ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 67
ಸಾರ
ಕೃಷ್ಣನು ಪರಿಕ್ಷಿತನ ಜನ್ಮಗೃಹವನ್ನು ಪ್ರವೇಶಿಸಿದುದು (1-7). ಕೃಷ್ಣನನ್ನು ನೋಡಿ ಉತ್ತರೆಯು ರೋದಿಸಿದುದು (8-24).
14067001 ವೈಶಂಪಾಯನ ಉವಾಚ
14067001a ಏವಮುಕ್ತಸ್ತು ರಾಜೇಂದ್ರ ಕೇಶಿಹಾ ದುಃಖಮೂರ್ಚಿತಃ।
14067001c ತಥೇತಿ ವ್ಯಾಜಹಾರೋಚ್ಚೈರ್ಹ್ಲಾದಯನ್ನಿವ ತಂ ಜನಮ್।।
ವೈಶಂಪಾಯನನು ಹೇಳಿದನು: “ರಾಜೇಂದ್ರ! ಇದನ್ನು ಕೇಳಿ ದುಃಖಮೂರ್ಚಿತನಾದ ಕೇಶವನು ಅಲ್ಲಿದ್ದ ಜನರನ್ನು ಹರ್ಷಗೊಳಿಸುವನೋ ಎಂಬಂತೆ ಗಟ್ಟಿಯಾಗಿ “ಹಾಗೆಯೇ ಆಗಲಿ!” ಎಂದು ಹೇಳಿದನು.
14067002a ವಾಕ್ಯೇನ ತೇನ ಹಿ ತದಾ ತಂ ಜನಂ ಪುರುಷರ್ಷಭಃ।
14067002c ಹ್ಲಾದಯಾಮಾಸ ಸ ವಿಭುರ್ಘರ್ಮಾರ್ತಂ ಸಲಿಲೈರಿವ।।
ಬಿಸಿಲಿನಿಂದ ಬಳಲಿದವನಿಗೆ ನೀರನ್ನು ಕೊಟ್ಟು ಸಂತಸಗೊಳಿಸುವಂತೆ ಆ ವಿಭು ಪುರುಷರ್ಷಭನು ತನ್ನ ಆ ವಾಕ್ಯದಿಂದ ಅಲ್ಲಿದ್ದ ಜನರನ್ನು ಸಂತಸಗೊಳಿಸಿದನು.
14067003a ತತಃ ಸ ಪ್ರಾವಿಶತ್ತೂರ್ಣಂ ಜನ್ಮವೇಶ್ಮ ಪಿತುಸ್ತವ।
14067003c ಅರ್ಚಿತಂ ಪುರುಷವ್ಯಾಘ್ರ ಸಿತೈರ್ಮಾಲ್ಯೈರ್ಯಥಾವಿಧಿ।।
ಪುರುಷವ್ಯಾಘ್ರ! ತಕ್ಷಣವೇ ಅವನು ಯಥಾವಿಧಿಯಾಗಿ ಬಿಳಿಯ ಹೂಗಳಿಂದ ಪೂಜಿಸಿ ಅಲಂಕರಿಸಿದ್ದ ನಿನ್ನ ತಂದೆಯ ಜನ್ಮಗೃಹವನ್ನು ಪ್ರವೇಶಿಸಿದನು.
14067004a ಅಪಾಂ ಕುಂಭೈಃ ಸುಪೂರ್ಣೈಶ್ಚ ವಿನ್ಯಸ್ತೈಃ ಸರ್ವತೋದಿಶಮ್।
14067004c ಘೃತೇನ ತಿಂದುಕಾಲಾತೈಃ ಸರ್ಷಪೈಶ್ಚ ಮಹಾಭುಜ।।
ಮಹಾಭುಜ! ಅಲ್ಲಿ ಎಲ್ಲಕಡೆಗಳಲ್ಲಿ ಜಲಪೂರ್ಣ ಕುಂಭಗಳಿದ್ದವು. ತುಪ್ಪದಲ್ಲಿ ನೆನೆದ ತುಂಬೇಗಿಡದ ಪಂಜುಗಳು ಬೆಳಗುತ್ತಿದ್ದವು. ಸುತ್ತಲೂ ಬಿಳೀಸಾಸಿವೆಯನ್ನು ಚೆಲ್ಲಿದ್ದರು.
14067005a ಶಸ್ತ್ರೈಶ್ಚ ವಿಮಲೈರ್ನ್ಯಸ್ತೈಃ ಪಾವಕೈಶ್ಚ ಸಮಂತತಃ।
14067005c ವೃದ್ಧಾಭಿಶ್ಚಾಭಿರಾಮಾಭಿಃ ಪರಿಚಾರಾರ್ಥಮಚ್ಯುತಃ।।
14067006a ದಕ್ಷೈಶ್ಚ ಪರಿತೋ ವೀರ ಭಿಷಗ್ಭಿಃ ಕುಶಲೈಸ್ತಥಾ।
14067006c ದದರ್ಶ ಚ ಸ ತೇಜಸ್ವೀ ರಕ್ಷೋಘ್ನಾನ್ಯಪಿ ಸರ್ವಶಃ।
14067006E ದ್ರವ್ಯಾಣಿ ಸ್ಥಾಪಿತಾನಿ ಸ್ಮ ವಿಧಿವತ್ಕುಶಲೈರ್ಜನೈಃ।।
ಥಳಥಳಿಸುತ್ತಿರುವ ಶುಭ್ರ ಶಸ್ತ್ರಗಳನ್ನು ಇಟ್ಟಿದ್ದರು. ಸುತ್ತಲೂ ಅಗ್ನಿಗಳು ಪ್ರಜ್ವಲಿಸುತ್ತಿದ್ದವು. ಪರಿಚಾರಕ್ಕೆಂದಿದ್ದ ವೃದ್ಧಸ್ತ್ರೀಯರು ಅಲ್ಲಿ ಸೇರಿದ್ದರು. ವೀರ! ಅಲ್ಲಿ ದಕ್ಷರೂ ಕುಶಲರೂ ಆಗಿದ್ದ ಚಿಕಿತ್ಸಕರಿದ್ದರು. ಅಲ್ಲಿ ಸುತ್ತಲೂ ರಾಕ್ಷಸರನ್ನು ನಾಶಗೊಳಿಸುವ ವಿಧಿಯನ್ನು ತಿಳಿದಿದ್ದ ಕುಶಲ ಜನರನ್ನೂ, ಇರಿಸಿದ್ದ ದ್ರವ್ಯಗಳನ್ನೂ ಆ ಅಚ್ಯುತ ತೇಜಸ್ವಿಯು ನೋಡಿದನು.
14067007a ತಥಾಯುಕ್ತಂ ಚ ತದ್ದೃಷ್ಟ್ವಾ ಜನ್ಮವೇಶ್ಮ ಪಿತುಸ್ತವ।
14067007c ಹೃಷ್ಟೋಽಭವದ್ಧೃಷೀಕೇಶಃ ಸಾಧು ಸಾಧ್ವಿತಿ ಚಾಬ್ರವೀತ್।।
ಯಥಾಯುಕ್ತವಾಗಿದ್ದ ನಿನ್ನ ತಂದೆಯ ಜನ್ಮಗೃಹವನ್ನು ನೋಡಿ ಹರ್ಷಗೊಂಡ ಹೃಷೀಕೇಶನು “ಸಾಧು! ಸಾಧು!” ಎಂದನು.
14067008a ತಥಾ ಬ್ರುವತಿ ವಾರ್ಷ್ಣೇಯೇ ಪ್ರಹೃಷ್ಟವದನೇ ತದಾ।
14067008c ದ್ರೌಪದೀ ತ್ವರಿತಾ ಗತ್ವಾ ವೈರಾಟೀಂ ವಾಕ್ಯಮಬ್ರವೀತ್।।
ಪ್ರಹೃಷ್ಟವದನನಾಗಿ ವಾರ್ಷ್ಣೇಯನು ಹಾಗೆ ಹೇಳುತ್ತಿರಲು ದ್ರೌಪದಿಯು ಅವಸರದಲ್ಲಿ ವೈರಾಟಿಯಲ್ಲಿಗೆ ಹೋಗಿ ಅವಳಿಗೆ ಈ ಮಾತುಗಳನ್ನಾಡಿದಳು:
14067009a ಅಯಮಾಯಾತಿ ತೇ ಭದ್ರೇ ಶ್ವಶುರೋ ಮಧುಸೂದನಃ।
14067009c ಪುರಾಣರ್ಷಿರಚಿಂತ್ಯಾತ್ಮಾ ಸಮೀಪಮಪರಾಜಿತಃ।।
“ಭದ್ರೇ! ಇದೋ ಇಲ್ಲಿ ನೋಡು! ನಿನ್ನ ಮಾವ ಅಚಿಂತ್ಯಾತ್ಮ ಅಪರಾಜಿತ ಪುರಾಣಋಷಿ ಮಧುಸೂದನನು ಬರುತ್ತಿದ್ದಾನೆ!”
14067010a ಸಾಪಿ ಬಾಷ್ಪಕಲಾಂ ವಾಚಂ ನಿಗೃಹ್ಯಾಶ್ರೂಣಿ ಚೈವ ಹ।
14067010c ಸುಸಂವೀತಾಭವದ್ದೇವೀ ದೇವವತ್ಕೃಷ್ಣಮೀಕ್ಷತೀ।।
ಅವಳ ಮಾತನ್ನು ಕೇಳಿ ಕೃಷ್ಣನನ್ನು ದೇವನೆಂದೇ ಕಾಣುತ್ತಿದ್ದ ದೇವೀ ಉತ್ತರೆಯಾದರೋ ಅಳುವುದನ್ನು ನಿಲ್ಲಿಸಿ, ಕಣ್ಣೀರನ್ನು ಒರೆಸಿಕೊಳ್ಳುತ್ತಾ ಸೀರೆಯನ್ನು ಸರಿಪಡಿಸಿಕೊಂಡಳು.
14067011a ಸಾ ತಥಾ ದೂಯಮಾನೇನ ಹೃದಯೇನ ತಪಸ್ವಿನೀ।
14067011c ದೃಷ್ಟ್ವಾ ಗೋವಿಂದಮಾಯಾಂತಂ ಕೃಪಣಂ ಪರ್ಯದೇವಯತ್।।
ಬರುತ್ತಿದ್ದ ಗೋವಿಂದನನ್ನು ನೋಡಿ ಆ ತಪಸ್ವಿನಿಯು ದುಃಖದಿಂದ ಪೀಡಿತವಾಗಿದ್ದ ಹೃದಯದಿಂದ ದೀನಳಾಗಿ ರೋದಿಸಿದಳು:
14067012a ಪುಂಡರೀಕಾಕ್ಷ ಪಶ್ಯಸ್ವ ಬಾಲಾವಿಹ ವಿನಾಕೃತೌ।
14067012c ಅಭಿಮನ್ಯುಂ ಚ ಮಾಂ ಚೈವ ಹತೌ ತುಲ್ಯಂ ಜನಾರ್ದನ।।
“ಪುಂಡರೀಕಾಕ್ಷ! ಜನಾರ್ದನ! ಅಭಿಮನ್ಯು ಮತ್ತು ನಾವಿಬ್ಬರೂ ಸಂತಾನಹೀನರಾಗಿದ್ದುದನ್ನು ನೋಡು! ನಾವಿಬ್ಬರೂ ಹತರಾದರಂತೆಯೇ!
14067013a ವಾರ್ಷ್ಣೇಯ ಮಧುಹನ್ವೀರ ಶಿರಸಾ ತ್ವಾಂ ಪ್ರಸಾದಯೇ।
14067013c ದ್ರೋಣಪುತ್ರಾಸ್ತ್ರನಿರ್ದಗ್ಧಂ ಜೀವಯೈನಂ ಮಮಾತ್ಮಜಮ್।।
ವಾರ್ಷ್ಣೇಯ! ಮಧುಹನ್! ವೀರ! ಶಿರಸಾ ನಿನಗೆ ನಮಸ್ಕರಿಸುತ್ತಿದ್ದೇನೆ. ದ್ರೋಣಪುತ್ರನ ಅಸ್ತ್ರದಿಂದ ಸುಟ್ಟುಹೋಗಿರುವ ನನ್ನ ಈ ಮಗನನ್ನು ಬದುಕಿಸು!
14067014a ಯದಿ ಸ್ಮ ಧರ್ಮರಾಜ್ಞಾ ವಾ ಭೀಮಸೇನೇನ ವಾ ಪುನಃ।
14067014c ತ್ವಯಾ ವಾ ಪುಂಡರೀಕಾಕ್ಷ ವಾಕ್ಯಮುಕ್ತಮಿದಂ ಭವೇತ್।।
14067015a ಅಜಾನತೀಮಿಷೀಕೇಯಂ ಜನಿತ್ರೀಂ ಹಂತ್ವಿತಿ ಪ್ರಭೋ।
14067015c ಅಹಮೇವ ವಿನಷ್ಟಾ ಸ್ಯಾಂ ನೇದಮೇವಂಗತಂ ಭವೇತ್।।
ಪುಂಡರೀಕಾಕ್ಷ! ಪ್ರಭೋ! ಧರ್ಮರಾಜನಾಗಲೀ, ಭೀಮಸೇನನಾಗಲೀ ಅಥವಾ ನೀನಾಗಲೀ “ಈ ಇಷೀಕವು ಅರಿವಿಲ್ಲದ ತಾಯಿಯನ್ನೇ ಕೊಲ್ಲಲಿ!” ಎಂದು ಹೇಳಿಬಿಟ್ಟಿದ್ದರೆ ನಾನೇ ಮರಣ ಹೊಂದುತ್ತಿದ್ದೆ. ಈ ದುಃಸ್ಥಿತಿಯು ಬರುತ್ತಿರಲಿಲ್ಲ!
14067016a ಗರ್ಭಸ್ಥಸ್ಯಾಸ್ಯ ಬಾಲಸ್ಯ ಬ್ರಹ್ಮಾಸ್ತ್ರೇಣ ನಿಪಾತನಮ್।
14067016c ಕೃತ್ವಾ ನೃಶಂಸಂ ದುರ್ಬುದ್ಧಿರ್ದ್ರೌಣಿಃ ಕಿಂ ಫಲಮಶ್ನುತೇ।।
ಗರ್ಭಸ್ಥನಾಗಿದ್ದ ಈ ಬಾಲಕನನ್ನು ಬ್ರಹ್ಮಾಸ್ತ್ರದಿಂದ ಕೊಂದು ಹಿಂಸೆಯನ್ನೆಸಗಿದ ಆ ದುರ್ಬುದ್ಧಿ ದ್ರೌಣಿಗಾದ ಲಾಭವಾದರೂ ಏನು?
14067017a ಸಾ ತ್ವಾ ಪ್ರಸಾದ್ಯ ಶಿರಸಾ ಯಾಚೇ ಶತ್ರುನಿಬರ್ಹಣ।
14067017c ಪ್ರಾಣಾಂಸ್ತ್ಯಕ್ಷ್ಯಾಮಿ ಗೋವಿಂದ ನಾಯಂ ಸಂಜೀವತೇ ಯದಿ।।
ಶತ್ರುನಿಬರ್ಹಣ! ನಿನಗೆ ಶಿರಸಾ ವಂದಿಸಿ ಬೇಡಿಕೊಳ್ಳುತ್ತಿದ್ದೇನೆ. ಕರುಣಿಸು. ಗೋವಿಂದ! ಒಂದು ವೇಳೆ ಇವನು ಬದುಕದೇ ಇದ್ದರೆ ನಾನು ಪ್ರಾಣಗಳನ್ನು ತ್ಯಜಿಸುತ್ತೇನೆ!
14067018a ಅಸ್ಮಿನ್ ಹಿ ಬಹವಃ ಸಾಧೋ ಯೇ ಮಮಾಸನ್ಮನೋರಥಾಃ।
14067018c ತೇ ದ್ರೋಣಪುತ್ರೇಣ ಹತಾಃ ಕಿಂ ನು ಜೀವಾಮಿ ಕೇಶವ।।
ಕೇಶವ! ಇವನಲ್ಲಿಯೇ ನನ್ನ ಅನೇಕ ಉತ್ತಮ ಮನೋರಥಗಳನ್ನು ಇಟ್ಟುಕೊಂಡಿದ್ದೆನು. ದ್ರೋಣಪುತ್ರನಿಂದ ಇವನು ಹತನಾದ ಮೇಲೆ ನಾನೇಕೆ ಜೀವಿಸಿರಲಿ?
14067019a ಆಸೀನ್ಮಮ ಮತಿಃ ಕೃಷ್ಣ ಪೂರ್ಣೋತ್ಸಂಗಾ ಜನಾರ್ದನ।
14067019c ಅಭಿವಾದಯಿಷ್ಯೇ ದಿಷ್ಟ್ಯೇತಿ ತದಿದಂ ವಿತಥೀಕೃತಮ್।।
ಕೃಷ್ಣ! ಜನಾರ್ದನ! ಇವನನ್ನು ನನ್ನ ಕಂಕುಳಿನಲ್ಲೆತ್ತಿಕೊಂಡು ಸಂತೋಷದಿಂದ ನಿನಗೆ ನಮಸ್ಕರಿಸಬೇಕೆಂದು ನನ್ನ ಆಸೆಯಾಗಿತ್ತು. ಆದರೆ ಅದು ಈಗ ಮಣ್ಣುಪಾಲಾಯಿತು!
14067020a ಚಪಲಾಕ್ಷಸ್ಯ ದಾಯಾದೇ ಮೃತೇಽಸ್ಮಿನ್ಪುರುಷರ್ಷಭ।
14067020c ವಿಫಲಾ ಮೇ ಕೃತಾಃ ಕೃಷ್ಣ ಹೃದಿ ಸರ್ವೇ ಮನೋರಥಾಃ।।
ಪುರುಷರ್ಷಭ! ಕೃಷ್ಣ! ಚಪಲಾಕ್ಷನ ಮಗನು ಮೃತನಾಗಿದ್ದಾನೆ. ಇದರಿಂದಾಗಿ ನನ್ನ ಹೃದಯದಲ್ಲಿದ್ದ ಸರ್ವಮನೋರಥಗಳೂ ವಿಫಲವಾಗಿ ಹೋದವು!
14067021a ಚಪಲಾಕ್ಷಃ ಕಿಲಾತೀವ ಪ್ರಿಯಸ್ತೇ ಮಧುಸೂದನ।
14067021c ಸುತಂ ಪಶ್ಯಸ್ವ ತಸ್ಯೇಮಂ ಬ್ರಹ್ಮಾಸ್ತ್ರೇಣ ನಿಪಾತಿತಮ್।।
ಮಧುಸೂದನ! ಆ ಚಪಲಾಕ್ಷನು ನಿನಗೆ ಪ್ರಿಯನಾಗಿದ್ದ ತಾನೇ? ಅವನ ಪುತ್ರನು ಬ್ರಹ್ಮಾಸ್ತ್ರದಿಂದ ಹತನಾಗಿರುವುದನ್ನು ನೋಡು!
14067022a ಕೃತಘ್ನೋಽಯಂ ನೃಶಂಸೋಽಯಂ ಯಥಾಸ್ಯ ಜನಕಸ್ತಥಾ।
14067022c ಯಃ ಪಾಂಡವೀಂ ಶ್ರಿಯಂ ತ್ಯಕ್ತ್ವಾ ಗತೋಽದ್ಯ ಯಮಸಾದನಮ್।।
ಪಾಂಡವರ ಸಂಪತ್ತನ್ನು ತೊರೆದು ಇಂದು ಯಮಸಾದನಕ್ಕೆ ಹೋದ ಇವನೂ ಕೂಡ ಅವನ ತಂದೆಯಂತೆ ಕೃತಘ್ನನೂ ಕ್ರೂರಿಯೂ ಆಗಿದ್ದಾನೆ.
14067023a ಮಯಾ ಚೈತತ್ಪ್ರತಿಜ್ಞಾತಂ ರಣಮೂರ್ಧನಿ ಕೇಶವ।
14067023c ಅಭಿಮನ್ಯೌ ಹತೇ ವೀರ ತ್ವಾಮೇಷ್ಯಾಮ್ಯಚಿರಾದಿತಿ।।
ಕೇಶವ! “ವೀರ! ಅಭಿಮನ್ಯು! ನೀನೇದರೂ ರಣಾಂಗಣದಲ್ಲಿ ಹತನಾದರೆ ಬೇಗನೆ ನಾನೂ ಕೂಡ ನಿನ್ನನ್ನು ಹಿಂಬಾಲಿಸಿ ಬರುತ್ತೇನೆ!” ಎಂದು ಪ್ರತಿಜ್ಞೆಮಾಡಿದ್ದೆ.
14067024a ತಚ್ಚ ನಾಕರವಂ ಕೃಷ್ಣ ನೃಶಂಸಾ ಜೀವಿತಪ್ರಿಯಾ।
14067024c ಇದಾನೀಮಾಗತಾಂ ತತ್ರ ಕಿಂ ನು ವಕ್ಷ್ಯತಿ ಫಾಲ್ಗುನಿಃ।।
ಕೃಷ್ಣ! ನನ್ನ ಜೀವನದ ಮೇಲಿನ ಆಸೆಯಿಂದ ನಿರ್ದಯಳಾದ ನಾನು ಆ ರೀತಿ ಮಾಡಲಿಲ್ಲ. ಈಗ ನಾನು ಅಲ್ಲಿಗೆ ಹೋದರೆ ಫಾಲ್ಗುನಿ ಅಭಿಮನ್ಯುವು ಏನು ಹೇಳಿಯಾನು?””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತರಾವಾಕ್ಯೇ ಸಪ್ತಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತರಾವಾಕ್ಯ ಎನ್ನುವ ಅರವತ್ತೇಳನೇ ಅಧ್ಯಾಯವು.