ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 76
ಸಾರ
ಸೈಂಧವ ರಾಜರೊಡನೆ ಅರ್ಜುನನ ಯುದ್ಧ (1-32).
14076001 ವೈಶಂಪಾಯನ ಉವಾಚ
14076001a ಸೈಂಧವೈರಭವದ್ಯುದ್ಧಂ ತತಸ್ತಸ್ಯ ಕಿರೀಟಿನಃ।
14076001c ಹತಶೇಷೈರ್ಮಹಾರಾಜ ಹತಾನಾಂ ಚ ಸುತೈರಪಿ।।
ವೈಶಂಪಾಯನನು ಹೇಳಿದನು: “ಮಹಾರಾಜ! ಬಳಿಕ ಕಿರೀಟಿ ಮತ್ತು ಯುದ್ಧದಲ್ಲಿ ಹತರಾಗದೇ ಉಳಿದಿದ್ದ ಸೈಂಧವರು ಮತ್ತು ಹತರಾಗಿದ್ದ ಸೈಂಧವರ ಮಕ್ಕಳ ನಡುವೆ ಯುದ್ಧವು ನಡೆಯಿತು.
14076002a ತೇಽವತೀರ್ಣಮುಪಶ್ರುತ್ಯ ವಿಷಯಂ ಶ್ವೇತವಾಹನಮ್।
14076002c ಪ್ರತ್ಯುದ್ಯಯುರಮೃಷ್ಯಂತೋ ರಾಜಾನಃ ಪಾಂಡವರ್ಷಭಮ್।।
ಅರ್ಜುನನು ತಮ್ಮ ರಾಜ್ಯದ ಗಡಿಯಲ್ಲಿ ಬಂದಿದ್ದಾನೆಂದು ತಿಳಿದ ಆ ರಾಜರು ಅಸಹನೆಯಿಂದ ಪಾಂಡವರ್ಷಭನೊಡನೆ ಯುದ್ಧಮಾಡಿದರು.
14076003a ಅಶ್ವಂ ಚ ತಂ ಪರಾಮೃಶ್ಯ ವಿಷಯಾಂತೇ ವಿಷೋಪಮಾಃ।
14076003c ನ ಭಯಂ ಚಕ್ರಿರೇ ಪಾರ್ಥಾದ್ಭೀಮಸೇನಾದನಂತರಾತ್।।
ರಾಜ್ಯದ ಗಡಿಗೆ ಬಂದಿದ್ದ ಅಶ್ವವನ್ನು ವಿಷೋಪಮರಾದ ಅವರು ಭೀಮನ ತಮ್ಮ ಪಾರ್ಥನಿಗೆ ಹೆದರದೇ ಬಂಧಿಸಿದರು.
14076004a ತೇಽವಿದೂರಾದ್ಧನುಷ್ಪಾಣಿಂ ಯಜ್ಞಿಯಸ್ಯ ಹಯಸ್ಯ ಚ।
14076004c ಬೀಭತ್ಸುಂ ಪ್ರತ್ಯಪದ್ಯಂತ ಪದಾತಿನಮವಸ್ಥಿತಮ್।।
ಯಜ್ಞಕುದುರೆಯ ಸ್ವಲ್ಪ ದೂರದಲ್ಲಿಯೇ ಪದಾತಿಯಾಗಿ ನಿಂತಿದ್ದ ಧನುಷ್ಪಾಣೀ ಬೀಭತ್ಸುವನ್ನು ಎದುರಿಸಿದರು.
14076005a ತತಸ್ತೇ ತು ಮಹಾವೀರ್ಯಾ ರಾಜಾನಃ ಪರ್ಯವಾರಯನ್।
14076005c ಜಿಗೀಷಂತೋ ನರವ್ಯಾಘ್ರಾಃ ಪೂರ್ವಂ ವಿನಿಕೃತಾ ಯುಧಿ।।
ಹಿಂದೆ ಯುದ್ಧದಲ್ಲಿ ಅವನಿಂದ ಸೋತುಹೋಗಿದ್ದ ಆ ಮಹಾವೀರ್ಯ ನರವ್ಯಾಘ್ರ ರಾಜರು ಈಗ ಅವನನ್ನು ಗೆಲ್ಲಲು ಬಯಸಿ ಸುತ್ತುವರೆದರು.
14076006a ತೇ ನಾಮಾನ್ಯಥ ಗೋತ್ರಾಣಿ ಕರ್ಮಾಣಿ ವಿವಿಧಾನಿ ಚ।
14076006c ಕೀರ್ತಯಂತಸ್ತದಾ ಪಾರ್ಥಂ ಶರವರ್ಷೈರವಾಕಿರನ್।।
ಅವರು ತಮ್ಮ ನಾಮ-ಗೋತ್ರಗಳನ್ನೂ ವಿವಿಧ ಸಾಧನೆಗಳನ್ನೂ ಹೇಳಿಕೊಳ್ಳುತ್ತಾ ಪಾರ್ಥನನ್ನು ಶರವರ್ಷಗಳಿಂದ ಮುಚ್ಚಿದರು.
14076007a ತೇ ಕಿರಂತಃ ಶರಾಂಸ್ತೀಕ್ಷ್ಣಾನ್ವಾರಣೇಂದ್ರನಿವಾರಣಾನ್।
14076007c ರಣೇ ಜಯಮಭೀಪ್ಸಂತಃ ಕೌಂತೇಯಂ ಪರ್ಯವಾರಯನ್।।
ಆನೆಗಳನ್ನೇ ತಡೆದು ನಿಲ್ಲಿಸಲು ಸಮರ್ಥವಾದ ತೀಕ್ಷ್ಣ ಬಾಣಗಳನ್ನು ಎರಚುತ್ತಾ ರಣದಲ್ಲಿ ಜಯವನ್ನು ಬಯಸಿದ ಅವರು ಕೌಂತೇಯನನ್ನು ಸುತ್ತುವರೆದು ಮುತ್ತಿದರು.
14076008a ತೇಽಸಮೀಕ್ಷ್ಯೈವ ತಂ ವೀರಮುಗ್ರಕರ್ಮಾಣಮಾಹವೇ।
14076008c ಸರ್ವೇ ಯುಯುಧಿರೇ ವೀರಾ ರಥಸ್ಥಾಸ್ತಂ ಪದಾತಿನಮ್।।
ಯುದ್ಧದಲ್ಲಿ ಉಗ್ರಕರ್ಮಗಳನ್ನೆಸಗಿದ್ದ ಆ ವೀರನು ಪದಾತಿಯಾಗಿರುವುದನ್ನು ನೋಡಿ ಆ ಎಲ್ಲ ವೀರರೂ ರಥಸ್ಥರಾಗಿಯೇ ಯುದ್ಧದಲ್ಲಿ ತೊಡಗಿದರು.
14076009a ತೇ ತಮಾಜಘ್ನಿರೇ ವೀರಂ ನಿವಾತಕವಚಾಂತಕಮ್।
14076009c ಸಂಶಪ್ತಕನಿಹಂತಾರಂ ಹಂತಾರಂ ಸೈಂಧವಸ್ಯ ಚ।।
ನಿವಾತಕವಚರಿಗೆ ಯಮನಾಗಿದ್ದ, ಸಂಶಪ್ತಕರನ್ನು ಸಂಹರಿಸಿದ್ದ, ಸೈಂಧವನನ್ನು ಕೊಂದಿದ್ದ ಆ ವೀರನನ್ನು ಅವರು ಪ್ರಹರಿಸಿದರು.
14076010a ತತೋ ರಥಸಹಸ್ರೇಣ ಹಯಾನಾಮಯುತೇನ ಚ।
14076010c ಕೋಷ್ಠಕೀಕೃತ್ಯ ಕೌಂತೇಯಂ ಸಂಪ್ರಹೃಷ್ಟಮಯೋಧಯನ್।।
ಆಗ ಅವರು ಸಾವಿರ ರಥಗಳು ಮತ್ತು ಹತ್ತು ಸಾವಿರ ಕುದುರೆಗಳಿಂದ ಗುಂಪಾಗಿ ಸುತ್ತುವರೆದು ಕೌಂತೇಯನೊಡನೆ ಹರ್ಷದಿಂದ ಯುದ್ಧಮಾಡಿದರು.
14076011a ಸಂಸ್ಮರಂತೋ ವಧಂ ವೀರಾಃ ಸಿಂಧುರಾಜಸ್ಯ ಧೀಮತಃ।
14076011c ಜಯದ್ರಥಸ್ಯ ಕೌರವ್ಯ ಸಮರೇ ಸವ್ಯಸಾಚಿನಾ।।
ಕೌರವ್ಯ! ಸಮರದಲ್ಲಿ ಸವ್ಯಸಾಚಿಯು ಧೀಮತ ಸಿಂಧುರಾಜ ಜಯದ್ರಥನನ್ನು ವಧಿಸಿದುದನ್ನು ನೆನಪಿಸಿಕೊಳ್ಳುತ್ತಾ ಆ ವೀರರು ಯುದ್ಧಮಾಡಿದರು.
14076012a ತತಃ ಪರ್ಜನ್ಯವತ್ಸರ್ವೇ ಶರವೃಷ್ಟಿಮವಾಸೃಜನ್।
14076012c ತೈಃ ಕೀರ್ಣಃ ಶುಶುಭೇ ಪಾರ್ಥೋ ರವಿರ್ಮೇಘಾಂತರೇ ಯಥಾ।।
ಆಗ ಅವರೆಲ್ಲರೂ ಮಳೆಯಂತೆ ಶರವೃಷ್ಟಿಯನ್ನು ಅವನ ಮೇಲೆ ಸುರಿಸಿದರು. ಅವುಗಳಿಂದ ಮುಸುಕಲ್ಪಟ್ಟ ಪಾರ್ಥನು ಮೇಘಗಳ ಮಧ್ಯದಲ್ಲಿದ್ದ ರವಿಯಂತೆ ಶೋಭಿಸಿದನು.
14076013a ಸ ಶರೈಃ ಸಮವಚ್ಚನ್ನೋ ದದೃಶೇ ಪಾಂಡವರ್ಷಭಃ।
14076013c ಪಂಜರಾಂತರಸಂಚಾರೀ ಶಕುಂತ ಇವ ಭಾರತ।।
ಭಾರತ! ಆ ಶರಗಳಿಂದ ಮುಚ್ಚಿಹೋಗಿದ್ದ ಪಾಂಡವರ್ಷಭನು ಪಿಂಜರದಲ್ಲಿ ಅಲೆದಾಡುತ್ತಿದ್ದ ಪಕ್ಷಿಯಂತೆಯೇ ಕಂಡನು.
14076014a ತತೋ ಹಾಹಾಕೃತಂ ಸರ್ವಂ ಕೌಂತೇಯೇ ಶರಪೀಡಿತೇ।
14076014c ತ್ರೈಲೋಕ್ಯಮಭವದ್ರಾಜನ್ರವಿಶ್ಚಾಸೀದ್ರಜೋರುಣಃ।।
ರಾಜನ್! ಕೌಂತೇಯನು ಶರಪೀಡಿತನಾಗಲು ತ್ರೈಲೋಕ್ಯಗಳಲ್ಲಿ ಎಲ್ಲಕಡೆಯೂ ಹಾಹಾಕಾರವುಂಟಾಯಿತು. ರವಿಯು ಧೂಳುಮುಕ್ಕಿ ಕೆಂಪಾದನು.
14076015a ತತೋ ವವೌ ಮಹಾರಾಜ ಮಾರುತೋ ರೋಮಹರ್ಷಣಃ।
14076015c ರಾಹುರಗ್ರಸದಾದಿತ್ಯಂ ಯುಗಪತ್ಸೋಮಮೇವ ಚ।।
ಮಹಾರಾಜ! ಆಗ ರೋಮಾಂಚಕಾರೀ ಚಂಡಮಾರುತವು ಬೀಸತೊಡಗಿತು. ರಾಹುವು ಆದಿತ್ಯ-ಚಂದ್ರರಿಬ್ಬರನ್ನೂ ಒಂದೇ ಕಾಲದಲ್ಲಿ ನುಂಗಿದನು.
14076016a ಉಲ್ಕಾಶ್ಚ ಜಘ್ನಿರೇ ಸೂರ್ಯಂ ವಿಕೀರ್ಯಂತ್ಯಃ ಸಮಂತತಃ।
14076016c ವೇಪಥುಶ್ಚಾಭವದ್ರಾಜನ್ಕೈಲಾಸಸ್ಯ ಮಹಾಗಿರೇಃ।।
ರಾಜನ್! ಎಲ್ಲಕಡೆಗಳಿಂದಲೂ ಬೀಳುತ್ತಿದ್ದ ಉಲ್ಕೆಗಳು ಸೂರ್ಯನ ಮೇಲೂ ಬಿದ್ದವು. ಮಹಾಗಿರಿ ಕೈಲಾಸವೂ ನಡುಗಿತು.
14076017a ಮುಮುಚುಶ್ಚಾಸ್ರಮತ್ಯುಷ್ಣಂ ದುಃಖಶೋಕಸಮನ್ವಿತಾಃ।
14076017c ಸಪ್ತರ್ಷಯೋ ಜಾತಭಯಾಸ್ತಥಾ ದೇವರ್ಷಯೋಽಪಿ ಚ।।
ದುಃಖಶೋಕಸಮನ್ವಿತರಾದ ಸಪ್ತರ್ಷಿಗಳು ಬಿಸಿ ನಿಟ್ಟುಸಿರನ್ನು ಬಿಡತೊಡಗಿದರು. ಹಾಗೆಯೇ ದೇವರ್ಷಿಗಳಿಗೂ ಭಯವುಂಟಾಯಿತು.
14076018a ಶಶಶ್ಚಾಶು ವಿನಿರ್ಭಿದ್ಯ ಮಂಡಲಂ ಶಶಿನೋಽಪತತ್।
14076018c ವಿಪರೀತಸ್ತದಾ ರಾಜಂಸ್ತಸ್ಮಿನ್ನುತ್ಪಾತಲಕ್ಷಣೇ।।
ರಾಜನ್! ಚಂದ್ರಮಂಡಲವನ್ನೇ ಭೇದಿಸಿಕೊಂಡು ಮೊಲವು ಕೆಳಗುರುಳಿತು. ಹಾಗೆ ವಿಪರೀತ ಉತ್ಪಾತಗಳು ಕಾಣಿಸಿಕೊಂಡವು.
14076019a ರಾಸಭಾರುಣಸಂಕಾಶಾ ಧನುಷ್ಮಂತಃ ಸವಿದ್ಯುತಃ।
14076019c ಆವೃತ್ಯ ಗಗನಂ ಮೇಘಾ ಮುಮುಚುರ್ಮಾಂಸಶೋಣಿತಮ್।।
ಕತ್ತೆಯ ಕೆಂಪುಬಣ್ಣಗಳುಳ್ಳ ಮೇಘಗಳು ಕಾಮನಬಿಲ್ಲು ಮತ್ತು ಮಿಂಚುಗಳಿಂದ ಕೂಡಿ ಗಗನವನ್ನು ಆವರಿಸಿ ಮಾಂಸ-ರಕ್ತಗಳ ಮಳೆಯನ್ನೇ ಸುರಿಸಿದವು.
14076020a ಏವಮಾಸೀತ್ತದಾ ವೀರೇ ಶರವರ್ಷಾಭಿಸಂವೃತೇ।
14076020c ಲೋಕೇಽಸ್ಮಿನ್ ಭರತಶ್ರೇಷ್ಠ ತದದ್ಭುತಮಿವಾಭವತ್।।
ಭರತಶ್ರೇಷ್ಠ! ಶರವರ್ಷಗಳಿಂದ ಆ ವೀರ ಅರ್ಜುನನು ಮುಸುಕಿರಲು ಲೋಕದಲ್ಲಿ ಈ ಅದ್ಭುತಗಳು ನಡೆದವು.
14076021a ತಸ್ಯ ತೇನಾವಕೀರ್ಣಸ್ಯ ಶರಜಾಲೇನ ಸರ್ವಶಃ।
14076021c ಮೋಹಾತ್ ಪಪಾತ ಗಾಂಡೀವಮಾವಾಪಶ್ಚ ಕರಾದಪಿ।।
ಸುತ್ತಲೂ ಶರಜಾಲಗಳಿಂದ ಮುಚ್ಚಲ್ಪಟ್ಟ ಅರ್ಜುನನು ಮೋಹಪರವಶನಾಗಲು ಅವನ ಕೈಯಿಂದ ಗಾಂಡೀವವೂ, ಕೈಚೀಲಗಳೂ ಜಾರಿ ಬಿದ್ದವು.
14076022a ತಸ್ಮಿನ್ ಮೋಹಮನುಪ್ರಾಪ್ತೇ ಶರಜಾಲಂ ಮಹತ್ತರಮ್।
14076022c ಸೈಂಧವಾ ಮುಮುಚುಸ್ತೂರ್ಣಂ ಗತಸತ್ತ್ವೇ ಮಹಾರಥೇ।।
ಹೀಗೆ ಮಹಾರಥ ಅರ್ಜುನನು ಮೂರ್ಛಿತನಾಗಿದ್ದರೂ ಸೈಂಧವರು ಮಹತ್ತರವಾದ ಶರಜಾಲಗಳನ್ನು ಅವನ ಮೇಲೆ ಸುರಿಸುತ್ತಲೇ ಇದ್ದರು.
14076023a ತತೋ ಮೋಹಸಮಾಪನ್ನಂ ಜ್ಞಾತ್ವಾ ಪಾರ್ಥಂ ದಿವೌಕಸಃ।
14076023c ಸರ್ವೇ ವಿತ್ರಸ್ತಮನಸಸ್ತಸ್ಯ ಶಾಂತಿಪರಾಭವನ್।।
ಪಾರ್ಥನು ಮೂರ್ಛಿತನಾಗಿರುವುದನ್ನು ತಿಳಿದ ದಿವೌಕಸರು ಎಲ್ಲರೂ ಭಯಗೊಂಡು ಅದನ್ನು ನಿವಾರಿಸಲು ಅನುವಾದರು.
14076024a ತತೋ ದೇವರ್ಷಯಃ ಸರ್ವೇ ತಥಾ ಸಪ್ತರ್ಷಯೋಽಪಿ ಚ।
14076024c ಬ್ರಹ್ಮರ್ಷಯಶ್ಚ ವಿಜಯಂ ಜೇಪುಃ ಪಾರ್ಥಸ್ಯ ಧೀಮತಃ।।
ಆಗ ದೇವರ್ಷಿಗಳು, ಸಪ್ತರ್ಷಿಗಳು ಮತ್ತು ಬ್ರಹ್ಮರ್ಷಿಗಳು ಎಲ್ಲರೂ ಪಾರ್ಥನಿಗೆ ವಿಜಯವಾಗಲೆಂದು ಜಪಿಸತೊಡಗಿದರು.
14076025a ತತಃ ಪ್ರದೀಪಿತೇ ದೇವೈಃ ಪಾರ್ಥತೇಜಸಿ ಪಾರ್ಥಿವ।
14076025c ತಸ್ಥಾವಚಲವದ್ಧೀಮಾನ್ ಸಂಗ್ರಾಮೇ ಪರಮಾಸ್ತ್ರವಿತ್।।
ಪಾರ್ಥಿವ! ದೇವತೆಗಳಿಂದಾಗಿ ಪಾರ್ಥನ ತೇಜಸ್ಸು ಉದ್ದೀಪನಗೊಂಡಿತು. ಪರಮಾಸ್ತ್ರಗಳನ್ನು ತಿಳಿದಿದ್ದ ಆ ಧೀಮಂತನು ಸಂಗ್ರಾಮದಲ್ಲಿ ಪರ್ವತದಂತೆ ಸ್ಥಿರವಾಗಿ ನಿಂತುಕೊಂಡನು.
14076026a ವಿಚಕರ್ಷ ಧನುರ್ದಿವ್ಯಂ ತತಃ ಕೌರವನಂದನಃ।
14076026c ಯಂತ್ರಸ್ಯೇವೇಹ ಶಬ್ದೋಽಭೂನ್ಮಹಾಂಸ್ತಸ್ಯ ಪುನಃ ಪುನಃ।।
ಆಗ ಕೌರವನಂದನನು ದಿವ್ಯ ಧನುಸ್ಸನ್ನು ಸೆಳೆಯಲು ಅದರಿಂದಾಗಿ ಪುನಃ ಪುನಃ ಯಂತ್ರದ ಶಬ್ಧದಂತೆ ಮಹಾ ಶಬ್ಧವು ಕೇಳಿಬಂದಿತು.
14076027a ತತಃ ಸ ಶರವರ್ಷಾಣಿ ಪ್ರತ್ಯಮಿತ್ರಾನ್ ಪ್ರತಿ ಪ್ರಭುಃ।
14076027c ವವರ್ಷ ಧನುಷಾ ಪಾರ್ಥೋ ವರ್ಷಾಣೀವ ಸುರೇಶ್ವರಃ।।
ಆಗ ಪ್ರಭು ಪಾರ್ಥನು ಸುರೇಶ್ವರನಂತೆ ತನ್ನ ಧನುಸ್ಸಿನಿಂದ ಶತ್ರುಗಳ ಮೇಲೆ ಶರವರ್ಷಗಳನ್ನು ಸುರಿಸಿದನು.
14076028a ತತಸ್ತೇ ಸೈಂಧವಾ ಯೋಧಾಃ ಸರ್ವ ಏವ ಸರಾಜಕಾಃ।
14076028c ನಾದೃಶ್ಯಂತ ಶರೈಃ ಕೀರ್ಣಾಃ ಶಲಭೈರಿವ ಪಾವಕಾಃ।।
ಪತಂಗಗಳು ಮುತ್ತಿದ ಅಗ್ನಿಗಳಂತೆ ಶರಗಳಿಂದ ಮುಚ್ಚಲ್ಪಟ್ಟ ಆ ಸೈಂಧವ ಯೋಧರು ರಾಜರೊಂದಿಗೆ ಕಾಣಿಸದೇ ಹೋದರು.
14076029a ತಸ್ಯ ಶಬ್ದೇನ ವಿತ್ರೇಸುರ್ಭಯಾರ್ತಾಶ್ಚ ವಿದುದ್ರುವುಃ।
14076029c ಮುಮುಚುಶ್ಚಾಶ್ರು ಶೋಕಾರ್ತಾಃ ಸುಷುಪುಶ್ಚಾಪಿ ಸೈಂಧವಾಃ।।
ಗಾಂಡೀವದ ಶಬ್ಧದಿಂದ ಸೈಂಧವರು ಭಯಾರ್ತರಾಗಿ ನಡುಗಿದರು ಮತ್ತು ಪಲಾಯನಗೈದರು. ಶೋಕಾರ್ತರಾಗಿ ಅತ್ತರು ಮತ್ತು ಮೂರ್ಛಿತರಾದರು ಕೂಡ.
14076030a ತಾಂಸ್ತು ಸರ್ವಾನ್ನರಶ್ರೇಷ್ಠಃ ಸರ್ವತೋ ವಿಚರನ್ ಬಲೀ।
14076030c ಅಲಾತಚಕ್ರವದ್ರಾಜನ್ಶರಜಾಲೈಃ ಸಮರ್ಪಯತ್।।
ರಾಜನ್! ಆ ಬಲಶಾಲೀ ನರಶ್ರೇಷ್ಠನು ಪಂಜಿಯ ಚಕ್ರದಂತೆ ಎಲ್ಲಕಡೆ ತಿರುಗುತ್ತಾ ಅವರೆಲ್ಲರ ಮೇಲೆ ಶರಜಾಲಗಳನ್ನು ಸುರಿಸಿದನು.
14076031a ತದಿಂದ್ರಜಾಲಪ್ರತಿಮಂ ಬಾಣಜಾಲಮಮಿತ್ರಹಾ।
14076031c ವ್ಯಸೃಜದ್ದಿಕ್ಷು ಸರ್ವಾಸು ಮಹೇಂದ್ರ ಇವ ವಜ್ರಭೃತ್।।
ವಜ್ರಧಾರಿ ಮಹೇಂದ್ರನಂತೆ ಇಂದ್ರಜಾಲದಂತಿರುವ ಬಾಣಜಾಲವನ್ನು ಅಮಿತ್ರಹ ಅರ್ಜುನನು ಸರ್ವ ದಿಕ್ಕುಗಳಲ್ಲಿಯೂ ಪ್ರಯೋಗಿಸಿದನು.
14076032a ಮೇಘಜಾಲನಿಭಂ ಸೈನ್ಯಂ ವಿದಾರ್ಯ ಸ ರವಿಪ್ರಭಃ।
14076032c ವಿಬಭೌ ಕೌರವಶ್ರೇಷ್ಠಃ ಶರದೀವ ದಿವಾಕರಃ।।
ಮೇಘಜಾಲಗಳಂತಿದ್ದ ಆ ಸೇನೆಯನ್ನು ಸೀಳಿದ ರವಿಪ್ರಭ ಕೌರವಶ್ರೇಷ್ಠನು ಶರದ್ಕಾಲದ ದಿವಾಕರನಂತೆಯೇ ಬೆಳಗಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸೈಂಧವಯುದ್ಧೇ ಷಟ್ಸಪ್ತತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸೈಂಧವಯುದ್ಧ ಎನ್ನುವ ಎಪ್ಪತ್ತಾರನೇ ಅಧ್ಯಾಯವು.