077: ಸೈಂಧವಪರಾಜಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 77

ಸಾರ

ಸೈಂಧವ ಸೇನೆಯ ಪರಾಜಯ (1-21). ದುಃಶಲೆಯು ತನ್ನ ಮೊಮ್ಮಗನನ್ನು ಕರೆದುಕೊಂಡು ರಣಭೂಮಿಗೆ ಶರಣಾರ್ಥಿಯಾಗಿ ಬಂದುದು (22-38). ಅರ್ಜುನನು ದುಃಶಲೆಯನ್ನು ಸಂತವಿಸಿ ಕಳುಹಿಸಿಕೊಟ್ಟು ಅಶ್ವವನ್ನು ಅನುಸರಿಸಿ ಮಣಿಪುರವನ್ನು ತಲುಪಿದುದು (39-46).

14077001 ವೈಶಂಪಾಯನ ಉವಾಚ
14077001a ತತೋ ಗಾಂಡೀವಭೃಚ್ಚೂರೋ ಯುದ್ಧಾಯ ಸಮವಸ್ಥಿತಃ।
14077001c ವಿಬಭೌ ಯುಧಿ ದುರ್ಧರ್ಷೋ ಹಿಮವಾನಚಲೋ ಯಥಾ।।

ವೈಶಂಪಾಯನನು ಹೇಳಿದನು: “ಯುದ್ಧದಲ್ಲಿ ತೊಡಗಿದ್ದ ಆ ಗಾಂಡೀವಧಾರೀ ಶೂರ ದುರ್ಧರ್ಷ ಅರ್ಜುನನು ಹಿಮವತ್ಪರ್ವತದಂತೆ ಅಚಲನಾಗಿ ಪ್ರಕಾಶಿಸುತ್ತಿದ್ದನು.

14077002a ತತಃ ಸೈಂಧವಯೋಧಾಸ್ತೇ ಪುನರೇವ ವ್ಯವಸ್ಥಿತಾಃ।
14077002c ವಿಮುಂಚಂತಃ ಸುಸಂರಬ್ಧಾಃ ಶರವರ್ಷಾಣಿ ಭಾರತ।।

ಭಾರತ! ಪುನಃ ಸುಸಜ್ಜಿತರಾದ ಸೈಂಧವಯೋಧರು ಕೋಪದಿಂದ ಶರವರ್ಷಗಳನ್ನು ಸುರಿಸತೊಡಗಿದರು.

14077003a ತಾನ್ಪ್ರಸಹ್ಯ ಮಹಾವೀರ್ಯಃ ಪುನರೇವ ವ್ಯವಸ್ಥಿತಾನ್।
14077003c ತತಃ ಪ್ರೋವಾಚ ಕೌಂತೇಯೋ ಮುಮೂರ್ಷೂನ್ಶ್ಲಕ್ಷ್ಣಯಾ ಗಿರಾ।।

ಪುನಃ ಯುದ್ಧಕ್ಕೆ ಸಿದ್ಧರಾಗಿ ನಿಂತಿರುವ ಅವರನ್ನು ನೋಡಿ ಮಹಾವೀರ್ಯ ಕೌಂತೇಯನು ಗಟ್ಟಿಯಾಗಿ ನಗುತ್ತಾ ಮಧುರ ಧ್ವನಿಯಲ್ಲಿ ಈ ಮಾತುಗಳನ್ನಾಡಿದನು:

14077004a ಯುಧ್ಯಧ್ವಂ ಪರಯಾ ಶಕ್ತ್ಯಾ ಯತಧ್ವಂ ಚ ವಧೇ ಮಮ।
14077004c ಕುರುಧ್ವಂ ಸರ್ವಕಾರ್ಯಾಣಿ ಮಹದ್ವೋ ಭಯಮಾಗತಮ್।।

“ಪರಮ ಶಕ್ತಿಯಿಂದ ಯುದ್ಧಮಾಡಿರಿ. ನನ್ನನ್ನು ವಧಿಸಲು ಪ್ರಯತ್ನಿಸಿ. ಮಹಾಭಯವು ಉಂಟಾಗಿರುವ ನೀವು ಸರ್ವಕಾರ್ಯಗಳನ್ನೂ ಮುಗಿಸಿ ಬನ್ನಿರಿ!

14077005a ಏಷ ಯೋತ್ಸ್ಯಾಮಿ ವಃ ಸರ್ವಾನ್ನಿವಾರ್ಯ ಶರವಾಗುರಾಮ್।
14077005c ತಿಷ್ಠಧ್ವಂ ಯುದ್ಧಮನಸೋ ದರ್ಪಂ ವಿನಯಿತಾಸ್ಮಿ ವಃ।।

ನಿಮ್ಮ ಎಲ್ಲ ಶರಜಾಲಗಳನ್ನೂ ತುಂಡರಿಸಿ ಯುದ್ಧಮಾಡುತ್ತೇನೆ. ಯುದ್ಧದಲ್ಲಿಯೇ ಮನಸ್ಸನ್ನಿಟ್ಟುಕೊಂಡು ನಿಲ್ಲಿರಿ. ನಿಮ್ಮ ದರ್ಪವನ್ನು ನೀಗಿಸುತ್ತೇನೆ!”

14077006a ಏತಾವದುಕ್ತ್ವಾ ಕೌರವ್ಯೋ ರುಷಾ ಗಾಂಡೀವಭೃತ್ತದಾ।
14077006c ತತೋಽಥ ವಚನಂ ಸ್ಮೃತ್ವಾ ಭ್ರಾತುರ್ಜ್ಯೇಷ್ಠಸ್ಯ ಭಾರತ।।
14077007a ನ ಹಂತವ್ಯಾ ರಣೇ ತಾತ ಕ್ಷತ್ರಿಯಾ ವಿಜಿಗೀಷವಃ।
14077007c ಜೇತವ್ಯಾಶ್ಚೇತಿ ಯತ್ಪ್ರ್ರೋಕ್ತಂ ಧರ್ಮರಾಜ್ಞಾ ಮಹಾತ್ಮನಾ।

ಭಾರತ! ರೋಷದಿಂದ ಹೀಗೆ ಹೇಳಿದ ಗಾಂಡೀವಧಾರೀ ಕೌರವ್ಯನಿಗೆ ಆಗ ಹಿರಿಯಣ್ಣನ ಮಾತುಗಳು ಸ್ಮರಣೆಗೆ ಬಂದವು. “ಮಗೂ! ರಣದಲ್ಲಿ ವಿಜಯೇಚ್ಛುಗಳಾದ ಕ್ಷತ್ರಿಯರನ್ನು ಕೊಲ್ಲಬಾರದು. ಅವರನ್ನು ಜಯಿಸಬೇಕು!” ಎಂದು ಮಹಾತ್ಮ ಧರ್ಮರಾಜನು ಹೇಳಿದ್ದನು.

14077007e ಚಿಂತಯಾಮಾಸ ಚ ತದಾ ಫಲ್ಗುನಃ ಪುರುಷರ್ಷಭಃ।।
14077008a ಇತ್ಯುಕ್ತೋಽಹಂ ನರೇಂದ್ರೇಣ ನ ಹಂತವ್ಯಾ ನೃಪಾ ಇತಿ।
14077008c ಕಥಂ ತನ್ನ ಮೃಷೇಹ ಸ್ಯಾದ್ಧರ್ಮರಾಜವಚಃ ಶುಭಮ್।।
14077009a ನ ಹನ್ಯೇರಂಶ್ಚ ರಾಜಾನೋ ರಾಜ್ಞಶ್ಚಾಜ್ಞಾ ಕೃತಾ ಭವೇತ್।

“ನೃಪರನ್ನು ಕೊಲ್ಲಬೇಡ! ಎಂದು ರಾಜನು ಹೇಳಿದ್ದನು. ಧರ್ಮರಾಜನ ಆ ಶುಭವಚನವು ಸುಳ್ಳಾಗದಂತೆ ನಾನು ಹೇಗೆ ನಡೆದುಕೊಳ್ಳಲಿ? ರಾಜರನ್ನು ಕೊಲ್ಲಬಾರದೆಂಬ ರಾಜನ ಆಜ್ಞೆಯನ್ನು ಹೇಗೆ ಪೂರೈಸಲಿ?” ಎಂದು ಆಗ ಪುರುಷರ್ಷಭ ಫಲ್ಗುನನು ಚಿಂತಿಸತೊಡಗಿದನು.

14077009c ಇತಿ ಸಂಚಿಂತ್ಯ ಸ ತದಾ ಭ್ರಾತುಃ ಪ್ರಿಯಹಿತೇ ರತಃ।।
14077009e ಪ್ರೋವಾಚ ವಾಕ್ಯಂ ಧರ್ಮಜ್ಞಃ ಸೈಂಧವಾನ್ಯುದ್ಧದುರ್ಮದಾನ್।।

ಅಣ್ಣನಿಗೆ ಪ್ರಿಯವಾದುದನ್ನು ಮಾಡುವುದರಲ್ಲಿಯೇ ನಿರತನಾಗಿದ್ದ ಧರ್ಮಜ್ಞ ಅರ್ಜುನನು ಹೀಗೆ ಆಲೋಚಿಸಿ ಯುದ್ಧದುರ್ಮದ ಸೈಂಧವರಿಗೆ ಈ ಮಾತನ್ನಾಡಿದನು:

14077010a ಬಾಲಾನ್ ಸ್ತ್ರಿಯೋ ವಾ ಯುಷ್ಮಾಕಂ ನ ಹನಿಷ್ಯೇ ವ್ಯವಸ್ಥಿತಾನ್।
14077010c ಯಶ್ಚ ವಕ್ಷ್ಯತಿ ಸಂಗ್ರಾಮೇ ತವಾಸ್ಮೀತಿ ಪರಾಜಿತಃ।।

“ಸಂಗ್ರಾಮದಲ್ಲಿ ನಿಂತಿರುವ ನಿಮ್ಮಲ್ಲಿ ಬಾಲಕರನ್ನೂ ಅಥವಾ ಸ್ತ್ರೀಯರನ್ನೂ ನಾನು ಸಂಹರಿಸುವುದಿಲ್ಲ. ಹಾಗೆಯೇ ಸೋತು ನಿನ್ನವರಾಗಿದ್ದೇವೆ ಎನ್ನುವವರನ್ನೂ ನಾನು ಕೊಲ್ಲುವುದಿಲ್ಲ!

14077011a ಏತಚ್ಚ್ರುತ್ವಾ ವಚೋ ಮಹ್ಯಂ ಕುರುಧ್ವಂ ಹಿತಮಾತ್ಮನಃ।
14077011c ಅತೋಽನ್ಯಥಾ ಕೃಚ್ಚ್ರಗತಾ ಭವಿಷ್ಯಥ ಮಯಾರ್ದಿತಾಃ।।

ನನ್ನ ಈ ಮಾತನ್ನು ಕೇಳಿ ನಿಮಗೆ ಹಿತವೆನಿಸಿದಂತೆ ಮಾಡಿ. ಅನ್ಯಥಾ ನನ್ನಿಂದ ಪೆಟ್ಟುತಿಂದು ಕಷ್ಟವನ್ನು ಅನುಭವಿಸಬೇಕಾಗುತ್ತದೆ!”

14077012a ಏವಮುಕ್ತ್ವಾ ತು ತಾನ್ವೀರಾನ್ಯುಯುಧೇ ಕುರುಪುಂಗವಃ।
14077012c ಅತ್ವರಾವಾನಸಂರಬ್ಧಃ ಸಂರಬ್ಧೈರ್ವಿಜಿಗೀಷುಭಿಃ।।

ಹೀಗೆ ಹೇಳಿ ಅತಿಕ್ರುದ್ಧನಾದ ಕುರುಪುಂಗವನು ಕ್ರುದ್ಧರಾಗಿ ವಿಜಯವನ್ನೇ ಬಯಸಿದ್ದ ಆ ವೀರರೊಂದಿಗೆ ಯುದ್ಧದಲ್ಲಿ ತೊಡಗಿದನು.

14077013a ತತಃ ಶತಸಹಸ್ರಾಣಿ ಶರಾಣಾಂ ನತಪರ್ವಣಾಮ್।
14077013c ಮುಮುಚುಃ ಸೈಂಧವಾ ರಾಜಂಸ್ತದಾ ಗಾಂಡೀವಧನ್ವನಿ।।

ರಾಜನ್! ಆಗ ಗಂಡೀವಧನ್ವಿಯ ಮೇಲೆ ಸೈಂಧವರು ನೂರುಸಾವಿರ ನತಪರ್ವ ಶರಗಳನ್ನು ಪ್ರಯೋಗಿಸಿದರು.

14077014a ಸ ತಾನಾಪತತಃ ಕ್ರೂರಾನಾಶೀವಿಷವಿಷೋಪಮಾನ್।
14077014c ಚಿಚ್ಚೇದ ನಿಶಿತೈರ್ಬಾಣೈರಂತರೈವ ಧನಂಜಯಃ।।

ತನ್ನ ಮೇಲೆ ಬೀಳುತ್ತಿದ್ದ ಆ ಕ್ರೂರ ಸರ್ಪಗಳ ವಿಷಗಳಂತಿದ್ದ ಬಾಣಗಳನ್ನು ಧನಂಜಯನು ಅವುಗಳು ಬೀಳುವುದರೊಳಗೇ ನಿಶಿತ ಬಾಣಗಳಿಂದ ತುಂಡರಿಸಿದನು.

14077015a ಚಿತ್ತ್ವಾ ತು ತಾನಾಶುಗಮಾನ್ಕಂಕಪತ್ರಾನ್ಶಿಲಾಶಿತಾನ್।
14077015c ಏಕೈಕಮೇಷ ದಶಭಿರ್ಬಿಭೇದ ಸಮರೇ ಶರೈಃ।।

ವೇಗದಿಂದ ಬರುತ್ತಿದ್ದ ಆ ಶಿಲಾಶಿತ ಕಂಕಪತ್ರಗಳನ್ನು ಕತ್ತರಿಸಿ ಅವನು ಸಮರದಲ್ಲಿ ಒಬ್ಬೊಬ್ಬರನ್ನೂ ಹತ್ತು-ಹತ್ತು ಶರಗಳಿಂದ ಹೊಡೆದನು.

14077016a ತತಃ ಪ್ರಾಸಾಂಶ್ಚ ಶಕ್ತೀಶ್ಚ ಪುನರೇವ ಧನಂಜಯೇ।
14077016c ಜಯದ್ರಥಂ ಹತಂ ಸ್ಮೃತ್ವಾ ಚಿಕ್ಷಿಪುಃ ಸೈಂಧವಾ ನೃಪಾಃ।।

ಆಗ ಜಯದ್ರಥನ ಮರಣವನ್ನು ಸ್ಮರಿಸಿಕೊಳ್ಳುತ್ತಾ ಸೈಂಧವ ನೃಪರು ಧನಂಜಯನ ಮೇಲೆ ಪುನಃ ಪ್ರಾಸಗಳನ್ನೂ ಶಕ್ತಿಗಳನ್ನೂ ಪ್ರಯೋಗಿಸಿದರು.

14077017a ತೇಷಾಂ ಕಿರೀಟೀ ಸಂಕಲ್ಪಂ ಮೋಘಂ ಚಕ್ರೇ ಮಹಾಮನಾಃ।
14077017c ಸರ್ವಾಂಸ್ತಾನಂತರಾ ಚಿತ್ತ್ವಾ ಮುದಾ ಚುಕ್ರೋಶ ಪಾಂಡವಃ।।

ಅವೆಲ್ಲವನ್ನೂ ಮಧ್ಯದಲ್ಲಿಯೇ ತುಂಡರಿಸಿ ಅವರ ಸಂಕಲ್ಪವನ್ನು ನಿಷ್ಫಲಗೊಳಿಸಿದ ಮಹಾಮನಸ್ವಿ ಕಿರೀಟೀ ಪಾಂಡವನು ಸಂತೋಷದಿಂದ ಗರ್ಜಿಸಿದನು.

14077018a ತಥೈವಾಪತತಾಂ ತೇಷಾಂ ಯೋಧಾನಾಂ ಜಯಗೃದ್ಧಿನಾಮ್।
14077018c ಶಿರಾಂಸಿ ಪಾತಯಾಮಾಸ ಭಲ್ಲೈಃ ಸಂನತಪರ್ವಭಿಃ।।

ಹಾಗೆಯೇ ತನ್ನ ಮೇಲೆ ಆಕ್ರಮಣಿಸುತ್ತಿದ್ದ ಜಯೈಶೀ ಯೋಧರ ಶಿರಗಳನ್ನು ಸನ್ನತಪರ್ವ ಭಲ್ಲಗಳಿಂದ ಕೆಳಗುರುಳಿಸಿದನು.

14077019a ತೇಷಾಂ ಪ್ರದ್ರವತಾಂ ಚೈವ ಪುನರೇವ ಚ ಧಾವತಾಮ್।
14077019c ನಿವರ್ತತಾಂ ಚ ಶಬ್ದೋಽಭೂತ್ಪೂರ್ಣಸ್ಯೇವ ಮಹೋದಧೇಃ।।

ಅವರು ಪಲಾಯನ ಮಾಡುತ್ತಿರುವ ಮತ್ತು ಪುನಃ ಓಡಿ ಹಿಂದಿರುಗಿ ಬರುವ ಶಬ್ಧವು ಉಕ್ಕಿಬರುವ ಸಮುದ್ರದ ಶಬ್ಧದಂತೆಯೇ ಜೋರಾಗಿತ್ತು.

14077020a ತೇ ವಧ್ಯಮಾನಾಸ್ತು ತದಾ ಪಾರ್ಥೇನಾಮಿತತೇಜಸಾ।
14077020c ಯಥಾಪ್ರಾಣಂ ಯಥೋತ್ಸಾಹಂ ಯೋಧಯಾಮಾಸುರರ್ಜುನಮ್।।

ಅಮಿತತೇಜಸ್ವೀ ಪಾರ್ಥನು ಅವರನ್ನು ಸಂಹರಿಸುತ್ತಿದ್ದರೂ, ಅವರು ಪ್ರಾಣವಿದ್ದಷ್ಟೂ ಉತ್ಸಾಹವಿದ್ದಷ್ಟೂ ಅರ್ಜುನನೊಡನೆ ಯುದ್ಧಮಾಡತೊಡಗಿದರು.

14077021a ತತಸ್ತೇ ಫಲ್ಗುನೇನಾಜೌ ಶರೈಃ ಸಂನತಪರ್ವಭಿಃ।
14077021c ಕೃತಾ ವಿಸಂಜ್ಞಾ ಭೂಯಿಷ್ಠಾಃ ಕ್ಲಾಂತವಾಹನಸೈನಿಕಾಃ।।

ಆಗ ಫಲ್ಗುನನು ಸನ್ನತಪರ್ವ ಶರಗಳಿಂದ ಅವರನ್ನು ಮೂರ್ಛೆಗೊಳಿಸಿದನು. ವಾಹನ-ಸೈನಿಕರೂ ಬಹಳವಾಗಿ ಬಳಲಿದ್ದರು.

14077022a ತಾಂಸ್ತು ಸರ್ವಾನ್ಪರಿಗ್ಲಾನಾನ್ವಿದಿತ್ವಾ ಧೃತರಾಷ್ಟ್ರಜಾ।
14077022c ದುಃಶಲಾ ಬಾಲಮಾದಾಯ ನಪ್ತಾರಂ ಪ್ರಯಯೌ ತದಾ।
14077022e ಸುರಥಸ್ಯ ಸುತಂ ವೀರಂ ರಥೇನಾನಾಗಸಂ ತದಾ।।
14077023a ಶಾಂತ್ಯರ್ಥಂ ಸರ್ವಯೋಧಾನಾಮಭ್ಯಗಚ್ಚತ ಪಾಂಡವಮ್।

ಅವರೆಲ್ಲರೂ ದಣಿದಿರುವುದನ್ನು ತಿಳಿದ ಧೃತರಾಷ್ಟ್ರನ ಮಗಳು ದುಃಶಲೆಯು ತನ್ನ ಮೊಮ್ಮಗ - ವೀರ ಸುರಥನ ಮಗ - ಬಾಲಕನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಸರ್ವಯೋಧರ ಶಾಂತಿಗಾಗಿ ಪಾಂಡವನಿದ್ದಲ್ಲಿಗೆ ಆಗಮಿಸಿದಳು.

14077023c ಸಾ ಧನಂಜಯಮಾಸಾದ್ಯ ಮುಮೋಚಾರ್ತಸ್ವರಂ ತದಾ।
14077023e ಧನಂಜಯೋಽಪಿ ತಾಂ ದೃಷ್ಟ್ವಾ ಧನುರ್ವಿಸಸೃಜೇ ಪ್ರಭುಃ।।

ಧನಂಜಯನ ಬಳಿಸಾರಿ ಅವಳು ಆರ್ತಸ್ವರದಲ್ಲಿ ಅಳತೊಡಗಿದಳು. ಪ್ರಭು ಧನಂಜಯನೂ ಕೂಡ ಅವಳನ್ನು ನೋಡಿ ಧನುಸ್ಸನ್ನು ಬಿಸುಟನು.

14077024a ಸಮುತ್ಸೃಷ್ಟಧನುಃ ಪಾರ್ಥೋ ವಿಧಿವದ್ ಭಗಿನೀಂ ತದಾ।
14077024c ಪ್ರಾಹ ಕಿಂ ಕರವಾಣೀತಿ ಸಾ ಚ ತಂ ವಾಕ್ಯಮಬ್ರವೀತ್।।

ಧನುಸ್ಸನ್ನು ಬದಿಗಿಟ್ಟು ಪಾರ್ಥನು ವಿಧಿವತ್ತಾಗಿ ತಂಗಿಗೆ “ಏನು ಮಾಡಬೇಕು?” ಎಂದು ಕೇಳಿದನು. ಅವಳು ಅವನಿಗೆ ಈ ಮಾತನ್ನಾಡಿದಳು:

14077025a ಏಷ ತೇ ಭರತಶ್ರೇಷ್ಠ ಸ್ವಸ್ರೀಯಸ್ಯಾತ್ಮಜಃ ಶಿಶುಃ।
14077025c ಅಭಿವಾದಯತೇ ವೀರ ತಂ ಪಶ್ಯ ಪುರುಷರ್ಷಭ।।

“ಭರತಶ್ರೇಷ್ಠ! ಪುರುಷರ್ಷಭ! ವೀರ! ಇವನು ನಿನ್ನ ತಂಗಿಯ ಮಗನ ಮಗನು. ಈ ಶಿಶುವು ನಿನಗೆ ನಮಸ್ಕರಿಸುತ್ತಿದ್ದಾನೆ ನೋಡು!”

14077026a ಇತ್ಯುಕ್ತಸ್ತಸ್ಯ ಪಿತರಂ ಸ ಪಪ್ರಚ್ಚಾರ್ಜುನಸ್ತದಾ।
14077026c ಕ್ವಾಸಾವಿತಿ ತತೋ ರಾಜನ್ ದುಃಶಲಾ ವಾಕ್ಯಮಬ್ರವೀತ್।।

ಅವಳು ಹೀಗೆ ಹೇಳಲು ಅರ್ಜುನನು “ಇವನ ತಂದೆಯೆಲ್ಲಿರುವನು?” ಎಂದು ಕೇಳಿದನು. ರಾಜನ್! ಅದಕ್ಕೆ ದುಃಶಲೆಯು ಹೀಗೆ ಹೇಳಿದಳು:

14077027a ಪಿತೃಶೋಕಾಭಿಸಂತಪ್ತೋ ವಿಷಾದಾರ್ತೋಽಸ್ಯ ವೈ ಪಿತಾ।
14077027c ಪಂಚತ್ವಮಗಮದ್ವೀರ ಯಥಾ ತನ್ ಮೇ ನಿಬೋಧ ಹ।।

“ವೀರ! ಇವನ ತಂದೆಯು ಪಿತೃಶೋಕದಿಂದ ಸಂತಪ್ತನಾಗಿ ವಿಷಾದದಿಂದ ಆರ್ತನಾಗಿ ಮೃತ್ಯುವಶನಾದನು. ನಾನು ಹೇಳುವುದನ್ನು ಕೇಳು.

14077028a ಸ ಪೂರ್ವಂ ಪಿತರಂ ಶ್ರುತ್ವಾ ಹತಂ ಯುದ್ಧೇ ತ್ವಯಾನಘ।
14077028c ತ್ವಾಮಾಗತಂ ಚ ಸಂಶ್ರುತ್ಯ ಯುದ್ಧಾಯ ಹಯಸಾರಿಣಮ್।
14077028e ಪಿತುಶ್ಚ ಮೃತ್ಯುದುಃಖಾರ್ತೋಽಜಹಾತ್ಪ್ರಾಣಾನ್ ಧನಂಜಯ।।

ಅನಘ! ಹಿಂದೆ ನಿನ್ನಿಂದ ಯುದ್ಧದಲ್ಲಿ ತಂದೆಯು ಹತನಾದುದನ್ನು ಅವನು ಕೇಳಿದ್ದನು. ಧನಂಜಯ! ಈಗ ನೀನು ಕುದುರೆಯನ್ನು ಹಿಂಬಾಲಿಸಿ ಯುದ್ಧಕ್ಕೆ ಬಂದಿರುವುದನ್ನು ಕೇಳಿ ತಂದೆಯ ಮೃತ್ಯುವಿನ ದುಃಖದಿಂದ ಆರ್ತನಾಗಿ ಪ್ರಾಣವನ್ನೇ ತೊರೆದುಬಿಟ್ಟನು.

14077029a ಪ್ರಾಪ್ತೋ ಬೀಭತ್ಸುರಿತ್ಯೇವ ನಾಮ ಶ್ರುತ್ವೈವ ತೇಽನಘ।
14077029c ವಿಷಾದಾರ್ತಃ ಪಪಾತೋರ್ವ್ಯಾಂ ಮಮಾರ ಚ ಮಮಾತ್ಮಜಃ।।

ಅನಘ! ಬೀಭತ್ಸುವು ಇಲ್ಲಿಗೆ ಬಂದಿದ್ದಾನೆ ಎಂದು ನಿನ್ನ ಹೆಸರನ್ನು ಕೇಳುತ್ತಲೇ ವಿಶಾದಾರ್ತನಾಗಿ ನನ್ನ ಮಗನು ಭೂಮಿಯ ಮೇಲೆ ಬಿದ್ದು ಮರಣಹೊಂದಿದನು.

14077030a ತಂ ತು ದೃಷ್ಟ್ವಾ ನಿಪತಿತಂ ತತಸ್ತಸ್ಯಾತ್ಮಜಂ ವಿಭೋ।
14077030c ಗೃಹೀತ್ವಾ ಸಮನುಪ್ರಾಪ್ತಾ ತ್ವಾಮದ್ಯ ಶರಣೈಷಿಣೀ।।

ವಿಭೋ! ಅವನು ಕೆಳಗುರುಳಿದುದನ್ನು ನೋಡಿ ಅವನ ಮಗನನ್ನು ಕರೆದುಕೊಂಡು ಶರಣಾರ್ಥಿಯಾಗಿ ನಿನ್ನ ಬಳಿ ಬಂದಿದ್ದೇನೆ.”

14077031a ಇತ್ಯುಕ್ತ್ವಾರ್ತಸ್ವರಂ ಸಾ ತು ಮುಮೋಚ ಧೃತರಾಷ್ಟ್ರಜಾ।
14077031c ದೀನಾ ದೀನಂ ಸ್ಥಿತಂ ಪಾರ್ಥಮಬ್ರವೀಚ್ಚಾಪ್ಯಧೋಮುಖಮ್।।

ಹೀಗೆ ಹೇಳಿ ಧೃತರಾಷ್ಟ್ರಜೆಯು ಆರ್ತಸ್ವರದಲ್ಲಿ ರೋದಿಸಿದಳು. ಮುಖಕೆಳಗೆ ಮಾಡಿಕೊಂಡು ದೀನನಾಗಿ ನಿಂತಿದ್ದ ಪಾರ್ಥನಿಗೆ ಆ ದೀನಳು ಹೇಳಿದಳು:

14077032a ಸ್ವಸಾರಂ ಮಾಮವೇಕ್ಷಸ್ವ ಸ್ವಸ್ರೀಯಾತ್ಮಜಮೇವ ಚ।
14077032c ಕರ್ತುಮರ್ಹಸಿ ಧರ್ಮಜ್ಞ ದಯಾಂ ಮಯಿ ಕುರೂದ್ವಹ।
14077032e ವಿಸ್ಮೃತ್ಯ ಕುರುರಾಜಾನಂ ತಂ ಚ ಮಂದಂ ಜಯದ್ರಥಮ್।।

“ಕುರೂದ್ವಹ! ಧರ್ಮಜ್ಞ! ನಿನ್ನ ತಂಗಿಯನ್ನು ನೋಡು. ಮತ್ತು ನಿನ್ನ ತಂಗಿಯ ಮೊಮ್ಮಗನನ್ನು ನೋಡು. ಕುರುರಾಜ ದುರ್ಯೋಧನ ಮತ್ತು ಮೂಢಮತಿ ಜಯದ್ರಥರನ್ನು ಮರೆತು ನನ್ನ ಮೇಲೆ ದಯೆತೋರಿಸಬೇಕು.

14077033a ಅಭಿಮನ್ಯೋರ್ಯಥಾ ಜಾತಃ ಪರಿಕ್ಷಿತ್ಪರವೀರಹಾ।
14077033c ತಥಾಯಂ ಸುರಥಾಜ್ಜಾತೋ ಮಮ ಪೌತ್ರೋ ಮಹಾಭುಜ।।

ಪರವೀರಹ ಪರಿಕ್ಷಿತನು ಅಭಿಮನ್ಯುವಿಗೆ ಹೇಗೆ ಹುಟ್ಟಿದನೋ ಹಾಗೆಯೇ ಈ ಮಹಾಭುಜನು ನನ್ನ ಮಗ ಸುರಥನಿಗೆ ಹುಟ್ಟಿದ ಮೊಮ್ಮಗನು.

14077034a ತಮಾದಾಯ ನರವ್ಯಾಘ್ರ ಸಂಪ್ರಾಪ್ತಾಸ್ಮಿ ತವಾಂತಿಕಮ್।
14077034c ಶಮಾರ್ಥಂ ಸರ್ವಯೋಧಾನಾಂ ಶೃಣು ಚೇದಂ ವಚೋ ಮಮ।।

ನರವ್ಯಾಘ್ರ! ಸರ್ವಯೋಧರ ಶಾಂತಿಗಾಗಿ ಇವನನ್ನು ಕರೆದುಕೊಂಡು ನಿನ್ನ ಬಳಿ ಬಂದಿರುವೆನು. ನನ್ನ ಈ ಮಾತನ್ನು ಕೇಳು.

14077035a ಆಗತೋಽಯಂ ಮಹಾಬಾಹೋ ತಸ್ಯ ಮಂದಸ್ಯ ಪೌತ್ರಕಃ।
14077035c ಪ್ರಸಾದಮಸ್ಯ ಬಾಲಸ್ಯ ತಸ್ಮಾತ್ತ್ವಂ ಕರ್ತುಮರ್ಹಸಿ।।

ಮಹಾಬಾಹೋ! ಆ ಮಂದ ಜಯದ್ರಥನ ಮೊಮ್ಮಗನು ಇಗೋ ಇಲ್ಲಿಗೆ ಬಂದಿದ್ದಾನೆ. ಆದುದರಿಂದ ಈ ಬಾಲಕನ ಮೇಲೆ ನೀನು ಕರುಣೆತೋರಿಸಬೇಕು.

14077036a ಏಷ ಪ್ರಸಾದ್ಯ ಶಿರಸಾ ಮಯಾ ಸಾರ್ಧಮರಿಂದಮ।
14077036c ಯಾಚತೇ ತ್ವಾಂ ಮಹಾಬಾಹೋ ಶಮಂ ಗಚ್ಚ ಧನಂಜಯ।।

ಅರಿಂದಮ! ಮಹಾಬಾಹೋ! ಧನಂಜಯ! ನನ್ನೊಡನೆ ಇವನು ನಿನಗೆ ಶಿರಬಾಗಿ ನಮಸ್ಕರಿಸುತ್ತಿದ್ದಾನೆ. ಕರುಣೆಯನ್ನು ಕೇಳುತ್ತಿದ್ದಾನೆ. ಶಾಂತನಾಗಿ ಹೋಗು!

14077037a ಬಾಲಸ್ಯ ಹತಬಂಧೋಶ್ಚ ಪಾರ್ಥ ಕಿಂ ಚಿದಜಾನತಃ।
14077037c ಪ್ರಸಾದಂ ಕುರು ಧರ್ಮಜ್ಞ ಮಾ ಮನ್ಯುವಶಮನ್ವಗಾಃ।।

ಪಾರ್ಥ! ಧರ್ಮಜ್ಞ! ಬಂಧುಗಳನ್ನು ಕಳೆದುಕೊಂಡಿರುವ ಏನನ್ನೂ ತಿಳಿಯದಿರುವ ಈ ಬಾಲಕನ ಮೇಲೆ ಕರುಣೆತೋರು. ಕೋಪವಶನಾಗಬೇಡ!

14077038a ತಮನಾರ್ಯಂ ನೃಶಂಸಂ ಚ ವಿಸ್ಮೃತ್ಯಾಸ್ಯ ಪಿತಾಮಹಮ್।
14077038c ಆಗಸ್ಕಾರಿಣಮತ್ಯರ್ಥಂ ಪ್ರಸಾದಂ ಕರ್ತುಮರ್ಹಸಿ।।

ಇವನ ಅಜ್ಜನಾದ ಜಯದ್ರಥನ ಅನಾರ್ಯ ಕ್ರೂರತನವನ್ನು ಮತ್ತು ನಿಮಗೆಸಗಿದ ಅಪರಾಧಗಳನ್ನು ಮರೆತು ಇವನ ಮೇಲೆ ಕೃಪೆತೋರಬೇಕು!”

14077039a ಏವಂ ಬ್ರುವತ್ಯಾಂ ಕರುಣಂ ದುಃಶಲಾಯಾಂ ಧನಂಜಯಃ।
14077039c ಸಂಸ್ಮೃತ್ಯ ದೇವೀಂ ಗಾಂಧಾರೀಂ ಧೃತರಾಷ್ಟ್ರಂ ಚ ಪಾರ್ಥಿವಮ್।
14077039e ಪ್ರೋವಾಚ ದುಃಖಶೋಕಾರ್ತಃ ಕ್ಷತ್ರಧರ್ಮಂ ವಿಗರ್ಹಯನ್।।

ದುಃಶಲೆಯು ಈ ರೀತಿ ಕರುಣಾಜನಕ ಮಾತುಗಳನ್ನು ಹೇಳುತ್ತಿರಲು ಧನಂಜಯನು ದೇವೀ ಗಾಂಧಾರಿ ಮತ್ತು ಪಾರ್ಥಿವ ಧೃತರಾಷ್ಟ್ರರನ್ನು ಸ್ಮರಿಸಿಕೊಂಡು ದುಃಖಶೋಕಾರ್ತನಾಗಿ ಕ್ಷತ್ರಧರ್ಮವನ್ನೇ ನಿಂದಿಸಿ ಈ ಮಾತನ್ನಾಡಿದನು:

14077040a ಧಿಕ್ತಂ ದುರ್ಯೋಧನಂ ಕ್ಷುದ್ರಂ ರಾಜ್ಯಲುಬ್ಧಂ ಚ ಮಾನಿನಮ್।
14077040c ಯತ್ಕೃತೇ ಬಾಂಧವಾಃ ಸರ್ವೇ ಮಯಾ ನೀತಾ ಯಮಕ್ಷಯಮ್।।

“ನಾನು ಸರ್ವ ಬಾಂಧವರನ್ನೂ ಯಮಕ್ಷಯಕ್ಕೆ ಕಳುಹಿಸುವಂತೆ ಮಾಡಿದ ಆ ಮಾನಿನಿ ರಾಜ್ಯಲೋಭೀ ಕ್ಷುದ್ರ ದುರ್ಯೋಧನನಿಗೆ ಧಿಕ್ಕಾರ!”

14077041a ಇತ್ಯುಕ್ತ್ವಾ ಬಹು ಸಾಂತ್ವಾದಿ ಪ್ರಸಾದಮಕರೋಜ್ಜಯಃ।
14077041c ಪರಿಷ್ವಜ್ಯ ಚ ತಾಂ ಪ್ರೀತೋ ವಿಸಸರ್ಜ ಗೃಹಾನ್ಪ್ರತಿ।।

ಹೀಗೆ ಹೇಳಿ ಅನೇಕ ಸಾಂತ್ವನಮಾತುಗಳಿಂದ ಜಯ ಅರ್ಜುನನು ಪ್ರಸಾದಿತನಾದನು. ಪ್ರೀತಿಯಿಂದ ಅವಳನ್ನು ಬಿಗಿದಪ್ಪಿ, ಮನೆಗೆ ಕಳುಹಿಸಿಕೊಟ್ಟನು.

14077042a ದುಃಶಲಾ ಚಾಪಿ ತಾನ್ಯೋಧಾನ್ನಿವಾರ್ಯ ಮಹತೋ ರಣಾತ್।
14077042c ಸಂಪೂಜ್ಯ ಪಾರ್ಥಂ ಪ್ರಯಯೌ ಗೃಹಾನ್ಪ್ರತಿ ಶುಭಾನನಾ।।

ಶುಭಾನನೆ ದುಃಶಲೆಯೂ ಕೂಡ ಮಹಾರಣದಿಂದ ಆ ಯೋಧರನ್ನು ಹಿಂದಿರುಗುವಂತೆ ಮಾಡಿ ಪಾರ್ಥನನ್ನು ಪೂಜಿಸಿ ತನ್ನ ಮನೆಯ ಕಡೆ ನಡೆದಳು.

14077043a ತತಃ ಸೈಂಧವಕಾನ್ಯೋಧಾನ್ವಿನಿರ್ಜಿತ್ಯ ನರರ್ಷಭಃ।
14077043c ಪುನರೇವಾನ್ವಧಾವತ್ಸ ತಂ ಹಯಂ ಕಾಮಚಾರಿಣಮ್।।

ಅನಂತರ ಸೈಂಧವ ಯೋಧರನ್ನು ಬಿಟ್ಟು ನರರ್ಷಭ ಅರ್ಜುನನು ಕಾಮಚಾರಿಣಿಯಾದ ಆ ಕುದುರೆಯನ್ನು ಪುನಃ ಅನುಸರಿಸುತ್ತಾ ಹೋದನು.

14077044a ಸಸಾರ ಯಜ್ಞಿಯಂ ವೀರೋ ವಿಧಿವತ್ಸ ವಿಶಾಂ ಪತೇ।
14077044c ತಾರಾಮೃಗಮಿವಾಕಾಶೇ ದೇವದೇವಃ ಪಿನಾಕಧೃಕ್।।

ವಿಶಾಂಪತೇ! ದೇವದೇವ ಪಿನಾಕಧಾರಿಯು ಆಕಾಶದಲ್ಲಿ ತಾರಾಮೃಗವನ್ನು ಹೇಗೆ ಹಿಂಬಾಲಿಸಿ ಹೋಗುತ್ತಿದ್ದನೋ ಹಾಗೆ ವೀರ ಅರ್ಜುನನು ಯಜ್ಞದ ಕುದುರೆಯನ್ನು ವಿಧಿವತ್ತಾಗಿ ಹಿಂಬಾಲಿಸಿ ಹೋಗುತ್ತಿದ್ದನು.

14077045a ಸ ಚ ವಾಜೀ ಯಥೇಷ್ಟೇನ ತಾಂಸ್ತಾನ್ದೇಶಾನ್ಯಥಾಸುಖಮ್।
14077045c ವಿಚಚಾರ ಯಥಾಕಾಮಂ ಕರ್ಮ ಪಾರ್ಥಸ್ಯ ವರ್ಧಯನ್।।

ಆ ಕುದುರೆಯು ಪಾರ್ಥನ ಯಶಸ್ಸನ್ನು ವೃದ್ಧಿಸುತ್ತಾ ಯಥೇಷ್ಟವಾಗಿ ಯಥಾಸುಖವಾಗಿ ಮನಸ್ಸು ಬಂದಂತೆ ದೇಶಗಳನ್ನು ಸುತ್ತಾಡಿತು.

14077046a ಕ್ರಮೇಣ ಸ ಹಯಸ್ತ್ವೇವಂ ವಿಚರನ್ ಭರತರ್ಷಭ।
14077046c ಮಣಿಪೂರಪತೇರ್ದೇಶಮುಪಾಯಾತ್ ಸಹಪಾಂಡವಃ।।

ಭರತರ್ಷಭ! ಹೀಗೆಯೇ ಸಂಚರಿಸುತ್ತಾ ಕ್ರಮೇಣವಾಗಿ ಆ ಕುದುರೆಯು ಪಾಂಡವನೊಂದಿಗೆ ಮಣಿಪುರದ ಅರಸನ ದೇಶಕ್ಕೆ ಆಗಮಿಸಿತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸೈಂಧವಪರಾಜಯೇ ಸಪ್ತಸಪ್ತತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸೈಂಧವಪರಾಜಯ ಎನ್ನುವ ಎಪ್ಪತ್ತೇಳನೇ ಅಧ್ಯಾಯವು.