ತವನ್ನು ಹೇಗೋ ಹಾಗೆ ಆ ಬಾಣವು ಪುಂಖದೊಂದಿಗೆ ಕೌಂತೇಯನನ್ನು ಭೇದಿಸಿ ಭೂಮಿಯ ಒಳಹೊಕ್ಕಿತು.

14078023a ಸ ಗಾಢವೇದನೋ ಧೀಮಾನಾಲಂಬ್ಯ ಧನುರುತ್ತಮಮ್।
14078023c ದಿವ್ಯಂ ತೇಜಃ ಸಮಾವಿಶ್ಯ ಪ್ರಮೀತ ಇವ ಸಂಬಭೌ।।

ಧೀಮಾನ್ ಅರ್ಜುನನು ಗಾಢವೇದನೆಯಿಂದ ಉತ್ತಮ ಧನುಸ್ಸನ್ನು ಅವಲಂಬಿಸಿ ಹಾಗೆಯೇ ನಿಂತುಕೊಂಡನು. ಆಗ ಅವನು ದಿವ್ಯ ತೇಜಸ್ಸಿನಿಂದ ಕೂಡಿದ್ದ ಯಜ್ಞಪಶುವಿನಂತೆಯೇ ಕಾಣುತ್ತಿದ್ದನು.

14078024a ಸ ಸಂಜ್ಞಾಮುಪಲಭ್ಯಾಥ ಪ್ರಶಸ್ಯ ಪುರುಷರ್ಷಭಃ।
14078024c ಪುತ್ರಂ ಶಕ್ರಾತ್ಮಜೋ ವಾಕ್ಯಮಿದಮಾಹ ಮಹೀಪತೇ।।

ಮಹೀಪತೇ! ಪುನಃ ಸಂಜ್ಞೆಗಳನ್ನು ಪಡೆದುಕೊಂಡ ಪುರುಷರ್ಷಭ ಶಕ್ರಾತ್ಮಜನು ಮಗನನ್ನು ಪ್ರಶಂಸಿಸುತ್ತಾ ಈ ಮಾತುಗಳನ್ನಾಡಿದನು:

14078025a ಸಾಧು ಸಾಧು ಮಹಾಬಾಹೋ ವತ್ಸ ಚಿತ್ರಾಂಗದಾತ್ಮಜ।
14078025c ಸದೃಶಂ ಕರ್ಮ ತೇ ದೃಷ್ಟ್ವಾ ಪ್ರೀತಿಮಾನಸ್ಮಿ ಪುತ್ರಕ।।
14078026a ವಿಮುಂಚಾಮ್ಯೇಷ ಬಾಣಾಂಸ್ತೇ ಪುತ್ರ ಯುದ್ಧೇ ಸ್ಥಿರೋ ಭವ।
14078026c ಇತ್ಯೇವಮುಕ್ತ್ವಾ ನಾರಾಚೈರಭ್ಯವರ್ಷದಮಿತ್ರಹಾ।।

“ಭಲೇ! ಭಲೇ! ಮಹಾಬಾಹೋ! ಮಗೂ! ಚಿತ್ರಾಂಗದಾತ್ಮಜ! ಪುತ್ರಕ! ಅನುರೂಪವಾದ ನಿನ್ನ ಈ ಕೆಲಸವನ್ನು ನೋಡಿ ನಾನು ಹರ್ಷಿತನಾಗಿದ್ದೇನೆ. ಪುತ್ರ! ಈ ಬಾಣವನ್ನು ನಿನ್ನ ಮೇಲೆ ಪ್ರಯೋಗಿಸುತ್ತಿದ್ದೇನೆ. ಯುದ್ಧದಲ್ಲಿ ಸ್ಥಿರವಾಗಿರು!” ಹೀಗೆ ಹೇಳಿ ಆ ಅಮಿತ್ರಹ ಅರ್ಜುನನು ನಾರಾಚಗಳನ್ನು ಅವನ ಮೇಲೆ ಸುರಿಸಿದನು.

14078027a ತಾನ್ಸ ಗಾಂಡೀವನಿರ್ಮುಕ್ತಾನ್ವಜ್ರಾಶನಿಸಮಪ್ರಭಾನ್।
14078027c ನಾರಾಚೈರಚ್ಚಿನದ್ರಾಜಾ ಸರ್ವಾನೇವ ತ್ರಿಧಾ ತ್ರಿಧಾ।।

ಗಾಂಡೀವದಿಂದ ಹೊರಟ ವಜ್ರದ ಮಿಂಚುಗಳಿಗೆ ಸಮಾನ ಪ್ರಭೆಯುಳ್ಳ ಆ ನಾರಾಚಗಳೆಲ್ಲವನ್ನೂ ರಾಜಾ ಬಭ್ರುವಾಹನನು ಮೂರು ಮೂರು ಭಾಗಗಳನ್ನಾಗಿ ತುಂಡರಿಸಿದನು.

14078028a ತಸ್ಯ ಪಾರ್ಥಃ ಶರೈರ್ದಿವ್ಯೈರ್ಧ್ವಜಂ ಹೇಮಪರಿಷ್ಕೃತಮ್।
14078028c ಸುವರ್ಣತಾಲಪ್ರತಿಮಂ ಕ್ಷುರೇಣಾಪಾಹರದ್ರಥಾತ್।।

ಪಾರ್ಥನು ದಿವ್ಯ ಕ್ಷುರಪ್ರ ಶರಗಳಿಂದ ಸುವರ್ಣತಾಲವೃಕ್ಷದಂತಿದ್ದ ಬಭ್ರುವಾಹನನ ಕಾಂಚನ ಧ್ವಜವನ್ನು ಅವನ ರಥದಿಂದ ಅಪಹರಿಸಿದನು.

14078029a ಹಯಾಂಶ್ಚಾಸ್ಯ ಮಹಾಕಾಯಾನ್ಮಹಾವೇಗಪರಾಕ್ರಮಾನ್।
14078029c ಚಕಾರ ರಾಜ್ಞೋ ನಿರ್ಜೀವಾನ್ಪ್ರಹಸನ್ಪಾಂಡವರ್ಷಭಃ।।

ಪಾಂಡವರ್ಷಭನು ನಗುತ್ತಾ ರಾಜ ಬಭ್ರುವಾಹನನ ಮಹಾವೇಗಪರಾಕ್ರಮಗಳಿದ್ದ ಮಹಾಕಾಯದ ಕುದುರೆಗಳನ್ನು ಕೂಡ ನಿರ್ಜೀವಗೊಳಿಸಿದನು.

14078030a ಸ ರಥಾದವತೀರ್ಯಾಶು ರಾಜಾ ಪರಮಕೋಪನಃ।
14078030c ಪದಾತಿಃ ಪಿತರಂ ಕೋಪಾದ್ಯೋಧಯಾಮಾಸ ಪಾಂಡವಮ್।।

ಪರಮ ಕುಪಿತನಾದ ರಾಜಾ ಬಭ್ರುವಾಹನನು ರಥದಿಂದ ಕೆಳಗಿಳಿದು ಪದಾತಿಯಾಗಿಯೇ ತಂದೆ ಪಾಂಡವ ಅರ್ಜುನನೊಡನೆ ಕೋಪದಿಂದ ಯುದ್ಧಮಾಡಿದನು.

14078031a ಸಂಪ್ರೀಯಮಾಣಃ ಪಾಂಡೂನಾಮೃಷಭಃ ಪುತ್ರವಿಕ್ರಮಾತ್।
14078031c ನಾತ್ಯರ್ಥಂ ಪೀಡಯಾಮಾಸ ಪುತ್ರಂ ವಜ್ರಧರಾತ್ಮಜಃ।।

ಪಾಂಡುಗಳ ವೃಷಭ ವಜ್ರಧರಾತ್ಮಜನು ಮಗನ ವಿಕ್ರಮದಿಂದ ಸಂತುಷ್ಟನಾಗಿ ಮಗನನ್ನು ಹೆಚ್ಚು ಪೀಡಿಸಲಿಲ್ಲ.

14078032a ಸ ಹನ್ಯಮಾನೋ ವಿಮುಖಂ ಪಿತರಂ ಬಭ್ರುವಾಹನಃ।
14078032c ಶರೈರಾಶೀವಿಷಾಕಾರೈಃ ಪುನರೇವಾರ್ದಯದ್ಬಲೀ।।

ಆಕ್ರಮಣ ಮಾಡದಿರುವುದನ್ನು ನೋಡಿ ತಂದೆಯು ವಿಮುಖನಾದನೆಂದೇ ತಿಳಿದು ಬಲಶಾಲೀ ಬಭ್ರುವಾಹನನು ಸರ್ಪದ ವಿಷದಂತಿದ್ದ ಶರಗಳಿಂದ ಪುನಃ ಅವನನ್ನು ಪ್ರಹರಿಸಿದನು.

14078033a ತತಃ ಸ ಬಾಲ್ಯಾತ್ಪಿತರಂ ವಿವ್ಯಾಧ ಹೃದಿ ಪತ್ರಿಣಾ।
14078033c ನಿಶಿತೇನ ಸುಪುಂಖೇನ ಬಲವದ್ಬಭ್ರುವಾಹನಃ।।

ಆಗ ಬಾಲ್ಯತನದಿಂದ ಬಲವಂತನಾದ ಬಭ್ರುವಾಹನನು ಪುಂಖಗಳಿದ್ದ ನಿಶಿತ ಪತ್ರಿಯಿಂದ ತಂದೆಯ ಹೃದಯಕ್ಕೆ ಹೊಡೆದನು.

14078034a ಸ ಬಾಣಸ್ತೇಜಸಾ ದೀಪ್ತೋ ಜ್ವಲನ್ನಿವ ಹುತಾಶನಃ।
14078034c ವಿವೇಶ ಪಾಂಡವಂ ರಾಜನ್ಮರ್ಮ ಭಿತ್ತ್ವಾತಿದುಃಖಕೃತ್।।

ರಾಜನ್! ಆ ಬಾಣವು ಉರಿಯುತ್ತಿರುವ ಬೆಂಕಿಯಂತೆ ತೇಜಸ್ಸಿನಿಂದ ಬೆಳಗುತ್ತಾ ಪಾಂಡವನ ಮರ್ಮವನ್ನು ಭೇದಿಸಿ ಒಳಹೊಕ್ಕು ಅತ್ಯಂತ ದುಃಖವನ್ನುಂಟುಮಾಡಿತು.

14078035a ಸ ತೇನಾತಿಭೃಶಂ ವಿದ್ಧಃ ಪುತ್ರೇಣ ಕುರುನಂದನಃ।
14078035c ಮಹೀಂ ಜಗಾಮ ಮೋಹಾರ್ತಸ್ತತೋ ರಾಜನ್ಧನಂಜಯಃ।।

ರಾಜನ್! ಹಾಗೆ ಮಗನಿಂತ ಅತಿ ಜೋರಾಗಿ ಹೊಡೆಯಲ್ಪಟ್ಟ ಕುರುನಂದನ ಧನಂಜಯನು ಮೂರ್ಛಿತನಾಗಿ ನೆಲಕ್ಕುರುಳಿದನು.

14078036a ತಸ್ಮಿನ್ನಿಪತಿತೇ ವೀರೇ ಕೌರವಾಣಾಂ ಧುರಂಧರೇ।
14078036c ಸೋಽಪಿ ಮೋಹಂ ಜಗಾಮಾಶು ತತಶ್ಚಿತ್ರಾಂಗದಾಸುತಃ।।

ಕೌರವರ ವೀರ ದುರಂಧರನು ಕೆಳಕ್ಕುರುಳಲು ಚಿತ್ರಾಂಗದನ ಮಗನೂ ಕೂಡ ಮೂರ್ಛಿತನಾದನು.

14078037a ವ್ಯಾಯಮ್ಯ ಸಂಯುಗೇ ರಾಜಾ ದೃಷ್ಟ್ವಾ ಚ ಪಿತರಂ ಹತಮ್।
14078037c ಪೂರ್ವಮೇವ ಚ ಬಾಣೌಘೈರ್ಗಾಢವಿದ್ಧೋಽರ್ಜುನೇನ ಸಃ।।

ಮೊದಲೇ ಅರ್ಜುನನ ಬಾಣಸಂಘಗಳಿಂದ ಅತಿಯಾಗಿ ಗಾಯಗೊಂಡು ಬಳಲಿದ್ದ ರಾಜಾ ಬಭ್ರುವಾಹನನು ಯುದ್ಧದಲ್ಲಿ ತಂದೆಯು ಹತನಾದುದನ್ನು ನೋಡಿ ಮೂರ್ಛೆಹೋದನು.

14078038a ಭರ್ತಾರಂ ನಿಹತಂ ದೃಷ್ಟ್ವಾ ಪುತ್ರಂ ಚ ಪತಿತಂ ಭುವಿ।
14078038c ಚಿತ್ರಾಂಗದಾ ಪರಿತ್ರಸ್ತಾ ಪ್ರವಿವೇಶ ರಣಾಜಿರಮ್।।

ಪತಿಯು ಹತನಾದುದನ್ನು ಮತ್ತು ಮಗನು ಭೂಮಿಯ ಮೇಲೆ ಬಿದ್ದುದನ್ನು ನೋಡಿ ಪರಿತಪಿಸಿದ ಚಿತ್ರಾಂಗದೆಯು ರಣಾಂಗಣವನ್ನು ಪ್ರವೇಶಿಸಿದಳು.

14078039a ಶೋಕಸಂತಪ್ತಹೃದಯಾ ರುದತೀ ಸಾ ತತಃ ಶುಭಾ।
14078039c ಮಣಿಪೂರಪತೇರ್ಮಾತಾ ದದರ್ಶ ನಿಹತಂ ಪತಿಮ್।।

ಶೋಕಸಂತಪ್ತಹೃದಯಿಯಾಗಿ ರೋದಿಸುತ್ತಿದ್ದ ಆ ಶುಭೆ ಮಣಿಪೂರಪತಿಯ ಮಾತೆಯು ತನ್ನ ಪತಿಯು ಹತನಾಗಿರುವುದನ್ನು ನೋಡಿದಳು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅರ್ಜುನಬಭ್ರುವಾಹನಯುದ್ಧೇ ಅಷ್ಟಸಪ್ತತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅರ್ಜುನಬಭ್ರುವಾಹನಯುದ್ಧ ಎನ್ನುವ ಎಪ್ಪತ್ತೆಂಟನೇ ಅಧ್ಯಾಯವು.