ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 69
ಸಾರ
ಹಸ್ತಿನಾಪುರದಲ್ಲಿ ಸಂತಸ ಸಮಾರಂಭ (1-11). ಪರಿಕ್ಷಿತನು ಹುಟ್ಟಿದ ಒಂದು ತಿಂಗಳ ನಂತರ ಪಾಂಡವರು ನಗರಕ್ಕೆ ಹಿಂದಿರುಗುತ್ತಿದ್ದಾರೆಂದು ತಿಳಿದು ಅವರನ್ನು ಸ್ವಾಗತಿಸಲು ಹಸ್ತಿನಾಪುರವು ಶೃಂಗಾರಗೊಂಡಿದುದು (12-20).
14069001 ವೈಶಂಪಾಯನ ಉವಾಚ
14069001a ಬ್ರಹ್ಮಾಸ್ತ್ರಂ ತು ಯದಾ ರಾಜನ್ಕೃಷ್ಣೇನ ಪ್ರತಿಸಂಹೃತಮ್।
14069001c ತದಾ ತದ್ವೇಶ್ಮ ತೇ ಪಿತ್ರಾ ತೇಜಸಾಭಿವಿದೀಪಿತಮ್।।
ವೈಶಂಪಾಯನನು ಹೇಳಿದನು: “ರಾಜನ್! ಕೃಷ್ಣನು ಬ್ರಹ್ಮಾಸ್ತ್ರವನ್ನು ಉಪಶಮನಗೊಳಿಸಿದ ಕೂಡಲೇ ಆ ಪ್ರಸೂತಿಗೃಹವು ನಿನ್ನ ತಂದೆಯ ತೇಜಸ್ಸಿನಿಂದ ಬೆಳಗತೊಡಗಿತು.
14069002a ತತೋ ರಕ್ಷಾಂಸಿ ಸರ್ವಾಣಿ ನೇಶುಸ್ತ್ಯಕ್ತ್ವಾ ಗೃಹಂ ತು ತತ್।
14069002c ಅಂತರಿಕ್ಷೇ ಚ ವಾಗಾಸೀತ್ಸಾಧು ಕೇಶವ ಸಾಧ್ವಿತಿ।।
ಆಗ ರಾಕ್ಷಸರೆಲ್ಲರೂ ಆ ಪ್ರಸೂತಿಗೃಹವನ್ನು ಬಿಟ್ಟು ಹೊರಟುಹೋದರು. ಅಂತರಿಕ್ಷದಲ್ಲಿ ಕೂಡ “ಸಾಧು ಕೇಶವ! ಸಾಧು!” ಎಂಬ ಧ್ವನಿಯಾಯಿತು.
14069003a ತದಸ್ತ್ರಂ ಜ್ವಲಿತಂ ಚಾಪಿ ಪಿತಾಮಹಮಗಾತ್ತದಾ।
14069003c ತತಃ ಪ್ರಾಣಾನ್ಪುನರ್ಲೇಭೇ ಪಿತಾ ತವ ಜನೇಶ್ವರ।
14069003e ವ್ಯಚೇಷ್ಟತ ಚ ಬಾಲೋಽಸೌ ಯಥೋತ್ಸಾಹಂ ಯಥಾಬಲಮ್।।
ಉರಿಯುತ್ತಿದ್ದ ಆ ಅಸ್ತ್ರವೂ ಕೂಡ ಪಿತಾಮಹ ಬ್ರಹ್ಮನ ಬಳಿ ಹೋಯಿತು. ಜನೇಶ್ವರ! ಆಗ ನಿನ್ನ ತಂದೆಯು ಪುನಃ ಪ್ರಾಣಗಳನ್ನು ಪಡೆದನು. ಆ ಬಾಲಕನು ಯಥೋತ್ಸಾಹದಲ್ಲಿ ಯಥಾಬಲನಾಗಿ ಕಾಲು-ಕೈಗಳನ್ನು ಅಲ್ಲಾಡಿಸತೊಡಗಿದನು.
14069004a ಬಭೂವುರ್ಮುದಿತಾ ರಾಜಂಸ್ತತಸ್ತಾ ಭರತಸ್ತ್ರಿಯಃ।
14069004c ಬ್ರಾಹ್ಮಣಾನ್ವಾಚಯಾಮಾಸುರ್ಗೋವಿಂದಸ್ಯ ಚ ಶಾಸನಾತ್।।
ರಾಜನ್! ಆಗ ಅಲ್ಲಿದ್ದ ಭರತಸ್ತ್ರೀಯರು ಅತ್ಯಂತ ಮುದಿತರಾದರು. ಗೋವಿಂದನ ಆಜ್ಞೆಯಂತೆ ಬ್ರಾಹ್ಮಣರಿಂದ ಸ್ವಸ್ತಿವಾಚನಗಳನ್ನು ಮಾಡಿಸಲಾಯಿತು.
14069005a ತತಸ್ತಾ ಮುದಿತಾಃ ಸರ್ವಾಃ ಪ್ರಶಶಂಸುರ್ಜನಾರ್ದನಮ್।
14069005c ಸ್ತ್ರಿಯೋ ಭರತಸಿಂಹಾನಾಂ ನಾವಂ ಲಬ್ಧ್ವೇವ ಪಾರಗಾಃ।।
ಮುದಿತರಾದ ಎಲ್ಲ ಭರತಸಿಂಹರ ಸ್ತ್ರೀಯರೂ ಪಾರಾಗಲು ದೊರಕಿದ ದೋಣಿಯಂತಿದ್ದ ಜನಾರ್ದನನನ್ನು ಪ್ರಶಂಸಿಸಿದರು.
14069006a ಕುಂತೀ ದ್ರುಪದಪುತ್ರೀ ಚ ಸುಭದ್ರಾ ಚೋತ್ತರಾ ತಥಾ।
14069006c ಸ್ತ್ರಿಯಶ್ಚಾನ್ಯಾ ನೃಸಿಂಹಾನಾಂ ಬಭೂವುರ್ಹೃಷ್ಟಮಾನಸಾಃ।।
ಕುಂತೀ, ದ್ರುಪದಪುತ್ರೀ, ಸುಭದ್ರಾ ಮತ್ತು ಉತ್ತರೆ ಹಾಗೆಯೇ ಇತರ ನರನಾಯಕರ ಸ್ತ್ರೀಯರು ಹೃಷ್ಟಮಾನಸರಾದರು.
14069007a ತತ್ರ ಮಲ್ಲಾ ನಟಾ ಝಲ್ಲಾ ಗ್ರಂಥಿಕಾಃ ಸೌಖಶಾಯಿಕಾಃ।
14069007c ಸೂತಮಾಗಧಸಂಘಾಶ್ಚಾಪ್ಯಸ್ತುವನ್ ವೈ ಜನಾರ್ದನಮ್।
14069007e ಕುರುವಂಶಸ್ತವಾಖ್ಯಾಭಿರಾಶೀರ್ಭಿರ್ಭರತರ್ಷಭ।।
ಭರತರ್ಷಭ! ಬಳಿಕ ಅಲ್ಲಿ ಮಲ್ಲರೂ, ನಟರೂ, ಜ್ಯೋತಿಷಿಗಳೂ, ಸುಖಸಮಾಚಾರಗಳನ್ನು ಹೇಳುವ ದೂತರೂ, ಸೂತ-ಮಾಗಧ ಗಣಗಳೂ ಕುರುವಂಶದ ಸ್ತುತಿ-ಆಶೀರ್ವಾದಗಳೊಂದಿಗೆ ಜನಾರ್ದನನನ್ನು ಸ್ತುತಿಸಿದರು.
14069008a ಉತ್ಥಾಯ ತು ಯಥಾಕಾಲಮುತ್ತರಾ ಯದುನಂದನಮ್।
14069008c ಅಭ್ಯವಾದಯತ ಪ್ರೀತಾ ಸಹ ಪುತ್ರೇಣ ಭಾರತ।
14069008e ತತಸ್ತಸ್ಯೈ ದದೌ ಪ್ರೀತೋ ಬಹುರತ್ನಂ ವಿಶೇಷತಃ।।
ಯಥಾಕಾಲದಲ್ಲಿ ಉತ್ತರೆಯು ಎದ್ದು ಮಗನನ್ನು ಎತ್ತಿಕೊಂಡು ಯದುನಂದನನಿಗೆ ನಮಸ್ಕರಿಸಿದಳು. ಆಗ ಕೃಷ್ಣನು ಪ್ರೀತಿಯಿಂದ ಅವರಿಬ್ಬರಿಗೂ ಅನೇಕ ವಿಶೇಷ ರತ್ನಗಳನ್ನು ಉಡುಗೊರೆಯನ್ನಾಗಿತ್ತನು.
14069009a ತಥಾನ್ಯೇ ವೃಷ್ಣಿಶಾರ್ದೂಲಾ ನಾಮ ಚಾಸ್ಯಾಕರೋತ್ಪ್ರಭುಃ।
14069009c ಪಿತುಸ್ತವ ಮಹಾರಾಜ ಸತ್ಯಸಂಧೋ ಜನಾರ್ದನಃ।।
ಹಾಗೆಯೇ ಅನ್ಯ ವೃಷ್ಣಿಶಾರ್ದೂಲರೂ ಉಡುಗೊರೆಗಳನ್ನಿತ್ತರು. ಮಹಾರಾಜ! ಅನಂತರ ಪ್ರಭು ಸತ್ಯಸಂಧ ಜನಾರ್ದನನು ನಿನ್ನ ತಂದೆಗೆ ನಾಮಕರಣ ಮಾಡಿದನು.
14069010a ಪರಿಕ್ಷೀಣೇ ಕುಲೇ ಯಸ್ಮಾಜ್ಜಾತೋಽಯಮಭಿಮನ್ಯುಜಃ।
14069010c ಪರಿಕ್ಷಿದಿತಿ ನಾಮಾಸ್ಯ ಭವತ್ವಿತ್ಯಬ್ರವೀತ್ತದಾ।।
ಆಗ ಅವನು “ಪರಿಕ್ಷೀಣಿಸುತ್ತಿರುವ ಕುಲದಲ್ಲಿ ಹುಟ್ಟಿರುವುದರಿಂದ ಈ ಅಭಿಮನ್ಯುವಿನ ಮಗನ ಹೆಸರು ಪರಿಕ್ಷಿತ ಎಂದಾಗುತ್ತದೆ” ಎಂದನು.
14069011a ಸೋಽವರ್ಧತ ಯಥಾಕಾಲಂ ಪಿತಾ ತವ ನರಾಧಿಪ।
14069011c ಮನಃಪ್ರಹ್ಲಾದನಶ್ಚಾಸೀತ್ಸರ್ವಲೋಕಸ್ಯ ಭಾರತ।।
ನರಾಧಿಪ! ಭಾರತ! ಕಾಲಕ್ಕೆ ತಕ್ಕಂತೆ ನಿನ್ನ ತಂದೆಯು ವರ್ಧಿಸಿದನು ಮತ್ತು ಸರ್ವಜನರ ಮನಗಳಿಗೆ ಆಹ್ಲಾದವನ್ನುಂಟುಮಾಡುತ್ತಿದ್ದನು.
14069012a ಮಾಸಜಾತಸ್ತು ತೇ ವೀರ ಪಿತಾ ಭವತಿ ಭಾರತ।
14069012c ಅಥಾಜಗ್ಮುಃ ಸುಬಹುಲಂ ರತ್ನಮಾದಾಯ ಪಾಂಡವಾಃ।।
ವೀರ! ಭಾರತ! ನಿನ್ನ ತಂದೆಯು ಹುಟ್ಟಿ ಒಂದು ತಿಂಗಳ ನಂತರ ಪಾಂಡವರು ಬಹುರತ್ನಗಳನ್ನು ತೆಗೆದುಕೊಂಡು ಹಿಂದಿರುಗಿದರು.
14069013a ತಾನ್ಸಮೀಪಗತಾನ್ಶ್ರುತ್ವಾ ನಿರ್ಯಯುರ್ವೃಷ್ಣಿಪುಂಗವಾಃ।
14069013c ಅಲಂಚಕ್ರುಶ್ಚ ಮಾಲ್ಯೌಘೈಃ ಪುರುಷಾ ನಾಗಸಾಹ್ವಯಮ್।।
ಅವರು ನಗರದ ಸಮೀಪದಲ್ಲಿದ್ದಾರೆ ಎಂದು ಕೇಳಿ ವೃಷ್ಣಿಪುಂಗವರು ಅವರನ್ನು ಎದಿರುಗೊಳ್ಳಲು ಹೊರಟರು. ಪುರಜನರು ನಾಗಸಾಹ್ವಯವನ್ನು ಪುಷ್ಪರಾಶಿಗಳಿಂದ ಅಲಂಕರಿಸಿದರು.
14069014a ಪತಾಕಾಭಿರ್ವಿಚಿತ್ರಾಭಿರ್ಧ್ವಜೈಶ್ಚ ವಿವಿಧೈರಪಿ।
14069014c ವೇಶ್ಮಾನಿ ಸಮಲಂಚಕ್ರುಃ ಪೌರಾಶ್ಚಾಪಿ ಜನಾಧಿಪ।।
ಜನಾಧಿಪ! ವಿಚಿತ್ರ ಪತಾಕೆಗಳಿಂದಲೂ. ವಿವಿಧ ಧ್ವಜಗಳಿಂದಲೂ ಪೌರರು ಅರಮನೆಗಳನ್ನು ಅಲಂಕರಿಸಿದರು.
14069015a ದೇವತಾಯತನಾನಾಂ ಚ ಪೂಜಾ ಬಹುವಿಧಾಸ್ತಥಾ।
14069015c ಸಂದಿದೇಶಾಥ ವಿದುರಃ ಪಾಂಡುಪುತ್ರಪ್ರಿಯೇಪ್ಸಯಾ।।
ಪಾಂಡುಪುತ್ರರಿಗೆ ಪ್ರಿಯವಾಗಲೆಂದು ವಿದುರನು ದೇವತಾಲಯಗಳಲ್ಲಿ ಬಹುವಿಧದ ಪೂಜೆಗಳು ನಡೆಯುವಂತೆ ಸಂದೇಶವನ್ನಿತ್ತಿದ್ದನು.
14069016a ರಾಜಮಾರ್ಗಾಶ್ಚ ತತ್ರಾಸನ್ಸುಮನೋಭಿರಲಂಕೃತಾಃ।
14069016c ಶುಶುಭೇ ತತ್ಪುರಂ ಚಾಪಿ ಸಮುದ್ರೌಘನಿಭಸ್ವನಮ್।।
ರಾಜಮಾರ್ಗಗಳನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಆ ಪುರವು ಆಗ ಭೋರ್ಗರೆಯುತ್ತಿರುವ ಸಮುದ್ರದಂತೆ ಶೋಭಿಸುತ್ತಿತ್ತು.
14069017a ನರ್ತಕೈಶ್ಚಾಪಿ ನೃತ್ಯದ್ಭಿರ್ಗಾಯನಾನಾಂ ಚ ನಿಸ್ವನೈಃ।
14069017c ಆಸೀದ್ವೈಶ್ರವಣಸ್ಯೇವ ನಿವಾಸಸ್ತತ್ ಪುರಂ ತದಾ।।
ನರ್ತಕರ ನೃತ್ಯಗಳಿಂದಲೂ ಮತ್ತು ಗಾಯನಗಳ ಇಂಪಾದ ಸ್ವರಗಳಿಂದಲೂ ಆ ಪುರವು ಕುಬೇರನ ನಗರಿಯಂತೆಯೇ ತೋರುತ್ತಿತ್ತು.
14069018a ಬಂದಿಭಿಶ್ಚ ನರೈ ರಾಜನ್ ಸ್ತ್ರೀಸಹಾಯೈಃ ಸಹಸ್ರಶಃ।
14069018c ತತ್ರ ತತ್ರ ವಿವಿಕ್ತೇಷು ಸಮಂತಾದುಪಶೋಭಿತಮ್।।
ರಾಜನ್! ನಗರದ ಅಲ್ಲಲ್ಲಿ ಸಹಸ್ರಾರು ಬಂದಿಗಳು ಅವರ ಪತ್ನಿಯರೊಂದಿಗೆ ನಿಂತು ಶೋಭೆಗೊಳಿಸುತ್ತಿದ್ದರು.
14069019a ಪತಾಕಾ ಧೂಯಮಾನಾಶ್ಚ ಶ್ವಸತಾ ಮಾತರಿಶ್ವನಾ।
14069019c ಅದರ್ಶಯನ್ನಿವ ತದಾ ಕುರೂನ್ವೈ ದಕ್ಷಿಣೋತ್ತರಾನ್।।
ಗಾಳಿಯ ರಭಸದಿಂದ ಎಲ್ಲೆಡೆಯಲ್ಲಿಯೂ ಪತಾಕೆಗಳು ಪಟಪಟನೆ ಹಾರಾಡುತ್ತಿದ್ದವು. ಹಸ್ತಿನಾಪುರವು ಆಗ ದಕ್ಷಿಣ-ಉತ್ತರ ಕುರುದೇಶಗಳಿಗೆ ಆದರ್ಶಪ್ರಾಯವಾಗಿತ್ತು.
14069020a ಅಘೋಷಯತ್ತದಾ ಚಾಪಿ ಪುರುಷೋ ರಾಜಧೂರ್ಗತಃ।
14069020c ಸರ್ವರಾತ್ರಿವಿಹಾರೋಽದ್ಯ ರತ್ನಾಭರಣಲಕ್ಷಣಃ।।
ರಾಜಪುರುಷರು “ಇಂದಿನ ರಾತ್ರಿ ಸರ್ವರೂ ರತ್ನಾಭರಣಭೂಷಿತರಾಗಿ ವಿಹರಿಸಿ!” ಎಂಬ ಘೋಷಣೆಯನ್ನೂ ಮಾಡಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಪಾಂಡವಾಗಮನೇ ಏಕೋನಸಪ್ತತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಪಾಂಡವಾಗಮನ ಎನ್ನುವ ಅರವತ್ತೊಂಭತ್ತನೇ ಅಧ್ಯಾಯವು.