066: ಸುಭದ್ರಾವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 66

ಸಾರ

ದುಃಖಾರ್ತಳಾದ ಸುಭದ್ರೆಯು ಕೃಷ್ಣನಲ್ಲಿ ತನ್ನ ದುಃಖವನ್ನು ತೋಡಿಕೊಳ್ಳುವುದು (1-19).

14066001 ವೈಶಂಪಾಯನ ಉವಾಚ
14066001a ಉತ್ಥಿತಾಯಾಂ ಪೃಥಾಯಾಂ ತು ಸುಭದ್ರಾ ಭ್ರಾತರಂ ತದಾ।
14066001c ದೃಷ್ಟ್ವಾ ಚುಕ್ರೋಶ ದುಃಖಾರ್ತಾ ವಚನಂ ಚೇದಮಬ್ರವೀತ್।।

ವೈಶಂಪಾಯನನು ಹೇಳಿದನು: “ಪೃಥೆಯನ್ನು ಮೇಲೆಬ್ಬಿಸಿದ ನಂತರ ಸುಭದ್ರೆಯು ತನ್ನ ಅಣ್ಣನನ್ನು ನೋಡಿ ದುಃಖಾರ್ತಳಾಗಿ ಅಳುತ್ತಲೇ ಈ ಮಾತುಗಳನ್ನಾಡಿದಳು:

14066002a ಪುಂಡರೀಕಾಕ್ಷ ಪಶ್ಯಸ್ವ ಪೌತ್ರಂ ಪಾರ್ಥಸ್ಯ ಧೀಮತಃ।
14066002c ಪರಿಕ್ಷೀಣೇಷು ಕುರುಷು ಪರಿಕ್ಷೀಣಂ ಗತಾಯುಷಮ್।।

“ಪುಂಡರೀಕಾಕ್ಷ! ಕುರುವಂಶೀಯರೆಲ್ಲರೂ ಸಂತಾನವಿಲ್ಲದೇ ಕ್ಷಯಿಸುತ್ತಿರಲಾಗಿ ಧೀಮಂತ ಪಾರ್ಥನ ಆಯುಸ್ಸನ್ನೇ ಕಳೆದುಕೊಂಡಿರುವ ಈ ಮೊಮ್ಮಗನನ್ನು ನೋಡು!

14066003a ಇಷೀಕಾ ದ್ರೋಣಪುತ್ರೇಣ ಭೀಮಸೇನಾರ್ಥಮುದ್ಯತಾ।
14066003c ಸೋತ್ತರಾಯಾಂ ನಿಪತಿತಾ ವಿಜಯೇ ಮಯಿ ಚೈವ ಹ।।

ದ್ರೋಣಪುತ್ರನು ಭೀಮಸೇನನ ಮೇಲೆ ಪ್ರಯೋಗಿಸಿದ ಇಷೀಕವು ಉತ್ತರೆ, ಅರ್ಜುನ ಮತ್ತು ನನ್ನ ಮೇಲೆ ಬಿದ್ದಿತ್ತು.

14066004a ಸೇಯಂ ಜ್ವಲಂತೀ ಹೃದಯೇ ಮಯಿ ತಿಷ್ಠತಿ ಕೇಶವ।
14066004c ಯನ್ನ ಪಶ್ಯಾಮಿ ದುರ್ಧರ್ಷ ಮಮ ಪುತ್ರಸುತಂ ವಿಭೋ।।

ಕೇಶವ! ದುರ್ಧರ್ಷ! ವಿಭೋ! ಅದು ಪ್ರಜ್ವಲಿಸುತ್ತಾ ನನ್ನ ಹೃದಯದಲ್ಲಿಯೇ ನೆಲೆಸಿಕೊಂಡಿರುವುದರಿಂದ ನನ್ನ ಮಗನ ಮಗನನ್ನು ನಾನು ಕಾಣದಾಗಿದ್ದೇನೆ!

14066005a ಕಿಂ ನು ವಕ್ಷ್ಯತಿ ಧರ್ಮಾತ್ಮಾ ಧರ್ಮರಾಜೋ ಯುಧಿಷ್ಠಿರಃ।
14066005c ಭೀಮಸೇನಾರ್ಜುನೌ ಚಾಪಿ ಮಾದ್ರವತ್ಯಾಃ ಸುತೌ ಚ ತೌ।।
14066006a ಶ್ರುತ್ವಾಭಿಮನ್ಯೋಸ್ತನಯಂ ಜಾತಂ ಚ ಮೃತಮೇವ ಚ।
14066006c ಮುಷಿತಾ ಇವ ವಾರ್ಷ್ಣೇಯ ದ್ರೋಣಪುತ್ರೇಣ ಪಾಂಡವಾಃ।।

ವಾರ್ಷ್ಣೇಯ! ಅಭಿಮನ್ಯುವಿನ ಮಗನು ಮೃತನಾಗಿ ಹುಟ್ಟಿದನೆಂದು ಕೇಳಿ ಧರ್ಮಾತ್ಮ ಧರ್ಮರಾಜ ಯುಧಿಷ್ಠಿರನು ಏನು ಹೇಳುವನು? ಭೀಮಸೇನ, ಅರ್ಜುನ, ಮತ್ತು ಮಾದ್ರವತಿಯ ಮಕ್ಕಳೀರ್ವರೂ ಏನು ಹೇಳುವರು? ದ್ರೋಣಪುತ್ರನು ಪಾಂಡವರ ಎಲ್ಲವನ್ನೂ ಕೊಳ್ಳೆಹೊಡೆದುಬಿಟ್ಟನು!

14066007a ಅಭಿಮನ್ಯುಃ ಪ್ರಿಯಃ ಕೃಷ್ಣ ಪಿತೄಣಾಂ ನಾತ್ರ ಸಂಶಯಃ।
14066007c ತೇ ಶ್ರುತ್ವಾ ಕಿಂ ನು ವಕ್ಷ್ಯಂತಿ ದ್ರೋಣಪುತ್ರಾಸ್ತ್ರನಿರ್ಜಿತಾಃ।।

ಕೃಷ್ಣ! ಅಭಿಮನ್ಯುವು ತನ್ನ ತಂದೆಯರಿಗೆ ಪ್ರಿಯನಾಗಿದ್ದನೆನ್ನುವುದರಲ್ಲಿ ಸಂಶಯವೇ ಇಲ್ಲ. ದ್ರೋಣಪುತ್ರನ ಅಸ್ತ್ರದಿಂದ ಸೋಲಿಸಲ್ಪಟ್ಟ ಅವರು ಇದನ್ನು ಕೇಳಿ ಏನು ಹೇಳುವರು?

14066008a ಭವಿತಾತಃ ಪರಂ ದುಃಖಂ ಕಿಂ ನು ಮನ್ಯೇ ಜನಾರ್ದನ।
14066008c ಅಭಿಮನ್ಯೋಃ ಸುತಾತ್ಕೃಷ್ಣ ಮೃತಾಜ್ಜಾತಾದರಿಂದಮ।।

ಜನಾರ್ದನ! ಕೃಷ್ಣ! ಅರಿಂದಮ! ಅಭಿಮನ್ಯುವಿನ ಮಗನು ಮೃತನಾಗಿ ಹುಟ್ಟಿರುವುದಕ್ಕಿಂತಲೂ ಮಿಗಿಲಾದ ದುಃಖವು ಯಾವುದು ತಾನೇ ಇರುವುದು?

14066009a ಸಾಹಂ ಪ್ರಸಾದಯೇ ಕೃಷ್ಣ ತ್ವಾಮದ್ಯ ಶಿರಸಾ ನತಾ।
14066009c ಪೃಥೇಯಂ ದ್ರೌಪದೀ ಚೈವ ತಾಃ ಪಶ್ಯ ಪುರುಷೋತ್ತಮ।।

ಕೃಷ್ಣ! ಪುರುಷೋತ್ತಮ! ಇಂದು ಶಿರಬಾಗಿ ನಮಸ್ಕರಿಸಿ ನಾನು ನಿನ್ನ ಪ್ರಸಾದವನ್ನು ಬೇಡಿಕೊಳ್ಳುತ್ತಿದ್ದೇನೆ. ಪೃಥೆ-ದ್ರೌಪದಿಯರನ್ನೂ ನೋಡು!

14066010a ಯದಾ ದ್ರೋಣಸುತೋ ಗರ್ಭಾನ್ಪಾಂಡೂನಾಂ ಹಂತಿ ಮಾಧವ।
14066010c ತದಾ ಕಿಲ ತ್ವಯಾ ದ್ರೌಣಿಃ ಕ್ರುದ್ಧೇನೋಕ್ತೋಽರಿಮರ್ದನ।।

ಮಾಧವ! ಅರಿಮರ್ದನ! ದ್ರೋಣಸುತನು ಪಾಂಡವರ ಗರ್ಭಗಳನ್ನು ನಾಶಗೊಳಿಸಲು ಹೊರಟಾಗ ನೀನು ಕ್ರುದ್ಧನಾಗಿ ದ್ರೌಣಿಗೆ ಹೀಗೆ ಹೇಳಿದ್ದೆಯಲ್ಲವೇ?

14066011a ಅಕಾಮಂ ತ್ವಾ ಕರಿಷ್ಯಾಮಿ ಬ್ರಹ್ಮಬಂಧೋ ನರಾಧಮ।
14066011c ಅಹಂ ಸಂಜೀವಯಿಷ್ಯಾಮಿ ಕಿರೀಟಿತನಯಾತ್ಮಜಮ್।।

“ಬ್ರಹ್ಮಬಂಧು ನರಾಧಮನೇ! ನಿನ್ನ ಅಪೇಕ್ಷೆಯು ನೆರವೇರದಂತೆ ಮಾಡುತ್ತೇನೆ. ಕಿರೀಟಿಯ ಮಗನ ಮಗನನ್ನು ನಾನು ಬದುಕಿಸುತ್ತೇನೆ!”

14066012a ಇತ್ಯೇತದ್ವಚನಂ ಶ್ರುತ್ವಾ ಜಾನಮಾನಾ ಬಲಂ ತವ।
14066012c ಪ್ರಸಾದಯೇ ತ್ವಾ ದುರ್ಧರ್ಷ ಜೀವತಾಮಭಿಮನ್ಯುಜಃ।।

ನಿನ್ನ ಆ ವಚನವನ್ನು ಕೇಳಿದಾಗಲೇ ನಿನ್ನ ಬಲವೇನೆನ್ನುವುದನ್ನು ನಾನು ಅರಿತುಕೊಂಡೆ. ದುರ್ಧರ್ಷ! ಅಭಿಮನ್ಯುವಿನ ಮಗನನ್ನು ಬದುಕಿಸಿ ಕರುಣಿಸು!

14066013a ಯದ್ಯೇವಂ ತ್ವಂ ಪ್ರತಿಶ್ರುತ್ಯ ನ ಕರೋಷಿ ವಚಃ ಶುಭಮ್।
14066013c ಸಫಲಂ ವೃಷ್ಣಿಶಾರ್ದೂಲ ಮೃತಾಂ ಮಾಮುಪಧಾರಯ।।

ವೃಷ್ಣಿಶಾರ್ದೂಲ! ಒಂದು ವೇಳೆ ನೀನು ಹೇಳಿದ್ದ ಆ ಶುಭವಚನವನ್ನು ಸಫಲಗೊಳಿಸದೇ ಇದ್ದರೆ ನಾನೂ ಕೂಡ ಮೃತಳಾದೆನೆಂದೇ ಭಾವಿಸು!

14066014a ಅಭಿಮನ್ಯೋಃ ಸುತೋ ವೀರ ನ ಸಂಜೀವತಿ ಯದ್ಯಯಮ್।
14066014c ಜೀವತಿ ತ್ವಯಿ ದುರ್ಧರ್ಷ ಕಿಂ ಕರಿಷ್ಯಾಮ್ಯಹಂ ತ್ವಯಾ।।

ವೀರ! ದುರ್ಧರ್ಷ! ಅಭಿಮನ್ಯುವಿನ ಸುತನನ್ನು ನೀನು ಇಂದು ಬದುಕಿಸದೇ ಇದ್ದರೆ ಜೀವಿಸಿರುವ ನಿನ್ನಿಂದ ಇನ್ನು ನನಗೇನಾಗಬೇಕಾಗಿದೆ?

14066015a ಸಂಜೀವಯೈನಂ ದುರ್ಧರ್ಷ ಮೃತಂ ತ್ವಮಭಿಮನ್ಯುಜಮ್।
14066015c ಸದೃಶಾಕ್ಷಸುತಂ ವೀರ ಸಸ್ಯಂ ವರ್ಷನ್ನಿವಾಂಬುದಃ।।

ದುರ್ಧರ್ಷ! ವೀರ! ಮೋಡವು ಮಳೆಗರೆದು ಸಸ್ಯವನ್ನು ಪುನರ್ಜೀವನಗೊಳಿಸುವಂತೆ ನಿನ್ನ ಕಣ್ಣುಗಳಂಥಹದೇ ಕಣ್ಣುಗಳಿದ್ದ ಅಭಿಮನ್ಯುವಿನ ಈ ಮಗನನ್ನು ಬದುಕಿಸು!

14066016a ತ್ವಂ ಹಿ ಕೇಶವ ಧರ್ಮಾತ್ಮಾ ಸತ್ಯವಾನ್ಸತ್ಯವಿಕ್ರಮಃ।
14066016c ಸ ತಾಂ ವಾಚಮೃತಾಂ ಕರ್ತುಮರ್ಹಸಿ ತ್ವಮರಿಂದಮ।।

ಅರಿಂದಮ! ಕೇಶವ! ನೀನು ಧರ್ಮಾತ್ಮ. ಸತ್ಯವಂತ ಮತ್ತು ಸತ್ಯವಿಕ್ರಮ. ನೀನು ನಿನ್ನ ಮಾತನ್ನು ಸತ್ಯವಾಗಿಸಬೇಕು!

14066017a ಇಚ್ಚನ್ನಪಿ ಹಿ ಲೋಕಾಂಸ್ತ್ರೀನ್ಜೀವಯೇಥಾ ಮೃತಾನಿಮಾನ್।
14066017c ಕಿಂ ಪುನರ್ದಯಿತಂ ಜಾತಂ ಸ್ವಸ್ರೀಯಸ್ಯಾತ್ಮಜಂ ಮೃತಮ್।।

ನೀನು ಇಚ್ಛಿಸಿದರೆ ಮೃತಗೊಂಡ ಮೂರು ಲೋಕಗಳನ್ನೂ ಬದುಕಿಸಬಲ್ಲೆ! ಹೀಗಿರುವಾಗ ಸತ್ತು ಹುಟ್ಟಿರುವ ನಿನ್ನ ಈ ಅಳಿಯನ ಮಗನನ್ನು ಬದುಕಿಸಲಾರೆಯಾ?

14066018a ಪ್ರಭಾವಜ್ಞಾಸ್ಮಿ ತೇ ಕೃಷ್ಣ ತಸ್ಮಾದೇತದ್ಬ್ರವೀಮಿ ತೇ।
14066018c ಕುರುಷ್ವ ಪಾಂಡುಪುತ್ರಾಣಾಮಿಮಂ ಪರಮನುಗ್ರಹಮ್।।

ಕೃಷ್ಣ! ನಿನ್ನ ಪ್ರಭಾವವೇನೆಂದು ತಿಳಿದುಕೊಂಡಿರುವುದರಿಂದಲೇ ನಾನು ನಿನಗೆ ಹೇಳುತ್ತಿದ್ದೇನೆ. ಪಾಂಡುಪುತ್ರರಿಗೆ ಈ ಪರಮ ಅನುಗ್ರಹವನ್ನು ಕರುಣಿಸು!

14066019a ಸ್ವಸೇತಿ ವಾ ಮಹಾಬಾಹೋ ಹತಪುತ್ರೇತಿ ವಾ ಪುನಃ।
14066019c ಪ್ರಪನ್ನಾ ಮಾಮಿಯಂ ವೇತಿ ದಯಾಂ ಕರ್ತುಮಿಹಾರ್ಹಸಿ।।

ಮಹಾಬಾಹೋ! ತಂಗಿಯೆಂದಾದರೂ ಅಥವಾ ಪುತ್ರನನ್ನು ಕಳೆದುಕೊಂಡಿರುವಳೆಂದಾದರೂ ಅಥವಾ ಮರುಕಗೊಂಡು ಬೇಡುತ್ತಿರುವ ನನ್ನ ಮೇಲಿನ ದಯೆಯಿಂದಲಾದರೂ ಇದನ್ನು ನೀನು ಮಾಡಬೇಕು.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸುಭದ್ರಾವಾಕ್ಯೇ ಷಟ್ಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸುಭದ್ರಾವಾಕ್ಯ ಎನ್ನುವ ಅರವತ್ತಾರನೇ ಅಧ್ಯಾಯವು.