ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 62
ಸಾರ
ಮರುತ್ತನಿಧಿಯ ಕುರಿತು ಸಮಾಲೋಚನೆಗೈದು ಪಾಂಡವರು ಅದನ್ನು ತರಲು ನಿಶ್ಚಯಿಸಿದುದು (1-16). ನಿಧಿಯನ್ನು ತರಲು ಪಾಂಡವರು ಪ್ರಯಾಣಿಸಿದುದು (17-23).
14062001 ಜನಮೇಜಯ ಉವಾಚ
14062001a ಶ್ರುತ್ವೈತದ್ವಚನಂ ಬ್ರಹ್ಮನ್ವ್ಯಾಸೇನೋಕ್ತಂ ಮಹಾತ್ಮನಾ।
14062001c ಅಶ್ವಮೇಧಂ ಪ್ರತಿ ತದಾ ಕಿಂ ನೃಪಃ ಪ್ರಚಕಾರ ಹ।।
ಜನಮೇಜಯನು ಹೇಳಿದನು: “ಬ್ರಹ್ಮನ್! ಮಹಾತ್ಮ ವ್ಯಾಸನಾಡಿದ ಆ ಮಾತುಗಳನ್ನು ಕೇಳಿದ ನೃಪನು ಅಶ್ವಮೇಧದ ಕುರಿತು ಏನನ್ನು ನಡೆಸಿದನು?
14062002a ರತ್ನಂ ಚ ಯನ್ಮರುತ್ತೇನ ನಿಹಿತಂ ಪೃಥಿವೀತಲೇ।
14062002c ತದವಾಪ ಕಥಂ ಚೇತಿ ತನ್ಮೇ ಬ್ರೂಹಿ ದ್ವಿಜೋತ್ತಮ।।
ದ್ವಿಜೋತ್ತಮ! ಮರುತ್ತನು ಪೃಥ್ವಿಯೊಳಗೆ ಹುದುಗಿಸಿಟ್ಟಿದ್ದ ರತ್ನಗಳನ್ನು ಅವನು ಹೇಗೆ ಪಡೆದುಕೊಂಡನು ಎನ್ನುವುದನ್ನು ನನಗೆ ಹೇಳು.”
14062003 ವೈಶಂಪಾಯನ ಉವಾಚ
14062003a ಶ್ರುತ್ವಾ ದ್ವೈಪಾಯನವಚೋ ಧರ್ಮರಾಜೋ ಯುಧಿಷ್ಠಿರಃ।
14062003c ಭ್ರಾತೄನ್ಸರ್ವಾನ್ಸಮಾನಾಯ್ಯ ಕಾಲೇ ವಚನಮಬ್ರವೀತ್।
14062003e ಅರ್ಜುನಂ ಭೀಮಸೇನಂ ಚ ಮಾದ್ರೀಪುತ್ರೌ ಯಮಾವಪಿ।।
ವೈಶಂಪಾಯನನು ಹೇಳಿದನು: “ದ್ವೈಪಾಯನನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ತನ್ನ ಸಹೋದರರೆಲ್ಲರನ್ನೂ - ಅರ್ಜುನ, ಭೀಮಸೇನ ಮತ್ತು ಮಾದ್ರೀಪುತ್ರ ಯಮಳರನ್ನು – ಕರೆಯಿಸಿ ಕಾಲೋಚಿತವಾದ ಈ ಮಾತುಗಳನ್ನಾಡಿದನು.
14062004a ಶ್ರುತಂ ವೋ ವಚನಂ ವೀರಾಃ ಸೌಹೃದಾದ್ಯನ್ಮಹಾತ್ಮನಾ।
14062004c ಕುರೂಣಾಂ ಹಿತಕಾಮೇನ ಪ್ರೋಕ್ತಂ ಕೃಷ್ಣೇನ ಧೀಮತಾ।।
“ವೀರರೇ! ಧೀಮಂತ ಮಹಾತ್ಮ ಕೃಷ್ಣನು ಕುರುಗಳ ಹಿತಕಾಮ ಮತ್ತು ಸೌಹಾರ್ದತೆಗಳಿಂದ ಹೇಳಿದ ಈ ಮಾತುಗಳನ್ನು ನಾವು ಕೇಳಿದೆವು.
14062005a ತಪೋವೃದ್ಧೇನ ಮಹತಾ ಸುಹೃದಾಂ ಭೂತಿಮಿಚ್ಚತಾ।
14062005c ಗುರುಣಾ ಧರ್ಮಶೀಲೇನ ವ್ಯಾಸೇನಾದ್ಭುತಕರ್ಮಣಾ।।
14062006a ಭೀಷ್ಮೇಣ ಚ ಮಹಾಪ್ರಾಜ್ಞ ಗೋವಿಂದೇನ ಚ ಧೀಮತಾ।
14062006c ಸಂಸ್ಮೃತ್ಯ ತದಹಂ ಸಮ್ಯಕ್ಕರ್ತುಮಿಚ್ಚಾಮಿ ಪಾಂಡವಾಃ।।
ಪಾಂಡವರೇ! ಸುಹೃದಯರ ಅಭ್ಯುದಯವನ್ನೇ ಬಯಸುವ ಮಹಾ ತಪೋವೃದ್ಧ ಧರ್ಮಶೀಲ ಗುರು ಅದ್ಭುತಕರ್ಮಿ ವ್ಯಾಸ, ಮಹಾಪ್ರಾಜ್ಞ ಬೀಷ್ಮ ಮತ್ತು ಧೀಮಂತ ಗೋವಿಂದ ಇವರು ನೀಡಿರುವ ಸಲಹೆಗಳನ್ನು ಸ್ಮರಿಸಿ, ಅವುಗಳನ್ನು ಕಾರ್ಯರೂಪದಲ್ಲಿ ತರಲು ಇಚ್ಛಿಸಿದ್ದೇನೆ.
14062007a ಆಯತ್ಯಾಂ ಚ ತದಾತ್ವೇ ಚ ಸರ್ವೇಷಾಂ ತದ್ಧಿ ನೋ ಹಿತಮ್।
14062007c ಅನುಬಂಧೇ ಚ ಕಲ್ಯಾಣಂ ಯದ್ವಚೋ ಬ್ರಹ್ಮವಾದಿನಃ।।
ಅವರು ನೀಡಿದ ಸಲಹೆಗಳೆಲ್ಲವೂ ನಮಗೆ ಭವಿಷ್ಯ-ವರ್ತಮಾನಗಳೆರಡರಲ್ಲೂ ಹಿತವನ್ನೇ ಉಂಟುಮಾಡುತ್ತವೆ. ಬ್ರಹ್ಮವಾದಿ ವ್ಯಾಸನು ಹೇಳಿದಂತೆ ಮಾಡುವುದರಲ್ಲಿ ನಮ್ಮ ಕಲ್ಯಾಣವಿದೆ.
14062008a ಇಯಂ ಹಿ ವಸುಧಾ ಸರ್ವಾ ಕ್ಷೀಣರತ್ನಾ ಕುರೂದ್ವಹಾಃ।
14062008c ತಚ್ಚಾಚಷ್ಟ ಬಹು ವ್ಯಾಸೋ ಮರುತ್ತಸ್ಯ ಧನಂ ನೃಪಾಃ।।
ಕುರೂದ್ವಹರೇ! ಈ ಸಮಯದಲ್ಲಿ ಭೂಮಂಡಲದಲ್ಲಿರುವ ಎಲ್ಲ ರಾಜ್ಯಗಳೂ ಐಶ್ವರ್ಯರಹಿತವಾಗಿವೆ. ಆದುದರಿಂದ ವ್ಯಾಸನು ಮರುತ್ತನ ಬಹು ಧನದ ಕುರಿತಾಗಿ ಹೇಳಿದ್ದನು.
14062009a ಯದ್ಯೇತದ್ವೋ ಬಹುಮತಂ ಮನ್ಯಧ್ವಂ ವಾ ಕ್ಷಮಂ ಯದಿ।
14062009c ತದಾನಯಾಮಹೇ ಸರ್ವೇ ಕಥಂ ವಾ ಭೀಮ ಮನ್ಯಸೇ।।
ನೀವೆಲ್ಲರೂ ಮರುತ್ತನು ಇಟ್ಟಿರುವ ಐಶ್ವರ್ಯವು ಸಾಕೆಂದು ಮತ್ತು ಅದನ್ನು ತರುವ ಸಾಮರ್ಥ್ಯವಿರುವುದೆಂದು ತಿಳಿದರೆ ಅದನ್ನು ನಾವು ತರೋಣ. ಭೀಮ! ಈ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು?”
14062010a ಇತ್ಯುಕ್ತವಾಕ್ಯೇ ನೃಪತೌ ತದಾ ಕುರುಕುಲೋದ್ವಹ।
14062010c ಭೀಮಸೇನೋ ನೃಪಶ್ರೇಷ್ಠಂ ಪ್ರಾಂಜಲಿರ್ವಾಕ್ಯಮಬ್ರವೀತ್।।
ಕುರುಕುಲೋದ್ವಹ! ನೃಪತಿಯು ಹೀಗೆ ಹೇಳಲು ಭೀಮಸೇನನು ಕೈಮುಗಿದು ನೃಪಶ್ರೇಷ್ಠನಿಗೆ ಇಂತೆಂದನು:
14062011a ರೋಚತೇ ಮೇ ಮಹಾಬಾಹೋ ಯದಿದಂ ಭಾಷಿತಂ ತ್ವಯಾ।
14062011c ವ್ಯಾಸಾಖ್ಯಾತಸ್ಯ ವಿತ್ತಸ್ಯ ಸಮುಪಾನಯನಂ ಪ್ರತಿ।।
“ಮಹಾಬಾಹೋ! ವ್ಯಾಸನು ಹೇಳಿದ ವಿತ್ತವನ್ನು ತರುವುದರ ಕುರಿತಾಗಿ ನೀನು ಹೇಳಿದ ಮಾತುಗಳು ನನಗೆ ರುಚಿಸಿವೆ.
14062012a ಯದಿ ತತ್ಪ್ರಾಪ್ನುಯಾಮೇಹ ಧನಮಾವಿಕ್ಷಿತಂ ಪ್ರಭೋ।
14062012c ಕೃತಮೇವ ಮಹಾರಾಜ ಭವೇದಿತಿ ಮತಿರ್ಮಮ।।
ಪ್ರಭೋ! ಮಹಾರಾಜ! ಹುಗಿದಿಟ್ಟಿರುವ ಆ ಧನವನ್ನು ಪಡೆದುಕೊಂಡುದೇ ಆದರೆ ಕಾರ್ಯವು ಆದಂತೆಯೇ ಎಂದು ನನ್ನ ಅಭಿಪ್ರಾಯ.
14062013a ತೇ ವಯಂ ಪ್ರಣಿಪಾತೇನ ಗಿರೀಶಸ್ಯ ಮಹಾತ್ಮನಃ।
14062013c ತದಾನಯಾಮ ಭದ್ರಂ ತೇ ಸಮಭ್ಯರ್ಚ್ಯ ಕಪರ್ದಿನಮ್।।
ಮಹಾತ್ಮ ಗಿರೀಶನಿಗೆ ಶಿರಸಾ ನಮಸ್ಕರಿಸಿ ನಾವು ಆ ಧನವನ್ನು ತರೋಣ. ನಿನಗೆ ಮಂಗಳವಾಗಲಿ! ಕಪರ್ದಿನಿಯನ್ನು ಅರ್ಚಿಸು.
14062014a ತಂ ವಿಭುಂ ದೇವದೇವೇಶಂ ತಸ್ಯೈವಾನುಚರಾಂಶ್ಚ ತಾನ್।
14062014c ಪ್ರಸಾದ್ಯಾರ್ಥಮವಾಪ್ಸ್ಯಾಮೋ ನೂನಂ ವಾಗ್ಬುದ್ಧಿಕರ್ಮಭಿಃ।।
ಮಾತು-ಮನಸ್ಸು-ಕ್ರಿಯೆಗಳ ಮೂಲಕ ಆ ವಿಭು ದೇವದೇವೇಶನನ್ನೂ ಅವನ ಅನುಚರರನ್ನೂ ಪ್ರಸನ್ನಗೊಳಿಸಿ ನಾವು ಆ ಧನವನ್ನು ನಮ್ಮದಾಗಿಸಿಕೊಳ್ಳೋಣ.
14062015a ರಕ್ಷಂತೇ ಯೇ ಚ ತದ್ದ್ರವ್ಯಂ ಕಿಂಕರಾ ರೌದ್ರದರ್ಶನಾಃ।
14062015c ತೇ ಚ ವಶ್ಯಾ ಭವಿಷ್ಯಂತಿ ಪ್ರಸನ್ನೇ ವೃಷಭಧ್ವಜೇ।।
ವೃಷಭದ್ವಜನನ್ನು ಪ್ರಸನ್ನಗೊಳಿಸಿದರೆ ಆ ದ್ರವ್ಯವನ್ನು ರಕ್ಷಿಸುತ್ತಿರುವ ಅವನ ರೌದ್ರದರ್ಶನ ಕಿಂಕರರೂ ನಮ್ಮ ವಶರಾಗುತ್ತಾರೆ.”
14062016a ಶ್ರುತ್ವೈವಂ ವದತಸ್ತಸ್ಯ ವಾಕ್ಯಂ ಭೀಮಸ್ಯ ಭಾರತ।
14062016c ಪ್ರೀತೋ ಧರ್ಮಾತ್ಮಜೋ ರಾಜಾ ಬಭೂವಾತೀವ ಭಾರತ।
14062016e ಅರ್ಜುನಪ್ರಮುಖಾಶ್ಚಾಪಿ ತಥೇತ್ಯೇವಾಬ್ರುವನ್ಮುದಾ।।
ಭಾರತ! ಭೀಮನಾಡಿದ ಆ ಮಾತುಗಳನ್ನು ಕೇಳಿ ರಾಜಾ ಧರ್ಮಾತ್ಮಜನು ಅತೀವ ಹರ್ಷಿತನಾದನು. ಭಾರತ! ಅರ್ಜುನ ಪ್ರಮುಖಾದಿಗಳೂ ಕೂಡ ಸಂತೋಷದಿಂದ ಹಾಗೆಯೇ ಆಗಲೆಂದು ಅನುಮೋದಿಸಿದರು.
14062017a ಕೃತ್ವಾ ತು ಪಾಂಡವಾಃ ಸರ್ವೇ ರತ್ನಾಹರಣನಿಶ್ಚಯಮ್।
14062017c ಸೇನಾಮಾಜ್ಞಾಪಯಾಮಾಸುರ್ನಕ್ಷತ್ರೇಽಹನಿ ಚ ಧ್ರುವೇ।।
ಪಾಂಡವರೆಲ್ಲರೂ ಆ ರತ್ನಗಳನ್ನು ತರಲು ನಿಶ್ಚಯಿಸಿ ಶುಭನಕ್ಷತ್ರದ ಶುಭದಿನದಲ್ಲಿ ಸೇನೆಗಳಿಗೆ ಸಜ್ಜಾಗುವಂತೆ ಆಜ್ಞಾಪಿಸಿದರು.
14062018a ತತೋ ಯಯುಃ ಪಾಂಡುಸುತಾ ಬ್ರಾಹ್ಮಣಾನ್ಸ್ವಸ್ತಿ ವಾಚ್ಯ ಚ।
14062018c ಅರ್ಚಯಿತ್ವಾ ಸುರಶ್ರೇಷ್ಠಂ ಪೂರ್ವಮೇವ ಮಹೇಶ್ವರಮ್।।
ಆಗ ಪಾಂಡುಸುತರು ಎಲ್ಲವಕ್ಕೂ ಮೊದಲು ಸುರಶ್ರೇಷ್ಠ ಮಹೇಶ್ವರನನ್ನು ಅರ್ಚಿಸಿ ಬ್ರಾಹ್ಮಣರ ಸ್ವಸ್ತಿವಾಚನಗಳೊಂದಿಗೆ ಹೊರಟರು.
14062019a ಮೋದಕೈಃ ಪಾಯಸೇನಾಥ ಮಾಂಸಾಪೂಪೈಸ್ತಥೈವ ಚ।
14062019c ಆಶಾಸ್ಯ ಚ ಮಹಾತ್ಮಾನಂ ಪ್ರಯಯುರ್ಮುದಿತಾ ಭೃಶಮ್।।
ಅವರು ಮಹಾತ್ಮ ಮಹೇಶ್ವರನನ್ನು ಮೋದಕ, ಪಾಯಸ, ಮಾಂಸಪೂಪಗಳಿಂದ ತೃಪ್ತಿಪಡಿಸಿ ಅವನ ಆಶೀರ್ವಾದವನ್ನು ಪಡೆದು ಅತ್ಯಂತ ಸಂತೋಷದಿಂದ ಪ್ರಯಾಣಿಸಿದರು.
14062020a ತೇಷಾಂ ಪ್ರಯಾಸ್ಯತಾಂ ತತ್ರ ಮಂಗಲಾನಿ ಶುಭಾನ್ಯಥ।
14062020c ಪ್ರಾಹುಃ ಪ್ರಹೃಷ್ಟಮನಸೋ ದ್ವಿಜಾಗ್ರ್ಯಾ ನಾಗರಾಶ್ಚ ತೇ।।
ಅವರು ಹೊರಟಾಗ ಪ್ರಹೃಷ್ಟಮನಸ್ಕರಾದ ದ್ವಿಜಾಗ್ರರೂ ನಾಗರೀಕರೂ ಅವರಿಗೆ ಶುಭ-ಮಂಗಲಗಳನ್ನು ಕೋರಿದರು.
14062021a ತತಃ ಪ್ರದಕ್ಷಿಣೀಕೃತ್ಯ ಶಿರೋಭಿಃ ಪ್ರಣಿಪತ್ಯ ಚ।
14062021c ಬ್ರಾಹ್ಮಣಾನಗ್ನಿಸಹಿತಾನ್ಪ್ರಯಯುಃ ಪಾಂಡುನಂದನಾಃ।।
ಅಗ್ನಿಸಹಿತ ಬ್ರಾಹ್ಮಣರನ್ನು ಪ್ರದಕ್ಷಿಣೆಮಾಡಿ ಶಿರಬಾಗಿ ನಮಸ್ಕರಿಸಿ ಆ ಪಾಂಡುನಂದನರು ಹೊರಟರು.
14062022a ಸಮನುಜ್ಞಾಪ್ಯ ರಾಜಾನಂ ಪುತ್ರಶೋಕಸಮಾಹತಮ್।
14062022c ಧೃತರಾಷ್ಟ್ರಂ ಸಭಾರ್ಯಂ ವೈ ಪೃಥಾಂ ಪೃಥುಲಲೋಚನಾಮ್।।
ಪುತ್ರಶೋಕದಿಂದ ಬಳಲುತ್ತಿದ್ದ ರಾಜಾ ಧೃತರಾಷ್ಟ್ರ, ಅವನ ಪತ್ನಿ ಮತ್ತು ಪೃಥುಲಲೋಚನೆ ಪೃಥೆಯ ಅನುಜ್ಞೆಯನ್ನು ಅವರು ಪಡೆದಿದ್ದರು.
14062023a ಮೂಲೇ ನಿಕ್ಷಿಪ್ಯ ಕೌರವ್ಯಂ ಯುಯುತ್ಸುಂ ಧೃತರಾಷ್ಟ್ರಜಮ್।
14062023c ಸಂಪೂಜ್ಯಮಾನಾಃ ಪೌರೈಶ್ಚ ಬ್ರಾಹ್ಮಣೈಶ್ಚ ಮನೀಷಿಭಿಃ।।
ಧೃತರಾಷ್ಟ್ರನ ಮಗ ಕೌರವ್ಯ ಯುಯುತ್ಸುವನ್ನು ರಾಜ್ಯದಲ್ಲಿರಿಸಿ, ಪೌರರೂ, ಮನೀಷಿಗಳೂ ಮತ್ತು ಬ್ರಾಹ್ಮಣರೂ ಗೌರವಿಸುತ್ತಿರಲು ಅವರು ಪ್ರಯಾಣಮಾಡಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ದ್ರವ್ಯಾನಯನೋಪಕ್ರಮೇ ದ್ವಿಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ದ್ರವ್ಯಾನಯನೋಪಕ್ರಮ ಎನ್ನುವ ಅರವತ್ತೆರಡನೇ ಅಧ್ಯಾಯವು.