ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 70
ಸಾರ
ಪರಿಕ್ಷಿತನ ಅದ್ಭುತ ಜನ್ಮದ ಕುರಿತು ಕೇಳಿದ ಪಾಂಡವರು ಕೃಷ್ಣನನ್ನು ಪೂಜಿಸಿದುದು (1-9). ಅಶ್ವಮೇಧ ಯಾಗಕ್ಕೆ ವ್ಯಾಸನು ಸಮ್ಮತಿಯನ್ನಿತ್ತಿದುದು (10-17). ಕೃಷ್ಣನೇ ಯಾಗದ ದೀಕ್ಷೆಯನ್ನು ಪಡೆದುಕೊಳ್ಳಬೇಕೆಂದು ಯುಧಿಷ್ಠಿರನು ಕೇಳಿಕೊಳ್ಳಲು, ಕೃಷ್ಣನು ಯುಧಿಷ್ಠಿರನೇ ಆ ಯಾಗವನ್ನು ನಡೆಸಬೇಕೆಂದು ಸೂಚಿಸಿದುದು (18-25).
14070001 ವೈಶಂಪಾಯನ ಉವಾಚ
14070001a ತಾನ್ಸಮೀಪಗತಾನ್ ಶೃತ್ವಾ ಪಾಂಡವಾನ್ ಶತ್ರುಕರ್ಶನಃ।
14070001c ವಾಸುದೇವಃ ಸಹಾಮಾತ್ಯಃ ಪ್ರತ್ಯುದ್ಯಾತೋ ದಿದೃಕ್ಷಯಾ।।
ವೈಶಂಪಾಯನನು ಹೇಳಿದನು: “ಪಾಂಡವರು ಸಮೀಪದಲ್ಲಿಯೇ ಬಂದಿದ್ದಾರೆಂದು ಕೇಳಿದ ಶತ್ರುಕರ್ಶನ ವಾಸುದೇವನು ಅಮಾತ್ಯರೊಂದಿಗೆ ಅವರನ್ನು ಕಾಣಲು ಬಂದನು.
14070002a ತೇ ಸಮೇತ್ಯ ಯಥಾನ್ಯಾಯಂ ಪಾಂಡವಾ ವೃಷ್ಣಿಭಿಃ ಸಹ।
14070002c ವಿವಿಶುಃ ಸಹಿತಾ ರಾಜನ್ಪುರಂ ವಾರಣಸಾಹ್ವಯಮ್।।
ರಾಜನ್! ಪಾಂಡವರು ವೃಷ್ಣಿಗಳೊಂದಿಗೆ ಯಥಾನ್ಯಾಯವಾಗಿ ಕಲೆತು ಒಟ್ಟಿಗೇ ವಾರಣಸಾಹ್ವಯ ಪುರವನ್ನು ಪ್ರವೇಶಿಸಿದರು.
14070003a ಮಹತಸ್ತಸ್ಯ ಸೈನ್ಯಸ್ಯ ಖುರನೇಮಿಸ್ವನೇನ ಚ।
14070003c ದ್ಯಾವಾಪೃಥಿವ್ಯೌ ಖಂ ಚೈವ ಶಬ್ದೇನಾಸೀತ್ಸಮಾವೃತಮ್।।
ಆ ಮಹಾ ಸೇನೆಯ ಮತ್ತು ರಥಚಕ್ರಗಳ ಶಬ್ಧಗಳಿಂದ ಭೂಮಿ-ಸ್ವರ್ಗಗಳ ಮಧ್ಯದ ಆಕಾಶವು ತುಂಬಿಹೋಯಿತು.
14070004a ತೇ ಕೋಶಮಗ್ರತಃ ಕೃತ್ವಾ ವಿವಿಶುಃ ಸ್ವಪುರಂ ತದಾ।
14070004c ಪಾಂಡವಾಃ ಪ್ರೀತಮನಸಃ ಸಾಮಾತ್ಯಾಃ ಸಸುಹೃದ್ಗಣಾಃ।।
ಆಗ ಪಾಂಡವರು ಪ್ರೀತಮನಸ್ಕರಾಗಿ ಅಮಾತ್ಯರು ಮತ್ತು ಸ್ನೇಹಿತಗಣಗಳೊಂದಿಗೆ ಕೋಶವನ್ನು ಮುಂದೆಮಾಡಿಕೊಂಡು ತಮ್ಮ ಪುರವನ್ನು ಪ್ರವೇಶಿಸಿದರು.
14070005a ತೇ ಸಮೇತ್ಯ ಯಥಾನ್ಯಾಯಂ ಧೃತರಾಷ್ಟ್ರಂ ಜನಾಧಿಪಮ್।
14070005c ಕೀರ್ತಯಂತಃ ಸ್ವನಾಮಾನಿ ತಸ್ಯ ಪಾದೌ ವವಂದಿರೇ।।
ಅವರು ಯಥಾನ್ಯಾಯವಾಗಿ ಜನಾಧಿಪ ಧೃತರಾಷ್ಟ್ರನನ್ನು ಸಂಧಿಸಿ ತಮ್ಮ ತಮ್ಮ ಹೆಸರುಗಳನ್ನು ಹೇಳಿಕೊಳ್ಳುತ್ತಾ ಅವನ ಪಾದಗಳಿಗೆ ವಂದಿಸಿದರು.
14070006a ಧೃತರಾಷ್ಟ್ರಾದನು ಚ ತೇ ಗಾಂಧಾರೀಂ ಸುಬಲಾತ್ಮಜಾಮ್।
14070006c ಕುಂತೀಂ ಚ ರಾಜಶಾರ್ದೂಲ ತದಾ ಭರತಸತ್ತಮಾಃ।।
14070007a ವಿದುರಂ ಪೂಜಯಿತ್ವಾ ಚ ವೈಶ್ಯಾಪುತ್ರಂ ಸಮೇತ್ಯ ಚ।
14070007c ಪೂಜ್ಯಮಾನಾಃ ಸ್ಮ ತೇ ವೀರಾ ವ್ಯರಾಜಂತ ವಿಶಾಂ ಪತೇ।।
ರಾಜಶಾರ್ದೂಲ! ವಿಶಾಂಪತೇ! ಧೃತರಾಷ್ಟ್ರನ ನಂತರ ಆ ಭರತಸತ್ತಮರು ಸುಬಲಾತ್ಮಜೆ ಗಾಂಧಾರೀ, ಕುಂತೀ ಮತ್ತು ವಿದುರರನ್ನು ಪೂಜಿಸಿ ವೈಶ್ಯಾಪುತ್ರ ಯುಯುತ್ಸುವನ್ನು ಸಂಧಿಸಿದರು. ಅವರಿಂತ ಸನ್ಮಾನಿತರಾದ ಆ ವೀರರು ವಿರಾಜಿಸುತ್ತಿದ್ದರು.
14070008a ತತಸ್ತತ್ಪರಮಾಶ್ಚರ್ಯಂ ವಿಚಿತ್ರಂ ಮಹದದ್ಭುತಮ್।
14070008c ಶುಶ್ರುವುಸ್ತೇ ತದಾ ವೀರಾಃ ಪಿತುಸ್ತೇ ಜನ್ಮ ಭಾರತ।।
ಭಾರತ! ಆಗ ಆ ವೀರರು ವಿಚಿತ್ರವೂ ಮಹದದ್ಭುತವೂ ಪರಮಾಶ್ಚರ್ಯವೂ ಆದ ನಿನ್ನ ತಂದೆಯ ಜನ್ಮದ ಕುರಿತು ಕೇಳಿದರು.
14070009a ತದುಪಶ್ರುತ್ಯ ತೇ ಕರ್ಮ ವಾಸುದೇವಸ್ಯ ಧೀಮತಃ।
14070009c ಪೂಜಾರ್ಹಂ ಪೂಜಯಾಮಾಸುಃ ಕೃಷ್ಣಂ ದೇವಕಿನಂದನಮ್।।
ಧೀಮತ ವಾಸುದೇವನ ಆ ಕೃತ್ಯವನ್ನು ಕೇಳಿ ಅವರು ಪೂಜಾರ್ಹನಾದ ದೇವಕಿನಂದನ ಕೃಷ್ಣನನ್ನು ಪೂಜಿಸಿದರು.
14070010a ತತಃ ಕತಿಪಯಾಹಸ್ಯ ವ್ಯಾಸಃ ಸತ್ಯವತೀಸುತಃ।
14070010c ಆಜಗಾಮ ಮಹಾತೇಜಾ ನಗರಂ ನಾಗಸಾಹ್ವಯಮ್।।
ಅದಾದ ಕೆಲವು ದಿನಗಳ ನಂತರ ಸತ್ಯವತೀ ಸುತ ಮಹಾತೇಜಸ್ವೀ ವ್ಯಾಸನು ನಾಗಸಾಹ್ವಯ ನಗರಕ್ಕೆ ಆಗಮಿಸಿದನು.
14070011a ತಸ್ಯ ಸರ್ವೇ ಯಥಾನ್ಯಾಯಂ ಪೂಜಾಂ ಚಕ್ರುಃ ಕುರೂದ್ವಹಾಃ।
14070011c ಸಹ ವೃಷ್ಣ್ಯಂಧಕವ್ಯಾಘ್ರೈರುಪಾಸಾಂ ಚಕ್ರಿರೇ ತದಾ।।
ಆಗ ಎಲ್ಲ ಕುರೂದ್ವಹರೂ ವೃಷ್ಣಿ-ಅಂಧಕವ್ಯಾಘ್ರರೊಂದಿಗೆ ಅವನಿಗೆ ಯಥಾನ್ಯಾಯವಾಗಿ ಸೇವೆಸಲ್ಲಿಸಿದರು.
14070012a ತತ್ರ ನಾನಾವಿಧಾಕಾರಾಃ ಕಥಾಃ ಸಮನುಕೀರ್ತ್ಯ ವೈ।
14070012c ಯುಧಿಷ್ಠಿರೋ ಧರ್ಮಸುತೋ ವ್ಯಾಸಂ ವಚನಮಬ್ರವೀತ್।।
ಅಲ್ಲಿ ನಾನಾ ವಿಧದ ಮಾತುಕಥೆಗಳು ನಡೆಯುತ್ತಿರಲು ಧರ್ಮಸುತ ಯುಧಿಷ್ಠಿರನು ವ್ಯಾಸನಿಗೆ ಇಂತೆಂದನು:
14070013a ಭವತ್ಪ್ರಸಾದಾದ್ಭಗವನ್ಯದಿದಂ ರತ್ನಮಾಹೃತಮ್।
14070013c ಉಪಯೋಕ್ತುಂ ತದಿಚ್ಚಾಮಿ ವಾಜಿಮೇಧೇ ಮಹಾಕ್ರತೌ।।
“ಭಗವನ್! ನಿನ್ನ ಅನುಗ್ರಹದಿಂದ ಈ ರತ್ನವನ್ನು ತಂದಿದ್ದೇವೆ. ಇದನ್ನು ಮಹಾಕ್ರತು ವಾಜಿಮೇಧಕ್ಕೆ ಉಪಯೋಗಿಸಲು ಇಚ್ಛಿಸುತ್ತೇನೆ.
14070014a ತದನುಜ್ಞಾತುಮಿಚ್ಚಾಮಿ ಭವತಾ ಮುನಿಸತ್ತಮ।
14070014c ತ್ವದಧೀನಾ ವಯಂ ಸರ್ವೇ ಕೃಷ್ಣಸ್ಯ ಚ ಮಹಾತ್ಮನಃ।।
ಮುನಿಸತ್ತಮ! ನೀನು ನನಗೆ ಅಪ್ಪಣೆಯನ್ನು ಕೊಡಬೇಕು. ನಾವೆಲ್ಲರೂ ನಿನ್ನ ಮತ್ತು ಮಹಾತ್ಮ ಕೃಷ್ಣನ ಅಧೀನದಲ್ಲಿದ್ದೇವೆ.”
14070015 ವ್ಯಾಸ ಉವಾಚ
14070015a ಅನುಜಾನಾಮಿ ರಾಜಂಸ್ತ್ವಾಂ ಕ್ರಿಯತಾಂ ಯದನಂತರಮ್।
14070015c ಯಜಸ್ವ ವಾಜಿಮೇಧೇನ ವಿಧಿವದ್ದಕ್ಷಿಣಾವತಾ।।
ವ್ಯಾಸನು ಹೇಳಿದನು: “ರಾಜನ್! ನಿನಗೆ ಅನುಮತಿಯನ್ನು ಕೊಡುತ್ತಿದ್ದೇನೆ. ಇದರ ನಂತರದ ಕಾರ್ಯಗಳನ್ನು ನೀನು ಮಾಡಬೇಕು. ವಿಧಿವತ್ತಾಗಿ ದಕ್ಷಿಣಾಯುಕ್ತವಾದ ವಾಜಿಮೇಧವನ್ನು ಯಜಿಸು!
14070016a ಅಶ್ವಮೇಧೋ ಹಿ ರಾಜೇಂದ್ರ ಪಾವನಃ ಸರ್ವಪಾಪ್ಮನಾಮ್।
14070016c ತೇನೇಷ್ಟ್ವಾ ತ್ವಂ ವಿಪಾಪ್ಮಾ ವೈ ಭವಿತಾ ನಾತ್ರ ಸಂಶಯಃ।।
ರಾಜೇಂದ್ರ! ಅಶ್ವಮೇಧವೇ ಸರ್ವಪಾಪಗಳನ್ನು ಪಾವನಗೊಳಿಸುತ್ತದೆ. ಆ ಇಷ್ಟಿಯಿಂದ ನೀನು ಪಾಪರಹಿತನಾಗುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ.””
14070017 ವೈಶಂಪಾಯನ ಉವಾಚ
14070017a ಇತ್ಯುಕ್ತಃ ಸ ತು ಧರ್ಮಾತ್ಮಾ ಕುರುರಾಜೋ ಯುಧಿಷ್ಠಿರಃ।
14070017c ಅಶ್ವಮೇಧಸ್ಯ ಕೌರವ್ಯ ಚಕಾರಾಹರಣೇ ಮತಿಮ್।।
ವೈಶಂಪಾಯನನು ಹೇಳಿದನು: “ಕೌರವ್ಯ! ಆ ಧರ್ಮಾತ್ಮನು ಹೀಗೆ ಹೇಳಲು ಕುರುರಾಜ ಯುಧಿಷ್ಠಿರನು ಅಶ್ವಮೇಧವನ್ನು ಕೈಗೊಳ್ಳಲು ನಿರ್ಧರಿಸಿದನು.
14070018a ಸಮನುಜ್ಞಾಪ್ಯ ತು ಸ ತಂ ಕೃಷ್ಣದ್ವೈಪಾಯನಂ ನೃಪಃ।
14070018c ವಾಸುದೇವಮಥಾಮಂತ್ರ್ಯ ವಾಗ್ಮೀ ವಚನಮಬ್ರವೀತ್।।
ಕೃಷ್ಣದ್ವೈಪಾಯನನ ಅಪ್ಪಣೆಯನ್ನು ಪಡೆದ ವಾಗ್ಮೀ ನೃಪನು ವಾಸುದೇವನನ್ನು ಆಮಂತ್ರಿಸಿ ಇಂತೆಂದನು:
14070019a ದೇವಕೀ ಸುಪ್ರಜಾ ದೇವೀ ತ್ವಯಾ ಪುರುಷಸತ್ತಮ।
14070019c ಯದ್ಬ್ರೂಯಾಂ ತ್ವಾಂ ಮಹಾಬಾಹೋ ತತ್ಕೃಥಾಸ್ತ್ವಮಿಹಾಚ್ಯುತ।।
“ಪುರುಷಸತ್ತಮ! ನಿನ್ನಿಂದಾಗಿ ದೇವೀ ದೇವಕಿಯು ಸುಪ್ರಜಾ ಎಂದೆನಿಸಿಕೊಂಡಳು. ಮಹಾಬಾಹೋ! ಅಚ್ಯುತ! ಈಗ ನಾನು ಹೇಳುವುದನ್ನು ನೀನು ಮಾಡಿಕೊಡಬೇಕು.
14070020a ತ್ವತ್ಪ್ರಭಾವಾರ್ಜಿತಾನ್ಭೋಗಾನಶ್ನೀಮ ಯದುನಂದನ।
14070020c ಪರಾಕ್ರಮೇಣ ಬುದ್ಧ್ಯಾ ಚ ತ್ವಯೇಯಂ ನಿರ್ಜಿತಾ ಮಹೀ।।
ಯದುನಂದನ! ನಿನ್ನ ಪ್ರಭಾವದಿಂದ ಜಯಿಸಿದ ಸಂಪತ್ತನ್ನು ನಾವು ಭೋಗಿಸುತ್ತಿದ್ದೇವೆ. ನಿನ್ನ ಬುದ್ಧಿ-ಪರಾಕ್ರಮಗಳಿಂದ ನೀನೇ ಈ ಮಹಿಯನ್ನು ಜಯಿಸಿದ್ದೀಯೆ.
14070021a ದೀಕ್ಷಯಸ್ವ ತ್ವಮಾತ್ಮಾನಂ ತ್ವಂ ನಃ ಪರಮಕೋ ಗುರುಃ।
14070021c ತ್ವಯೀಷ್ಟವತಿ ಧರ್ಮಜ್ಞ ವಿಪಾಪ್ಮಾ ಸ್ಯಾಮಹಂ ವಿಭೋ।
14070021e ತ್ವಂ ಹಿ ಯಜ್ಞೋಽಕ್ಷರಃ ಸರ್ವಸ್ತ್ವಂ ಧರ್ಮಸ್ತ್ವಂ ಪ್ರಜಾಪತಿಃ।।
ನಮಗೆ ಪರಮ ಗುರುವಾಗಿರುವ ನೀನೇ ಈ ಯಾಗಕ್ಕೆ ದೀಕ್ಷಿತನಾಗು. ಧರ್ಮಜ್ಞ! ವಿಭೋ! ನೀನೇ ಈ ಇಷ್ಟಿಯನ್ನು ನೆರವೇರಿಸಿದರೆ ನಾವು ವಿಪಾಪಿಗಳಾಗುತ್ತೇವೆ. ನೀನೇ ಯಜ್ಞ. ಅಕ್ಷರ. ಎಲ್ಲವೂ ನೀನೇ. ಧರ್ಮ ಮತ್ತು ಪ್ರಜಾಪತಿಯೂ ನೀನೇ.”
14070022 ವಾಸುದೇವ ಉವಾಚ
14070022a ತ್ವಮೇವೈತನ್ಮಹಾಬಾಹೋ ವಕ್ತುಮರ್ಹಸ್ಯರಿಂದಮ।
14070022c ತ್ವಂ ಗತಿಃ ಸರ್ವಭೂತಾನಾಮಿತಿ ಮೇ ನಿಶ್ಚಿತಾ ಮತಿಃ।।
ವಾಸುದೇವನು ಹೇಳಿದನು: “ಮಹಾಬಾಹೋ! ಅರಿಂದಮ! ನಿನ್ನಂಥವನು ಹೀಗೆ ಹೇಳುವುದು ಯೋಗ್ಯವಾಗಿಯೇ ಇದೆ. ಆದರೆ ನೀನೇ ಸರ್ವಭೂತಗಳಿಗೆ ಗತಿ ಎಂದು ನನ್ನ ಮತಿಯ ನಿಶ್ಚಯ.
14070023a ತ್ವಂ ಚಾದ್ಯ ಕುರುವೀರಾಣಾಂ ಧರ್ಮೇಣಾಭಿವಿರಾಜಸೇ।
14070023c ಗುಣಭೂತಾಃ ಸ್ಮ ತೇ ರಾಜಂಸ್ತ್ವಂ ನೋ ರಾಜನ್ಮತೋ ಗುರುಃ।।
ಕುರುವೀರರಲ್ಲಿ ನೀನೇ ಇಂದು ಧರ್ಮದಿಂದ ವಿರಾಜಿಸುತ್ತಿರುವೆ. ರಾಜನ್! ನಾವೆಲ್ಲರೂ ನಿನ್ನ ಅನುಯಾಯಿಗಳು. ನಮಗೆ ನೀನು ರಾಜ ಮಾತ್ರನಲ್ಲದೇ ಗುರುವೂ ಆಗಿರುವೆ!
14070024a ಯಜಸ್ವ ಮದನುಜ್ಞಾತಃ ಪ್ರಾಪ್ತ ಏವ ಕ್ರತುರ್ಮಯಾ।
14070024c ಯುನಕ್ತು ನೋ ಭವಾನ್ಕಾರ್ಯೇ ಯತ್ರ ವಾಂಚಸಿ ಭಾರತ।
14070024e ಸತ್ಯಂ ತೇ ಪ್ರತಿಜಾನಾಮಿ ಸರ್ವಂ ಕರ್ತಾಸ್ಮಿ ತೇಽನಘ।।
ಭಾರತ! ಅನಘ! ನನ್ನ ಅನುಮತಿಯಂತೆ ನೀನೇ ಈ ಯಜ್ಞವನ್ನು ಮಾಡು. ನೀನು ಯಾವ ಕೆಲಸಗಳನ್ನು ಹೇಳುತ್ತೀಯೋ ಅವೆಲ್ಲವನ್ನೂ ನಾನು ಮಾಡುತ್ತೇನೆ. ಎಲ್ಲವನ್ನೂ ಮಾಡುವೆನೆಂದು ಸತ್ಯಪ್ರತಿಜ್ಞೆಯನ್ನು ಮಾಡುತ್ತೇನೆ.
14070025a ಭೀಮಸೇನಾರ್ಜುನೌ ಚೈವ ತಥಾ ಮಾದ್ರವತೀಸುತೌ।
14070025c ಇಷ್ಟವಂತೋ ಭವಿಷ್ಯಂತಿ ತ್ವಯೀಷ್ಟವತಿ ಭಾರತ।।
ಭಾರತ! ನೀನು ಯಜ್ಞಮಾಡಿದರೆ ಭೀಮಸೇನ-ಅರ್ಜುನರೂ ಹಾಗೆಯೇ ಮಾದ್ರವತೀ ಸುತರೂ ಯಜ್ಞವನ್ನು ಮಾಡಿದಂತಾಗಿ ಅದರ ಫಲವನ್ನು ಪಡೆದುಕೊಳ್ಳುತ್ತಾರೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಕೃಷ್ಣವ್ಯಾಸಾನುಜ್ಞಾಯಾಂ ಸಪ್ತತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಕೃಷ್ಣವ್ಯಾಸಾನುಜ್ಞಯಾ ಎನ್ನುವ ಎಪ್ಪತ್ತನೇ ಅಧ್ಯಾಯವು.