ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 65
ಸಾರ
ಪಾಂಡವರು ಮರುತ್ತನಿಧಿಯನ್ನು ತರಲು ಹೋದಾಗ ಕೃಷ್ಣನು ವೃಷ್ಣಿಗಳೊಂದಿಗೆ ಹಸ್ತಿನಾಪುರಕ್ಕೆ ಆಗಮಿಸಿದುದು (1-7). ಉತ್ತರೆಯಲ್ಲಿ ಬ್ರಹ್ಮಾಸ್ತ್ರದಿಂದ ಪೀಡಿತನಾಗಿದ್ದ ಪರಿಕ್ಷಿತನು ಮೃತನಾಗಿಯೇ ಹುಟ್ಟಿದುದು; ಕೃಷ್ಣನಲ್ಲಿ ಕುಂತಿಯು ತನ್ನ ಶೋಕವನ್ನು ಹೇಳಿಕೊಳ್ಳುವುದು (8-29).
14065001 ವೈಶಂಪಾಯನ ಉವಾಚ
14065001a ಏತಸ್ಮಿನ್ನೇವ ಕಾಲೇ ತು ವಾಸುದೇವೋಽಪಿ ವೀರ್ಯವಾನ್।
14065001c ಉಪಾಯಾದ್ವೃಷ್ಣಿಭಿಃ ಸಾರ್ಧಂ ಪುರಂ ವಾರಣಸಾಹ್ವಯಮ್।।
ವೈಶಂಪಾಯನನು ಹೇಳಿದನು: “ಅದೇ ಸಮಯದಲ್ಲಿ ವೀರ್ಯವಾನ್ ವಾಸುದೇವನೂ ಕೂಡ ವೃಷ್ಣಿಗಳೊಂದಿಗೆ ವಾರಣಸಾಹ್ವಯ ಪುರಿಗೆ ಆಗಮಿಸಿದನು.
14065002a ಸಮಯಂ ವಾಜಿಮೇಧಸ್ಯ ವಿದಿತ್ವಾ ಪುರುಷರ್ಷಭಃ।
14065002c ಯಥೋಕ್ತೋ ಧರ್ಮಪುತ್ರೇಣ ವ್ರಜನ್ಸ ಸ್ವಪುರೀಂ ಪ್ರತಿ।।
ಧರ್ಮಪುತ್ರನು ಯಾವ ಸಮಯದಲ್ಲಿ ಅಶ್ವಮೇಧವು ನಡೆಯುತ್ತದೆ ಎಂದು ಹೇಳಿದ್ದನೋ ಅದನ್ನು ತಿಳಿದುಕೊಂಡೇ ಪುರುಷರ್ಷಭ ಕೃಷ್ಣನು ತನ್ನ ಪುರಿ ದ್ವಾರಕೆಗೆ ತೆರಳಿದ್ದನು.
14065003a ರೌಕ್ಮಿಣೇಯೇನ ಸಹಿತೋ ಯುಯುಧಾನೇನ ಚೈವ ಹ।
14065003c ಚಾರುದೇಷ್ಣೇನ ಸಾಂಬೇನ ಗದೇನ ಕೃತವರ್ಮಣಾ।।
14065004a ಸಾರಣೇನ ಚ ವೀರೇಣ ನಿಶಠೇನೋಲ್ಮುಕೇನ ಚ।
14065004c ಬಲದೇವಂ ಪುರಸ್ಕೃತ್ಯ ಸುಭದ್ರಾಸಹಿತಸ್ತದಾ।।
ಈಗ ಅವನು ರುಕ್ಮಿಣಿಯ ಮಗ ಪ್ರದ್ಯುಮ್ನ, ಯುಯುಧಾನ ಸಾತ್ಯಕಿ, ಚಾರುದೇಷ್ಣ, ಸಾಂಬ, ಗದ, ಕೃತವರ್ಮ, ಸಾರಣ, ವೀರ ನಿಶಠ ಮತ್ತು ಉಲ್ಮುಕರೊಡನೆ ಬಲದೇವನನ್ನು ಮುಂದೆಮಾಡಿಕೊಂಡು ಸುಭದ್ರೆಯ ಸಹಿತ ಆಗಮಿಸಿದನು.
14065005a ದ್ರೌಪದೀಮುತ್ತರಾಂ ಚೈವ ಪೃಥಾಂ ಚಾಪ್ಯವಲೋಕಕಃ।
14065005c ಸಮಾಶ್ವಾಸಯಿತುಂ ಚಾಪಿ ಕ್ಷತ್ರಿಯಾ ನಿಹತೇಶ್ವರಾಃ।।
ದ್ರೌಪದೀ, ಉತ್ತರಾ, ಹಾಗೂ ಪೃಥಾ ಕುಂತಿಯನ್ನು ನೋಡಲೋಸುಗ ಮತ್ತು ಪತಿಗಳನ್ನು ಕಳೆದುಕೊಂಡ ಕ್ಷತ್ರಿಯ ಸ್ತ್ರೀಯರನ್ನು ಸಮಾಧಾನಗೊಳಿಸಲು ಅವನು ಆಗಮಿಸಿದನು.
14065006a ತಾನಾಗತಾನ್ಸಮೀಕ್ಷ್ಯೈವ ಧೃತರಾಷ್ಟ್ರೋ ಮಹೀಪತಿಃ।
14065006c ಪ್ರತ್ಯಗೃಹ್ಣಾದ್ಯಥಾನ್ಯಾಯಂ ವಿದುರಶ್ಚ ಮಹಾಮನಾಃ।।
ಅವರು ಆಗಮಿಸಿದುದನ್ನು ನೋಡುತ್ತಲೇ ಮಹೀಪತಿ ಧೃತರಾಷ್ಟ್ರ ಮತ್ತು ಮಹಾಮನಸ್ವಿ ವಿದುರರು ಅವರನ್ನು ಯಥಾನ್ಯಾಯವಾಗಿ ಸ್ವಾಗತಿಸಿದರು.
14065007a ತತ್ರೈವ ನ್ಯವಸತ್ಕೃಷ್ಣಃ ಸ್ವರ್ಚಿತಃ ಪುರುಷರ್ಷಭಃ।
14065007c ವಿದುರೇಣ ಮಹಾತೇಜಾಸ್ತಥೈವ ಚ ಯುಯುತ್ಸುನಾ।।
ವಿದುರ ಮತ್ತು ಯುಯುತ್ಸುವುನಿಂದ ಸತ್ಕೃತನಾದ ಪುರುಷರ್ಷಭ ಮಹಾತೇಜಸ್ವಿ ಕೃಷ್ಣನು ಅಲ್ಲಿಯೇ ಸ್ವಲ್ಪ ಸಮಯ ಉಳಿದುಕೊಂಡಿದ್ದನು.
14065008a ವಸತ್ಸು ವೃಷ್ಣಿವೀರೇಷು ತತ್ರಾಥ ಜನಮೇಜಯ।
14065008c ಜಜ್ಞೇ ತವ ಪಿತಾ ರಾಜನ್ಪರಿಕ್ಷಿತ್ಪರವೀರಹಾ।।
ರಾಜನ್! ಜನಮೇಜಯ! ಆ ವೃಷ್ಣಿವೀರರು ಅಲ್ಲಿ ಉಳಿದುಕೊಂಡಿರುವಾಗಲೇ ನಿನ್ನ ತಂದೆ ಪರವೀರಹ ಪರಿಕ್ಷಿತನು ಹುಟ್ಟಿದನು.
14065009a ಸ ತು ರಾಜಾ ಮಹಾರಾಜ ಬ್ರಹ್ಮಾಸ್ತ್ರೇಣಾಭಿಪೀಡಿತಃ।
14065009c ಶವೋ ಬಭೂವ ನಿಶ್ಚೇಷ್ಟೋ ಹರ್ಷಶೋಕವಿವರ್ಧನಃ।।
ಮಹಾರಾಜಾ! ಬ್ರಹ್ಮಾಸ್ತ್ರದಿಂದ ಪೀಡಿತನಾಗಿದ್ದ ಆ ರಾಜನು ಶವದಂತೆ ನಿಶ್ಚೇಷ್ಟನಾಗಿ ಹುಟ್ಟಿ, ಎಲ್ಲರ ಹರ್ಷ-ಶೋಕಗಳನ್ನು ಹೆಚ್ಚಿಸಿದನು.
14065010a ಹೃಷ್ಟಾನಾಂ ಸಿಂಹನಾದೇನ ಜನಾನಾಂ ತತ್ರ ನಿಸ್ವನಃ।
14065010c ಆವಿಶ್ಯ ಪ್ರದಿಶಃ ಸರ್ವಾಃ ಪುನರೇವ ವ್ಯುಪಾರಮತ್।।
ಅವನ ಜನನದಿಂದ ಹರ್ಷಗೊಂಡ ಜನರ ಸಿಂಹನಾದವು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿತು. ಮರುಕ್ಷಣದಲ್ಲಿಯೇ ಪುನಃ ಅದು ಶಾಂತವಾಗಿಬಿಟ್ಟಿತು.
14065011a ತತಃ ಸೋಽತಿತ್ವರಃ ಕೃಷ್ಣೋ ವಿವೇಶಾಂತಃಪುರಂ ತದಾ।
14065011c ಯುಯುಧಾನದ್ವಿತೀಯೋ ವೈ ವ್ಯಥಿತೇಂದ್ರಿಯಮಾನಸಃ।।
ಆಗ ಅತಿ ಅವಸರದಿಂದ ಇಂದ್ರಿಯ-ಮನಸ್ಸುಗಳಲ್ಲಿ ವ್ಯಥಿತನಾಗಿದ್ದ ಕೃಷ್ಣನು ಸಾತ್ಯಕಿಯೊಡನೆ ಅಂತಃಪುರವನ್ನು ಪ್ರವೇಶಿಸಿದನು.
14065012a ತತಸ್ತ್ವರಿತಮಾಯಾಂತೀಂ ದದರ್ಶ ಸ್ವಾಂ ಪಿತೃಷ್ವಸಾಮ್।
14065012c ಕ್ರೋಶಂತೀಮಭಿಧಾವೇತಿ ವಾಸುದೇವಂ ಪುನಃ ಪುನಃ।।
ಅವಸರದಲ್ಲಿ ಬರುತ್ತಿದ್ದ ಕೃಷ್ಣನನ್ನು ನೋಡಿ ಅವನ ಸೋದರತ್ತೆ ಕುಂತಿಯು ವಾಸುದೇವನಿಗೆ “ಓಡಿ ಹೋಗು!” ಎಂದು ಪುನಃ ಪುನಃ ಕೂಗಿಕೊಳ್ಳುತ್ತಿದ್ದಳು.
14065013a ಪೃಷ್ಠತೋ ದ್ರೌಪದೀಂ ಚೈವ ಸುಭದ್ರಾಂ ಚ ಯಶಸ್ವಿನೀಮ್।
14065013c ಸವಿಕ್ರೋಶಂ ಸಕರುಣಂ ಬಾಂಧವಾನಾಂ ಸ್ತ್ರಿಯೋ ನೃಪ।।
ನೃಪ! ಅವಳ ಹಿಂದೆ ದ್ರೌಪದಿ, ಯಶಸ್ವಿನೀ ಸುಭದ್ರೆ ಮತ್ತು ಬಾಂಧವ ಸ್ತ್ರೀಯರು ಕರುಣಾಜನಕವಾಗಿ ರೋದಿಸುತ್ತಿದ್ದರು.
14065014a ತತಃ ಕೃಷ್ಣಂ ಸಮಾಸಾದ್ಯ ಕುಂತೀ ರಾಜಸುತಾ ತದಾ।
14065014c ಪ್ರೋವಾಚ ರಾಜಶಾರ್ದೂಲ ಬಾಷ್ಪಗದ್ಗದಯಾ ಗಿರಾ।।
ರಾಜಶಾರ್ದೂಲ! ಆಗ ರಾಜಸುತೆ ಕುಂತಿಯು ಕೃಷ್ಣನ ಬಳಿಸಾರಿ ಕಣ್ಣೀರುಸುರಿಸುತ್ತಾ ಗದ್ಗದ ಧ್ವನಿಯಲ್ಲಿ ಹೇಳಿದಳು:
14065015a ವಾಸುದೇವ ಮಹಾಬಾಹೋ ಸುಪ್ರಜಾ ದೇವಕೀ ತ್ವಯಾ।
14065015c ತ್ವಂ ನೋ ಗತಿಃ ಪ್ರತಿಷ್ಠಾ ಚ ತ್ವದಾಯತ್ತಮಿದಂ ಕುಲಮ್।।
“ವಾಸುದೇವ! ಮಹಾಬಾಹೋ! ನಿನ್ನಿಂದಾಗಿ ದೇವಕಿಯು ಉತ್ತಮ ಪುತ್ರವತಿಯೆನಿಸಿಕೊಂಡಳು! ನೀನೇ ನಮಗೆ ಗತಿ, ಆಧಾರಭೂತ. ಈ ಕುಲದ ರಕ್ಷಣೆಯೂ ನಿನ್ನ ಅಧೀನದಲ್ಲಿದೆ.
14065016a ಯದುಪ್ರವೀರ ಯೋಽಯಂ ತೇ ಸ್ವಸ್ರೀಯಸ್ಯಾತ್ಮಜಃ ಪ್ರಭೋ।
14065016c ಅಶ್ವತ್ಥಾಮ್ನಾ ಹತೋ ಜಾತಸ್ತಮುಜ್ಜೀವಯ ಕೇಶವ।।
ಯದುಪ್ರವೀರ! ಪ್ರಭೋ! ಕೇಶವ! ನಿನ್ನ ಸೋದರಳಿಯನ ಮಗನಾದ ಇವನು ಅಶ್ವತ್ಥಾಮನಿಂದ ಹತನಾಗಿ ಹುಟ್ಟಿದ್ದಾನೆ. ಇವನನ್ನು ಬದುಕಿಸು!
14065017a ತ್ವಯಾ ಹ್ಯೇತತ್ ಪ್ರತಿಜ್ಞಾತಮೈಷೀಕೇ ಯದುನಂದನ।
14065017c ಅಹಂ ಸಂಜೀವಯಿಷ್ಯಾಮಿ ಮೃತಂ ಜಾತಮಿತಿ ಪ್ರಭೋ।।
ಯದುನಂದನ! ಪ್ರಭೋ! ಅಶ್ವತ್ಥಾಮನು ಐಷೀಕವನ್ನು ಬ್ರಹ್ಮಾಸ್ತ್ರವನ್ನಾಗಿ ಅಭಿಮಂತ್ರಿಸಿ ಪ್ರಯೋಗಿಸಿದಾಗ “ಸತ್ತು ಹುಟ್ಟಿದವನನ್ನು ನಾನು ಬದುಕಿಸುತ್ತೇನೆ” ಎಂದು ನೀನು ಪ್ರತಿಜ್ಞೆಯನ್ನು ಮಾಡಿದ್ದೆ.
14065018a ಸೋಽಯಂ ಜಾತೋ ಮೃತಸ್ತಾತ ಪಶ್ಯೈನಂ ಪುರುಷರ್ಷಭ।
14065018c ಉತ್ತರಾಂ ಚ ಸುಭದ್ರಾಂ ಚ ದ್ರೌಪದೀಂ ಮಾಂ ಚ ಮಾಧವ।।
14065019a ಧರ್ಮಪುತ್ರಂ ಚ ಭೀಮಂ ಚ ಫಲ್ಗುನಂ ನಕುಲಂ ತಥಾ।
14065019c ಸಹದೇವಂ ಚ ದುರ್ಧರ್ಷ ಸರ್ವಾನ್ನಸ್ತ್ರಾತುಮರ್ಹಸಿ।।
ಪುರುಷರ್ಷಭ! ಹಾಗೆಯೇ ಇವನು ಮೃತನಾಗಿಯೇ ಹುಟ್ಟಿದ್ದಾನೆ ನೋಡು! ಮಾಧವ! ದುರ್ಧರ್ಷ! ಉತ್ತರೆ, ಸುಭದ್ರೆ, ದ್ರೌಪದೀ, ನಾನು, ಧರ್ಮಪುತ್ರ, ಭೀಮ, ಫಲ್ಗುನ, ನಕುಲ ಮತ್ತು ಸಹದೇವರನ್ನು ನೋಡು! ನಮ್ಮೆಲ್ಲರನ್ನು ನೀನು ಈ ದುಃಖದಿಂದ ಪಾರುಮಾಡಬೇಕು!
14065020a ಅಸ್ಮಿನ್ಪ್ರಾಣಾಃ ಸಮಾಯತ್ತಾಃ ಪಾಂಡವಾನಾಂ ಮಮೈವ ಚ।
14065020c ಪಾಂಡೋಶ್ಚ ಪಿಂಡೋ ದಾಶಾರ್ಹ ತಥೈವ ಶ್ವಶುರಸ್ಯ ಮೇ।।
ದಾಶಾರ್ಹ! ಪಾಂಡವರ ಮತ್ತು ನನ್ನ ಪ್ರಾಣಗಳೂ ಹಾಗೆಯೇ ಪಾಂಡು ಮತ್ತು ನನ್ನ ಮಾವನವರ ಪಿಂಡಗಳೂ ಇವನನ್ನೇ ಅವಲಂಬಿಸಿವೆ.
14065021a ಅಭಿಮನ್ಯೋಶ್ಚ ಭದ್ರಂ ತೇ ಪ್ರಿಯಸ್ಯ ಸದೃಶಸ್ಯ ಚ।
14065021c ಪ್ರಿಯಮುತ್ಪಾದಯಾದ್ಯ ತ್ವಂ ಪ್ರೇತಸ್ಯಾಪಿ ಜನಾರ್ದನ।।
ಜನಾರ್ದನ! ನಿನಗೆ ಮಂಗಳವಾಗಲಿ! ಇಂದು ನಿನ್ನ ಪ್ರಿಯನಾಗಿದ್ದ, ನಿನ್ನಂತೆಯೇ ಇದ್ದ, ಮತ್ತು ಮೃತನಾಗಿರುವ ಅಭಿಮನ್ಯುವಿನ ಸಂತೋಷವನ್ನು ಹೆಚ್ಚಿಸು!
14065022a ಉತ್ತರಾ ಹಿ ಪ್ರಿಯೋಕ್ತಂ ವೈ ಕಥಯತ್ಯರಿಸೂದನ।
14065022c ಅಭಿಮನ್ಯೋರ್ವಚಃ ಕೃಷ್ಣ ಪ್ರಿಯತ್ವಾತ್ತೇ ನ ಸಂಶಯಃ।।
ಅರಿಸೂದನ! ಕೃಷ್ಣ! ನಿಸ್ಸಂಶಯವಾಗಿಯೂ ನಿನಗೆ ಪ್ರಿಯನಾದ ಅಭಿಮನ್ಯುವು ಪ್ರೀತಿಯಿಂದ ಹೇಳುತ್ತಿದ್ದ ಮಾತುಗಳನ್ನು ಉತ್ತರೆಯು ನನ್ನೊಡನೆ ಹೇಳಿಕೊಳ್ಳುತ್ತಿದ್ದಳು.
14065023a ಅಬ್ರವೀತ್ಕಿಲ ದಾಶಾರ್ಹ ವೈರಾಟೀಮಾರ್ಜುನಿಃ ಪುರಾ।
14065023c ಮಾತುಲಸ್ಯ ಕುಲಂ ಭದ್ರೇ ತವ ಪುತ್ರೋ ಗಮಿಷ್ಯತಿ।।
14065024a ಗತ್ವಾ ವೃಷ್ಣ್ಯಂಧಕಕುಲಂ ಧನುರ್ವೇದಂ ಗ್ರಹೀಷ್ಯತಿ।
14065024c ಅಸ್ತ್ರಾಣಿ ಚ ವಿಚಿತ್ರಾಣಿ ನೀತಿಶಾಸ್ತ್ರಂ ಚ ಕೇವಲಮ್।।
ದಾಶಾರ್ಹ! ಹಿಂದೆ ಅರ್ಜುನನ ಮಗನು ವೈರಾಟೀ ಉತ್ತರೆಯಲ್ಲಿ ಇದನ್ನೇ ಹೇಳುತ್ತಿದ್ದನಲ್ಲವೇ? “ಭದ್ರೇ! ನಿನ್ನ ಮಗನು ನನ್ನ ಸೋದರಮಾವನ ಮನೆಗೆ ಹೋಗುತ್ತಾನೆ. ವೃಷ್ಣಿ-ಅಂಧಕರ ಕುಲಕ್ಕೆ ಹೋಗಿ ಅವನು ಧನುರ್ವೇದ, ವಿಚಿತ್ರ ಅಸ್ತ್ರಗಳು ಮತ್ತು ಸಮಗ್ರ ನೀತಿಶಾಸ್ತ್ರವನ್ನು ಪಡೆದುಕೊಳ್ಳುತ್ತಾನೆ!”
14065025a ಇತ್ಯೇತತ್ಪ್ರಣಯಾತ್ತಾತ ಸೌಭದ್ರಃ ಪರವೀರಹಾ।
14065025c ಕಥಯಾಮಾಸ ದುರ್ಧರ್ಷಸ್ತಥಾ ಚೈತನ್ನ ಸಂಶಯಃ।।
ಪರವೀರಹ ದುರ್ಧರ್ಷ ಸೌಭದ್ರನು ಪ್ರಣಯದಿಂದ ಹೀಗೆ ಹೇಳುತ್ತಿದ್ದನು ಎನ್ನುವುದರಲ್ಲಿ ಸಂಶಯವೇ ಇಲ್ಲ.
14065026a ತಾಸ್ತ್ವಾಂ ವಯಂ ಪ್ರಣಮ್ಯೇಹ ಯಾಚಾಮೋ ಮಧುಸೂದನ।
14065026c ಕುಲಸ್ಯಾಸ್ಯ ಹಿತಾರ್ಥಂ ತ್ವಂ ಕುರು ಕಲ್ಯಾಣಮುತ್ತಮಮ್।।
ಮಧುಸೂದನ! ನಾವೆಲ್ಲರೂ ನಿನ್ನ ಪಾದಗಳಿಗೆ ನಮಿಸಿ ಯಾಚಿಸಿಕೊಳ್ಳುತ್ತೇವೆ. ಈ ಕುಲದ ಹಿತಕ್ಕಾಗಿ ಉತ್ತಮ ಕಲ್ಯಾಣವನ್ನು ಮಾಡು!”
14065027a ಏವಮುಕ್ತ್ವಾ ತು ವಾರ್ಷ್ಣೇಯಂ ಪೃಥಾ ಪೃಥುಲಲೋಚನಾ।
14065027c ಉಚ್ಚ್ರಿತ್ಯ ಬಾಹೂ ದುಃಖಾರ್ತಾ ತಾಶ್ಚಾನ್ಯಾಃ ಪ್ರಾಪತನ್ಭುವಿ।।
ವಾರ್ಷ್ಣೇಯನಿಗೆ ಹೀಗೆ ಹೇಳಿ ವಿಶಾಲನೇತ್ರೆ ಪೃಥಾಳು ದುಃಖಾರ್ತಳಾಗಿ ತನ್ನ ಬಾಹುಗಳನ್ನು ಮೇಲೆತ್ತಿಕೊಂಡು ದೊಪ್ಪನೆ ನೆಲದ ಮೇಲೆ ಬಿದ್ದುಬಿಟ್ಟಳು. ಆಗ ಅನ್ಯ ಸ್ತ್ರೀಯರೂ ನೆಲದ ಮೇಲೆ ಬಿದ್ದರು.
14065028a ಅಬ್ರುವಂಶ್ಚ ಮಹಾರಾಜ ಸರ್ವಾಃ ಸಾಸ್ರಾವಿಲೇಕ್ಷಣಾಃ।
14065028c ಸ್ವಸ್ರೀಯೋ ವಾಸುದೇವಸ್ಯ ಮೃತೋ ಜಾತ ಇತಿ ಪ್ರಭೋ।।
ಪ್ರಭೋ! ಮಹಾರಾಜ! ಕಣ್ಣೀರಿಡುತ್ತಿದ್ದ ಎಲ್ಲರೂ “ಅಯ್ಯೋ! ವಾಸುದೇವನ ಅಳಿಯನ ಮಗನು ಮೃತನಾಗಿ ಹುಟ್ಟಿದನಲ್ಲಾ!” ಎಂದು ಕೂಗಿಕೊಂಡರು.
14065029a ಏವಮುಕ್ತೇ ತತಃ ಕುಂತೀಂ ಪ್ರತ್ಯಗೃಹ್ಣಾಜ್ಜನಾರ್ದನಃ।
14065029c ಭೂಮೌ ನಿಪತಿತಾಂ ಚೈನಾಂ ಸಾಂತ್ವಯಾಮಾಸ ಭಾರತ।।
ಭಾರತ! ಅವರೆಲ್ಲರನ್ನೂ ಕೇಳಿದ ಜನಾರ್ದನನು ಆಗ ನೆಲದ ಮೇಲೆ ಬಿದ್ದಿದ್ದ ಕುಂತಿಯನ್ನು ಹಿಡಿದು ಮೇಲೆಬ್ಬಿಸಿ ಸಂತೈಸತೊಡಗಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಪರಿಕ್ಷಿಜ್ಜನ್ಮಕಥನೇ ಪಂಚಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಪರಿಕ್ಷಿಜ್ಜನ್ಮಕಥನ ಎನ್ನುವ ಅರವತ್ತೈದನೇ ಅಧ್ಯಾಯವು.