071: ಯಜ್ಞಸಾಮಗ್ರೀಸಂಪಾದನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 71

ಸಾರ

ಯಜ್ಞಸಾಮಗ್ರಿಗಳನ್ನು ಒಂದುಗೂಡಿಸಿದುದು (1-11). ವ್ಯಾಸನೊಂದಿಗೆ ಸಮಾಲೋಚನೆಗೈದು ಯುಧಿಷ್ಠಿರನು ಅರ್ಜುನನನ್ನು ಅಶ್ವಾನುಸರಣೆಗೆ ಕಳುಹಿಸಿದುದು (12-26).

14071001 ವೈಶಂಪಾಯನ ಉವಾಚ
14071001a ಏವಮುಕ್ತಸ್ತು ಕೃಷ್ಣೇನ ಧರ್ಮಪುತ್ರೋ ಯುಧಿಷ್ಠಿರಃ।
14071001c ವ್ಯಾಸಮಾಮಂತ್ರ್ಯ ಮೇಧಾವೀ ತತೋ ವಚನಮಬ್ರವೀತ್।।

ವೈಶಂಪಾಯನನು ಹೇಳಿದನು: “ಕೃಷ್ಣನು ಹೀಗೆ ಹೇಳಲು ಧರ್ಮಪುತ್ರ ಯುಧಿಷ್ಠಿರನು ಮೇಧಾವೀ ವ್ಯಾಸನನ್ನು ಕರೆಯಿಸಿ ಈ ಮಾತುಗಳನ್ನಾಡಿದನು:

14071002a ಯಥಾ ಕಾಲಂ ಭವಾನ್ವೇತ್ತಿ ಹಯಮೇಧಸ್ಯ ತತ್ತ್ವತಃ।
14071002c ದೀಕ್ಷಯಸ್ವ ತದಾ ಮಾ ತ್ವಂ ತ್ವಯ್ಯಾಯತ್ತೋ ಹಿ ಮೇ ಕ್ರತುಃ।।

“ಹಯಮೇಧಕ್ಕೆ ತತ್ತ್ವತಃ ಯಾವ ಕಾಲವು ಸರಿಯೆಂದು ನಿಮಗೆ ತಿಳಿದಿದೆಯೋ ಆಗ ನನಗೆ ಯಜ್ಞದೀಕ್ಷೆಯನ್ನು ನೀಡಿರಿ. ಈ ಕ್ರತುವು ನಿಮ್ಮನ್ನೇ ಅವಲಂಬಿಸಿದೆ!”

14071003 ವ್ಯಾಸ ಉವಾಚ
14071003a ಅಹಂ ಪೈಲೋಽಥ ಕೌಂತೇಯ ಯಾಜ್ಞವಲ್ಕ್ಯಸ್ತಥೈವ ಚ।
14071003c ವಿಧಾನಂ ಯದ್ಯಥಾಕಾಲಂ ತತ್ಕರ್ತಾರೋ ನ ಸಂಶಯಃ।।

ವ್ಯಾಸನು ಹೇಳಿದನು: “ಕೌಂತೇಯ! ಕಾಲವು ಸನ್ನಿಹಿತವಾದೊಡನೆಯೇ ನಾನು ಪೈಲ ಮತ್ತು ಯಾಜ್ಞವಲ್ಕ್ಯನೇ ಮೊದಲಾದವರಿಂದ ಯಜ್ಞವಿಧಾನವನ್ನು ನಡೆಸಿಕೊಡುತ್ತೇನೆ. ಅದರಲ್ಲಿ ಸಂಶಯವಿಲ್ಲದಿರಲಿ!

14071004a ಚೈತ್ರ್ಯಾಂ ಹಿ ಪೌರ್ಣಮಾಸ್ಯಾಂ ಚ ತವ ದೀಕ್ಷಾ ಭವಿಷ್ಯತಿ।
14071004c ಸಂಭಾರಾಃ ಸಂಭ್ರಿಯಂತಾಂ ತೇ ಯಜ್ಞಾರ್ಥಂ ಪುರುಷರ್ಷಭ।।

ಪುರುಷರ್ಷಭ! ಬರುವ ಚೈತ್ರ ಶುದ್ಧ ಪೂರ್ಣಿಮೆಯಂದು ನಿನ್ನ ದೀಕ್ಷೆಯು ನಡೆಯುತ್ತದೆ. ಯಜ್ಞಾರ್ಥಕ್ಕಾಗಿ ಸಾಮಗ್ರಿಗಳನ್ನು ಸಂಗ್ರಹಿಸು.

14071005a ಅಶ್ವವಿದ್ಯಾವಿದಶ್ಚೈವ ಸೂತಾ ವಿಪ್ರಾಶ್ಚ ತದ್ವಿದಃ।
14071005c ಮೇಧ್ಯಮಶ್ವಂ ಪರೀಕ್ಷಂತಾಂ ತವ ಯಜ್ಞಾರ್ಥಸಿದ್ಧಯೇ।।

ನಿನ್ನ ಯಜ್ಞಸಿದ್ಧಿಗಾಗಿ ಅಶ್ವವಿದ್ಯೆಯನ್ನು ತಿಳಿದ ಸೂತರು ಮತ್ತು ವಿಪ್ರರು ಪವಿತ್ರ ಕುದುರೆಯನ್ನು ಗುರುತಿಸಲಿ.

14071006a ತಮುತ್ಸೃಜ್ಯ ಯಥಾಶಾಸ್ತ್ರಂ ಪೃಥಿವೀಂ ಸಾಗರಾಂಬರಾಮ್।
14071006c ಸ ಪರ್ಯೇತು ಯಶೋ ನಾಮ್ನಾ ತವ ಪಾರ್ಥಿವ ವರ್ಧಯನ್।।

ಪಾರ್ಥಿವ! ಯಥಾಶಾಸ್ತ್ರವಾಗಿ ಅದನ್ನು ಬಿಟ್ಟ ನಂತರ ಅದು ಸಾಗರವನ್ನೇ ವಸ್ತ್ರವಾಗುಳ್ಳ ಪೃಥ್ವಿಯಲ್ಲಿ ನಿನ್ನ ಯಶಸ್ಸು-ಹೆಸರನ್ನು ವರ್ಧಿಸುತ್ತಾ ಸುತ್ತಾಡಲಿ!””

14071007 ವೈಶಂಪಾಯನ ಉವಾಚ 14071007a ಇತ್ಯುಕ್ತಃ ಸ ತಥೇತ್ಯುಕ್ತ್ವಾ ಪಾಂಡವಃ ಪೃಥಿವೀಪತಿಃ।
14071007c ಚಕಾರ ಸರ್ವಂ ರಾಜೇಂದ್ರ ಯಥೋಕ್ತಂ ಬ್ರಹ್ಮವಾದಿನಾ।
14071007E ಸಂಭಾರಾಶ್ಚೈವ ರಾಜೇಂದ್ರ ಸರ್ವೇ ಸಂಕಲ್ಪಿತಾಭವನ್।।

ವೈಶಂಪಾಯನನು ಹೇಳಿದನು: “ರಾಜೇಂದ್ರ! ಹೀಗೆ ಹೇಳಲು ಪೃಥಿವೀಪತಿ ಪಾಂಡವನು ಬ್ರಹ್ಮವಾದಿಯು ಹೇಳಿದಂತೆ ಎಲ್ಲವನ್ನೂ ಮಾಡಿದನು. ರಾಜೇಂದ್ರ! ಸಕಲ ಸಾಮಗ್ರಿಗಳನ್ನೂ ಸಂಗ್ರಹಿಸಿದನು.

14071008a ಸ ಸಂಭಾರಾನ್ಸಮಾಹೃತ್ಯ ನೃಪೋ ಧರ್ಮಾತ್ಮಜಸ್ತದಾ।
14071008c ನ್ಯವೇದಯದಮೇಯಾತ್ಮಾ ಕೃಷ್ಣದ್ವೈಪಾಯನಾಯ ವೈ।।

ಸಾಮಗ್ರಿಗಳನ್ನು ಒಟ್ಟುಗೂಡಿಸಿಕೊಂಡು ನೃಪ ಧರ್ಮಾತ್ಮಜನು ಅಮೇಯಾತ್ಮಾ ಕೃಷ್ಣದ್ವೈಪಾಯನನಿಗೆ ನಿವೇದಿಸಿದನು.

14071009a ತತೋಽಬ್ರವೀನ್ಮಹಾತೇಜಾ ವ್ಯಾಸೋ ಧರ್ಮಾತ್ಮಜಂ ನೃಪಮ್।
14071009c ಯಥಾಕಾಲಂ ಯಥಾಯೋಗಂ ಸಜ್ಜಾಃ ಸ್ಮ ತವ ದೀಕ್ಷಣೇ।।

ಆಗ ಮಹಾತೇಜಸ್ವೀ ವ್ಯಾಸನು ನೃಪ ಧರ್ಮಾತ್ಮಜನಿಗೆ ಹೇಳಿದನು: “ಯಥಾಕಾಲದಲ್ಲಿ ಯಥಾಯೋಗದಲ್ಲಿ ನಿನಗೆ ದೀಕ್ಷೆಯನ್ನು ನೀಡಲು ಸಿದ್ಧರಿದ್ದೇವೆ!

14071010a ಸ್ಫ್ಯಶ್ಚ ಕೂರ್ಚಶ್ಚ ಸೌವರ್ಣೋ ಯಚ್ಚಾನ್ಯದಪಿ ಕೌರವ।
14071010c ತತ್ರ ಯೋಗ್ಯಂ ಭವೇತ್ಕಿಂ ಚಿತ್ತದ್ರೌಕ್ಮಂ ಕ್ರಿಯತಾಮಿತಿ।।

ಕೌರವ! ನೀನು ಸುವರ್ಣಮಯ ಸ್ಫ್ಯಶವನ್ನೂ ಕೂರ್ಚವನ್ನೂ ಮಾಡಿಸು. ಬೇರೆ ಯಾವುದರ ಅವಶ್ಯಕತೆಯಿದೆಯೋ ಅವುಗಳೆಲ್ಲವನ್ನು ಸುವರ್ಣದಲ್ಲಿ ಮಾಡಿಸು!

14071011a ಅಶ್ವಶ್ಚೋತ್ಸೃಜ್ಯತಾಮದ್ಯ ಪೃಥ್ವ್ಯಾಮಥ ಯಥಾಕ್ರಮಮ್।
14071011c ಸುಗುಪ್ತಶ್ಚ ಚರತ್ವೇಷ ಯಥಾಶಾಸ್ತ್ರಂ ಯುಧಿಷ್ಠಿರ।।

ಯುಧಿಷ್ಠಿರ! ಇಂದು ಯಥಾಕ್ರಮವಾಗಿ ಅಶ್ವವನ್ನು ಭೂಮಿಯ ಮೇಲೆ ಸಂಚರಿಸಲು ಬಿಟ್ಟುಬಿಡು. ಚೆನ್ನಾಗಿ ರಕ್ಷಿಸಲ್ಪಟ್ಟು ಅದು ಯಥಾಶಾಸ್ತ್ರವಾಗಿ ಸಂಚರಿಸಲಿ!”

14071012 ಯುಧಿಷ್ಠಿರ ಉವಾಚ
14071012a ಅಯಮಶ್ವೋ ಮಯಾ ಬ್ರಹ್ಮನ್ನುತ್ಸೃಷ್ಟಃ ಪೃಥಿವೀಮಿಮಾಮ್।
14071012c ಚರಿಷ್ಯತಿ ಯಥಾಕಾಮಂ ತತ್ರ ವೈ ಸಂವಿಧೀಯತಾಮ್।।

ಯುಧಿಷ್ಠಿರನು ಹೇಳಿದನು: “ಬ್ರಹ್ಮನ್! ಈ ಅಶ್ವವನ್ನು ನಾನು ಬಿಟ್ಟಿದ್ದೇನೆ. ಇದು ಮನಬಂದಂತೆ ಇಡೀ ಭೂಮಿಯನ್ನು ಸುತ್ತಾಡುತ್ತದೆ. ಇದರ ಕುರಿತು ನೀವು ನನಗೆ ಸಲಹೆಯನ್ನು ನೀಡಬೇಕು.

14071013a ಪೃಥಿವೀಂ ಪರ್ಯಟಂತಂ ಹಿ ತುರಗಂ ಕಾಮಚಾರಿಣಮ್।
14071013c ಕಃ ಪಾಲಯೇದಿತಿ ಮುನೇ ತದ್ಭವಾನ್ವಕ್ತುಮರ್ಹತಿ।।

ಮುನೇ! ಭೂಮಿಯನ್ನು ಸುತ್ತಾಡುತ್ತಾ ಬೇಕಾದಲ್ಲಿ ಹೋಗುವ ಈ ತುರಗವನ್ನು ಯಾರು ರಕ್ಷಿಸಬೇಕು ಎನ್ನುವುದನ್ನು ನೀವು ಹೇಳಬೇಕು!””

14071014 ವೈಶಂಪಾಯನ ಉವಾಚ
14071014a ಇತ್ಯುಕ್ತಃ ಸ ತು ರಾಜೇಂದ್ರ ಕೃಷ್ಣದ್ವೈಪಾಯನೋಽಬ್ರವೀತ್।
14071014c ಭೀಮಸೇನಾದವರಜಃ ಶ್ರೇಷ್ಠಃ ಸರ್ವಧನುಷ್ಮತಾಮ್।।
14071015a ಜಿಷ್ಣುಃ ಸಹಿಷ್ಣುರ್ಧೃಷ್ಣುಶ್ಚ ಸ ಏನಂ ಪಾಲಯಿಷ್ಯತಿ।

ವೈಶಂಪಾಯನನು ಹೇಳಿದನು: “ರಾಜೇಂದ್ರ! ಇದಕ್ಕೆ ಕೃಷ್ಣದ್ವೈಪಾಯನನು ಹೇಳಿದನು: “ಭೀಮಸೇನನ ತಮ್ಮ, ಸರ್ವಧನುಷ್ಮತರಲ್ಲಿ ಶ್ರೇಷ್ಠ, ಜಿಷ್ಣು ಸಹನಶೀಲ ಧೈರ್ಯವಂತ ಅರ್ಜುನನು ಇದನ್ನು ರಕ್ಷಿಸುತ್ತಾನೆ.

14071015c ಶಕ್ತಃ ಸ ಹಿ ಮಹೀಂ ಜೇತುಂ ನಿವಾತಕವಚಾಂತಕಃ।।
14071016a ತಸ್ಮಿನ್ ಹ್ಯಸ್ತ್ರಾಣಿ ದಿವ್ಯಾನಿ ದಿವ್ಯಂ ಸಂಹನನಂ ತಥಾ।
14071016c ದಿವ್ಯಂ ಧನುಶ್ಚೇಷುಧೀ ಚ ಸ ಏನಮನುಯಾಸ್ಯತಿ।।

ನಿವಾತಕವಚರನ್ನು ಸಂಹರಿಸಿದ ಇವನು ಭೂಮಿಯನ್ನೇ ಗೆಲ್ಲಲು ಶಕ್ತನಾಗಿದ್ದಾನೆ. ಅವನಲ್ಲಿ ದಿವ್ಯಾಸ್ತ್ರಗಳಿವೆ. ದಿವ್ಯ ಕವಚವಿದೆ. ಮತ್ತು ದಿವ್ಯವಾದ ಧನುಸ್ಸೂ-ಭತ್ತಳಿಕೆಗಳೂ ಇವೆ. ಅವನೇ ಈ ಕುದುರೆಯನ್ನು ಅನುಸರಿಸಿ ಹೋಗುತ್ತಾನೆ.

14071017a ಸ ಹಿ ಧರ್ಮಾರ್ಥಕುಶಲಃ ಸರ್ವವಿದ್ಯಾವಿಶಾರದಃ।
14071017c ಯಥಾಶಾಸ್ತ್ರಂ ನೃಪಶ್ರೇಷ್ಠ ಚಾರಯಿಷ್ಯತಿ ತೇ ಹಯಮ್।।

ನೃಪಶ್ರೇಷ್ಠ! ಧರ್ಮಾರ್ಥಕುಶಲನೂ ಸರ್ವವಿದ್ಯಾವಿಶಾರದನೂ ಆದ ಅವನೇ ಯಥಾಶಾಸ್ತ್ರವಾಗಿ ಈ ಕುದುರೆಯನ್ನು ತಿರುಗಾಡಿಸುತ್ತಾನೆ.

14071018a ರಾಜಪುತ್ರೋ ಮಹಾಬಾಹುಃ ಶ್ಯಾಮೋ ರಾಜೀವಲೋಚನಃ।
14071018c ಅಭಿಮನ್ಯೋಃ ಪಿತಾ ವೀರಃ ಸ ಏನಮನುಯಾಸ್ಯತಿ।।

ರಾಜಪುತ್ರ ಮಹಾಬಾಹು ಶ್ಯಾಮವರ್ಣಿ ರಾಜೀವಲೋಚನ ಅಭಿಮನ್ಯುವಿನ ತಂದೆ ಈ ವೀರನೇ ಇದನ್ನು ಅನುಸರಿಸಿ ಹೋಗುತ್ತಾನೆ.

14071019a ಭೀಮಸೇನೋಽಪಿ ತೇಜಸ್ವೀ ಕೌಂತೇಯೋಽಮಿತವಿಕ್ರಮಃ।
14071019c ಸಮರ್ಥೋ ರಕ್ಷಿತುಂ ರಾಷ್ಟ್ರಂ ನಕುಲಶ್ಚ ವಿಶಾಂ ಪತೇ।।

ವಿಶಾಂಪತೇ! ತೇಜಸ್ವೀ ಕೌಂತೇಯ ಅಮಿತವಿಕ್ರಮಿ ಭೀಮಸೇನ ಮತ್ತು ನಕುಲರು ರಾಷ್ಟ್ರವನ್ನು ರಕ್ಷಿಸಲು ಸಮರ್ಥರಾಗಿದ್ದಾರೆ.

14071020a ಸಹದೇವಸ್ತು ಕೌರವ್ಯ ಸಮಾಧಾಸ್ಯತಿ ಬುದ್ಧಿಮಾನ್।
14071020c ಕುಟುಂಬತಂತ್ರಂ ವಿಧಿವತ್ಸರ್ವಮೇವ ಮಹಾಯಶಾಃ।।

ಕೌರವ್ಯ! ಬುದ್ಧಿಮಾನ್ ಮಹಾಯಶಸ್ವಿ ಸಹದೇವನಾದರೋ ಕುಟುಂಬರಕ್ಷಣೆಯ ಸಲುವಾಗಿ ಸಮಸ್ತ ಕಾರ್ಯಗಳನ್ನೂ ಕೈಗೊಳ್ಳುತ್ತಾನೆ.”

14071021a ತತ್ತು ಸರ್ವಂ ಯಥಾನ್ಯಾಯಮುಕ್ತಂ ಕುರುಕುಲೋದ್ವಹಃ।
14071021c ಚಕಾರ ಫಲ್ಗುನಂ ಚಾಪಿ ಸಂದಿದೇಶ ಹಯಂ ಪ್ರತಿ।।

ಅವನು ಹೇಳಿದಂತೆ ಎಲ್ಲವನ್ನೂ ಯಥಾನ್ಯಾಯವಾಗಿ ಕುರುಕುಲೋದ್ವಹ ಯುಧಿಷ್ಠಿರನು ಮಾಡಿ ಕುದುರೆಯ ಕುರಿತಾಗಿ ಫಲ್ಗುನನಿಗೆ ಹೀಗೆ ಹೇಳಿದನು.

14071022 ಯುಧಿಷ್ಠಿರ ಉವಾಚ
14071022a ಏಹ್ಯರ್ಜುನ ತ್ವಯಾ ವೀರ ಹಯೋಽಯಂ ಪರಿಪಾಲ್ಯತಾಮ್।
14071022c ತ್ವಮರ್ಹೋ ರಕ್ಷಿತುಂ ಹ್ಯೇನಂ ನಾನ್ಯಃ ಕಶ್ಚನ ಮಾನವಃ।।

ಯುಧಿಷ್ಠಿರನು ಹೇಳಿದನು: “ವೀರ ಅರ್ಜುನ! ಇಲ್ಲಿ ಬಾ! ನೀನು ಈ ಕುದುರೆಯನ್ನು ರಕ್ಷಿಸಬೇಕು. ಬೇರೆ ಯಾವ ಮಾನವನೂ ಇದನ್ನು ರಕ್ಷಿಸಲು ಅರ್ಹನಲ್ಲ.

14071023a ಯೇ ಚಾಪಿ ತ್ವಾಂ ಮಹಾಬಾಹೋ ಪ್ರತ್ಯುದೀಯುರ್ನರಾಧಿಪಾಃ।
14071023c ತೈರ್ವಿಗ್ರಹೋ ಯಥಾ ನ ಸ್ಯಾತ್ತಥಾ ಕಾರ್ಯಂ ತ್ವಯಾನಘ।।

ಮಹಾಬಾಹೋ! ಅನಘ! ಒಂದು ವೇಳೆ ನರಾಧಿಪರು ನಮ್ಮನ್ನು ವಿರೋಧಿಸಿದರೂ ಅವರೊಡನೆ ಯುದ್ಧವಾಗದ ರೀತಿಯಲ್ಲಿ ನೀನು ಕಾರ್ಯನಿರ್ವಹಿಸಬೇಕು.

14071024a ಆಖ್ಯಾತವ್ಯಶ್ಚ ಭವತಾ ಯಜ್ಞೋಽಯಂ ಮಮ ಸರ್ವಶಃ।
14071024c ಪಾರ್ಥಿವೇಭ್ಯೋ ಮಹಾಬಾಹೋ ಸಮಯೇ ಗಮ್ಯತಾಮಿತಿ।।

ಎಲ್ಲರಿಗೂ ನನ್ನ ಈ ಯಜ್ಞದ ಕುರಿತು ತಿಳಿಸಬೇಕು ಮತ್ತು ಮಹಾಬಾಹೋ! ಯಜ್ಞದ ಸಮಯಕ್ಕೆ ಬರುವಂತೆ ಎಲ್ಲ ಪಾರ್ಥಿವರನ್ನೂ ಆಹ್ವಾನಿಸಬೇಕು.”

14071025a ಏವಮುಕ್ತ್ವಾ ಸ ಧರ್ಮಾತ್ಮಾ ಭ್ರಾತರಂ ಸವ್ಯಸಾಚಿನಮ್।
14071025c ಭೀಮಂ ಚ ನಕುಲಂ ಚೈವ ಪುರಗುಪ್ತೌ ಸಮಾದಧತ್।।

ತಮ್ಮ ಸವ್ಯಸಾಚಿಗೆ ಹೀಗೆ ಹೇಳಿ ಧರ್ಮಾತ್ಮ ಯುಧಿಷ್ಠಿರನು ಭೀಮ-ನಕುಲರನ್ನು ಪುರದ ರಕ್ಷಣೆಗೆ ವಿಧಿಸಿದನು.

14071026a ಕುಟುಂಬತಂತ್ರೇ ಚ ತಥಾ ಸಹದೇವಂ ಯುಧಾಂ ಪತಿಮ್।
14071026c ಅನುಮಾನ್ಯ ಮಹೀಪಾಲಂ ಧೃತರಾಷ್ಟ್ರಂ ಯುಧಿಷ್ಠಿರಃ।।

ಯುಧಿಷ್ಠಿರನು ಮಹೀಪಾಲ ಧೃತರಾಷ್ಟ್ರನ ಅನುಮತಿಯನ್ನು ಪಡೆದು ಸೇನಾಪತಿ ಸಹದೇವನನ್ನು ಕುಟುಂಬರಕ್ಷಣೆಗೆ ನೇಮಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಯಜ್ಞಸಾಮಗ್ರೀಸಂಪಾದನೇ ಏಕಸಪ್ತತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಯಜ್ಞಸಾಮಗ್ರೀಸಂಪಾದನ ಎನ್ನುವ ಎಪ್ಪತ್ತೊಂದನೇ ಅಧ್ಯಾಯವು.