ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 63
ಸಾರ
ಪಾಂಡವರು ನಿಧಿಯ ಬಳಿ ಬೀಡುಬಿಟ್ಟಿದುದು (1-17).
14063001 ವೈಶಂಪಾಯನ ಉವಾಚ
14063001a ತತಸ್ತೇ ಪ್ರಯಯುರ್ಹೃಷ್ಟಾಃ ಪ್ರಹೃಷ್ಟನರವಾಹನಾಃ।
14063001c ರಥಘೋಷೇಣ ಮಹತಾ ಪೂರಯಂತೋ ವಸುಂಧರಾಮ್।।
ವೈಶಂಪಾಯನನು ಹೇಳಿದನು: “ಅನಂತರ ಸಂತೋಷದಿಂದ ಅವರು ಹರ್ಷಿತ ನರ-ವಾಹನಗಳೊಂದಿಗೆ ಮಹಾ ರಥಘೋಷಗಳಿಂದ ಭೂಮಿಯನ್ನು ಮೊಳಗಿಸುತ್ತಾ ಪ್ರಯಾಣಿಸಿದರು.
14063002a ಸಂಸ್ತೂಯಮಾನಾಃ ಸ್ತುತಿಭಿಃ ಸೂತಮಾಗಧಬಂದಿಭಿಃ।
14063002c ಸ್ವೇನ ಸೈನ್ಯೇನ ಸಂವೀತಾ ಯಥಾದಿತ್ಯಾಃ ಸ್ವರಶ್ಮಿಭಿಃ।।
ಸೂತ-ಮಾಗಧ-ಬಂದಿಗಳು ಸ್ತುತಿಗಳಿಂದ ಪ್ರಶಂಸಿಸುತ್ತಿರಲು ಪಾಂಡವರು ಆದಿತ್ಯರು ತಮ್ಮ ಕಿರಣಗಳಿಂದ ಪ್ರಕಾಶಿಸುವಂತೆ ತಮ್ಮ ಸೈನ್ಯಗಳಿಂದ ಆವೃತರಾಗಿ ಪ್ರಕಾಶಿಸುತ್ತಿದ್ದರು.
14063003a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ।
14063003c ಬಭೌ ಯುಧಿಷ್ಠಿರಸ್ತತ್ರ ಪೌರ್ಣಮಾಸ್ಯಾಮಿವೋಡುರಾಟ್।।
ನೆತ್ತಿಯ ಮೇಲೆ ಬೆಳ್ಗೊಡೆಯನ್ನು ಧರಿಸಿದ್ದ ಯುಧಿಷ್ಠಿರನು ಆಗ ಹುಣ್ಣಿಮೆಯಂದು ಬೆಳದಿಂಗಳಿನಿಂದ ಆವೃತನಾದ ಚಂದ್ರನಂತೆಯೇ ಶೋಭಿಸುತ್ತಿದ್ದನು.
14063004a ಜಯಾಶಿಷಃ ಪ್ರಹೃಷ್ಟಾನಾಂ ನರಾಣಾಂ ಪಥಿ ಪಾಂಡವಃ।
14063004c ಪ್ರತ್ಯಗೃಹ್ಣಾದ್ಯಥಾನ್ಯಾಯಂ ಯಥಾವತ್ಪುರುಷರ್ಷಭಃ।।
ಮಾರ್ಗದಲ್ಲಿ ಆ ಪುರುಷರ್ಷಭ ಪಾಂಡವನು ಪ್ರಹೃಷ್ಟ ಜನರು ನ್ಯಾಯೋಚಿತವಾಗಿ ಮಾಡುತ್ತಿದ್ದ ಜಯಕಾರ-ಆಶೀರ್ವಾದಗಳನ್ನು ಯಥಾವತ್ತಾಗಿ ಸ್ವೀಕರಿಸಿದನು.
14063005a ತಥೈವ ಸೈನಿಕಾ ರಾಜನ್ರಾಜಾನಮನುಯಾಂತಿ ಯೇ।
14063005c ತೇಷಾಂ ಹಲಹಲಾಶಬ್ದೋ ದಿವಂ ಸ್ತಬ್ಧ್ವಾ ವ್ಯತಿಷ್ಠತ।।
ರಾಜನ್! ರಾಜನನ್ನು ಅನುಸರಿಸಿ ಹೋಗುತ್ತಿದ್ದ ಸೈನಿಕರ ಹಲಾಹಲ ಶಬ್ಧವು ಆಕಾಶವನ್ನು ಸ್ತಬ್ಧಗೊಳಿಸುತ್ತಿತ್ತು.
14063006a ಸ ಸರಾಂಸಿ ನದೀಶ್ಚೈವ ವನಾನ್ಯುಪವನಾನಿ ಚ।
14063006c ಅತ್ಯಕ್ರಾಮನ್ಮಹಾರಾಜೋ ಗಿರಿಂ ಚೈವಾನ್ವಪದ್ಯತ।।
ವನ-ಉಪವನ-ನದಿ-ಸರೋವರಗಳನ್ನು ದಾಟಿ ಮಹಾರಾಜನು ಗಿರಿಯನ್ನು ತಲುಪಿದನು.
14063007a ತಸ್ಮಿನ್ದೇಶೇ ಚ ರಾಜೇಂದ್ರ ಯತ್ರ ತದ್ದ್ರವ್ಯಮುತ್ತಮಮ್।
14063007c ಚಕ್ರೇ ನಿವೇಶನಂ ರಾಜಾ ಪಾಂಡವಃ ಸಹ ಸೈನಿಕೈಃ।
14063007e ಶಿವೇ ದೇಶೇ ಸಮೇ ಚೈವ ತದಾ ಭರತಸತ್ತಮ।।
14063008a ಅಗ್ರತೋ ಬ್ರಾಹ್ಮಣಾನ್ಕೃತ್ವಾ ತಪೋವಿದ್ಯಾದಮಾನ್ವಿತಾನ್।
14063008c ಪುರೋಹಿತಂ ಚ ಕೌರವ್ಯ ವೇದವೇದಾಂಗಪಾರಗಮ್।।
ರಾಜೇಂದ್ರ! ಭರತಸತ್ತಮ! ಕೌರವ್ಯ! ಯಾವ ಪ್ರದೇಶದಲ್ಲಿ ಆ ಉತ್ತಮ ದ್ರವ್ಯವಿತ್ತೋ ಅಲ್ಲಿ ಶುಭಕರ ಸಮತಟ್ಟು ಪ್ರದೇಶದಲ್ಲಿ ರಾಜಾ ಪಾಂಡವನು ತಪಸ್ಸು-ವಿದ್ಯೆ-ಇಂದ್ರಿಯನಿಗ್ರಹಗಳಿಂದ ಯುಕ್ತರಾದ ಬ್ರಾಹ್ಮಣರನ್ನೂ ವೇದವೇದಾಂಗಪಾರಗ ಪುರೋಹಿತನನ್ನೂ ಮುಂದೆ ಮಾಡಿಕೊಂಡು ಸೈನಿಕರೊಂದಿಗೆ ಬಿಡಾರಹೂಡಿದನು.
14063009a ಪ್ರಾಙ್ನಿವೇಶಾತ್ತು ರಾಜಾನಂ ಬ್ರಾಹ್ಮಣಾಃ ಸಪುರೋಧಸಃ।
14063009c ಕೃತ್ವಾ ಶಾಂತಿಂ ಯಥಾನ್ಯಾಯಂ ಸರ್ವತಃ ಪರ್ಯವಾರಯನ್।।
ಪುರೋಹಿತ ಸಹಿತ ಬ್ರಾಹ್ಮಣರು ಮೊದಲು ಶಾಂತಿಕರ್ಮಗಳನ್ನು ಮಾಡಿ ಯಥಾನ್ಯಾಯವಾಗಿ ರಾಜಾ ಯುಧಿಷ್ಠಿರನ ಬಿಡಾರವನ್ನು ಸುತ್ತುವರೆದು ಉಳಿದುಕೊಂಡರು.
14063010a ಕೃತ್ವಾ ಚ ಮಧ್ಯೇ ರಾಜಾನಮಮಾತ್ಯಾಂಶ್ಚ ಯಥಾವಿಧಿ।
14063010c ಷಟ್ಪಥಂ ನವಸಂಸ್ಥಾನಂ ನಿವೇಶಂ ಚಕ್ರಿರೇ ದ್ವಿಜಾಃ।।
ಯಥಾವಿಧಿಯಾಗಿ ರಾಜನನ್ನೂ ಅಮಾತ್ಯರನ್ನೂ ಮಧ್ಯದಲ್ಲಿರಿಸಿ ದ್ವಿಜರು ಆರು ಮಾರ್ಗಗಳಲ್ಲಿ ಒಂಭತ್ತು ನಿವೇಶನಗಳ ಗುಂಪುಗಳನ್ನು ರಚಿಸಿದರು.
14063011a ಮತ್ತಾನಾಂ ವಾರಣೇಂದ್ರಾಣಾಂ ನಿವೇಶಂ ಚ ಯಥಾವಿಧಿ।
14063011c ಕಾರಯಿತ್ವಾ ಸ ರಾಜೇಂದ್ರೋ ಬ್ರಾಹ್ಮಣಾನಿದಮಬ್ರವೀತ್।।
ಮದಿಸಿದ ಆನೆಗಳಿಗೂ ಯಥಾವಿಧಿಯಾಗಿ ನಿವೇಶನಗಳನ್ನು ನಿರ್ಮಿಸಿ ರಾಜೇಂದ್ರನು ಬ್ರಾಹ್ಮಣರಿಗೆ ಇಂತೆಂದನು:
14063012a ಅಸ್ಮಿನ್ಕಾರ್ಯೇ ದ್ವಿಜಶ್ರೇಷ್ಠಾ ನಕ್ಷತ್ರೇ ದಿವಸೇ ಶುಭೇ।
14063012c ಯಥಾ ಭವಂತೋ ಮನ್ಯಂತೇ ಕರ್ತುಮರ್ಹಥ ತತ್ತಥಾ।।
“ದ್ವಿಜಶ್ರೇಷ್ಠರೇ! ಈ ಕಾರ್ಯವನ್ನು ಯಾವ ಶುಭ ನಕ್ಷತ್ರ-ದಿನದಲ್ಲಿ ಮಾಡಬೇಕೆಂದು ನೀವು ಅಭಿಪ್ರಾಯಪಡುತ್ತೀರೋ ಆಗಲೇ ಮಾಡಬೇಕು.
14063013a ನ ನಃ ಕಾಲಾತ್ಯಯೋ ವೈ ಸ್ಯಾದಿಹೈವ ಪರಿಲಂಬತಾಮ್।
14063013c ಇತಿ ನಿಶ್ಚಿತ್ಯ ವಿಪ್ರೇಂದ್ರಾಃ ಕ್ರಿಯತಾಂ ಯದನಂತರಮ್।।
ವಿಪ್ರೇಂದ್ರರೇ! ಇಲ್ಲಿಯೇ ಹೆಚ್ಚು ಸಮಯ ಉಳಿಯುವಂತಾಗಿ ನಮ್ಮ ಕಾಲವು ವ್ಯರ್ಥವಾಗದ ರೀತಿಯಲ್ಲಿ ನಂತರದ ಕರ್ಮಗಳನ್ನು ಮಾಡಬೇಕು.”
14063014a ಶ್ರುತ್ವೈತದ್ವಚನಂ ರಾಜ್ಞೋ ಬ್ರಾಹ್ಮಣಾಃ ಸಪುರೋಧಸಃ।
14063014c ಇದಮೂಚುರ್ವಚೋ ಹೃಷ್ಟಾ ಧರ್ಮರಾಜಪ್ರಿಯೇಪ್ಸವಃ।।
ರಾಜನ ಆ ಮಾತನ್ನು ಕೇಳಿದ ಪುರೋಹಿತನೊಡಗೂಡಿದ ಬ್ರಾಹ್ಮಣರು ಹೃಷ್ಟರಾಗಿ ಧರ್ಮರಾಜನ ಪ್ರಿಯವನ್ನೇ ಬಯಸಿ ಈ ಮಾತುಗಳನ್ನಾಡಿದರು:
14063015a ಅದ್ಯೈವ ನಕ್ಷತ್ರಮಹಶ್ಚ ಪುಣ್ಯಂ ಯತಾಮಹೇ ಶ್ರೇಷ್ಠತಮಂ ಕ್ರಿಯಾಸು।
14063015c ಅಂಭೋಭಿರದ್ಯೇಹ ವಸಾಮ ರಾಜನ್ ಉಪೋಷ್ಯತಾಂ ಚಾಪಿ ಭವದ್ಭಿರದ್ಯ।।
“ರಾಜನ್! ಇಂದೇ ಪವಿತ್ರ ನಕ್ಷತ್ರ ಮತ್ತು ಪುಣ್ಯ ದಿನವಾಗಿದೆ. ಆದುದರಿಂದ ಇಂದಿನಿಂದಲೇ ನಾವು ಶ್ರೇಷ್ಠತಮ ಕ್ರಿಯೆಗಳನ್ನು ಮಾಡಲು ಪ್ರಯತ್ನಿಸುತ್ತೇವೆ. ಇಂದು ನಾವು ಕೇವಲ ನೀರನ್ನು ಕುಡಿಯುತ್ತೇವೆ. ನೀನೂ ಕೂಡ ಇಂದು ಉಪವಾಸದಿಂದಿರಬೇಕು.”
14063016a ಶ್ರುತ್ವಾ ತು ತೇಷಾಂ ದ್ವಿಜಸತ್ತಮಾನಾಂ ಕೃತೋಪವಾಸಾ ರಜನೀಂ ನರೇಂದ್ರಾಃ।
14063016c ಊಷುಃ ಪ್ರತೀತಾಃ ಕುಶಸಂಸ್ತರೇಷು ಯಥಾಧ್ವರೇಷು ಜ್ವಲಿತಾ ಹವ್ಯವಾಹಾಃ।।
ದ್ವಿಜಸತ್ತಮರ ಆ ಮಾತನ್ನು ಕೇಳಿ ನರೇಂದ್ರರು ಉಪವಾಸದಲ್ಲಿದ್ದುಕೊಂಡು ದರ್ಭೆಯ ಹಾಸಿನ ಮೇಲೆ ಮಲಗಿ ಆ ರಾತ್ರಿಯನ್ನು ಕಳೆದರು. ಆಗ ಅವರು ಯಜ್ಞದಲ್ಲಿ ಪ್ರಜ್ವಲಿಸುವ ಹವ್ಯವಾಹನರಂತೆಯೇ ಕಾಣುತ್ತಿದ್ದರು.
14063017a ತತೋ ನಿಶಾ ಸಾ ವ್ಯಗಮನ್ಮಹಾತ್ಮನಾಂ ಸಂಶೃಣ್ವತಾಂ ವಿಪ್ರಸಮೀರಿತಾ ಗಿರಃ।
14063017c ತತಃ ಪ್ರಭಾತೇ ವಿಮಲೇ ದ್ವಿಜರ್ಷಭಾ ವಚೋಽಬ್ರುವನ್ಧರ್ಮಸುತಂ ನರಾಧಿಪಮ್।।
ವಿಪ್ರರ ಸುಮಧುರ ಮಾತುಗಳನ್ನು ಕೇಳುತ್ತಲೇ ಮಹಾತ್ಮರಿಗೆ ಆ ರಾತ್ರಿಯು ಕಳೆದು ಹೋಯಿತು. ನಿರ್ಮಲ ಪ್ರಭಾತವಾಗಲು ದ್ವಿಜರ್ಷಭರು ನರಾಧಿಪ ಧರ್ಮಸುತನಿಗೆ ಈ ಮಾತುಗಳನ್ನಾಡಿದರು.
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ದ್ರವ್ಯಾನಯನೋಪಕ್ರಮೇ ತ್ರಿಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ದ್ರವ್ಯಾನಯನೋಪಕ್ರಮ ಎನ್ನುವ ಅರವತ್ಮೂರನೇ ಅಧ್ಯಾಯವು.