ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 73
ಸಾರ
ಅಶ್ವವನ್ನು ತಡೆದ ತ್ರಿಗರ್ತರೊಂದಿಗೆ ಅರ್ಜುನನ ಯುದ್ಧ (1-8). ಕೇತುವರ್ಮನ ವಧೆ (9-15). ಧೃತವರ್ಮನೊಡನೆ ಯುದ್ಧ; ತ್ರಿಗರ್ತರ ಪರಾಜಯ (16-34).
14073001 ವೈಶಂಪಾಯನ ಉವಾಚ
14073001a ತ್ರಿಗರ್ತೈರಭವದ್ಯುದ್ಧಂ ಕೃತವೈರೈಃ ಕಿರೀಟಿನಃ।
14073001c ಮಹಾರಥಸಮಾಜ್ಞಾತೈರ್ಹತಾನಾಂ ಪುತ್ರನಪ್ತೃಭಿಃ।।
ವೈಶಂಪಾಯನನು ಹೇಳಿದನು: “ಯುದ್ಧದಲ್ಲಿ ಪುತ್ರರು ಮತ್ತು ಆಪ್ತರನ್ನು ಕಳೆದುಕೊಂಡಿದ್ದ, ಮಹಾರಥರೆಂದು ಖ್ಯಾತರಾಗಿದ್ದ ಮತ್ತು ಕಿರೀಟಿಯ ಬದ್ಧವೈರಿಗಳಾಗಿದ್ದ ತ್ರಿಗರ್ತರೊಡನೆ ಯುದ್ಧವು ನಡೆಯಿತು.
14073002a ತೇ ಸಮಾಜ್ಞಾಯ ಸಂಪ್ರಾಪ್ತಂ ಯಜ್ಞಿಯಂ ತುರಗೋತ್ತಮಮ್।
14073002c ವಿಷಯಾಂತೇ ತತೋ ವೀರಾ ದಂಶಿತಾಃ ಪರ್ಯವಾರಯನ್।।
ಯಜ್ಞದ ಆ ಉತ್ತಮ ಕುದುರೆಯು ತಮ್ಮ ದೇಶದ ಗಡಿಯನ್ನು ತಲುಪಿದುದನ್ನು ತಿಳಿದುಕೊಂಡ ಆ ವೀರರು ಕವಚಧಾರಿಗಳಾಗಿ ಅದನ್ನು ತಡೆದರು.
14073003a ರಥಿನೋ ಬದ್ಧತೂಣೀರಾಃ ಸದಶ್ವೈಃ ಸಮಲಂಕೃತೈಃ।
14073003c ಪರಿವಾರ್ಯ ಹಯಂ ರಾಜನ್ಗ್ರಹೀತುಂ ಸಂಪ್ರಚಕ್ರಮುಃ।।
ರಾಜನ್! ಆ ರಥಿಗಳು ತೂಣೀರಗಳನ್ನು ಕಟ್ಟಿಕೊಂಡು ಅಲಂಕೃತ ಕುದುರೆಗಳೊಂದಿಗೆ ಕುದುರೆಯನ್ನು ಸುತ್ತುವರೆದು ಅದನ್ನು ಕಟ್ಟಿಹಾಕಲು ತೊಡಗಿದರು.
14073004a ತತಃ ಕಿರೀಟೀ ಸಂಚಿಂತ್ಯ ತೇಷಾಂ ರಾಜ್ಞಾಂ ಚಿಕೀರ್ಷಿತಮ್।
14073004c ವಾರಯಾಮಾಸ ತಾನ್ವೀರಾನ್ಸಾಂತ್ವಪೂರ್ವಮರಿಂದಮಃ।।
ಆಗ ಅರಿಂದಮ ಕಿರೀಟಿಯು ರಾಜಾ ಯುಧಿಷ್ಠಿರನು ಬಯಸಿದಂತೆ ಯೋಚಿಸಿ ಸಾಂತ್ವನಪೂರ್ವಕವಾಗಿ ಆ ವೀರರನ್ನು ತಡೆದನು.
14073005a ತಮನಾದೃತ್ಯ ತೇ ಸರ್ವೇ ಶರೈರಭ್ಯಹನಂಸ್ತದಾ।
14073005c ತಮೋರಜೋಭ್ಯಾಂ ಸಂಚನ್ನಾಂಸ್ತಾನ್ಕಿರೀಟೀ ನ್ಯವಾರಯತ್।।
ಅವನನ್ನು ಅನಾದರಿಸಿ ಅವರೆಲ್ಲರೂ ಶರಗಳಿಂದ ಹೊಡೆಯತೊಡಗಲು, ತಮೋರಜಗುಣಗಳಿಂದ ತುಂಬಿಹೋಗಿದ್ದ ಅವರನ್ನು ಕಿರೀಟಿಯು ತಡೆದನು.
14073006a ಅಬ್ರವೀಚ್ಚ ತತೋ ಜಿಷ್ಣುಃ ಪ್ರಹಸನ್ನಿವ ಭಾರತ।
14073006c ನಿವರ್ತಧ್ವಮಧರ್ಮಜ್ಞಾಃ ಶ್ರೇಯೋ ಜೀವಿತಮೇವ ವಃ।।
ಭಾರತ! ಆಗ ಜಿಷ್ಣುವು ನಸುನಗುತ್ತಾ ಅವರಿಗೆ “ಅಧರ್ಮಜ್ಞರೇ! ಹಿಂದಿರುಗಿರಿ! ಜೀವವನ್ನು ಉಳಿಸಿಕೊಳ್ಳುವುದೇ ನಿಮಗೆ ಶ್ರೇಯಸ್ಕರವು!” ಎಂದನು.
14073007a ಸ ಹಿ ವೀರಃ ಪ್ರಯಾಸ್ಯನ್ವೈ ಧರ್ಮರಾಜೇನ ವಾರಿತಃ।
14073007c ಹತಬಾಂಧವಾ ನ ತೇ ಪಾರ್ಥ ಹಂತವ್ಯಾಃ ಪಾರ್ಥಿವಾ ಇತಿ।।
“ಪಾರ್ಥ! ಬಾಂಧವರನ್ನು ಕಳೆದುಕೊಂಡ ಪಾರ್ಥಿವರನ್ನು ನೀನು ಕೊಲ್ಲಬಾರದು!” ಎಂದು ಧರ್ಮರಾಜನು ಹೇಳಿ ತಡೆದಿದ್ದುದರಿಂದಲೇ ಆ ವೀರನು ಹೀಗೆ ಹೇಳಿದನು.
14073008a ಸ ತದಾ ತದ್ವಚಃ ಶ್ರುತ್ವಾ ಧರ್ಮರಾಜಸ್ಯ ಧೀಮತಃ।
14073008c ತಾನ್ನಿವರ್ತಧ್ವಮಿತ್ಯಾಹ ನ ನ್ಯವರ್ತಂತ ಚಾಪಿ ತೇ।।
ಧೀಮತ ಧರ್ಮರಾಜನ ಆ ಮಾತನ್ನು ಕೇಳಿ ಅವನು ಅವರನ್ನು ತಡೆದನು. ಆದರೆ ಅವರು ಹಿಂದಿರುಗಲಿಲ್ಲ.
14073009a ತತಸ್ತ್ರಿಗರ್ತರಾಜಾನಂ ಸೂರ್ಯವರ್ಮಾಣಮಾಹವೇ।
14073009c ವಿತತ್ಯ ಶರಜಾಲೇನ ಪ್ರಜಹಾಸ ಧನಂಜಯಃ।।
ಆಗ ಧನಂಜಯನು ತಿಗರ್ತ ರಾಜ ಸೂರ್ಯವರ್ಮನನ್ನು ಯುದ್ಧದಲ್ಲಿ ಶರಜಾಲದಿಂದ ಮುಚ್ಚಿ ಜೋರಾಗಿ ನಕ್ಕನು.
14073010a ತತಸ್ತೇ ರಥಘೋಷೇಣ ಖುರನೇಮಿಸ್ವನೇನ ಚ।
14073010c ಪೂರಯಂತೋ ದಿಶಃ ಸರ್ವಾ ಧನಂಜಯಮುಪಾದ್ರವನ್।।
ಆಗ ಅವರು ರಥಘೋಷ ಮತ್ತು ರಥಚಕ್ರಗಳ ಶಬ್ಧಗಳೊಂದಿಗೆ ಎಲ್ಲ ದಿಕ್ಕುಗಳನ್ನೂ ಮೊಳಗಿಸುತ್ತಾ ಧನಂಜಯನನ್ನು ಆಕ್ರಮಣಿಸಿದರು.
14073011a ಸೂರ್ಯವರ್ಮಾ ತತಃ ಪಾರ್ಥೇ ಶರಾಣಾಂ ನತಪರ್ವಣಾಮ್।
14073011c ಶತಾನ್ಯಮುಂಚದ್ರಾಜೇಂದ್ರ ಲಘ್ವಸ್ತ್ರಮಭಿದರ್ಶಯನ್।।
ರಾಜೇಂದ್ರ! ಸೂರ್ಯವರ್ಮನು ಪಾರ್ಥನ ಮೇಲೆ ನೂರಾರು ನತಪರ್ವ ಶರಗಳನ್ನು ಪ್ರಯೋಗಿಸಿ ತನ್ನ ಹಸ್ತಲಾಘವವನ್ನು ಪ್ರದರ್ಶಿಸಿದನು.
14073012a ತಥೈವಾನ್ಯೇ ಮಹೇಷ್ವಾಸಾ ಯೇ ತಸ್ಯೈವಾನುಯಾಯಿನಃ।
14073012c ಮುಮುಚುಃ ಶರವರ್ಷಾಣಿ ಧನಂಜಯವಧೈಷಿಣಃ।।
ಧನಂಜಯನನ್ನು ಕೊಲ್ಲಲು ಬಯಸಿದ ಅವನ ಅನ್ಯ ಮಹೇಷ್ವಾಸ ಅನುಯಾಯಿಗಳೂ ಅವನ ಮೇಲೆ ಶರವರ್ಷಗಳನ್ನೇ ಸುರಿಸಿದರು.
14073013a ಸ ತಾನ್ಜ್ಯಾಪುಂಖನಿರ್ಮುಕ್ತೈರ್ಬಹುಭಿಃ ಸುಬಹೂನ್ಶರಾನ್।
14073013c ಚಿಚ್ಚೇದ ಪಾಂಡವೋ ರಾಜಂಸ್ತೇ ಭೂಮೌ ನ್ಯಪತಂಸ್ತದಾ।।
ರಾಜನ್! ಆಗ ಪಾಂಡವನು ಶಿಂಜಿನಿಯ ಮುಖದಿಂದ ಹೊರಟ ಅನೇಕ ಶರಗಳಿಂದ ಅವುಗಳನ್ನು ತುಂಡರಿಸಲು ಅವು ಭೂಮಿಯ ಮೇಲೆ ಬಿದ್ದವು.
14073014a ಕೇತುವರ್ಮಾ ತು ತೇಜಸ್ವೀ ತಸ್ಯೈವಾವರಜೋ ಯುವಾ।
14073014c ಯುಯುಧೇ ಭ್ರಾತುರರ್ಥಾಯ ಪಾಂಡವೇನ ಮಹಾತ್ಮನಾ।।
ಸೂರ್ಯವರ್ಮನ ತಮ್ಮ ತೇಜಸ್ವೀ ಯುವಕ ಕೇತುವರ್ಮನು ಅಣ್ಣನ ಪರವಾಗಿ ಮಹಾತ್ಮ ಪಾಂಡವನೊಡನೆ ಯುದ್ಧಮಾಡಿದನು.
14073015a ತಮಾಪತಂತಂ ಸಂಪ್ರೇಕ್ಷ್ಯ ಕೇತುವರ್ಮಾಣಮಾಹವೇ।
14073015c ಅಭ್ಯಘ್ನನ್ನಿಶಿತೈರ್ಬಾಣೈರ್ಬೀಭತ್ಸುಃ ಪರವೀರಹಾ।।
ಯುದ್ಧಕ್ಕೆ ಕೇತುವರ್ಮನು ಇಳಿದುದನ್ನು ನೋಡಿ ಪರವೀರಹ ಬೀಭತ್ಸುವು ನಿಶಿತ ಬಾಣಗಳಿಂದ ಅವನನ್ನು ಸಂಹರಿಸಿದನು.
14073016a ಕೇತುವರ್ಮಣ್ಯಭಿಹತೇ ಧೃತವರ್ಮಾ ಮಹಾರಥಃ।
14073016c ರಥೇನಾಶು ಸಮಾವೃತ್ಯ ಶರೈರ್ಜಿಷ್ಣುಮವಾಕಿರತ್।।
ಕೇತುವರ್ಮನು ಹತನಾಗಲು ಮಹಾರಥ ಧೃತವರ್ಮನು ರಥಗಳಿಂದ ಸುತ್ತುವರೆದು ಶರಗಳಿಂದ ಜಿಷ್ಣುವನ್ನು ಮುಸುಕಿದನು.
14073017a ತಸ್ಯ ತಾಂ ಶೀಘ್ರತಾಮೀಕ್ಷ್ಯ ತುತೋಷಾತೀವ ವೀರ್ಯವಾನ್।
14073017c ಗುಡಾಕೇಶೋ ಮಹಾತೇಜಾ ಬಾಲಸ್ಯ ಧೃತವರ್ಮಣಃ।।
ಬಾಲಕ ವೀರ್ಯವಾನ್ ಮಹಾತೇಜಸ್ವೀ ಧೃತವರ್ಮನ ಶೀಘ್ರತೆಯನ್ನು ನೋಡಿ ಗುಡಾಕೇಶನು ಸಂತುಷ್ಟನಾದನು.
14073018a ನ ಸಂದಧಾನಂ ದದೃಶೇ ನಾದದಾನಂ ಚ ತಂ ತದಾ।
14073018c ಕಿರಂತಮೇವ ಸ ಶರಾನ್ದದೃಶೇ ಪಾಕಶಾಸನಿಃ।।
ಅವನು ಶರಗಳ ಸಂಧಾನ ಮಾಡುತ್ತಿರುವುದಾಗಲೀ ಪ್ರಯೋಗಿಸುತ್ತಿರುವುದಾಗಲೀ ಕಾಣುತ್ತಲೇ ಇರಲಿಲ್ಲ. ಶರಗಳನ್ನು ಸುರಿಸುತ್ತಿರುವುದನ್ನು ಮಾತ್ರ ಪಾಕಶಾಸನಿಯು ನೋಡಿದನು.
14073019a ಸ ತು ತಂ ಪೂಜಯಾಮಾಸ ಧೃತವರ್ಮಾಣಮಾಹವೇ।
14073019c ಮನಸಾ ಸ ಮುಹೂರ್ತಂ ವೈ ರಣೇ ಸಮಭಿಹರ್ಷಯನ್।।
ಯುದ್ಧದಲ್ಲಿ ಧೃತವರ್ಮನ ಉತ್ಸಾಹವನ್ನು ನೋಡಿ ಅರ್ಜುನನು ಒಂದು ಕ್ಷಣ ರಣದಲ್ಲಿಯೇ ಮನಸಾ ಅವನನ್ನು ಶ್ಲಾಘಿಸಿದನು.
14073020a ತಂ ಪನ್ನಗಮಿವ ಕ್ರುದ್ಧಂ ಕುರುವೀರಃ ಸ್ಮಯನ್ನಿವ।
14073020c ಪ್ರೀತಿಪೂರ್ವಂ ಮಹಾರಾಜ ಪ್ರಾಣೈರ್ನ ವ್ಯಪರೋಪಯತ್।।
ಮಹಾರಾಜ! ಪನ್ನಗದಂತೆ ಕ್ರುದ್ಧನಾದ ಅವನನ್ನು ಕುರುವೀರನು ನಸುನಗುತ್ತಲೇ ಪ್ರೀತಿಪೂರ್ವಕವಾಗಿ ಅವನ ಪ್ರಾಣವನ್ನು ತೆಗೆಯಲಿಲ್ಲ.
14073021a ಸ ತಥಾ ರಕ್ಷ್ಯಮಾಣೋ ವೈ ಪಾರ್ಥೇನಾಮಿತತೇಜಸಾ।
14073021c ಧೃತವರ್ಮಾ ಶರಂ ತೀಕ್ಷ್ಣಂ ಮುಮೋಚ ವಿಜಯೇ ತದಾ।।
ಹಾಗೆ ಅಮಿತತೇಜಸ್ವಿ ಪಾರ್ಥನಿಂದ ರಕ್ಷಿಸಲ್ಪಟ್ಟ ಧೃತವರ್ಮನು ವಿಜಯನ ಮೇಲೆ ತೀಕ್ಷ್ಣ ಶರವನ್ನು ಪ್ರಯೋಗಿಸಿದನು.
14073022a ಸ ತೇನ ವಿಜಯಸ್ತೂರ್ಣಮಸ್ಯನ್ವಿದ್ಧಃ ಕರೇ ಭೃಶಮ್।
14073022c ಮುಮೋಚ ಗಾಂಡೀವಂ ದುಃಖಾತ್ತತ್ಪಪಾತಾಥ ಭೂತಲೇ।।
ಕೂಡಲೇ ಅದು ವಿಜಯನ ಕೈಯಲ್ಲಿ ಜೋರಾಗಿ ಬಂದು ನೆಟ್ಟಿಕೊಂಡಿತು. ಅವನು ದುಃಖದಿಂದ ಗಾಂಡೀವವನ್ನು ಬಿಡಲು ಅದು ಭೂತಲದಲ್ಲಿ ಬಿದ್ದಿತು.
14073023a ಧನುಷಃ ಪತತಸ್ತಸ್ಯ ಸವ್ಯಸಾಚಿಕರಾದ್ವಿಭೋ।
14073023c ಇಂದ್ರಸ್ಯೇವಾಯುಧಸ್ಯಾಸೀದ್ರೂಪಂ ಭರತಸತ್ತಮ।।
ಭರತಸತ್ತಮ! ವಿಭೋ! ಸವ್ಯಸಾಚಿಯ ಕರದಿಂದ ಜಾರಿ ಬಿದ್ದ ಆ ಧನುಸ್ಸು ಇಂದ್ರನ ಆಯುಧದಂತೆಯೇ ಕಾಣುತ್ತಿತ್ತು.
14073024a ತಸ್ಮಿನ್ನಿಪತಿತೇ ದಿವ್ಯೇ ಮಹಾಧನುಷಿ ಪಾರ್ಥಿವ।
14073024c ಜಹಾಸ ಸಸ್ವನಂ ಹಾಸಂ ಧೃತವರ್ಮಾ ಮಹಾಹವೇ।।
ಪಾರ್ಥಿವ! ಆ ದಿವ್ಯ ಮಹಾಧನುಸ್ಸು ಕೆಳಗೆ ಬೀಳಲು ಯುದ್ಧದಲ್ಲಿ ಧೃತವರ್ಮನು ಅಟ್ಟಹಾಸದಿಂದ ನಗತೊಡಗಿದನು.
14073025a ತತೋ ರೋಷಾನ್ವಿತೋ ಜಿಷ್ಣುಃ ಪ್ರಮೃಜ್ಯ ರುಧಿರಂ ಕರಾತ್।
14073025c ಧನುರಾದತ್ತ ತದ್ದಿವ್ಯಂ ಶರವರ್ಷಂ ವವರ್ಷ ಚ।।
ಆಗ ರೋಷಾನ್ವಿತನಾದ ಜಿಷ್ಣುವು ಕೈಗಳಿಂದ ರಕ್ತವನ್ನು ಒರೆಸಿಕೊಂಡು ಆ ದಿವ್ಯ ಧನುಸ್ಸನ್ನು ಎತ್ತಿಕೊಂಡು ಶರವರ್ಷವನ್ನು ಸುರಿಸಿದನು.
14073026a ತತೋ ಹಲಹಲಾಶಬ್ದೋ ದಿವಸ್ಪೃಗಭವತ್ತದಾ।
14073026c ನಾನಾವಿಧಾನಾಂ ಭೂತಾನಾಂ ತತ್ಕರ್ಮಾತೀವ ಶಂಸತಾಮ್।।
ಅವನ ಆ ಕರ್ಮವನ್ನು ಪ್ರಶಂಸಿಸುತ್ತಿದ್ದ ನಾನಾವಿಧದ ಭೂತಗಳ ಹಲಹಲಾ ಶಬ್ಧವು ಗಗನವನ್ನು ಮುಟ್ಟಿತು.
14073027a ತತಃ ಸಂಪ್ರೇಕ್ಷ್ಯ ತಂ ಕ್ರುದ್ಧಂ ಕಾಲಾಂತಕಯಮೋಪಮಮ್।
14073027c ಜಿಷ್ಣುಂ ತ್ರೈಗರ್ತಕಾ ಯೋಧಾಸ್ತ್ವರಿತಾಃ ಪರ್ಯವಾರಯನ್।।
ಕಾಲಾಂತಕ ಯಮನಂತೆ ಕ್ರುದ್ಧನಾಗಿದ್ದ ಜಿಷ್ಣುವನ್ನು ನೋಡಿ ತೈಗರ್ತಕ ಯೋಧರು ತ್ವರೆಮಾಡಿ ಅವನನ್ನು ಸುತ್ತುವರೆದು ಮುತ್ತಿಗೆ ಹಾಕಿದರು.
14073028a ಅಭಿಸೃತ್ಯ ಪರೀಪ್ಸಾರ್ಥಂ ತತಸ್ತೇ ಧೃತವರ್ಮಣಃ।
14073028c ಪರಿವವ್ರುರ್ಗುಡಾಕೇಶಂ ತತ್ರಾಕ್ರುಧ್ಯದ್ಧನಂಜಯಃ।।
ಧೃತವರ್ಮನನ್ನು ರಕ್ಷಿಸುವ ಸಲುವಾಗಿ ಅವರು ಗುಡಾಕೇಶನನ್ನು ಸುತ್ತುವರೆದು ಮುತ್ತಿದರು. ಆಗ ಧನಂಜಯನು ಕ್ರೋಧಿತನಾದನು.
14073029a ತತೋ ಯೋಧಾನ್ಜಘಾನಾಶು ತೇಷಾಂ ಸ ದಶ ಚಾಷ್ಟ ಚ।
14073029c ಮಹೇಂದ್ರವಜ್ರಪ್ರತಿಮೈರಾಯಸೈರ್ನಿಶಿತೈಃ ಶರೈಃ।।
ಅವನು ಮಹೇಂದ್ರನ ವಜ್ರಗಳಿಗೆ ಸಮಾನ ನಿಶಿತ ಉಕ್ಕಿನ ಶರಗಳಿಂದ ಅವರ ಹದಿನೆಂಟು ಯೋಧರನ್ನು ಸಂಹರಿಸಿದನು.
14073030a ತಾಂಸ್ತು ಪ್ರಭಗ್ನಾನ್ಸಂಪ್ರೇಕ್ಷ್ಯ ತ್ವರಮಾಣೋ ಧನಂಜಯಃ।
14073030c ಶರೈರಾಶೀವಿಷಾಕಾರೈರ್ಜಘಾನ ಸ್ವನವದ್ಧಸನ್।।
ಅವರ ಸೇನೆಯು ತುಂಡಾಗುತ್ತಿರುವುದನ್ನು ನೋಡಿ ಅದನ್ನು ಧನಂಜಯನು ತ್ವರೆಮಾಡಿ ಸರ್ಪವಿಷದಾಕಾರ ಶರಗಳಿಂದ ಪ್ರಹರಿಸಿದನು.
14073031a ತೇ ಭಗ್ನಮನಸಃ ಸರ್ವೇ ತ್ರೈಗರ್ತಕಮಹಾರಥಾಃ।
14073031c ದಿಶೋ ವಿದುದ್ರುವುಃ ಸರ್ವಾ ಧನಂಜಯಶರಾರ್ದಿತಾಃ।।
ಆ ತ್ರೈಗರ್ತಕ ಮಹಾರಥರೆಲ್ಲರೂ ಧನಂಜಯನ ಶರಗಳಿಂದ ಪೀಡಿತರಾಗಿ ಭಗ್ನಮನಸ್ಕರಾಗಿ ಎಲ್ಲ ದಿಕ್ಕುಗಳಲ್ಲಿಯೂ ಓಡಿಹೋದರು.
14073032a ತ ಊಚುಃ ಪುರುಷವ್ಯಾಘ್ರಂ ಸಂಶಪ್ತಕನಿಷೂದನಮ್।
14073032c ತವ ಸ್ಮ ಕಿಂಕರಾಃ ಸರ್ವೇ ಸರ್ವೇ ಚ ವಶಗಾಸ್ತವ।।
ಅವರು ಪುರುಷವ್ಯಾಘ್ರ ಸಂಶಪ್ತಕನಿಷೂದನನಿಗೆ ಹೇಳಿದರು: “ನಾವೆಲ್ಲರೂ ನಿನ್ನ ಕಿಂಕರರು. ಎಲ್ಲರೂ ನಿನ್ನ ವಶದಲ್ಲಿ ಬಂದಿದ್ದೇವೆ.
14073033a ಆಜ್ಞಾಪಯಸ್ವ ನಃ ಪಾರ್ಥ ಪ್ರಹ್ವಾನ್ಪ್ರೇಷ್ಯಾನವಸ್ಥಿತಾನ್।
14073033c ಕರಿಷ್ಯಾಮಃ ಪ್ರಿಯಂ ಸರ್ವಂ ತವ ಕೌರವನಂದನ।।
ಪಾರ್ಥ! ಕೌರವನಂದನ! ವಿನೀತರಾಗಿ ಸೇವಕರಂತೆ ನಿಂತಿರುವ ನಮಗೆ ಆಜ್ಞಾಪಿಸು! ನಿನಗೆ ಪ್ರಿಯವಾದುದೆಲ್ಲವನ್ನೂ ನಾವು ಮಾಡುತ್ತೇವೆ!”
14073034a ಏತದಾಜ್ಞಾಯ ವಚನಂ ಸರ್ವಾಂಸ್ತಾನಬ್ರವೀತ್ತದಾ।
14073034c ಜೀವಿತಂ ರಕ್ಷತ ನೃಪಾಃ ಶಾಸನಂ ಗೃಹ್ಯತಾಮಿತಿ।।
ಅವರೆಲ್ಲರ ಮಾತುಗಳನ್ನು ಕೇಳಿ ಅರ್ಜುನನು “ನೃಪರೇ! ನಮ್ಮ ಶಾಸನವನ್ನು ಸ್ವೀಕರಿಸಿಕೊಂಡು ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳಿರಿ!” ಎಂದು ಆಜ್ಞಾಪಿಸಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ತ್ರಿಗರ್ತಪರಾಭವೇ ತ್ರಿಸಪ್ತತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ತ್ರಿಗರ್ತಪರಾಭವ ಎನ್ನುವ ಎಪ್ಪತ್ಮೂರನೇ ಅಧ್ಯಾಯವು.