ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 61
ಸಾರ
ವಸುದೇವ-ಕೃಷ್ಣಾದಿಗಳು ಅಭಿಮನ್ಯುವಿನ ಶ್ರಾದ್ಧವನ್ನು ನಡೆಸಿದುದು (1-7). ಪತಿಶೋಕದಿಂದ ಆರ್ತಳಾಗಿ ಊಟವನ್ನೇ ಮಾಡದಿದ್ದ ಉತ್ತರೆಯ ಗರ್ಭವು ಕ್ಷೀಣಿಸುತ್ತಿರುವುದನ್ನು ಅರಿತ ವ್ಯಾಸನು ಕುಂತಿ-ಉತ್ತರೆ ಮತ್ತು ಪಾಂಡವರನ್ನು ಸಂತೈಸಿದುದು (8-19).
14061001 ವೈಶಂಪಾಯನ ಉವಾಚ
14061001a ಏತಚ್ಚ್ರುತ್ವಾ ತು ಪುತ್ರಸ್ಯ ವಚಃ ಶೂರಾತ್ಮಜಸ್ತದಾ।
14061001c ವಿಹಾಯ ಶೋಕಂ ಧರ್ಮಾತ್ಮಾ ದದೌ ಶ್ರಾದ್ಧಮನುತ್ತಮಮ್।।
ವೈಶಂಪಾಯನನು ಹೇಳಿದನು: “ಧರ್ಮಾತ್ಮ ಶೂರಾತ್ಮಜ ವಸುದೇವನು ಮಗ ಕೃಷ್ಣನ ಈ ಮಾತನ್ನು ಕೇಳಿ ಶೋಕವನ್ನು ತೊರೆದು ಅಭಿಮನ್ಯುವಿಗೆ ಅನುತ್ತಮ ಶ್ರಾದ್ಧವನ್ನಿತ್ತನು.
14061002a ತಥೈವ ವಾಸುದೇವೋಽಪಿ ಸ್ವಸ್ರೀಯಸ್ಯ ಮಹಾತ್ಮನಃ।
14061002c ದಯಿತಸ್ಯ ಪಿತುರ್ನಿತ್ಯಮಕರೋದೌರ್ಧ್ವದೇಹಿಕಮ್।।
ಹಾಗೆಯೇ ವಾಸುದೇವ ಕೃಷ್ಣನೂ ಕೂಡ ತಂಗಿಯ ಮಗನಾದ ಮತ್ತು ಅವನ ತಂದೆಗೆ ಪ್ರಿಯನಾಗಿದ್ದ ಮಹಾತ್ಮ ಅಭಿಮನ್ಯುವಿನ ಔರ್ಧ್ವದೈಹಿಕ ಕ್ರಿಯೆಗಳನ್ನು ಮಾಡಿದನು.
14061003a ಷಷ್ಟಿಂ ಶತಸಹಸ್ರಾಣಿ ಬ್ರಾಹ್ಮಣಾನಾಂ ಮಹಾಭುಜಃ।
14061003c ವಿಧಿವದ್ಭೋಜಯಾಮಾಸ ಭೋಜ್ಯಂ ಸರ್ವಗುಣಾನ್ವಿತಮ್।।
ಆ ಮಹಾಭುಜನು ಅರವತ್ತು ಲಕ್ಷ ಬ್ರಾಹ್ಮಣರಿಗೆ ಸರ್ವಗುಣಾನ್ವಿತ ಭೋಜನವನ್ನು ವಿಧಿವತ್ತಾಗಿ ಭೋಜನಮಾಡಿಸಿದನು.
14061004a ಆಚ್ಚಾದ್ಯ ಚ ಮಹಾಬಾಹುರ್ಧನತೃಷ್ಣಾಮಪಾನುದತ್।
14061004c ಬ್ರಾಹ್ಮಣಾನಾಂ ತದಾ ಕೃಷ್ಣಸ್ತದಭೂದ್ರೋಮಹರ್ಷಣಮ್।।
ಆ ಮಹಾಬಾಹುವು ಬ್ರಾಹ್ಮಣರಿಗೆ ವಸ್ತ್ರಗಳನ್ನು ಹೊದ್ದಿಸಿ ಮುಂದೆ ಎಂದೂ ಅವರಿಗೆ ಧನದ ಬಯಕೆಯೇ ಉಂಟಾಗದಂತೆ ಮಾಡಿದನು. ಕೃಷ್ಣನ ಆ ಕಾರ್ಯವು ರೋಮಾಂಚನಕಾರಿಯಾಗಿತ್ತು.
14061005a ಸುವರ್ಣಂ ಚೈವ ಗಾಶ್ಚೈವ ಶಯನಾಚ್ಚಾದನಂ ತಥಾ।
14061005c ದೀಯಮಾನಂ ತದಾ ವಿಪ್ರಾಃ ಪ್ರಭೂತಮಿತಿ ಚಾಬ್ರುವನ್।।
ಸುವರ್ಣ, ಗೋವುಗಳು, ಶಯನ-ವಸ್ತ್ರಗಳನ್ನು ನೀಡುತ್ತಿದ್ದಾಗ ವಿಪ್ರರು “ಹೆಚ್ಚಾಗಲಿ!” ಎಂದು ಆಶೀರ್ವದಿಸುತ್ತಿದ್ದರು.
14061006a ವಾಸುದೇವೋಽಥ ದಾಶಾರ್ಹೋ ಬಲದೇವಃ ಸಸಾತ್ಯಕಿಃ।
14061006c ಅಭಿಮನ್ಯೋಸ್ತದಾ ಶ್ರಾದ್ಧಮಕುರ್ವನ್ಸತ್ಯಕಸ್ತದಾ।
14061006e ಅತೀವ ದುಃಖಸಂತಪ್ತಾ ನ ಶಮಂ ಚೋಪಲೇಭಿರೇ।।
ಅನಂತರ ದಾಶಾರ್ಹ ವಾಸುದೇವ, ಬಲದೇವ, ಸಾತ್ಯಕಿ ಮತ್ತು ಸತ್ಯಕರೂ ಕೂಡ ಅಭಿಮನ್ಯುವಿನ ಶ್ರಾದ್ಧವನ್ನು ನೆರವೇರಿಸಿದರು. ಅತೀವ ದುಃಖಸಂತಪ್ತರಾದ ಅವರಿಗೆ ಶಾಂತಿಯೇ ಇಲ್ಲದಾಗಿತ್ತು.
14061007a ತಥೈವ ಪಾಂಡವಾ ವೀರಾ ನಗರೇ ನಾಗಸಾಹ್ವಯೇ।
14061007c ನೋಪಗಚ್ಚಂತಿ ವೈ ಶಾಂತಿಮಭಿಮನ್ಯುವಿನಾಕೃತಾಃ।।
ಹಾಗೆಯೇ ಹಸ್ತಿನಾಪುರ ನಗರದಲ್ಲಿ ಕೂಡ ವೀರ ಪಾಂಡವರು ಅಭಿಮನ್ಯುವು ಇಲ್ಲದೇ ಶಾಂತಿಯನ್ನು ಪಡೆಯಲಿಲ್ಲ.
14061008a ಸುಬಹೂನಿ ಚ ರಾಜೇಂದ್ರ ದಿವಸಾನಿ ವಿರಾಟಜಾ।
14061008c ನಾಭುಂಕ್ತ ಪತಿಶೋಕಾರ್ತಾ ತದಭೂತ್ಕರುಣಂ ಮಹತ್।
14061008e ಕುಕ್ಷಿಸ್ಥ ಏವ ತಸ್ಯಾಸ್ತು ಸ ಗರ್ಭಃ ಸಂಪ್ರಲೀಯತ।।
ರಾಜೇಂದ್ರ! ಪತಿಶೋಕದಿಂದ ಆರ್ತಳಾಗಿದ್ದ ವಿರಾಟನ ಮಗಳು ಉತ್ತರೆಯು ಅನೇಕ ದಿವಸಗಳು ಊಟವನ್ನೇ ಮಾಡಲಿಲ್ಲ. ಅದೊಂದು ಮಹಾ ಕರುಣಾಜನಕ ವಿಷಯವಾಗಿತ್ತು. ಹಾಗೆಯೇ ಅವಳ ಗರ್ಭದಲ್ಲಿದ್ದ ಭ್ರೂಣವೂ ದಿನ-ದಿನಕ್ಕೆ ಕ್ಷೀಣಿಸತೊಡಗಿತು.
14061009a ಆಜಗಾಮ ತತೋ ವ್ಯಾಸೋ ಜ್ಞಾತ್ವಾ ದಿವ್ಯೇನ ಚಕ್ಷುಷಾ।
14061009c ಆಗಮ್ಯ ಚಾಬ್ರವೀದ್ಧೀಮಾನ್ಪೃಥಾಂ ಪೃಥುಲಲೋಚನಾಮ್।
14061009e ಉತ್ತರಾಂ ಚ ಮಹಾತೇಜಾಃ ಶೋಕಃ ಸಂತ್ಯಜ್ಯತಾಮಯಮ್।।
ತನ್ನ ದಿವ್ಯದೃಷ್ಟಿಯಿಂದ ಇದನ್ನು ತಿಳಿದ ಧೀಮಂತ ಮಹಾತೇಜಸ್ವೀ ವ್ಯಾಸನು ಆಗಮಿಸಿ ಕುಂತಿ ಮತ್ತು ಪೃಥುಲಲೋಚನೆ ಉತ್ತರೆಗೆ ಶೋಕವನ್ನು ಪರಿತ್ಯಜಿಸುವಂತೆ ಹೇಳಿದನು.
14061010a ಜನಿಷ್ಯತಿ ಮಹಾತೇಜಾಃ ಪುತ್ರಸ್ತವ ಯಶಸ್ವಿನಿ।
14061010c ಪ್ರಭಾವಾದ್ವಾಸುದೇವಸ್ಯ ಮಮ ವ್ಯಾಹರಣಾದಪಿ।
14061010e ಪಾಂಡವಾನಾಮಯಂ ಚಾಂತೇ ಪಾಲಯಿಷ್ಯತಿ ಮೇದಿನೀಮ್।।
“ಯಶಸ್ವಿನೀ! ನಿನ್ನಲ್ಲಿ ಮಹಾತೇಜಸ್ವಿಯಾದ ಮಗನು ಹುಟ್ಟುತ್ತಾನೆ. ವಾಸುದೇವನ ಪ್ರಭಾವದಿಂದ ಮತ್ತು ನನ್ನ ಆಶೀರ್ವಾದದಿಂದ ಇವನು ಪಾಂಡವರ ನಂತರ ಮೇದಿನಿಯನ್ನು ಪಾಲಿಸುತ್ತಾನೆ.”
14061011a ಧನಂಜಯಂ ಚ ಸಂಪ್ರೇಕ್ಷ್ಯ ಧರ್ಮರಾಜಸ್ಯ ಪಶ್ಯತಃ।
14061011c ವ್ಯಾಸೋ ವಾಕ್ಯಮುವಾಚೇದಂ ಹರ್ಷಯನ್ನಿವ ಭಾರತ।।
ಭಾರತ! ವ್ಯಾಸನು ಧರ್ಮರಾಜನ ಸಮಕ್ಷಮದಲ್ಲಿ ಧನಂಜಯನನ್ನು ನೋಡಿ ಅವನಿಗೆ ಸಂತೋಷವನ್ನುಂಟುಮಾಡುವಂಥಹ ಮಾತುಗಳನ್ನಾಡಿದನು:
14061012a ಪೌತ್ರಸ್ತವ ಮಹಾಬಾಹೋ ಜನಿಷ್ಯತಿ ಮಹಾಮನಾಃ।
14061012c ಪೃಥ್ವೀಂ ಸಾಗರಪರ್ಯಂತಾಂ ಪಾಲಯಿಷ್ಯತಿ ಚೈವ ಹ।।
“ಮಹಾಬಾಹೋ! ನಿನಗೆ ಮಹಾಮನಸ್ವಿಯಾದ ಮೊಮ್ಮಗನು ಜನಿಸುತ್ತಾನೆ. ಅವನು ಸಾಗರಪರ್ಯಂತ ಈ ಪೃಥ್ವಿಯನ್ನು ಪಾಲಿಸುತ್ತಾನೆ.
14061013a ತಸ್ಮಾಚ್ಚೋಕಂ ಕುರುಶ್ರೇಷ್ಠ ಜಹಿ ತ್ವಮರಿಕರ್ಶನ।
14061013c ವಿಚಾರ್ಯಮತ್ರ ನ ಹಿ ತೇ ಸತ್ಯಮೇತದ್ ಭವಿಷ್ಯತಿ।।
ಅರಿಕರ್ಶನ! ಕುರುಶ್ರೇಷ್ಠ! ಆದುದರಿಂದ ಶೋಕವನ್ನು ತ್ಯಜಿಸು. ಇದು ಸತ್ಯವಾಗುತ್ತದೆ ಎನ್ನುವುದರ ಕುರಿತು ವಿಚಾರಿಸಬೇಡ.
14061014a ಯಚ್ಚಾಪಿ ವೃಷ್ಣಿವೀರೇಣ ಕೃಷ್ಣೇನ ಕುರುನಂದನ।
14061014c ಪುರೋಕ್ತಂ ತತ್ತಥಾ ಭಾವಿ ಮಾ ತೇಽತ್ರಾಸ್ತು ವಿಚಾರಣಾ।।
ಕುರುನಂದನ! ವೃಷ್ಣಿವೀರ ಕೃಷ್ಣನು ಹಿಂದೆ ಏನೆಲ್ಲ ಹೇಳಿದ್ದನೋ ಅವೆಲ್ಲವೂ ಹಾಗೆಯೇ ಆಗುತ್ತದೆ. ಅದರಲ್ಲಿ ವಿಚಾರಮಾಡುವಂಥದ್ದೇನೂ ಇಲ್ಲ.
14061015a ವಿಬುಧಾನಾಂ ಗತೋ ಲೋಕಾನಕ್ಷಯಾನಾತ್ಮನಿರ್ಜಿತಾನ್।
14061015c ನ ಸ ಶೋಚ್ಯಸ್ತ್ವಯಾ ತಾತ ನ ಚಾನ್ಯೈಃ ಕುರುಭಿಸ್ತಥಾ।।
ಮಗೂ! ತಾವೇ ಗೆದ್ದ ವಿಬುಧರ ಅಕ್ಷಯ ಲೋಕಗಳಿಗೆ ಅಭಿಮನ್ಯು ಮತ್ತು ಅನ್ಯ ಕುರುಗಳು ಹೋಗಿದ್ದಾರೆ. ಆದುದರಿಂದ ನೀನು ಅವರ ಕುರಿತು ಶೋಕಿಸಬಾರದು.”
14061016a ಏವಂ ಪಿತಾಮಹೇನೋಕ್ತೋ ಧರ್ಮಾತ್ಮಾ ಸ ಧನಂಜಯಃ।
14061016c ತ್ಯಕ್ತ್ವಾ ಶೋಕಂ ಮಹಾರಾಜ ಹೃಷ್ಟರೂಪೋಽಭವತ್ತದಾ।।
ಮಹಾರಾಜ! ಹೀಗೆ ಪಿತಾಮಹನು ಮಾತನಾಡಲು ಧರ್ಮಾತ್ಮ ಧನಂಜಯನು ಶೋಕವನ್ನು ತೊರೆದು ಹೃಷ್ಟರೂಪನಾದನು.
14061017a ಪಿತಾಪಿ ತವ ಧರ್ಮಜ್ಞ ಗರ್ಭೇ ತಸ್ಮಿನ್ಮಹಾಮತೇ।
14061017c ಅವರ್ಧತ ಯಥಾಕಾಲಂ ಶುಕ್ಲಪಕ್ಷೇ ಯಥಾ ಶಶೀ।।
ಧರ್ಮಜ್ಞ! ಮಹಾಮತೇ! ಗರ್ಭದಲ್ಲಿದ್ದ ನಿನ್ನ ತಂದೆಯೂ ಕೂಡ ಯಥಾಕಾಲದಲ್ಲಿ ಶುಕ್ಲಪಕ್ಷದ ಚಂದ್ರನಂತೆ ಬೆಳೆದನು.
14061018a ತತಃ ಸಂಚೋದಯಾಮಾಸ ವ್ಯಾಸೋ ಧರ್ಮಾತ್ಮಜಂ ನೃಪಮ್।
14061018c ಅಶ್ವಮೇಧಂ ಪ್ರತಿ ತದಾ ತತಃ ಸೋಽಂತರ್ಹಿತೋಽಭವತ್।।
ಆಗ ವ್ಯಾಸನು ನೃಪ ಧರ್ಮಾತ್ಮಜನಿಗೆ ಅಶ್ವಮೇಧದ ಕುರಿತು ಪ್ರೋತ್ಸಾಹಿಸಿ ಅಲ್ಲಿಯೇ ಅಂತರ್ಧಾನನಾದನು.
14061019a ಧರ್ಮರಾಜೋಽಪಿ ಮೇಧಾವೀ ಶ್ರುತ್ವಾ ವ್ಯಾಸಸ್ಯ ತದ್ವಚಃ।
14061019c ವಿತ್ತೋಪನಯನೇ ತಾತ ಚಕಾರ ಗಮನೇ ಮತಿಮ್।।
ಮಗೂ! ಮೇಧಾವೀ ಧರ್ಮರಾಜನೂ ಕೂಡ ವ್ಯಾಸನ ಆ ಮಾತುಗಳನ್ನು ಕೇಳಿ ಐಶ್ವರ್ಯವನ್ನು ತರಲು ಹಿಮಾಲಯಕ್ಕೆ ಹೋಗುವ ಕುರಿತು ಮನಸ್ಸುಮಾಡಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ವಸುದೇವಸಾಂತ್ವನೇ ಏಕಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ವಸುದೇವಸಾಂತ್ವನ ಎನ್ನುವ ಅರವತ್ತೊಂದನೇ ಅಧ್ಯಾಯವು.