064: ದ್ರವ್ಯಾನಯನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 64

ಸಾರ

ಗಿರೀಶನಿಗೆ ಬಲಿಗಳನ್ನಿತ್ತು ಯುಧಿಷ್ಠಿರನು ನಿದಿಗಾಗಿ ಅಗೆಯತೊಡಗಿದುದು (1-11). ಅಪಾರ ಧನವನ್ನು ಪಡೆದು ಯುಧಿಷ್ಠಿರನು ಹಸ್ತಿನಾಪುರಕ್ಕೆ ಪ್ರಯಾಣಿಸಿದುದು (12-20).

14064001 ಬ್ರಾಹ್ಮಣಾ ಊಚುಃ
14064001a ಕ್ರಿಯತಾಮುಪಹಾರೋಽದ್ಯ ತ್ರ್ಯಂಬಕಸ್ಯ ಮಹಾತ್ಮನಃ।
14064001c ಕೃತ್ವೋಪಹಾರಂ ನೃಪತೇ ತತಃ ಸ್ವಾರ್ಥೇ ಯತಾಮಹೇ।।

ಬ್ರಾಹ್ಮಣರು ಹೇಳಿದರು: “ನೃಪತೇ! ಇಂದು ಮೊದಲು ಮಹಾತ್ಮ ತ್ರ್ಯಂಬಕನಿಗೆ ಬಲಿಯನ್ನು ಸಮರ್ಪಿಸು. ಇದರ ನಂತರ ನಮ್ಮ ಕಾರ್ಯಸಿದ್ಧಿಗಾಗಿ ಪ್ರಯತ್ನಿಸೋಣ.””

14064002 ವೈಶಂಪಾಯನ ಉವಾಚ
14064002a ಶ್ರುತ್ವಾ ತು ವಚನಂ ತೇಷಾಂ ಬ್ರಾಹ್ಮಣಾನಾಂ ಯುಧಿಷ್ಠಿರಃ।
14064002c ಗಿರೀಶಸ್ಯ ಯಥಾನ್ಯಾಯಮುಪಹಾರಮುಪಾಹರತ್।।

ವೈಶಂಪಾಯನನು ಹೇಳಿದನು: “ಬ್ರಾಹ್ಮಣರ ಆ ಮಾತನ್ನು ಕೇಳಿ ಯುಧಿಷ್ಠಿರನು ಯಥಾನ್ಯಾಯವಾಗಿ ಗಿರೀಶನಿಗೆ ಪೂಜೆ-ಬಲಿಗಳನ್ನು ಅರ್ಪಿಸಿದನು.

14064003a ಆಜ್ಯೇನ ತರ್ಪಯಿತ್ವಾಗ್ನಿಂ ವಿಧಿವತ್ಸಂಸ್ಕೃತೇನ ಹ।
14064003c ಮಂತ್ರಸಿದ್ಧಂ ಚರುಂ ಕೃತ್ವಾ ಪುರೋಧಾಃ ಪ್ರಯಯೌ ತದಾ।।

ಪುರೋಹಿತರು ವಿಧಿಪೂರ್ವಕವಾಗಿ ಸಂಸ್ಕರಿಸಿದ ಅಗ್ನಿಯನ್ನು ತುಪ್ಪದಿಂದ ತೃಪ್ತಿಗೊಳಿಸಿ, ಮಂತ್ರಪೂರ್ವಕವಾಗಿ ಚರುವನ್ನು ಸಿದ್ಧಗೊಳಿಸಿ ತಂದರು.

14064004a ಸ ಗೃಹೀತ್ವಾ ಸುಮನಸೋ ಮಂತ್ರಪೂತಾ ಜನಾಧಿಪ।
14064004c ಮೋದಕೈಃ ಪಾಯಸೇನಾಥ ಮಾಂಸೈಶ್ಚೋಪಾಹರದ್ಬಲಿಮ್।।
14064005a ಸುಮನೋಭಿಶ್ಚ ಚಿತ್ರಾಭಿರ್ಲಾಜೈರುಚ್ಚಾವಚೈರಪಿ।
14064005c ಸರ್ವಂ ಸ್ವಿಷ್ಟಕೃತಂ ಕೃತ್ವಾ ವಿಧಿವದ್ವೇದಪಾರಗಃ।

ಜನಾಧಿಪ! ವೇದಪಾರಂಗತ ದ್ವಿಜರು ಮಂತ್ರಪೂತ ಪುಷ್ಪಗಳನ್ನು ಹಿಡಿದು ಮೋದಕ-ಪಾಯಸ-ಮಾಂಸಗಳಿಂದ, ಉಚ್ಚಧ್ವನಿಯ ಮಂತ್ರಗಳಿಂದ, ಶಿವನಿಗೆ ಪ್ರಿಯವಾದ ಎಲ್ಲ ವಿಚಿತ್ರ ಪುಷ್ಪ-ಅರಳುಗಳಿಂದ ಬಲಿಯನ್ನು ಸಮರ್ಪಿಸಿದರು.

14064005e ಕಿಂಕರಾಣಾಂ ತತಃ ಪಶ್ಚಾಚ್ಚಕಾರ ಬಲಿಮುತ್ತಮಮ್।।
14064006a ಯಕ್ಷೇಂದ್ರಾಯ ಕುಬೇರಾಯ ಮಣಿಭದ್ರಾಯ ಚೈವ ಹ।
14064006c ತಥಾನ್ಯೇಷಾಂ ಚ ಯಕ್ಷಾಣಾಂ ಭೂತಾಧಿಪತಯಶ್ಚ ಯೇ।।
14064007a ಕೃಸರೇಣ ಸಮಾಂಸೇನ ನಿವಾಪೈಸ್ತಿಲಸಂಯುತೈಃ।
14064007c ಶುಶುಭೇ ಸ್ಥಾನಮತ್ಯರ್ಥಂ ದೇವದೇವಸ್ಯ ಪಾರ್ಥಿವ।।

ಅನಂತರ ಶಿವನ ಕಿಂಕರರಿಗೆ ಉತ್ತಮ ಬಲಿಯನ್ನಿತ್ತರು. ಯಕ್ಷೇಂದ್ರ ಕುಬೇರನಿಗೆ, ಮಣಿಭದ್ರನಿಗೆ ಮತ್ತು ಹಾಗೆಯೇ ಇತರ ಯಕ್ಷ-ಭೂತಾಧಿಪತಿಗಳಿಗೆ ಎಳ್ಳನ್ನದಿಂದಲೂ, ಮಾಂಸದಿಂದಲೂ, ಎಳ್ಳಿನಿಂದ ಕೂಡಿದ ನೀರಿನಿಂದಲೂ ಬಲಿಯನ್ನು ಅರ್ಪಿಸಿದರು. ಪಾರ್ಥಿವ! ದೇವದೇವನ ಆ ಸ್ಥಾನವು ಅತೀವವಾಗಿ ಶೋಭಿಸುತ್ತಿತ್ತು.

14064008a ಕೃತ್ವಾ ತು ಪೂಜಾಂ ರುದ್ರಸ್ಯ ಗಣಾನಾಂ ಚೈವ ಸರ್ವಶಃ।
14064008c ಯಯೌ ವ್ಯಾಸಂ ಪುರಸ್ಕೃತ್ಯ ನೃಪೋ ರತ್ನನಿಧಿಂ ಪ್ರತಿ।।

ರುದ್ರನ ಮತ್ತು ಅವನ ಗಣಗಳೆಲ್ಲರ ಪೂಜೆಯನ್ನು ಮಾಡಿ ನೃಪ ಯುಧಿಷ್ಠಿರನು ವ್ಯಾಸನನ್ನು ಮುಂದಿರಿಸಿಕೊಂಡು ರತ್ನನಿಧಿಯ ಕಡೆ ನಡೆದನು.

14064009a ಪೂಜಯಿತ್ವಾ ಧನಾಧ್ಯಕ್ಷಂ ಪ್ರಣಿಪತ್ಯಾಭಿವಾದ್ಯ ಚ।
14064009c ಸುಮನೋಭಿರ್ವಿಚಿತ್ರಾಭಿರಪೂಪೈಃ ಕೃಸರೇಣ ಚ।।
14064010a ಶಂಖಾದೀಂಶ್ಚ ನಿಧೀನ್ಸರ್ವಾನ್ನಿಧಿಪಾಲಾಂಶ್ಚ ಸರ್ವಶಃ।
14064010c ಅರ್ಚಯಿತ್ವಾ ದ್ವಿಜಾಗ್ರ್ಯಾನ್ಸ ಸ್ವಸ್ತಿ ವಾಚ್ಯ ಚ ವೀರ್ಯವಾನ್।।
14064011a ತೇಷಾಂ ಪುಣ್ಯಾಹಘೋಷೇಣ ತೇಜಸಾ ಸಮವಸ್ಥಿತಃ।
14064011c ಪ್ರೀತಿಮಾನ್ಸ ಕುರುಶ್ರೇಷ್ಠಃ ಖಾನಯಾಮಾಸ ತಂ ನಿಧಿಮ್।।

ವಿಚಿತ್ರ ಪುಷ್ಪಗಳಿಂದ, ಅಪೂಪಗಳಿಂದ ಮತ್ತು ಎಳ್ಳನ್ನದಿಂದ ಧನಾಧ್ಯಕ್ಷನನ್ನೂ, ಶಂಖಗಳೇ ಮೊದಲಾದ ನಿಧಿಗಳನ್ನೂ, ಸರ್ವ ನಿಧಿಪಾಲಕರನ್ನೂ ನಮಸ್ಕರಿಸಿ ಪೂಜಿಸಿ, ದ್ವಿಜಾಗ್ರರನ್ನೂ ಅರ್ಚಿಸಿ, ಅವರ ಸ್ವಸ್ತಿವಾಚನ-ಪುಣ್ಯಾಹಘೋಷಗಳೊಂದಿಗೆ, ತೇಜೋನ್ವಿತನಾಗಿ ವೀರ್ಯವಾನ್ ಕುರುಶ್ರೇಷ್ಠ ಯುಧಿಷ್ಠಿರನು ಪ್ರೀತಮನಸ್ಕನಾಗಿ ಆ ನಿಧಿಯನ್ನು ಅಗೆಯತೊಡಗಿದನು.

14064012a ತತಃ ಪಾತ್ರ್ಯಃ ಸಕರಕಾಃ ಸಾಶ್ಮಂತಕಮನೋರಮಾಃ।
14064012c ಭೃಂಗಾರಾಣಿ ಕಟಾಹಾನಿ ಕಲಶಾನ್ವರ್ಧಮಾನಕಾನ್।।
14064013a ಬಹೂನಿ ಚ ವಿಚಿತ್ರಾಣಿ ಭಾಜನಾನಿ ಸಹಸ್ರಶಃ।
14064013c ಉದ್ಧಾರಯಾಮಾಸ ತದಾ ಧರ್ಮರಾಜೋ ಯುಧಿಷ್ಠಿರಃ।।

ಆಗ ಧರ್ಮರಾಜ ಯುಧಿಷ್ಠಿರನು ಸಹಸ್ರಾರು ಬಹು ಆಕಾರಗಳ ಮನೋಹರ ದೊಡ್ಡ ಮತ್ತು ಸಣ್ಣ ಪಾತ್ರೆಗಳನ್ನೂ, ತಂಬಿಗೆಗಳನ್ನೂ, ಸುವರ್ಣಮಯ ಕಡಾಯಿ-ಕಲಶ-ಶರಾವೆಗಳನ್ನೂ ಮೇಲೆತ್ತಿದನು,

14064014a ತೇಷಾಂ ಲಕ್ಷಣಮಪ್ಯಾಸೀನ್ಮಹಾನ್ಕರಪುಟಸ್ತಥಾ।
14064014c ತ್ರಿಲಕ್ಷಂ ಭಾಜನಂ ರಾಜಂಸ್ತುಲಾರ್ಧಮಭವನ್ನೃಪ।।

ರಕ್ಷಣೆಗಾಗಿ ಅವುಗಳನ್ನು ಮಹಾ ಸಂದೂಕಗಳಲ್ಲಿ ಇಟ್ಟರು. ರಾಜನ್! ನೃಪ! ಅಂಥಹ ಕೆಲವು ಸಂದೂಕಗಳನ್ನು ಮರದ ದೊಣ್ಣೆಯ ಎರಡೂ ತುದಿಗಳಿಗೆ ಕಟ್ಟಿ ಎತ್ತಿ ತೆಗೆಯುತ್ತಿದ್ದರು.

14064015a ವಾಹನಂ ಪಾಂಡುಪುತ್ರಸ್ಯ ತತ್ರಾಸೀತ್ತು ವಿಶಾಂ ಪತೇ।
14064015c ಷಷ್ಟಿರುಷ್ಟ್ರಸಹಸ್ರಾಣಿ ಶತಾನಿ ದ್ವಿಗುಣಾ ಹಯಾಃ।।

ವಿಶಾಂಪತೇ! ಅವುಗಳನ್ನು ಕೊಂಡೊಯ್ಯಲು ಪಾಂಡುಪುತ್ರನ ಅರವತ್ತು ಲಕ್ಷ ಒಂಟೆಗಳೂ, ಒಂದು ಕೋಟಿ ಎಪ್ಪತ್ತು ಲಕ್ಷ ಕುದುರೆಗಳೂ ಅಲ್ಲಿ ಸಿದ್ಧವಾಗಿದ್ದವು.

14064016a ವಾರಣಾಶ್ಚ ಮಹಾರಾಜ ಸಹಸ್ರಶತಸಂಮಿತಾಃ।
14064016c ಶಕಟಾನಿ ರಥಾಶ್ಚೈವ ತಾವದೇವ ಕರೇಣವಃ।
14064016e ಖರಾಣಾಂ ಪುರುಷಾಣಾಂ ಚ ಪರಿಸಂಖ್ಯಾ ನ ವಿದ್ಯತೇ।।

ಮಹಾರಾಜ! ಒಂದು ಲಕ್ಷ ಆನೆಗಳೂ, ಒಂದು ಲಕ್ಷ ಬಂಡಿಗಳೂ, ಒಂದು ಲಕ್ಷ ರಥಗಳೂ, ಒಂದು ಲಕ್ಷ ಹೆಣ್ಣಾನೆಗಳೂ, ಮತ್ತು ಲೆಕ್ಕವಿಲ್ಲದಷ್ಟು ಕತ್ತೆಗಳೂ, ಮನುಷ್ಯರೂ ಅಲ್ಲಿದ್ದರು1.

14064017a ಏತದ್ವಿತ್ತಂ ತದಭವದ್ಯದುದ್ದಧ್ರೇ ಯುಧಿಷ್ಠಿರಃ।
14064017c ಷೋಡಶಾಷ್ಟೌ ಚತುರ್ವಿಂಶತ್ಸಹಸ್ರಂ ಭಾರಲಕ್ಷಣಮ್।।

ಆಗ ಯುಧಿಷ್ಠಿರನಿಗೆ ದೊರಕಿದ ಆ ವಿತ್ತದ ಪ್ರಮಾಣವು ೧೬ ಕೋಟಿ ೮ ಲಕ್ಷ ೨೪ ಸಾವಿರ ಭಾರ2 ಅಳತೆಯಾಗಿತ್ತು.

14064018a ಏತೇಷ್ವಾಧಾಯ ತದ್ದ್ರವ್ಯಂ ಪುನರಭ್ಯರ್ಚ್ಯ ಪಾಂಡವಃ।
14064018c ಮಹಾದೇವಂ ಪ್ರತಿ ಯಯೌ ಪುರಂ ನಾಗಾಹ್ವಯಂ ಪ್ರತಿ।।

ಈ ದ್ರವ್ಯಗಳನ್ನು ಪಡೆದುಕೊಂಡು ಪಾಂಡವನು ಪುನಃ ಮಹಾದೇವನನ್ನು ಅರ್ಚಿಸಿ, ಮರಳಿ ನಾಗಾಹ್ವಯ ಪುರದ ಕಡೆ ಪ್ರಯಾಣಿಸಿದನು.

14064019a ದ್ವೈಪಾಯನಾಭ್ಯನುಜ್ಞಾತಃ ಪುರಸ್ಕೃತ್ಯ ಪುರೋಹಿತಮ್।
14064019c ಗೋಯುತೇ ಗೋಯುತೇ ಚೈವ ನ್ಯವಸತ್ ಪುರುಷರ್ಷಭಃ।।

ದ್ವೈಪಾಯನನ ಅನುಮತಿಯನ್ನು ಪಡೆದು ಪುರೋಹಿತನನ್ನು ಮುಂದಿರಿಸಿಕೊಂಡು ಆ ಪುರುಷರ್ಷಭನು ಪ್ರತಿ ಗಾವುದ3 ದೂರದಲ್ಲಿಯೂ ವಿಶ್ರಾಂತಿಗಾಗಿ ಬೀಡು ಬಿಡುತ್ತಿದ್ದನು.

14064020a ಸಾ ಪುರಾಭಿಮುಖೀ ರಾಜನ್ಜಗಾಮ ಮಹತೀ ಚಮೂಃ।
14064020c ಕೃಚ್ಚ್ರಾದ್ದ್ರವಿಣಭಾರಾರ್ತಾ ಹರ್ಷಯಂತೀ ಕುರೂದ್ವಹಾನ್।।

ರಾಜನ್! ದ್ರವ್ಯಧನದ ಭಾರದಿಂದ ಪೀಡಿತರಾಗಿದ್ದರೂ ಆ ಮಹಾ ಸೇನೆಯು ಕುರೂದ್ವಹರನ್ನು ಹರ್ಷಗೊಳಿಸುತ್ತಾ ಪುರಾಭಿಮುಖವಾಗಿ ಪ್ರಯಾಣಬೆಳೆಸಿತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ದ್ರವ್ಯಾನಯನೇ ಚತುಃಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ದ್ರವ್ಯಾನಯನ ಎನ್ನುವ ಅರವತ್ನಾಲ್ಕನೇ ಅಧ್ಯಾಯವು.


  1. ಭಾರ ಲಕ್ಷಣಗಳನ್ನು ತಿಳಿದವರ ಪ್ರಕಾರ ಒಂದು ಒಂಟೆಯು 16000 ಸುವರ್ಣವನ್ನು ಹೊರುತ್ತದೆ. ಈ ಪ್ರಮಾಣವು ಕುದುರೆಗೆ 8000, ಆನೆ-ಗಾಡಿಗಳಿಗೆ 24000. ↩︎

  2. ಚಿನ್ನದ ಭಾರದ ಅಳತೆಯು ಈ ಪ್ರಕಾರವಾಗಿದೆ: ೫ ಗುಲಗುಂಜಿಗಳ ತೂಕ=೧ ಆರ್ಯಮಾಪಕ. 16 ಆರ್ಯಮಾಪಕ=1 ಪಲ. 100 ಪಲಗಳು=1 ತುಲಾ. 20 ತುಲಗಳು=1 ಭಾರ. ↩︎

  3. ಒಂದು ಗಾವುದ=4 ಮೈಲುಗಳು ↩︎