ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 74
ಸಾರ
ಭಗದತ್ತನ ಮಗ ವಜ್ರದತ್ತನು ಕುದುರೆಯನ್ನು ಕಟ್ಟಿಹಾಕಿ ಅರ್ಜುನನೊಂದಿಗೆ ಯುದ್ಧಮಾಡಿದುದು (1-20).
14074001 ವೈಶಂಪಾಯನ ಉವಾಚ
14074001a ಪ್ರಾಗ್ಜ್ಯೋತಿಷಮಥಾಭ್ಯೇತ್ಯ ವ್ಯಚರತ್ಸ ಹಯೋತ್ತಮಃ।
14074001c ಭಗದತ್ತಾತ್ಮಜಸ್ತತ್ರ ನಿರ್ಯಯೌ ರಣಕರ್ಕಶಃ।।
ವೈಶಂಪಾಯನನು ಹೇಳಿದನು: “ಆ ಉತ್ತಮ ಕುದುರೆಯು ಪ್ರಾಗ್ಜೋತಿಷಪುರವನ್ನು ತಲುಪಿ ಅಲ್ಲಿ ಸಂಚರಿಸತೊಡಗಿತು. ಆಗ ರಣಕರ್ಕಶ ಭಗದತ್ತನ ಮಗನು ಅದನ್ನು ಕಟ್ಟಿಹಾಕಲು ಹೊರಟನು.
14074002a ಸ ಹಯಂ ಪಾಂಡುಪುತ್ರಸ್ಯ ವಿಷಯಾಂತಮುಪಾಗತಮ್।
14074002c ಯುಯುಧೇ ಭರತಶ್ರೇಷ್ಠ ವಜ್ರದತ್ತೋ ಮಹೀಪತಿಃ।।
ಭರತಶ್ರೇಷ್ಠ! ಪಾಂಡುಪುತ್ರನ ಆ ಕುದುರೆಯು ತನ್ನ ರಾಜ್ಯದ ಗಡಿಯಲ್ಲಿ ಬರಲು ಮಹೀಪತಿ ವಜ್ರದತ್ತನು ಯುದ್ಧಮಾಡಿದನು.
14074003a ಸೋಽಭಿನಿರ್ಯಾಯ ನಗರಾದ್ಭಗದತ್ತಸುತೋ ನೃಪಃ।
14074003c ಅಶ್ವಮಾಯಾಂತಮುನ್ಮಥ್ಯ ನಗರಾಭಿಮುಖೋ ಯಯೌ।।
ನೃಪ ಭಗದತ್ತನ ಮಗನು ನಗರದಿಂದ ಹೊರಟು ಬರುತ್ತಿದ್ದ ಕುದುರೆಯನ್ನು ಬಂಧಿಸಿ ಅದರೊಡನೆ ನಗರಾಭಿಮುಖವಾಗಿ ಹೊರಟನು.
14074004a ತಮಾಲಕ್ಷ್ಯ ಮಹಾಬಾಹುಃ ಕುರೂಣಾಮೃಷಭಸ್ತದಾ।
14074004c ಗಾಂಡೀವಂ ವಿಕ್ಷಿಪಂಸ್ತೂರ್ಣಂ ಸಹಸಾ ಸಮುಪಾದ್ರವತ್।।
ಅದನ್ನು ನೋಡಿ ಮಹಾಬಾಹು ಕುರುವೃಷಭ ಅರ್ಜುನನು ಗಾಂಡೀವವನ್ನು ಟೇಂಕರಿಸಿ ಬೇಗನೇ ಅವನನ್ನು ಆಕ್ರಮಣಿಸಿದನು.
14074005a ತತೋ ಗಾಂಡೀವನಿರ್ಮುಕ್ತೈರಿಷುಭಿರ್ಮೋಹಿತೋ ನೃಪಃ।
14074005c ಹಯಮುತ್ಸೃಜ್ಯ ತಂ ವೀರಸ್ತತಃ ಪಾರ್ಥಮುಪಾದ್ರವತ್।।
ಗಾಂಡೀವದಿಂದ ಹೊರಟ ಬಾಣಗಳಿಂದ ಮೋಹಿತನಾದ ಆ ವೀರ ನೃಪನು ಕುದುರೆಯನ್ನು ಬಿಟ್ಟು ಪಾರ್ಥನನ್ನು ಆಕ್ರಮಣಿಸಿದನು.
14074006a ಪುನಃ ಪ್ರವಿಶ್ಯ ನಗರಂ ದಂಶಿತಃ ಸ ನೃಪೋತ್ತಮಃ।
14074006c ಆರುಹ್ಯ ನಾಗಪ್ರವರಂ ನಿರ್ಯಯೌ ಯುದ್ಧಕಾಂಕ್ಷಯಾ।।
ಕವಚಧಾರಿಯಾಗಿದ್ದ ಆ ನೃಪೋತ್ತಮನು ಪುನಃ ತನ್ನ ನಗರವನ್ನು ಪ್ರವೇಶಿಸಿ, ಪ್ರಮುಖ ಆನೆಯನ್ನು ಏರಿ ಯುದ್ಧಾಕಾಂಕ್ಷೆಯಿಂದ ಹೊರಬಂದನು.
14074007a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ।
14074007c ದೋಧೂಯತಾ ಚಾಮರೇಣ ಶ್ವೇತೇನ ಚ ಮಹಾರಥಃ।।
ಆ ಮಹಾರಥನ ನೆತ್ತಿಯ ಮೇಲೆ ಶ್ವೇತಚ್ಛತ್ರವು ಬೆಳಗುತ್ತಿತ್ತು. ಬಿಳಿಯ ಚಾಮರಗಳನ್ನು ಬೀಸುತ್ತಿದ್ದರು.
14074008a ತತಃ ಪಾರ್ಥಂ ಸಮಾಸಾದ್ಯ ಪಾಂಡವಾನಾಂ ಮಹಾರಥಮ್।
14074008c ಆಹ್ವಯಾಮಾಸ ಕೌರವ್ಯಂ ಬಾಲ್ಯಾನ್ಮೋಹಾಚ್ಚ ಸಂಯುಗೇ।।
ಪಾಂಡವರ ಮಹಾರಥ ಪಾರ್ಥನನ್ನು ಸಮೀಪಿಸಿ ಅವನು ಬಾಲ್ಯತನ- ಮೂರ್ಖತೆಗಳಿಂದ ಕೌರವ್ಯನನ್ನು ಯುದ್ಧಕ್ಕೆ ಆಹ್ವಾನಿಸಿದನು.
14074009a ಸ ವಾರಣಂ ನಗಪ್ರಖ್ಯಂ ಪ್ರಭಿನ್ನಕರಟಾಮುಖಮ್।
14074009c ಪ್ರೇಷಯಾಮಾಸ ಸಂಕ್ರುದ್ಧಸ್ತತಃ ಶ್ವೇತಹಯಂ ಪ್ರತಿ।।
ಸಂಕ್ರುದ್ಧನಾದ ಅವನು ಮದೋದಕವನ್ನು ಸುರಿಸುತ್ತಿದ್ದ ಪರ್ವತೋಪಮ ಮಹಾಗಜವನ್ನು ಶ್ವೇತಹಯ ಅರ್ಜುನನ ಮೇಲೆ ಎರಗುವಂತೆ ಪ್ರಚೋದಿಸಿದನು.
14074010a ವಿಕ್ಷರಂತಂ ಯಥಾ ಮೇಘಂ ಪರವಾರಣವಾರಣಮ್।
14074010c ಶಾಸ್ತ್ರವತ್ಕಲ್ಪಿತಂ ಸಂಖ್ಯೇ ತ್ರಿಸಾಹಂ ಯುದ್ಧದುರ್ಮದಮ್।।
ಮೇಘವು ಮಳೆಯನ್ನು ಸುರಿಸುವಂತೆ ಮದೋದಕವನ್ನು ಸುರಿಸುತ್ತಿದ್ದ ಆ ಯುದ್ಧದುರ್ಮದ ಅನೆಯು ಶಾಸ್ತ್ರವತ್ತಾಗಿ ಯುದ್ಧಕ್ಕಾಗಿಯೇ ಸಜ್ಜುಗೊಳಿಸಲ್ಪಟ್ಟಿತ್ತು.
14074011a ಪ್ರಚೋದ್ಯಮಾನಃ ಸ ಗಜಸ್ತೇನ ರಾಜ್ಞಾ ಮಹಾಬಲಃ।
14074011c ತದಾಂಕುಶೇನ ವಿಬಭಾವುತ್ಪತಿಷ್ಯನ್ನಿವಾಂಬರಮ್।।
ರಾಜನ ಅಂಕುಶದಿಂದ ತಿವಿಯಲ್ಪಟ್ಟು ಪ್ರಚೋದನೆಗೊಂಡ ಆ ಮಹಾಬಲ ಆನೆಯು ಜಿಗಿದು ಆಕಾಶಕ್ಕೇ ಹಾರುತ್ತಿದೆಯೋ ಎನ್ನುವಂತೆ ತೋರುತ್ತಿತ್ತು.
14074012a ತಮಾಪತಂತಂ ಸಂಪ್ರೇಕ್ಷ್ಯ ಕ್ರುದ್ಧೋ ರಾಜನ್ಧನಂಜಯಃ।
14074012c ಭೂಮಿಷ್ಠೋ ವಾರಣಗತಂ ಯೋಧಯಾಮಾಸ ಭಾರತ।।
ರಾಜನ್! ಭಾರತ! ತನ್ನ ಮೇಲೆ ಬೀಳಲು ಬರುತ್ತಿದ್ದ ಅದನ್ನು ನೋಡಿ ಧನಂಜಯನು ಭೂಮಿಯ ಮೇಲೆ ನಿಂತುಕೊಂಡೇ ಆನೆಯನ್ನೇರಿದ್ದ ವಜ್ರದತ್ತನೊಡನೆ ಯುದ್ಧಮಾಡಿದನು.
14074013a ವಜ್ರದತ್ತಸ್ತು ಸಂಕ್ರುದ್ಧೋ ಮುಮೋಚಾಶು ಧನಂಜಯೇ।
14074013c ತೋಮರಾನಗ್ನಿಸಂಕಾಶಾನ್ಶಲಭಾನಿವ ವೇಗಿತಾನ್।।
ಸಂಕ್ರುದ್ಧನಾದ ವಜ್ರದತ್ತನಾದರೋ ಧನಂಜಯನ ಮೇಲೆ ಶಲಭಗಳಂತಿರುವ ಅಗ್ನಿಸಂಕಾಶ ತೋಮರಗಳನ್ನು ವೇಗವಾಗಿ ಪ್ರಯೋಗಿಸಿದನು.
14074014a ಅರ್ಜುನಸ್ತಾನಸಂಪ್ರಾಪ್ತಾನ್ಗಾಂಡೀವಪ್ರೇಷಿತೈಃ ಶರೈಃ।
14074014c ದ್ವಿಧಾ ತ್ರಿಧಾ ಚ ಚಿಚ್ಚೇದ ಖ ಏವ ಖಗಮೈಸ್ತದಾ।।
ಆಕಾಶದಲ್ಲಿ ಹಾರಿ ಬರುತ್ತಿದ್ದ ಅವುಗಳನ್ನು ಅರ್ಜುನನು ಆಕಾಶಮಾರ್ಗವಾಗಿ ಹಾರುತ್ತಿದ್ದ ಗಾಂಡೀವದಿಂದ ಬಿಟ್ಟ ಶರಗಳಿಂದ ಎರಡು-ಮೂರು ಭಾಗಗಳನ್ನಾಗಿ ತುಂಡರಿಸಿದನು.
14074015a ಸ ತಾನ್ದೃಷ್ಟ್ವಾ ತಥಾ ಚಿನ್ನಾಂಸ್ತೋಮರಾನ್ಭಗದತ್ತಜಃ।
14074015c ಇಷೂನಸಕ್ತಾಂಸ್ತ್ವರಿತಃ ಪ್ರಾಹಿಣೋತ್ಪಾಂಡವಂ ಪ್ರತಿ।।
ತೋಮರಗಳು ತುಂಡಾಗಿದ್ದುದನ್ನು ನೋಡಿ ಭಗದತ್ತನ ಮಗನು ತ್ವರೆಯಿಂದ ಪಾಂಡವನ ಮೇಲೆ ನಿರಂತರವಾಗಿ ಬಾಣಗಳನ್ನು ಸುರಿಸಿದನು.
14074016a ತತೋಽರ್ಜುನಸ್ತೂರ್ಣತರಂ ರುಕ್ಮಪುಂಖಾನಜಿಹ್ಮಗಾನ್।
14074016c ಪ್ರೇಷಯಾಮಾಸ ಸಂಕ್ರುದ್ಧೋ ಭಗದತ್ತಾತ್ಮಜಂ ಪ್ರತಿ।।
ಆಗ ಸಂಕ್ರುದ್ಧನಾದ ಅರ್ಜುನನು ತ್ವರೆಮಾಡಿ ಚಿನ್ನದ ರೆಕ್ಕೆಗಳುಳ್ಳ ಜಿಹ್ಮಗಗಳನ್ನು ಭಗದತ್ತಾತ್ಮಜನ ಮೇಲೆ ಪ್ರಯೋಗಿಸಿದನು.
14074017a ಸ ತೈರ್ವಿದ್ಧೋ ಮಹಾತೇಜಾ ವಜ್ರದತ್ತೋ ಮಹಾಹವೇ।
14074017c ಭೃಶಾಹತಃ ಪಪಾತೋರ್ವ್ಯಾಂ ನ ತ್ವೇನಮಜಹಾತ್ಸ್ಮೃತಿಃ।।
ಆ ಮಹಾಯುದ್ಧದಲ್ಲಿ ಮಹಾತೇಜಸ್ವೀ ಬಾಣಗಳಿಂದ ಹೊಡೆಯಲ್ಪಟ್ಟ ವಜ್ರದತ್ತನು ಅತ್ಯಂತ ಗಾಯಗೊಂಡು ಭೂಮಿಯ ಮೇಲೆ ಬಿದ್ದನು. ಆದರೆ ಅವನ ಸ್ಮೃತಿಯು ತಪ್ಪಿರಲಿಲ್ಲ.
14074018a ತತಃ ಸ ಪುನರಾರುಹ್ಯ ವಾರಣಪ್ರವರಂ ರಣೇ।
14074018c ಅವ್ಯಗ್ರಃ ಪ್ರೇಷಯಾಮಾಸ ಜಯಾರ್ಥೀ ವಿಜಯಂ ಪ್ರತಿ।।
ಪುನಃ ಅವ್ಯಗ್ರನಾದ ಅವನು ರಣದಲ್ಲಿ ಆ ಮಹಾಗಜವನ್ನು ಏರಿ ವಿಜಯ ಅರ್ಜುನನ ಮೇಲೆ ಆ ಆನೆಯು ಆಕ್ರಮಣಿಸುವಂತೆ ಮಾಡಿದನು.
14074019a ತಸ್ಮೈ ಬಾಣಾಂಸ್ತತೋ ಜಿಷ್ಣುರ್ನಿರ್ಮುಕ್ತಾಶೀವಿಷೋಪಮಾನ್।
14074019c ಪ್ರೇಷಯಾಮಾಸ ಸಂಕ್ರುದ್ಧೋ ಜ್ವಲಿತಾನಿವ ಪಾವಕಾನ್।।
ಆಗ ಸಂಕ್ರುದ್ಧ ಜಿಷ್ಣುವು ಪೊರೆಕಳಚಿದ ಸರ್ಪಗಳಂತೆ ಮತ್ತು ಅಗ್ನಿಗಳಂತೆ ಪ್ರಜ್ವಲಿಸುತ್ತಿದ್ದ ಬಾಣಗಳನ್ನು ಆ ಆನೆಯ ಮೇಲೆ ಪ್ರಯೋಗಿಸಿದನು.
14074020a ಸ ತೈರ್ವಿದ್ಧೋ ಮಹಾನಾಗೋ ವಿಸ್ರವನ್ ರುಧಿರಂ ಬಭೌ।
14074020c ಹಿಮವಾನಿವ ಶೈಲೇಂದ್ರೋ ಬಹುಪ್ರಸ್ರವಣಸ್ತದಾ।।
ಅವುಗಳಿಂದ ಹೊಡೆಯಲ್ಪಟ್ಟ ಆ ಮಹಾಗಜವು ರಕ್ತವನ್ನು ಸುರಿಸತೊಡಗಿ, ಗೈರಿಕಾದಿ ಧಾತುಗಳಿಂದ ಮಿಶ್ರಿತವಾದ ಕೆಂಪು ನೀರನ್ನು ಸುರಿಸುತ್ತಿದ್ದ ಹಿಮಾಲಯ ಪರ್ವತದಂತೆಯೇ ಕಾಣುತ್ತಿತ್ತು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ವಜ್ರದತ್ತಯುದ್ಧೇ ಚತುಃಸಪ್ತತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣೇ ವಜ್ರದತ್ತಯುದ್ಧ ಎನ್ನುವ ಎಪ್ಪತ್ನಾಲ್ಕನೇ ಅಧ್ಯಾಯವು.