ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 68
ಸಾರ
ಮೂರ್ಛೆಯಿಂದ ಎಚ್ಚೆದ್ದ ಉತ್ತರೆಯು ಪುನಃ ರೋದಿಸಿದುದು (1-15). ಕೃಷ್ಣನು ಬ್ರಹ್ಮಾಸ್ತ್ರವನ್ನು ಉಪಶಮನಗೊಳಿಸಿ ಪರಿಕ್ಷಿತನನ್ನು ಬದುಕಿಸಿದುದು (16-24).
14068001 ವೈಶಂಪಾಯನ ಉವಾಚ
14068001a ಸೈವಂ ವಿಲಪ್ಯ ಕರುಣಂ ಸೋನ್ಮಾದೇವ ತಪಸ್ವಿನೀ।
14068001c ಉತ್ತರಾ ನ್ಯಪತದ್ಭೂಮೌ ಕೃಪಣಾ ಪುತ್ರಗೃದ್ಧಿನೀ।।
ವೈಶಂಪಾಯನನು ಹೇಳಿದನು: “ಪುತ್ರಪ್ರಿಯಳೂ ಶೋಚನೀಯಳು ಆಗಿದ್ದ ತಪಸ್ವಿನೀ ಉತ್ತರೆಯು ಈ ರೀತಿ ಕರುಣಾಜನಕವಾಗಿ ವಿಲಪಿಸುತ್ತಾ ಹುಚ್ಚುಹಿಡಿದವಳಂತೆ ಭೂಮಿಯ ಮೇಲೆ ಬಿದ್ದುಬಿಟ್ಟಳು.
14068002a ತಾಂ ತು ದೃಷ್ಟ್ವಾ ನಿಪತಿತಾಂ ಹತಬಂಧುಪರಿಚ್ಚದಾಮ್।
14068002c ಚುಕ್ರೋಶ ಕುಂತೀ ದುಃಖಾರ್ತಾ ಸರ್ವಾಶ್ಚ ಭರತಸ್ತ್ರಿಯಃ।।
ಬಂಧುಗಳನ್ನೂ ಪುತ್ರನನ್ನೂ ಕಳೆದುಕೊಂಡ ಅವಳು ಬಿದ್ದುದನ್ನು ನೋಡಿ ದುಃಖಾರ್ತರಾದ ಕುಂತೀ ಮತ್ತು ಭರತಸ್ತ್ರೀಯರೆಲ್ಲರೂ ಗಟ್ಟಿಯಾಗಿ ಗೋಳಿಟ್ಟರು.
14068003a ಮುಹೂರ್ತಮಿವ ತದ್ರಾಜನ್ಪಾಂಡವಾನಾಂ ನಿವೇಶನಮ್।
14068003c ಅಪ್ರೇಕ್ಷಣೀಯಮಭವದಾರ್ತಸ್ವರನಿನಾದಿತಮ್।।
ರಾಜನ್! ಒಂದು ಮುಹೂರ್ತಕಾಲ ಪಾಂಡವರ ಆ ನಿವೇಶನವು ಆರ್ತಸ್ವರ ಗೋಳಾಟದ ಧ್ವನಿಯಿಂದ ಪ್ರತಿಧ್ವನಿಗೊಂಡು ಅಪ್ರೇಕ್ಷಣೀಯವಾಗಿತ್ತು.
14068004a ಸಾ ಮುಹೂರ್ತಂ ಚ ರಾಜೇಂದ್ರ ಪುತ್ರಶೋಕಾಭಿಪೀಡಿತಾ।
14068004c ಕಶ್ಮಲಾಭಿಹತಾ ವೀರ ವೈರಾಟೀ ತ್ವಭವತ್ತದಾ।।
ರಾಜೇಂದ್ರ! ವೀರ! ಪುತ್ರಶೋಕದಿಂದ ಪೀಡಿತಳಾಗಿದ್ದ ವೈರಾಟಿಯು ಮುಹೂರ್ತಕಾಲ ಮೂರ್ಛಿತಳಾಗಿಯೇ ಬಿದ್ದಿದ್ದಳು.
14068005a ಪ್ರತಿಲಭ್ಯ ತು ಸಾ ಸಂಜ್ಞಾಮುತ್ತರಾ ಭರತರ್ಷಭ।
14068005c ಅಂಕಮಾರೋಪ್ಯ ತಂ ಪುತ್ರಮಿದಂ ವಚನಮಬ್ರವೀತ್।।
ಭರತರ್ಷಭ! ಅನಂತರ ಉತ್ತರೆಯು ಎಚ್ಚೆತ್ತು ತನ್ನ ಪುತ್ರನನ್ನು ತೊಡೆಯಮೇಲಿರಿಸಿಕೊಂಡು ಈ ಮಾತುಗಳನ್ನಾಡಿದಳು:
14068006a ಧರ್ಮಜ್ಞಸ್ಯ ಸುತಃ ಸಂಸ್ತ್ವಮಧರ್ಮಮವಬುಧ್ಯಸೇ।
14068006c ಯಸ್ತ್ವಂ ವೃಷ್ಣಿಪ್ರವೀರಸ್ಯ ಕುರುಷೇ ನಾಭಿವಾದನಮ್।।
“ಧರ್ಮಜ್ಞನ ಮಗನಾಗಿರುವ ನೀನು ಈಗ ಅಧರ್ಮವನ್ನು ಮಾಡುತ್ತಿದ್ದೀಯೆ ಎಂದು ತಿಳಿಯದವನಾಗಿರುವೆ! ಆದುದರಿಂದಲೇ ನೀನು ವೃಷ್ಣಿಪ್ರವೀರನಿಗೆ ನಮಸ್ಕರಿಸುತ್ತಿಲ್ಲ!
14068007a ಪುತ್ರ ಗತ್ವಾ ಮಮ ವಚೋ ಬ್ರೂಯಾಸ್ತ್ವಂ ಪಿತರಂ ತವ।
14068007c ದುರ್ಮರಂ ಪ್ರಾಣಿನಾಂ ವೀರ ಕಾಲೇ ಪ್ರಾಪ್ತೇ ಕಥಂ ಚನ।।
ಪುತ್ರ! ಹೋಗಿ ನಿನ್ನ ತಂದೆಗೆ ನನ್ನ ಈ ಮಾತುಗಳನ್ನು ಹೇಳು: “ವೀರ! ಕಾಲವು ಸನ್ನಿಹಿತವಾಗದೇ ಪ್ರಾಣಿಗಳಿಗೆ ಎಂದೂ ಮರಣವುಂಟಾಗುವುದಿಲ್ಲ!
14068008a ಯಾಹಂ ತ್ವಯಾ ವಿಹೀನಾದ್ಯ ಪತ್ಯಾ ಪುತ್ರೇಣ ಚೈವ ಹ।
14068008c ಮರ್ತವ್ಯೇ ಸತಿ ಜೀವಾಮಿ ಹತಸ್ವಸ್ತಿರಕಿಂಚನಾ।।
ಪತಿಯಾದ ನಿನ್ನಿಂದ ಮತ್ತು ಈಗ ಈ ಮಗನಿಂದಲೂ ವಿಹೀನಳಾಗಿ ಮೃತಳಾಗಬೇಕಾಗಿದ್ದ ನಾನು ಇನ್ನೂ ಬದುಕಿಯೇ ಇದ್ದೇನಲ್ಲಾ!”
14068009a ಅಥ ವಾ ಧರ್ಮರಾಜ್ಞಾಹಮನುಜ್ಞಾತಾ ಮಹಾಭುಜ।
14068009c ಭಕ್ಷಯಿಷ್ಯೇ ವಿಷಂ ತೀಕ್ಷ್ಣಂ ಪ್ರವೇಕ್ಷ್ಯೇ ವಾ ಹುತಾಶನಮ್।।
ಮಹಾಭುಜ! ಅಥವಾ ಧರ್ಮರಾಜನ ಅನುಜ್ಞೆಯನ್ನು ಪಡೆದು ತೀಕ್ಷ್ಣ ವಿಷವನ್ನಾದರೂ ಕುಡಿಯುತ್ತೇನೆ ಅಥವಾ ಅಗ್ನಿಯನ್ನಾದರೂ ಪ್ರವೇಶಿಸುತ್ತೇನೆ.
14068010a ಅಥ ವಾ ದುರ್ಮರಂ ತಾತ ಯದಿದಂ ಮೇ ಸಹಸ್ರಧಾ।
14068010c ಪತಿಪುತ್ರವಿಹೀನಾಯಾ ಹೃದಯಂ ನ ವಿದೀರ್ಯತೇ।।
ಮಗೂ! ಅಥವಾ ಮರಣವು ಕಷ್ಟಸಾಧ್ಯವೆನಿಸುತ್ತದೆ. ಪತಿ-ಪುತ್ರರನ್ನು ಕಳೆದುಕೊಂಡು ನನ್ನ ಈ ಹೃದಯವು ಸಾವಿರ ಚೂರುಗಳಾಗಿ ಏಕೆ ಒಡೆಯುತ್ತಿಲ್ಲ?
14068011a ಉತ್ತಿಷ್ಠ ಪುತ್ರ ಪಶ್ಯೇಮಾಂ ದುಃಖಿತಾಂ ಪ್ರಪಿತಾಮಹೀಮ್।
14068011c ಆರ್ತಾಮುಪಪ್ಲುತಾಂ ದೀನಾಂ ನಿಮಗ್ನಾಂ ಶೋಕಸಾಗರೇ।।
ಪುತ್ರ! ಮೇಲೇಳು! ಶೋಕಸಾಗರದಲ್ಲಿ ಮುಳುಗಿ ದುಃಖಿತಳಾಗಿರುವ ಈ ನಿನ್ನ ದೀನ ಆರ್ತ ಮುತ್ತಜ್ಜಿಯನ್ನು ನೋಡು!
14068012a ಆರ್ಯಾಂ ಚ ಪಶ್ಯ ಪಾಂಚಾಲೀಂ ಸಾತ್ವತೀಂ ಚ ತಪಸ್ವಿನೀಮ್।
14068012c ಮಾಂ ಚ ಪಶ್ಯ ಸುದುಃಖಾರ್ತಾಂ ವ್ಯಾಧವಿದ್ಧಾಂ ಮೃಗೀಮಿವ।।
ವ್ಯಾಧನು ಹೊಡೆದ ಜಿಂಕೆಯಂತೆ ಅತ್ಯಂತ ದುಃಖಾರ್ತರಾಗಿರುವ ಆರ್ಯೆ ಪಾಂಚಾಲೀ, ತಪಸ್ವಿನೀ ಸಾತ್ವತೀ ಮತ್ತು ನನ್ನನ್ನೂ ನೋಡು!
14068013a ಉತ್ತಿಷ್ಠ ಪಶ್ಯ ವದನಂ ಲೋಕನಾಥಸ್ಯ ಧೀಮತಃ।
14068013c ಪುಂಡರೀಕಪಲಾಶಾಕ್ಷಂ ಪುರೇವ ಚಪಲೇಕ್ಷಣಮ್।।
ಎದ್ದೇಳು! ಹಿಂದೆ ನಾನು ಚಪಲೇಕ್ಷಣ ಅಭಿಮನ್ಯುವನ್ನು ನೋಡುತ್ತಿದ್ದಂತೆಯೇ ಇರುವ ಧೀಮಂತ ಲೋಕನಾಥ ಪುಂಡರೀಕಪಲಾಕ್ಷನನ್ನು ನೋಡು!”
14068014a ಏವಂ ವಿಪ್ರಲಪಂತೀಂ ತು ದೃಷ್ಟ್ವಾ ನಿಪತಿತಾಂ ಪುನಃ।
14068014c ಉತ್ತರಾಂ ತಾಃ ಸ್ತ್ರಿಯಃ ಸರ್ವಾಃ ಪುನರುತ್ಥಾಪಯಂತ್ಯುತ।।
ಈ ರೀತಿ ರೋದಿಸುತ್ತಾ ಪುನಃ ಬಿದ್ದ ಉತ್ತರೆಯನ್ನು ನೋಡಿ ಆ ಎಲ್ಲ ಸ್ತ್ರೀಯರೂ ಅವಳನ್ನು ಪುನಃ ಎದ್ದು ಕುಳ್ಳಿರಿಸಿದರು.
14068015a ಉತ್ಥಾಯ ತು ಪುನರ್ಧೈರ್ಯಾತ್ತದಾ ಮತ್ಸ್ಯಪತೇಃ ಸುತಾ।
14068015c ಪ್ರಾಂಜಲಿಃ ಪುಂಡರೀಕಾಕ್ಷಂ ಭೂಮಾವೇವಾಭ್ಯವಾದಯತ್।।
ಮತ್ಸ್ಯಪತಿಯ ಮಗಳು ಮೇಲೆದ್ದು ಧೈರ್ಯತಂದುಕೊಂಡು ಕುಳಿತಲ್ಲಿಂದಲೇ ಪುನಃ ಪುಂಡರೀಕಾಕ್ಷನಿಗೆ ಕೈಮುಗಿದಳು.
14068016a ಶ್ರುತ್ವಾ ಸ ತಸ್ಯಾ ವಿಪುಲಂ ವಿಲಾಪಂ ಪುರುಷರ್ಷಭಃ।
14068016c ಉಪಸ್ಪೃಶ್ಯ ತತಃ ಕೃಷ್ಣೋ ಬ್ರಹ್ಮಾಸ್ತ್ರಂ ಸಂಜಹಾರ ತತ್।।
ಅವಳ ಆ ವಿಪುಲ ವಿಲಾಪವನ್ನು ಕೇಳಿ ಪುರುಷರ್ಷಭ ಕೃಷ್ಣನು ಆಚಮನ ಮಾಡಿ ಬ್ರಹ್ಮಾಸ್ತ್ರವನ್ನು ಉಪಶಮನಗೊಳಿಸಿದನು.
14068017a ಪ್ರತಿಜಜ್ಞೇ ಚ ದಾಶಾರ್ಹಸ್ತಸ್ಯ ಜೀವಿತಮಚ್ಯುತಃ।
14068017c ಅಬ್ರವೀಚ್ಚ ವಿಶುದ್ಧಾತ್ಮಾ ಸರ್ವಂ ವಿಶ್ರಾವಯನ್ಜಗತ್।।
ವಿಶುದ್ಧಾತ್ಮಾ ದಾಶಾರ್ಹ ಅಚ್ಯುತನು ಮಗುವನ್ನು ಜೀವಿತಗೊಳಿಸಲೋಸುಗ ಜಗತ್ತೆಲ್ಲವೂ ಕೇಳುವಂತೆ ಪ್ರತಿಜ್ಞೆಮಾಡಿ ಇಂತೆಂದನು:
14068018a ನ ಬ್ರವೀಮ್ಯುತ್ತರೇ ಮಿಥ್ಯಾ ಸತ್ಯಮೇತದ್ಭವಿಷ್ಯತಿ।
14068018c ಏಷ ಸಂಜೀವಯಾಮ್ಯೇನಂ ಪಶ್ಯತಾಂ ಸರ್ವದೇಹಿನಾಮ್।।
“ಉತ್ತರೇ! ನಾನು ಸುಳ್ಳುಹೇಳುವವನಲ್ಲ. ಇದು ಸತ್ಯವಾಗಿಯೇ ನಡೆಯುತ್ತದೆ. ಸರ್ವದೇಹಿಗಳೂ ನೋಡುತ್ತಿರುವಂತೆಯೇ ನಾನು ಇವನನ್ನು ಬದುಕಿಸುತ್ತೇನೆ!
14068019a ನೋಕ್ತಪೂರ್ವಂ ಮಯಾ ಮಿಥ್ಯಾ ಸ್ವೈರೇಷ್ವಪಿ ಕದಾ ಚನ।
14068019c ನ ಚ ಯುದ್ಧೇ ಪರಾವೃತ್ತಸ್ತಥಾ ಸಂಜೀವತಾಮಯಮ್।।
ಈ ಮೊದಲು ನಾನು ಪರಿಹಾಸಕ್ಕಾಗಿಯೂ ಎಂದೂ ಸುಳ್ಳುಹೇಳಿರದೇ ಇದ್ದರೆ ಮತ್ತು ಯುದ್ಧದಿಂದ ಪರಾಙ್ಮುಖನಾಗದೇ ಇದ್ದಿದ್ದರೆ ಇವನು ಬದುಕಲಿ!
14068020a ಯಥಾ ಮೇ ದಯಿತೋ ಧರ್ಮೋ ಬ್ರಾಹ್ಮಣಾಶ್ಚ ವಿಶೇಷತಃ।
14068020c ಅಭಿಮನ್ಯೋಃ ಸುತೋ ಜಾತೋ ಮೃತೋ ಜೀವತ್ವಯಂ ತಥಾ।।
ನನಗೆ ಧರ್ಮ ಮತ್ತು ಅದರಲ್ಲೂ ವಿಶೇಷವಾಗಿ ಬ್ರಾಹ್ಮಣರು ಪ್ರಿಯರಾಗಿದ್ದಾರೆ ಎಂದಾದರೆ ಅಭಿಮನ್ಯುವಿನ ಈ ಸತ್ತುಹುಟ್ಟಿರುವ ಮಗನು ಜೀವಿತನಾಗಲಿ!
14068021a ಯಥಾಹಂ ನಾಭಿಜಾನಾಮಿ ವಿಜಯೇನ ಕದಾ ಚನ।
14068021c ವಿರೋಧಂ ತೇನ ಸತ್ಯೇನ ಮೃತೋ ಜೀವತ್ವಯಂ ಶಿಶುಃ।।
ವಿಜಯ ಅರ್ಜುನನಿಗೆ ಎಂದೂ ವಿರೋಧವಾಗಿ ನಾನು ನಡೆದುಕೊಂಡಿದುದು ನೆನಪಿಲ್ಲ. ಆ ಸತ್ಯದಿಂದ ಈ ಮೃತ ಶಿಶುವು ಜೀವಿತಗೊಳ್ಳಲಿ!
14068022a ಯಥಾ ಸತ್ಯಂ ಚ ಧರ್ಮಶ್ಚ ಮಯಿ ನಿತ್ಯಂ ಪ್ರತಿಷ್ಠಿತೌ।
14068022c ತಥಾ ಮೃತಃ ಶಿಶುರಯಂ ಜೀವತಾಮಭಿಮನ್ಯುಜಃ।।
ಸತ್ಯ-ಧರ್ಮಗಳು ನಿತ್ಯವೂ ನನ್ನಲ್ಲಿ ಹೇಗೆ ಪ್ರತಿಷ್ಠಿತಗೊಂಡಿವೆಯೋ ಹಾಗೆ ಅಭಿಮನ್ಯುವಿನ ಈ ಮೃತ ಶಿಶುವು ಜೀವಿತನಾಗಲಿ!
14068023a ಯಥಾ ಕಂಸಶ್ಚ ಕೇಶೀ ಚ ಧರ್ಮೇಣ ನಿಹತೌ ಮಯಾ।
14068023c ತೇನ ಸತ್ಯೇನ ಬಾಲೋಽಯಂ ಪುನರುಜ್ಜೀವತಾಮಿಹ।।
ಕಂಸ-ಕೇಶಿಯರು ನನ್ನಿಂದ ಧರ್ಮಪೂರ್ವಕವಾಗಿಯೇ ಹತರಾದರೆನ್ನುವ ಆ ಸತ್ಯದಿಂದ ಈ ಬಾಲಕನು ಪುನಃ ಜೀವಿತನಾಗಲಿ!”
14068024a ಇತ್ಯುಕ್ತೋ ವಾಸುದೇವೇನ ಸ ಬಾಲೋ ಭರತರ್ಷಭ।
14068024c ಶನೈಃ ಶನೈರ್ಮಹಾರಾಜ ಪ್ರಾಸ್ಪಂದತ ಸಚೇತನಃ।।
ಭರತರ್ಷಭ! ಮಹಾರಾಜ! ವಾಸುದೇವನು ಹೀಗೆ ಹೇಳಲು ಆ ಬಾಲಕನು ಮೆಲ್ಲ ಮೆಲ್ಲನೇ ಚೇತನಗೊಂಡು ಅವಯವಗಳನ್ನು ಆಡಿಸತೊಡಗಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಪರಿಕ್ಷಿತ್ಸಂಜೀವನೇ ಅಷ್ಟಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಪರಿಕ್ಷಿತ್ಸಂಜೀವನ ಎನ್ನುವ ಅರವತ್ತೆಂಟನೇ ಅಧ್ಯಾಯವು.