ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 75
ಸಾರ
ಅರ್ಜುನನು ವಜ್ರದತ್ತನ ಆನೆಯನ್ನು ಸಂಹರಿಸಿದುದು (1-19). ವಜ್ರದತ್ತನನ್ನು ಸಂಹರಿಸದೆಯೇ ಬಿಟ್ಟು ಅರ್ಜುನನು ಅವನಿಗೆ ಅಶ್ವಮೇಧ ಯಾಗಕ್ಕೆ ನಿಮಂತ್ರಣವನ್ನಿತ್ತುದು (20-26).
14075001 ವೈಶಂಪಾಯನ ಉವಾಚ
14075001a ಏವಂ ತ್ರಿರಾತ್ರಮಭವತ್ತದ್ಯುದ್ಧಂ ಭರತರ್ಷಭ।
14075001c ಅರ್ಜುನಸ್ಯ ನರೇಂದ್ರೇಣ ವೃತ್ರೇಣೇವ ಶತಕ್ರತೋಃ।।
ವೈಶಂಪಾಯನನು ಹೇಳಿದನು: “ಭರತರ್ಷಭ! ಹೀಗೆ ವೃತ್ರನೊಡನೆ ಶತಕ್ರತುವಿನ ಯುದ್ಧದಂತಿದ್ದ ಅರ್ಜುನ ಮತ್ತು ನರೇಂದ್ರ ವಜ್ರದತ್ತನ ನಡುವಿನ ಯುದ್ಧವು ಮೂರುರಾತ್ರಿಗಳು ನಡೆಯಿತು.
14075002a ತತಶ್ಚತುರ್ಥೇ ದಿವಸೇ ವಜ್ರದತ್ತೋ ಮಹಾಬಲಃ।
14075002c ಜಹಾಸ ಸಸ್ವನಂ ಹಾಸಂ ವಾಕ್ಯಂ ಚೇದಮಥಾಬ್ರವೀತ್।।
ನಾಲ್ಕನೆಯ ದಿವಸ ಮಹಾಬಲ ವಜ್ರದತ್ತನು ಗಟ್ಟಿಯಾಗಿ ಅಟ್ಟಹಾಸದಿಂದ ನಗುತ್ತಾ ಈ ಮಾತನ್ನಾಡಿದನು:
14075003a ಅರ್ಜುನಾರ್ಜುನ ತಿಷ್ಠಸ್ವ ನ ಮೇ ಜೀವನ್ವಿಮೋಕ್ಷ್ಯಸೇ।
14075003c ತ್ವಾಂ ನಿಹತ್ಯ ಕರಿಷ್ಯಾಮಿ ಪಿತುಸ್ತೋಯಂ ಯಥಾವಿಧಿ।।
“ಅರ್ಜುನ! ಅರ್ಜುನ! ನಿಲ್ಲು! ಜೀವಸಹಿತವಾಗಿ ನನ್ನಿಂದ ನೀನು ಬಿಡುಗಡೆ ಹೊಂದುವುದಿಲ್ಲ. ನಿನ್ನನ್ನು ಸಂಹರಿಸಿ ಯಥಾವಿಧಿಯಾಗಿ ನಾನು ನನ್ನ ತಂದೆಗೆ ತರ್ಪಣವನ್ನು ನೀಡುತ್ತೇನೆ!
14075004a ತ್ವಯಾ ವೃದ್ಧೋ ಮಮ ಪಿತಾ ಭಗದತ್ತಃ ಪಿತುಃ ಸಖಾ।
14075004c ಹತೋ ವೃದ್ಧೋಽಪಚಾಯಿತ್ವಾಚ್ಚಿಶುಂ ಮಾಮದ್ಯ ಯೋಧಯ।।
ನಿನ್ನ ವೃದ್ಧ ತಂದೆಯ ಸಖ ನನ್ನ ತಂದೆ ವೃದ್ಧ ಭಗದತ್ತನನ್ನು ನೀನು ಸಂಹರಿಸಿದೆ! ಇಂದು ಇನ್ನೂ ಬಾಲಕನಾಗಿರುವ ನನ್ನೊಡನೆ ಯುದ್ಧಮಾಡು!”
14075005a ಇತ್ಯೇವಮುಕ್ತ್ವಾ ಸಂಕ್ರುದ್ಧೋ ವಜ್ರದತ್ತೋ ನರಾಧಿಪಃ।
14075005c ಪ್ರೇಷಯಾಮಾಸ ಕೌರವ್ಯ ವಾರಣಂ ಪಾಂಡವಂ ಪ್ರತಿ।।
ಕೌರವ್ಯ! ಹೀಗೆ ಹೇಳಿ ಸಂಕ್ರುದ್ಧನಾದ ನರಾಧಿಪ ವಜ್ರದತ್ತನು ಆನೆಯನ್ನು ಪಾಂಡವನ ಮೇಲೆ ಆಕ್ರಮಣಿಸಿದನು.
14075006a ಸಂಪ್ರೇಷ್ಯಮಾಣೋ ನಾಗೇಂದ್ರೋ ವಜ್ರದತ್ತೇನ ಧೀಮತಾ।
14075006c ಉತ್ಪತಿಷ್ಯನ್ನಿವಾಕಾಶಮಭಿದುದ್ರಾವ ಪಾಂಡವಮ್।।
ಧೀಮತ ವಜ್ರದತ್ತನಿಂದ ಕಳುಹಿಸಲ್ಪಟ್ಟ ಆ ಗಜೇಂದ್ರವು ಆಕಾಶಕ್ಕೆ ಜಿಗಿಯುತ್ತಿರುವುದೋ ಎನ್ನುವಂತೆ ಪಾಂಡವನ ಮೇಲೆ ಎರಗಿತು.
14075007a ಅಗ್ರಹಸ್ತಪ್ರಮುಕ್ತೇನ ಶೀಕರೇಣ ಸ ಫಲ್ಗುನಮ್।
14075007c ಸಮುಕ್ಷತ ಮಹಾರಾಜ ಶೈಲಂ ನೀಲ ಇವಾಂಬುದಃ।।
ಮಹಾರಾಜ! ಅದು ತನ್ನ ಸೊಂಡಿಲಿನಿಂದ ನೀಲಮೋಡಗಳು ಮಳೆಸುರಿಸುವಂತೆ ನೀರಿನ ತುಂತುರುಗಳನ್ನು ಫಲ್ಗುನನ ಮೇಲೆ ಸುರಿಸಿತು.
14075008a ಸ ತೇನ ಪ್ರೇಷಿತೋ ರಾಜ್ಞಾ ಮೇಘವನ್ನಿನದನ್ಮುಹುಃ।
14075008c ಮುಖಾಡಂಬರಘೋಷೇಣ ಸಮಾದ್ರವತ ಫಲ್ಗುನಮ್।।
ರಾಜನಿಂದ ಕಳುಹಿಸಲ್ಪಟ್ಟ ಆ ಅನೆಯು ಪುನಃ ಪುನಃ ಮೇಘದಂತೆ ಗರ್ಜಿಸುತ್ತಾ, ಮುಖಾಡಂಬರ ಘೋಷಗಳೊಂದಿಗೆ ಫಲ್ಗುನನನ್ನು ಆಕ್ರಮಣಿಸಿತು.
14075009a ಸ ನೃತ್ಯನ್ನಿವ ನಾಗೇಂದ್ರೋ ವಜ್ರದತ್ತಪ್ರಚೋದಿತಃ।
14075009c ಆಸಸಾದ ದ್ರುತಂ ರಾಜನ್ಕೌರವಾಣಾಂ ಮಹಾರಥಮ್।।
ರಾಜನ್! ವಜ್ರದತ್ತನಿಂದ ಪ್ರಚೋದಿತಗೊಂಡ ಆ ಗಜೇಂದ್ರವು ನರ್ತಿಸುತ್ತಿರುವುದೋ ಎನ್ನುವಂತೆ ಓಡಿ ಬಂದು ಮಹಾರಥ ಕೌರವನ ಮೇಲೆ ಎರಗಿತು.
14075010a ತಮಾಪತಂತಂ ಸಂಪ್ರೇಕ್ಷ್ಯ ವಜ್ರದತ್ತಸ್ಯ ವಾರಣಮ್।
14075010c ಗಾಂಡೀವಮಾಶ್ರಿತ್ಯ ಬಲೀ ನ ವ್ಯಕಂಪತ ಶತ್ರುಹಾ।।
ಹಾಗೆ ಮೇಲೆ ಬೀಳಲು ಬರುತ್ತಿದ್ದ ವಜ್ರದತ್ತನ ಆನೆಯನ್ನು ನೋಡಿ ಬಲಶಾಲೀ ಶತ್ರುಹಂತಕ ಅರ್ಜುನನು ಗಾಂಡೀವನ್ನು ಹಿಡಿದುಕೊಂಡು ಸ್ವಲ್ಪವೂ ವಿಚಲಿತನಾಗಲಿಲ್ಲ.
14075011a ಚುಕ್ರೋಧ ಬಲವಚ್ಚಾಪಿ ಪಾಂಡವಸ್ತಸ್ಯ ಭೂಪತೇಃ।
14075011c ಕಾರ್ಯವಿಘ್ನಮನುಸ್ಮೃತ್ಯ ಪೂರ್ವವೈರಂ ಚ ಭಾರತ।।
ಭಾರತ! ಹಿಂದಿನ ವೈರದಿಂದ ಭೂಪತಿ ವಜ್ರದತ್ತನು ಬಲವನ್ನುಪಯೋಗಿಸಿ ಯಜ್ಞಕ್ಕೆ ವಿಘ್ನವನ್ನುಂಟುಮಾಡುತ್ತಿರುವನೆಂದು ಸ್ಮರಿಸಿಕೊಂಡು ಅರ್ಜುನನು ಅತ್ಯಂತ ಕ್ರೋಧಿತನಾದನು.
14075012a ತತಸ್ತಂ ವಾರಣಂ ಕ್ರುದ್ಧಃ ಶರಜಾಲೇನ ಪಾಂಡವಃ।
14075012c ನಿವಾರಯಾಮಾಸ ತದಾ ವೇಲೇವ ಮಕರಾಲಯಮ್।।
ಆಗ ಕ್ರುದ್ಧನಾದ ಪಾಂಡವನು ಶರಜಾಲಗಳಿಂದ ತೀರವು ಸಮುದ್ರವನ್ನು ತಡೆಯುವಂತೆ ಆ ಆನೆಯನ್ನು ತಡೆದನು.
14075013a ಸ ನಾಗಪ್ರವರೋ ವೀರ್ಯಾದರ್ಜುನೇನ ನಿವಾರಿತಃ।
14075013c ತಸ್ಥೌ ಶರೈರ್ವಿತುನ್ನಾಂಗಃ ಶ್ವಾವಿಚ್ಚಲಲಿತೋ ಯಥಾ।।
ಅರ್ಜುನನಿಂದ ತಡೆಯಲ್ಪಟ್ಟ ಆ ಮಹಾಗಜವು ಅಂಗಾಂಗಗಳಲ್ಲಿ ಶರಗಳು ಚುಚ್ಚಿಕೊಂಡು ಮುಳ್ಳುಗಳು ನಿಮಿರಿನಿಂತಿದ್ದ ಮುಳ್ಳುಹಂದಿಯಂತೆ ಅಲ್ಲಿಯೇ ನಿಂತುಕೊಂಡಿತು.
14075014a ನಿವಾರಿತಂ ಗಜಂ ದೃಷ್ಟ್ವಾ ಭಗದತ್ತಾತ್ಮಜೋ ನೃಪಃ।
14075014c ಉತ್ಸಸರ್ಜ ಶಿತಾನ್ಬಾಣಾನರ್ಜುನೇ ಕ್ರೋಧಮೂರ್ಚಿತಃ।।
ಆನೆಯನ್ನು ತಡೆದು ನಿಲ್ಲಿಸಿದುದನ್ನು ನೋಡಿ ನೃಪ ಭಗದತ್ತಾತ್ಮಜನು ಕ್ರೋಧಮೂರ್ಚಿತನಾಗಿ ಅರ್ಜುನನ ಮೇಲೆ ನಿಶಿತ ಬಾಣಗಳನ್ನು ಪ್ರಯೋಗಿಸಿದನು.
14075015a ಅರ್ಜುನಸ್ತು ಮಹಾರಾಜ ಶರೈಃ ಶರವಿಘಾತಿಭಿಃ।
14075015c ವಾರಯಾಮಾಸ ತಾನಸ್ತಾಂಸ್ತದದ್ಭುತಮಿವಾಭವತ್।।
ಮಹಾರಾಜ! ಅರ್ಜುನನಾದರೋ ಶರಗಳನ್ನು ತುಂಡರಿಸಬಲ್ಲ ಶರಗಳಿಂದ ಅವನ ಬಾಣಗಳನ್ನು ತಡೆದನು. ಅದೊಂದು ಅದ್ಭುತವಾಗಿತ್ತು.
14075016a ತತಃ ಪುನರತಿಕ್ರುದ್ಧೋ ರಾಜಾ ಪ್ರಾಗ್ಜ್ಯೋತಿಷಾಧಿಪಃ।
14075016c ಪ್ರೇಷಯಾಮಾಸ ನಾಗೇಂದ್ರಂ ಬಲವಚ್ಚ್ವಸನೋಪಮಮ್।।
ಆಗ ಅತಿಕ್ರುದ್ಧನಾದ ರಾಜಾ ಪ್ರಗ್ಜ್ಯೋತಿಷಾಧಿಪನು ಪರ್ವತೋಪಮವಾಗಿದ್ದ ಆ ಮಹಾಗಜವನ್ನು ಪುನಃ ಅರ್ಜುನನ ಮೇಲೆ ನುಗ್ಗಿಸಿದನು.
14075017a ತಮಾಪತಂತಂ ಸಂಪ್ರೇಕ್ಷ್ಯ ಬಲವಾನ್ಪಾಕಶಾಸನಿಃ।
14075017c ನಾರಾಚಮಗ್ನಿಸಂಕಾಶಂ ಪ್ರಾಹಿಣೋದ್ವಾರಣಂ ಪ್ರತಿ।।
ಮೇಲೆರಗಿ ಬರುತ್ತಿದ್ದ ಅದನ್ನು ನೋಡಿ ಬಲವಾನ್ ಪಾಕಶಾಸನಿಯು ಆ ಆನೆಯ ಮೇಲೆ ಅಗ್ನಿಸಂಕಾಶ ನಾರಾಚವನ್ನು ಪ್ರಯೋಗಿಸಿದನು.
14075018a ಸ ತೇನ ವಾರಣೋ ರಾಜನ್ಮರ್ಮಣ್ಯಭಿಹತೋ ಭೃಶಮ್।
14075018c ಪಪಾತ ಸಹಸಾ ಭೂಮೌ ವಜ್ರರುಗ್ಣ ಇವಾಚಲಃ।।
ರಾಜನ್! ಮರ್ಮಸ್ಥಾನಕ್ಕೆ ಜೋರಾಗಿ ಹೊಡೆಯಲ್ಪಟ್ಟ ಆ ಆನೆಯು ವಜ್ರದಿಂದ ಹೊಡೆಯಲ್ಪಟ್ಟ ಪರ್ವತದಂತೆ ಒಮ್ಮೆಲೇ ಭೂಮಿಯ ಮೇಲೆ ಬಿದ್ದಿತು.
14075019a ಸ ಪತನ್ಶುಶುಭೇ ನಾಗೋ ಧನಂಜಯಶರಾಹತಃ।
14075019c ವಿಶನ್ನಿವ ಮಹಾಶೈಲೋ ಮಹೀಂ ವಜ್ರಪ್ರಪೀಡಿತಃ।।
ಧನಂಜಯನ ಶರದಿಂದ ಹತಗೊಂಡು ಬೀಳುತ್ತಿದ್ದ ಆ ಆನೆಯು ವಜ್ರದಿಂದ ಹೊಡೆಯಲ್ಪಟ್ಟ ಮಹಾಶೈಲವು ಭೂಮಿಯ ಮೇಲೆ ಕುಸಿದು ಬೀಳುತ್ತಿದ್ದಂತೆ ಶೋಭಿಸುತ್ತಿತ್ತು.
14075020a ತಸ್ಮಿನ್ನಿಪತಿತೇ ನಾಗೇ ವಜ್ರದತ್ತಸ್ಯ ಪಾಂಡವಃ।
14075020c ತಂ ನ ಭೇತವ್ಯಮಿತ್ಯಾಹ ತತೋ ಭೂಮಿಗತಂ ನೃಪಮ್।।
ಆನೆಯೊಂದಿಗೆ ವಜ್ರದತ್ತನೂ ಕೆಳಗೆ ಬೀಳಲು ಪಾಂಡವನು ಭೂಮಿಗತನಾದ ನೃಪನಿಗೆ “ಭಯಪಡಬೇಕಾಗಿಲ್ಲ!” ಎಂದು ಕೂಗಿ ಹೇಳಿದನು.
14075021a ಅಬ್ರವೀದ್ಧಿ ಮಹಾತೇಜಾಃ ಪ್ರಸ್ಥಿತಂ ಮಾಂ ಯುಧಿಷ್ಠಿರಃ।
14075021c ರಾಜಾನಸ್ತೇ ನ ಹಂತವ್ಯಾ ಧನಂಜಯ ಕಥಂ ಚನ।।
14075022a ಸರ್ವಮೇತನ್ನರವ್ಯಾಘ್ರ ಭವತ್ವೇತಾವತಾ ಕೃತಮ್।
14075022c ಯೋಧಾಶ್ಚಾಪಿ ನ ಹಂತವ್ಯಾ ಧನಂಜಯ ರಣೇ ತ್ವಯಾ।।
“ನಾನು ಹೊರಡುವಾಗ ಮಹಾತೇಜಸ್ವಿ ಯುಧಿಷ್ಠಿರನು “ಧನಂಜಯ! ಯಾವ ಕಾರಣಕ್ಕೂ ನೀನು ರಾಜರನ್ನು ಕೊಲ್ಲಬಾರದು! ಧನಂಜಯ! ರಣದಲ್ಲಿ ನೀನು ಯೋಧರನ್ನೂ ಕೊಲ್ಲಬಾರದು! ಇಷ್ಟುಮಾಡಿದರೆ ನರವ್ಯಾಘ್ರ! ನೀನು ಎಲ್ಲವನ್ನೂ ಮಾಡಿದಂತೆ!” ಎಂದು ಹೇಳಿದ್ದನು.
14075023a ವಕ್ತವ್ಯಾಶ್ಚಾಪಿ ರಾಜಾನಃ ಸರ್ವೈಃ ಸಹ ಸುಹೃಜ್ಜನೈಃ।
14075023c ಯುಧಿಷ್ಠಿರಸ್ಯಾಶ್ವಮೇಧೋ ಭವದ್ಭಿರನುಭೂಯತಾಮ್।।
ಸುಹೃಜ್ಜನರೆಲ್ಲರೊಂದಿಗೆ ಯುಧಿಷ್ಠಿರನ ಅಶ್ವಮೇಧಕ್ಕೆ ನೀವೆಲ್ಲರೂ ಬರಬೇಕೆಂದೂ ಅವನು ಹೇಳಿದ್ದಾನೆ.
14075024a ಇತಿ ಭ್ರಾತೃವಚಃ ಶ್ರುತ್ವಾ ನ ಹನ್ಮಿ ತ್ವಾಂ ಜನಾಧಿಪ।
14075024c ಉತ್ತಿಷ್ಠ ನ ಭಯಂ ತೇಽಸ್ತಿ ಸ್ವಸ್ತಿಮಾನ್ ಗಚ್ಚ ಪಾರ್ಥಿವ।।
ಜನಾಧಿಪ! ಅಣ್ಣನ ಈ ಮಾತನ್ನು ಕೇಳಿದ ನಾನು ನಿನ್ನನ್ನು ಸಂಹರಿಸುವುದಿಲ್ಲ. ಪಾರ್ಥಿವ! ಮೇಲೇಳು! ಭಯಪಡಬೇಡ! ಕ್ಷೇಮವಾಗಿ ಹೋಗು!
14075025a ಆಗಚ್ಚೇಥಾ ಮಹಾರಾಜ ಪರಾಂ ಚೈತ್ರೀಮುಪಸ್ಥಿತಾಮ್।
14075025c ತದಾಶ್ವಮೇಧೋ ಭವಿತಾ ಧರ್ಮರಾಜಸ್ಯ ಧೀಮತಃ।।
ಮಹಾರಾಜ! ಬರುವ ಚೈತ್ರಹುಣ್ಣಿಮೆಯಂದು ಧೀಮತ ಧರ್ಮರಾಜ ಅಶ್ವಮೇಧವು ಆಗಲಿಕ್ಕಿದೆ. ಅದಕ್ಕೆ ಬರಬೇಕು!”
14075026a ಏವಮುಕ್ತಃ ಸ ರಾಜಾ ತು ಭಗದತ್ತಾತ್ಮಜಸ್ತದಾ।
14075026c ತಥೇತ್ಯೇವಾಬ್ರವೀದ್ವಾಕ್ಯಂ ಪಾಂಡವೇನಾಭಿನಿರ್ಜಿತಃ।।
ಹೀಗೆ ಹೇಳಲು ಪಾಂಡವನಿಂದ ಪರಾಜಿತನಾದ ರಾಜಾ ಭಗದತ್ತಾತ್ಮಜನು ಹಾಗೆಯೇ ಆಗಲೆಂದು ಹೇಳಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಬ್ರಹ್ಮದತ್ತಪರಾಜಯೇ ಪಂಚಸಪ್ತತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣೇ ಬ್ರಹ್ಮದತ್ತಪರಾಜಯ ಎನ್ನುವ ಎಪ್ಪತ್ತೈದನೇ ಅಧ್ಯಾಯವು.